ಮೊರೆಯದಲೆಗಳ ಮೂಕ ಮರ್ಮರ...

7

ಮೊರೆಯದಲೆಗಳ ಮೂಕ ಮರ್ಮರ...

ಪ್ರಕಾಶ್ ರೈ
Published:
Updated:
ಮೊರೆಯದಲೆಗಳ ಮೂಕ ಮರ್ಮರ...

ಹರಿಯುತ್ತಿರುವ ಕಣ್ಣೀರನ್ನು ತಡೆಯಲು ಮನಸ್ಸಿಲ್ಲ. ನಟನಿಗೆ ಗ್ಲಿಸರಿನ್ ಇಲ್ಲದೇ ಕಣ್ಣೀರು ಬರುವಂಥ ಪರಿಸ್ಥಿತಿಯಿದೆಯಲ್ಲ, ಅದು ತುಂಬ ವೇದನೆ ಉಂಟು ಮಾಡುವಂಥದ್ದು. ಏಕೆಂದರೆ ಅದು ನಿಜವಾದ ಕಣ್ಣೀರೇ ಎನ್ನುವ ಸಂದೇಹ ನೋಡುಗನ ಮನಸ್ಸಿನಲ್ಲಿ ಒಂದು ಕ್ಷಣ ಇಣುಕು ಹಾಕಿ ಹೋಗುತ್ತದೆ.

ಎಲ್ಲದಕ್ಕೂ ಅಳಲು ತೊಡಗಿದರೆ ಅಳುವಿನ ಬಗ್ಗೆ ಪರಿತಾಪ ಹುಟ್ಟದು. ಅಳುವವನ ಮೇಲೆ ಮರ್ಯಾದೆಯೂ ಹುಟ್ಟದು. ನನ್ನ ತಂದೆ ಭಯಂಕರವಾಗಿ ಅಳುವ ಗಿರಾಕಿ. ಆರೇಳು ತಿಂಗಳು ಹೆಂಡತಿ ಮಕ್ಕಳನ್ನು ಮರೆತು ಎಲ್ಲೆಲ್ಲೋ ಅಲೆದು ದಿಢೀರ್ ಎಂದು ಒಂದು ದಿನ ಮನೆಯನ್ನು ಹುಡುಕಿಕೊಂಡು ಬರುವರು. ಬರುವಾಗ ಒಂದು ‘ಅಳು’ವನ್ನೂ ಜೊತೆಗೆ ಕರೆದುಕೊಂಡು ಬರುವರು.

‘ಮಾಡಿದ ತಪ್ಪೆಲ್ಲ ಈಗಷ್ಟೇ ಅರ್ಥವಾಗುತ್ತಿದೆ, ಇನ್ನೆಂದೂ ತಪ್ಪು ಮಾಡುವುದಿಲ್ಲ. ನಿನಗೆ ಒತ್ತಾಸೆಯಾಗಿ ಇರುತ್ತೇನೆ’ ಎಂದು ನನ್ನ ಅಮ್ಮನ ಮುಂದೆ ಬಿಕ್ಕಿ ಬಿಕ್ಕಿ ಅಳುವರು. ಯಾವುದಕ್ಕೂ ಪ್ರತಿಕ್ರಿಯಿಸದೇ ಶಾಂತವಾಗಿ ಕುಳಿತಿರುತ್ತಿದ್ದ ಅಮ್ಮ, ಅರ್ಧ ಗಂಟೆ ನಂತರ ಬಿಸಿ ಬಿಸಿ ಅಡುಗೆ ಮಾಡಿ ಅವರಿಗೆ ಬಡಿಸಲು ತೊಡಗುವಳು. ನನಗೋ, ಅಪ್ಪನ ಮೇಲೆ ಮರ್ಯಾದೆಯೂ ಬರದು. ಅವರ ಅಳುವಿನ ಮೇಲೆ ಗೌರವವೂ ಹುಟ್ಟದು. ಆದರೆ ಅಮ್ಮ ಅಳುವಾಗ ಹೃದಯ ಹಿಂಡಿದಂತಾಗುತ್ತಿತ್ತು. ರಾತ್ರಿ ನಾವೆಲ್ಲರೂ ಮಲಗಿದ್ದಾಗ, ತನ್ನ ಸ್ಥಿತಿಗೆ ಒಬ್ಬಳೇ ಮರುಗಿ ದೇವರಲ್ಲಿ ಪ್ರಾರ್ಥಿಸುವಾಗ ಹರಿಯುತ್ತಿದ್ದ ಕಣ್ಣೀರ ಕೋಡಿಯನ್ನು ಅವಳಿಗರಿಯದಂತೆ ನೋಡಿದ್ದೇನೆ. ಆ ಕಣ್ಣೀರಿಗೆ ಯಾವಾಗಲೂ ಒಂದು ಅರ್ಥವಿರುತ್ತಿತ್ತು.

ಸಿನಿಮಾಗಳಲ್ಲಿ ನಾನು ಅತ್ತಿದ್ದಕ್ಕಿಂತ ಖಳ ನಾಯಕನಾಗಿ ಬೇರೆಯವರನ್ನು ಅಳಿಸಿದ್ದೇ ಹೆಚ್ಚು. ಕಥಾ ಪಾತ್ರಗಳಲ್ಲಿ ನಟಿಸುವಾಗ ಕೆಲವೊಮ್ಮೆ ಅಳಬೇಕಾದ ಸಂದರ್ಭ ಬರುತ್ತದೆ. ಅದು ಗ್ಲಿಸರಿನ್ ಕಣ್ಣೀರು. ಹೀಗಾಗಿ ಒಬ್ಬ ನಟ ನಿಜವಾಗಿ ಅತ್ತಾಗಲೂ ‘ಅದು ನಿಜದ ಕಣ್ಣೀರೇ’ ಎನ್ನುವ ಸಂದೇಹ ಇನ್ನೊಬ್ಬರಿಗೆ ಬರುವುದು ಸಹಜ. ನಿಜವಾದ ಕಣ್ಣೀರಿನ ಭಾರ ಏನೆಂದು ನನಗೆ ಗೊತ್ತು. ಹಲವು ವರ್ಷಗಳ ಹಿಂದೆ ಅಂಥ ಹತ್ತಿಕ್ಕಲಾಗದ ಅಳುವನ್ನು ನಾನು ಅತ್ತು ತೀರಿಸಿದ್ದೆ.

ಚೆನ್ನೈನ ವಿಮಾನ ನಿಲ್ದಾಣ. ಹೆಗಲಲ್ಲಿನ ಟ್ರಾವೆಲ್ ಬ್ಯಾಗ್ ನನಗೆ ಅರಿವಿಲ್ಲದೆ ಜಾರಿ ಬೀಳುತ್ತಿದೆ. ಅಪ್ಪಿ ಹಿಡಿದುಕೊಳ್ಳಲು, ಆಸರೆಯ ಒಂದು ತೋಳನ್ನು ನಂಬಲು ಹತ್ತಿರದವರ‍್ಯಾರೂ ಪಕ್ಕದಲ್ಲಿ ಇಲ್ಲ.

‘ಹೇ, ಪ್ರಕಾಶ್ ರಾಜ್!’ ಎಂದು ತಮಾಷೆ ನೋಡಲು ಹಲವರು ಗುಂಪುಗೂಡುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಯಾವಾಗಲೂ ಕಾರಿನತ್ತ ಸರಸರನೆ ನಡೆದು ಹೋಗುವ ನನಗೆ, ಅಂದು ಒಂದರ್ಧ ಗಂಟೆ ಏನೂ ತೋಚಲಿಲ್ಲ. ಸುತ್ತಲಿದ್ದವರೆಲ್ಲ ತಮಾಷೆ ನೋಡುತ್ತಿದ್ದಂತೆ ನನ್ನ ಕಣ್ಣೀರು ಹರಿಯುತ್ತಲೇ ಇದೆ. ಮರಣವನ್ನು ತೀರಾ ಹತ್ತಿರದಿಂದ ನೋಡಿ ಬಂದ ಭಯ, ಕಣ್ಣೀರಿನ ಬಾಗಿಲುಗಳನ್ನು ತೆರೆದುಬಿಟ್ಟಿತ್ತು.

ಹೈದರಾಬಾದ್‌ನಲ್ಲಿ ಶೂಟಿಂಗ್. ಚೆನ್ನೈನಿಂದ ಹೈದರಾಬಾದ್‌ಗೆ ಹೋಗಲು ವಿಮಾನ ಹತ್ತಿದ್ದೆ. ಹತ್ತುವಾಗಲೇ ಮರಣದ ವಾಸನೆಯನ್ನು ಮನಸು ಅರಿತಂತೆ ಭಾಸವಾಗಿತ್ತು. ರಾತ್ರಿಯೆಲ್ಲಾ ನಿದ್ದೆಗೆಟ್ಟು ಕೆಲಸ ಮಾಡಿ, ಮರುದಿನ ಬೆಳಿಗ್ಗೆ ಅವಸರ ಅವಸರವಾಗಿ ಓಡಿ ಹೋಗಿ ವಿಮಾನ ಏರುವ ನನ್ನಂಥವನಿಗೆ ಆಕಾಶದಲ್ಲೇ ನಿದ್ದೆ. ಆದರೆ ಅಂದು ನನಗೆ ‘ಚಿರನಿದ್ರೆ’ಗೆ ಅವಕಾಶ ಸಿಕ್ಕಂತೆ ನಡುಗುತ್ತಿದೆ ವಿಮಾನ. ದೇಹದ ಭಾರ ಕಮ್ಮಿಯಾಗಿ ಗಾಳಿ ಧುತ್ತೆಂದು ಎದೆಯಲ್ಲಿ ಹೆಪ್ಪುಗಟ್ಟಿದಂತಾಯಿತು. ಗಗನಸಖಿಯ ಮೊಗದಲ್ಲಿ ಅವಳ ಮುಗುಳ್ನಗೆಯನ್ನೂ ಮೀರಿದ ಮರಣ ಭಯ, ತುಂಬ ದೊಡ್ಡ ಅಪಾಯವೊಂದನ್ನು ಎದುರುಗೊಳ್ಳುವೆವೇನೋ ಎಂಬ ಆತಂಕ ಅವಳ ನಗುವಿನಲ್ಲಿ ಹುದುಗಿರುವ ಚಡಪಡಿಕೆಯಿಂದಲೇ ಖಾತ್ರಿಯಾಗುತ್ತಿದೆ.

ವಾರದಲ್ಲಿ ನಾಲ್ಕು ದಿನ ವಿಮಾನ ಪ್ರಯಾಣ ಮಾಡುವ ನನಗೆ, ಪೈಲಟ್ ವಿಮಾನವನ್ನು ಯೂ ಟರ್ನ್ ತೆಗೆದುಕೊಳ್ಳಲು ಪ್ರಯಾಸ ಪಡುತ್ತಿರುವುದರ ಅರಿವಾಗುತ್ತಿದೆ. ಆದರೆ, ‘ವಿಮಾನ ಯಾವ ಅಡೆತಡೆಯೂ ಇಲ್ಲದೆ ಸಾಗುತ್ತಿದೆ, ಯಾವ ಸಮಸ್ಯೆಯೂ ಇಲ್ಲ’ ಎಂದುಶುದ್ಧವಾದ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಾ ಪ್ರತಿ ಬಾರಿಯೂ ಅಪಾರ ನಟನೆಯನ್ನು ಪ್ರದರ್ಶಿಸುತ್ತಿದ್ದಾಳೆ ಗಗನಸಖಿ. ಅವಳಿಗೂ ಪ್ರಾಣಭಯ ಇದೆ. ಆದರೂ

ತನ್ನ ಕರ್ತವ್ಯವನ್ನು ಅರಿತು ನಟಿಸುತ್ತಿದ್ದುದನ್ನು ಕಂಡು ಚಕಿತನಾದೆ. ಒಬ್ಬ ನಟನಾಗಿ ನನ್ನಿಂದಲೂ ಸಾಧ್ಯವಿರದ ನಟನೆಯದು.

ಅನಂತರ ನನ್ನೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ‘ಮೋಡಗಳ ಮಧ್ಯೆ ಸ್ವಲ್ಪ ತೊಂದರೆಯಾಗುತ್ತಿದೆ. ಆಮ್ಲಜನಕ ಪೂರೈಕೆ ಇಲ್ಲ. ಆದಷ್ಟು ಬೇಗ ಹೇಗಾದರೂ ಮಾಡಿ ಹಿಂದಿರುಗಿ ವಿಮಾನ ನಿಲ್ದಾಣ ತಲುಪಿಬಿಡುತ್ತೇವೆ. ಆತಂಕ ಬೇಡ’ – ಅದೇ ಶುದ್ಧವಾದ ಇಂಗ್ಲಿಷ್. ಆಕೆಯ ದನಿಯಲ್ಲಿದ್ದ ನಂಬಿಕೆ ಆಕೆಯ ಕಣ್ಣುಗಳಲ್ಲಿಲ್ಲ.

ಈ ಮಧ್ಯೆ ಸಹ ಪ್ರಯಾಣಿಕರಲ್ಲಿಕೆಲವರಿಗೆ ಉಸಿರುಗಟ್ಟಿದಂತಾಗಿ, ಇನ್ನು ಕೆಲವರಲ್ಲಿ ಸಂಭವಿಸಬಹುದಾದ ಅವಘಡದ ಅರಿವು ಉಂಟಾಗಿ ಎಲ್ಲರೂ ಅಳಲಾರಂಭಿಸಿದರು. ಒಬ್ಬರು ಸತ್ತಾಗ ಉಳಿದವರು ಕಣ್ಣೀರಾಗುವುದನ್ನು ಕಂಡಿದ್ದೇನೆ, ನಾನೂ ಅತ್ತಿದ್ದೇನೆ. ಆದರೆ ಅವನವನ ಸಾವಿಗೆ ಅವನೇ ಅಳುವ ದೌರ್ಭಾಗ್ಯವನ್ನು ಅಂದು ನಾನು ಕಂಡೆ.

ಗಾಳಿಯಷ್ಟೇ ತುಂಬಿಕೊಂಡಿದೆ ಎಂದು ನಾನಂದುಕೊಂಡಿದ್ದ ಅನಂತ ಆಗಸದಲ್ಲಿ ಅರವತ್ತು ಜನ ಉಸಿರಾಡುವಷ್ಟೂ ಗಾಳಿ ಇಲ್ಲ. ಎಲ್ಲರೂ ಮರಣ ಭಯದಲ್ಲಿ ಅವರವರ ದೇವರನ್ನು ಬೇಡತೊಡಗಿದರು; ಬಹುಪಾಲು ಅವರ ಪ್ರಾರ್ಥನೆ, ‘ದೇವರೇ ನನ್ನನ್ನು ಕಾಪಾಡು’, ‘ನನ್ನವರನ್ನು ಕಾಪಾಡು’ ಎಂದಿತ್ತೇ ಹೊರತು, ‘ಎಲ್ಲರನ್ನೂ ಕಾಪಾಡು ದೇವರೇ’ ಎಂದು ಬೇಡಿಕೊಂಡವರೆಷ್ಟು ಜನ ಎಂದು ಗೊತ್ತಾಗಲಿಲ್ಲ. ಆ ಕ್ಷಣಗಳಲ್ಲಿ ಮನುಷ್ಯನ ಬಲಹೀನತೆ ಮತ್ತು ಅಮಾಯಕತೆಯ ನೇರ ದರ್ಶನವಾಯಿತು.

ಇನ್ನೂ ಬದುಕನ್ನು ನೋಡಬೇಕಾದ ಯುವಕನಿಗೂ, ಬದುಕಿನ ಅಂತ್ಯದಲ್ಲಿರುವ ವೃದ್ಧನಿಗೂ ತನ್ನ ಜೀವದ ಮೇಲಿರುವ ಪ್ರೀತಿಯ ಪ್ರಮಾಣ ಒಂದೇ. ಮರಣದ ಹೊಸ್ತಿಲಲ್ಲಿ ನಿಂತಾಗಲೂ ಭೂಮಿಯಲ್ಲಿ ಬಿಟ್ಟು ಬಂದ ವಿಷಯಗಳ ಬಗ್ಗೆ, ಸಂಬಂಧಗಳ ಬಗ್ಗೆ ವಿಧ ವಿಧವಾಗಿ ಪ್ರಲಾಪಿಸುತ್ತಿದ್ದಾರೆ. ಒಬ್ಬಾಕೆ, ತಾನು ಮಾಡಬೇಕಾದ ಕೆಲಸಗಳ ಪಟ್ಟಿಯನ್ನೇ ಮಾಡಿ ಗೋಳಾಡುತ್ತಿದ್ದಾಳೆ.

ಇನ್ನೊಬ್ಬ, ಉಸಿರಾಡಲು ಗಾಳಿಯೇ ಸಿಗದ ಆಕಾಶದಲ್ಲಿ ಎಲ್ಲಿಯಾದರೂ ಸಿಗ್ನಲ್ ಸಿಕ್ಕು ಮನೆಯವರೊಂದಿಗೆ ಮಾತನಾಡಲು ಸಾಧ್ಯವೇ ಎಂದು ತನ್ನ ಸೆಲ್‌ಫೋನ್ ಆನ್ ಮಾಡಿ ತವಕಿಸುತ್ತಿದ್ದಾನೆ. ಮಗುವೊಂದು, ತನ್ನ ಸುತ್ತ ನಡೆಯುತ್ತಿರುವುದೇನು ಎಂದು ಗೊತ್ತಾಗದಿದ್ದರೂ, ಎಲ್ಲರ ಚೀರಾಟಕ್ಕೆ ಹೆದರಿ ದೊಡ್ಡದನಿಯಲ್ಲಿ ಅಳುತ್ತಿದೆ. ಆಗ ನನಗೆ ಕಣ್ಣೀರು ಬರಲಿಲ್ಲ. ಆದರೆ, ಕಾರಣವೇ ಇಲ್ಲದೆ ಸಾಯುತ್ತಿದ್ದೇನೆಯೇ ಎಂದು ಕಸಿವಿಸಿಗೊಂಡೆ.

ಏನೋ ಪವಾಡ ಸಂಭವಿಸಿದಂತೆ, ಪೈಲಟ್‌ನ ತೀವ್ರ ಪ್ರಯಾಸದ ಪ್ರಯತ್ನದ ಫಲವಾಗಿ ವಿಮಾನ ಚೆನ್ನೈಗೆ ಹಿಂದಿರುಗಿ ಭೂಮಿಗಿಳಿದ ನಿಜವನ್ನು ಆ ಭೂಮಿಯ ಮೇಲೆ ಹೆಜ್ಜೆಯಿಟ್ಟ ನಂತರವೂ ನಂಬಲಾಗಲಿಲ್ಲ. ನನ್ನ ಬದುಕು ಇನ್ನೂ ಮುಂದುವರಿಯುತ್ತದೆ ಎಂಬ ಸತ್ಯವನ್ನು ನಂಬಲಾಗದೇ ವಿಮಾನ ನಿಲ್ದಾಣದಲ್ಲಿ ಕಣ್ಣೀರು ಧಾರಾಕಾರವಾಗಿ ಹರಿದಿತ್ತು.

ಸಂಕಷ್ಟಗಳು ಒತ್ತರಿಸಿ ಬರುವ ಸಮಯದಲ್ಲೇ ನಮ್ಮ ನಮ್ಮ ನಿಜವಾದ ವ್ಯಕ್ತಿಗತ ಬಲವೇನೆಂದು ತಿಳಿದುಕೊಳ್ಳಲು ಸಾಧ್ಯ. ನನ್ನ ಮಗ ಸಿದ್ಧಾರ್ಥನ ಮರಣ ನನ್ನನ್ನು ಗಾಢವಾಗಿ ಬಾಧಿಸಿತ್ತು. ನಿನ್ನೆಯವರೆಗೆ ನನ್ನೊಂದಿಗೆ ನಗುತ್ತಾ ಮಾತನಾಡುತ್ತಿದ್ದ ಮನುಷ್ಯರು, ಬೆನ್ನು ಹತ್ತಿದ ಮರಣದಿಂದಾಗಿ ದಿಢೀರ್ ಎಂದು ಕಾಣೆಯಾಗುತ್ತಾ ಹೋಗುತ್ತಾರೆ.

ಯಾವ ಕಾರಣಕ್ಕೂ, ಯಾವ ಘಳಿಗೆಯಲ್ಲೂ ಬದುಕು ನಿಂತುಬಿಡಬಾರದು ಎಂದು ತೀವ್ರವಾಗಿ ಬದುಕಿದ್ದೇನೆ. ನನ್ನ ಮರಣವನ್ನು ಮುಖಾಮುಖಿಯಾಗಿ ಎದುರಿಸುವ ಧೈರ್ಯ ಎಲ್ಲಾ ಕಾಲದಲ್ಲೂ ನನ್ನೊಳಗಿರಬೇಕೆಂದು ನನ್ನ ಮನಸು ತುಡಿಯುತ್ತಲೇ ಇದೆ. ಒಂದು ಮರದಲ್ಲಿ ಎಲೆಗಳು ಚಿಗುರಿ ಹಸಿರಾಗುವುದನ್ನೂ ಹಣ್ಣಾಗಿ ಉದುರುವುದನ್ನೂ ನೋಡುವಾಗ ಸಾವನ್ನು ಎದುರುಗೊಳ್ಳುವ ಧೈರ್ಯ, ಪರಿಪಕ್ವತೆ ಬಂದುಬಿಡುತ್ತದೆ.

ಯಾವ ನೋವಿನ ತೀವ್ರತೆ ಎಷ್ಟೆಂದು ಆಯಾ ಸಮಯದಲ್ಲೇ ಅರಿವಾಗುವುದು. ಕೆಲ ಕ್ಷಣಗಳಲ್ಲಿ ಬದುಕು ಸ್ತಂಭಿಸಿ ಹೋಗುತ್ತದೆ. ಮರಳುಗಾಡಿನಲ್ಲಿ ಅಲೆದು ಅಲೆದು ಎಷ್ಟೇ ದಾಹವಾದರೂ, ಒಂದಿಷ್ಟು ನೀರು ಬಾಯಾರಿಕೆಯನ್ನು ಪೂರ್ತಿ ಇಂಗಿಸಿಬಿಡುತ್ತದೆ. ಆದರೆ, ನೀರು ಸಿಗುವವರೆಗೆ ಗಂಟಲನ್ನು ನೆನೆಸಿಟ್ಟುಕೊಳ್ಳುವುದು ತಿಳಿದಿರಬೇಕು. ನಾವು ಮಾಡಬೇಕಿರುವುದು ಇಷ್ಟೇ. ನಂಬಿಕೆಯನ್ನು ಮಾತ್ರ ಕಳೆದುಕೊಳ್ಳದಿದ್ದರೆ ಸಾಕು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry