ಮಾರಾಟದ ಕಲೆ

7

ಮಾರಾಟದ ಕಲೆ

ಗುರುರಾಜ ಕರ್ಜಗಿ
Published:
Updated:

ಇದು ಸುಮಾರು ಮೂರು ದಶಕಗಳ ಹಿಂದೆ ನಡೆದ ಘಟನೆ. ನಡೆದದ್ದು ಕಾನ್ಪುರದಲ್ಲಿ. ಅಲ್ಲಿ ಹವಾಮಾನ ವಿಷಮವಾದದ್ದು. ಬೇಸಿಗೆಯಲ್ಲಿ ತಡೆದು­ಕೊಳ್ಳಲಾರದಷ್ಟು ಶೆಕೆ ಇದ್ದರೆ, ಚಳಿಗಾಲ­ದಲ್ಲಿ ತಡೆಯಲಾರದಷ್ಟು ಚಳಿ. ನನಗೆ ಈ ಘಟನೆ  ಹೇಳಿದವರು ಆಗ ಅಲ್ಯೂಮಿ­ನಿಯಂ ಪಾತ್ರೆಗಳನ್ನು ಮಾರುತ್ತಿದ್ದರು. ಆಗ ತಾನೇ ಮಾರುಕಟ್ಟೆಗೆ ಅಲ್ಯೂಮಿನಿಯಂ ಫ್ರೆಷರ್‌ಕುಕರ್‌ಗಳು, ಪಾತ್ರೆಗಳು ಬಂದಿದ್ದವು. ಇವರ ಕೆಲಸ ಮನೆಮನೆಗೆ ಹೋಗಿ ಜನರನ್ನು ಒಲಿಸಿ ಪಾತ್ರೆಗಳನ್ನು ಮಾರುವುದು. ಅದು ಸುಲಭದ ಕೆಲಸವೇನಲ್ಲ.ಪಾತ್ರೆಗಳ ದೊಡ್ಡ ಗಂಟನ್ನು ಸ್ಕೂಟರಿನಂತಹ ವಾಹನದ ಮೇಲೆ ಹೇರಿಕೊಂಡು ಮನೆಮನೆಗೆ ಹೋಗಬೇಕು. ಆಗ ವಿಪರೀತ ಚಳಿ. ಎಲ್ಲರೂ ಮನೆಗಳ ಬಾಗಿಲುಗಳನ್ನು ಭದ್ರಮಾಡಿಕೊಂಡು ಕುಳಿತಿರುವಾಗ ಈತ ಹೋಗಿ ಕರೆಗಂಟೆ ಒತ್ತಿದಾಗ ಅವರು ಹೇಗೆ ಪ್ರತಿಕ್ರಿಯಿ­ಸುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ತನ್ನ ಕಷ್ಟವನ್ನು ಮರೆತು ಈತ ಮುಖದ ಮೇಲೆ ತನ್ನ ಪಾತ್ರೆಗಳಿಗಿಂತ ಹೆಚ್ಚು ಮಿರಮಿರನೆ ಮಿನುಗುವ ನಗೆ ತಂದುಕೊಳ್ಳಬೇಕು, ಅತ್ಯಂತ ವಿನಯ­ವಾಗಿ ಮತ್ತು ಅಷ್ಟೇ ಪ್ರಿಯವಾಗುವಂತೆ ಮಾತನಾಡಿ ಮನೆಯೊಡತಿಯ ಮನ­ವನ್ನು ಗೆದ್ದರೆ ಮಾತ್ರ ಮಾರಾಟ ಸಾಧ್ಯ. ಈತನಿಗೆ ಒಂದು ದಿನ ಯಾವ ವ್ಯಾಪಾರವೂ ಆಗಲಿಲ್ಲ. ಮತ್ತೊಂದು ಬೀದಿಗೆ ಹೋಗಿ ಪ್ರಯತ್ನಿಸೋಣ ಎಂದು ಹೋದರು.ಮೊದಲನೆ ಮನೆ ಏನೂ ಆಕರ್ಷಕವಾಗಿರಲಿಲ್ಲ. ಇವರೇನು ಪಾತ್ರೆಗಳನ್ನು ಕೊಂಡಾರು ಎಂದು­ಕೊಂಡು ಮುಂದಿನ ಮನೆಗೆ ಹೋದರು. ಅದು ವೈಭವೋಪೇತವಾದ ಮನೆ. ಈ ಮನೆಯವರು ಇಷ್ಟು ದಿನ ಇವುಗಳನ್ನು ಕೊಳ್ಳದೇ ಇದ್ದಾರೆಯೇ ಎಂದುಕೊಂಡು ಮತ್ತೆ ಮುಂದಿನ ಮನೆಗೆ ನಡೆದರು. ಅದೊಂದು ಮಧ್ಯಮವರ್ಗದ ಮನೆ ಎಂದು ತೋರುತ್ತಿತ್ತು. ಇದೇ ಸರಿಯಾದ ಮನೆ ಎಂದುಕೊಂಡು, ಮುಖದ ಮೇಲೆ ನಗೆಯ ತೆರೆಯನ್ನೆಳೆದು ಹೆದರುತ್ತ ಕರೆಗಂಟೆ ಒತ್ತಿದರು.ಕ್ಷಣಾರ್ಧದಲ್ಲಿ ಬಾಗಿಲು ಧಡಾರನೇ ತೆರೆಯಿತು. ಇಡೀ ತೆರೆದ ಬಾಗಿಲಲ್ಲಿ ಅರ್ಧ ದೇಹ ಮಾತ್ರ ಕಾಣುವಂತಿದ್ದ ಅಸಾಧ್ಯ ಧಡೂತಿ ಹೆಂಗಸೊಬ್ಬಳು ಇವರನ್ನು ಕೆಕ್ಕರಿಸಿ ನೋಡಿ ಏನು ಬೇಕಿತ್ತು? ಎಂದು ಹೂಂಕರಿಸಿದಳು. ಇವರಿಗೆ ಅಲ್ಯು­ಮಿನಿಯಂ ಪಾತ್ರೆಗಳೇ ಮರೆತು­ಹೋದವು. ಧ್ವನಿ ಹೊರಗೇ ಬರುತ್ತಿಲ್ಲ. ಆದರೂ ಒಂದು ಕ್ಷಣವಾದ ಮೇಲೆ, ಅಲ್ಯೂಮಿನಿಯಂ ಪಾತ್ರೆ ಎಂದು ತಮ್ಮ ಗಂಟಿನಕಡೆಗೆ ಕೈ ಮಾಡಿದರು. ಆಕೆ, ದರಿದ್ರಗಳು, ಏನೇನೋ ಮಾರುತ್ತವೆ ಎಂದು ಧಡಾರನೇ ಇವರ ಮುಖದ ಮೇಲೆಯೇ ಬಾಗಿಲು ಹಾಕಿಕೊಂಡಳು. ಇವರಿಗೆ ಮುಖಭಂಗವಾಯಿತು.ತನ್ನ ಪರಿಸ್ಥಿತಿಯನ್ನು ತನ್ನಂತೆಯೇ ಪಾತ್ರೆಗಳನ್ನು ಮಾರುವ ಇನ್ನೊಬ್ಬರಿಗೆ ಹೇಳಿದರು. ಆತ ಅತ್ಯುತ್ಸಾಹದಿಂದ ಆ ಮನೆಗೇ ಹೋಗಿ ಮಾರಿಬರುತ್ತೇನೆ ಎಂದು ಹೋದರು. ಮರಳಿ ಬಂದು ತಾನು ಆ ಮನೆಗೆ ಹೋಗಿ ಮೂರು ಸಾವಿರ ರೂಪಾಯಿಗಳ ಪಾತ್ರೆಗಳನ್ನು ಮಾರಿ ಬಂದೆ ಎಂದಾಗ ಇವರಿಗೆ ಆಶ್ಚರ್ಯ. ಅದು ಹೇಗೆ ಮಾಡಿದೆ ಎಂದು ಕೇಳಿದಾಗ ಆತ ಹೇಳಿದರು, ಅದೇ ವಿಶೇಷ. ನಿಮಗೆ ಆದಂತೆಯೇ ನನಗೂ ಆಕೆ ಹಾಗೆಯೇ ಘರ್ಜಿಸಿದಳು.ಆಗ ನಾನು ಮೇಡಂ, ತಮ್ಮ ಆರೋಗ್ಯದ ಬಗ್ಗೆ ಕೆಲವು ವಿಷಯ ಹೇಳಲು ಬಂದಿದ್ದೇನೆ. ಅದು ನಿಮ್ಮ ತೂಕಕ್ಕೆ ಸಂಬಂಧಿಸಿದ್ದು ಎಂದೆ. ಆಕೆ, ನನ್ನ ತೂಕವೇ? ಏನಿದರ ವಿಚಾರ? ಎಂದಳು. ನಾನು, ಮೇಡಂ, ನನ್ನ ಹತ್ತಿರ ಕೆಲವು ಔಷಧಿಗಳಿವೆ. ಅವುಗಳನ್ನು ದಿನಾಲು ಇಪ್ಪತ್ತೊಂದು ದಿನಗಳ ಕಾಲ ಬಳಸಿದರೆ ಖಂಡಿತ ತೂಕ ಕಡಿಮೆಯಾಗುತ್ತದೆ. ಅದರೊಂದಿಗೆ ನೀವು ಮಾಡುವ ಆಹಾರವನ್ನು ಈ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿ­ಸಿದರೆ ಇನ್ನೂ ಪ್ರಭಾವ ಹೆಚ್ಚು ಎಂದು ಏನೇನೋ ಹೇಳಿಬಿಟ್ಟೆ.ಆಕೆಗೆ ಪಾತ್ರೆಗಳಿಗಿಂತ ತನ್ನ ತೂಕದ ಕಾಳಜಿ ಹೆಚ್ಚಾಗಿದ್ದರಿಂದ ನಾನು ಕೊಟ್ಟ ಸಕ್ಕರೆಪುಡಿ, ಜೇನುತುಪ್ಪಗಳೊಡನೆ ಪಾತ್ರೆಗಳನ್ನು ಕೊಂಡುಕೊಂಡರು. ಈತನಿಗೆ ಅರ್ಥವಾಯಿತು. ನಾವು ಮಾರುವಾಗ ನಮ್ಮ ಸಾಮಾನುಗಳ ಬಗ್ಗೆಯೇ ಹೇಳುವುದಕ್ಕಿಂತ ಖರೀದಿ­ದಾರರ ಅವಶ್ಯಕತೆಗಳನ್ನೂ ಗಮನಿಸಿ ಅದಕ್ಕೆ ಮಾರಾಟವನ್ನೂ ಹೊಂದಿಸ­ಬೇಕು. ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವಾಗ ಅವರಿಗೆ ತಿಳಿಯುವಂತೆ, ಅವರ ಸಂದರ್ಭಗಳಿಗೆ ಹೊಂದುವಂತೆ ಹೇಳಿದಾಗ ಅವರು ಅವುಗಳನ್ನು ಸ್ವೀಕರಿಸುತ್ತಾರೆ. ಸುಮ್ಮನೇ ಬಾಯಿ­ಮುಚ್ಚಿಕೊಂಡು ಕೇಳಿ ಎಂದರೆ ಕೇಳುತ್ತಾರೆ. ಆದರೆ, ಕಿವಿಯಿಂದ ಬಿಟ್ಟು ಬಿಡುತ್ತಾರೆ. ಮಕ್ಕಳಿಗೆ ಈಗ ಸಂಪ್ರದಾಯಗಳ ಬಗ್ಗೆ, ಪರಂಪರೆಯ ಬಗ್ಗೆ, ದೇಶದ ಬಗ್ಗೆ ಗೊತ್ತಿಲ್ಲ ಎಂದು ವಿಷಾದಪಡುವುದಕ್ಕಿಂತ ಅವರಿಗೆ ಆಕರ್ಷಕವಾಗುವಂತೆ ಹೇಳುವ ಕಲೆ ನಮಗೆ ತಿಳಿದಿಲ್ಲ ಎಂದು ಭಾವಿಸುವುದು ವಾಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry