ಭಾನುವಾರ, ಡಿಸೆಂಬರ್ 8, 2019
21 °C

ಮುಸ್ಲಿಂ ಜನಾಂಗದ ಆಧುನೀಕರಣಕ್ಕೆ ದುಡಿದವರು

ರಾಮಚಂದ್ರ ಗುಹಾ
Published:
Updated:
ಮುಸ್ಲಿಂ ಜನಾಂಗದ ಆಧುನೀಕರಣಕ್ಕೆ ದುಡಿದವರು

ತ್ರಿವಳಿ ತಲಾಖ್ ಮತ್ತು ಗೋಹತ್ಯೆಯ ಬಗೆಗಿನ ಚರ್ಚೆ ಭಿನ್ನವಾದರೂ ಪರಸ್ಪರ ಪೂರಕವಾದ ರೀತಿಯಲ್ಲಿ ಆಧುನಿಕ ಭಾರತದ ಮಧ್ಯಯುಗೀನ ಮನಸ್ಥಿತಿಯನ್ನು ತೋರಿಸುತ್ತದೆ. ಮುಸ್ಲಿಂ ದೇಶವಾದ ಪಾಕಿಸ್ತಾನವೇ ತ್ರಿವಳಿ ತಲಾಖ್ ಎಂಬ ದುಷ್ಟ ಪದ್ಧತಿಯನ್ನು ನಿಷೇಧಿಸಿರುವಾಗ ಭಾರತ ಯಾಕೆ ಹಾಗೆ ಮಾಡಿಲ್ಲ? ಭಾರತೀಯ ಮುಸ್ಲಿಮರ ನಾಯಕತ್ವ ಪ್ರತಿಗಾಮಿಗಳು, ಧರ್ಮಾಂಧರು, ಪ್ರಗತಿಪರರಲ್ಲದವರು ಮತ್ತು ಆಧುನಿಕತೆ ವಿರೋಧಿಗಳಾಗಿರುವವರ ಕೈಯಲ್ಲಿ ಸಿಲುಕಿರುವುದೇ ಇದಕ್ಕೆ ಮುಖ್ಯ ಕಾರಣ.

ನಿಜ ಹೇಳಬೇಕೆಂದರೆ ಅದಕ್ಕಿಂತ ಭಿನ್ನವಾಗಿ ಯೋಚಿಸಿ ಮುಸ್ಲಿಂ ಸಮುದಾಯದಲ್ಲಿ ತರ್ಕ ಮತ್ತು ನ್ಯಾಯಕ್ಕೆ ಉತ್ತೇಜನ ನೀಡಿದ ದಿಟ್ಟ ವ್ಯಕ್ತಿಗಳೂ ಇದ್ದಾರೆ. ಮರಾಠಿ ಲೇಖಕ ಹಮೀದ್ ದಳವಾಯಿ ಅಂತಹ ಒಬ್ಬ ಆಧುನಿಕತಾವಾದಿ. ಮುಸ್ಲಿಮರು ಸಾಮಾಜಿಕ ಮತ್ತು ಧಾರ್ಮಿಕ ಪೂರ್ವಗ್ರಹಗಳನ್ನು ಕೈಬಿಡಲು ಅವರು ತಮ್ಮ ಅಲ್ಪ ಜೀವಿತಾವಧಿಯಲ್ಲಿ (ಅವರು ನಲವತ್ತರ ಆರಂಭದಲ್ಲಿಯೇ ನಿಧನರಾದರು) ಬಿಡುವಿಲ್ಲದೆ ಶ್ರಮಿಸಿದರು. ಲಿಂಗ ಸಮಾನತೆ ಅವರಿಗೆ ಅತ್ಯಂತ ಮಹತ್ವದ್ದಾಗಿತ್ತು; ತ್ರಿವಳಿ ತಲಾಖ್ ವಿರುದ್ಧ ಅವರು ದೀರ್ಘ ಹೋರಾಟವನ್ನೇ ನಡೆಸಿದರು.

ದಳವಾಯಿ ಅವರು 1969ರಲ್ಲಿ ಪುಣೆಯಲ್ಲಿ ನಡೆದ ಮುಸ್ಲಿಂ ಸಮಾವೇಶವೊಂದರಲ್ಲಿ ಮಾತನಾಡಿದ್ದರು. ‘ಪ್ರತಿ ಹೊಸ ಧರ್ಮವೂ ತನ್ನ ಅನುಯಾಯಿಗಳಿಗೆ ತನ್ನದೇ ಆದ ನಿಯಮಗಳು ಮತ್ತು ನಡತೆಯ ಸಂಹಿತೆಯನ್ನು ರೂಪಿಸಿದೆ. ಆದರೆ, ಶತಮಾನಗಳಷ್ಟು ಹಳೆಯದಾದ ನಿಯಮಗಳು ಸಮರ್ಪಕವಲ್ಲ ಮತ್ತು ಈ ಕಾಲಕ್ಕೆ ಹೊಂದುವುದಿಲ್ಲ ಎಂದಾದರೆ ಅದನ್ನು ವಿಮರ್ಶೆಗೆ ಒಳಪಡಿಸಲೇಬೇಕು... ಯಾವುದೇ ಕಾನೂನುಗಳು, ಅವು ಧಾರ್ಮಿಕ ಕಾನೂನುಗಳಾಗಿದ್ದರೂ ಜನರಿಗೆ ನ್ಯಾಯ ಒದಗಿಸಲು ಸಮರ್ಥವಾಗಿಲ್ಲದಿದ್ದರೆ ಅವುಗಳನ್ನು ಬದಲಾಯಿಸುವ ಅಗತ್ಯ ಇದೆ’ ಎಂದು ಅವರು ಆ ಸಮಾವೇಶದಲ್ಲಿ ಹೇಳಿದ್ದರು.

‘ದಾದಾ ಮಾಸ್ಟರ್’ ಎಂದು ಜನರು ಕರೆಯುತ್ತಿದ್ದ ಸ್ಥಳೀಯ ಮುಖಂಡನೊಬ್ಬನನ್ನು ದಳವಾಯಿ ಅವರ ಮಾತು ಕೆರಳಿಸಿತ್ತು. ‘ದಳವಾಯಿ, ಏನು ನಿಮ್ಮ ಮಾತಿನ ಅರ್ಥ? ಮುಸ್ಲಿಂ ಕಾನೂನು ಒಂದನ್ನು ಬಿಟ್ಟು ಈ ಜಗತ್ತಿನ ಎಲ್ಲವೂ ಬದಲಾಗುತ್ತವೆ’ ಎಂದು ದಾದಾ ಮಾಸ್ಟರ್ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ದಳವಾಯಿ ಶಾಂತವಾಗಿಯೇ ಹೀಗೆ ಉತ್ತರಿಸಿದ್ದರು: ‘ನಾವು ಸ್ವಾರ್ಥಮಯವಾದ ಆಯ್ದ ನೆನಪುಗಳನ್ನು ಮಾತ್ರ ಹೊಂದಿದ್ದೇವೆ. ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕವಾಗಿದ್ದ ದಂಡ ಸಂಹಿತೆಯನ್ನು ಬ್ರಿಟಿಷರು ಬದಲಾಯಿಸಿದರು ಎಂಬುದು ನಮಗೆಲ್ಲಾ ತಿಳಿದೇ ಇದೆ. ಅವರು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯನ್ನು ಪರಿಚಯಿಸಿದರು.

ಧಾರ್ಮಿಕ ಅಪರಾಧ ಸಂಹಿತೆಗಳು ಅಪರಾಧಿಗಳಿಗೆ ಹೆಚ್ಚು ಕಠಿಣ ಶಿಕ್ಷೆಗಳನ್ನು ನೀಡುತ್ತಿದ್ದವು ಮತ್ತು ತಪ್ಪಿತಸ್ಥರು ತಮ್ಮ ವರ್ತನೆಯನ್ನು ಉತ್ತಮಪಡಿಸಿಕೊಳ್ಳಲು ಯಾವುದೇ ಅವಕಾಶ ಇರಲಿಲ್ಲ. ಅದು ಈಗ ಬದಲಾಗಿದೆ; ಶಿಕ್ಷೆ ಸೌಮ್ಯವಾಗಿದ್ದು ನಡವಳಿಕೆ ಉತ್ತಮಪಡಿಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ. ಬ್ರಿಟಿಷರು ದಂಡ ಸಂಹಿತೆಯನ್ನು ಬದಲಾಯಿಸಿದಾಗ ಅದನ್ನು ಯಾರೂ ಯಾಕೆ ವಿರೋಧಿಸಲಿಲ್ಲ? ದಂಡನಾ ಕ್ರಮಗಳ ಭಾಗವಾಗಿ ಕೈ ಕಾಲುಗಳನ್ನು ಕತ್ತರಿಸುವುದಿಲ್ಲ, ಹಾಗಾಗಿ ನಾವು ಸುರಕ್ಷಿತ ಎಂದು ನೀವು ಸಂತಸಪಟ್ಟಿರಲಿಲ್ಲವೇ? ನಾನು ಹೇಳಿದ ಈ ಅಂಶ ತಪ್ಪೇ?’

‘ಗಂಡಸರು ಹೆಂಗಸರಿಗಿಂತ ಮೇಲು ಎಂದು ಇಸ್ಲಾಂ ಪರಿಗಣಿಸುತ್ತದೆ.

ಮಹಿಳೆಯರನ್ನು ಚೆನ್ನಾಗಿ ನೋಡಿಕೊಳ್ಳುವುದು ಗಂಡಿನ ಜವಾಬ್ದಾರಿ ಎಂದು ಇಸ್ಲಾಂ ಹೇಳುತ್ತದೆ’ ಎಂದು ದಾದಾ ಮಾಸ್ಟರ್ ಅವರ ಬೆಂಬಲಿಗನೊಬ್ಬ ಹೇಳಿದ್ದಕ್ಕೆ ದಳವಾಯಿ ಅವರ ಪ್ರತಿಕ್ರಿಯೆ ಹೀಗಿತ್ತು: ‘ಈ ವಿಚಾರಕ್ಕೆ ನಾವು ಈಗ ಗಮನ ನೀಡದೇ ಇದ್ದರೆ ಕಾಲ ನಮ್ಮನ್ನು ಯಾವತ್ತೂ ಕ್ಷಮಿಸದು. ಮಹಿಳೆಯರಿಗೆ ಸಮಾನ ಹಕ್ಕುಗಳ ಬಗ್ಗೆ ಹೇಳುವುದಾದರೆ, ಹಲವು ಮುಸ್ಲಿಂ ದೇಶಗಳು ಇಸ್ಲಾಂ ಕಾನೂನನ್ನು ಬದಲಾಯಿಸಿ ಹೆಚ್ಚು ಸಮಾನವಾದ ಕಾನೂನುಗಳನ್ನು ಅಳವಡಿಸಿಕೊಂಡಿವೆ ಎಂಬುದನ್ನು ನಾವು ಮರೆಯದಿರೋಣ. ನಮ್ಮ ದೇಶದಲ್ಲಿಯೂ ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳನ್ನು ಬಿಟ್ಟು ಉಳಿದೆಲ್ಲ ಕಾನೂನುಗಳು ಪರಿವರ್ತನೆಯಾಗಿವೆ’.

ಪ್ರತ್ಯಕ್ಷದರ್ಶಿಯೊಬ್ಬರ ಆತ್ಮಚರಿತ್ರೆಯಲ್ಲಿ ಈ ಸಂವಾದ ದಾಖಲಾಗಿದೆ. ಆ ವ್ಯಕ್ತಿಯ ಹೆಸರು ಸಯ್ಯದ್ ಮೆಹಬೂಬ್ ಷಾ ಖಾದ್ರಿ; ಸಾಂಪ್ರದಾಯಿಕತೆ ವಿರುದ್ಧ ಅವರು ನಡೆಸಿದ ವೀರೋಚಿತ ಹೋರಾಟದ ಕಥನ ಮೊದಲಿಗೆ ಮರಾಠಿಯಲ್ಲಿ 2001ರಲ್ಲಿ ಪ್ರಕಟವಾಗಿದೆ. ಕಲ್ಲಿನ ಮೇಲೆ ಬಿತ್ತನೆ ಎಂಬ ಅರ್ಥ ಬರುವ ಹೆಸರನ್ನು ಆ ಪುಸ್ತಕಕ್ಕೆ ಇರಿಸಲಾಗಿದೆ. ಇದೇ ಪುಸ್ತಕದ ಪರಿಷ್ಕೃತ ಆವೃತ್ತಿಯನ್ನು ‘ಜಿಹಾದ್-ಎ-ಟ್ರಿಪಲ್ ತಲಾಖ್’ (ತ್ರಿವಳಿ ತಲಾಖ್ ವಿರುದ್ಧ ಧರ್ಮಯುದ್ಧ) ಎಂಬ ಹೆಸರಿನಲ್ಲಿ ಮುಂಬೈನ ಸಮಕಾಲೀನ ಪ್ರಕಾಶನ 2014ರಲ್ಲಿ ಪ್ರಕಟಿಸಿದೆ.

ಸಯ್ಯದ್‌ಭಾಯಿ ಅವರು ಹುಟ್ಟಿದ್ದು ಹೈದರಾಬಾದ್‌ನಲ್ಲಾದರೂ ಪುಣೆಯಲ್ಲಿ ಬೆಳೆದರು. ಅವರ ತಂದೆ ಅಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆಕೆಲಸಕ್ಕೆ ಹೋಗುತ್ತಿದ್ದರು. ಸಯ್ಯದ್ ಚಿಕ್ಕವಯಸ್ಸಿನಲ್ಲೇ ಶಾಲೆ ಬಿಡಬೇಕಾಯಿತು. 13ನೇ ವಯಸ್ಸಿನಲ್ಲಿ ಅವರು ಪೆನ್ಸಿಲ್ ತಯಾರಿಸುವ ಘಟಕದಲ್ಲಿ ಕೆಲಸಕ್ಕೆ ಸೇರಿದರು. ಅದಾಗಿ ಸ್ವಲ್ಪ ದಿನದಲ್ಲಿ ಅವರ ಹಿರಿಯಕ್ಕ ಖತೀಜಾ ಅವರಿಗೆ ಗಂಡ ತ್ರಿವಳಿ ತಲಾಖ್ ನೀಡಿದ. ಪರಿಣಾಮವಾಗಿ ಮಕ್ಕಳ ಜತೆಗೆ ಖತೀಜಾ ತವರಿಗೆ ಬಂದರು. ಇದು ಸಣ್ಣ ಹುಡುಗನ ಮನಸ್ಸಿನಲ್ಲಿ ದೊಡ್ಡ ಪರಿಣಾಮವನ್ನೇ ಉಂಟುಮಾಡಿತು.

ತನ್ನ ಬದುಕನ್ನು ಮತ್ತೆ ಕಟ್ಟಿಕೊಂಡ ಮತ್ತು  ಕುಟುಂಬದ ಹೊಟ್ಟೆ ಹೊರೆಯುವುದಕ್ಕಾಗಿ ಹೊಲಿಗೆ ಕೆಲಸ ಮಾಡುತ್ತಿದ್ದ ಸಹೋದರಿಯನ್ನು ನೋಡುತ್ತಾ ಸಯ್ಯದ್ ಬೆಳೆದರು.  ಇಸ್ಲಾಂನೊಳಗಿನ ಪುರುಷಪ್ರಧಾನ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳಲು ಅದು ಪ್ರೇರಣೆಯಾಯಿತು. ‘ಗಂಡಿಗೆ ಮಾತ್ರ ಯಾಕೆ ವಿಚ್ಛೇದನದ ಹಕ್ಕು ಇದೆ’ ಇದು ಅವರಿಗವರೇ ಕೇಳಿಕೊಂಡ ಪ್ರಶ್ನೆ. ಈ ಪ್ರಶ್ನೆಯನ್ನು  ಮೌಲವಿಗಳು ಮತ್ತು ಇಮಾಮರ ಮುಂದೆಯೂ ಎತ್ತಿದರು. ಅವರೆಲ್ಲರೂ ಈ ಪ್ರಶ್ನೆಯನ್ನು ಮತ್ತು ಪ್ರಶ್ನೆ ಕೇಳಿದ ವ್ಯಕ್ತಿಯನ್ನು ನಿರ್ಲಕ್ಷಿಸಿದರು.

ಈ ಮಧ್ಯೆ, ಸಯ್ಯದ್ ಅವರು ಪುಣೆಯ ಸಮಾಜವಾದಿಗಳ ಗುಂಪು ಸೇರಿಕೊಂಡರು. ಲಿಂಗ ಮತ್ತು ಜಾತಿ ತಾರತಮ್ಯದ ವಿರುದ್ಧ ಈ ಗುಂಪು ಹೋರಾಟ ಆರಂಭಿಸಿತ್ತು. ಅವರ ಮೂಲಕ ಸಯ್ಯದ್‌ಗೆ ಹಮೀದ್ ದಳವಾಯಿಯ ಪರಿಚಯವಾಯಿತು. ನಂತರ ಅವರಿಬ್ಬರೂ ಅತ್ಯಂತ ನಿಕಟ ಸಹವರ್ತಿಗಳಾದರು.

ಹಮೀದ್ ದಳವಾಯಿ ಮತ್ತು ಅವರ ಸಹವರ್ತಿಗಳು ಸೇರಿಕೊಂಡು 1970ರ ಮಾರ್ಚ್‌ನಲ್ಲಿ ಮುಸ್ಲಿಂ ಸತ್ಯಶೋಧಕ ಮಂಡಳ ಎಂಬ ಸಂಘಟನೆ ಸ್ಥಾಪಿಸಿದರು.

ಇದಕ್ಕೆ ಪ್ರೇರಣೆ 19ನೇ ಶತಮಾನದ ಸಮಾಜ ಸುಧಾರಕ ಜೋತಿಬಾ ಫುಲೆ. ಅವರು ಆಗ ಸತ್ಯಶೋಧಕ ಮಂಡಳ ಎಂಬ ಸಂಘಟನೆ ಸ್ಥಾಪಿಸಿ ಅದರ ಮೂಲಕ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಹೋರಾಡಿದ್ದರು. ‘ಮುಸ್ಲಿಮರಲ್ಲಿ ಧಾರ್ಮಿಕ ಪೂರ್ವಗ್ರಹಗಳಿಂದ ಮುಕ್ತವಾದ ರಾಷ್ಟ್ರೀಯತೆಯ ಸ್ಫೂರ್ತಿ ಸೃಷ್ಟಿ, ಆಧುನಿಕ ಮಾನವೀಯ ಮೌಲ್ಯಗಳ ಮೂಲಕ ಸಾಮಾಜಿಕ ಸಮಾನತೆ ತರುವುದು ಈ ಮಂಡಳದ ಉದ್ದೇಶ’ ಎಂದು ಉದ್ಘಾಟನಾ ಸಮಾರಂಭದಲ್ಲಿಯೇ ದಳವಾಯಿ ಹೇಳಿದ್ದರು.

ದಳವಾಯಿ,  1977ರಲ್ಲಿ ನಿಧನರಾದರು. ಇಸ್ಲಾಂ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಅವರ ಪತ್ನಿ ಮೆಹರುನ್ನಿಸಾ ದಳವಾಯಿ ಮತ್ತು ಸಯ್ಯದ್ ಅವರಂತಹ ಸಹವರ್ತಿಗಳು ಮುಂದುವರಿಸಿದರು. ದಳವಾಯಿ ಅವರಂತೆಯೇ ಇವರು ಕೂಡ ಸಮುದಾಯದೊಳಗೆ ಇದ್ದ ಪ್ರತಿಗಾಮಿಗಳಿಂದ ಬಯ್ಗುಳ ಮಾತ್ರವಲ್ಲ, ದೈಹಿಕ ಹಲ್ಲೆಗೂ ಒಳಗಾಗಬೇಕಾಯಿತು.

1980ರ ದಶಕದಲ್ಲಿ ಸಯ್ಯದ್‌ಭಾಯಿ ಅವರು ಶಾಬಾನು ಹೋರಾಟದ ಜತೆಗೂ ಗುರುತಿಸಿಕೊಂಡರು. ಇಂದೋರ್‌ಗೆ ಹೋಗಿ ಶಾಬಾನು ಅವರನ್ನು ಭೇಟಿಯಾದರು, ಶಾಬಾನು ಅವರನ್ನು ಗೌರವಿಸುವುದಕ್ಕಾಗಿಯೇ ಪುಣೆಯಲ್ಲಿ ಸಮಾರಂಭ ಏರ್ಪಡಿಸಿದರು. ನ್ಯಾಯಕ್ಕಾಗಿ ಶಾಬಾನು ನಡೆಸಿದ ಹೋರಾಟಕ್ಕೆ ಬೆಂಬಲವಾಗಿ ಸಯ್ಯದ್ ಹಲವು ಬಾರಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದರು. ಶಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಪ್ರಗತಿಪರ ತೀರ್ಪನ್ನು ರದ್ದುಪಡಿಸದೇ ಇದ್ದರೆ ಮುಂದೆ ಮುಸ್ಲಿಂ ಸಮುದಾಯದ ಒಂದು ಮತವೂ ಕಾಂಗ್ರೆಸ್ ಪಕ್ಷಕ್ಕೆ ಸಿಗದು ಎಂದು ಆಧುನಿಕ ಮನೋಭಾವದ ಪ್ರಧಾನಿ ಎಂದು ಬಹಿರಂಗವಾಗಿಯೇ ಬಿಂಬಿಸಿಕೊಳ್ಳುತ್ತಿದ್ದ ರಾಜೀವ್ ಅವರಿಗೆ ಮುಸ್ಲಿಂ ಸಂಪ್ರದಾಯವಾದಿಗಳು ಹೇಳಿದ್ದರು. ಅದಕ್ಕೆ ರಾಜೀವ್ ಶರಣಾದರು.

ತನ್ನ ಮಾರ್ಗದರ್ಶಕನ ಸಾವು ಅಥವಾ ಶಾಬಾನು ಪ್ರಕರಣದ ತೀರ್ಪು ತಿರುವುಮುರುವಾದದ್ದು ಯಾವುದೂ ಸಯ್ಯದ್‌ಭಾಯಿ ಅವರನ್ನು ಹಿಮ್ಮೆಟ್ಟಿಸಲಿಲ್ಲ. ತ್ರಿವಳಿ ತಲಾಖ್‌ ವಿರುದ್ಧದ ಹೋರಾಟವನ್ನು ಅವರು ಈ ಶತಮಾನದಲ್ಲಿಯೂ ಮುಂದುವರಿಸಿದರು. ಈ ವರ್ಷದ ಆರಂಭದಲ್ಲಿ ನಾನು ಅವರನ್ನು ಪುಣೆಯಲ್ಲಿ ಭೇಟಿಯಾದೆ. ಅವರ ಮಾತು ಮತ್ತು ಕಹಿಯಿಲ್ಲದ ಘನತೆ ನನ್ನ ಮನಗೆದ್ದಿತು.

ಸಯ್ಯದ್‌ಭಾಯಿ ಅವರ ಆತ್ಮಚರಿತ್ರೆಯಲ್ಲಿ ದಳವಾಯಿ ಅವರಲ್ಲದೆ, ಮಹಾರಾಷ್ಟ್ರದ ಇತರ ಕೆಲವು ಜಾತ್ಯತೀತ ಮತ್ತು ಆಧುನಿಕ ಮನೋಭಾವದ ಸಮಾಜವಾದಿ ಹೋರಾಟಗಾರರೂ ಸ್ಥಾನ ಪಡೆದುಕೊಂಡಿದ್ದಾರೆ. ತಮ್ಮ ಹೋರಾಟದ ಆರಂಭದ ವರ್ಷಗಳಲ್ಲಿ ಸಯ್ಯದ್‌ಭಾಯಿ ಅವರು ಸಾಮಾಜಿಕ ಹೋರಾಟಗಾರ ಭಾಯ್‌ ವೈದ್ಯ ಅವರಿಂದ ಪ್ರಭಾವಿತರಾಗಿದ್ದರು.

ನಂತರ, ಸಮಾಜವಾದಿ ಹೋರಾಟಗಾರ್ತಿ  ಪ್ರಮೀಳಾ ದಂಡವತೆ ಅವರಿಂದಲೂ ಬಹಳ ನೆರವು ಪಡೆದರು. ಪುಣೆ ಮತ್ತು ಮಹಾರಾಷ್ಟ್ರದ ಸಮಾಜವಾದಿಗಳು ಮಾರ್ಕ್ಸ್‌ವಾದಿಗಳ ಹಾಗಲ್ಲ, ಬದಲಿಗೆ ದೇಶಭಕ್ತರು; ಕಾಂಗ್ರೆಸ್‌ನವರಂತಲ್ಲದೆ ಬದ್ಧತೆ ಉಳ್ಳವರು ಮತ್ತು ಸಂಘ ಪರಿವಾರ ಹಾಗೂ ಶಿವಸೈನಿಕರಂತಲ್ಲದೆ ಜಾತ್ಯತೀತರು. ಇವರು ಮಹಿಳೆಯರ ವಿಮೋಚನೆಗಾಗಿ ಬಿಡುವಿಲ್ಲದೆ ದುಡಿದರು. ಒಂದು ಕಾಲದಲ್ಲಿ ಭಾರಿ ಪ್ರಭಾವಿಯಾಗಿದ್ದ ಈ ವರ್ಗ ನಂತರ ಕುಸಿತ ಕಂಡು ಈಗ ರಾಜಕೀಯ ವ್ಯವಸ್ಥೆಯಿಂದ ಬಹುತೇಕ ಕಣ್ಮರೆ ಆಗಿರುವುದು ಪ್ರಜಾಸತ್ತಾತ್ಮಕ ಭಾರತದ ಪ್ರಗತಿಗೆ ಆದ ದೊಡ್ಡ ಹಿನ್ನಡೆ.

ತಮ್ಮ  ಪುಸ್ತಕದ ಮುನ್ನುಡಿಯಲ್ಲಿ ಸಯ್ಯದ್‌ಭಾಯಿ ಅವರು ಹೀಗೆ ಬರೆಯುತ್ತಾರೆ: ‘ಪ್ರಾಥಮಿಕ ಹಂತದ ನಂತರ ಔಪಚಾರಿಕ ಶಿಕ್ಷಣ ಪಡೆಯುವ ಭಾಗ್ಯ ನನಗೆ ಇರಲಿಲ್ಲ. ಸರಿಯಾದ ಶಾಲೆಗೆ ನಾನು ಯಾವತ್ತೂ ಹೋಗಿಯೇ ಇಲ್ಲ. ಆದರೆ, ಜೀವನ ಎಂಬ ಪಾಠಶಾಲೆಯಲ್ಲಿ ನಾನು ಕಲಿತ ಪಾಠಗಳು ಬಹಳ ಮಹತ್ವಪೂರ್ಣವಾದವು’. ಇದು ನಿಜ ಕೂಡ. ಯಾಕೆಂದರೆ, ಮುಸ್ಲಿಂ ಮಹಿಳೆಯರಿಗೆ ಪೂರ್ಣ ಸಮಾನತೆ ನೀಡಬೇಕು ಎಂಬ ವಿಚಾರದಲ್ಲಿ ಸಯ್ಯದ್‌ ಅವರ ವಿವೇಕ ಮತ್ತು ಕೆಚ್ಚಿನ ಮುಂದೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರವಾಗಿ ವಾದಿಸಿದ ಹಾರ್ವರ್ಡ್‌ ಮತ್ತು ಆಕ್ಸ್‌ಫರ್ಡ್‌ನಲ್ಲಿ ಕಲಿತು ಬಂದ ವಕೀಲರು ತಲೆತಗ್ಗಿಸಬೇಕಾಯಿತು.

1970ರ ಆಗಸ್ಟ್‌ನಲ್ಲಿ ಪುಣೆಯಲ್ಲಿ ಭಾಷಣ ಮಾಡಿದ್ದ ಇಸ್ಲಾಂ ಕಾನೂನು ಪಂಡಿತ ಎ.ಎ.ಎ. ಫೈಝಿ ಅವರ ಭಾಷಣವನ್ನು ಸಯ್ಯದ್‌ ಅವರು ತಮ್ಮ ಕೃತಿಯಲ್ಲಿ ಉಲ್ಲೇಖಿಸುತ್ತಾರೆ: ‘ಆಧುನಿಕ ದಿನಗಳಲ್ಲಿ ನಾವು ಧಾರ್ಮಿಕ ಕಾನೂನುಗಳನ್ನು ಅಂಧವಾಗಿ ಅನುಸರಿಸಲು ಸಾಧ್ಯವಿಲ್ಲ. ಕುರ್‌–ಆನ್‌ ಹೇಳುವ ಕೆಲವು ಅಂಶಗಳು ಕಾಲಾತೀತ. ಆದರೆ ಇತರ ಕೆಲವು ಅಂಶಗಳು ಇಸ್ಲಾಂ ಹುಟ್ಟಿದ ದಿನಗಳಿಗಷ್ಟೇ ಸೂಕ್ತ. ಹಾಗಾಗಿ ಈಗಿನ ಸನ್ನಿವೇಶಕ್ಕೆ ಸಮರ್ಪಕವೇ ಎಂಬುದನ್ನು ಪರೀಕ್ಷಿಸಿಯೇ ಅನುಸರಿಸಬೇಕು’.

ಪುಣೆಯ ಆ ಭಾಷಣದಲ್ಲಿ ಫೈಝಿ ಅವರು ಕಾನೂನಿನ ಬಗ್ಗೆ ನಿರ್ದಿಷ್ಟ ಅವಲೋಕನವೊಂದನ್ನೂ ಹೇಳಿದರು: ‘ಧರ್ಮ ಮತ್ತು ಕಾನೂನು ಸಂಪೂರ್ಣವಾಗಿ ಪ್ರತ್ಯೇಕವಾಗಿರಬೇಕು’. ಆಧುನಿಕ ಪ್ರಜಾಪ್ರಭುತ್ವಗಳಿಗೆ ಇದು ಸರ್ವೋಚ್ಚ ಮಾರ್ಗದರ್ಶಿ ಸೂತ್ರವಾಗಬೇಕು.

ಸಮಾಜ ಸುಧಾರಕರು ಯಾವುದೇ ಧರ್ಮದ ಮೇಲೆ ಆಧರಿತವಾಗಿರಬಾರದು ಅಥವಾ ಅದನ್ನು ಗುರಿಯಾಗಿ ಇರಿಸಿಕೊಳ್ಳಬಾರದು. ಅವರು ಬೌದ್ಧಿಕವಾದ ನಿಲುವು ತೆಗೆದುಕೊಳ್ಳಬೇಕು ಮತ್ತು ಪ್ರಸ್ತುತವಲ್ಲದ, ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಅಂಶಗಳನ್ನು ಕೈಬಿಡಬೇಕು ಎಂಬುದು ದಳವಾಯಿ ಅವರ ಅಭಿಪ್ರಾಯವೂ ಆಗಿತ್ತು.

ಭಾರತದ ಇಸ್ಲಾಂ ಧರ್ಮದೊಳಗೆ ಲಿಂಗ ಸಮಾನತೆ ತರುವ ನಿರ್ಣಾಯಕ ಹೋರಾಟದಲ್ಲಿ ಮೆಹರುನ್ನಿಸಾ ಮತ್ತು ಶಾಬಾನು ಅವರಂತಹ ಮಹಿಳೆಯರು ಹೋರಾಟ ನಡೆಸಿದ್ದಾರೆ. ಈಗ, ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಮಹಿಳೆಯರೇ ಹೋರಾಟವನ್ನು ಮುಂದಕ್ಕೆ ಒಯ್ಯುತ್ತಿದ್ದಾರೆ. ಆದರೆ ಈ ಹೋರಾಟವನ್ನು ಆರಂಭಿಸಿದ ದಿಟ್ಟ ಪುರುಷರನ್ನು ನಾವು ಮರೆಯದಿರೋಣ.

‘ಜಿಹಾದ್‌–ಎ–ಟ್ರಿಪಲ್‌ ತಲಾಖ್‌’ ಕೃತಿಯ ಕೊನೆಗೆ ಸಯ್ಯದ್‌ ಅವರು ವಿಷಾದದಿಂದ ಹೀಗೆ ಬರೆಯುತ್ತಾರೆ: ‘ಸಮಾಜ ಸುಧಾರಣೆಗೆ ಕೆಲಸ ಮಾಡಿದವರನ್ನು ಇತಿಹಾಸ ವೈಭವೀಕರಿಸುತ್ತದೆ. ಆದರೆ ಅವರು ಆ ಕೆಲಸ ಮಾಡುತ್ತಿದ್ದಾಗ ಮಾತ್ರ ಅವರನ್ನು ಖಂಡಿಸಲಾಗುತ್ತದೆ’.

ಪ್ರತಿಕ್ರಿಯಿಸಿ (+)