ಬುಧವಾರ, ಜೂಲೈ 8, 2020
21 °C

ಮಾವೋವಾದ: ಚರಿತ್ರೆಯ ಕತ್ತಲಲ್ಲಿ ಕಂಡ ಬಾವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆಯೇ?

ಈ ಪ್ರಶ್ನೆಗೆ ವಿವರಣೆಯ ಅಗತ್ಯವಿಲ್ಲದಂತೆ ಹೌದು ಎನ್ನುವುದಾಗಲೀ ಅಲ್ಲ ಎನ್ನುವುದಾಗಲೀ ದಾರ್ಷ್ಟ್ಯದ ಮಾತಾಗಬಹುದು. ಆದರೆ ಹೇಗೋ ಅಂತೂ ಚಲಿಸುತ್ತಲೂ ಬೆಳೆಯುತ್ತಲೂ ಇರುವಂತೆ ಕಾಣುವ ನಮ್ಮ ಜೀವನ ನೆಮ್ಮದಿಯದಂತೂ ಅಲ್ಲ.

ಇದಕ್ಕೆ ಕಾರಣ ವ್ಯಾಪಕವಾದ ಲಜ್ಜೆಗೆಟ್ಟ ಭ್ರಷ್ಟಾಚಾರ. ಇವತ್ತು ಒಂದು ಚುನಾವಣೆಯಲ್ಲಿ ಯಾರಾದರೂ ಗೆಲ್ಲಬೇಕೆಂದರೆ ಲಕ್ಷಾಂತರವಲ್ಲ, ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಮಹಾತ್ಮ ಗಾಂಧಿಯೇ ಚುನಾವಣೆಗೆ ನಿಂತಿದ್ದರೆ ಸೋಲುತ್ತಿದ್ದರು ಎನ್ನುವವರೂ ಇದ್ದಾರೆ.
 

 ಅಂದರೆ ಓಟು ಕೇಳುವವನಲ್ಲದೆ ಓಟು ಕೊಡುವವನು ಭ್ರಷ್ಟಾಚಾರಿಯಾಗಿದ್ದಾನೆ. ಸಮಾಜದ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸಮಾಡುವವನು ಚುನಾವಣೆಯಲ್ಲಿ ನಿಂತು ಗೆಲ್ಲಬಹುದೆಂಬ ಭರವಸೆಯೇ ಇಲ್ಲವಾಗಿದೆ.

 ಎಲ್ಲ ಸೆಕ್ಯುಲರ್ ಪಕ್ಷಗಳೂ ಭಾಜಪ ಜೊತೆ ಕೈಗೂಡಿಸಿ ಮಲ್ಯ ಎಂಬ ಧನಿಕರೊಬ್ಬರನ್ನು ಮತ್ತೆ ರಾಜ್ಯ ಸಭೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ವಾರ್ತೆಯೂ ನಮಗೆ ಆಶ್ಚರ್ಯವನ್ನು ತರುವುದಿಲ್ಲ ಎಂಬುದು ಈ ಕಾಲದ ಒಂದು ದುರಂತ.

 ಮಲ್ಯರ ಕಣ್ಣಲ್ಲಿ ರಾಜಕೀಯ ಪಕ್ಷಗಳ ತಾತ್ವಿಕತೆಗೆ ಮೂರು ಕಾಸಿನ ಬೆಲೆ ಇಲ್ಲ. ಟಾಟಾ, ಬಿರ್ಲಾ, ಅಂಬಾನಿ, ಜಿಂದಾಲ್  ಇತ್ಯಾದಿ ನಮ್ಮ ಎಲ್ಲ ಧನಿಕರೂ ರಾಜಕೀಯ ಪಕ್ಷಗಳನ್ನು ಸಮಭಾವದಲ್ಲಿ ನೋಡುವ ಕಾಲ ಇದು.ಗುಜರಾತಿನ ಮೋದಿಯನ್ನು ಅಪ್ಪಿಕೊಳ್ಳದವರು ಯಾರೂ ಉಳಿದಿಲ್ಲ. ಆದ್ದರಿಂದ ನಮ್ಮ ಪ್ರಜಾತಂತ್ರವು ಆಳವಾದ ವಿಶ್ಲೇಷಣೆಗೆ ಗುರಿಯಾಗಬೇಕಾಗಿದೆ. ಚುನಾವಣಾ ಪದ್ಧತಿಯಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಮಾಡದಿದ್ದಲ್ಲಿ ನಮ್ಮ ಪ್ರಜಾತಂತ್ರದ ಬಗ್ಗೆ ಎಲ್ಲರೂ ಸಿನಿಕರಾಗುತ್ತಾರೆ.ನಾನು, ನಮ್ಮಲ್ಲಿ ಎರಡು ಬಗೆಯ ಹಿಂಸೆಗಳಿವೆ ಎಂದು ಹಿಂದೊಮ್ಮೆ ಬರೆದಿದ್ದೆ. ಮೊದಲನೆಯದು ಕೋಮುವಾದಿ ಹಿಂಸೆ, ಎರಡನೆಯದು ನಕ್ಸಲ್ ಹಿಂಸೆ.ಮೊದಲನೆಯದು ರೇಬಿಸ್ ಇದ್ದಂತೆ. ಈ ರೋಗಕ್ಕೆ ಗುಣಪಡಿಸುವ ಚಿಕಿತ್ಸೆಯಿಲ್ಲ. ನಕ್ಸಲ್‌ವಾದದ ಹಿಂಸೆ ಕ್ಯಾನ್ಸರ್ ಇದ್ದಂತೆ. ಇದು ದೇಹವೇ ಹದಗೆಟ್ಟು ತನ್ನೊಳಗೆ ತಾನೇ ಸೃಷ್ಟಿಸಿಕೊಳ್ಳುವ ರೋಗ. ಇದಾಗದಂತೆ ತಡೆಯುವ ಕ್ರಮಗಳೂ ಇವೆ.ಅಂದರೆ ಸರ್ಜರಿ ಮತ್ತು ಚಿಕಿತ್ಸೆಯೂ ಇದೆ. ಆದರೆ ಯಾವ ಹಿಂಸೆಯ ಬಗ್ಗೆಯೂ ನಮ್ಮಂತೆ ಕ್ಷೇಮದ ನೆಲೆಯಲ್ಲಿ ನಿಂತು ಮಾತಾಡುವುದರಲ್ಲೆೀ ಒಂದು ಪಡಪೋಶಿತನದ ಅನೈತಿಕತೆ ಇರುತ್ತದೆ.ದೇಶ ಭ್ರಷ್ಟಾಚಾರದಲ್ಲಿ ತೀರಾ ಹದಗೆಟ್ಟಾಗ ಅದನ್ನು ಸುಧಾರಿಸುವ ಉಪಾಯಗಳನ್ನು ಕೆಲವು ಜನ ಹುಡುಕುತ್ತಾರೆ. ಉದಾಹರಣೆಗೆ ಎನ್‌ಆರ್‌ಇಜಿ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ). ಇವತ್ತು ಕೆಲಸವಿಲ್ಲದವರಿಗೆ ಅವರು ಹಸಿವಿನಿಂದ ಸಾಯದಂತೆ ಉಳಿಸಲು ಕೊಡುವ ಉದ್ಯೋಗ. ಬಡಜನರು ವರ್ಷದಲ್ಲಿ ಒಂದು ತಿಂಗಳೋ, ಎರಡು ತಿಂಗಳೋ ಮಾಡುವ ಉದ್ಯೋಗದಿಂದ ಹಾಗೂ ಹೀಗೂ ಬದುಕುವುದು ಸಾಧ್ಯವಾಗುತ್ತದೆಂಬ ಭರವಸೆಯಿಂದ ಹುಟ್ಟಿದ ಯೋಜನೆಯಿದು.

ಇದನ್ನು ಟೀಕಿಸುವುದು ತಪ್ಪು ಎಂದೇ ನನ್ನ ಅಭಿಪ್ರಾಯ. ಆದರೆ ಈ ಹಣವನ್ನು ಗ್ರಾಮದಲ್ಲಿರುವ ಯಜಮಾನ ವರ್ಗವೇ ತನ್ನ ಹಿತಕ್ಕಾಗಿಯೇ ಬಳಸಿಕೊಳ್ಳುತ್ತಿದೆ ಎಂಬ ಅಪವಾದವಿದೆ.

 ಅಂದರೆ ಸುಧಾರಣೆಯಿಂದ ನಾವು ದೇಶವನ್ನು ಬಚಾವುಮಾಡಲು ಸಾಧ್ಯವಿಲ್ಲ. ಸುಧಾರಣೆ ನಿರುಪಯೋಗಿ, ಕ್ರಾಂತಿಯೇ ಆಗಬೇಕು ಎನ್ನುವ ವಾದಕ್ಕಿದು ಸಮರ್ಥನೆ ಕೊಡುತ್ತದೆ. ಆದರೆ ಇದು ನಮ್ಮಂತಹ ಪುಣ್ಯವಂತರು ಮಾಡುವ ಸೋಮಾರಿ ಸಮರ್ಥನೆ. ಅಹನ್ಯಹನಿ ಬದುಕುವ ಬಡಜನರ ಕಣ್ಣು ಲಂಚ ಕೊಟ್ಟಾದರೂ ಸಿಗುವ ರೇಷನ್ ಮೇಲೆ ಇರುತ್ತದೆ.ಇನ್ನೊಂದು ವಾದವಿದೆ. ಒಂದು ದೇಶ ಕ್ರಾಂತಿಯ ಅನಿವಾರ್ಯತೆಗೆ ಸಿದ್ಧವಾಗಿರುವಾಗಲೂ ಜನಸಮುದಾಯ ಆಂತರಿಕವಾಗಿ ಸಿದ್ಧವಾಗಿರುವುದಿಲ್ಲ. ಅವರನ್ನು ಆಂತರಿಕವಾಗಿ ಸಿದ್ಧಗೊಳಿಸಲು ಬಹುಶಃ ಅವರಲ್ಲಿ ಕ್ರಾಂತಿಯ ಆಶಯವನ್ನು ಬಿತ್ತುವಂತಹ ಚಳುವಳಿಗಳನ್ನು ಮಾಡಬೇಕು ಎಂಬುದು.

ಉದಾಹರಣೆಗೆ ಒಂದು ಊರಿನಲ್ಲಿ ಒಬ್ಬ ದುಷ್ಟ ಅಧಿಕಾರಿ ಇದ್ದಾನೆ. ಏನು ಮಾಡಿದರೂ ಅವನ ದರ್ಬಾರು ನಡೆಯುತ್ತಲೇ ಹೋಗುತ್ತದೆ ಎಂದುಕೊಳ್ಳೋಣ; ಅಲ್ಲಿನ ಪ್ರಜೆಗಳು ನಿಸ್ಸಹಾಯಕ ಭಾವನೆಯಲ್ಲಿ ಕುಗ್ಗಿಹೋಗಿದ್ದಾರೆ ಎಂದುಕೊಳ್ಳೋಣ.ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶದ ಕ್ರಾಂತಿಗಾಗಿ ಕಾಯದೆ ಆ ದುಷ್ಟನೊಬ್ಬನನ್ನು ಕೊಂದು ಹಾಕಿದರೆ ಜನರಿಗೆ ತಮ್ಮ ಪಾಡು ಸನಾತನವೂ ಅಲ್ಲ, ಶಾಶ್ವತವೂ ಅಲ್ಲ ಎನ್ನುವ ಧೈರ್ಯ ಉಕ್ಕುತ್ತದೆ. ಈ ಬಗೆಯ ಹಿಂಸೆಗಳಿಂದಲೇ ಒಂದಿಡೀ ದೇಶವನ್ನು ಲೆನಿನ್/ಮಾವೋವಾದಿ ಪಕ್ಷ ಕ್ರಾಂತಿಗೆ ಸಿದ್ಧಪಡಿಸುತ್ತದೆ.ಮಾವೋವಾದಿಗಳ ಆಲೋಚನಾ ಕ್ರಮ ಇದೇ ಇರಬಹುದೆಂದು ಊಹಿಸುತ್ತೇನೆ. ಇವರನ್ನು ನಿಷ್ಠುರ ಕಾರ್ಯಾಚರಣೆಯ ಮೂಲಕ ಶಿಕ್ಷಿಸಿದರೆ ಮಾವೋವಾದ ನಿರ್ನಾಮವಾಗುತ್ತದೆಂದು ಸರ್ಕಾರ ತಿಳಿಯುತ್ತದೆ.

ಆದರೆ ಮಾವೋವಾದಿಗಳಿಗೆ ಇದೇ ಬೇಕು. ಅವರು ಸರ್ವ ತ್ಯಾಗಕ್ಕೂ ಸಿದ್ಧರಾದವರು. ತಮ್ಮ ಮೇಲಿನ ಹಿಂಸೆ ಹೆಚ್ಚಿದಷ್ಟೂ ತಮ್ಮ ಬಲ ಬೆಳೆಯುತ್ತದೆ ಎನ್ನುವ ನಂಬಿಕೆಯುಳ್ಳವರು. ಪ್ರಜಾತಾಂತ್ರಿಕ ಸರ್ಕಾರ ಕಾನೂನುಬದ್ಧವಾಗಿ ಕೆಲಸ ಮಾಡುತ್ತದೆ ಎಂಬ ಜನರ ಭ್ರಮೆಯನ್ನು ಸರ್ಕಾರ ತನ್ನ ಕಾರ್ಯಾಚರಣೆಯ ಕ್ರೌರ್ಯದಲ್ಲೇ ನಾಶಮಾಡುತ್ತದೆಂಬುದು ಇವರ ಭರವಸೆ. ಚಿದಂಬರಂ ಅನುಸರಿಸುವ ಮಾರ್ಗದಲ್ಲಿ ಆಗುವುದೂ ಇದೇ ಎಂಬುದು ನನ್ನ ಅನುಮಾನ.ಮಾವೋವಾದಿಗಳು ಗಿರಿಜನರ ನಡುವೆ ಅಡಗಿಕೊಂಡು ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಶ್ರೀಮಂತರ ಹಿತವನ್ನು ಸಾಧಿಸಲು ಬಯಸುವ ನಮ್ಮ ವ್ಯವಸ್ಥೆಯ ಆಳುವ ವರ್ಗವಾದ ನಮ್ಮಂಥವರು ಈ ಗಿರಿಜನರ ನಂಬಿಕೆಗಳನ್ನೂ ಜೀವನ ವಿಧಾನವನ್ನೂ ನಮ್ಮ ‘ಡೆವಲಪ್‌ಮೆಂಟ್’ನ ಪಥದಲ್ಲಿರುವ ಮುಳ್ಳುಗಳೆಂದು ಕಾಣುತ್ತೇವೆ.

 ಎಲ್ಲಾ ಡೆವಲಪ್‌ಮೆಂಟ್ ಕೂಡಾ ಈವರೆಗೆ ನಾಶಮಾಡುತ್ತಾ ಹೋಗಿರುವುದು ಗುಡ್ಡಗಾಡುಗಳಲ್ಲಿ ವಾಸಿಸುವ ಭೂಮಿಗೆ ಹೊರೆಯಾಗದ ಈ ಗಿರಿಜನರನ್ನೇ.

ಈಚೆಗೆ ವೇದಾಂತ ಎನ್ನುವ ಹೆಸರಿನ ಕಂಪೆನಿಗೆ ಅಗತ್ಯವಾದ ಬಾಕ್ಸೈಟ್ ಎಂಬ ಅದಿರು ಸಿಕ್ಕುವುದು ಈ ಗಿರಿಜನರು ವಾಸಿಸುವ ತಾಣಗಳಲ್ಲಿಯೇ.

ಈ ಅದಿರು ಯಥೇಚ್ಛವಾಗಿ ಸಿಕ್ಕುವ ಗುಡ್ಡಗಳು ಈ ಜನರ ಆರಾಧ್ಯ ದೇವತೆಗಳು. ಅವರನ್ನು ಅಲ್ಲಿಂದ ಗುಳೆ ಎಬ್ಬಿಸದೆ ಗಣಿಗಾರಿಕೆ ಮಾಡುವಂತಿಲ್ಲ. ಆದರೆ ಅವರಿಗೆ ತಮ್ಮ ಜೀವನ ಕ್ರಮದ ಭದ್ರತೆಯನ್ನು ಉಳಿಸುವ ಭ್ರಮೆ ಹುಟ್ಟಿಸಿ ನಕ್ಸಲೈಟರು ಅವರ ನಡುವೆ ಬದುಕತೊಡಗಿದ್ದಾರೆ.ನಕ್ಸಲೈಟರನ್ನು ಬಾಂಬ್ ಹಾಕಿ ನಾಶಪಡಿಸಬೇಕೆಂಬ ವಾದವೂ ಇದೆ. ಆಕಾಶದಿಂದ ಎಸೆಯುವ ಬಾಂಬುಗಳಿಗೆ ಕೆಡುಕರನ್ನು ಮಾತ್ರ ನಾಶ ಮಾಡುವ ವಿವೇಕವೇನೂ ಇರುವುದಿಲ್ಲ. ಅದು ಆಯಾ ಪ್ರದೇಶದ ಎಲ್ಲರನ್ನೂ ಎಲ್ಲವನ್ನೂ ನಾಶ ಮಾಡುತ್ತದೆ.

 ಹೀಗಾಗಿ ಒಂದೇ ಬಾಂಬಿಗೆ ಗಿರಿಜನರು, ನಕ್ಸಲೈಟರು ಮತ್ತು ಕಾಡೂ ನಾಶವಾಗಿ ಬಿಡುವುದಾದರೆ ಸರ್ಕಾರದ ಡೆವಲಪ್‌ಮೆಂಟಿಗೆ  ಇರುವ ಆತಂಕಗಳೇ ಮಾಯವಾದಂತಾಗುತ್ತದೆ. ಇದು ಸರ್ಕಾರ ಪ್ರತ್ಯಕ್ಷವಾಗಿ ಹೇಳಿಕೊಳ್ಳದ ಹುನ್ನಾರವಿರಬಹುದು. ಪರಿಣಾಮ ಮಾತ್ರ ಇದೇ.ತಮ್ಮ ಜೀವನ ಪದ್ಧತಿಯನ್ನು ಮಾವೋವಾದಿಗಳು ಕಾಪಾಡುವರೆಂದು ಗಿರಿಜನರು ತಿಳಿದಿದ್ದಾರೆ. ಅದರೆ ಮಾವೋವಾದ ನೆಚ್ಚಿಕೊಂಡಿರುವ ಮಾರ್ಕ್ಸ್‌ವಾದದಲ್ಲಿ ಇದಕ್ಕೆ ಅವಕಾಶವಿಲ್ಲ. ಮಾರ್ಕ್ಸ್‌ವಾದದ ತರ್ಕದ ಪ್ರಕಾರ ಪ್ರಿಮಿಟಿವ್ ಆದದ್ದು ಫ್ಯೂಡಲ್ ಆಗಬೇಕಾಗುತ್ತದೆ. ಫ್ಯೂಡಲ್ ಆದದ್ದು, ಕ್ಯಾಪಿಟಲಿಸ್ಟ್ ಆಗಬೇಕಾಗುತ್ತದೆ. ಕ್ಯಾಪಿಟಲಿಸ್ಟ್ ಆದದ್ದು ಬೆಳೆದೂ ಬೆಳೆದೂ ಮುಂದೆ ಬೆಳೆಯಲಾರದೆ ಅನಿವಾರ್ಯವಾಗಿ ಕಮ್ಯುನಿಸ್ಟ್ ಆಗಬೇಕಾಗುತ್ತದೆ.

ಆದ್ದರಿಂದಲೇ ತಮ್ಮ ವಾದ ವಿಧಿಸುವಂತೆ ಫ್ಯೂಡಲ್ ವ್ಯವಸ್ಥೆಯಲ್ಲಿ ಬದುಕುವ ಗುಡ್ಡಗಾಡಿನ ಟಿಬೆಟನ್ ಜನರ ಸಂಸ್ಕೃತಿಯನ್ನೂ ಧರ್ಮವನ್ನೂ ಮಾವೋನ ಚೀನಾ ನಾಶಮಾಡಲು ಹೊರಟಿದೆ. ಹೀಗಿರುವಾಗ ಮೂಲ ನಿವಾಸಿಗಳ ಬದುಕಿನ ಕ್ರಮವನ್ನು ಮಾವೋವಾದಿಗಳು ಅಧಿಕಾರಕ್ಕೆ ಬಂದರೆ ಉಳಿಸುತ್ತಾರೆಂಬುದು ಒಂದು ಭ್ರಮೆ.

 ಅವರು ಕೈಗಾರಿಕೀಕರಣಕ್ಕಾಗಿ (ಗ್ರೇಟ್ ಲೀಫ್ ಫಾರ್‌ವರ್ಡ್) ಏರ್ಪಾಡಾಗುವ ಯಾತನಾ ಶಿಬಿರದಂತಿರುವ ಫ್ಯಾಕ್ಟರಿಗಳಲ್ಲಿ ಯಾಂತ್ರಿಕವಾಗಿ ದುಡಿಯುವ ಕೂಲಿಗಾರರಾಗಿರುತ್ತಾರೆ.ಇವೆಲ್ಲದರ ಹಿಂದೆ ಇರುವ ಮಾರ್ಕ್ಸ್‌ವಾದಿ ತತ್ವವನ್ನು ನಮ್ಮ ಈವರೆಗಿನ ಚರಿತ್ರೆಯ ಅನುಭವದಿಂದ ಪುನರ್‌ಪರಿಶೀಲನೆ ಮಾಡಬೇಕು.

ಲಾಭದ ಗಳಿಕೆಗಾಗಿ ಕೈಗಾರಿಕೀಕರಣದಿಂದ ಹುಟ್ಟುವ ಶ್ರೀಮಂತ ವರ್ಗ ಬಲಶಾಲಿಯಾಗುತ್ತಾ ಹೋದಂತೆಲ್ಲಾ ಗುಂಪಾಗಿ ಯಾತನೆಯಲ್ಲಿ ಬದುಕುವ ಕಾರ್ಮಿಕ ವರ್ಗದಲ್ಲಿ ಒಂದು ಹೊಸ ಪ್ರಜ್ಞೆ ಮೂಡುತ್ತದೆ ಎಂದು ಮಾರ್ಕ್ಸ್ ಭಾವಿಸಿದ್ದ.  ಅದು ತಾನಾಗಿಯೇ ಮೂಡುತ್ತದೆ ಎಂದು ಹಲವು ಮಾರ್ಕ್ಸ್‌ವಾದಿಗಳು ತಿಳಿದರೆ ಲೆನಿನ್ ಅದು ಹಾಗೇ ಆಗುವುದಲ್ಲ, ಅದನ್ನು ಬೆಳೆಸುವ, ಬಳಸುವ ಧೀಮಂತ ಚಿಂತನಾಶೀಲ ನಾಯಕರು ಬೇಕಾಗುತ್ತಾರೆ ಎಂದಿದ್ದ.

ಈ ನಾಯಕರೇ ವ್ಯಾನ್ ಗಾರ್ಡ್ ಆಫ್ ದಿ ಪ್ರೊಲಿಟೇರಿಯಟ್ (Vanguard of the proletariat). ದುರಂತವೆಂದರೆ ಬಹುವಚನದಲ್ಲಿರುವ ಈ ಕಾರ್ಮಿಕರ ಮುಂಚೂಣಿ ವರ್ಗ ಏಕವಚನದ ಪಾರ್ಟಿ ಸೆಕ್ರೆಟರಿಯಾಗಿಬಿಡುತ್ತಾನೆ. ಆಗ ಬಡಜನರ ಹೆಸರಿನಲ್ಲಿ ದಬ್ಬಾಳಿಕೆ ಶುರುವಾಗಿ ಸೋವಿಯತ್ ಯೂನಿಯನ್ನಿನ ಸ್ಟಾಲಿನ್ ಕ್ರೌರ್ಯದ ಕೊಲೆಗಳು, ಮಾವೋನ ಸಾಂಸ್ಕತಿಕ ಕ್ರಾಂತಿಯ ನೆವದ ಶಿಕ್ಷೆಗಳು ಚರಿತ್ರೆಯ ಅಗತ್ಯಗಳಾಗಿಯೇ ಕಾಣತೊಡಗುತ್ತವೆ.ಈವರೆಗೆ ಹುಟ್ಟಿಕೊಂಡಿರುವ ಕ್ರಾಂತಿ ತತ್ವಗಳನ್ನೆಲ್ಲಾ ನಾವು ಪುನರಾಲೋಚಿಸಬೇಕಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಒಂದು ಶಿಖಾರಾವಸ್ಥೆಯನ್ನು ಮುಟ್ಟಿದಲ್ಲಿ ಕ್ರಾಂತಿಯಾಗುತ್ತದೆ ಎಂದು ಮಾರ್ಕ್ಸ್ ತಿಳಿದಿದ್ದ. ಅಂದರೆ ಅದು ಜರ್ಮನಿಯಲ್ಲಿ ಆಗಬೇಕಿತ್ತು. ಆದರೆ ರಷ್ಯಾದಲ್ಲಿ ಆಯಿತು. ಇದಕ್ಕೆ ಟ್ರಾಟ್ಸ್‌ಕಿ ಕೊಡುವ ಕಾರಣ ಬಂಡವಾಳಶಾಹಿಯ ಕೊಂಡಿ ಎಲ್ಲಿ ದುರ್ಬಲವಾಗಿರುತ್ತದೋ ಅಲ್ಲಿ ಅದು ಒಡೆದುಕೊಳ್ಳುತ್ತದೆ ಎಂಬುದು.

 ಲೆನಿನ್ ಕೊಡುವ ಕಾರಣವೇ ಬೇರೆ: ಎಲ್ಲಿ ಕ್ರಾಂತಿಯನ್ನು ಮಾಡಬಲ್ಲ ಒಂದು ಪಕ್ಷ ಶಿಸ್ತಿನಲ್ಲಿ ನಿರ್ಮಾಣವಾಗಿರುತ್ತದೋ ಅಲ್ಲಿ ಕ್ರಾಂತಿ ನಡೆಯುತ್ತದೆ. ಈ ದೃಷ್ಟಿಯಲ್ಲಿ ಮಾವೋ ಕೂಡಾ ಲೆನಿನ್ ವಾದಿಯೇ. ಆದರೆ ಲೆನಿನ್ ಆಶಿಸಿದ ರೀತಿಯಲ್ಲಿ ಈ ವ್ಯಾನ್‌ಗಾರ್ಡ್ ಕೆಲಸ ಮಾಡುತ್ತದೆ ಎಂದು ಈಚಿನ ಚರಿತ್ರೆಯಲ್ಲಿ ಸಾಬೀತಾಗಿಲ್ಲ.ಮಾವೋವಾದಿಗಳ ಅನಗತ್ಯ ಕ್ರೌರ್ಯಕ್ಕೂ ನಮ್ಮ ಪಾಡಿಗೆ ನಾವು ಕ್ಷೇಮದ ನೆಲೆಯಲ್ಲಿ ಸಂಸಾರಿಗಳಾಗಿರುವವರು ತಾತ್ವಿಕ ಸಮರ್ಥನೆಗಳನ್ನು ಒದಗಿಸಿ ಮಾತಾಡುವುದು ಅನೈತಿಕ; ಆದರೆ ಯಾವ ನಾಚಿಕೆಯೂ ಇಲ್ಲದೆ ಮದ್ಯದ ದೊರೆಯೊಬ್ಬರನ್ನು ಅವರು ಧನಿಕರೆಂಬ ಆಮಿಷದಿಂದ ರಾಜ್ಯಸಭೆಗೆ ಕಳುಹಿಸುವ ಕೊಳಕು ರಾಜಕೀಯವನ್ನು ಸಹಿಸಿಕೊಳ್ಳುವುದೂ ಮಾನವೀಯ ಘನತೆಯೇ ಆಧಾರವಾದ ನಮ್ಮ ಪ್ರಜಾತಂತ್ರಕ್ಕೂ ಮಾರಕ.

ನೆರೆ ಸಂತ್ರಸ್ತರಿಗೆಂದು ದಾನವಾಗಿ ಪಡೆದ ಹಣವನ್ನು ತಮ್ಮ ಪಕ್ಷದ ನಿಧಿಯಂತೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೊಂದು ಬಳಸುವುದಂತೂ ಹೇಸಿಗೆಯೂ ಹೌದು; ಬಡವರ ಹೆಸರಿನಲ್ಲಿ ಸ್ವಾರ್ಥ ಸಾಧಿಸುವ ಕಳ್ಳತನದ ಕ್ಷುದ್ರ ಹಿಂಸೆಯೂ ಹೌದು.

ಮಾವೋವಾದಿಗಳ ಅಸಹನೀಯ ರಕ್ತ ಪಿಪಾಸು ಹಿಂಸೆಗೂ, ಕೊಳಕು ಭ್ರಷ್ಟಾಚಾರಕ್ಕೂ, ವ್ಯವಸ್ಥೆ ಕಾಯುವ ನೆವದಲ್ಲಿ ನಡೆಯುವ ಪೊಲೀಸ್/ಮಿಲಿಟರಿ ಹಿಂಸೆಗೂ ನಡುವೆ ಬೇರೇನೂ ಪರ್ಯಾಯಗಳೇ ಇಲ್ಲದಂತೆ ಮಾತಾಡುವಾಗ ಭಾಷೆಯೇ ಸೋತು ಸಾಯುತ್ತದೆ.ಈ ಹಿಂಸೆಗಳ ಮಧ್ಯೆಯೂ ಒಂದು ವ್ಯತ್ಯಾಸವಿದೆ: ಭ್ರಷ್ಟಾಚಾರವಾದರೋ ಚಾಲ್ತಿಯಲ್ಲಿರುವ ಕಾನೂನಿಗೆ ವಿರುದ್ಧವಾದ ತಾತ್ವಿಕ ಬೆಂಬಲವಿಲ್ಲದ ಹಿಂಸೆ;  ಆದರೆ ಮಾವೋವಾದಿಗಳದು ತತ್ವ ನಿರ್ಧಾರಿತ ಎಚ್ಚರದ ಹಿಂಸೆ. ಇವರು ಭವಿಷ್ಯದಲ್ಲಿ ಕಾನೂನು ರಚಿಸುವವರು; ಹೊಸ ವ್ಯವಸ್ಥೆಯ ಕನಸು ಕಾಣುವವರು.

 ಸದ್ಯದಲ್ಲಿ ಶೋಷಿತ ಪರರಾಗಿ  ಪರದೇಶದ ಶಸ್ತ್ರಾಸ್ತ್ರಗಳ ಬೆಂಬಲವನ್ನು ಪಡೆದು ನಡೆಸುವ ಗೆರಿಲ್ಲಾ ಹಿಂಸೆಯಲ್ಲಿ ಪ್ರಾಣಾರ್ಪಣೆಗೆ ಅಂಜದವರು ಇವರು. ಇಂತಹ ತಾತ್ವಿಕ ಕ್ರಾಂತಿಕಾರರ ಬಗ್ಗೆ ಇನ್ನೊಂದು ಸಂದರ್ಭದಲ್ಲಿ ಲಯನಲ್ ಟ್ರಿಲಿಂ್ಲಗ್ ಎಂಬ ಜ್ಞಾನಿ ಹೇಳಿದ ಮಾತಿನಿಂದ ಕೊನೆಮಾಡುತ್ತೇನೆ:“ಬದಲಾವಣೆಗಳನ್ನು ಅಪೇಕ್ಷಿಸಿದರೆ ಸಾಲದು. ಅದಕ್ಕಾಗಿ ದುಡಿದರೂ ಸಾಲದು? ನಮ್ಮ ಅತ್ಯಂತ ಉದಾರವಾದ ಆಕಾಂಕ್ಷೆಗಳಲ್ಲೂ ಇರುವ ಅಪಾಯಗಳನ್ನು ಗುರುತಿಸುವುದನ್ನು ನಾವು ಕಲಿಯಬೇಕು. ನಮ್ಮ ಸ್ವಭಾವದಲ್ಲಿರುವ ಕೆಲವು ವಿಪರ್ಯಾಸಗಳು ನಮ್ಮನ್ನು ಎತ್ತ ಕೊಂಡೊಯ್ಯುತ್ತವೆಂಬುದನ್ನು ಅರಿತಿರಬೇಕು.

ನಮ್ಮ ಸಹಜೀವಿಗಳು ಮೊದಲು ನಮ್ಮಲ್ಲಿ ಪ್ರಜ್ಞಾಪೂರ್ಣ ಆಸಕ್ತಿಯ ವಸ್ತುಗಳಾಗುತ್ತಾರೆ. ಆಮೇಲೆ ನಮ್ಮ ಕರುಣೆಗೆ ಕಾರಣರಾಗುತ್ತಾರೆ. ಅದಾದ ಮೇಲೆ ನಮ್ಮ ತಿಳುವಳಿಕೆಯ ವಸ್ತುಗಳಾಗುತ್ತಾರೆ. ಕೊನೆಗೆ ನಮ್ಮ ಶೋಷಣೆಗೆ ಪಕ್ಕಾಗುತ್ತಾರೆ. ಇದು ಮನುಷ್ಯ ತಿಳಿದಿರುವ ಭ್ರಷ್ಟತೆಗಳಲ್ಲಿಯೇ ಹೆಚ್ಚು ವ್ಯಂಗ್ಯ ಮತ್ತು ದುರಂತಗಳಿಂದ ಕೂಡಿದೆ.”ಮಾವೋ ಲೆನಿನ್‌ರಂತಹ ತಾತ್ವಿಕರಿಂದ ಒದಗುವ ಅಪಾಯದ ವಿವರಣೆ ಇಲ್ಲಿದೆ. (ಮಾವೋ ಕವಿ; ಲೆನಿನ್ ಗಾಯದಿಂದ ಸುರಿಯುವ ರಕ್ತವನ್ನು ನೋಡಲಾರದ ಸೂಕ್ಷ್ಮಜೀವಿಯಂತೆ. ಈ ವಿಪರ್ಯಾಸವನ್ನು ಗಮನಿಸಬೇಕು).

 ಧನುರ್ಧಾರಿ ಅಧಿಕಾರಸ್ಥರ ವ್ಯವಸ್ಥಿತ ಹಿಂಸೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ನಡೆಯುವ ಭ್ರಷ್ಟಾಚಾರ, ರಾಷ್ಟ್ರಪ್ರೇಮದ ಬಹಿರಂಗ ಭಾಷಣಗಳ ಕೊಳಕುತನಗಳಿಂದ ಹೇಸುವ ನಾವು ಚರಿತ್ರೆಯ ಕತ್ತಲಲ್ಲಿ ಕಂಡ ಬಾವಿಯಲ್ಲಿ ಹಗಲು ಬೀಳಬಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.