ಮುಂದೆ ಇದೆ ಮತ್ತಷ್ಟು ಮಳೆ

7

ಮುಂದೆ ಇದೆ ಮತ್ತಷ್ಟು ಮಳೆ

Published:
Updated:
ಮುಂದೆ ಇದೆ ಮತ್ತಷ್ಟು ಮಳೆ

`ಸಾರ್, ನಿಮ್ಮ ಕಾಲ್ಗುಣ ಚೆನ್ನಾಗಿದೆ ಸಾರ್' ಎಂದು ಅಯ್ಯ ಅವರ ಸುತ್ತ ಸೇರಿದ್ದ ಸಾಹಿತಿಗಣ ಬೂಸಿ ಬಿಡಲಾರಂಭಿಸಿತು.

ಸುತ್ತ ಸೇರಿದವರು ಹೀಗೆ ಜಾಕ್ ಹಾಕಿ ಎತ್ತಲಾರಂಭಿಸಿದರು ಎಂದರೆ, ಅಕಾಡೆಮಿಗಳಿಗೆ, ನಿಗಮಗಳ ನೇಮಕಾತಿ ಬಗ್ಗೆ ನೆನಪಿಸುತ್ತಿದ್ದಾರೆಂದೇ ಅರ್ಥ.

ಇದು ಅಯ್ಯ ಅವರಿಗೆ ಗೊತ್ತಿಲ್ಲವೇ? `ನೋಡ್ರಿ, ಈ ಕಾಲ್ಗುಣ, ಪಾಲ್ಗುಣ ಯಾವುದನ್ನೂ ನಾನು ನಂಬಲ್ಲ. ನಾನು ನೇರವಾಗಿ ನಡೆದುಕೊಂಡು ಬಂದವನು, ಹಿಂದ, ಮುಂದ ನೋಡ್ದವನೇ ಅಲ್ಲ, ಅದು ಸರಿ, ನೀವ್ಯಾಕೆ ಕಾಲ್ಗುಣ ಚೆನ್ನಾಗಿದೆ ಅಂದ್ರಿ?' ಎಂದು ಮುಂದೆ ಕುಳಿತಿದ್ದ ಆಸೆಕಂಗಳ ಅಭಿಮಾನಿಯೊಬ್ಬನನ್ನು ಪ್ರಶ್ನಿಸಿದರು.`ನೀವು ಗಾದಿ ಏರಿದ್ದೇ ತಡ ರಾಜ್ಯದಲ್ಲಿ ಮಳೆ ಸ್ಫೋಟ ಆಗ್ತಾ ಇದೆಯಲ್ಲಾ ಸಾರ್, ಪತ್ನಿ ಸಮೇತ ಡ್ಯಾಮ್‌ಗಳಿಗೆ ಹೋಗಿ ಬಾಗಿನ ಬಿಡಲಿಲ್ಲ ಏನೂ ಇಲ್ಲ, ಆದ್ರೂ ಕೆಆರ್‌ಎಸ್ ತುಂಬಿ ಉಕ್ಕಿ ಹರೀತಾ ಇದೆ. ತುಂಗಭದ್ರಾ, ಬಸವಸಾಗರ, ಲಿಂಗನಮಕ್ಕಿ ತುಂಬಿ ಹೋಗಿದೆ.ನದಿಗಳೆಲ್ಲಾ ಹುಚ್ಚೆದ್ದು ಹರಿಯುತ್ತಾ ಬೆಳಗಾವಿ, ವಿಜಾಪುರ, ಬಾಗಲಕೋಟೆ, ಹಾವೇರಿ, ಮಡಿಕೇರಿಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದುಬಿಡ್ತಲ್ಲಾ ಸಾರ್. ಹೈ.ಕ ದಲ್ಲೂ ನೀರು, ದ.ಕ ದಲ್ಲೂ ನೀರೋ ನೀರು. ನಿಮಗೆ `ಆಧುನಿಕ ಭಗೀರಥ' ಎಂದು ಬಿರುದು ಕೊಟ್ಟು ಸನ್ಮಾನಿಸಬೇಕು ಸಾರ್' ಎಂದು ಮತ್ತಷ್ಟು ಓಳು ಬಿಟ್ಟ.`ನಾನ್ ಇದನ್ನೆಲ್ಲಾ ನಂಬಲ್ಲಾ, ಮಳೆಗಾಲದಲ್ಲಿ ಮಳೆ ಬತ್ತದೆ, ಹೋಯ್ತದೆ, ಅದ್ಕೆ ನಾನ್ ಕ್ರೆಡಿಟ್ ತಗಳಾಕಾಯ್ತದ? ಇಲ್ದೆ ಇರೋದನ್ನೆಲ್ಲಾ ಹೇಳಿಕೊಳ್ಳೋಕೆ ನಾನು ರಪ್ಪಾನೂ ಅಲ್ಲ, ನಿರಂಕುಶ ಪ್ರಭುನೂ ಅಲ್ಲ, ಬಿಡಿ ಬಿಡಿ.....' ಎಂದು ಅಯ್ಯ ನಿರ್ವಿಕಾರವಾಗಿ ಹೇಳಿದರು. `ಒಂದು ರೂಪಾಯಿಗೆ ಅಕ್ಕಿ ಕೊಟ್ಟಿರೋದು ಮಹಾನ್ ಸಾಧನೆ ಎಂದು ಜನಾ ಎಲ್ಲಾ ಮಾತಾಡಿಕೊಳ್ತಾ ಇದ್ದಾರೆ ಸಾರ್.

ಅದನ್ನು ಎಪಿಎಲ್‌ಗೂ ಕೊಡಬೇಕು ಅಂತ ಜನ ಬೇಡಿಕೆ ಇಟ್ಟಿದ್ದಾರೆ. ಎಪಿಎಲ್‌ಗಳೆಲ್ಲಾ ಬಿಪಿಎಲ್ ಆಗಬೇಕು ಅಂತ ದೊಡ್ಡ ಪರಿವರ್ತನಾ ಹೋರಾಟಾನೇ ನಡೀತಿದೆ ಸಾರ್' ಎಂದು ಮತ್ತೊಬ್ಬ ಸಂಶೋಧನಾ ವರದಿ ಒಪ್ಪಿಸಿದ.“ಆದ್ರೂ ನೀವು ಈ ರೀತಿ ಕಾಪಿ ಮಾಡ್ಬಾರ‌್ದಿತ್ತು ಅಂತ ವಿರೋಧಿಗಳು ಹೇಳ್ತಾ ಇದಾರೆ ಸಾರ್. ತಮಿಳುನಾಡಿನಲ್ಲೂ ಒಂದ್ರುಪಾಯಿಗೆ ಅಕ್ಕಿ ಕೊಟ್ರು, ಆಂಧ್ರದಲ್ಲೂ ಕೊಟ್ರು. ನೀವೂ ಅದನ್ನೇ ಮಾಡಿದ್ರಿ ಅಂತ ಟೀಕೆಗಳು ಬರ‌್ತಾ ಇದೆ ಸಾರ್‌” ಎಂದು ಮತ್ತೊಬ್ಬ ಅಭಿಮಾನಿ ಪೀಠಿಕೆ ಹಾಕಿದ.“ಒಂದ್ರುಪಾಯಿಗೆ ಏನ್ ಬತ್ತದೆ? ಮತ್ತೇನ್ ಕೊಡಬೇಕಾಗಿತ್ತಂತೆ?” ಅಯ್ಯ ಅವರು ಸಿಡುಕಿನಿಂದಲೇ ಪ್ರಶ್ನಿಸಿದರು.“ಅಕ್ಕಿ ಬದಲು ಒಂದು ರೂಪಾಯಿಗೆ ಒಂದು ಪ್ಲೇಟ್ ಬಿರಿಯಾನಿ ಕೊಡಬಹುದಿತ್ತು ಸಾರ್‌”  ಅಯ್ಯ ಅವರು ಒಂದು ಕ್ಷಣ ಶಾಕ್ ಆದರು.`ಹೌದು ಸಾರ್, ಮುಂಬೈನಲ್ಲಿ 12 ರೂಪಾಯಿಗೆ ಪುಷ್ಕಳ ಭೋಜನ ಸಿಗುತ್ತಂತೆ. ದೆಹಲಿಯಲ್ಲಿ ಐದು ರೂಪಾಯಿ ಕೊಟ್ಟರೆ ಹೊಟ್ಟೆತುಂಬ ಬಿರಿಯಾನಿ ತಿನ್ನಬಹುದಂತೆ, ನಾವು ಒಂದು ರೂಪಾಯಿಗೆ ಒಂದು ಪ್ಲೇಟ್ ಬಿರಿಯಾನಿ ಕೊಟ್ಟರೆ, ದೇಶದಲ್ಲೇ ನಮ್ಮದು ವಿನೂತನ ಯೋಜನೆ ಆಗುತ್ತೆ ಸಾರ್.

ಆಮೇಲೆ ಮೋದಿ ಯಾವ ಲೆಕ್ಕ ಸಾರ್, ನೀವೇ ರಾಷ್ಟ್ರೀಯ ನಾಯಕ ಆಗ್ತೀರಿ ಸಾರ್‌”  ರಾಜ್ಯದಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹದ ಹಾಗೆ ಅಭಿಮಾನಿಯ ಹೊಗಳಿಕೆಯ ಕಟ್ಟೆ ಉಕ್ಕಿಹರಿದಿತ್ತು.“ಯಾವನ್ರೀ ಹಂಗೇಳಿದ್ದು? ಐದು ರೂಪಾಯಿಗೆ ಬಿರಿಯಾನಿ ಕೊಡ್ತಾನಂತಾ?” “ಸಾರ್ ಬಡತನದ ರೇಖೆ ಇಳಿಸ್ತೀವಿ ಅಂತ ನಮ್ಮ ಪಾರ್ಟಿಯವರೇ ಈ ತರಹ ಸ್ಟೇಟ್‌ಮೆಂಟ್ ಕೊಡ್ತಾ ಇದಾರೆ. ಲೋಕಸಭೆ ಚುನಾವಣೆ ಹತ್ರಾ ಬರ‌್ತಾ ಇದೆ. ನೀವೂ ಹೀಗೇ ಹೇಳ್ತಾ ಇದನ್ನೆಲ್ಲಾ ಎನ್‌ಕ್ಯಾಷ್ ಮಾಡಿಕೊಳ್ಳಿ ಸಾರ್‌” ಎಂದು ಅಭಿಮಾನಿ ಹುರಿದುಂಬಿಸಿದ.“ಸಾರ್ ಈಗಾಗ್ಲೇ ಬೌ ಬೌ ಬಿರಿಯಾನಿ, ಕಾಕಾ ಬಿರಿಯಾನಿಗಳೆಲ್ಲಾ ಚೀಪ್‌ರೇಟಾಗಿ ಸಿಗ್ತಾ ಇದೆ ಸಾರ್, ಒಂದ್ರುಪಾಯಿಗೆ ಒಂದು ಬಿರಿಯಾನಿ ಕೊಟ್ಟರೆ ನಾವು ಇನ್ನೂ ಚೀಪ್‌ರೇಟಾಗಿ ಬಿಡ್ತೀವಿ. ಆಮೇಲೆ ಸಮಾಜದಲ್ಲಿ ವೆಜ್ಜು, ನಾನ್‌ವೆಜ್ಜುಗಳು ಇದ್ದಾರೆ.ನಾನ್‌ವೆಜ್ಜುಗಳಿಗೆ ಬಿರಿಯಾನಿ ಕೊಡ್ತೀರಿ, ವೆಜ್ಜುಗಳಿಗೆ ಮೊಸರನ್ನ ಕೊಡಕಾಗುತ್ತಾ? ತಾರತಮ್ಯ ಮಾಡಿದರೆ, ವೋಟು ಕಳಕೊಳ್ತೀವಿ, ಸುಮ್ನೆ ಅಕ್ಕೀನೇ  ಕೊಡಿ ಸಾರ್‌” ಎಂದು ಮತ್ತೊಬ್ಬ ಚಿಂತಕ, ವಾದ ಮುಂದಿಟ್ಟ.ಅಯ್ಯ ಅವರಿಗೆ ಈ ವಾದ ಖುಷಿಯಾಯಿತು. `ಇದು ಸರಿಯಾದ ಮಾತು ಕಣಯ್ಯ, ನೀನು ನೂರಕ್ಕೆ ನೂರು ಪರಿಶುದ್ಧ. ನೀನು ಅಪ್ಪಟ ಚಿನ್ನ' ಎಂದು ಹೊಗಳಿದರು. `ಸಾರ್ ಆ ರೀತಿ ಹೇಳಬೇಡಿ ಸಾರ್, ಟಿವಿ ವಾಹಿನಿಯವರು ಕೇಳಿಸಿಕೊಂಡ್ರೆ ಅಪಾರ್ಥ ಮಾಡಿಕೊಂಡು ಬ್ರೇಕಿಂಗ್ ನ್ಯೂಸ್ ಮಾಡಿಬಿಡ್ತಾರೆ' ಎಂದು ಅಭಿಮಾನಿ ಎಚ್ಚರಿಸಿದ.`ಸರಿ, ಸರಿ, ಕಾಲು ಅದುಮುವುದು ನಿಲ್ಲಿಸಿ ಸಾಕು, ಕಲಾಪಕ್ಕೆ ಲೇಟಾಗುತ್ತೆ. ನೀವೂ ಎಲ್ಲಾರೂ ವಿಧಾನಸಭೆಗೆ ಬಂದುಬಿಡಿ', ಎಂದು ಅಯ್ಯ ಅವರು ಹೆಗಲ ಮೇಲಿದ್ದ ಟವೆಲ್ ಒದರಿ, ಮತ್ತೆ ಹೆಗಲಿಗೇರಿಸಿಕೊಂಡು ಹೊರಟುಬಿಟ್ಟರು.ವಿಧಾನಸಭಾ ಕಲಾಪ ನಡೆಯುವಾಗ, ಪತ್ರಿಕಾ ಗ್ಯಾಲರಿಯ ಕಡೆ ಯಾರೋ ಒಬ್ಬರು ಕಪ್ಪು ಛತ್ರಿ ಹಿಡಿದುಕೊಂಡು ಪ್ರತಿಭಟಿಸುತ್ತಾ ಇದ್ದಾರೆ ಎಂಬ ಗುಸುಗುಸು ಶುರುವಾಯಿತು. ಚರ್ಚೆಯ ಸಮಯದಲ್ಲಿ ಪ್ರತಿಪಕ್ಷದವರು ಇದನ್ನೇ ಅಸ್ತ್ರ ಮಾಡಿಕೊಂಡು, ಸರ್ಕಾರದ ವಿರುದ್ಧ ಪ್ರತಿಭಟನೆ ಆಗ್ತಾ ಇದೆ ಎಂದು ಚುಚ್ಚಿದರು.ಎಲ್ಲರೂ ಅತ್ತ ಧಾವಿಸಿದರು. ಪೆಕರ ಕೊಡೆ ಅಗಲಿಸಿ ತಲೆಯ ಮೇಲೆ ಹಿಡಿದುಕೊಂಡು ಗಪ್‌ಚುಪ್ಪಾಗಿ ಕುಳಿತಿದ್ದ.`ಓಹ್ ನೀವಾ ಸಾರ್, ಇಲ್ಲಿ ಯಾಕೆ ಕೊಡೆ ಹಿಡ್ಕೊಂಡಿದೀರಿ, ಮುಚ್ಚಿ ಸಾರ್' ಎಂದು ಮಾರ್ಷಲ್‌ಗಳು ಮನವಿ ಮಾಡಿದರು.`ಮಳೆ ಬರ‌್ತಾ ಇದೇರಿ' ಎಂದು ಪೆಕರ ಪೆದ್ದು ಪೆದ್ದಾಗಿ ಹೇಳಿದ. `ಮಳೆ ಯಾಕೆ ವಿಧಾನಸೌಧದ ಒಳಗೆ ಬರುತ್ತೆ ಸಾರ್?' ಎಂದು ಮಾರ್ಷಲ್‌ಗಳು ಪ್ರಶ್ನಿಸಿದರು.`ಇಡೀ ರಾಜ್ಯದಲ್ಲಿ ಟೂರ್ ಮಾಡ್ದೆ. ಎಲ್ಲೆಲ್ಲೂ ಮಳೆ, ಪ್ರವಾಹ ಇದೆ. ಟೂರ್ ಮಾಡಿ ವಿಧಾನಸೌಧಕ್ಕೆ ಬಂದ್ರೆ ಇಲ್ಲೂ ಭಾಷಣದ ಮಳೆನೇ ಸುರೀತಾ ಇದೆ. ಅದಕ್ಕೆ ಕೊಡೆ ಹಿಡ್ಕೊಂಡಿದೀನಿ. ನೋಡಿ, ನಮ್ಮ ಮಾರಸ್ವಾಮಿಗಳು ಹೇಗೆ ಬ್ಯಾಟಿಂಗ್ ಮಾಡ್ತಾ ಇದಾರೆ.

ಅವರು ಎತ್ತಕಡೆ, ಯಾವಾಗ ಬ್ಯಾಟಿಂಗ್ ಮಾಡಿ ಚೆಂಡು ಒಗಾಯಿಸುತ್ತಾರೋ ಗೊತ್ತಾಗಲ್ಲ. ಅದಕ್ಕೆ ಸೇಫಾಗಿರೋದು ಒಳ್ಳೇದಲ್ವ ಅಂತ ಈ ಪ್ಲಾನ್' ಎಂದ ಪೆಕರ. `ಏನು ಮಾಡಿದ್ರು ಸಾರ್' ಎಂದು ಒಬ್ಬರು ಪ್ರಶ್ನಿಸಿದರು.`ನೋಡಿ, ಅವತ್ತು ಪರಮವೈರಿ, ಡಿಕು ಶಿಮಾರ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ರು. ಬೇರೆ ಪಾರ್ಟಿಯವರಾದ್ರೂ, ಸಚಿವ ಸಂಪುಟದಲ್ಲಿ ಅವರಿದ್ದಿದ್ದರೆ ಒಕ್ಕಲಿಗರ ಹಿತ ಕಾಯ್ತಿದ್ದರು ಅಂತ ಹೇಳಿ ಕಾಂಗ್ರೆಸ್ ರಾಜಕೀಯ ಮಾಡಿದ್ರು, ಈಗ ರಪ್ಪ ಅವರ ಬಗ್ಗೆ ಸಹಾನುಭೂತಿ ತೋರಿಸ್ತಿದ್ದಾರೆ.

ರಪ್ಪ ಅವರು ಸಿಎಂ ಆಗಿದ್ದಾಗ ನಮ್ಮ ಮಾತು ಕೇಳಿದ್ರೆ ಅವರಿಗೆ ಈ ಗತಿ ಬರ‌್ತಿರಲಿಲ್ಲ. ಅವರು ಒಳ್ಳೊಳ್ಳೆಯ ಯೋಜನೆಗಳನ್ನು ಮಾಡಿದ್ರು..... ಅಂತ ರಪ್ಪ ಅವರಿಗೆ ಸರ್ಟಿಫಿಕೇಟ್ ಕೊಟ್ರು. ರಪ್ಪ ಅವರೂ ಮುಗುಳ್ನಗೆಯೊಂದನ್ನು ಬಿಸಾಕುವ ಮೂಲಕ ಅದನ್ನು ಸ್ವಾಗತಿಸಿದ್ರು.....' ಎಂದು ಪೆಕರ ವಿವರಿಸಲಾರಂಭಿಸಿದ.`ಬುಡಿ ಸಾ, ಎರಡು ಲೋಕಸಭಾಕ್ಷೇತ್ರಗಳಿಗೆ ಉಪಚುನಾವಣೆ ಹತ್ರ ಬಂತು. ಇನ್ನೂ ಭಾಷಣದ ಮಳೆ ಜೋರಾಗಿ ಬರಬಹುದು' ಎನ್ನುತ್ತಾ ಮಾರ್ಷಲ್‌ಗಳು ನಿರಾಳವಾಗಿ ಹೊರಟರು.

-ಜಿಎಮ್ಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry