ಮಂಗಳವಾರ, ನವೆಂಬರ್ 12, 2019
19 °C

ಮಾವೊ `ಪವಾಡ'ಗಳ ಲೋಕ

ರಾಮಚಂದ್ರ ಗುಹಾ
Published:
Updated:
ಮಾವೊ `ಪವಾಡ'ಗಳ ಲೋಕ

ಇತಿಹಾಸವನ್ನು ವ್ಯಾಖ್ಯಾನಿಸಲು ವಿಶಿಷ್ಟವಾದ ಭೌತಿಕ ಮಾನದಂಡವನ್ನು ಅಳವಡಿಸುವುದಾಗಿ ಮಾರ್ಕ್ಸ್‌ವಾದ ಪ್ರತಿಪಾದಿಸುತ್ತದೆ. ಎಂದರೆ, ವ್ಯಕ್ತಿಗಳ ಕೆಲಸಗಳಿಗಿಂತ ವರ್ಗ ಸಂಬಂಧಗಳು ಹಾಗೂ ತಂತ್ರಜ್ಞಾನದ ಶಕ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಆದರೆ, ಆಚರಣೆಯಲ್ಲಿರುವುದೇ ಬೇರೆ. ಮಾರ್ಕ್ಸ್‌ವಾದಿ ತತ್ವಗಳನ್ನು ಆಧರಿಸಿದ್ದಾಗಿ ಘೋಷಿಸಿಕೊಂಡ ರಾಜಕೀಯ ಆಡಳಿತಗಳು, ತಮ್ಮ ನಾಯಕರುಗಳನ್ನು ಕುರಿತಂತೆ ಅಸಾಧಾರಣ ಆರಾಧನಾ ಮನೋಭಾವವನ್ನು ಪ್ರದರ್ಶಿಸಿರುವ ವಿಪರ್ಯಾಸವನ್ನು ಕಾಣಬಹುದು.ಮಾರ್ಕ್ಸ್, ಎಂಜೆಲ್ಸ್ ಹಾಗೂ ಲೆನಿನ್ ರಂಥ ಪವಿತ್ರ ತ್ರಿಮೂರ್ತಿಗಳ ಬಗ್ಗೆ ವಿಶ್ವದಾದ್ಯಂತ ಕಮ್ಯುನಿಸ್ಟ್ ಪಕ್ಷಗಳು ಟೀಕೆಗಳನ್ನೇ ಮಾಡುವುದಿಲ್ಲ. 1930ರ ದಶಕ ಹಾಗೂ 1940ರ ದಶಕಗಳ ಸೋವಿಯೆತ್ ಯೂನಿಯನ್‌ನ ಜೋಸೆಫ್ ಸ್ಟಾಲಿನ್ ಕಾಲದಲ್ಲಿದ್ದಂತಹ ಗುಲಾಮಿತನದ ಭಟ್ಟಂಗಿತನವನ್ನು ಬೂರ್ಜ್ವಾ ಪ್ರಜಾಪ್ರಭುತ್ವದ ಬಹುಶಃ ಯಾವುದೇ ಪ್ರಧಾನಿ ಅಥವಾ ಅಧ್ಯಕ್ಷರು ಅನುಭವಿಸಿರುವುದು ಸಾಧ್ಯವಿಲ್ಲ.ರಷ್ಯಾದ ಸ್ಟಾಲಿನ್ ಹೊಂದಿದ್ದಂತಹ  `ಅನುಯಾಯಿಗಳ ಪಂಥ'ವನ್ನು  ಸರಿಗಟ್ಟುವಂತಹ ಅಥವಾ ಅವರನ್ನು ಮೀರಿಸುವಂತಹವರು ಆಧುನಿಕ ಕಾಲದಲ್ಲಿರುವುದು ಇಬ್ಬರು ನಾಯಕರು ಹಾಗೂ ರಾಷ್ಟ್ರಗಳು ಮಾತ್ರ. ಒಂದು ಕಿಮ್ ಲಿ ಸುಂಗ್ ಅವರ ಉತ್ತರ ಕೊರಿಯಾ  ಮತ್ತೊಂದು  ಮಾವೊ ಜೆಡಾಂಗ್‌ನ ಚೀನಾ. ಭಾರತದಲ್ಲಿ ಉತ್ತರ ಕೊರಿಯಾದ ರಾಯಭಾರ ಕಚೇರಿ  (ನವದೆಹಲಿಯ ಸುಂದರ ನಗರ ಬಡಾವಣೆಯಲ್ಲಿ ಇರುವಂತಹದ್ದು) ಬಳಿ 1990ರ ದಶಕದ ಆರಂಭದಲ್ಲಿ ನಡೆದು ಹೋಗುತ್ತಾ, ಅದರ ಗೋಡೆಗಳ ಮೇಲೆ ಇದ್ದ ಪ್ರದರ್ಶನ ಫಲಕ ನೋಡುತ್ತಾ ಗಟ್ಟಿಯಾಗಿ ನಗುತ್ತಾ ಸಾಗುತ್ತಿದ್ದದ್ದು ನೆನಪಾಗುತ್ತದೆ. ತನ್ನ ಜನರನ್ನು ಕತ್ತಲಿಂದ ಬೆಳಕಿನೆಡೆಗೆ ಹೇಗೆ ತಮ್ಮ ಪ್ರೀತಿಯ ನಾಯಕ ಏಕಾಂಗಿಯಾಗಿ ಹೊರತಂದ ಎಂಬುದು ಆ ಫಲಕದಲ್ಲಿರುತ್ತಿತ್ತು.ಇತ್ತೀಚೆಗೆ ಲಂಡನ್‌ನ ಬೀದಿಯಲ್ಲಿ ಹೋಗುತ್ತಿದ್ದಾಗ ಇನ್ನೂ ಹೆಚ್ಚಿನ ನಗು ಬಂತು. 1971ರಲ್ಲಿ ಪ್ರಕಟವಾಗಿದ್ದ `ಮಿರಾಕಲ್ಸ್ ಆಫ್ ಚೇರ್‌ಮನ್ ಮಾವೊ' ಎಂಬಂತಹ ಪುಸ್ತಕವನ್ನು ಕೊಂಡುಕೊಂಡೆ. 1966ರಿಂದ 1970ರವರೆಗೆ ಚೀನೀ ಪತ್ರಿಕೆಗಳು ಹಾಗೂ ರೇಡಿಯೊಗಳಲ್ಲಿ  ಪ್ರಸಾರವಾದ  ವರದಿಗಳ ಅನುವಾದಗಳನ್ನು ಈ ಪುಸ್ತಕ ಒಳಗೊಂಡಿದೆ. ಕಮ್ಯುನಿಸ್ಟ್ ವಿರೋಧಿ ಪತ್ರಕರ್ತ ಜಿ. ಆರ್. ಅರ್ಬನ್ ಅವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ವ್ಯಂಗ್ಯಭರಿತವಾದ ಆದರೆ ಕರಾರುವಾಕ್ಕಾದ  `ಭಕ್ತಿ ಸಾಹಿತ್ಯದ ಸಂಗ್ರಹ'  ಎಂಬ ಉಪ ಶೀರ್ಷಿಕೆಯನ್ನೂ ಈ ಪುಸ್ತಕಕ್ಕೆ ಅವರು ನೀಡಿದ್ದಾರೆ.ಈ ಸಂಗ್ರಹದಲ್ಲಿರುವ ಲೇಖನಗಳು ಎಷ್ಟೊಂದು ವಿಲಕ್ಷಣವಾಗಿವೆ ಎಂದರೆ ನಾನು  ಅವುಗಳ  ಆಯ್ದ ಭಾಗವನ್ನು ಇಲ್ಲಿ ಹಂಚಿಕೊಳ್ಳಬೇಕು. ಹಲವಾರು ವರ್ಷಗಳ ಕಾಲ ಕಿವುಡು ಮೂಗಿಯಾಗಿದ್ದ ಹುಡುಗಿ ಅಧ್ಯಕ್ಷ ಮಾವೊನ ಸ್ಫೂರ್ತಿಯಲ್ಲಿ ದಿಢೀರನೆ ಹಾಡು ಹೇಳತೊಡಗಿದಳಂತೆ. ಮತ್ತೊಂದು ಪ್ರಕರಣದಲ್ಲಿ, ನಲವತ್ತೈದು ಕೆ ಜಿ ಗೆಡ್ಡೆಯನ್ನು ಹೊಂದಿದ್ದ ರೋಗಿಯನ್ನು ಪರೀಕ್ಷಿಸಿದವರು, ತಮ್ಮ ಮಹಾನ್ ನಾಯಕನ `ಲಿಟ್ಲ್ ರೆಡ್ ಬುಕ್'ಅನ್ನು ಭಕ್ತಿಪೂರ್ವಕವಾಗಿ ಓದಿದ್ದ ವೈದ್ಯರು.ಅವರು ನಿರ್ವಹಿಸಿದ ಶಸ್ತ್ರಚಿಕಿತ್ಸೆಗೆ `ಮೊದಲಿಗೆ ಚದುರಿದ, ಪ್ರತ್ಯೇಕಗೊಂಡಿರುವ ಶತ್ರು ಶಕ್ತಿಗಳನ್ನು ಆಕ್ರಮಣ ಮಾಡಿ; ನಂತರ ಕೇಂದ್ರೀಕೃತಗೊಂಡಿರುವ ಬಲಯುತವಾದ ಶತ್ರುಗಳನ್ನು ಆಕ್ರಮಣ ಮಾಡಿ' ಎಂಬಂಥ ಮಾವೊ ಹೇಳಿಕೆಯ ಸ್ಫೂರ್ತಿ ಇತ್ತು. ಅದರಂತೆಯೇ ಸರ್ಜನ್‌ಗಳು ಗೆಡ್ಡೆ ಸುತ್ತ ಇದ್ದ ಅಂಗಾಂಶಗಳನ್ನು ಮೊದಲು ನಿರ್ವಹಿಸಿ ನಂತರವಷ್ಟೇ ಗೆಡ್ಡೆಯನ್ನು ನಿರ್ವಹಿಸಿದರು.ಅವರಿಗೆ ಸಹಾಯ ನೀಡಲು ಇದ್ದಂತಹವರು, ರೋಗಿಗೆ ರಕ್ತ ನೀಡುತ್ತಿದ್ದಾಗಲೂ ಮಾವೊ ಭಾವಚಿತ್ರಗಳನ್ನು ತಮ್ಮ  ಜೊತೆಯಲ್ಲಿಟ್ಟುಕೊಂಡಿದ್ದಂತಹ ಆಸ್ಪತ್ರೆ ಸಿಬ್ಬಂದಿ. ಇನ್ನು ರೋಗಿಗೆ ಸಂಬಂಧಿಸಿ ಹೇಳುವುದಾದರೆ, ಆಕೆಗೆ ಪ್ರಜ್ಞೆ ಮರಳಿ ಬಂದಾಗ, ತನ್ನ ಹೊಟ್ಟೆಯಲ್ಲಿ ಗೆಡ್ಡೆ ಮಾಯವಾಗಿದೆ ಎಂಬುದು ಆಕೆಯ ಅನುಭವಕ್ಕೆ ಬರುತ್ತದೆ. ಆಕೆ ಆಗ ಹೇಳಿದ ಮೊದಲ ಮಾತುಗಳು:  `ಚಿರ ಕಾಲ ಬಾಳಲಿ ಅಧ್ಯಕ್ಷ ಮಾವೊ! ಅಧ್ಯಕ್ಷ ಮಾವೊ ನನ್ನನ್ನು ಬದುಕಿಸಿದ್ದಾರೆ.'ಆರೋಗ್ಯ ಪಾಲನೆ ವಲಯದಿಂದ ಈಗ ಕ್ರೀಡಾ ಕ್ಷೇತ್ರದತ್ತ ಸಾಗಿರಿ. 1959ರಲ್ಲಿ ಚೀನೀ ಟೇಬಲ್ ಟೀಮ್ ವಿಶ್ವ ಚಾಂಪಿಯನ್‌ಷಿಪ್ ಗೆದ್ದಾದ ನಂತರ, ಒಬ್ಬ ಆಟಗಾರ ತನ್ನ ಯಶಸ್ಸಿನ ರಹಸ್ಯವನ್ನು ಬಹಿರಂಗ ಪಡಿಸಿದ. `ವೈರುಧ್ಯ' ಹಾಗೂ `ಆಚರಣೆ' ಕುರಿತಂತೆ ಮಾವೊ ಲೇಖನಗಳ ತತ್ವಗಳು ಹಾಗೂ ನಿಯಮಗಳನ್ನು ಪಿಂಗ್ ಪಾಂಗ್ ಟೇಬಲ್ ಮೇಲೆ ಆತ ಅನುಷ್ಠಾನ ಮಾಡಿದ್ದರಂತೆ.  `ವಿಶ್ವದಲ್ಲಿ ಮೊತ್ತ ಮೊದಲಿಗರಾಗಲು ನಮ್ಮದೇ ಹಾದಿಯನ್ನು ನಾವು ನಿರ್ಮಿಸಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅಧ್ಯಕ್ಷ ಮಾವೊ ಅವರ ಬೋಧನೆಗಳು ನೆರವಾಗಿವೆ. ಹಿನ್ನೋಟ ಹರಿಸಿದಲ್ಲಿ, ಕಳೆದ 10 ವರ್ಷಗಳಲ್ಲಿ ನಾವು ಮಾವೊ ತ್ಸೆ ತುಂಗರ ಚಿಂತನೆಗಳು ಹಾಗೂ ಕಾರ್ಮಿಕ  ರಾಜಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡುವಂತಹ ಹಾದಿಯನ್ನು ನಾವು ಅನುಸರಿಸಿದ್ದೇವೆ' ಎಂದು ತಂಡದ ಮತ್ತೊಬ್ಬರು ಸದಸ್ಯರು ಹೇಳಿದ್ದರು.1965ರ ವಿಶ್ವ ಚಾಂಪಿಯನ್‌ಷಿಪ್ ಅನ್ನು ಚೀನೀಯರು ಗೆದ್ದಾದ ನಂತರ, ಅಧ್ಯಕ್ಷ ಮಾವೊ ಅವರ ಕೃತಿಗಳ ಅಧ್ಯಯನ ಹಾಗೂ ಅನ್ವಯಿಸುವಿಕೆಯನ್ನು ಮುನ್ನೆಲೆಯಲ್ಲಿಟ್ಟು ಕ್ರಾಂತಿಕಾರಿ ತತ್ವಮೀಮಾಂಸೆಯನ್ನು ಆಚರಣೆಗೆ  ತಂದಿದ್ದಾಗಿ ಅದೇ ಆಟಗಾರ  ಹೇಳಿದ್ದರು. `ಟೇಬಲ್ ಟೆನ್ನಿಸ್ ಬ್ಯಾಟ್ ಅವರ (ಮಾವೊ) ಚಿಂತನೆಯ ನಿಯಂತ್ರಣಕ್ಕೆ ಒಳಪಟ್ಟಿತ್ತು' ಎಂದೂ ಅವರು ಹೇಳಿದ್ದರು.ಪುಸ್ತಕದಲ್ಲಿ ಚಿತ್ರಿತವಾಗಿರುವ ಮತ್ತೊಂದು ಘಟನೆ,  ಕಲ್ಲುಬಂಡೆಗಳ ಪರ್ವತಗಳ ಮೂಲಕ  ಹಾದು ಹೋಗುವ ಸುರಂಗವನ್ನು ಕೊರೆಯಲು ಶ್ರಮಜೀವಿಯೊಬ್ಬನಿಗೆ ನೆರವಾಗುವ ವಿಚಾರ ಕುರಿತದ್ದಾಗಿದೆ. ಈ ಶ್ರಮದಾಯಕ ಕೆಲಸದಲ್ಲಿ ಪ್ರಜ್ಞೆ ಕಳೆದುಕೊಂಡ ಆತನಿಗೆ ನಂತರ ತಿಳಿವು ಮೂಡುತ್ತದೆ. ಆಗ ಆತ ಮಾವೊ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾನೆ: `ಕೆಲಸವೆಂದರೆ ಏನು? ಕೆಲಸ ಎಂಬುದು ಹೋರಾಟ. ನಿಜವಾದ ಕಾಮ್ರೇಡ್ ಎಂದರೆ ಕಷ್ಟಗಳು ಹೆಚ್ಚಿರುವ ಕಡೆಗೆ ಹೋಗಲು ಉತ್ಸುಕನಾಗಿರುವಂತಹವನು'. ಹಾಗೆ ಶಕ್ತಿ ಪಡೆದುಕೊಂಡ ಆತ ತಕ್ಷಣವೇ ಸುರಂಗದೊಳಗೆ ಹೋಗುತ್ತಾನೆ. ಸುರಂಗ ತೋಡುವ ಈ ಕ್ರಿಯೆಯಲ್ಲಿ ಯಶಸ್ವಿಯಾಗಿ ಮತ್ತೊಂದು ಬದಿಯಲ್ಲಿ ಹೊರಬರುತ್ತಾನೆ.ಇನ್ನೂ ಹೆಚ್ಚಿನ ಕುತೂಹಲದ ವಿವರಗಳಿವೆ. ಈಶಾನ್ಯ ಚೀನಾದಲ್ಲಿ, ಪಕ್ಷದ ಕಾರ್ಯಕರ್ತರು ಚಿಕ್ಕ ಚಿಕ್ಕ ಊರುಗಳ ಕ್ಷೌರಿಕರ ಮನಸ್ಸುಗಳಲ್ಲಿ ಮಾವೊ ಚಿಂತನೆಗಳ ತತ್ವಗಳನ್ನು ಅಚ್ಚೊತ್ತಲು ಪ್ರಯತ್ನಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ, ಬದ್ಧ ಪ್ರತಿಸ್ಪರ್ಧಿ ಲಿಯು ಷಾವೊ-ಚಿ  ಅವರ `ಲಾಭ ಮೊದಲು',  `ಪ್ರೋತ್ಸಾಹಕ ಕ್ರಮಗಳು' ಎಂಬಂತಹ ಕ್ರಾಂತಿವಿರೋಧಿ ಅಸಂಬದ್ಧ ವಿಚಾರಗಳ ಘೋಷಣೆಗಳನ್ನು ಪ್ರತಿಪಾದಿಸಿದ `ಒಂದಷ್ಟು ಬಂಡವಾಳಶಾಹಿ ಜನರಿಂದ' ಸವಾಲುಗಳನ್ನು ಈ ಕಾರ್ಯಕರ್ತರು ಎದುರಿಸಬೇಕಾಯಿತು. ಕಡೆಗೆ ಕ್ರಾಂತಿಕಾರಕ ಸಿದ್ಧಾಂತ ಜಯ ಗಳಿಸಿತು. ಆದರೆ ಅದರ ಹಿಂದೆ ಹೋರಾಟವಿತ್ತು. 1969ರ ಏಪ್ರಿಲ್‌ನಲ್ಲಿ ಪೀಕಿಂಗ್ ರೇಡಿಯೊ ಪ್ರಸಾರದಲ್ಲಿ, ನಿರ್ದಿಷ್ಟ ಕ್ಷೌರಿಕರೊಬ್ಬರ ನೋವು, ದುಃಖಗಳನ್ನು ವಿವರಿಸಲಾಯಿತು.` ಒಂದು ಸಂಜೆ ಮಾಮೂಲಿನಂತೆ ಚಿಹ್ ಸಂಗ್ - ಟಾ ಎಂಬ ಕ್ಷೌರಿಕ ಮಹಾನ್ ಕಾರ್ಮಿಕ ಸಾಂಸ್ಕೃತಿಕ ಕ್ರಾಂತಿಯ ನಂತರದ ಉತ್ಕೃಷ್ಟ ಪರಿಸ್ಥಿತಿಯನ್ನು ಪ್ರಚಾರ ಮಾಡುತ್ತಲೇ ಜನರ ತಲೆ ಕ್ಷೌರ ಮಾಡಲು ವಸತಿ ಪ್ರದೇಶವೊಂದಕ್ಕೆ ಹೋದನು. ನಂತರ ರಾತ್ರಿ ತಡವಾಗಿ ತನ್ನ ಮನೆಗೆ ವಾಪಸ್ಸಾದ. ಅಧ್ಯಕ್ಷ ಮಾವೊ ಬೋಧನೆಯ ಬೆಳಕಿನಲ್ಲಿ ತನ್ನ ದಿನದ ಕರ್ಮಗಳ ಮೌಲ್ಯಮಾಪನ ಮಾಡಿಕೊಳ್ಳುತ್ತಾ  ಎಚ್ಚರಾಗಿದ್ದು ಹಾಸಿಗೆಯಲ್ಲಿ ಹೊರಳಾಡುತ್ತಿದ್ದ. ಚಿಹ್ ಸಂಗ್ - ಟಾ ಗೆ ಸ್ವಲ್ಪ ಕಿರಿಕಿರಿಯಾಗಿತ್ತು.  ಏಕೆಂದರೆ ಪಾರ್ಶ್ವವಾಯು ಪೀಡಿತನಾಗಿದ್ದ ವ್ಯಕ್ತಿಯ ಕೂದಲು ಕತ್ತರಿಸುತ್ತಿರುವಾಗ , ಆತನ ಹೊದಿಕೆ ಕೊಳೆಯಾಗಿದೆ  ಎಂಬುದು ಆತನ ಗಮನಕ್ಕೆ ಬಂದಿತ್ತು. ಆದರೂ  ಆ ಕಾಯಿಲೆಯ ಮನುಷ್ಯನಿಗೆ ಆ ಹೊದಿಕೆ ತೊಳೆದುಕೊಡಲು ಆತನಿಗೆ ಆಗಿರಲಿಲ್ಲ. ಅಧ್ಯಕ್ಷ ಮಾವೊ ಕಲಿಸಿದ ರೀತಿಯಲ್ಲಿ ಜನರ ಹಿತಕ್ಕಾಗಿ ಪೂರ್ಣವಾಗಿ ಹಾಗೂ `ಸಮಗ್ರವಾಗಿ' ಕೆಲಸ ಮಾಡುವಲ್ಲಿ ಆತ ವಿಫಲನಾಗಿದ್ದ. ಮರು ದಿನ ಬೆಳಿಗ್ಗೆ  ಆತ ಆ ಕಾಯಿಲೆಯ ಮನುಷ್ಯನ ಮನೆಗೆ ಹೋಗಿ ಕೊಳೆಯಾದ ಹೊದಿಕೆಯನ್ನು  ತೆಗೆದುಕೊಂಡು ಅದನ್ನು ತೊಳೆದುಕೊಡಲು ಒಯ್ಯುತ್ತಾನೆ.'ಅಧ್ಯಕ್ಷ ಮಾವೊ ಅವರ ಚೀನಾದಲ್ಲಿ, ವರ್ಗ ಒಗ್ಗಟ್ಟು (ಸಿದ್ಧಾಂತದಲ್ಲಿ) ಎಂಬುದು ಕುಟುಂಬ ಹೊಣೆಗಾರಿಕೆಗಳನ್ನೂ ಮೀರುವಂಥ್ದ್ದದಾಗಿತ್ತು. ಒಮ್ಮೆ ಒಬ್ಬ ಮಹಿಳೆ ರಸ್ತೆಯಲ್ಲಿ ಲಾರಿಗೆ ಸಿಕ್ಕಿ ಸಾಯುತ್ತಾಳೆ. ಆಕೆಯ ಪ್ರೀತಿಯ ಪತಿಗೆ ಲಾರಿ ಚಾಲಕನ ವಿರುದ್ಧ ಮೊದಲಿಗೆ ಕೋಪ ಉಕ್ಕೇರಿ ಬರುತ್ತದೆ. ನಂತರ ಆತನಿಗೆ ಅಧ್ಯಕ್ಷ ಮಾವೊನ ಬೋಧನೆ ನೆನಪಾಗುತ್ತದೆ: ` ನಮ್ಮ  ಚಲನೆಯ ಬಿಂದು ಯಾವಾಗಲೂ ಎಲ್ಲಾ ಪ್ರಕರಣಗಳಲ್ಲೂ ಜನರ ಹಿತಾಸಕ್ತಿಯ ದೃಷ್ಟಿಯಿಂದಾಗಿರಬೇಕೆ ಹೊರತು ತಮ್ಮದೇ ಸ್ವಂತ ಹಿತದೃಷ್ಟಿಯನ್ನು ಅವಲಂಬಿಸಿರಬಾರದು....'   ಹಾಗೆ ಸಮಾಧಾನ ತಂದುಕೊಂಡು  ಚಾಲಕನ ಬಳಿ ಸಾರಿ ಆತನ ತಪ್ಪನ್ನು ಕ್ಷಮಿಸಿರುವುದಾಗಿ ಆತ ಹೇಳಿದ.ಆದರೆ ಮಾವೊ ಚಿಂತನೆಗಳನ್ನು ಹೋಗಿ ಓದಬೇಕೆಂದು ಚಾಲಕನಿಗೆ ಒತ್ತಾಯಿಸಿದ. `ಚಾಲಕನಿಗೆ ಸ್ಟಿಯರಿಂಗ್ ವೀಲ್ ರೀತಿ ಕ್ರಾಂತಿಕಾರಿಗೆ ಮಾವೊ ಚಿಂತನೆಗಳು ಅತ್ಯಂತ ಅಗತ್ಯವಾದದ್ದು' ಎಂದು ಆತ ಹೇಳಿದ. ಈ ಮಾತುಗಳಿಂದ ಚಾಲಕ ಭಾವುಕನಾಗಿಬಿಟ್ಟ. ಆತ ದುಃಖಿತ ವ್ಯಕ್ತಿಯನ್ನು ಅಪ್ಪಿಕೊಂಡ ಹಾಗೂ ಹೀಗೆ ಹೇಳಿದ:  `ನಾನು ಅಧ್ಯಕ್ಷ ಮಾವೊಗೆ ಕೃತಜ್ಞನಾಗಿರುತ್ತೇನೆ. ನಿಮ್ಮಂಥ  ಶ್ರೇಷ್ಠ ಜನರನ್ನು ನೀಡಿದ ಅವರಿಗೆ ನಾನು ಋಣಿ.ಈ ದುರಂತ ಅಪಘಾತದಿಂದ ಕಲಿತ ಪಾಠವನ್ನು ನಾನು ಯಾವಾಗಲೂ ನೆನಪಿಟ್ಟುಕೊಳ್ಳುತ್ತೇನೆ. ಅಧ್ಯಕ್ಷ ಮಾವೊ ಅವರ ಕೃತಿಗಳನ್ನು ಅಧ್ಯಯನ ಮಾಡಿ ಸೃಜನಾತ್ಮಕವಾಗಿ ಅನ್ವಯಿಸುತ್ತೇನೆ. ಸ್ವಹಿತಾಸಕ್ತಿಗಳ ವಿರುದ್ಧ ಹೋರಾಡುತ್ತೇನೆ.  ಕ್ರಾಂತಿವಿರೋಧಿ ಕ್ರಮಗಳನ್ನು  ನಿರಾಕರಿಸುತ್ತೇನೆ. ಕ್ರಾಂತಿಯನ್ನು ಅರ್ಥೈಸಿಕೊಳ್ಳಲು ಹಾಗೂ ಉತ್ಪಾದನೆಯನ್ನು  ಉತ್ತೇಜಿಸಲು ಮಾದರಿಯಾಗಿರಲು ಪ್ರಯತ್ನಿಸುತ್ತೇನೆ.'ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಮಾಡಿದ ಪ್ರಖ್ಯಾತ ಭಾಷಣದಲ್ಲಿ ಬಿ.ಆರ್.ಅಂಬೇಡ್ಕರ್ ಅವರು ರಾಜಕೀಯದಲ್ಲಿ ನಾಯಕರನ್ನು ಅತಿಯಾಗಿ ಆರಾಧಿಸುವುದರ (ಹೀರೊ ವರ್ಷಿಪ್) ಅಪಾಯಗಳ ಕುರಿತು ಎಚ್ಚರಿಸಿದ್ದರು. ಈ ಎಚ್ಚರಿಕೆ ಪಾಲನೆಯಾಗಲಿಲ್ಲ. ಜಯಲಲಿತಾರನ್ನು ಕೆಲವು ತಮಿಳರು, ನರೇಂದ್ರ ಮೋದಿಯನ್ನು ಕೆಲವು ಗುಜರಾತಿಗಳು, ಬಾಳ ಠಾಕ್ರೆಯನ್ನು ಕೆಲವು ಮಹಾರಾಷ್ಟ್ರೀಯರು ಹಾಗೂ ಇಂದಿರಾ, ರಾಜೀವ್ ಹಾಗೂ ಸೋನಿಯಾ ಗಾಂಧಿಯನ್ನು ಎಲ್ಲಾ ಕಾಂಗ್ರೆಸಿಗರೂ ದೈವತ್ವಕ್ಕೇರಿಸುವ ವಿದ್ಯಮಾನಗಳೇ ಇದಕ್ಕೆ ಸಾಕ್ಷಿ. ಅಂಬೇಡ್ಕರ್ ಅವರನ್ನೂ  ಸ್ವತಃ  ಅವರ ಅನುಯಾಯಿಗಳೇ ಹೆಚ್ಚು ಕಡಿಮೆ ಅವರನ್ನು ದೇವರ ಸ್ಥಾನಕ್ಕೇರಿಸಿ ಇಟ್ಟಿದ್ದಾರೆ. ಹಾಗಿದ್ದೂ, 1967ರ ಆಗಸ್ಟ್ 13ರಂದು  `ಲಿಬರೇಷನ್ ಆರ್ಮಿ ಡೈಲಿ'ಯಲ್ಲಿ ಪ್ರಕಟವಾದ ಸಂಪಾದಕೀಯವನ್ನು ಅವರು ಹೇಗೆ ಪರಿಭಾವಿಸಿರಬಹುದಿತ್ತೆಂಬುದು ಅಚ್ಚರಿಯಾಗುತ್ತದೆ.`ಅಧ್ಯಕ್ಷ ಮಾವೊ ಅವರು ವಿಶ್ವದಲ್ಲೇ ಅತ್ಯಂತ ಪ್ರಮುಖ, ಮಹಾನ್ ಬುದ್ಧಿಶಕ್ತಿಯ ವ್ಯಕ್ತಿ. ಅವರ ಚಿಂತನೆಗಳು ಚೀನಾ ಹಾಗೂ ವಿದೇಶಗಳ ಕಾರ್ಮಿಕ ಹೋರಾಟಗಳ ಅನುಭವದ  ಮೊತ್ತವಾಗಿದೆ. ಅಧ್ಯಕ್ಷ ಮಾವೊ ಅವರ ನಿರ್ದೇಶನಗಳನ್ನು ಅನುಷ್ಠಾನ ಮಾಡುವಲ್ಲಿ, ನಾವು ಅವನ್ನು ಅರ್ಥ ಮಾಡಿಕೊಳ್ಳುತ್ತೇವೋ ಅಥವಾ ಇಲ್ಲವೋ ಅನ್ನುವ ಅಂಶವನ್ನು ಪೂರ್ಣವಾಗಿ ನಿರ್ಲಕ್ಷಿಸಬೇಕು.  ಅಧ್ಯಕ್ಷ ಮಾವೊ ಅವರ ಅನೇಕ ನಿರ್ದೇಶನಗಳನ್ನು ಪೂರ್ಣವಾಗಿ  ಅಥವಾ ಭಾಗಶಃ ಆರಂಭದಲ್ಲಿ ನಮಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂಬುದನ್ನು  ಕ್ರಾಂತಿಕಾರಿ ಹೋರಾಟಗಳ ಅನುಭವಗಳು ನಮಗೆ ತಿಳಿಸಿಕೊಟ್ಟಿವೆ. ಆದರೆ ಕ್ರಮೇಣ, ಅನುಷ್ಠಾನ ಮಾಡುವಾಗ, ಅನುಷ್ಠಾನ ಮಾಡಿದ ನಂತರ ಅಥವಾ ಅನುಷ್ಠಾನ ಮಾಡುವ ಹಂತದಲ್ಲಿ ಅಥವಾ ಅನುಷ್ಠಾನವಾದ ಅನೇಕ ವರ್ಷಗಳ ನಂತರ ಅರ್ಥ ಮಾಡಿಕೊಳ್ಳುತ್ತೇವೆ.  ಹೀಗಾಗಿ ನಾವು ಅರ್ಥ ಮಾಡಿಕೊಂಡ ಹಾಗೆಯೇ ತಾತ್ಕಾಲಿಕವಾಗಿ ಅರ್ಥ ಮಾಡಿಕೊಳ್ಳಲಾಗದ  ಅಧ್ಯಕ್ಷ ಮಾವೊ ಅವರ ನಿರ್ದೇಶನಗಳನ್ನು ನಾವು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.'ಬಹುಶಃ ಇದನ್ನೇ ಕುರುಡು ನಂಬಿಕೆ ಎಂದು ಕರೆಯಲಾಗುತ್ತದೆಯೇನೊ. ಏನಾದರಾಗಲಿ, 1960ರ ದಶಕದ ಚೀನಾದ ಮಾವೊ ಕುರಿತಂತೆ ಆರೋಪಿಸಲಾದ ಪವಾಡಗಳನ್ನು ನೋಡಿದರೆ ಹಿಂದೂ ಸ್ವಾಮೀಜಿಗಳದ್ದು  ಅತಿ ಸಾಧಾರಣ. ಏನೇನೂ ಅಲ್ಲ. 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರತಿಕ್ರಿಯಿಸಿ (+)