ಶುಕ್ರವಾರ, ಜೂಲೈ 3, 2020
29 °C

ಮೇಘ ವರ್ಷ ರಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಘ ವರ್ಷ ರಾಗ

ಮಳೆ ಸುರಿಯುತ್ತಿದೆ. ಸಂಜೆಯಲ್ಲವಾದರೂ ಸಂಜೆಯಂತಿದೆ. ತೊಟ್ಟಿಲಲ್ಲಿ ಮಗುವಿದೆ. ತೊಟ್ಟಿಲಡಿ ಇಟ್ಟ ಲೋಭಾನ ಕುಂಡದಿಂದ ಬರುವ ಘಮ ಮಳೆಯದೇ ಘಮವಾಗಿ ಪರಿಣಮಿಸಿದೆ. ಮಳೆಯೇ ಜೋಗುಳವಾಗಿ ಮಗುವಿನ ಕಣ್ಣೆವೆಗೆ ನಿದ್ದೆ ಹಚ್ಚಿದೆ.

***

ಬೇಸಗೆ ಕಳೆಯುತ ಬಂದಂತೆ ಮೇಘಗಳು ಮುಂಚಿತವಾಗಿ ದೂತರನ್ನು ಕಳಿಸುವವು. ಮಳೆ ಆಗಮನ ಸಾರುತ್ತ ಬರುವ ದೂತಮಂಡೂಕಗಳು, ನಮ್ಮ `ಗೋಂಟರು ಕಪ್ಪೆ~ಗಳು, ತಾರಸ್ಥಾಯಿಯಲ್ಲಿ ನಿದ್ದೆಯಲ್ಲಿದ್ದವರನ್ನೂ ಎಚ್ಚರಿಸುವಂತೆ ಒಂದೇಸಮ ಸಮೂಹಗಾಯನ ನಡೆಸುವವು. ಒಂದು ಮಳೆಗಾಲದ ಹೊತ್ತಿಗೆ ಹೋರಿ ಕಳಕೊಂಡ ರೈತನ ಬವಣೆಯ ನೆನಪಲ್ಲಿ, ಹೋರಿ ಸತ್ತೋಯ್ತೋ  ಎಂದು ಗದ್ದೆಯ ಈ ಬದುವಿನಿಂದ ಆ ಬದುವಿನವರೆಗೂ, ರೈತನ ಮಿತ್ರಹಕ್ಕಿ ಕೂಗುತ್ತ ಹಾರುವುದು. `ಜೋಕುಲು ಪಾಪ~ ಎನ್ನುತ್ತ  `ಮಳೆಗಾಲದಲ್ಲಿ ಪಾಪ ಮಕ್ಕಳು ಹೇಗೆ ಶಾಲೆಗೆ ಹೋಗಿ ಬರುವರೋ~ ಎಂದು ಚಿಂತಿಸುವ ಮಳೆವಸಗೆ ಹಕ್ಕಿಯದು. ಮತ್ತು, ಅದೊ ಅದೊ, ಮೋಡ ಕಂಡು ನಲಿವ ನವಿಲಿನ ದನಿ; ಎಲ್ಲಿಂದಲೋ ಕೇಳುತ್ತಿದೆ! ವಿರಹಗೀತೆಯಂತೆ. ವಲಸೆ ಬಂದವರ ನೋವಿನೆಳೆಯಂತೆ.ಮಳೆ ಸನ್ನಿಹಿತವಾಗಿದೆ. ಹಂಗಳೂರಿನ ಸಾಬಜ್ಜ ಓಲಿಕೊಡೆ ಮಾರಲು ಇನ್ನು ಹೊರಡುವನು. ಹನೆಓಲೆಯಿಂದ ಅಷ್ಟೆಲ್ಲಾ ನಮೂನೆ ಓಲಿಕೊಡೆಯನ್ನು ತಯಾರಿಸಲು ಇಡೀ ಬೇಸಗೆ ಕಳೆದವ ಅವನು. ಎಷ್ಟೆಲ್ಲ ನಮೂನೆ ಎಂದರೆ ದೊಡ್ಡವರಿಗಾಗಿ ದೊಡ್ಡ ಅಗಲದ ಗಿಡ್ಡ ಕೈಯ, ಶಾಲೆಗೆ ಹೋಗುವವರಿಗಾಗಿ ಹದ ಅಗಲದ ಉದ್ದ ಕೈಯ, ಪುಟಾಣಿಗಳಿಗಾಗಿ ಸಣ್ಣ ಅಗಲದ ಸಣ್ಣ ಕೈಯ ಕೊಡೆಗಳು. ಮೂರು ಕರಡಿಗಳಂತೆ ಮೂರು ತರಹದ ಕೊಡೆಗಳು. ಪ್ರತೀ ವರ್ಷ ಬರುವ ಆ ಅಜ್ಜ ಕೇವಲ ಕೊಡೆ ವ್ಯಾಪಾರಿಯಲ್ಲ, ಊರವರೆಲ್ಲರ ಪ್ರೀತಿಯವನು. ಮನೆ ಮನೆಗೂ ಬೇಕಾದವನು.

ಆಚೆ ಈಚೆ ಕೊಡೆಗುಂಪು ಕಟ್ಟಿದ ಜಲ್ಲನ್ನು ಹೆಗಲ ಮೇಲೆ ಉದ್ದಕ್ಕೂ ತೂಗುತ್ತ ತುಯ್ಯುತ್ತ ಬರುವನು.ಮಳೆ, ಬರುತಿಹೆ ಬರುತಿಹೆ ದೂರದಿ ಬರುತಿಹೆ ಎನ್ನುತೆನ್ನುತ್ತ... ಬರುವುದೇನು, ಬಂದಾಯಿತು. ಬಿಸುಸುಯ್ಯುವ ಪಾತಾಳದ ಹಾವೋ  ಎಂಬಂತೆ, ಮೊದಲು ಗಿಡಮರ ಬಗ್ಗಿಸಿ ಹೆಡೆ ಹೊರಳಾಡಿಸಿ ತೆಂಕಣಗಾಳಿ ಬಂತು ಬಂತು, ಹಿಂದೆಯೇ ಮೇಘ ಕವುಚಿತೂ ಕವುಚಿತೂ ಮಳೆ ಬಂತೂ ಬಂತೂ ಸುರಿಯಿತೂ ಸುರಿಯಿತೂ. `ಮಳೆ ಬಂತೋ ಮಾರಾಯ, ಕೊಡೆ ಹಿಡಿಯೋ ಸುಬ್ರಾಯ~ ಹಾಡಿಸಿಯೇ ಬಿಟ್ಟಿತು.ನೋಡುನೋಡುತ್ತಿದ್ದಂತೆ ತುಂಬಿ ಹೊಳೆ, ಬಂತು ನೆರೆ. ಮಳೆಯ ಹರ್ಷ ನೆರೆಯ ಕಳವಳವಾಗಿ, ತಾನೇ ಬೆಳೆಸಿದ ಪೈರಿಗೆ ಶತ್ರುವಾಗಿ ಬೇಡದ ಅತಿಥಿಯಾಗಿ ಎಷ್ಟೊತ್ತಿಗೆ ಹೊರಡುತ್ತದೋ ಎಂದು ಕಾಯುವವರೆಗೂ ಮಳೆಮಳೆಮಳೆ. 

***

ಸಂಭ್ರಮವ ಸುರಿವ ಮಳೆ. ರಪರಪ್ಪ ಹೊಡೆವ ಮಳೆ. ಕುಂಭದ್ರೋಣ ಮಳೆ. ಬಗೆಬಗೆಯ ಬಗೆಬಗೆವ ಮಳೆ. ವಾರಗಟ್ಟಲೆ ಹೊಯ್ಯುವ  ಸಂತಧಾರೆ -ಸತತ ಧಾರಾ- ಮಳೆ. ಸುರಲೋಕದವರ ಸಹಸ್ರಕೋಟಿ ತಂತಿವಾದನ ಕಛೇರಿ. ಮೇಘಮಲ್ಹಾರ ರಾಗ. ಭುವಿಗೆ ಆಗಸದ ಮಸ್ತಕಾಭಿಷೇಕ. ಮಘೆ, ಆರ್ದ್ರೆ, ಪುನರ್ವಸು ಮುಂತಾಗಿ ತಾರಾಲೋಕದಿಂದ ಆಯಾ ನಕ್ಷತ್ರಗಳು ತಂತಮ್ಮ ಹೆಸರಿನಲ್ಲಿ ಹೂಡುವ ವರ್ಷಶರ ಕಾಳಗ. ಜಂಭ ಅಹಂಕಾರ ಉಡಾಪು ಎಲ್ಲವೂ ಸೇರಿ ಘೀಳಿಡುತ ಬರುವ ಅವುಗಳ ರಭಸವೋ. ಆ ಫೋರ್ಸಿಗೆ ಸೂರ್ಯ ಕೂಡ ಸಜ್ಜನರ ಉಪಾಯದಂತೆ ದಾರಿ ಬಿಟ್ಟು ಮರೆ ನಿಂತಿದ್ದಾನೆ.ರಾತ್ರಿ ಹುಯ್ಯೋ ಕೂಗುತ್ತ ಊಳಿಡುವ ಗಾಳಿಯೊಂದಿಗೆ ಸೇರಿ ಮದವೇರಿದವರಂತೆ ಮಳೆ ರಾಚುತ್ತಿದೆ. ಮಾಡು ಹಾರಿಹೋದೀತೆ? ಅಬ್ಬ ಸಿಡಿಲೆ, ಅದು ಖಂಡಿತ ಬಾವಿಯಕಟ್ಟೆ ಬಳಿಯ ತೆಂಗಿನಮರಕ್ಕೆ ಎರಗಿದೆ ನೋಡು ಬೇಕಾದರೆ. ಮನೆಗಿನೆಗೆ ಹೊಡೆದರೆ ಏನು ಗತಿ? ಮಳೆ ಮಿಂಚು, ಗುಡುಗು. ಇಂದ್ರ ಖಡ್ಗ ಝಳಪಿಸುತ್ತಾ ರಥವೇರಿ ಗುಡುಗುಡೆಂದು ಆಕಾಶಮಾರ್ಗವಾಗಿ ಹೊರಟಿದ್ದಾನೆ, ಎಲ್ಲಿಗೆ, ಅದೇನು ಅಷ್ಟು ತುರ್ತು?- ಕೇಳುವಂತಿಲ್ಲ. ತಪ್ಪಿಸಿಕೊಳ್ಳುವ ಮಾರ್ಗವೆಂದರೆ ಅರ್ಜುನ, ಫಲ್ಗುಣ, ಪಾರ್ಥ... ಪಂಚನಾಮದಲ್ಲಿ ಅವನ ಮಗನ ಸ್ಮರಣೆ ಮಾತ್ರ. ಪಾರ್ತಜ್ಜಿ ಏಳುತ್ತಾರೆ, ಬಾಗಿಲನ್ನು ಸ್ವಲ್ಪವೇ ತೆರೆದು ಗಾಳಿ ನೂಕನ್ನೂ ನೂಕಿ ಎಡೆಯಲ್ಲೇ ಕಬ್ಬಿಣದ ಕತ್ತಿ ಹೊರಗೆಸೆದು, ಒಳಬರಲು ತಹತಹಿಸುವ ಗಾಳಿಯನ್ನು ಶಕ್ತಿಪ್ರಯೋಗ ಮಾಡಿ ದೂಡಿ, ಬಾಗಿಲು ಹಾಕಿಕೊಳ್ಳುತ್ತಾರೆ. ಅಬ್ಬ ಸಾಹಸವೆಂದರೆ ಇದೀಗ. ಮನೆಮಂದಿಗೆಲ್ಲ ಒಮ್ಮೆ ಉಸಿರು ಬರುತ್ತದೆ. ಸೋರುವ ಜಾಗೆ ಬಿಟ್ಟು ಹಾಸಿಗೆಗಳು ವಲಸೆ ಹೋಗುತ್ತವೆ. ರಾತಾರಾತ್ರಿ ಕೆಲಸದ ಮಿಣ್ಕ ಬಂದಿದ್ದಾಳೆ, ಮಕ್ಕಳೊಂದಿಗಳು. ಸೋರದ ಒಂದು ಜಾಗೆಯಲ್ಲಿ ಅವರ ಹಾಸಿಗೆಗಳೂ ಬಿಡಿಸಿಕೊಳ್ಳುತ್ತವೆ. ಆ ರಾತ್ರಿಯಿಡೀ ಮಳೆಗೆ ಶಾಪವೇ. ಮಳೆಯಲ್ಲಿ ಗೊರಬು ಹಾಕಿಕೊಂಡು ಕೆಲಸಮಾಡಿದರೂ ಸದಾ ನೀರಲ್ಲಿ ಓಡಾಡೀ ಓಡಾಡಿ ಕೆಲಸ ಮಾಡೀಮಾಡಿ ಅವಳ ಕೈಕಾಲು ಚಿರಳೊಟ್ಟೆ ಬಿದ್ದಿದೆ. ಕಾಲ್ಬೆರಳ ನಡುವೆ ನಂಜು, ಬಿಳೀ ಕರಗುತ್ತಿದೆ. ಕೇಳಿದರೆ ಅಸಡ್ಡೆಯಿಂದ ನುಡಿಯುತ್ತಾಳೆ, `ಮಳ್ಗಾಲೊ ಅಲ್ದೆ, ದುಡ್‌ದ್ ತಿಂಬರ್ ಕೈಕಾಲ್ ಮತ್ತ್ ಹ್ಯಾಂಗಿರತ್ತೊ~. ತಾಮ್ರದ ಕೌಳಿಗೆಯಲ್ಲಿ ನಂಜಿಗೆಂತಲೆ ಇಟ್ಟ ಎಣ್ಣೆಯನ್ನು ಪಾರ್ತಜ್ಜಿ ಕೊಡುತ್ತಾರೆ. ಹಚ್ಚಿಕೊಳ್ಳುತ್ತಿದ್ದಂತೆ ಪ್ರಸಂಗಗಳು ಬಿಚ್ಚಿಕೊಳ್ಳುತ್ತವೆ.

ಹೀಗೇ ಒಮ್ಮೆ ಮಳೆ ಬರುತ್ತಿರುವಾಗ ಒಂದು ದೇವಸ್ಥಾನಕ್ಕೆ ಕಳ್ಳ ಹೊಕ್ಕ. ದೇವರ ಆಭರಣಗಳನ್ನು ಮಾತ್ರವಲ್ಲ, ವಿಗ್ರಹವನ್ನೇ ಕದ್ದು ಪರಾರಿಯಾದ.

`ಸಿಕ್ಕಿದನೇ ಆತ?~`ಇಲ್ಲ, ಇನ್ನೂ ಸಿಕ್ಕಿಲ್ಲ~.

ವರ್ಷ ಎಷ್ಟಾದವೋ, ಇನ್ನೂ ಆತ ಸಿಕ್ಕೇ ಇಲ್ಲ. ಈಗಲೂ ಪ್ರತಿ ಮಳೆಗಾಲದಲ್ಲಿಯೂ ಒಂದಲ್ಲ ಒಂದು ದೇವಸ್ಥಾನ ಹೊಕ್ಕು ಕದಿವ ಆತ, ಮಾಯವಾಗುವ. ಆತ ಸಿಗುವುದು ಬೇಡಪ್ಪ ದೇವರೆ, ಕತೆ ಮುಗಿಯುವುದು ಬೇಡ. ಕಣ್ಣಲ್ಲೇ ಕಾಣದ ಆ ಕಳ್ಳನ ನೆನಪು, ಜೊತೆಗೆ ಒಳ್ಳೆಸಮಯ ಒಳ್ಳೆ ಸಮಯ ಹಾಡಿನ ನೆನಪು, ತುಂಟಮಳೆಯೇ, ಗೊತ್ತು ನೀನು ಕಳ್ಳರ ನೆಂಟ ಮಳೆ. 

***

ಒಂದು ಕಾಲದಲ್ಲಿ, ಮನೆಯಿಂದ ಹೊರಕರೆದು ಬೇಕೆಂದೇ ನೀರು ಸೋಕಿ ಅಮ್ಮನಿಂದ ಬೈಸಿದ, ಶೀತಜ್ವರ ಬರಸಿ ಶಾಲೆಗೆ ರಜೆ ಹಾಕಿಸಿದ ಮಳೆಯಿದು. ಕೊಡೆ ಹಿಡಿದರೆ ಎಲ್ಲಿಂದಲೋ ಅಷ್ಟು ಗಾಳಿತಂದು ಬೀಸಿ ಹಾರಿಸಿ ಅಟ್ಟಹಾಸದಿಂದ ನಗುತ್ತಿದ್ದ ಮಳೆ. ನಾವು ತೇಲಿಸಿದ, ಅದು ಮುಳುಗಿಸಿದ ದೋಣಿಗಳಿಗೆ ಲೆಕ್ಕವಿದೆಯೆ? ತಚಪಚ ತುಳಿದರೂ ಕೋಪಗೊಳ್ಳದೆ ನಕ್ಕದ್ದು ನಗಿಸಿದ್ದು ಸ್ವಲ್ಪವೆ? ಶಾಲೆಯಿಂದ ಮರಳುವಾಗ ಬಿಸಿಬಿಸಿ ತಿಂಡಿ ನೆನಪಿಸಿ ಮನೆಯಲ್ಲಿ ಹಪ್ಪಳ ಉಪ್ಪೇರಿ, ಕೆಂಡದಲಿ ಹೊಡಕಿಸಿ ಸುಟ್ಟ ಹಲಸಿನಬೀಜ ಸಿದ್ಧಮಾಡಿಟ್ಟು ಕಾದ ಮಳೆಯಲ್ಲವೆ ಇದು? ಮಳೆಯೆಂದರೆ ಸಾಟಿಯಿಲ್ಲದ ಕೆಳೆತನವೆಂದೇ. ಮಳೆಯೇ ಮಳೆಯೇ ಬಾ ಬಾ ಬಾ ಅಂತ ನಾವು ಆಕಾಶದ ಕಡೆ ಮುಖಮಾಡಿ ಬೊಬ್ಬಿಟ್ಟ ಹಾಗೂ ಹೋ ಹೂ ಹೋ ಹೂ ಅಂತ ಸಂಭ್ರಮದಿಂದ ಮರದಿಂದ ಗಿಡದಿಂದ ಹೂವಿಂದ ಎಲೆಯಿಂದ ಗುಡ್ಡ ಬೆಟ್ಟಗಳ ಇಳಿಜಾರಿನಿಂದ ಇಳಿದಿಳಿದು ಓಡೋಡಿ ಬರುತ್ತಿದ್ದ ಮಳೆ.....ಶಾಲೆ ಆರಂಭದ ದಿನವಂತೂ ಹೇಗೆ ತಿಳಿಯುತ್ತದೋ ಅದಕ್ಕೆ, ಅಂದದು ಕರಾರುವಾಕ್ಕಾಗಿ ಬಂದೇ ಬರುತ್ತದೆ. ಅಯ್ಯಮ್ಮೋ. ಕೊಡೆ ಹಿಡಿದೊಡನೆ ಅದರ ಅಟ್ಟಹಾಸವೋ. ಮಕ್ಕಳಿಗೂ ಮಳೆಗೂ ಬಾದರಾಯಣ ಸಂಬಂಧ ಎಂಬುದೆ ಗೊತ್ತಿಲ್ಲದೆ, ಶಾಲೆ ಸುರುವಾಗುವ ಮತ್ತು ಬಿಡುವ ಹೊತ್ತಿಗಾದರೂ ಬಿಡಬಾರದೆ ದರಿದ್ರಮಳೆ ಅಂತ ದೊಡ್ಡವರು ಗೊಣಗಿಯೇ ಗೊಣಗುತ್ತಾರೆ. ವರ್ಷಸಖ ಕವಿಯೋ `ಕನ್ನಡ ನೂತನ ಪಾಠಮಾಲೆ~ ಪಠ್ಯದಲ್ಲಿ ಕುಳಿತು ಮುದವಾಗಿ ಗುನುಗುತ್ತಿದ್ದಾನೆ `ಝಿರ್‌ಝಿರ್ ಬಿತ್ತು ಮಳೆ, ತುಂಬಿತುಳುಕಿ ಹೋಯ್ತು ಹೊಳೆ~.

***

ಹಾಡಿನ ಚರಣದ ಸಾಲುಗಳನ್ನು ಜೋಡಿಸಿಟ್ಟಂತೆ ಶಾಲೆಯ ಹೊರಗೋಡೆಯ ಉದ್ದಕ್ಕೂ ಓಲೆಕೊಡೆಗಳು ಶಿಸ್ತಿನಲ್ಲಿ ಸಾಲಾಗಿ ಕುಳಿತಿವೆ. ಇದ್ದಕ್ಕಿದ್ದಂತೆ ಗಾಳಿ ಬೀಸುತ್ತಲೂ ಏನಾಗುವುದೋ ಅವಕ್ಕೆ, ತಮ್ಮನ್ನು ಕರೆಯುತ್ತದೆ ಅಂತನಿಸುತ್ತದೋ, ಕಿವಿಯೊಳಗೇ ಗಾಳಿ ಹೊಗ್ಗುತ್ತದೋ, ಅಂತೂ ಒಂದೇಸಮ ಓಡಲು ತೊಡಗುತ್ತವೆ.ಅಯ್ಯೋ, ಆ ಬಿಳಿಕೊಡೆಗಳು, ಡಾಮರು ಬಳಿದುಕೊಂಡ ಕರಿಕೊಡೆಗಳು, ಒಟ್ಟೊಟ್ಟಿಗೇ, ಬರೆಸಿಕೊಂಡ ಅವರವರ ಹೆಸರುಗಳ ಜತೆಗೇ, ಗಾಳಿಯ ತಾಳಕ್ಕೆ ತಕ್ಕಂತೆ ಥಕ್ಕಥಕ್ಕನೆ ಬಿದ್ದೆದ್ದು ಓಡುತ್ತಿದ್ದರೆ ನೋಡುವುದೇ ಏನು ಮೋಜು. ಆದರೆ ಅರೆ, ನೋಡಲ್ಲಿ ನನ್ನ ಕೊಡೆಯೂ. ಹೋ, ನಿನ್ನದೂ. ಓಡಿರೋ, ನಿಮ್ಮ ನಿಮ್ಮ ಕೊಡೆಯನ್ನು ಹಿಡಿಯಿರಿ.ಪಾಠ ನಿಲ್ಲುತ್ತದೆ. ಮಕ್ಕಳು ಗಾಳಿಯೊಂದಿಗೆ ಸ್ಪರ್ಧೆ ಹೂಡಿ ಅಂತೂಇಂತೂ ಓಡುವ ಕೊಡೆಯನ್ನು ಹಿಡಿದು ತರುತ್ತಾರೆ. ತಮ್ಮ ಉಪಾಧ್ಯಾಯರ ಕೊಡೆಯನ್ನೂ ತಂದು ಶಹಭಾಸ್ ಪಡೆಯುತ್ತಾರೆ. ಓಡುವ ಕುದುರೆಯನ್ನು ಹಿಡಿದು ತಂದಷ್ಟೇ ಖುಶಿಯಲ್ಲಿದ್ದಾರೆ.ಬಣ್ಣವೇ ಇಲ್ಲದ ಮಳೆಯಲ್ಲಿ ಎಂಥಾ ಹಸಿರು ಅಡಗಿದೆ! ಟೀಚರು ಮಳೆಯ ಬಣ್ಣವೇನು ಎಂದು  ಕೇಳಿದರೆ ಹಸಿರು ಅಂತ ಉತ್ತರಿಸಬೇಕೆಂದಿದ್ದೆ. ಟೀಚರು ಆ ಪ್ರಶ್ನೆಯನ್ನೇ ಕೇಳಲಿಲ್ಲ. ಬಹುಶಃ ಆ ಪ್ರಶ್ನೆಯೇ ಇಲ್ಲ.

***

ಅಂದಹಾಗೆ, ನಾನು ಪ್ರಥಮ ಕವನ ಬರೆದದ್ದೂ ಇಂಥ ಒಂದು ಮಳೆಗಾಲದಲ್ಲೇ. - ಅನಿರೀಕ್ಷಿತವಾಗಿ ಹೇಳಕೇಳದೆ ಮಳೆಬರುವ ಲಕ್ಷಣ ಕಾಣುತ್ತಿದೆ. ಅಂಗಳದಲ್ಲಿ ಚಪ್ಪರ ಹಾಕಿದಾಗ ಮನೆಯೊಳಗೆ ಅರೆಗತ್ತಲು ಆವರಿಸುವ ಹಾಗೆ ಆಕಾಶಕ್ಕೇ ಮೋಡದ ಚಪ್ಪರ ಹಾಕಿದಂತೆ ಊರಿಡೀ ಮಧುರ ಕತ್ತಲು ಆವರಿಸಿದೆ. ತಾಯಿ ತಳಮಳಗೊಂಡಿದ್ದಾಳೆ. ಏಕೆಂದರೆ ಅವಳ ಹಪ್ಪಳ ಸೆಂಡಿಗೆ ಮಾತ್ರವಲ್ಲ, ಉರುವಲಿಗೆಂದು ತಟ್ಟಿದ ಸೆಗಣಿಬೆರಟಿ ಇನ್ನೂ ಅಂಗಳದಲ್ಲೇ ಇದೆ. ಒಂದೆಡೆ ಸೌದೆ ಒಡೆಯುವವನು ಸೌದೆ ಒಡೆಯುತ್ತಿದ್ದಾನೆ. ಆಚೆ ಅವನು ಒಡೆದು ಹಾಕಿದ ಸೌದೆ ರಾಶಿಯಿದೆ. ಮಳೆ ಬಂತೆಂದರೆ ಎಲ್ಲವೂ ಒದ್ದೆಮುದ್ದೆ. ಉರಿಯದ ಸೌದೆಯನ್ನು ಉರಿಸುವ ಕಷ್ಟ ಉರಿಸುವವರಿಗೇ ಗೊತ್ತು. ಆಕೆ ಮನೆಮಂದಿಯ ಹೆಸರನ್ನೆಲ್ಲ ಒಂದೊಂದಾಗಿ ಕೂಗಿ ಕರೆಯುತ್ತಿದ್ದಾಳೆ. `ಹೆಡಗೆ ಕುಕ್ಕೆ ಎಲ್ಲವನ್ನೂ ತನ್ನಿ, ಬೇಗಬೇಗ ಹೆಕ್ಕಿ ಎಲ್ಲವನ್ನೂ ಒಳಗೊಯ್ಯಿರಿ~ ಎನ್ನುತ್ತಿದ್ದಾಳೆ. ಎನ್ನುತ್ತ ಕವನ ಮುಗಿಯುತ್ತದೆ.

***

ಕಾವ್ಯವಾಯಿತು ಮಳೆ, ನೀರತಂತಿಯ ವಾದ್ಯವಾಯಿತು. ವಾದಕನಿಲ್ಲದೆಯೂ ನುಡಿವ ಸಂಗೀತವಾಯ್ತು. ಓ ಬೇಲೇ ಬೇಲೆ ಬೇಲೇ ಹಾಡ ಬರೆಸಿತು ಹಾಡಿತು. ನುಡಿಯ ನೆಡುವ, ನುಡಿಯ ಬೆಳೆಸುವ ನುಡಿಯ ಕೊಯ್ಲಿನ, ನುಡಿಯ ಹನಿಮಣಿ ತೋರಣದಲಿ ಕನಸು ಹೆಣೆಯುವ ತ್ರಾಣವಾಯ್ತು.ಅತಿಯಾಯ್ತು, ವ್ಯಥೆಯೂ ಆಯ್ತು, ಮುನಿಸಿತು, ಬಾರದೆ ಪೃಥ್ವಿಯ ಬಿರಿಸಿ ಶಿಕ್ಷಿಸಿತು. ಬೈದರೂ ಬಿಡದೆ ಮೋಹಿಯಂತೆ ಮತ್ತೆ ಬಂದು ಭುವಿಯ ತಕ್ಕೈಸಿತು. ಸಮುದ್ರವನು ಗಳಗಳ ಮರಳಿಸಿತು. ಈ ಸಮುದ್ರ, ಬೇಸಗೆಯಲ್ಲಿ ಎಷ್ಟು ಶಾಂತವಾಗಿ ಎಲ್ಲರೊಡನೆ ಬೆರೆತ, ರಜೆಯಲ್ಲಿ ದೂರದೂರದ ಮಂದಿ ಯಾರು ಬಂದರೂ ಕುಣಿದು ಕುಣಿಸಿ ಕಳಿಸಿದ ಹರ್ಷಾತಿರೇಕದಿಂದ ಆರ್ಭಟಿಸಿ ಪುಲಕಗೊಳಿಸಿದ ಸಮುದ್ರ, ನೋಡೀಗ,  ಕೂಗುತ್ತಿದೆ ಹೇಗೆ! ಒಳ್ಳೆ, ಪೆಡಂಭೂತದಂತೆ! ಗಾಳಿಯ ಸಂಗಾತ ಸೇರಿ ಮಳೆ ಅದನ್ನು ಕೆರಳಿಸಿದೆ. ಯಾವ ಕ್ಷಣ ಊರನ್ನು ಗೋರಿ ಮಾಡುವುದೋ ಎಂಬಂತೆ ತೀರಮೀರಿ ಬರಲು ಹವಣಿಸುವ ಕ್ರುದ್ಧಸಮುದ್ರವಾಗಿ ಈಗದು ಮಾರ್ಪಟ್ಟಿದೆ.(ಹುಟ್ಟಿನಿಂದ ಕಂಡ ಈ ಸಮುದ್ರವೇ ಬೇರೆ. ಆ ಸಮುದ್ರವೇ ಬೇರೆ. ಒಳಗೊಳಗೇ ಏನು ಮಸಲತ್ತು ನಡೆಸಿದೆಯೆಂಬ ಅರಿವೇ ಇಲ್ಲದ ಅಮಾಯಕರನ್ನು ಅಪ್ಪಳಿಸಿ ಕೊಂದ, ಕೊಲೆಯ ಕಲೆ ಅಂಟಿಸಿಕೊಂಡು ಪಿಶಾಚಿಯಂತೆ ಅಂಡಲೆವ ಅಲೆಗಳ ಅದುವೇ ಇತ್ತೀಚಿನವರೆಗೂ ಎಂಥಾ ಮುತ್ತಜ್ಜನಂತೆ ಕಾಣುತಿತ್ತು)

***

ತೊರೆ ತುಂಬಿದೆ ಕೆರೆ ತುಂಬಿದೆ, ಒಣಬಾವಿಯೂ ತುಂಬಿ ಕೈಗೆಟಕುವಷ್ಟು ಮೇಲೇರಿ ಬಂದು ನೀಲವರ್ಣದಲ್ಲಿ ಕಂಗೊಳಿಸುತ್ತದೆ. ಇಣುಕಲು ಹೋಗಬೇಡಿರೋ, ಬಿದ್ದರೆ ಮತ್ತೆ ಏಳುಗತಿಯಿಲ್ಲ. ಜಾರುವ ನೆಲ, ಪಾಚಿಯಂಗಳ, ಜಾರದಂತೆ ಹೊರಗೆ ಒಳಗೆ ಓಡಾಡಲು ಹೆಜ್ಜೆಗೊಂದು ಕಲ್ಲುಗಳು, ಕೊಡೆಯನ್ನೂ ಹಿಡಿಯದೆ ಕ್ಲ್ಲಲಿಂದ ಕಲ್ಲಿಗೆ ಹಾರುವ ಆಟವೇ ಆಟ. ಮಳೆ ಮತ್ತು ಮಲೆ ಎಂಥ ಅನ್ಯೋನ್ಯ ಜೋಡಿ. ಎಷ್ಟೊಂದು ತಿಂಡಿಗಳು ಮಳೆಗಾಲಕ್ಕಾಗಿಯೇ ಹುಟ್ಟಿಕೊಂಡಿವೆ. ಕೆಸುವಿನೆಲೆ ಪತ್ರೊಡೆ, ಅರಸಿನೆಲೆಯ ಕಡುಬು, ಚಗಟೆ ಸೊಪ್ಪಿನ ಪಲ್ಯ, ಹುರುಳಿ ಸಾರು, ಕಳಿಲೆ ಹುಳಿ...

ಬೇಸಗೆಯಲ್ಲಿ ಬೆವರಿನಲ್ಲಿ ಈಜಾಡಿ ಮಾಡಿದ, ಕಾಗೆ ಕದಿಯದಂತೆ ಒಬ್ಬರಲ್ಲ ಒಬ್ಬರು ಕಾದ ಹಪ್ಪಳ ಸೆಂಡಿಗೆಗಳಿಗೆ ಅರ್ಥ ಸಿಗುವುದೂ ಮಳೆಗಾಲದಲ್ಲಿಯೇ. ಇದಕ್ಕಾಗಿಯೇ ಅವೂ ಕಾಯುತ್ತಿದ್ದವಲ್ಲ ಡಬ್ಬಗಳ ಕತ್ತಲಗುಹೆಯ ಅಜ್ಞಾತವಾಸದಲ್ಲಿ?

***

ಮನೆಯೊಳಗೆ ಕತ್ತಲು ಕವಿದಿದೆ. ಮಳೆಗತ್ತಲಲ್ಲಿ ಕುಳಿತುಕೊಳ್ಳುವುದೆಂದರೆ ತಾಯಿಯ ಗರ್ಭದಲ್ಲಿ ಹೊಕ್ಕು ಬೆಚ್ಚಗೆ ಕುಳಿತಂತೆ ಅನಿಸುತ್ತಿತ್ತು ಮುಂಚೆಲ್ಲ. ಇಂದೇಕೆ ಹೀಗೆ ಬಳಲಿಕೆಯಾಗುತ್ತಿದೆ. ಸಂತಧಾರ ಸುರಿವ ಮಳೆಯನ್ನು ನೋಡುತ್ತಿದ್ದರೆ ಅಂತರಂಗದಲ್ಲಿ ಶೋಕದ ಸೆಳೆತ ಏಳುತ್ತಿದೆ. ಕಂಠದ ನರ ಬಿಗಿಯುತ್ತಿದೆ. ಕಳೆದು ಹೋದವರೆಲ್ಲರ ನೆನಪು ಕುದಿಮರಳುತ್ತಿದೆ. ತೀರಿದ ಆಪ್ತರ ತಃಖ್ತೆ ಕಣ್ಮುಂದೆ ತಾನಾಗಿ ಮೂಡುತ್ತ ಮನತುಂಬ ಕಳವಳದ ಕಾವಳ ಕವಿಯುತ್ತಿದೆ. ಈಗ ಅವರೆಲ್ಲ ಎಲ್ಲಿರಬಹುದು? ಇಂಥ ಮಳೆಯಲ್ಲಿ ಎಲ್ಲಡಗಿ ನಿಂತಿರಬಹುದು? ನಭದಲ್ಲಿ ನಿಲ್ದಾಣವಿದೆಯೆ? ಇದು ಯಾರ ಕಣ್ಣೀರು, ಮಳೆಯದೋ ಇಳೆಯದೋ? ಕಳೆದವರದೋ ಇರುವವರದೋ?... ಮಳೆಯೋ ಇದು, ನಿಜಕ್ಕೂ? ಅಥವಾ ನಭ ಸೇರಿದ ಮನಗಳು ನಮಗಾಗಿ ಕಳಿಸುತ್ತಿರುವ ನುಡಿಯ ಸಾಲುಗಳೋ?ಪ್ರಿಯವ್ಯಕ್ತಿಗಳೆಲ್ಲ ಮಳೆಸರಿಗೆ ಧಾರೆ ಹಿಡಿದು ಭೂಮಿಗೆ ಮರಳುತ್ತಾರಂತೆ, ಮತ್ತೆ ಜನ್ಮ ತಾಳುತ್ತಾರಂತೆ. ಸುಳ್ಳೆನ್ನ ಬೇಡಿ, ಹೌದೆನ್ನಿ. ದೋಣಿಯಲ್ಲಿ ತೇಲಿ ಕಾಣದೂರಿಗೆ ತೆರಳಿದ ಮಂದಿಯೆಲ್ಲ ಒಮ್ಮೆ ಮರಳಲಿದ್ದಾರೆ ಎಂಬುದೇ ಎಂಥ ಆಪ್ಯಾಯಮಾನ!

ಆದರೆ ಬಂದ ಅವರನ್ನು ನಾವು ಗುರುತು ಹಿಡಿದೇವೆ? ಅವರು ನಮ್ಮನ್ನು? ಮಳೆ ಕಾಲಕಾಲಕ್ಕೆ ತಾನು ಬದಲಾಗುವುದಷ್ಟೇ ಅಲ್ಲ, ನಮ್ಮನ್ನೂ ಬದಲಾಯಿಸುತ್ತದೆ. ಬರುವವರನ್ನೂ. ಅಂತಿರುವಾಗ?ಚಿಕ್ಕಂದಿನಲ್ಲಿ ದೋಸ್ತಿಯಾಗಿ ಮೈ ಮನಸ್ಸು ನೆತ್ತಿ ಪದಗಳಿಗೆಲ್ಲ ತಂಪು ಸೋಕಿಸಿ ಆಡಿದ ಮಳೆ; ಮುಂದೆ ಸುಖದುಃಖ ಆಲಿಸುತ್ತ, ಛೇಡಿಸುತ್ತ, ಹಾಡುತ್ತ ಹಾಡಿಸುತ್ತ ಒಲೆದೊಲೆದು ಜೊತೆಗೆ ಬಂದ ಮಳೆ. ಬರುತ್ತಿದೆ, ನಿಲ್ಲುತ್ತಿದೆ, ನಿಂತಂತೆ ಅಳುತ್ತಿದೆ. ಯಾರ ನೆನೆಯುತ್ತಿದೆ, ಮಾತಾಡುವ ಮೌನವಿದೆ, ಗದ್ಗದ ನಿಂತಿದೆ!

***

ಮಳೆಯೆಂಬುದು ನೆನಪುಗಳ ದೂತ. ಪ್ರತಿವರ್ಷವೂ ನೆನಪುಗಳನ್ನು ಹಸಿಗೊಳಿಸಿ ಹೋಗುವ ಆಪ್ತ. ನಭದ ಭೂತಲದ ವಿವಿಧ ನಾದಾನುಸಂಧಾನ ಮಾಡಿಸುವ ಸಕಲ ಜೀವರ ಜೀವದ ಜೀವ. ನಮಗೆಷ್ಟು ಬೇಕು, ಬೇಡ - ಲೆಕ್ಕಿಸದೆ ತನಗಿಷ್ಟವಿದ್ದಂತೆ ನಡಕೊಳ್ಳುವ ಒರಟು ಮಿತ್ರ. ಇಂದೂ ಬರುವ. ಆದರೆ ಯಾಕೋ, ಮುಂಚಿನ ಉಮೇದಿಲ್ಲ. ಸತತ ಧಾರೆಯಾಗಿ ಹೊಯ್ದು ಅಪ್ಪಳಿಸುವ ಶಕ್ತಿಪ್ರವಾಹವಿಲ್ಲ. ಮನಬಂದರೆ ಬರುವ, ಇಲ್ಲವಾದರೆ ಸುಮ್ಮನೆ ಇಣಿಕಿ ಹೋಗುವ. ಸಿಟ್ಟು ಬಂದರೆ ಧುಮ್ಮಿಕ್ಕುವ. ಸರಿಯಾಗಿ, ಅವನನ್ನು ಕರಕರೆದು ಕೂಗುವ ಮಂಡೂಕಗಳೂ ಇಲ್ಲ. ಮತ್ತೆ ಆ ವಸಗೆ ಹಕ್ಕಿ, ಎಲ್ಲಿ ಹೋಯಿತೋ, ಕೇಳುವವರಿಲ್ಲ. ಓಲಿಕೊಡೆಯೋ, ಮುಚ್ಚಲು ಬಿಚ್ಚಲು ಬರದ ಮೇಲೆ ಅದೇತಕ್ಕೆ? ಕಾಲ ಮುಗಿಸಿ ಅದೂ ಕಾಣೆಯಾಗಿದೆ. ಮುದಿತನದಲ್ಲಿಯೂ ಗಳದ ಆಚೀಚೆ ಕೊಡೆಗುಂಪು ಏರಿಸಿಕೊಂಡು ಮಾರಾಟದ ಕೆಚ್ಚಿನಲ್ಲಿ ಹೊರಡುವ ಸಾಬಜ್ಜನೂ ನೆನಪಿನ ಮನೆ ಸೇರಿರುವ. ಎಲ್ಲೋ ಅಲ್ಲಲ್ಲಿ ಜರಿಗಿಡಗಳು ಹನಿಗಣ್ಣಲ್ಲಿ ಕರೆಯುತ್ತವೆ. ಆದರೆ ಅವನ್ನು ಕೂರಿಸಿಕೊಳ್ಳಲು ಹೊಸಲುಗಳೇ ಇಲ್ಲ. ಈಗಲೂ ಮಳೆಗಾಲದ ಕಡಲು ಕೂಗುತ್ತಿದೆ. ಆದರೆ ಆ ಮಳೆ ಈ ಮಳೆಯೂ ಅಲ್ಲ, ಆ ಕೂಗು ಈ ಕೂಗೂ ಅಲ್ಲ. ಕಟ್ಟಡಕಟ್ಟಡಗಳನ್ನೆಲ್ಲ ದಾಟಿ ಬರುವಾಗ ಅದು ಅಲ್ಲಲ್ಲಿಯೇ ಕಂತುತ್ತದೆ. ಕೇಳಿಸುವುದೇ ಇಲ್ಲ. ಭೂಮಂಡಲಕ್ಕೆ ಆವರಿಸಿರುವ ಈ ದಣಿವು ಆರುವುದೆಂದು?ಮಳೆ ಸುರಿಯುತ್ತಿದೆ. ಸಂಜೆಯಲ್ಲವಾದರೂ ಸಂಜೆಯಂತಿದೆ

ಮಳೆ,

ಎಂದಿನಂತೆ ಬಂದು ಕೂಡ ಎಂದಿನಂತಿರದ ಮಳೆ,

ಅಳಿಸಲೆಂದು ಉಳಿಸಲೆಂದು ಬೆಳೆಸಲೆಂದು ಬರುವ ಮಳೆ.

ನೆನೆಯಲೆಂದು ನೆನೆಸಲೆಂದು ಕನಸಲೆಂದು ಸುರಿವ ಮಳೆ. ಬಾ ಬಾರೆ ಬಾರೆ ಬಾರೆ ನಭದ ಕಣ್ಣ ಧಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.