ಮುತ್ತಾತನ ನೆಲದಲ್ಲಿ ಮರಿಮಗನ ಕಸರತ್ತು

7

ಮುತ್ತಾತನ ನೆಲದಲ್ಲಿ ಮರಿಮಗನ ಕಸರತ್ತು

ರಾಮಚಂದ್ರ ಗುಹಾ
Published:
Updated:

ತಮ್ಮೂರಿನ ನಿಧಾನಗತಿಯ ವಿರಾಮದ ಬದುಕು ಕುರಿತು ತಮ್ಮ ಮೋಹಕ ಆತ್ಮಕಥೆ `ಲಖನೌ ಬಾಯ್~ ಪುಸ್ತಕದಲ್ಲಿ ವಿನೋದ್ ಮೆಹ್ತಾ ಬರೆದಿದ್ದಾರೆ. ತಮ್ಮ ತರಗತಿಯ ಹಾಗೂ ತಮ್ಮ ಪೀಳಿಗೆಯ ಹೆಚ್ಚಿನ ವಿದ್ಯಾರ್ಥಿಗಳಂತೆ ಅವರೂ ಸಹ ಪುಸ್ತಕ ಹಾಗೂ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಿದವರಲ್ಲ.

 

ತಮ್ಮ ಬಹುತೇಕ ಸಮಯವನ್ನು ಅವರು ಕಳೆದದ್ದು ಲಖನೌದ ಬೀದಿಗಳು ಹಾಗೂ ಕೆಫೆಗಳಲ್ಲಿ. ತಮ್ಮ ಹತ್ತಿರದ ಸ್ನೇಹಿತರ ಪೈಕಿ ಇಬ್ಬರು ಮುಸ್ಲಿಮರನ್ನು ಈ ಪಂಜಾಬಿ ಹಿಂದೂ ಹೆಸರಿಸಿದ್ದಾರೆ. ಅವರ ಪುಸ್ತಕದ ಆರಂಭದ ಅಧ್ಯಾಯಗಳು ಪಾರ್ಸಿ, ಕ್ರೈಸ್ತ, ಸಿಖ್ ಹಾಗೂ ದಕ್ಷಿಣ ಭಾರತೀಯ ವ್ಯಕ್ತಿಗಳನ್ನೂ ಚಿತ್ರಿಸುತ್ತವೆ.

 

ಈ ಅನುಭವಗಳನ್ನು ನೆನೆಯುತ್ತಾ ಮೆಹ್ತಾ ಬರೆಯುವುದು ಹೀಗೆ: `ನನಗೊಂದು ಅಮೂಲ್ಯ ಉಡುಗೊರೆಯನ್ನು ಲಖನೌ ದಯಪಾಲಿಸಿತು. ಧರ್ಮ, ಜಾತಿ, ಭಾಷೆಗಿಂತ ಹೆಚ್ಚಾಗಿ ವ್ಯಕ್ತಿಯನ್ನು ಪರಿಗಣಿಸಬೇಕಾದ ಮಹತ್ವವನ್ನು ಅದು ನನಗೆ ಕಲಿಸಿತು~.

`ನನ್ನ ಜಾತ್ಯತೀತತೆ ಆಳವಾಗಿ ವೈಯಕ್ತಿಕವಾದದ್ದು. ಏಕೆಂದರೆ ಅದನ್ನು ಶೈಕ್ಷಣಿಕವಾಗಿಯಲ್ಲ, ಬದುಕಿನ ಮೂಲಕವೇ ಕಲಿತದ್ದು~ ಎನ್ನುತ್ತಾರೆ ಮೆಹ್ತಾ.ಹೀಗಾಗಿಯೇ ಜಾತ್ಯತೀತತೆ ಎಂಬುದು ತರ್ಕದ ಫಲವಾಗದೆ ಸಹಜ ಪ್ರವೃತ್ತಿಯೇ ಆಗಿರುವುದರಿಂದ ನಮ್ಮ ಗಣರಾಜ್ಯವನ್ನು ಆಗಿಂದಾಗ್ಗೆ ಕಾಡಿದ ಕೋಮುವಾದಿ ಸಂಘರ್ಷಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂಬುದನ್ನೂ ಮೆಹ್ತಾ ನಂಬುತ್ತಾರೆ. ಅವರ ಈ ಅನುಭವ ನನ್ನದರ ಜೊತೆಗೂ ಅನುರಣಿಸುತ್ತದೆ.ನಾನು ಕೂಡ ಉತ್ತರ ಪ್ರದೇಶದ ಮತ್ತೊಂದು ದೊಡ್ಡ ಪಟ್ಟಣದಲ್ಲಿ ಬೆಳೆದೆ. ಅಲ್ಲೂ ಜನಸಂಖ್ಯೆ ಸಮ್ಮಿಶ್ರದ್ದಾಗಿತ್ತು. ನನ್ನ ಅತ್ಯಂತ ಆತ್ಮೀಯ ಸ್ನೇಹಿತರು ಸಿಖ್ಖರಾಗಿದ್ದರು. ನನ್ನ ಸೋದರಿಯ ಭರತನಾಟ್ಯ ಗುರು ತಮಿಳು ಕ್ರೈಸ್ತರಾಗಿದ್ದರು. ಆ ಊರಿನ ಅತ್ಯಂತ ಹೆಸರುವಾಸಿ ದಂತ ಚಿಕಿತ್ಸಕ ಪಾರ್ಸಿಯಾಗಿದ್ದರು.1950 ಹಾಗೂ 1960ರ ದಶಕದ ಉತ್ತರ ಪ್ರದೇಶದಲ್ಲಿ ಮಧ್ಯಮ ವರ್ಗದವರ ಬದುಕು, ಒಂದೇ ಮಾತಿನಲ್ಲಿ ಹೇಳುವುದಾದರೆ ನೆಹರೂ ಆದರ್ಶದ್ದಾಗಿತ್ತು. ಜವಾಹರಲಾಲ್ ನೆಹರೂ ಅವರೇ ಸ್ವತಃ ಉತ್ತರ ಪ್ರದೇಶದವರಾಗಿದ್ದರು. ರಾಜ್ಯದ ಒಳಗೆ ಹಾಗೂ ಹೊರಗೆ ಅತ್ಯಂತ ತೀವ್ರತೆಯಿಂದ ಧಾರ್ಮಿಕ ಸೌಹಾರ್ದವನ್ನು ಅವರು ಉತ್ತೇಜಿಸುತ್ತಿದ್ದರು. ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಸೃಷ್ಟಿ ಹಾಗೂ ನಂತರ ಸಂಭವಿಸಿದ ಹಿಂಸಾಚಾರಗಳ ಹೊರತಾಗಿಯೂ ವಿಭಜನೆಯ ನಂತರದ ದಶಕ ಕೋಮು ಶಾಂತಿಯ ದಶಕವಾಗಿತ್ತು. ಮುಸಲ್ಮಾನರು, ಕ್ರೈಸ್ತರು ಹಾಗೂ ಸಿಖ್ಖರು ಹೊಸದಾದ ಸ್ವತಂತ್ರ ಭಾರತದಲ್ಲಿ ಸುರಕ್ಷಿತತೆಯ ಭಾವವನ್ನು ಅನುಭವಿಸಿದರು.

 

ಏಕೆಂದರೆ ಆ ಭಾವನೆಯನ್ನು ತುಂಬುವಲ್ಲಿ ಜವಾಹರಲಾಲ್ ನೆಹರೂ ಯಶಸ್ವಿಯಾಗಿದ್ದರು.

ಜಾತ್ಯತೀತತೆಗೆ ನೆಹರೂ ಅವರ ಬದ್ಧತೆ ಚೆನ್ನಾಗಿಯೇ ಗೊತ್ತಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಾಗದ ಸಂಗತಿ ಎಂದರೆ, ಜಾತಿ, ಧರ್ಮ,  ಪಂಥೀಯ ಅಸ್ಮಿತೆಗಳಿಂದ ಜನರನ್ನು ಹೊರತರಲು ನೆಹರೂ ನಡೆಸಿದ ಹೋರಾಟ.

 

ಎಲ್ಲರೂ ಒಟ್ಟಾಗಿ ಹಂಚಿಕೊಳ್ಳಬಹುದಾದಂತಹ ಭವಿಷ್ಯವನ್ನು ನಿರ್ಮಿಸಿ ಹಳೆಯ ಭೇದಭಾವಗಳನ್ನು ಮರೆಯಬೇಕೆಂದು ಅವರು ಜನತೆಗೆ ಕರೆ ನೀಡಿದ್ದರು. ಹೀಗಾಗಿಯೇ ಆರ್ಥಿಕ ಯೋಜನೆ ಕುರಿತಂತೆ ನೆಹರೂ ಒತ್ತಿ ಹೇಳುತ್ತಿದ್ದರು. ಮತ್ತೂ ಹೇಳಬೇಕೆಂದರೆ ಅವರಿಗದು ದೊಡ್ಡ ಆಕರ್ಷಣೆಯೇ ಆಗಿತ್ತು. ಮಾರುಕಟ್ಟೆ ಆರ್ಥಿಕತೆ ಅವರಿಗೆ ಇಷ್ಟವಿಲ್ಲದ್ದ್ದಿದುದೇ, ಮಧ್ಯಪ್ರವೇಶಿಸಬಹುದಾದ ಸರ್ಕಾರದ ಕುರಿತಾಗಿ ಅವರು ನೀಡುತ್ತಿದ್ದ ಆದ್ಯತೆಗೆ ಕಾರಣವಾಗಿತ್ತು ಎಂದು ಸಾಮಾನ್ಯವಾಗಿ ವಾದಿಸಲಾಗುತ್ತದೆ.

 

ವಾಸ್ತವವಾಗಿ, ಉಕ್ಕು ಘಟಕಗಳು ಹಾಗೂ ದೊಡ್ಡ ಅಣೆಕಟ್ಟುಗಳನ್ನು ಕಟ್ಟಲು ಒಟ್ಟಾಗಿ ಸೇರುವ ಭಾರತ, ತನ್ನ ಸಂಕುಚಿತ ಮನೋಭಾವಗಳನ್ನು ತ್ಯಜಿಸುತ್ತದೆ ಎಂಬಂತಹ ಭರವಸೆ ನೆಹರೂ ಅವರಲ್ಲಿತ್ತು. 1952ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಗಳಿಗೆ ಬರೆಯುತ್ತಾ ನೆಹರೂ ಹೀಗೆ ಹೇಳಿದ್ದರು: `ಮೊದಲ ಪಂಚವಾರ್ಷಿಕ ಯೋಜನೆಯ ಹಿಂದೆ, ಭಾರತದ ಏಕತೆ ಹಾಗೂ ಭಾರತದ ಎಲ್ಲಾ ಜನರ ಸಶಕ್ತ ಸಹಕಾರಿ ಶ್ರಮದ ತತ್ವ ಅಡಗಿದೆ~.ಆರ್ಥಿಕ ಯೋಜನೆ ಹಾಗೂ ಅಭಿವೃದ್ಧಿಗೆ ಹೆಚ್ಚು ಗಮನ ಕೇಂದ್ರೀಕರಿಸಿದಲ್ಲಿ, ಆಗ ಭಾರತೀಯರು `ಪ್ರಾದೇಶಿಕತೆ, ಕೋಮುವಾದ, ಜಾತಿವಾದ ಹಾಗೂ ಇತರ ಎಲ್ಲಾ ವಿಧ್ವಂಸಕ ಹಾಗೂ ವಿಚ್ಛಿದ್ರಕಾರಿ ಪ್ರವೃತ್ತಿಗಳ ವಿಕೃತ ಹಾದಿಯಲ್ಲಿ ದಾರಿತಪ್ಪುವುದು ಕಡಿಮೆಯಾಗುತ್ತದೆ~ ಎಂದು ಅವರು ಚಿಂತಿಸಿದ್ದರು.ನೆಹರೂ ಅವರ ವಿಶ್ವದೃಷ್ಟಿ, ವಿಶ್ವಮಾನವ ಪ್ರಜ್ಞೆಯದು ಹಾಗೂ ಸಮಾನತಾವಾದಿಯದು. ಆದರೆ ಲೌಕಿಕ ಆಚರಣೆಯಲ್ಲಿ ಹಿಂದೂ ಮೇಲ್ಜಾತಿಗಳು ತಮ್ಮ ಪ್ರಾಧಾನ್ಯವನ್ನು ಕಾಪಾಡಿಕೊಂಡಿದ್ದವು. ವಿನೋದ್ ಮೆಹ್ತಾ ಹಾಗೂ ನಾನು ಬೆಳೆದಂತಹ ಉತ್ತರ ಪ್ರದೇಶದಲ್ಲಿ, ಬಹುತೇಕ ಪ್ರಬಲ ರಾಜಕಾರಣಿಗಳು ಹೇಮವತಿ ನಂದನ ಬಹುಗುಣ ಹಾಗೂ ಕಮಲಾಪತಿ ತ್ರಿಪಾಠಿಯಂತೆ ಬ್ರಾಹ್ಮಣರೇ ಆಗಿರುತ್ತಿದ್ದರು.

 

ಅಥವಾ ಸಿ. ಬಿ. ಗುಪ್ತಾರಂತಹ ಬನಿಯಾಗಳಾಗಿರುತ್ತಿದ್ದರು. ಸವರ್ಣೀಯರ ಪ್ರಾಬಲ್ಯ, ಆಡಳಿತದ ಉನ್ನತ ಹಂತಗಳಲ್ಲಿ ಹೊಂದಿರುತ್ತಿದ್ದ ನಿಯಂತ್ರಣಗಳಿಂದ ಗಟ್ಟಿಯಾಗಿರುತ್ತಿತ್ತು. ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳು ಅಥವಾ ನ್ಯಾಯಾಧೀಶರು ಮಿಶ್ರಾ ಅಥವಾ ಶುಕ್ಲಾ ಎಂಬಂತಹ ಬ್ರಾಹ್ಮಣ ಹೆಸರುಗಳನ್ನೇ ಹೊಂದಿರುತ್ತಿದ್ದರು ಅಥವಾ ಸಕ್ಸೇನಾ ಹಾಗೂ ಶ್ರೀವಾಸ್ತವ ಎಂಬಂತಹ ಕಾಯಸ್ಥ ಹೆಸರುಗಳನ್ನು ಹೊಂದಿರುತ್ತಿದ್ದದ್ದೇ ಹೆಚ್ಚು.ಉತ್ತರ ಪ್ರದೇಶದಲ್ಲಿ ಮೇಲ್ಜಾತಿ ಪ್ರಾಬಲ್ಯದ ವಿರುದ್ಧದ ಬಂಡಾಯ ಎರಡು ಹಂತಗಳಲ್ಲಿ ಉಂಟಾಯಿತು. 1960ರ ದಶಕದಲ್ಲಿ, ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆಯೆಂದು ಕಾಂಗ್ರೆಸ್ ಪಕ್ಷವನ್ನು ಜಾಟ್ ನಾಯಕ ಚರಣ್ ಸಿಂಗ್ ತೊರೆದರು. ಅದೇ ಸಂದರ್ಭದಲ್ಲೇ, ಕಾಂಗ್ರೆಸ್‌ಗೆ ವಿರುದ್ಧವಾಗಿ ಹಿಂದುಳಿದ ಜಾತಿಗಳನ್ನು ರಾಮಮನೋಹರ ಲೋಹಿಯಾ ನೇತೃತ್ವದಲ್ಲಿ ಸಮಾಜವಾದಿಗಳು ಒಟ್ಟು ಮಾಡಿದ್ದರು.

 

ಈ ಎರಡೂ ಗುಂಪುಗಳು ಒಟ್ಟಾಗಿ ಚರಣ್ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿಸಿದ ಕಾಂಗ್ರೆಸ್ಸೇತರ ಸರ್ಕಾರವನ್ನು 1967ರಲ್ಲಿ ರಚಿಸಿದವು. ಹನ್ನೆರಡು ವರ್ಷಗಳ ನಂತರ, ಕೃಷಿಕ ಮೂಲದ ರಾಷ್ಟ್ರದ ಮೊದಲ ಪ್ರಧಾನಿಯಾಗಿಯೂ ಚರಣ್ ಸಿಂಗ್ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು.1950 ಹಾಗೂ 1960ರ ದಶಕದ ಕಾಂಗ್ರೆಸ್, ನಿಜಕ್ಕೂ ಉನ್ನತ ಸ್ತರಗಳಲ್ಲಿ `ಬ್ರಾಹ್ಮಣ- ಬನಿಯಾ~ (ನಂತರ ಬಿಜೆಪಿಗೂ ಈ ಹೆಸರು ಅಂಟಿತ್ತು) ಪಕ್ಷವೇ ಆಗಿತ್ತು . ಇದು ಉನ್ನತ ಸ್ತರಗಳಲ್ಲಿ ಮಾತ್ರ. ಅಸ್ಪೃಶ್ಯತೆಯ ಅಂತ್ಯವನ್ನು ಸ್ವರಾಜ್‌ನ ಪೂರ್ವ ಷರತ್ತಾಗಿಸಿದ್ದ ಗಾಂಧಿಯುಗದ ಪರಂಪರೆಗೆ ಕೊಂಡಿಯಾಗಿ ದಲಿತರು ದೊಡ್ಡದಾಗಿ ಕಾಂಗ್ರೆಸ್‌ಗೇ ಮತ ಹಾಕುತ್ತಿದ್ದರು.ವಿಭಜನೆ ನಂತರದ ಭಾರತದಲ್ಲಿ ಭದ್ರತೆಯ ಭಾವವನ್ನು ಅನುಭವಿಸಲು ನಿರ್ದಿಷ್ಟವಾಗಿ ನೆಹರೂ ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಉತ್ತರಪ್ರದೇಶದ ಮುಸ್ಲಿಮರೂ ಕಾಂಗ್ರೆಸ್‌ಗೇ ದೊಡ್ಡ ಪ್ರಮಾಣದಲ್ಲಿ ಮತ ಹಾಕುತ್ತಿದ್ದರು.1980ರ ದಶಕದಲ್ಲಿ ಕಾನ್ಶಿರಾಂ ಎಂಬ ತೀಕ್ಷ್ಣಮತಿಯ ರಾಜಕೀಯ ಮುಖಂಡ ತಮ್ಮದೇ ಮತಗುಂಪಾಗಿ ದಲಿತರನ್ನು ಸಂಘಟಿಸಲು ಆರಂಭಿಸಿದರು. ಮೂರು ದಶಕಗಳ ಕಾಲದ ಸಕಾರಾತ್ಮಕ ಕ್ರಿಯೆಗಳು, ದಿಟ್ಟವಾಗಿ ಮಾತನಾಡುವ ದಲಿತ ಮಧ್ಯಮ ವರ್ಗವನ್ನು ಸೃಷ್ಟಿಸಿತು. ದಲಿತ ಸರ್ಕಾರಿ ನೌಕರರ ಕಾರ್ಮಿಕ ಸಂಘವನ್ನು ಕಾನ್ಶಿ ರಾಂ ರಚಿಸಿದರು. ಇದು ಅವರ ಹಿತಾಸಕ್ತಿಗಳನ್ನು ಬಿಂಬಿಸುವ ರಾಜಕೀಯ ಪಕ್ಷವಾಗಿ ಶೀಘ್ರವೇ ಪರಿವರ್ತನೆಗೊಂಡಿತು.ಬಹುಜನ ಸಮಾಜ ಪಕ್ಷಕ್ಕಾಗಿ ದಲಿತರು ಈಗ ಕಾಂಗ್ರೆಸ್‌ಅನ್ನು ಹೆಚ್ಚಿನ ಪ್ರಮಾಣದಲ್ಲಿಯೇ ತೊರೆದರು. ಈ ಮಧ್ಯೆ, ಅಯೋಧ್ಯಾ ಹೋರಾಟದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಗ್ಗೆ ಮುಸ್ಲಿಮರೂ ಭ್ರಮನಿರಸನಗೊಂಡರು. ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಮುಂಚೆ ಹಾಗೂ ನಂತರ ನಡೆದ ಕೋಮು ಘರ್ಷಣೆಗಳಲ್ಲಿ ಅವರ ಜೀವ, ಆಸ್ತಿಪಾಸ್ತಿ ರಕ್ಷಿಸುವಲ್ಲೂ ಕಾಂಗ್ರೆಸ್ ಸರ್ಕಾರಗಳು ವಿಫಲವಾದವು. ಮುಸ್ಲಿಮರು ಈಗ ಸಂಘ ಪರಿವಾರವನ್ನು ಎದುರಿಸಲು ಹೆಚ್ಚಿನ ದೃಢತೆ ಪ್ರದರ್ಶಿಸಿದ ಮುಲಾಯಂ ಸಿಂಗ್ ಹಾಗೂ ಅವರ ಸಮಾಜವಾದಿ ಪಕ್ಷದಲ್ಲಿ ಹೆಚ್ಚಿನ ನಂಬಿಕೆಯನ್ನು ಇರಿಸಿದರು.ಇವೆಲ್ಲದರ ಒಟ್ಟು ಪರಿಣಾಮ ವಿನೋದ್ ಮೆಹ್ತಾ ಅವರ ಸ್ವಂತ ರಾಜ್ಯದ ಸಾರ್ವಜನಿಕ ಬದುಕಿನ ಸಂಕಥನದ್ಲ್ಲಲಾದ ತೀವ್ರವಾದ ಪರಿವರ್ತನೆ. ಉತ್ತರ ಪ್ರದೇಶದಲ್ಲಿ ನಿಮ್ಮ ನೆಲೆ ಏನೆಂಬುದೇ ಈಗ ಮುಖ್ಯ. ನಿಮ್ಮ ಜಾತಿ ಅಥವಾ ಧರ್ಮದಿಂದಲೇ ಈಗ ವ್ಯಕ್ತಿಯನ್ನು ಅಲ್ಲಿ ಅಳೆಯಲಾಗುತ್ತದೆ. ಹೀಗಾಗಿಯೇ ಉತ್ತರ ಪ್ರದೇಶದಲ್ಲಿ, ತಮ್ಮ ಪ್ರವಾಸಗಳ ಕಾಲದಲ್ಲಿ ನೆಹರೂ ಅವರ ಮರಿ ಮಗ ರಾಹುಲ್ ಗಾಂಧಿ ಅವರು ಸಮುದಾಯಗಳನ್ನು ವ್ಯಕ್ತಿಗಳ ಗುಂಪುಗಳು ಎನ್ನುವುದಕ್ಕಿಂತ ಸಮುದಾಯಗಳಾಗಿಯೇ ಪರಿಭಾವಿಸಿದ್ದಾರೆ.ಮೊದಲಿಗೆ ದಲಿತರ ಮನೆಯಲ್ಲಿ ಮಲಗಿದ ರಾಹುಲ್, ತಮ್ಮ ರಕ್ಷಕಿ ಎಂದು ತಾವು ಭಾವಿಸಿರುವ ಮಾಯಾವತಿಗಿಂತ ದಲಿತರ ಬಗೆಗೆ ಹೆಚ್ಚಿನ ಕಾಳಜಿ ತೋರುವವರು ತಾವೆಂಬುದನ್ನು ಬಿಂಬಿಸಿದ್ದಾರೆ. ನಂತರ ಸ್ಯಾಮ್ ಪಿತ್ರೊಡಾ ಅವರನ್ನು ಹಿಂದುಳಿದ ಜಾತಿಗಳ ಸಭೆಗೆ ಕರೆದೊಯ್ದಿದ್ದಾರೆ.

 

ಪಿತ್ರೊಡಾ ಅವರು ಮರಗೆಲಸದವರ ಕುಟುಂಬದಲ್ಲಿ ಜನಿಸಿದ್ದೂ ರಾಜೀವ್ ಗಾಂಧಿಯ ಸ್ನೇಹಿತರಾಗಿದ್ದರಿಂದ, ಓಬಿಸಿ ಬಗ್ಗೆ ಹೆಚ್ಚು ಕಾಳಜಿ ತೋರುವುದು ಸಮಾಜವಾದಿ ಪಕ್ಷಕ್ಕಿಂತ ಕಾಂಗ್ರೆಸ್ಸೇ ಎಂಬಂತಹ ಸಂದೇಶವನ್ನು ರವಾನಿಸಿದ್ದಾರೆ.ನಂತರ ತಾವು ಹಾಗೂ ಕಾಂಗ್ರೆಸ್, ಮುಸ್ಲಿಂ ವಿರೋಧಿ ಎಂಬುದಾಗಿ ಬಿಂಬಿತವಾಗುವುದನ್ನು ತಪ್ಪಿಸಿಕೊಳ್ಳಲು, ಸಲ್ಮಾನ್ ರಶ್ದಿ ವಿರುದ್ಧ ದೇವ್‌ಬಂದ್ ಮುಲ್ಲಾಗಳು ಫತ್ವಾ ಜಾರಿಗೊಳಿಸಿದಾಗ ರಾಹುಲ್ ವಹಿಸಿದ್ದ ಮೌನವೂ ಎದ್ದು ಕಾಣಿಸುವಂತಿತ್ತು.   ಹೀಗೆ, ರಾಹುಲ್ ಗಾಂಧಿಯವರ ಉತ್ತರ ಪ್ರದೇಶ ಚುನಾವಣಾ ಪ್ರಚಾರ ಹಲವು ವರ್ಗಗಳ ಆತಂಕಗಳ ಪರವಾಗಿ ನಿವೇದನೆ ಮಾಡಿಕೊಳ್ಳುವಂತಹದಾಗಿತ್ತು. ಈ ನಿವೇದನೆಗಳಿಂದಾಗಿ, ಬಹುಶಃ ಕೆಲವು ದಲಿತರು, ಕೆಲವು ಮುಸ್ಲಿಮರು, ಕೆಲವು  ಹಿಂದುಳಿದ ವರ್ಗಗಳವರ ಜೊತೆಗೇ, ನೆಹರೂ-ಗಾಂಧಿ ಕುಟುಂಬದ ಪ್ರೀತಿಯಿಂದ ಕೆಲವು ಬ್ರಾಹ್ಮಣರು ಹಾಗೂ ಕೆಲವು ಬನಿಯಾಗಳೂ ಕಾಂಗ್ರೆಸ್‌ಗೆ ಮತಹಾಕಬಹುದೆಂದು ಅವರು ಭಾವಿಸಿದ್ದಿರಬಹುದು.ಮತದಾರರಲ್ಲಿ ಶೇ 25ರಿಂದ 30ರಷ್ಟು ಮಂದಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಅವಕಾಶ ಮಾಡಿಕೊಳ್ಳಬಹುದೆಂಬುದು ಅವರ ಲೆಕ್ಕಾಚಾರ.ಈ ಲೆಕ್ಕಾಚಾರಗಳನ್ನು ಮಾಡುವ ಬದಲು ರಾಹುಲ್ ಗಾಂಧಿ ಅವರು ಬಿಹಾರದ ಮಾದರಿಯನ್ನು ಗಮನಿಸಿರಬೇಕಿತ್ತು. ಅಲ್ಲಿ, ಆತ್ಮಗೌರವ ಅಥವಾ ಸ್ವಾಭಿಮಾನದ ರಾಜಕಾರಣ ಹೊರಟುಹೋಗಿದೆ ಎಂಬುದನ್ನು ನಿತಿಶ್ ಕುಮಾರ್ ಅರ್ಥ ಮಾಡಿಕೊಂಡಿದ್ದಾರೆ. ದಲಿತರು, ಹಿಂದುಳಿದ ಜಾತಿಗಳು ಹಾಗೂ ಮುಸ್ಲಿಮರಿಗೆಲ್ಲಾ ಈಗ ಬೇಕಾಗಿರುವುದು ನಿಜಕ್ಕೂ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ. ಹೀಗಾಗಿಯೇ ಶಾಲೆಗಳು, ಸಾರ್ವಜನಿಕ ಆರೋಗ್ಯ ಹಾಗೂ ಗ್ರಾಮೀಣ ರಸ್ತೆಗಳ ಮೇಲೇ ನಿತಿಶ್ ಅವರ ಒತ್ತು. ಜನರ ಬದುಕನ್ನು ಸುಧಾರಿಸಬೇಕಾದರೆ ಜನರ ಜೊತೆಗೆ ಬದುಕುವುದೂ ಕೂಡ (ನಿರಂತರವಾಗಿ, ಯಾವಾಗಲೋ ಒಮ್ಮೆ ಅಲ್ಲ) ಅಗತ್ಯ. ತಮ್ಮ ಸ್ವಂತ ರಾಜ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕಾಗಿಯೇ ನಿತಿಶ್ ಕುಮಾರ್ ಅವರು ರಾಷ್ಟ್ರೀಯ ರಾಜಕಾರಣವನ್ನು ತೊರೆದ್ದ್ದಿದೂ ಇಲ್ಲಿ ಗಮನಾರ್ಹ. ಉತ್ತರಪ್ರದೇಶದಲ್ಲಿ ತಮ್ಮ ಚುನಾವಣಾ ಪ್ರಚಾರದುದ್ದಕ್ಕೂ, ಜಾತಿವಾದ ಹಾಗೂ ಕೋಮುವಾದದ ಕುಟಿಲ ಹಾದಿಗಳನ್ನೇನೂ ರಾಹುಲ್ ಗಾಂಧಿ ಪೂರ್ಣವಾಗಿ ತೊರೆಯಲಿಲ್ಲ. ಕಡೆಯ ಹಂತದಲ್ಲಿ, ಬಹುಶಃ ಇದು ತಪ್ಪೆಂಬುದನ್ನು ಅರಿತುಕೊಂಡು ಭ್ರಷ್ಟಾಚಾರ ಹಾಗೂ ಅಪರಾಧಗಳಿಂದ ರಾಜ್ಯವನ್ನು ಮುಕ್ತಗೊಳಿಸುವ ಆಶಯದ ಬಗ್ಗೆ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲೇ, ಅವರಿಗೆ ಪ್ರಧಾನಿಯಾಗುವ ಇಚ್ಛೆ ಇಲ್ಲ ಎಂಬುದನ್ನೂ  ಸ್ವತಃ ರಾಹುಲ್ ಗಾಂಧಿ ಹಾಗೂ ಅವರ ಸೋದರಿ ಪ್ರಿಯಾಂಕಾ ಒತ್ತಿ ಒತ್ತಿ ಹೇಳಿದ್ದಾರೆ.

 

ಈ ದೃಢವಾದ ಹೇಳಿಕೆಗಳು ಬಹುಶಃ ಅವರು ವಿಧಾನಸಭೆ ಸ್ಥಾನಕ್ಕೆ ಸ್ಪರ್ಧಿಸುವಂತಾಗಿದ್ದು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದಲ್ಲಿ  ಹೆಚ್ಚು ತೂಕ ಪಡೆದುಕೊಂಡಿರುತ್ತಿತ್ತು. ಆ ಮೂಲಕ ಅಲ್ಲಿಗೆ ಯಾವಾಗಲೋ ಒಮ್ಮೆ ಅರೆಕಾಲಿಕ ಅವಧಿಗೆ ಇಳಿದು ಬರುವವರಾಗದೆ, ಪೂರ್ಣಾವಧಿ ಬದ್ಧತೆಯಾಗಿಯೂ ಅವರಿಗೆ ಅದು ಪರಿಣಮಿಸಿರುತ್ತಿತ್ತು. ನಿಜಕ್ಕೂ ಉತ್ತರ ಪ್ರದೇಶದ 20ಕೋಟಿ ಪ್ರಜೆಗಳು ಇದಕ್ಕಿಂತ ಹೆಚ್ಚಿನ ಆದ್ಯತೆಗೆ ಅರ್ಹರಾಗಿದ್ದಾರೆ.(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

   

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry