ಮೋದಿ ನಾದಕ್ಕೆ ತಲೆದೂಗುವುದೇ ನಾಗಾಲ್ಯಾಂಡ್?

7

ಮೋದಿ ನಾದಕ್ಕೆ ತಲೆದೂಗುವುದೇ ನಾಗಾಲ್ಯಾಂಡ್?

ಡಿ. ಉಮಾಪತಿ
Published:
Updated:
ಮೋದಿ ನಾದಕ್ಕೆ ತಲೆದೂಗುವುದೇ ನಾಗಾಲ್ಯಾಂಡ್?

ಸ್ವತಂತ್ರ ಸಾರ್ವಭೌಮ ದೇಶಕ್ಕಾಗಿ ಬಹುದೀರ್ಘ ಹೋರಾಟ ನಡೆಸಿರುವ ನಾಗಾ ಜನ ಸದ್ಯದಲ್ಲೇ ಹೊಸ ವಿಧಾನಸಭೆಯನ್ನು ಆರಿಸಲಿದ್ದಾರೆ. ಬಿಜೆಪಿ ಬೆಂಬಲಿತ ನಾಗಾ ಪೀಪಲ್ಸ್ ಫ್ರಂಟ್ (ಎನ್.ಪಿ.ಎಫ್) ಇಲ್ಲಿ ಸರ್ಕಾರ ನಡೆಸಿದೆ. ಈ ಫ್ರಂಟ್‌‌‌ನಲ್ಲಿ ಮೂಡಿರುವ ಬಿರುಕುಗಳನ್ನು ದೊಡ್ಡ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ಹೊಂದಿದೆ. ಹರಿದು ಹಂಚಿಹೋಗಿರುವ ನಾಗಾ ಪಕ್ಷಗಳು ನಾಗಾಲ್ಯಾಂಡ್ ಬಾಗಿಲನ್ನು ಬಿಜೆಪಿಗೂ ತೆರೆಯಲಿವೆಯೇ ಎಂಬ ಪ್ರಶ್ನೆಗೆ ಎರಡು ವಾರಗಳಲ್ಲಿ ಉತ್ತರ ದೊರೆಯಲಿದೆ.

ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುರ್ಹೋಝೆಲೀ ಲೇಝೀತ್ಸು, ಮುಖ್ಯಮಂತ್ರಿ ಟಿ.ಆರ್. ಝೇಲಿಯಂಗ್ ಹಾಗೂ ಮೋದಿ ಮಂತ್ರಿಮಂಡಲ ಸೇರುವ ಮಹದಾಸೆಯಿಂದ ಮುಖ್ಯಮಂತ್ರಿ ಹುದ್ದೆ ತೊರೆದು ಸಂಸದರಾಗಿ ಚುನಾಯಿತರಾಗಿದ್ದ ನೇಯ್ಫಿಯೂ ರಯೋ ಇಂದಿನ ನಾಗಾರಾಜಕಾರಣದ ಮೂರು ಮುಖ್ಯ ಧ್ರುವತಾರೆಗಳು. ಮೂವರ ವ್ಯಕ್ತಿಗತ ಮಹತ್ವಾಕಾಂಕ್ಷೆಗಳು ನಾಗಾ ಪೀಪಲ್ಸ್ ಫ್ರಂಟ್‌ ಅನ್ನು ಒಡೆದು ರಾಜಕೀಯ ಅಸ್ಥಿರತೆಯನ್ನು ಹುಟ್ಟಿಹಾಕಿವೆ. ತಮ್ಮ ಪಕ್ಷದಲ್ಲಿ ಇದ್ದುಕೊಂಡೇ ಹೊಸ ಪಕ್ಷ ನ್ಯಾಷನಲ್ ಡೆಮಾಕ್ರೆಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್.ಡಿ.ಪಿ.ಪಿ) ಹುಟ್ಟಿ ಹಾಕಿದವರು ರಯೋ. ಚುನಾವಣೆಗೆ ಮುನ್ನ ಆ ಪಕ್ಷವನ್ನು ಸೇರಿ ಅದರ ನೇತೃತ್ವ ಹಿಡಿದರು.

15ವರ್ಷಗಳಷ್ಟು ದೀರ್ಘವಾದ ಎನ್.ಪಿ.ಎಫ್. ಮೈತ್ರಿಯಿಂದ ಹೊರಬಿದ್ದ ಬಿಜೆಪಿ, ರಯೋ ಅವರ ಹೊಸ ಪಕ್ಷದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಂಡಿದೆ.

1,500ಕ್ಕೂ ಹೆಚ್ಚು ಚರ್ಚ್‌ಗಳ ಜಾಲವನ್ನು ನಿಯಂತ್ರಿಸುವ ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ (ಎನ್.ಬಿ.ಸಿ.ಸಿ.) ರಾಜ್ಯದ ಬಲಿಷ್ಠ ಧಾರ್ಮಿಕ ಸಂಘಟನೆಗಳಲ್ಲಿ ಒಂದು. ಸರ್ಕಾರ ಮತ್ತು ಸಾಮಾಜಿಕ ಜೀವನದ ಮೇಲೆ ಇದರ ಪ್ರಭಾವ ಅಗಾಧ. ಚುನಾವಣೆಗೆ ಮುನ್ನ ತನ್ನನ್ನು ಸೆಕ್ಯುಲರ್ ಎಂದು ಘೋಷಿಸಿಕೊಳ್ಳುವಂತೆ ಬಿಜೆಪಿಗೆ ಮನವಿ ಮಾಡಿದೆ. ಆರೆಸ್ಸೆಸ್‌ನ ರಾಜಕೀಯ ಘಟಕವಾದ ಬಿಜೆಪಿಯು ಅಧಿಕಾರ ಹಿಡಿದಿರುವ ಕಳೆದ ಕೆಲ ವರ್ಷಗಳಲ್ಲಿ ಹಿಂದುತ್ವ ಆಂದೋಲನವು ಹಿಂದೆಂದಿಗಿಂತ ಬಲಿಷ್ಠವೂ ಆಕ್ರಮಣಕಾರಿಯೂ ಆಗಿದೆ ಎಂದಿದೆ ಚರ್ಚ್.

‘ಎನ್.ಪಿ.ಎಫ್. ಜೊತೆಗೆ ಹಲವು ವರ್ಷಗಳಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಆಗ ಬಿಜೆಪಿ ವಿರುದ್ಧ ಚರ್ಚ್ ಇಂತಹ ಹೇಳಿಕೆ ನೀಡಿರಲಿಲ್ಲ. ಇದೀಗ ಎನ್.ಡಿ.ಪಿ.ಪಿ. ಜೊತೆ ಗೆಳೆತನ ಮಾಡಿಕೊಂಡಾಕ್ಷಣ ಇಂತಹ ಹೇಳಿಕೆ ಹೊರಬರುತ್ತಿರುವುದು ಯಾಕೆಂದು ತಿಳಿಯದು’ ಎಂಬುದು ಬಿಜೆಪಿ ಪ್ರತಿಕ್ರಿಯೆ.

‘ಇಲ್ಲಿ ನಾವು ಬಹುಸಂಖ್ಯಾತರು... ಆದರೆ ಹಲವೆಡೆ ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತಿರುವುದು, ಅಲ್ಪ ಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ರಾಜಕೀಯ ಪಕ್ಷಗಳು ಪ್ರತಿ ಮತದಾರನಿಗೆ 20 ಸಾವಿರ ರೂಪಾಯಿ ಲಂಚ ನೀಡುತ್ತಿರುವ ಕುರಿತು ನಾಗಾಲ್ಯಾಂಡ್ ಪತ್ರಿಕೆಗಳು ಬರೆಯುತ್ತಿವೆ. ಮತ ನೀಡುವಾಗ ದೇವರು ನೀಡಿರುವ ವಿವೇಕವನ್ನು ಬಳಸಿ ಎಂದಷ್ಟೇ ನಾವು ಹೇಳುತ್ತಿದ್ದೇವೆ. ಇಂತಹವರಿಗೆ ಮತ ಹಾಕಿ ಅಥವಾ ಹಾಕಬೇಡಿ ಎನ್ನುತ್ತಿಲ್ಲ. ಬಿಜೆಪಿ ಜೊತೆ ಎನ್.ಪಿ.ಎಫ್. ಸೀಟು ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಚುನಾವಣೆಯ ನಂತರ ಮೈತ್ರಿ ಮಾಡಿಕೊಂಡಿತ್ತು. ಆದರೆ ಎನ್.ಡಿ.ಪಿ.ಪಿ. ಜೊತೆ ಸೀಟು ಹೊಂದಾಣಿಕೆ ನಡೆದಿದೆ’ ಎಂಬ ಕಳವಳವನ್ನು ಚರ್ಚ್‌ ವ್ಯಕ್ತಪಡಿಸಿದೆ.

ನಾಗಾಲ್ಯಾಂಡ್, ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಅಸ್ಸಾಂ, ಅರುಣಾಚಲ, ಮಣಿಪುರ ರಾಜ್ಯಗಳು ಮತ್ತು ಮ್ಯಾನ್ಮಾರ್‌ ದೇಶದ ನೆರೆಹೊರೆ. ರಾಜಧಾನಿ ಕೊಹಿಮಾ. ದಿಮಾಪುರ ಅತಿದೊಡ್ಡ ನಗರ. 2011ನೇ ಜನಗಣತಿ ಪ್ರಕಾರ ತುಸು ಹೆಚ್ಚು ಕಡಿಮೆ 20 ಲಕ್ಷ ಜನಸಂಖ್ಯೆ.

ಇಲ್ಲಿನ 16 ಬುಡಕಟ್ಟು ಜನಾಂಗಗಳಿಗೆ ತಮ್ಮವೇ ಆದ ಪ್ರತ್ಯೇಕ ವಿಶಿಷ್ಟ ನಂಬಿಕೆಗಳು, ಆಚರಣೆಗಳು, ಭಾಷೆ ಮತ್ತು ವೇಷಭೂಷಣಗಳಿವೆ. ಎಲ್ಲ ಭಾಷೆಗಳಿಗೂ ಇಂಗ್ಲಿಷ್ ಸಂಪರ್ಕ ಭಾಷೆ. ಜನಸಂಖ್ಯೆಯ ಶೇ 90ರಷ್ಟು ಕ್ರೈಸ್ತರನ್ನು ಹೊಂದಿರುವ ರಾಜ್ಯ. ಕ್ರೈಸ್ತರು ಬಹುಸಂಖ್ಯಾತರಾಗಿರುವ ಇತರೆ ರಾಜ್ಯಗಳು ಮಿಜೋರಾಂ (ಶೇ 88), ಮೇಘಾಲಯ (ಶೇ 83.3). ನಾಗಾಲ್ಯಾಂಡ್ ಭಾರತದ 16ನೇ ರಾಜ್ಯ ಆದದ್ದು 1963ರಲ್ಲಿ.

ನಾಗಾಗಳ ಪ್ರಾಚೀನ ಇತಿಹಾಸ ಅಸ್ಪಷ್ಟ. ಬುಡಕಟ್ಟುಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ವಲಸೆ ಬಂದು ಈಶಾನ್ಯದ ಪರ್ವತ ಪ್ರದೇಶಗಳಲ್ಲಿ ತಮ್ಮದೇ ಪ್ರತ್ಯೇಕ ಸ್ವತಂತ್ರ ಸೀಮೆಗಳನ್ನು ಕಟ್ಟಿಕೊಂಡಿದ್ದವು. ಹದಿಮೂರನೆಯ ಶತಮಾನದ ಹೊತ್ತಿಗಾಗಲೇ ನಾಗಾ ಜನ ಬಂದು ನೆಲೆಸಿದ್ದರು ಎನ್ನಲಾಗಿದೆ. ಆಡಳಿತ ಭಾಷೆ ಇಂಗ್ಲಿಷ್ ಜೊತೆ ನಾಗಾಮಿಸ್ ಎಂಬ ಅಸ್ಸಾಮೀಸ್ ಬೆರೆತ ಭಾಷೆಯನ್ನು ಎಲ್ಲರೂ ಆಡಬಲ್ಲರು.

ತಮ್ಮ ಚಹಾ ಕೃಷಿಯ ಅರ್ಥವ್ಯವಸ್ಥೆಗೆ ನಾಗಾಗಳು ಒಡ್ಡುತ್ತಿದ್ದ ಅಡಚಣೆಯನ್ನು ನಿವಾರಿಸಿಕೊಳ್ಳಲು ಅವರನ್ನು ಮಣಿಸಿದ ಬ್ರಿಟಿಷರು ನಾಗಾ ಸೀಮೆಗಳನ್ನು ತಮ್ಮ ಆಡಳಿತದ ಅಸ್ಸಾಂ ಸೀಮೆಗಳಿಗೆ ಜೋಡಿಸಿಕೊಂಡರು. 19ನೇ ಶತಮಾನದಲ್ಲಿ ಅಮೆರಿಕ, ಯುರೋಪ್‌ನಿಂದ ಬಂದ ಕ್ರೈಸ್ತ ಧರ್ಮ ಪ್ರಚಾರಕ ಮಿಷನರಿಗಳು ನಾಗಾಗಳನ್ನು ಕ್ರೈಸ್ತ ಮತಕ್ಕೆ ಪರಿವರ್ತಿಸಿದವು. ಒಂದು ಬುಡಕಟ್ಟಿನ ಭಾಷೆ ಮತ್ತೊಂದಕ್ಕೆ ಅರ್ಥವಾಗುತ್ತಿರಲಿಲ್ಲ. ಅವುಗಳ ಪೈಕಿ ಒಗ್ಗಟ್ಟೂ ಇರಲಿಲ್ಲ. ನಾಗಾ ಸೀಮೆಗಳನ್ನು ಬ್ರಿಟಿಷ್ ಇಂಡಿಯಾ ಸರ್ಕಾರದ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿತ್ತು. ಸ್ವಾಯತ್ತ ಅಸ್ಸಾಮ್‌ಗೆ ತಮ್ಮನ್ನು ಸೇರಿಸುವಂತೆ ಕೋರಿದ್ದ ನಾಗಾಗಳು 1946ರ ನಂತರ ಪ್ರತ್ಯೇಕ ದೇಶದ ಬೇಡಿಕೆಯನ್ನು ಮುಂದಿಟ್ಟರು. ಸ್ವಾತಂತ್ರ್ಯಾನಂತರ ಅಸ್ಸಾಮಿನ ಭಾಗವಾಗಿದ್ದ ನಾಗಾ ಸೀಮೆಗಳಲ್ಲಿ ಹಿಂಸಾತ್ಮಕ ಸ್ವರೂಪದ ರಾಷ್ಟ್ರವಾದಿ ಚಟುವಟಿಕೆಗಳು ಸಿಡಿದಿದ್ದವು. 1955ರಲ್ಲಿ ಭಾರತೀಯ ಸೇನೆಯನ್ನು ಕಳಿಸಲಾಯಿತು.

ನಾಗಾ ನಾಯಕರ ಜೊತೆ ಮಾತುಕತೆ ಜರುಗಿ ನಾಗಾ ಜನರಿಗಾಗಿ ನಾಗಾ ಹಿಲ್ಸ್ ಎಂಬ ಪ್ರತ್ಯೇಕ ಸೀಮೆಯ ರಚನೆಯ ಒಪ್ಪಂದಕ್ಕೆ ಬರಲಾಯಿತು. ದೊಡ್ಡ ಪ್ರಮಾಣದ ಸ್ವಾಯತ್ತತೆ ಉಳ್ಳ ಕೇಂದ್ರಾಡಳಿತ ಪ್ರದೇಶವಾಯಿತು ನಾಗಾ ಸೀಮೆ. ಬುಡಕಟ್ಟು ಜನಾಂಗಗಳಿಗೆ ಸಮಾಧಾನ ಆಗಲಿಲ್ಲ. ಹಿಂಸಾತ್ಮಕ ಆಂದೋಲನ ಮುಂದುವರೆಯಿತು. ಭಾರತೀಯ ಸೇನೆ, ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳ ಮೇಲಿನ ದಾಳಿಯ ಪ್ರಕರಣಗಳು ಹೆಚ್ಚಿದವು. ಭಾರತ ಒಕ್ಕೂಟದಲ್ಲಿ ಪ್ರತ್ಯೇಕ ರಾಜ್ಯ ಆಗಿಸುವ ಮತ್ತೊಂದು ಒಪ್ಪಂದ ನಾಗಾ ನಾಯಕರು ಮತ್ತು ಭಾರತ ಸರ್ಕಾರದ ನಡುವೆ ಏರ್ಪಟ್ಟಿತು. 1962ರಲ್ಲಿ ರಾಜ್ಯವೂ ಆಯಿತು. ವಿಧಾನಸಭೆ, ಚುನಾಯಿತ ಸರ್ಕಾರ ಬಂದರೂ ಹಿಂಸೆ, ಬಂಡಾಯ ನಿಲ್ಲಲಿಲ್ಲ.

ನಾಗಾ ಸಮಾಜದ ಪ್ರಮುಖರೂ ಆದ ನಿವೃತ್ತ ಐ.ಎ.ಎಸ್. ಅಧಿಕಾರಿ ಖೇಕಿಯ ಸೆಮಾ ಹೇಳುತ್ತಾರೆ- ‘ನಾಗಾಗಳು ಸಾಂದರ್ಭಿಕವಾಗಿ ಭಾರತೀಯರೇ ವಿನಾ ಭಾರತದ ನಾಗರಿಕತೆ ಅವರ ಆಯ್ಕೆಯಲ್ಲ. ಭಾರತ ಸ್ವತಂತ್ರವಾಗುವ ಮುನ್ನವೇ ನಾಗಾಗಳ ಆಂದೋಲನ ಆರಂಭ ಆಗಿತ್ತು. ಭಾರತೀಯ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿ. ಈಶಾನ್ಯದ ನಾಗಾಗಳನ್ನು ಪ್ರತಿಫಲಿಸುವ ಒಂದೇ ಒಂದು ಉಲ್ಲೇಖವೂ ನಿಮಗೆ ದೊರೆಯುವುದಿಲ್ಲ. ನಾಗಾಗಳು ಮತ್ತು ಭಾರತದ ನಡುವಣ ಏಕೈಕ ಕೊಂಡಿ ಬ್ರಿಟಿಷರು. ಅಸ್ಸಾಂ ಸೀಮೆಯಲ್ಲಿ ಭಾರೀ ಪ್ರಮಾಣದ ಚಹಾ ಪ್ಲ್ಯಾಂಟೇಷನ್ ಕೈಗೊಂಡಿದ್ದ ಬ್ರಿಟಿಷರು ನಾಗಾ ಸೀಮೆಗೆ ಕಾಲಿಟ್ಟರು. ರುಂಡಗಳ ಬೇಟೆ ಪರಂಪರೆಯ ನಾಗಾಗಳು ಗಿರಿಗಳಿಂದ ಕಣಿವೆಗಳಿಗೆ ಇಳಿದು ಮಾನವ ರುಂಡಗಳ ತರಿದುಕೊಂಡು ಪುನಃ ಎತ್ತರದ ಪರ್ವತಗಳಿಗೆ ಪರಾರಿಯಾಗುತ್ತಿದ್ದರು. ತಮ್ಮ ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಬ್ರಿಟಿಷರು ನಾಗಾಗಳೊಂದಿಗೆ ಕದನಕ್ಕೆ ಇಳಿದರೇ ವಿನಾ ಸಾಮ್ರಾಜ್ಯ ವಿಸ್ತರಣೆಯ ಉದ್ದೇಶದಿಂದ ಅಲ್ಲ. ಭಾರತವನ್ನು ಬ್ರಿಟಿಷರು ಆಳಿದರು. ನಾಗಾಗಳನ್ನೂ ಬ್ರಿಟಿಷರು ಆಳಿದರು. ಭಾರತ ಮತ್ತು ನಾಗಾಗಳ ನಡುವೆ ಇರುವ ಸಮಾನ ಅಂಶ ಇದೊಂದೇ’.

ನಾಗಾಲ್ಯಾಂಡ್ ರಾಷ್ಟ್ರೀಯ ಸಮಾಜವಾದಿ ಪರಿಷತ್ತು (ಐಸಕ್- ಮುಯ್ವಾ) ಅಥವಾ ಎನ್.ಎಸ್.ಸಿ.ಎನ್.-ಐ.ಎಂ. ಎಂಬುದು ಪ್ರತ್ಯೇಕ ನಾಗಾ ದೇಶಕ್ಕಾಗಿ ಹೋರಾಟ ನಡೆಸಿರುವ ಸಶಸ್ತ್ರ ಬಂಡುಕೋರ ಭೂಗತ ಬಣಗಳ ಪೈಕಿ ಬಹು ದೊಡ್ಡದು. ಹಾಲಿ ಇತರೆ ನಾಗಾ ಬಂಡುಕೋರ ಬಣಗಳಂತೆಯೇ ಭಾರತ ಸರ್ಕಾರದೊಂದಿಗೆ ಕದನ ವಿರಾಮದಲ್ಲಿದೆ. ತನ್ನ ಆದಾಯವನ್ನು ನಾಗಾ ಜನರಿಂದಲೇ ಸಂಗ್ರಹಿಸುತ್ತದೆ. 2017ರ ಮಾರ್ಚ್ ತಿಂಗಳಿನಲ್ಲಿ ಕೊನೆಯಾದ ಹಣಕಾಸು ವರ್ಷದಲ್ಲಿ ಈ ಸರ್ಕಾರ ಮಂಡಿಸಿದ ಬಜೆಟ್ ಗಾತ್ರ ಒಟ್ಟು ₹ 170 ಕೋಟಿಯದು. ತನ್ನದೇ ಮಿಲಿಟರಿ ಶಿಬಿರಗಳನ್ನು ಹೊಂದಿದೆ. ನಾಗಾ ಯುವಕರನ್ನು ಭರ್ತಿ ಮಾಡಿಕೊಂಡು ಅವರಿಗೆ ಸಶಸ್ತ್ರ ಮಿಲಿಟರಿ ತರಬೇತಿ ನೀಡುತ್ತದೆ. ನಾಗಾ ಸೀಮೆಗಳನ್ನು ಹೊಂದಿರುವ ಅಸ್ಸಾಂ, ಅರುಣಾಚಲ, ಮಣಿಪುರದಲ್ಲಿ ತನ್ನ ಎದುರಾಳಿ ನಾಗಾ ಬಂಡುಕೋರ ಬಣಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತದೆ. ತೆರಿಗೆ ಎತ್ತಿ ಸಮಾನಾಂತರ ಸರ್ಕಾರ ನಡೆಸಲು ಎನ್.ಎಸ್.ಸಿ.ಎನ್-ಐ.ಎಂ.ಗೆ ಭಾರತ ಸರ್ಕಾರ ಮಾತ್ರವೇ ಅಲ್ಲದೆ ಈ ಮೂರು ರಾಜ್ಯ ಸರ್ಕಾರಗಳ ಅನುಮತಿ ಉಂಟು.

ನಾಗಾಗಳು ಭಾರತ ಸರ್ಕಾರದ ಉದ್ಯೋಗಿಗಳಾಗಿ ಪಡೆಯುವ ವೇತನದ ಮೇಲೆ ವಿಧಿಸುವ ತೆರಿಗೆಯಿಂದಲೇ ₹ 12.5 ಕೋಟಿ ಸಂಗ್ರಹಿಸುವುದಾಗಿ ಈ ಸಮಾನಾಂತರ ಬಜೆಟ್‌ನಲ್ಲಿ ತೋರಿಸಲಾಗಿದೆ. ಅಂದಹಾಗೆ ಈ ರಾಜ್ಯದ ಬುಡಕಟ್ಟು ನಾಗರಿಕರಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ ತ್ರಿಪುರಾ, ಮಣಿಪುರ, ಮಿಜೋರಂ ಹಾಗೂ ಅರುಣಾಚಲ ಪ್ರದೇಶದ ಬುಡಕಟ್ಟು ಜನರೂ ಆದಾಯ ತೆರಿಗೆ ಪಾವತಿ ಮಾಡಬೇಕಿಲ್ಲ.

‘ಕುಕ್ನಲಿಮ್’ ಎಂಬ ನಾಗಾ ಅಭಿನಂದನೆಯ ಅರ್ಥ ‘ನೆಲಕ್ಕೆ ಗೆಲುವಾಗಲಿ’ ಎಂದು. ಪ್ರಧಾನಿಯಾದ ಹೊಸತರಲ್ಲಿ ಮೋದಿ ನಾಗಾಲ್ಯಾಂಡ್‌ನ ‘ಹಾರ್ನ್ ಬಿಲ್ ಹಕ್ಕಿ ಉತ್ಸವ’ದಲ್ಲಿ ಪಾಲ್ಗೊಂಡಿದ್ದರು. ಗಡದ್ದು ಭಾಷಣದ ಕೊನೆಯಲ್ಲಿ ಮೂರು ಬಾರಿ ‘ಕುಕ್ನಲಿಮ್’ ಎಂದು ಘೋಷಿಸಿ ಸಭಿಕರನ್ನು ಅಚ್ಚರಿಗೆ ಕೆಡವಿದ್ದರು.

‘ನೆಲಕ್ಕೆ ಗೆಲುವಾಗಲಿ ಎಂಬ ಮೋದಿ ಘೋಷಣೆ ನಾಗಾ ಸಂಘರ್ಷ ಕುರಿತು ಗೌರವದಿಂದ ಹೇಳಿದ್ದಲ್ಲ. ನಿಮ್ಮನ್ನು ಹೇಗೆ ತಟಸ್ಥಗೊಳಿಸುತ್ತೇವೆ ನೋಡುತ್ತಿರಿ’ ಎಂಬುದೇ ಅದರ ನಿಜ ಮರ್ಮ ಎಂಬುದು ಭಾರತ ಸರ್ಕಾರಗಳನ್ನು ಸಂಶಯದಿಂದಲೇ ನೋಡುತ್ತ ಬಂದಿರುವ ನಾಗಾ ಜನರ ಸಿನಿಕತನ.

ಖಾಸಗಿ ಒಡೆತನದ ಜಮೀನನ್ನು ಸರ್ಕಾರ ಮತ್ತು ಕಾರ್ಪೊರೇಟ್‌ ಸಂಸ್ಥೆಗಳಿಗೆ ಪರಭಾರೆ ಮಾಡುವ, ದಟ್ಟ ಮಳೆಕಾಡುಗಳ ನಡುವೆ ಹೆದ್ದಾರಿಗಳು, ರೈಲುದಾರಿಗಳನ್ನು ನಿರ್ಮಿಸುವ, ತೈಲ ಮತ್ತು ನೈಸರ್ಗಿಕ ಅನಿಲಗಳ ಶೋಧನೆಯ, ಕಲ್ಲಿದ್ದಿಲು ಗಣಿಗಾರಿಕೆಯ ನಿಚ್ಚಳ ಹೊಳಹುಗಳು ನಾಗಾ ಸಮಾಜದ ಬಲಿಷ್ಠರ ಪಾಲಿಗೆ ಭೋಗ ವಿಲಾಸವನ್ನೂ ಹಣದ ಹೊಳೆಯನ್ನೂ ಹರಿಸುವ ದಾರಿ ತೆರೆಯುತ್ತಿವೆ. ತಟಸ್ಥಗೊಳಿಸುವುದು ಅಂದರೆ ಇನ್ನೇನು ಅರ್ಥ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಮೋದಿ ನೇತೃತ್ವದ ಸರ್ಕಾರದ ಅಭೂತಪೂರ್ವ ಸಾಧನೆ ಎಂದು ಬಣ್ಣಿಸಲಾದ 2015ರ ‘ನಾಗಾ ಶಾಂತಿ ಒಪ್ಪಂದ’ವನ್ನು ನಂತರದ ದಿನಗಳಲ್ಲಿ ‘ಚೌಕಟ್ಟು ಒಪ್ಪಂದ’ ಎಂದು ಕರೆಯಲಾಯಿತು.

ಎನ್.ಎಸ್.ಸಿ.ಎನ್- ಐ.ಎಂ. ತನ್ನ ಪರವಾದ ಮುಂಚೂಣಿಯ ಬಣವಾದರೂ, ಭಿನ್ನ ನಾಗಾ ಬಣಗಳು ಮತ್ತು ನಾಗಾ ನಾಗರಿಕ ಸಮಾಜದ ಒಟ್ಟು ಅಭಿಪ್ರಾಯವನ್ನು ಅದು ಪ್ರತಿನಿಧಿಸಬೇಕು. ಆಗಲೇ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಸಾಧ್ಯ. ಇಂತಹ ಪ್ರಾತಿನಿಧ್ಯ ಇನ್ನೂ ಆಗಿಲ್ಲ. ಯಾವುದೇ ವಿವರಗಳನ್ನೂ ಬಹಿರಂಗಪಡಿಸದೆ ‘ಸಮಾಲೋಚನೆ ಸಭೆ’ಗಳನ್ನು ನಡೆಸುತ್ತದೆ ಎನ್.ಎಸ್.ಸಿ.ಎನ್-ಐ.ಎಂ. ಜನರ ಸಹಿ– ವಿಳಾಸಗಳನ್ನು ಸಂಗ್ರಹಿಸಿ ತನಗೆ ಜನಾದೇಶವಿದೆ ಎಂದು ದೆಹಲಿಗೆ ತೋರಿಸುತ್ತದೆ. ವಾಸ್ತವ ಸ್ಥಿತಿ ಇದಕ್ಕಿಂತ ಭಿನ್ನ ಎನ್ನುತ್ತಾರೆ ನಾಗಾ ಜನ.

ಇತಿಹಾಸ ಮರುಕಳಿಸುತ್ತದೆ ಎನ್ನುವುದು ಜನಜನಿತ ನಂಬಿಕೆ. ಚೌಕಟ್ಟು ಒಪ್ಪಂದದ ಹಾಲಿ ಸ್ಥಿತಿ ಈ ಮಾತಿಗೆ ಹಿಡಿದ ಕನ್ನಡಿ ಹಿಡಿಯುವಂತಿದೆ. 1975ರ ಶಿಲ್ಲಾಂಗ್ ಒಪ್ಪಂದದ ಮಾದರಿಯಲ್ಲಿ ಈ ಒಪ್ಪಂದವೂ ರಕ್ತಪಾತಕ್ಕೇ ದಾರಿ ಮಾಡುವ ಮತ್ತೊಂದು ರಾಜಕೀಯ ಪ್ರಮಾದ ಆದೀತು ಎಂದು ನಾಗಾ ಟ್ರೈಬಲ್ ಕೌನ್ಸಿಲ್ ಮತ್ತು ನಾಗಾ ಗಾಂವ್ ಬುಢಾ ಫೆಡರೇಷನ್ ಎಚ್ಚರಿಕೆ ನೀಡಿದೆ.

ಚೌಕಟ್ಟು ಒಪ್ಪಂದವು ನಾಗಾಲ್ಯಾಂಡ್‌ನಲ್ಲಿ ಜನತಂತ್ರ ಮತ್ತು ಜನರ ಮೂಲಭೂತ ಸ್ವಾತಂತ್ರ್ಯವನ್ನು ಕಸಿಯುವ ಶಂಕೆಯನ್ನು ಹುಟ್ಟಿ ಹಾಕಿದೆ ಎನ್ನುತ್ತಾರೆ ನಿವೃತ್ತ ಐ.ಎ.ಎಸ್. ಅಧಿಕಾರಿಯೂ ಆದ ನಾಗಾ ವ್ಯವಹಾರಗಳ ಪರಿಣತ ಖೇಕಿಯ ಸೆಮಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry