ಮಾರುಕಟ್ಟೆ ಸ್ಥಿರತೆ-ಲಾಭದ ನಿರೀಕ್ಷೆ

ಶುಕ್ರವಾರ, ಮೇ 24, 2019
28 °C

ಮಾರುಕಟ್ಟೆ ಸ್ಥಿರತೆ-ಲಾಭದ ನಿರೀಕ್ಷೆ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯಲ್ಲಿ ಈಚಿನ ದಿನಗಳಲ್ಲಿ ಸ್ಥಿರತೆ ಕಂಡುಬರುತ್ತಿದ್ದು ಕಂಪನಿಗಳು ತಮ್ಮ ಸಾಧನೆಗೆ ಅನುಗುಣವಾಗಿ ಏರಿಳಿತ ಪ್ರದರ್ಶಿಸುತ್ತಿವೆ. ವಿಶೇಷವಾಗಿ ಭಾರಿ ಕುಸಿತ ಕಂಡಿರುವ ಉತ್ತಮ ಕಂಪೆನಿಗಳು ಹೆಚ್ಚಿನ ವೇಗದಿಂದ ಪುಟಿದೆದ್ದಿವೆ.ಇತ್ತೀಚೆಗೆ ಸಿಬಿಐ ಪ್ರಕರಣವನ್ನು ಪ್ರವರ್ತಕರ ವಿರುದ್ಧ, ದಾಖಲಿಸಿದೆ ಎಂಬ ಕಾರಣಕ್ಕಾಗಿ ಮಾರಾಟದ ಒತ್ತಡದಲ್ಲಿದ್ದ ಸನ್ ಟಿವಿ ನೆಟ್‌ವರ್ಕ್ ಕಳೆದ ಹದಿನೈದು ದಿನದಲ್ಲಿ ರೂ176.75 ರಿಂದ ರೂ 312ಕ್ಕೆ ಜಿಗಿತ ಕಂಡು ರೂ 311 ರಲ್ಲಿ ಅಂತ್ಯಗೊಂಡಿದೆ.ಹಾಗೆಯೇ ಪೆಟ್ರೋಲಿಯಂ ಅಂಡ್ ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬಾಡಿಯು ಇಂದ್ರಪ್ರಸ್ತ ಗ್ಯಾಸ್ ಕಂಪೆನಿಯ ವಿರುದ್ಧ ಕೈಗೊಂಡ ಕ್ರಮವು ಸರಿಯಲ್ಲ, ಇಂತಹ ಕ್ರಮಕ್ಕೆ ಅಧಿಕಾರವಿಲ್ಲವೆಂದು ತೀರ್ಪು ನೀಡಿದ ದೆಹಲಿ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಸುದ್ದಿಯಿಂದ ಶುಕ್ರವಾರ ರೂ237 ರಿಂದ ರೂ261ಕ್ಕೆ ಜಿಗಿದು ರೂ251ರ ಸಮೀಪ ಅಂತ್ಯಗೊಂಡಿತು.ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿಯ ಉತ್ತಮ ಫಲಿತಾಂಶವು ಷೇರಿನ ಬೆಲೆಯನ್ನು ರೂ50ಕ್ಕೂ ಹೆಚ್ಚಿನ ಏರಿಕೆ ಕಾಣುವಂತೆ ಮಾಡಿತು. ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಭಾರ್ತಿ ಏರ್‌ಟೆಲ್ ಉತ್ತಮ ಸಾಧನೆ ಪ್ರದರ್ಶಿಸಿಲ್ಲವೆಂಬ ಕಾರಣಕ್ಕೆ ಮಾರಾಟದ ಒತ್ತಡವನ್ನೆದುರಿಸಿದವು.

 

ಬ್ಯಾಂಕಿಂಗ್ ಹಾಗೂ ರೀಟೇಲ್ ವಲಯದ ಷೇರುಗಳು ಒತ್ತಡದಲ್ಲಿದ್ದವು. ಪೇಟೆಯು ಇತ್ತೀಚಿನ ದಿನಗಳಲ್ಲಿ ಉತ್ತಮ ಅಲ್ಪಕಾಲೀನ ಅವಕಾಶಗಳನ್ನು ಕಲ್ಪಿಸುತ್ತಿದ್ದು ಹೂಡಿಕೆದಾರರು ಮೌಲ್ಯಾಧಾರಿತ ಕೊಳ್ಳುವಿಕೆ; ಹಾಗೂ ಅಲ್ಪ ಲಾಭಕ್ಕೆ ತೃಪ್ತಿಪಟ್ಟುಕೊಂಡು ಚಟುವಟಿಕೆ ನಡೆಸುವುದು ಉತ್ತಮ.ಕಳೆದವಾರ ಸಂವೇದಿ ಸೂಚ್ಯಂಕವು 359 ಅಂಶಗಳಷ್ಟು ಏರಿಕೆ ಕಂಡರೆ ಸಣ್ಣ ಮತ್ತು ಮಧ್ಯಮ ಶ್ರೇಣಿ ಸೂಚ್ಯಂಕಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾಗಿ ರೂ2,906 ಕೋಟಿ ಹೂಡಿಕೆ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ2,034 ಕೋಟಿ ಷೇರು ಮಾರಾಟ ಮಾಡಿವೆ.ಲಾಭಾಂಶ ವಿಚಾರ

ಸೆನ್‌ಲ್ಯೂಬ್ ಇಂಡಸ್ಟ್ರೀಸ್ ಶೇ 25, ಡಿಸಿಡಬ್ಲು ಶೇ 18 (ಮು.ಬೆ. ರೂ2), ಎಲ್ಡರ್ ಫಾರ್ಮ ಶೇ 30, ಮಜ್‌ಡಾ ಲಿ. ಶೇ 40, ಮಹಾರಾಷ್ಟ್ರ ಸೀಮ್‌ಲೆಸ್ ಶೇ 120 (ಮು.ಬೆ. ರೂ5), ಮೆಟ್ರೊ ಗ್ಲೊಬಲ್ ಶೇ 20, (ಈಗ ಅಮಾನತಿನಲ್ಲಿರುವ ಕಂಪೆನಿ) ಪಿಬಿಎಂ. ಪೊಲಿಟೆಕ್ಸ್ ಶೇ 15, ಪೊದ್ದಾರ್ ಪಿಗ್ಮೆಂಟ್ಸ್ ಶೇ 20, ಸ್ಕೈಲೈನ್ ಮಿಲ್ಲರ್ಸ್‌ ಶೇ 20, ಸೂರ್ಯಲತಾ ಸ್ಪಿನ್ನಿಂಗ್ ಶೇ 15, ವಿಕ್ರಂ ಥರ್ಮೊ ಶೇ 15, ವಿಶಾಖ ಇಂಡಸ್ಟ್ರೀಸ್ ಶೇ 15, ವೈರ್ಸ್‌ ಅಂಡ್ ಪ್ಯಾಬ್ರಿಕ್ಸ್ ಶೇ 18, ಕೀನೋಟ್ ಕಾರ್ಪೊರೇಟ್ ಸರ್ವಿಸಸ್ ಶೇ 15, ಗಟಿ ಶೇ 25 (ಮು.ಬೆ. ರೂ2), ಬಾಲಕೃಷ್ಣ ಇಂಡಸ್ಟ್ರೀಸ್ ಶೇ 75 (ಮು.ಬೆ. ರೂ2) (ನಿ.ದಿ. 28-08-12) ಶಿಲ್ಪ ಮೆಡಿಕೇರ್ 45 (ಮು.ಬೆ. ರೂ2), ಸನ್ ಫಾರ್ಮಸ್ಯುಟಿಕಲ್ಸ್ ಶೇ 425 (ಮು.ಬೆ. ರೂ1).ಹೆಸರಿಗಾಗಿ ಲಾಭಾಂಶ

ಅರಿಹಂತ್ ಸೂಪರ್ ಸ್ಟ್ರಕ್ಚರ್ಸ್ ಶೇ 2, ಸುಮೀತ್ ಇಂಡಸ್ಟ್ರೀಸ್ ಶೇ 4.ಹೊಸ ಷೇರಿನ ವಿಚಾರ

*ದೆಹಲಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟಾಗುತ್ತಿರುವ ನಾರ್ತ್   ಈಸ್ಟರ್ನ್ ಕ್ಯಾರಿಯಿಂಗ್ ಕಾರ್ಪೊರೇಷನ್ ಲಿ, ಕಂಪೆನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಟಿ ಗುಂಪಿನಲ್ಲಿ ಆಗಸ್ಟ್ 10 ರಿಂದ ವಹಿವಾಟು ಆರಂಭಿಸಿದೆ.*ಇತ್ತೀಚೆಗೆ ಪ್ರತಿ ಷೇರಿಗೆ ರೂ22 ರಂತೆ ಸಾರ್ವಜನಿಕ ವಿತರಣೆ ಮಾಡಿದ ಸಂಗಂ ಅಡ್ವೈಸರ್ಸ್ ಲಿ. ಕಂಪೆನಿಯು 9 ರಿಂದ ಎಸ್.ಎಂ.ಇ. (ಸಣ್ಣ ಮತ್ತು ಮಧ್ಯಮ ವಲಯ) ವಿಭಾಗದಲ್ಲಿ ಅಂದರೆ ಎಂ.ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.ವ್ಯವಸ್ಥಿತ ಯೋಜನೆ

ಮೊರಾರ್ಜಿ ಟೆಕ್ಸ್‌ಟೈಲ್ಸ್ ಲಿ.ನ ಇಂಟೆಗ್ರಾ ವಿಭಾಗವನ್ನು ಬೇರ್ಪಡಿಸಿ ಫೈವ್‌ಸ್ಟಾರ್ ಮರ್ಕಂಟೈಲ್‌ನಲ್ಲಿ 1:1ರ ಅನುಪಾತದಲ್ಲಿ ವಿಲೀನಗೊಳಿಸಿ ಇಂಟೆಗ್ರಾ ಗಾರ್ಮೆಂಟ್ ಅಂಡ್ ಟೆಕ್ಸ್‌ಟೈಲ್ಸ್ ಲಿ. ಎಂದು ಹೆಸರಿಸಲಾಗುವುದು. ಈ ಹೊಸ ಷೇರಿನ ಮುಖಬೆಲೆಯು ರೂ3 ಆಗಿದ್ದು ಉಳಿದ ಮೊರಾರ್ಜಿ ಟೆಕ್ಸ್‌ಟೈಲ್ಸ್ ಲಿ. ಷೇರಿನ ಬೆಲೆಯನ್ನು ರೂ7ಕ್ಕೆ ಇಳಿಸಲಾಗುವುದು.ಬೋನಸ್ ಷೇರಿನ ವಿಚಾರ

*ಸೆಟ್‌ಕೊ ಲಿ. ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್ ಷೇರಿಗೆ 17ನೇ ಆಗಸ್ಟ್ ನಿಗದಿತ ದಿನವಾಗಿದ್ದು 14 ರಿಂದ ಬೋನಸ್ ನಂತರದ ವಹಿವಾಟು ಆರಂಭವಾಗಲಿದೆ.*ಮದರ್‌ಸನ್ ಸುಮಿ ಸಿಸ್ಟಮ್ಸ ಲಿ. ಕಂಪೆನಿಯು 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.*ಹೆಸ್ಟರ್ ಬಯೋಸೈನ್ಸಸ್ ಲಿ. ಕಂಪೆನಿಯು 14 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.ಮುಖಬೆಲೆ ಸೀಳಿಕೆ ವಿಚಾರ

*ಬಾಂಬೆ ಡೈಯಿಂಗ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ2ಕ್ಕೆ ಸೀಳಲಾಗುವುದು.* ಬರೋಡ ಎಕ್ಸ್‌ಟ್ರೂಷನ್ ಲಿ. ಕಂಪೆನಿ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲಾಗುವುದು.*ಬಾಂಬೆ ಬರ್ಮಾ ಟ್ರೇಡಿಂಗ್ ಕಾರ್ಪೊರೇಷನ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ2ಕ್ಕೆ ಸೀಳಲಾಗುವುದು.*ವಿಟಿಎಂ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ 1ಕ್ಕೆ ಸೀಳಲು 17ನೇ ಆಗಸ್ಟ್ ನಿಗದಿತ ದಿನವಾಗಿದೆ.ಹಕ್ಕಿನ ಷೇರು ವಿಚಾರ

*ಸನ್‌ಫಾರ್ಮ ಅಡ್ವಾನ್ಸ್‌ಡ್ ರಿಸರ್ಚ್ ಕಂಪೆನಿ ಲಿ.ನ ರೂ1ರ ಮುಖಬೆಲೆಯ ಷೇರನ್ನು ರೂ67 ರಂತೆ ಹಕ್ಕಿನ ಷೇರು ರೂಪದಲ್ಲಿ ವಿತರಿಸಲಿದೆ. ಪ್ರತಿ 7 ಷೇರಿಗೆ ಒಂದರಂತೆ ನೀಡುವ ಈ ಹಕ್ಕಿನ ಷೇರಿಗೆ 24ನೇ ಆಗಸ್ಟ್ ನಿಗದಿತ ದಿನವಾಗಿದೆ.*ಕೊಕುಯೊ ಕೆಮ್ಲಿನ್ ಲಿ. ಕಂಪೆನಿಯು ರೂ110 ಕೋಟಿವರೆಗೂ ಹಕ್ಕಿನ ಷೇರಿನ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಲಿದ್ದು, ಈ ವಿತರಣೆಯ ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಿದೆ. ಸಾಫ್ಟೆಕ್ ಇನ್‌ಫಿನಿಯಂ ಸೊಲೂಷನ್ಸ್ 16 ರಂದು ಹಕ್ಕಿನ ಷೇರು ವಿತರಣೆಯನ್ನು ಪರಿಶೀಲಿಸಲಿದೆ.ಅಮಾನತು ತೆರವು ಮುಂದೂಡಿಕೆ

ಪ್ರೀಮಿಯರ್ ಪೈಪ್ಸ್ ಲಿ. ಕಂಪೆನಿಯ ಮೇಲಿನ ಅಮಾನತು ತೆರವುಗೊಳಿಸಿದ ನಂತರ 9 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಬೇಕಿತ್ತು. ಅದನ್ನು 13ಕ್ಕೆ ಮುಂದೂಡಲಾಗಿದೆ.

ವಾರದ ಪ್ರಶ್ನೆ

`ಎಸ್‌ಎಂಇ~ ಸೆಗ್‌ಮೆಂಟ್ ಎಂದರೇನು? ಇದರಲ್ಲಿ ಟ್ರೇಡಿಂಗ್ ಮಾಡಲು ಅವಕಾಶವಿದೆಯೇ? ಇದರ ಸವಿವರವನ್ನು ತಿಳಿಸಿರಿ.ಉತ್ತರ: ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ದೇಶದ ಆರ್ಥಿಕ ಪ್ರಗತಿಯಲ್ಲಿ ಶೇ 45 ರಷ್ಟರ ಪಾಲು ಪಡೆದಿವೆ. ಹಾಗೂ ದೇಶದ ರಫ್ತು ವಹಿವಾಟಿಗೆ ಶೇ 40ರಷ್ಟು ಕೊಡುಗೆ ನೀಡುತ್ತವೆ. ಸುಮಾರು ಎರಡೂವರೆ ಕೋಟಿಗೂ ಹೆಚ್ಚಿನ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಆರು ಕೋಟಿಗೂ ಮೀರಿದ ಉದ್ಯೋಗಗಳನ್ನು ಸೃಷ್ಟಿಸಿವೆ. ಈ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮವೇ `ಎಸ್‌ಎಂಇ~ ವಲಯವಾಗಿದೆ.

 

ಈ ವಲಯದ ಕಂಪೆನಿಗಳಿಗೆ ಅವಶ್ಯವಾದ ದೀರ್ಘಕಾಲೀನ ಸಂಪನ್ಮೂಲಗಳ ಸಂಗ್ರಹಣೆಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ 2010ರಲ್ಲಿ ಇಂತಹ ಕಂಪೆನಿಗಳ ಷೇರುಗಳ ವಹಿವಾಟಿಗಾಗಿ ಷೇರು ವಿನಿಮಯ ಕೇಂದ್ರಗಳು ಪ್ರತ್ಯೇಕ ವೇದಿಕೆ ನಿರ್ಮಿಸಿಕೊಡಬೇಕೆಂಬ ಪ್ರಧಾನಮಂತ್ರಿಗಳ ಕಾರ್ಯಪಡೆಯ ಶಿಫಾರಸಿನಂತೆ `ಸೆಬಿ~ ಈ ವಲಯದ ಷೇರಿನ ವಹಿವಾಟಿಗೆ ಹೊಸ ನಿಯಮಾವಳಿ ರೂಪಿಸಿತು.

 

2011ರ ಸೆಪ್ಟೆಂಬರ್‌ನಲ್ಲಿ ಈ ಹೊಸ ವಿಭಾಗ `ಎಸ್‌ಎಂಇ~ ಷೇರುಗಳ ವಹಿವಾಟಿಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ `ಸೆಬಿ~ ಅನುಮತಿ ಪಡೆದು ಕಾರ್ಯಾರಂಭ ಮಾಡಿತು. ಇದೇ `ಎಸ್‌ಎಂಇ~ ಸೆಗ್‌ಮೆಂಟ್ ಎಂದು, ಈ ವಲಯದ ಲೀಸ್ಟಿಂಗ್‌ಗೆ ಕಂಪೆನಿಯು ಕನಿಷ್ಠ ರೂಒಂದು ಕೋಟಿ ಮೌಲ್ಯದ ನಿವ್ವಳ ಸಂಪತ್ತನ್ನು ಹೊಂದಿರಬೇಕು.ಈ ವಲಯದ ಆರಂಭಿಕ ಷೇರು ವಿತರಣೆಯು ವಿಭಿನ್ನವಾಗಿದೆ. ವಿತರಣೆ ಬೆಲೆಯನ್ನಾಧರಿಸಿ ಅರ್ಜಿ ಸಲ್ಲಿಸಬೇಕಾದ ಸಂಖ್ಯಾ ಗುಚ್ಚವನ್ನು ನಿರ್ಧರಿಸಲಾಗುವುದು ಉದಾಹರಣೆಗೆ ರೂ14 ರವರೆಗೂ ವಿತರಣೆಯಾಗಲಿರುವ ಷೇರಿಗೆ ಕನಿಷ್ಠ 10 ಸಾವಿರ ಷೇರಿಗೆ ಅರ್ಜಿ ಸಲ್ಲಿಸಬೇಕು. ರೂ35 ರಿಂದ ರೂ50 ರವರೆಗಿನ ವಿತರಣೆ ಷೇರಿಗೆ ಕನಿಷ್ಠ 3 ಸಾವಿರ ಷೇರಿಗೆ ಅರ್ಜಿ ಸಲ್ಲಿಸಬೇಕಾಗುವುದು. ವಿತರಣೆ ಬೆಲೆ ರೂ1000ಕ್ಕೂ ಹೆಚ್ಚಾದರೆ ಕೇವಲ 100 ಷೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಈ ವೇದಿಕೆಯು ಷೇರುದಾರರಿಗೆ ಹಣದ ಅವಶ್ಯಕತೆ ಇದ್ದಾಗ ನಗದೀಕರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತದೆ ಹಾಗೂ ಈಗಿನ ವಿಲೀನ, ಸ್ವಾದೀನ, ಸಮ್ಮಿಲನ ಯುಗದಲ್ಲಿ ಕಂಪೆನಿಗಳಿಗೆ ಹೆಚ್ಚಿನ ಪ್ರಗತಿಗೆ ಅವಕಾಶ ಕಲ್ಪಿಸಿಕೊಡುತ್ತದೆ.

 98863-13380

 (ಮಧ್ಯಾಹ್ನ 4.30ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry