ಮಿತಿಗಳಿಲ್ಲದ ಆಸೆಗಳು

7

ಮಿತಿಗಳಿಲ್ಲದ ಆಸೆಗಳು

ಗುರುರಾಜ ಕರ್ಜಗಿ
Published:
Updated:

ನದಿಯಲ್ಲಿ ಮೀನು ಹಿಡಿಯಲು ಬೆಸ್ತರವನು ಗಾಳ ಹಾಕಿದ್ದ. ಮೀನುಗಳಿಗೆ ಅತ್ಯಂತ ಇಷ್ಟವಾದ ಹುಳವನ್ನು ಕೊಕ್ಕೆಗೆ ಸಿಕ್ಕಿಸಿ ತಾಳ್ಮೆಯಿಂದ ಕಾಯ್ದ. ಒಂದು ಸುಂದರವಾದ ಮೀನು ಹುಳದ ಆಸೆಗೆ ಗಾಳವನ್ನು ಕಚ್ಚಿತು.

 

ಆಗ ಆ ಹರಿತವಾದ ಮುಳ್ಳು ನಾಲಿಗೆಯನ್ನು ಕೊರೆದು ಕೆಳ ತುಟಿಯ ಮೂಲಕ ಹೊರಗೆ ಬಂತು. ಬೆಸ್ತರವನು ಮೀನನ್ನು ಮೇಲೆ ಎಳೆಯುತ್ತಿದ್ದ. ಆಗ ದಾರ ದಂಡೆಯ ಕಲ್ಲಿಗೆ ಸಿಕ್ಕಿಕೊಂಡು ದಾರ ಹರಿಯಿತು.

 

ಮೀನು ಪಾರಾಯಿತು. ಆದರೆ ಅದರ ಬಾಯಿಗೆ ಹೊಲಿಗೆ ಹಾಕಿದಂತೆ ಕೊಕ್ಕೆ ಮತ್ತು ದಾರ ನೇತಾಡುತ್ತಿದ್ದವು. ಪಾಪ! ಮೀನು ಏನನ್ನೂ ತಿನ್ನಲಾಗದೇ ಒದ್ದಾಡುತ್ತಿತ್ತು. ಈ ಕೊಕ್ಕೆಯನ್ನು ಹೇಗೆ ಹೊರ ತೆಗೆಯುವುದೆಂದು ಸಂಕಟಪಡುತ್ತಿತ್ತು.ಆಗ ನೀರು ಕುಡಿಯಲು ಅಲ್ಲಿಗೊಂದು ನವಿಲು ಬಂತು. ಅದೊಂದು ಬಹು ಸುಂದರವಾದ ಗಂಡು ನವಿಲು. ಅದಕ್ಕೆ ಈಗ ಯೌವನದ ರಭಸ. ಸದಾ ತನ್ನ ಸಾವಿರ ಕಣ್ಣುಗಳ ಗರಿಗಳನ್ನು ಬಿಚ್ಚಿ ಹಾರಾಡುತ್ತಿತ್ತು.ನದಿಯಲ್ಲಿ ಈ ಮೀನು ಬಾಯಲ್ಲಿ ಕೊಕ್ಕೆಯನ್ನು ಕಚ್ಚಿಕೊಂಡು ಸಂಕಟಪಡುತ್ತಿದ್ದುದನ್ನು ಕಂಡು,  `ಯಾಕೆ ಗೆಳೆಯಾ ಏನು ತೊಂದರೆ?~ ಎಂದು ಕೇಳಿತು. ಪಾಪ! ಈ ಮೀನಿಗೆ ಮಾತನಾಡಲೂ ಸಾಧ್ಯವಿರಲಿಲ್ಲ. ನವಿಲು ಮೀನನ್ನು ಮೆದುವಾಗಿ ಹಿಡಿದು ತನ್ನ ಕೊಕ್ಕೆಯಿಂದ ನಿಧಾನವಾಗಿ ಆ ಮುಳ್ಳನ್ನು ತೆಗೆಯಿತು.ಮೀನಿಗೆ ಅಪಾರ ಸಂತೋಷ.ಅಂದಿನಿಂದ ಇವೆರಡೂ ಅತ್ಯಂತ ಆತ್ಮೀಯ ಸ್ನೇಹಿತರಾದವು. ದಿನಾಲು ನವಿಲು ಬಂದು ನದಿ ದಂಡೆಯ ಮೇಲೆ ನೃತ್ಯಮಾಡುತ್ತಿತ್ತು. ಮೀನು ಅದಕ್ಕೆ ಆಳದಲ್ಲಿದ್ದ ಮುತ್ತಿನ ಚಿಪ್ಪುಗಳನ್ನು ತಂದುಕೊಡುತ್ತಿತ್ತು. ಅಲ್ಲೊಬ್ಬ ಬೇಡರವನು ಬಂದ.

 

ನವಿಲಿನ ಸೌಂದರ್ಯವನ್ನು ಕಂಡ. ಅದನ್ನು ಹಿಡಿದು ಕೊಂದರೆ ಅದರ ಮಾಂಸಕ್ಕೆ ಸಾಕಷ್ಟು ಹಣ ಸಿಕ್ಕೀತು ಎಂದು ಯೋಚಿಸಿ ಬಲೆ ಹಾಕಿ ಅದನ್ನು ಹಿಡಿದ. ನವಿಲು ಆರ್ತತೆಯಿಂದ ಕೂಗತೊಡಗಿತು. ಆ ಧ್ವನಿಯನ್ನು ಕೇಳಿ ಮೀನು ದಂಡೆಗೆ ಈಜಿ ಬಂತು.

 

ಬೇಡರವನನ್ನು ಕುರಿತು ಹೇಳಿತು. `ನನ್ನ ಸ್ನೇಹಿತನನ್ನು ಬಿಟ್ಟುಬಿಡಿ. ಅವನನ್ನು ಮಾರಿದರೆ ನಿಮಗೆ ಎಷ್ಟು ದುಡ್ಡು ದೊರೆಯುತ್ತದೋ ಅದರ ಹತ್ತು ಪಟ್ಟು ದುಡ್ಡು ಕೊಡುವ ಬೆಲೆಬಾಳುವ ಮುತ್ತನ್ನು ನಿಮಗೆ ತಂದುಕೊಡುತ್ತೇನೆ~ ಹೀಗೆ ಹೇಳಿ ನೀರಿನಾಳಕ್ಕೆ ಹೋಗಿ ಅತ್ಯಂತ ಸುಂದರವಾದ ದೊಡ್ಡ ಮುತ್ತನ್ನು ತಂದು ದಂಡೆಯ ಮೇಲೆ ಚೆಲ್ಲಿತು.ಬೇಡರವನಿಗೆ ಭಾರೀ ಸಂತೋಷ. ನವಿಲನ್ನು ಬಿಟ್ಟು ಮುತ್ತನ್ನು ತೆಗೆದುಕೊಂಡು ಕುಣಿಯುತ್ತ ನಡೆದ. ನವಿಲು ಗೆಳೆಯನಿಗೆ ಧನ್ಯವಾದ ಹೇಳಿ ಹಾರಿ ಹೋಯಿತು.

ಆಸೆಬುರುಕ ಬೇಟೆಯವನು ಮರುದಿನವೂ ಬಂದ. ಮೀನಿಗೆ ಹೇಳಿದ, `ನನಗೆ ಈ ಒಂದೇ ಮುತ್ತಿನಿಂದ ಯಾವ ಪ್ರಯೋಜನವೂ ಇಲ್ಲ.

 

ಇಂಥದೇ ಇನ್ನೊಂದನ್ನು ನನಗೆ ತಂದುಕೊಂಡು ಇಲ್ಲದಿದ್ದರೆ ಮತ್ತೆ ನಿನ್ನ ಸ್ನೇಹಿತನನ್ನು ಹಿಡಿದುಕೊಂಡು ಹೋಗುತ್ತೇನೆ.~ ಮೀನು ಹೇಳಿತು. `ಹೌದೇ? ಅಂಥದ್ದೇ ಬೇಕೇ? ಹಾಗಾದರೆ ನಾನು ನಿನ್ನೆ ಕೊಟ್ಟ ಮುತ್ತನ್ನು ಕೆಳಗಿಡು. ನಾನು ಅದನ್ನು ತೆಗೆದುಕೊಂಡು ಹೋಗಿ ಅಂಥದ್ದೇ ಇನ್ನೊಂದನ್ನು ತೆಗೆದುಕೊಂಡು ಬರುತ್ತೇನೆ.~ ಬೇಟೆಗಾರ ಮುತ್ತನ್ನು ದಂಡೆಯ ಮೇಲೆ ಇಟ್ಟೊಡನೆ ಅದನ್ನು ತಟಕ್ಕನೇ ಬಾಯಿಯಲ್ಲಿ ಹಾಕಿಕೊಂಡು ನೀರಿನೊಳಗೆ ಹೋಗಿ ಹೇಳಿತು.  `ನಿನ್ನಂತಹ ಆಸೆಬುರುಕನಿಗೆ ಇದೇ ಶಿಕ್ಷೆ. ನಿನಗೆ ಯಾವ ಮುತ್ತೂ ದೊರಕುವುದಿಲ್ಲ. ನನ್ನ ಗೆಳೆಯ ಈ ಕಾಡು ಬಿಟ್ಟು ದೂರ ಹೋಗಿದ್ದಾನೆ. ನೀನು ಏನೂ ಮಾಡಲಾರೆ.~

ನಮ್ಮ ಆಸೆಗೆ ಮಿತಿಗಳೇ ಇಲ್ಲ, ಹಣ, ಹೆಣ್ಣು, ನೆಲ, ಅದಿರುಗಳು ಮಾತ್ರವಲ್ಲ ನಮ್ಮ ಅಪೇಕ್ಷೆಗಳ ಪೂರೈಕೆಗಾಗಿ ಯಾವ ಮೋಸವನ್ನಾಗಲೀ, ಯಾವ ಅನ್ಯಾಯವನ್ನಾಗಲೀ ಮಾಡಲು ಹೆದರುವುದೇ ಇಲ್ಲವಲ್ಲ! ಈ ಆಸೆಗಳೇ ಮುತ್ತುಗಳು ಅವುಗಳನ್ನು ಪಡೆಯಲು ಮಾಡಿದ ಅನ್ಯಾಯಗಳೇ ನಾಳೆ ನಮ್ಮನ್ನು ನೆಲಕ್ಕೆ ತುಳಿಯುತ್ತವೆ ಎಂಬ ಕಲ್ಪನೆಯೇ ಬರುವುದಿಲ್ಲ. ನಾಳೆ ನಮಗೆ ಬರಲೇಬೇಕಾದ ಶಿಕ್ಷೆಯನ್ನು ನಾವು ತಪ್ಪುಮಾಡುವಾಗಲೇ ವಿಧಿಸಿಕೊಂಡು ಬಿಡುತ್ತೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry