ಮಾನಿಟರ್‌ಶಿಪ್

7

ಮಾನಿಟರ್‌ಶಿಪ್

Published:
Updated:

ಗೆಳೆಯರೆಲ್ಲಾ ಸೇರಿ ಹೊಡೆದ ಮೇಲೆ ನಾನು ಈ ಮಾನಿಟರ್ ಉಸಾಬರಿಯೇ ಬೇಡವೆಂದು ರಾಜೀನಾಮೆ ನೀಡಿದ್ದೆ. ಮೇಷ್ಟ್ರುಗಳು ಎಷ್ಟು ಕಾಡಿಸಿ ಕೇಳಿದರೂ ಮಾನಿಟರ್‌ಶಿಪ್ ಯಾಕಾಗಿ ತ್ಯಜಿಸುತ್ತಿದ್ದೇನೆ ಎನ್ನುವ ಕಾರಣವನ್ನು ಮಾತ್ರ ಬಾಯಿಬಿಟ್ಟು ಹೇಳಿರಲಿಲ್ಲ. ಗೆಳೆಯರನ್ನು ಸಿಕ್ಕಾಕಿಸುವ ಈ ದರಿದ್ರದ ಖತರ್‌ನಾಕ್ ಕೆಲಸ ಯಾವತ್ತಿಗೂ ಬೇಡ. ಇದರ ದೆಸೆಯಿಂದ ಇದ್ದ ಗೆಳೆಯರೂ ಮುನಿಸಿಕೊಂಡು ದೂರವಾಗಿ ಫುಲ್‌ಟೈಂ ವಿಲನ್‌ಗಳಾಗಿದ್ದಾರೆ. ನನ್ನ ಮೇಲೆ ಮತ್ತೆ ಮಾರಾಮಾರಿಗೆ ಬರಲು ಅವರಿಗೊಂದು ಜುಜುಬಿ ಕಾರಣ ಬೇಕಾಗಿದೆಯಷ್ಟೆ.ಅವತ್ತು ನಾಯಿಗೆ ಚಚ್ಚಿದಂತೆ ಚಚ್ಚಿ ಬೇಲಿ ಸಾಲಿನಲ್ಲಿ ಬಿಸಾಡಿ ಹೋದರಲ್ಲ. ಆಗ, ಮೂರು ದಿನ ಏರಿದ್ದ ಜ್ವರವೇ ಇಳಿದಿರಲಿಲ್ಲ. ಪ್ರಮುಖ ಅಂಗಾಂಗಗಳೆಲ್ಲ ವಿಪರೀತ ನೋವು. ಹೊಡೆಯುವಾಗ ಮನುಷ್ಯನ ಯಾವ ಪಾರ್ಟುಗಳಿಗೆ ಹೊಡೆಯಬೇಕು. ಯಾವ ಪಾರ್ಟುಗಳಿಗೆ ಹೊಡೆಯಲೇ ಬಾರದು ಎಂಬ ಸಣ್ಣ ನೀತಿ ನಿಯಮವಾದರೂ ಇರಬೇಡವೇ?  ಕೆಲ ಪ್ರಮುಖ ಜಾಗಗಳಿಗೆ ಹೊಡೆತ ಬಿದ್ದಾಗ ಪ್ರಾಣವೇ ಹೋದಂತಾಗುತ್ತದೆ.  ಇನ್ನು ಆ ದಾಂಡಿಗ ಓಂಕಾರಿಯೋ? ಅವನ ವಿಚಿತ್ರ ಕರಾಟೆ ಸ್ಟೈಲೋ? ವಿವರಿಸುವುದೇ ಕಷ್ಟ. ತನ್ನ ಕುಂಗ್‌ಫು ಏಟುಗಳಿಂದ ನನ್ನ ಮುಸುಡಿಯ ಶೇಪನ್ನೇ ಆತ ನಿಕಾಲ್ ಮಾಡಿಬಿಟ್ಟಿದ್ದ. ಹೀಗಾಗಿ, ನನ್ನ ಪ್ರೀತಿಯ ಕುಚುಕುಗಳನ್ನು ದೂರ ಮಾಡಿದ ಈ  ದರಿದ್ರ ಮಾನಿಟರ್ ಕೆಲಸವನ್ನು ಇನ್ನು ಬಿಲ್‌ಕುಲ್ ಮಾಡಲೇಕೂಡದೆಂದು ನಾನು ಖಡಕ್ಕಾಗಿ ನಿರ್ಧರಿಸಿದ್ದೆ.ಆದರೇನು ಮಾಡುವುದು? ನನ್ನ ಬಾಯಿ ಮಾತಿನ ರಾಜೀನಾಮೆ ಶಾಲೆಯಲ್ಲಿ ಸ್ವೀಕಾರವಾಗಿರಲಿಲ್ಲ. ಕಳ್ಳರ ತಂಡದ ರಹಸ್ಯಗಳನ್ನು ಅಷ್ಟು ನೀಟಾಗಿ ಸಂಗ್ರಹಿಸಿ ತಂದು ಕೊಡುವ ಇನ್ನೊಬ್ಬ ಬಕರಾ ಅವರ ಪಾಲಿಗೆ ನನ್ನಬಿಟ್ಟರೆ ಮತ್ಯಾರೂ ಇರಲಿಲ್ಲ. ಮಾಜಿ ಚಕ್ಕರ್ ಗ್ಯಾಂಗಿನ ಲೀಡರ್ರೂ,  ನಿವೃತ್ತ ಕಳ್ಳರ ಗ್ಯಾಂಗಿನ ಸದಸ್ಯನೂ ಆಗಿದ್ದ ನನ್ನ ಅವರು ಬಿಟ್ಟಾರೆಯೇ? ಎಲ್ಲಾ ಗುರುಗಳೂ ಸೇರಿ ‘ಇವನನ್ನು ಮಾನಿಟರ್‌ಶಿಪ್‌ನಿಂದ ಬಿಡಿಸಲೇಬಾರದು. ಇವನ ಮಾಹಿತಿಯ ಮೂಲಕವೇ ಆ ಕಳ್ಳ ಗ್ಯಾಂಗನ್ನು ಮಟ್ಟ ಹಾಕಬೇಕು. ಇವನ ಇಟ್ಕೊಂಡೇ ಆ ಬಡ್ಡೀಮಕ್ಕಳನ್ನು ಸದೆಬಡಿಯಬೇಕು’ ಎಂದೆಲ್ಲಾ ರಹಸ್ಯ ಸಭೆ ಮಾಡಿ ನನ್ನ ರಾಜೀನಾಮೆಯನ್ನು ನಿರಾಕರಿಸಿದ್ದರು.   

ಆಮೇಲೆ ತರಗತಿ ಮಾನಿಟರ್ ಹುದ್ದೆಯಿಂದ ಒಂದು ಸ್ಟೆಪ್ಪು ಕೆಳಗಿಳಿಸಿ ಮತ್ತೊಂದು ಹೊಸ ಹುದ್ದೆ ಕೊಟ್ಟಿದ್ದರು. ಆ ಹುದ್ದೆಯ ಪ್ರಕಾರ ಮೇಷ್ಟ್ರುಗಳಿಗೆ ಟೀ, ಇಡ್ಲಿ, ಪಕೋಡ, ಮಂಡಕ್ಕಿ, ಖಾರ, ಎಲೆ ಅಡಿಕೆ, ಬೀಡಿ ತಂಬಾಕುಗಳನ್ನು ಅಂಗಡಿಯಿಂದ ತಂದು ಕೊಡುವುದು. ಬೆಲ್ಲು ಹೊಡೆಯುವುದು. ಕ್ಲಾಸ್ ಮುಗಿದ ಮೇಲೆ ನಮ್ಮ ತರಗತಿ ಕಸ ಗುಡಿಸುವುದು ಇಂಥ ಡಿ ದರ್ಜೆಯ ಕೆಲಸಗಳನ್ನು ವಹಿಸಿದ್ದರು.ಗೆಳೆಯರ ಹೊಡೆತಗಳು ಬಿದ್ದ ಮೇಲೆ ನನ್ನಲ್ಲಿ ವಿನೀತ ಭಾವ ಹುಟ್ಟಿತ್ತು. ನನ್ನ ನಯ, ವಿನಯ, ಬದಲಾದ ಹಾವಭಾವಗಳನ್ನು ನೋಡಿ ಮೊದಲು ಖುಷಿ ಪಟ್ಟವರು ನಮ್ಮ ಕ್ಲಾಸ್ ಟೀಚರ್ ಕೆ.ಜಿ. ಜಯರಾಮ್. ಹೀಗಾಗಿ ಒಂದು ದಿನ ಅವರಿಗೆ ಬುಗುಲುಹತ್ತಿ ಮತ್ತೆ ನನ್ನನ್ನು ಅವರ ಕ್ಲಾಸಿಗೆ ಮಾನಿಟರ್ ಅಂತ ಘೋಷಿಸಿಬಿಟ್ಟರು. ನನಗೆ ಈ ದರಿದ್ರ ಮಾನಿಟರ್ ಕೆಲಸವೇ ಬೇಡ ಸಾರ್ ಎಂದರೂ ಕೇಳಲಿಲ್ಲ. ಈ ದರಿದ್ರ ಮಾನಿಟರ್‌ಶಿಪ್ ಸಿಕ್ಕಮೇಲೆ ಚಕ್ಕರ್ ಹೊಡೆಯುವ ಸ್ವಾತಂತ್ರ್ಯವೂ ಮತ್ತೆ ಕಳೆದು ಹೋಯಿತು. ಎಲ್ಲರಿಗಿಂತ ಮೊದಲು ಬಂದು ತರಗತಿಯ ಬೋರ್ಡ್ ಒರೆಸಿ, ದಿನ, ದಿನಾಂಕ, ಶುಭಾಷಿತ ಇತ್ಯಾದಿ ರಗಳೆಗಳೆಲ್ಲಾ ಬರೆಯುವ ಹೊಸ ಜವಾಬ್ದಾರಿ ಹೆಗಲೇರಿತು. ವಿದ್ಯಾರ್ಥಿ ಜೀವನದಲ್ಲಿ ಮಾನಿಟರ್ ಆಗುವುದು ಖುಷಿಯ ವಿಷಯವೇ ಆದರೂ ನನ್ನ ಪಾಲಿಗದು ಮೃತ್ಯು ಸ್ವರೂಪವಾಗಿತ್ತು.

  ಕೆ.ಜಿ.ಜೆ. ದಿನಕ್ಕೆ ಮೂರು ಸಬ್ಜೆಕ್ಟಿಗೆ ಪಾಠ ಹೇಳಲು ಮೂರು ಸಲ ತರಗತಿಗೆ ಬರುತ್ತಿದ್ದರು. ಅವರು ಬರುವ ಮೊದಲು ಬೋರ್ಡಿನ ಮೇಲೆ ಅವರು ತೆಗೆದುಕೊಳ್ಳುವ ಸಬ್ಜೆಕ್ಟ್, ಆ ದಿನ ಮಾಡುವ ಪಾಠದ ಹೆಡ್ಡಿಂಗ್ ಬರೆದಿಡಬೇಕಾಗಿತ್ತು. ಜೊತೆಗೆ ಗಲಾಟೆ ಮಾಡಿದ ಹುಡುಗರ ಹೆಸರನ್ನು ಬೋರ್ಡಿನ ಮೇಲೆ ಕೆತ್ತಬೇಕಾಗಿತ್ತು.ಪ್ರತೀ ಸಲ ಹಿಂದಿನ ಬೆಂಚಿನಲ್ಲಿ ಕೂರುತ್ತಿದ್ದ ನನ್ನ ಗ್ಯಾಂಗಿನ ಜಿಗರೀ ದೋಸ್ತಿಗಳೇ ಅತಿ ಹೆಚ್ಚು ಗದ್ದಲ ಮಾಡುತ್ತಿದ್ದರು. ‘ನಮ್ಮ ಹೆಸರೇನಾದರೂ ಬರೆದರೆ, ಗೊತ್ತಲ್ಲ ಮಗನೆ! ನಿನ್ನ ಗ್ರಹಚಾರ ಬಿಡಿಸ್ತೀವಿ. ಗೊತ್ತಲ್ಲ ಕುಂಗ್‌ಫು ಪಂಚ್’ ಎಂದು ಮೊದಲೇ ಅಡ್ವಾನ್ಸ್ ಎಚ್ಚರಿಕೆ ಕೊಟ್ಟಿದ್ದರು. ಹೀಗಾಗಿ, ಅಪ್ಪಿತಪ್ಪಿ ಅವರ ಹೆಸರು ಬರೆಯುವಂತಿರಲಿಲ್ಲ. ಬರೆದರೆ ಅವರು ನನ್ನ ಹಿಡಿದು ಚಟ್ನಿ ಮಾಡುವುದು ಗ್ಯಾರಂಟಿಯಾಗಿತ್ತು. ಆದ್ದರಿಂದ ಆ ಹುಚ್ಚು ಸಾಹಸಕ್ಕೆ ಮತ್ತೆ ನಾನು ಕೈ ಹಾಕುವಂತಿರಲಿಲ್ಲ. ನಾನವರ ಪೈಕಿ ಒಬ್ಬನ ಹೆಸರನ್ನಾದರೂ ಬೋರ್ಡ್ ಮೇಲೆ ಬರೆದು ಸಿಕ್ಕಿಬೀಳಲಿ ಅಂತ ಅವರು ಹದ್ದುಗಳಂತೆ ಕಾಯುತ್ತಿದ್ದರು. ಇದೇ ಕಾರಣ ಇಟ್ಟುಕೊಂಡು ಬೇಕಂತಲೇ ಹೆಚ್ಚು ಗಲಾಟೆ ಎಬ್ಬಿಸುತ್ತಿದ್ದರು. ನನಗಿದು ತೀರಾ ಇಕ್ಕಟ್ಟಿನ ಪರಿಸ್ಥಿತಿ ಎನಿಸತೊಡಗಿತ್ತು. ನನ್ನ ಗ್ಯಾಂಗಿನವರ ಹೆಸರು ಬರೆದರೆ ಸಂಜೆಯ ಹೊತ್ತಿಗೆ ಕುಂಗ್‌ಫು ಹೊಡೆತ. ಬರಿಯದಿದ್ದರೆ ಕ್ಲಾಸ್ ಟೀಚರ್ ಕೆ.ಜಿ.ಜೆ. ಕೈಯ ಬಡೆತ. ಹೆಸರು ಬರೆದರೂ ಹೊಡ್ತಾ; ಬರೀದಿದ್ದರೂ ಹೊಡ್ತಾ. ನನ್ನ ಪಾಲಿಗೆ ಇದು ಸಖತ್ ಪೀಕಲಾಟವನ್ನೇ ತಂದೊಡ್ಡಿತು.ಇವರನ್ನು ಬಿಟ್ಟು ಬೇರೆ ಹುಡುಗರ ಹೆಸರು ಬರೆದರೆ ಅವರದು ಮತ್ತೊಂದು ಥರದ ತಕರಾರು. ‘ಹಿಂದಿನ ಬೆಂಚಲ್ಲಿ ನಿನ್ನ ಫ್ರೆಂಡ್ಸ್‌ಗಳೇ ಎಷ್ಟೊಂದು ಗಲಾಟೆ ಮಾಡ್ತಿದ್ದಾರೆ. ಅಪ್ಪಣ್ಣಿ ಅವರನ್ನ ಬಿಟ್ಟು ಬರೀ ನಮ್ಮೆಸ್ರು ಬರೆದರೆ ನಾವು ಸುಮ್ಕೆ ಬಿಟ್‌ಬಿಡ್ತೀವಾ? ಮೇಷ್ಟ್ರು ಬರಲಿ ನಾವೂ ಹಿಂಗಿಂಗೆ ಸಾರ್ ಹಿಂಗಿಂಗೆ ಅಂತ ಎಲ್ಲಾ ಹೇಳ್ತೀವಿ. ಇಲ್ಲಾಂದ್ರೆ ಕ್ಲಾಸ್ ಬಿಟ್ಟಮೇಲೆ ನಿನ್ನ ಒಂದು ಕೈ ನೋಡ್ಕೋತಿವಿ’ ಎಂದು ಅವರೂ ಸವಾಲು ಎಸೆಯುತ್ತಿದ್ದರು. ಹೀಗಾಗಿ ಮಾನಿಟರ್ ಆಗಿ ಅಂಥ ಅಧಿಕಾರವೂ ಇರಲಿಲ್ಲ. ಅಂಥ ಪ್ರಯೋಜನವೂ ಇರಲಿಲ್ಲ. ದಿನದಿನವೂ, ಎಲ್ಲರ ಬೆದರಿಕೆ, ಪುಕ್ಸಟ್ಟೆ ಹೊಡೆತಗಳಿಗೆ ತಲೆಕೊಡಬೇಕಾದ ಹೀನಾಯ ಪರಿಸ್ಥಿತಿ ನನ್ನದಾಗಿತ್ತು.ಇನ್ನು ಕೆ.ಜಿ.ಜೆ. ಅವರಂತೂ ಒಳ್ಳೆ ಬೆತ್ತದ ಕೋಲನ್ನೇ ಹಿಡಿದು ಕ್ಲಾಸಿಗೆ  ಬರುತ್ತಿದ್ದರು. ‘ಅಲ್ಲಿ ಸ್ಟಾಫ್‌ರೂಮಿಗೆ ಕೇಳೋ ಹಂಗೆ ಕಾಗೆ ಥರ ಎಲ್ಲಾ ಅರಚಾಡ್ತಾ ಇದ್ದಾರೆ. ನೀನೇನು ಕತ್ತೆ ಹಲ್ಲು ಉಜ್ಜುತ್ತಾ ಇದ್ದೀಯಾ?’ ಎಂದು ನನ್ನನ್ನೇ ಅಪರಾಧಿ ಮಾಡಿ ಎಲ್ಲರೆದುರಿಗೇ ಸರಿಯಾಗಿ ಇಕ್ಕುತ್ತಿದ್ದರು. ಮಾನಿಟರ್ ಆಗಿ ಅತ್ತ ಕ್ಲಾಸಿನ ಪುಂಡ ಹುಡುಗರಿಂದ, ಇತ್ತಕಡೆ ಕ್ಲಾಸ್ ಟೀಚರ್ ಕಡೆಯಿಂದ ಒಟ್ಟಾರೆ ಎರಡೂ ಕಡೆಯಿಂದಲೂ ದಿನಾ ಕಾಯಮ್ಮಾಗಿ ಹೊಡೆತ ತಿನ್ನುವವನು ನಾನಾಗಿ ಬಿಟ್ಟೆ. ನಮ್ಮದು ಬರೀ ಹುಡುಗರ ಹೈಸ್ಕೂಲ್ ಆದ ಕಾರಣ ಹುಡುಗಿಯರೂ ಇರಲಿಲ್ಲ. ಒಂದೊಮ್ಮೆ ಹುಡಿಗಿಯರಿದ್ದಿದ್ದರೆ ಅವರಿಗೆ ಗಲಾಟೆಯಲ್ಲಿ ಒಂದಿಷ್ಟು  ರಿಯಾಯಿತಿಯಾದರೂ ತೋರಿಸಿ, ಪ್ರೀತಿ ಪ್ರೇಮ ಗಿಟ್ಟಿಸಿಕೊಳ್ಳಬಹುದಿತ್ತು. ಆ ಸೌಭಾಗ್ಯವೂ ನನಗಿರಲಿಲ್ಲ.  ಯಾರೊಬ್ಬರ ಹೆಸರು ಬರೆದರೂ ಕಷ್ಟ.  ಬೇಡಾಂತ ಬಿಟ್ಟರೂ ಕಷ್ಟ. ಅದರ ಬದಲಿಗೆ ಯಾರ ಹೆಸರನ್ನೂ ಬೋರ್ಡಿನ ಮೇಲೆ ಬರೆಯಲೇ ಬಾರದೆಂದು ದೃಢವಾಗಿ ನಿರ್ಧರಿಸಿಕೊಂಡು ಬಿಟ್ಟೆ. ಹೀಗೆ ಮಾಡಿದರೂ ನನ್ನ ಗ್ರಹಚಾರದ ದಿನ ಬಂದೇ ಬಿಟ್ಟಿತು. ಒಂದು ದಿನ ಅದ್ಯಾವುದೋ ಕೆಟ್ಟ ಮೂಡಿನಲ್ಲಿದ್ದ ನಮ್ಮ ಕೆ.ಜಿ.ಜೆ. ಬೆತ್ತ ಕೈಗೆ ಅಂಟಿಸಿಕೊಂಡೇ ಬುಸುಗುಡುತ್ತಾ ಬಂದರು. ಬಂದವರೇ ಮೊದಲು ಬೋರ್ಡ್ ನೋಡಿದರು. ನಾನು ಯಾರ ಹೆಸರನ್ನೂ ಕೆತ್ತಿರಲಿಲ್ಲ. ಸುಮ್ಮನೆ ನಿಂತಿದ್ದೆ. ‘ಮೀನಿನ ಮಾರ್ಕೆಟ್‌ನಲ್ಲಿ ಕಾಗೆ, ನಾಯಿಗಳು ಅರಚೋ ಹಂಗೆ ಭೂಮಿ ಆಕಾಶ ಏಕ ಮಾಡಿ ಹುಡುಗರು ಬೊಂಬಡಾ ಬಡೀತಾ ಇದ್ದಾರೆ. ನೀನು ಮಾನಿಟರ್ ಆಗಿ ಇಲ್ಲೇನು ಕತ್ತೆ ಹಲ್ಲು ಉಜ್ಜುತ್ತಾ ನಿಂತಿದೀಯಾ? ರಾಸ್ಕಲ್. ಮೊದಲು ನಿನಗೆ ರಿಪೇರಿ ಮಾಡಬೇಕು  ಆಗ ನೋಡು ಎಲ್ಲರೂ ಸರಿಯಾಗ್ತಾರೆ’ ಎಂದು ಹಲ್ಲು ಕಡಿಯುತ್ತಾ, ಕಾಸಿಗೊಂದು ಕೊಸರಿಗೆರಡು ಎನ್ನುವಂತೆ ತಪತಪ ಬಾರಿಸಿಬಿಟ್ಟರು. ಎಂಟನೇ ಕ್ಲಾಸಿಗೆ ಬಂದರೂ ಖಾಕಿಯ ಚಡ್ಡಿಗಳೇ ನಮ್ಮ ಸೊಂಟದಲ್ಲಿದ್ದವು. ಹೈಸ್ಕೂಲಿಗೆ ಬಂದಿದ್ದೇವೆ ಪ್ಯಾಂಟು ಕೊಡಿಸಿ ಎಂದು ಮನೆಯಲ್ಲಿ ಹಟ ಹೂಡಿದರೂ ಇನ್ನೂ ಹೊಲಿಸಿರಲಿಲ್ಲ. ಮಿಡ್ಲಿಸ್ಕೂಲಿನ ಚೆಡ್ಡಿಗಳು ಮೊದಲು ಹರಿಯಲಿ ಎಂದು ಪ್ಯಾಂಟಿನ ವಿಷಯವನ್ನು ಮುಂದಕ್ಕೆ ಹಾಕಿದ್ದರು. ಆ ಟೈಟು ಚಡ್ಡಿಯಲ್ಲಿ ನಾನು ಥೇಟ್ ಕ್ಯಾಬರೆ ನರ್ತಕಿಯಂತೆ ಕಾಣುತ್ತಿದ್ದೆ. ಕಾಲುಗಳು  ಪಾದದಿಂದ ತೊಡೆಗಳ ತನಕ ತಿಂದುಂಡು ಹದವಾಗಿ ಬೆಳೆದು ನಿಂತಿದ್ದವು. ಯಾವಾಗ ಕೆ.ಜಿ.ಜೆ. ಕೋಲಿನ ಭಾರೀ ಹೊಡೆತಗಳು ಬಿದ್ದವೋ, ಅಲ್ಲೆಲ್ಲ ಬಿಸಿಬಿಸಿ ಬಾಸುಂಡೆಗಳು ಮೂಡಿಕೊಂಡವು.ವಿಲವಿಲ ಎಂದು ಬಿದ್ದು ಒದ್ದಾಡಿದರೂ ಅವರು ಬಾರಿಸುವುದನ್ನು ಬಿಡಲಿಲ್ಲ. ಅದ್ಯಾರ ಮೇಲೆ ಸಿಟ್ಟಿತ್ತೋ ಏನೋ?  ರಮರಮ ಎಂದು ಚಚ್ಚಿ ಬಿಸಾಕಿದರು. ಹುಡುಗರು ಈ ರುದ್ರರಮಣೀಯ ದೃಶ್ಯ ನೋಡಿ ಗರಬಡಿದವರಂತೆ ಗಪ್‌ಚಿಪ್ ಆಗಿ ಕೂತು ಬಿಟ್ಟವು. ನನ್ನ ಆ ದೈನೇಸಿ ಸ್ಥಿತಿ ನೋಡಿ ಯಾವ ಮಗನಿಗೂ ಕರುಣೆ  ಹುಟ್ಟಿದಂತೆ ಕಾಣಲಿಲ್ಲ. ಅವರ ಮನಸ್ಸಿನಲ್ಲಿ, ಆಗಲಿ ಮಗನೆ ನಿನಗೆ ಹಿಂಗೇ ಆಗಬೇಕು ಎಂಬ ಸಡಗರದ ಮಾತುಗಳು ಮೂಡಿದಂತೆ ಕಾಣುತ್ತಿತ್ತು. ಮಾನಿಟರ್ ಆಗಿ ಗಲಾಟೆ ಮಾಡಿದ ಹುಡುಗರಿಗೆ ತಕ್ಕ ಶಾಸ್ತಿ ಮಾಡಿಸಬೇಕಾದ ನಾನೇ ಹೊಡೆತ ತಿನ್ನುವುದು ಬಲು ವಿಚಿತ್ರದ ಸಂಗತಿ ಎನಿಸತೊಡಗಿತು.ನಮ್ಮ ಶಾಲೆಯ ಹೆಡ್‌ ಮೇಷ್ಟ್ರಿಗೆ ಯಾವಾಗಲೂ ನೆತ್ತಿ ಮೇಲೆ ಕೋಪ. ಅವರ ಈ ಕೋಪದ ದೆಸೆಯಿಂದಲೋ  ಏನೋ ತಲೆಮೇಲಿದ್ದ ಕೂದಲೆಲ್ಲಾ ಗುಡಿಸಿ ಗುಂಡಾಂತರವಾಗಿದ್ದವು. ಹೀಗಾಗಿ ನಾವೆಲ್ಲಾ ಅವರಿಗೆ ಬಾಂಡ್ಲಿ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದೆವು. ನಮ್ಮ ಮೇಷ್ಟ್ರುಗಳೂ ಆ ಬಾಂಡ್ಲಿ ಬಂದನೇನೋ? ಆ ಬಾಂಡ್ಲಿ ಹೋದನೇನೋ? ಎಂದೇ ಮಾತಾಡಿಕೊಳ್ಳುತ್ತಿದ್ದರು. ಆದರೆ ಇದೇ ಮಾತನ್ನು ಅವರ ಎದುರಿಗೆ ಹೇಳುವ ಧೈರ್ಯ ಮಾತ್ರ ಯಾವ ಮಗನಿಗೂ ಇರಲಿಲ್ಲ. ತಮ್ಮ ಕೆಳ ಹಂತದ ಮೇಷ್ಟ್ರುಗಳಿಗೆ ನಮ್ಮ ಬಾಂಡ್ಲಿ ಹೆಡ್‌ ಮೇಷ್ಟ್ರು ಬೈಯ್ಯದ ದಿನವೇ ಇರುತ್ತಿರಲಿಲ್ಲ. ‘ಅವನ ಹೆಂಡ್ತಿ ಗಯ್ಯಾಳಿ ಸಾರ್. ಈಯಪ್ಪನಿಗೆ ಮನೇಲಿ ದಿನಾ ಹಾಕ್ಕೊಂಡು ತದುಕ್ತಾಳೆ. ಈ ನನ್ಮಗ ಆ ಸೇಡನ್ನ ಬಂದು ನಮ್ಮ ಮೇಲೆ ತೀರಿಸಿಕೊಳ್ತಾನೆ’ ಎಂದು ನಮ್ಮ ಮೇಷ್ಟ್ರುಗಳು ಆಗಾಗ ನಾವೇ  ಕೇಳುವಂತೇ ಗೊಣಗಿಕೊಳ್ಳುತ್ತಿದ್ದರು.  ಅಲ್ಲಿ ಹೆಡ್‌ ಮೇಷ್ಟ್ರ ಜಡಿ ಮಳೆಬಿದ್ದರೆ, ಮುಂದೆ ಅದರ ಪರಿಣಾಮ ನಮ್ಮ ಮೇಲೆ ಮುಂಗಾರು ಮಳೆಯಾಗಿ ಸುರಿಯುತ್ತಿತ್ತು. ಹೆಡ್‌ ಮೇಷ್ಟ್ರ ಹೆಂಡತಿಯಿಂದ ಶುರುವಾದ ಸಿಟ್ಟು,  ನಮ್ಮ ಗುರುಗಳಿಗೆ ವರ್ಗವಾಗಿ ಕೊನೆಗೆ  ನಮ್ಮ ತನಕ ಬರುತ್ತಿತ್ತು. ನಾವೂ ಆ ಸಿಟ್ಟನ್ನು ನಮ್ಮ ಹತ್ತಿರ ಇಟ್ಟುಕೊಳ್ಳುತ್ತಿರಲಿಲ್ಲ. ಅದನ್ನು ಬೀದಿ ನಾಯಿಗಳ ಮೇಲೆ ತೋರಿಸಿ ಒಂದಿಷ್ಟು ತೃಪ್ತಿ ಪಡುತ್ತಿದ್ದವು. ಮುಂದೆ ಆ ನಾಯಿಗಳು ಆ ಸಿಟ್ಟನ್ನು ಎಲ್ಲಿಗೆ ಒಯ್ದು ಯಾರಿಗೆ ಏನು ಮಾಡುತ್ತಿದ್ದವೋ ಆ ದೇವರಿಗೇ ಗೊತ್ತು!   ಹಿಂದಿನ ಸಲ ಬೋರ್ಡಿನ ಮೇಲೆ ಹೆಸರು ಬರೆಯದೆ ಮೇಷ್ಟ್ರು ಕೈಯಲ್ಲಿ ಗಮ್ಮಿಸಿಕೊಂಡಿದ್ದ ನಾನು ಈ ದಿನ ಅರ್ಧ ಬೋರ್ಡು ತುಂಬುವಷ್ಟು  ಹೆಸರುಗಳನ್ನು ಬರೆದೆ. ಒಂದಿಷ್ಟು ಕಿಮಿಕ್ ಎಂದವರನ್ನೂ ಬಿಟ್ಟಿರಲಿಲ್ಲ.  ಕೆ.ಜಿ.ಜೆ. ಆ ದಿನ ಬಂದವರೇ ಬೋರ್ಡು ನೋಡಿದರು. ಗಲಾಟೆ ಮಾಡಿದ ಎಲ್ಲರಿಗೂ ಈಗ ಸರಿಯಾಗಿ ಬಿದ್ದೇ ಬೀಳುತ್ತವೆ ಎಂದು ನಾನೂ ಖುಷಿಯಲ್ಲಿದ್ದೆ. ನನ್ನ ದುರಾದೃಷ್ಟಕ್ಕೆ ಅವತ್ತೂ ಅವರ ಮೂಡು ಸರಿಯಿರಲಿಲ್ಲ. ‘ಬಾರೋ ಇಲ್ಲಿ ರಾಸ್ಕಲ್. ಇಷ್ಟೊಂದು ಹುಡುಗರು ಗಲಾಟೆ ಮಾಡಿದ್ದಾರೆ. ಅವರನ್ನ ಕಂಟ್ರೋಲ್ ಮಾಡೋದು ಬಿಟ್ಟು ಇಲ್ಲೇನು ಕತ್ತೆ ಹಲ್ಲು ಉಜ್ತಾ ಇದ್ಯಾ. ಮೊದಲು ನಿನ್ನ ರಿಪೇರಿ ಮಾಡ್ಬೇಕು ಆಗೆಲ್ಲ ನೆಟ್ಟಗಾಗ್ತಾದೆ’ ಎಂದು ಮತ್ತೆ ನನ್ನ ಹಿಡಿದು ಚಚ್ಚತೊಡಗಿದರು. ಹೀಗೆ ಕೆ.ಜಿ.ಜೆ. ಹೆಸರು ಬರೆದರೂ ಹೊಡೀತಿದ್ದರು. ಬರೆದಿದ್ದರೂ ಬಿಗಿಯುತ್ತಿದ್ದರು. ಒಂಥರ ಅವರದು ಬ್ಯಾಬಿಲೋನಿಯಾದ ರಾಜ ಹಮ್ಮುರಬಿಯ  ನ್ಯಾಯ ತೀರ್ಮಾನ.ಕಾಲ ಹೇಗೆಲ್ಲಾ ಬದಲಾಗುತ್ತೆ. ಒಂದು ದಿನ ಒಬ್ಬ ವಯೋವೃದ್ಧರು ಬಸ್ಸು ಹತ್ತಲಾಗದೆ ಚಡಪಡಿಸುತ್ತಿದ್ದರು. ಅವರ ಕೈ ಹಿಡಿದು ಸಹಾಯ ಮಾಡಿ ಬಸ್ಸು ಹತ್ತಿಸಿ ಸೀಟಿನಲ್ಲಿ ಕೂರಿಸಿದೆ. ನಡುಗುತ್ತಾ  ಕಷ್ಟಪಟ್ಟು ಕೂತರು. ಕೆಳಗೆ ಕೈತಪ್ಪಿ ಬಿದ್ದ ಅವರ ಬೆತ್ತ ಎತ್ತು ಕೊಟ್ಟೆ. ಆ ಚೂಪು ಕಣ್ಣುಗಳನ್ನು ಎಲ್ಲೋ ಹತ್ತಿರದಿಂದ ನೋಡಿದ್ದೇನಲ್ಲ ಅನ್ನಿಸಿತು. ನನ್ನ ಪರಿಚಯ ಹೇಳಿಕೊಂಡೆ. ‘ನಿನಗೆ ತುಂಬಾ ಹೊಡೆದಿದ್ದೀನಿ ಕಣೋ ಸಾಬಿ. ನನಗೆ ನೆನಪಿದೆ. ನಾವು ಜೀವನದಲ್ಲಿ ಯಾರನ್ನು ಜಾಸ್ತಿ ಪ್ರೀತಿಸ್ತೀವೋ ಅವರಿಗೇ ಜಾಸ್ತಿ ಬೈದು, ಹೊಡೆದು, ರಗಳೆ ಮಾಡಿರ್ತೀವಿ’ ಎಂದು ಹೇಳಿ ಸಣ್ಣಗೆ ನಡುಗುತ್ತಿದ್ದ ತಮ್ಮ ನವಿರಾದ ಕೈಯನ್ನು ನನ್ನ ತಲೆಮೇಲಿಟ್ಟರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry