ಮೂರು ನಿಯಮಗಳು

7

ಮೂರು ನಿಯಮಗಳು

ಗುರುರಾಜ ಕರ್ಜಗಿ
Published:
Updated:

ಬಾಗ್ದಾದ್‌ನ ಈ ಸೂಫಿ ಸಂತ ಬಹಳ ಪ್ರಖ್ಯಾತನಾಗಿದ್ದ. ಅವನ ಬಳಿ ಶಿಷ್ಯತ್ವವನ್ನು ಪಡೆಯಲು ಅನೇಕ ಜನ ಹಾತೊರೆಯುತ್ತಿದ್ದರು. ಅವನು ಯಾರು ಬಂದರೂ ಬೇಡವೆನ್ನುತ್ತಿರಲಿಲ್ಲ. ಆದರೆ ಆತನ ಬಳಿಗೆ ಬಂದವರಲ್ಲಿ ಬಹಳಷ್ಟು ಜನ ಉಳಿಯುತ್ತಿರಲೇ ಇಲ್ಲ. ಕೆಲವೇ ಕೆಲವರು ಮಾತ್ರ ಅವನೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರು. ಅವರೆಲ್ಲ ಅತ್ಯಂತ ಪ್ರಖ್ಯಾತ ಸೂಫಿಗಳಾದರು. ಇದು ಯಾಕೆ ಹೀಗೆ ಎಂದು ಅರ್ಥವೇ ಆಗುತ್ತಿರಲಿಲ್ಲ.

ಒಂದು ಸಲ ಮೂರು ಜನ ತರುಣರು ಅವನ ಬಳಿ ಕಲಿಯಲೆಂದು ಬಂದರು. ಅವರೆಲ್ಲ ಈಗ ಬೇರೆ ಬೇರೆ ಗುರುಗಳಿಂದ ತಾಲೀಮ ಪಡೆದು ಬಂದವರು, ಸಾಕಷ್ಟು ವಿಷಯಗಳನ್ನು ತಿಳಿದುಕೊಂಡವರು. ಈಗಾಗಲೇ ಅಲ್ಲಲ್ಲಿ ಹೆಸರಾದವರು. ಅವರಿಗೆ ತಾವು ಪಡೆದಿದ್ದ ಜ್ಞಾನದ ಬಗ್ಗೆ, ತಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇತ್ತು. ಈ ಸೂಫಿ ಗುರು ತಮ್ಮನ್ನು ಒಪ್ಪಿಕೊಳ್ಳುವುದು ಖಚಿತವೆಂದು ನಂಬಿದ್ದರು. ಅದಲ್ಲದೇ ತಮಗೂ ಈ ಸೂಫಿ ಪರಂಪರೆಯ ತಿಳುವಳಿಕೆ ಇದ್ದುದರಿಂದ ಈ ಗುರುವಿನ ಬಳಿಯೇ ಇದ್ದು ಹೆಚ್ಚು ಜ್ಞಾನ ಸಂಪಾದಿಸಬಹುದೆಂಬ ನಂಬಿಕೆಯಿತ್ತು.

ಆದರೆ ಇವರು ಅಲ್ಲಿಗೆ ಹೋದ ಮೇಲೆ ಪರಿಸ್ಥಿತಿ ಬೇರೆಯೇ ಆಯಿತು. ಮೊದಲನೆಯ ತರುಣ ಸ್ವಲ್ಪ ಶ್ರಿಮಂತ ಮನೆತನದಿಂದ ಬಂದವನು, ಸ್ವಲ್ಪ ನಯ, ಗೌರವವನ್ನು ಅಪೇಕ್ಷಿಸುವವನು. ಆದರೆ ಈ ಗುರುವಿನ ಕೋಪ, ಹಾರಾಟ, ವಿಕ್ಷಿಪ್ತ ನಡವಳಿಕೆ ನೋಡಿ ಆಶ್ಚರ್ಯವೂ ಆಯಿತು, ನಿರಾಸೆಯೂ ಆಯಿತು. ಸೂಫಿ ಪಂಥದ ಗುರು ಹೀಗಿರಲು ಸಾಧ್ಯವೇ ಎಂದುಕೊಂಡು ಆಶ್ರಮ ತೊರೆದು ಹೊರಟೇ ಹೋದ. ಅವನಿಗೆ ಗುರುವಿನ ಹತ್ತಿರ ಒಂದು ವಾರ ಕೂಡ ಇರಲಾಗಲಿಲ್ಲ.

ಎರಡನೆಯ ತರುಣ ಹೇಗೋ ಇನ್ನೊಂದು ವಾರ ತಳ್ಳಿದ. ಬಹುಶ: ಗುರುವಿನ ಹಾರಾಟ, ಕೋಪಗಳು ತನ್ನನ್ನು ಪರೀಕ್ಷಿಸುವ ಕ್ರಿಯೆಗಳಾಗಿರಬೇಕು ಎಂದು ಭಾವಿಸಿ ತಾಳಿಕೊಂಡ. ಆದರೂ ಗುರುವಿನ ಬಗ್ಗೆ ವಿಚಾರಿಸುವುದು ಸರಿಯೆಂದುಕೊಂಡು ಒಂದಿಬ್ಬರು ಹಿರಿಯ ಶಿಷ್ಯರನ್ನು ಕೇಳಿದ. ಅವರು ಹೇಳಿದರು,  ಈ ಗುರು ಮಹಾ ಮೋಸಗಾರ. ಅವನಿಗೆ ಏನೂ ಬರುವುದಿಲ್ಲ, ಕೇವಲ ಹೀಗೆಯೇ ನಾಟಕ ಮಾಡಿಕೊಂಡು ಕಾಲ ಕಳೆಯುತ್ತಾನೆ.  ಈತ ಗಾಬರಿಯಿಂದ ಕೇಳಿದ,  ಹೌದೇ? ಹಾಗಾದರೆ ಹೊರಗಡೆ ಇವರಿಗೆ ಇಷ್ಟು ದೊಡ್ಡ ಹೆಸರು ಬಂದದ್ದೇಕೆ? ನೀವೆಲ್ಲ ಯಾಕೆ ಇಲ್ಲಿಯೇ ಉಳಿದಿದ್ದೀರಿ?

ಇಲ್ಲ ಗುರು ಏನೂ ಮಾಡುವುದಿಲ್ಲ. ನಾವೆಲ್ಲ ಕಷ್ಟಪಟ್ಟು ಓದಿ, ತಿಳಿದುಕೊಂಡು ಹೊರಗೆ ಪ್ರಚಾರ ಮಾಡುತ್ತೇವಲ್ಲ. ನಮ್ಮನ್ನು ನೋಡಿ ನಮ್ಮ ಗುರುಗಳು ಮಹಾಜ್ಞಾನಿಗಳು ಎಂದು ಜನ ನಂಬುತ್ತಾರೆ. ನಮಗೆ ಬೇರೆ ಗತಿ ಇಲ್ಲದ್ದರಿಂದ ಇಲ್ಲಿಯೇ ಉಳಿದಿದ್ದೇವೆ  ಎಂದರು ಕೆಲ ಹಿರಿಯ ಶಿಷ್ಯರು. ಈ ತರುಣ ಹೌಹಾರಿ ಆಶ್ರಯ ತೊರೆದು ಹೊರಟೇ ಹೋದ.

ಮೂರನೆಯವನು ಶಿಷ್ಯರು ಹೇಳಿದ್ದನ್ನು ಕೇಳಿದ ಮೇಲೂ ಅಲ್ಲಿಯೇ ಉಳಿದ. ಅವನಿಗೆ ಗುರುಗಳು ಹಾಗಿರಲಾರರು, ಅವರ ಮನಸ್ಸಿನಲ್ಲಿ ಬೇರೇನೋ ವಿಚಾರವಿರಬೇಕು ಎನ್ನಿಸಿತ್ತು. ಈಗ ಗುರುವಿನ ಹಾರಾಟ, ಕೋಪವೆಲ್ಲ ಕರಗಿತ್ತು. ಆದರೆ ಇವನಿಗೆ ಯಾವ ಪಾಠವನ್ನೂ ಮಾಡಲಿಲ್ಲ. ಆತ ಒಂದು ತಿಂಗಳು ಕಾಯ್ದು ಏನೂ ಪಾಠವಾಗಲಿಲ್ಲವೆಂದಾಗ ಇಲ್ಲಿ ಇದ್ದು ಯಾವ ಪ್ರಯೋಜನವೂ ಇಲ್ಲವೆಂದು ಅವನೂ ಜಾಗ ಖಾಲಿ ಮಾಡಿದ.

ಹಿರಿಯ ಶಿಷ್ಯರೆಲ್ಲ ಸೇರಿ ಗುರುವನ್ನು ಕೇಳಿದರು,  ಹೀಗೇಕೆ ಮಾಡಿದಿರಿ? ಅವರನ್ನು ಉಳಿಸಿಕೊಳ್ಳಬಹುದಿತ್ತಲ್ಲ?  ಆಗ ಗುರು ನಕ್ಕು ಹೇಳಿದರು,  ನಮ್ಮ ಆಶ್ರಮದ ಸ್ವಾಗತ ಕಕ್ಷೆಯಲ್ಲಿ ಒಂದು ಫಲಕದ ಮೇಲೆ ಮೂರು ನಿಯಮಗಳನ್ನು ಬರೆದು ಹಾಕಿದ್ದು ನೀವು ಗಮನಿಸಿದ್ದೀರಿ. 1. ಕಣ್ಣಿನಿಂದ ನೋಡಿದ್ದನ್ನೇ ಸತ್ಯ ಎಂದು ನಂಬಬೇಡಿ. 2. ಆಳವಾದ ಚಿಂತನೆಯ ವಿಷಯಗಳನ್ನು ಮತ್ತೊಬ್ಬರ ಹೇಳಿಕೆಯಿಂದಲೇ ತೀರ್ಮಾನಿಸಬೇಡಿ. 3. ತಿಳುವಳಿಕೆಗೆ ಅವಸರದ ತೀರ್ಮಾನ ಬೇಡ. ಈ ಮೂರು ನಿಯಮಗಳನ್ನು ಪಾಲಿಸಿದ ನೀವೆಲ್ಲ ಇಲ್ಲಿ ಇದ್ದೀರಿ. ಈ ತರುಣರಲ್ಲಿ ಮೊದಲನೆಯವನು ಕಣ್ಣಿಗೆ ಕಾಣಿಸಿದ ನನ್ನ ಕೋಪ, ಹಾರಾಟವನ್ನೇ ಸತ್ಯ ಎಂದು ನಂಬಿ ಹೋಗಿ ಬಿಟ್ಟ. ಎರಡನೆಯವನು ನಾನೇ ನಿಮ್ಮಿಂದ ಹೇಳಿಸಿದ ಸುಳ್ಳನ್ನು ನಂಬಿದ, ಗುರುವನ್ನು ಸಂಶಯಿಸಿ ಹೋದ. ಮೂರನೆಯವನು ಈ ಎರಡು ಪರೀಕ್ಷೆಯಲ್ಲಿ ಯಶ ಪಡೆದರೂ ತಾಳ್ಮೆ ತೋರಲಿಲ್ಲ. ಇನ್ನೊಂದು ತಿಂಗಳು ತಡೆದಿದ್ದರೆ ನಿಮ್ಮಂದಿಗೆ ಉಳಿದು ಕಲಿಯುತ್ತಿದ್ದ. ಆಧ್ಯಾತ್ಮ ಸಾಧನೆಗೆ ಈ ಮೂರೂ ತುಂಬ ಅಗತ್ಯವಾದವುಗಳು. ಅವಿದ್ದರೆ ಮಾತ್ರ ಬೆಳವಣಿಗೆ ಸಾಧ್ಯ .

ಈ ಮೂರು ನಿಯಮಗಳು ಕೇವಲ ಸೂಫೀ ಆಶ್ರಮಕ್ಕೆ ಮಾತ್ರ ಒಪ್ಪುವಂತಹವಲ್ಲ. ನಮ್ಮ ಜೀವನದಲ್ಲೂ ಈ ಮೂರು ನಿಯಮಗಳು ಸದಾ ನಮ್ಮನ್ನು ಎಚ್ಚರಿಸುತ್ತಿದ್ದರೆ ಬದುಕು ಹಸನಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry