ಸೋಮವಾರ, ಡಿಸೆಂಬರ್ 9, 2019
22 °C

ಮೋದಿ ಭಾಷಣದಲ್ಲಿ ಆತಂಕದ ಛಾಯೆ?

ಶೇಖರ್‌ ಗುಪ್ತ
Published:
Updated:
ಮೋದಿ ಭಾಷಣದಲ್ಲಿ ಆತಂಕದ ಛಾಯೆ?

ಪ್ರಧಾನಿ ನರೇಂದ್ರ ಮೋದಿ ಅವರ ಹಾವಭಾವಗಳಿಂದ ಅವರು ಏನನ್ನು ಹೇಳಲು ಹೊರಟಿದ್ದಾರೆ ಎನ್ನುವುದನ್ನು ಅರ್ಥೈಸಿಕೊಳ್ಳಲು ಹವಣಿಸುವುದು ವ್ಯರ್ಥ ಪ್ರಯತ್ನವಾಗಿರುತ್ತದೆ. ಸಾರ್ವಜನಿಕ ಸಭೆಗಳಲ್ಲಿ ಮಾತಿನ ಮೋಡಿ ಮಾಡಿ ಸಭಿಕರನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎನ್ನುವುದರಲ್ಲಿ ಅವರು ನಿಪುಣತೆ ಮೈಗೂಡಿಸಿಕೊಂಡಿದ್ದಾರೆ. ಅವರ ಮಾತಿನ ಶೈಲಿಯಲ್ಲಿ ಮನದ ಇಂಗಿತ ತಿಳಿದುಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ತಮ್ಮ ವಾಕ್ಪಟುತ್ವದ ಮೂಲಕ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಸುಲಭವಾಗಿ ಬಿಟ್ಟುಕೊಡದ ವಿಶಿಷ್ಟ ಮಾತುಗಾರರೂ ಅವರಾಗಿದ್ದಾರೆ. ಸದಾ ಚುನಾವಣಾ ಪ್ರಚಾರ ಧಾಟಿಯಲ್ಲಿ ಮಾತನಾಡುವ ರಾಜಕಾರಣಿಯೂ ಅವರಾಗಿದ್ದಾರೆ. ಅವರ ಈ ಮಾತಿನ ಬಂಡವಾಳವೇ ಅವರಿಗೆ 2014ರ ಚುನಾವಣೆಯಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿತ್ತು.

ಈಗ ಅವರು ಮತ್ತೆ ಚುನಾವಣಾ ಪ್ರಚಾರದ ಹಳಿಗೆ ಮರಳಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಮೋದಿ ಅವರು ಮಾಡಿದ ಭಾಷಣವನ್ನು ಆಸಕ್ತಿಯಿಂದ ಓದಿದವರಿಗೆ ಇದೊಂದು ಸಣ್ಣ ಸಲಹೆಯಷ್ಟೆ. ಪ್ರತಿಪಕ್ಷಗಳ ವಿರುದ್ಧದ ಅಸಡ್ಡೆ ಮತ್ತು ಸಾತ್ವಿಕ ರೋಷದ ಬದಲಿಗೆ, ಅವರ ಭಾಷಣದ ಉದ್ದಕ್ಕೂ ಕೋಪಾಗ್ನಿಯೇ ಪ್ರಧಾನವಾಗಿ ಎದ್ದು ಕಾಣುತ್ತಿತ್ತು.

ಅವರ ಮನಸ್ಸಿನಲ್ಲಿ ಕಾಂಗ್ರೆಸ್‌ ಪಕ್ಷವೇ ತುಂಬಿಕೊಂಡಿರುವುದು ಅವರ ಭಾಷಣಗಳನ್ನು ವಿಶ್ಲೇಷಿಸುವವರ ಅನುಭವಕ್ಕೆ ಬರುತ್ತಿದೆ. ಲೋಕಸಭೆಯಲ್ಲಿ ಕೇವಲ 44 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ಭಾಷಣದಲ್ಲಿ ನೀಡಬೇಕಾದ್ದಕ್ಕಿಂತ ಹೆಚ್ಚು ಆದ್ಯತೆ ನೀಡಿದ್ದು ಈ ಭಾಷಣದ ವಿಶೇಷತೆಯಾಗಿತ್ತು.

ಕಾಂಗ್ರೆಸ್‌ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿರುವುದರ ಜತೆಗೆ ವಂಶಾಡಳಿತವು ಮೋದಿ ಅವರ ಟೀಕೆಗೆ ಆಹಾರವಾಯಿತು. ನೆಹರೂ ಅವರನ್ನೂ ಇದು ತಳಕು ಹಾಕಿಕೊಂಡಿತ್ತು. ಜವಾಹರಲಾಲ್‌ ನೆಹರೂ ಮತ್ತವರ ಉತ್ತರಾಧಿಕಾರಿಗಳು ಎಸಗಿದ ಪಾಪಗಳನ್ನು ನೆನಪು ಮಾಡಿಕೊಂಡರು. ಕಾಶ್ಮೀರ ವಿವಾದಕ್ಕೆ ನೆಹರೂ ತಳೆದ ನಿಲುವೇ ಕಾರಣ. ಅವರ ಮಗಳು ಇಂದಿರಾ ಅವರ ತುರ್ತುಪರಿಸ್ಥಿತಿ, 1984ರ ಸಿಖ್‌ರ ನರಮೇಧಕ್ಕೆ ಇಂದಿರಾ ಅವರ ಮಗ ರಾಜೀವ್‌ ಗಾಂಧಿ, ರಾಜಕೀಯ ಉದ್ದೇಶ ಸಾಧನೆಗೆ ಸೋನಿಯಾ ಗಾಂಧಿ ಅವರು ಅವಸರದಲ್ಲಿ ತೆಗೆದುಕೊಂಡ ಆಂಧ್ರಪ್ರದೇಶ ರಾಜ್ಯ ವಿಭಜನೆ ಮತ್ತು ರಾಹುಲ್‌ ಗಾಂಧಿ ಅವರು ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಹರಿದು ಹಾಕಿದ್ದನ್ನು ಮೋದಿ ನೆನಪಿಸಿಕೊಂಡಿದ್ದಾರೆ.

ರಾಜಕೀಯ ಹೇಳಿಕೆಯಾಗಿ ಈ ಭಾಷಣ ಪರಿಗಣಿಸಿದರೆ, ಐದು ತಲೆಮಾರಿನ ವಂಶಾಡಳಿತ ವಿರುದ್ಧದ ಸಮರ್ಥನೀಯ ಆರೋಪಪಟ್ಟಿ ಇದಾಗಿದೆ. ಆದರೆ, ಮೋದಿ ಅವರು ಕಾಂಗ್ರೆಸ್‌ ಅನ್ನು ಟೀಕಿಸುವ ಭರದಲ್ಲಿ ತಮ್ಮದೇ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿಕೊಳ್ಳಲು ತುಂಬ ಕಡಿಮೆ ಸಮಯ ಮೀಸಲು ಇಟ್ಟಿದ್ದರು.

ಸಾಂಪ್ರದಾಯಿಕ ರಾಜಕೀಯ ವಿಶ್ಲೇಷಣೆ ಪ್ರಕಾರ, ಪ್ರತಿಪಕ್ಷದ ಕ್ರೋಧಾವಿಷ್ಠ ನಾಯಕನೊಬ್ಬ ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವಂತಹ ರೀತಿಯಲ್ಲಿ ಈ ಭಾಷಣ ಅದ್ಭುತವಾಗಿತ್ತು ಎಂದೂ ಇದನ್ನು ಪರಿಗಣಿಸಬಹುದಾಗಿದೆ. ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಆಧರಿಸಿ ಮರು ಹೋರಾಟ ನಡೆಸಿ ಅಧಿಕಾರದಲ್ಲಿ ಇರುವವರನ್ನು ಧೈರ್ಯಗೆಡಿಸುವ ರೀತಿಯಲ್ಲಿಯೂ ಈ ಭಾಷಣ ಇತ್ತು. ಅವರ ಬಡಬಡಿಕೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅತಿಹೆಚ್ಚು ಮಹತ್ವ ಕೊಟ್ಟಿರುವುದೂ ಕಂಡು ಬರುತ್ತದೆ.

ಅವರನ್ನು ಚೆನ್ನಾಗಿ ಬಲ್ಲವರು ಮತ್ತು ಅವರ ಜತೆ ಕೆಲಸ ಮಾಡಿದವರ ಪ್ರಕಾರ, ಮೋದಿ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸುವುದರಲ್ಲಿ ಯಾವತ್ತೂ ನಂಬಿಕೆ ಇಟ್ಟವರಲ್ಲ. ಮೋದಿ ಅವರು ನಿರಂತರವಾಗಿ ಚುನಾವಣಾ ಪ್ರಚಾರ ಧಾಟಿಯಲ್ಲಿಯೇ ಮಾತನಾಡುತ್ತ ಬಂದಿದ್ದಾರೆ. ಕೇವಲ 44 ಸಂಸದರನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷವನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಅತಿ ಹೆಚ್ಚು ಬಾರಿ ಪ್ರಸ್ತಾಪಿಸಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದೂ ಕೆಲವರು ಸಮರ್ಥಿಸಿಕೊಳ್ಳಬಹುದು.

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಹೇಗೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು ಎನ್ನುವುದನ್ನು ಸದ್ಯಕ್ಕೆ ಬದಿಗಿಟ್ಟು ನೋಡಿದರೂ, ಈ ವರ್ಷ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌, ಬಿಜೆಪಿಗೆ ಪ್ರಮುಖ ಸವಾಲು ಆಗಿರುವುದಂತೂ ನಿಜ. ಸದ್ಯಕ್ಕೆ ಕಾಂಗ್ರೆಸ್‌, ಚುನಾವಣೆ ಎದುರಿಸಲಿರುವ ಕರ್ನಾಟಕ ಮತ್ತು ಮೇಘಾಲಯದಲ್ಲಿ ಅಧಿಕಾರದಲ್ಲಿ ಇದೆ. ಉಪ ಚುನಾವಣೆಗಳಲ್ಲಿನ ಯಶಸ್ಸು ಆಧರಿಸಿ ಹೇಳುವುದಾದರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.

2018ರಲ್ಲಿ ನಡೆಯಲಿರುವ ಆರು ಅಥವಾ ಏಳು ರಾಜ್ಯಗಳ ವಿಧಾನಸಭಾ ಚುನಾವಣೆಗಳು 2019ರ ಸಾರ್ವತ್ರಿಕ ಚುನಾವಣಾ ಫಲಿತಾಂಶದ ದಿಸೆಯನ್ನು ನಿರ್ಧರಿಸಲಿವೆ ಎನ್ನುವುದು ಮೋದಿ ಅವರಿಗೆ ಚೆನ್ನಾಗಿ ಗೊತ್ತಿದೆ. ಒಂದು ವೇಳೆ ಕಾಂಗ್ರೆಸ್‌, ಕರ್ನಾಟದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಮುಂಬರುವ ಚುನಾವಣಾ ಗಾಳಿ ಅದರ ಪರವಾಗಿಯೇ ಬೀಸಲಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳಲ್ಲಿಯೂ ಅದು ಇದೇ ಯಶೋಗಾಥೆಯನ್ನು ಮುಂದುವರೆಸಬೇಕಾಗುತ್ತದೆ. ಮೂರು ರಾಜ್ಯಗಳ ಪೈಕಿ ಎರಡರಲ್ಲಾದರೂ ಕಾಂಗ್ರೆಸ್‌ ಗೆಲುವು ಸಾಧಿಸಿದರೆ 2019ರ ಚುನಾವಣೆ ವೇಳೆಗೆ ಯಾವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಹೇಳುವುದು ಅಸಾಧ್ಯದ ಮಾತು. ಇದರ ಬದಲಿಗೆ ಬಿಜೆಪಿಯು ಕರ್ನಾಟಕವನ್ನು ಕಾಂಗ್ರೆಸ್‌ ಹಿಡಿತದಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಚುನಾವಣಾ ಹೋರಾಟದ ಚಿತ್ರಣವೇ ಬದಲಾಗಲಿದೆ. ರಾಜಸ್ಥಾನ ಉಪಚುನಾವಣೆಯಲ್ಲಿನ ಕಾಂಗ್ರೆಸ್‌ ಗೆಲುವಿನ ಸಾಧನೆ ಮಸುಕಾಗಲಿದೆ.

ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ತಂಡದ ಕೋಚ್‌ನ ಆದೇಶವನ್ನು ಶಿರಸಾವಹಿಸಿ ಪಾಲಿಸುವಂತೆ ಮೋದಿ ಒಂದೊಂದೆ ಹೆಜ್ಜೆ ಇಡುವುದಿಲ್ಲ. ಇತರ ಸಂಗತಿಗಳನ್ನು ಪಕ್ಕಕ್ಕಿಟ್ಟು ಬೌಲರ್ ಎಸೆಯುವ ಚೆಂಡಿನ ಮೇಲಷ್ಟೆ ಗಮನ ಕೇಂದ್ರೀಕರಿಸಿ ಆಡುವ ಆಟಗಾರರಿಗಿಂತ ಮೋದಿ ಭಿನ್ನವಾಗಿ ತಮ್ಮ ರಾಜಕೀಯ ನಡೆ ನಿರ್ಧರಿಸುತ್ತಾರೆ. ಪಿಚ್ ವರ್ತಿಸುವ ಪರಿ, ಹವಾಮಾನ ಮತ್ತು ಅಂಪೈರ್ ತಳೆಯುವ ನಿಲುವು ಆಧರಿಸಿ ಬ್ಯಾಟ್ ಬೀಸುವ ದಾಂಡಿಗನಂತೆ ಇವರು ತಮ್ಮ ಎದುರಾಳಿಗಳ ಮೇಲೆ ಮುಗಿ ಬೀಳುತ್ತಾರೆ. ಮಧ್ಯಯುಗದಲ್ಲಿ ಬಳಕೆಯಲ್ಲಿದ್ದ ಹೇಗಾದರೂ ಗೆಲ್ಲಬೇಕೆಂಬ ಸೂತ್ರವನ್ನೇ ಇವರು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದ್ದಾರೆ.

ಗುಜರಾತ್‌ನಲ್ಲಿ ಗೆಲುವು ಮರೀಚಿಕೆಯಾಗಲಿದೆ ಎಂಬ ಅನುಮಾನ ಕಾಡಿದಾಗ, ‘ಕಾಂಗ್ರೆಸ್ ಪಾಕಿಸ್ತಾನದ ಜತೆ ಕೈಜೋಡಿಸಿದೆ, ರಾಜ್ಯದಲ್ಲಿ ಮುಸ್ಲಿಂ ಮುಖ್ಯಮಂತ್ರಿಯನ್ನು ಅಧಿಕಾರಕ್ಕೆ ತರಲು ಡಾ. ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಜತೆ ಸಂಚು ನಡೆಸಿದ್ದಾರೆ’ ಎನ್ನುವ ಅದ್ಭುತ ಒಳಸಂಚಿನ ಕಥೆಯನ್ನೂ ಹೆಣೆದಿದ್ದರು.

ಮೋದಿ ಅಥವಾ ಮೋದಿ ಮತ್ತು ಅಮಿತ್ ಶಾ ಅವರಿಬ್ಬರೂ ಸಂಪೂರ್ಣ ರಾಜಕೀಯಮಯವಾದ ಕಾರ್ಯಶೈಲಿ ರೂಢಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದೊಂದೇ ಅವರ ಉದ್ದೇಶ ಆಗಿರುವುದಿ‌ಲ್ಲ. ಪ್ರತಿಪಕ್ಷಗಳನ್ನು ಸೋಲಿಸಿ ಹೂತು ಹಾಕುವುದೇ ಅವರ ಹವಣಿಕೆಯಾಗಿದೆ. ಈ ಚುನಾವಣಾ ರಣತಂತ್ರ ಅದೆಷ್ಟೇ ನ್ಯಾಯಯುತವಾಗಿರಲಿ, ಆರು ತಿಂಗಳ ಹಿಂದೆ ಇದು ತುಂಬ ಸುಲಭವಾಗಿ ಕಂಡಿತ್ತು. ಅದರೆ, ಈಗ ಪರಿಸ್ಥಿತಿ ಬದಲಾಗಿದೆ.

ಹೇಳಿಕೊಂಡಷ್ಟು ಸುಲಭವಾಗಿರದ ಗುಜರಾತ್ ಗೆಲುವು ಮತ್ತು ರಾಜಸ್ಥಾನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಭಾರಿ ಅಂತರದ ಸೋಲು ಪಕ್ಷಕ್ಕೆ ಮುಂಬರುವ ದಿನಗಳ ಸಂಕಷ್ಟಗಳ ಸಂಕೇತ ರವಾನಿಸಿವೆ.

ಬಿಜೆಪಿಯಲ್ಲಿ ತಲ್ಲಣ ಮೂಡಿಸಿರುವ ಇತರ ಹಲವು ವಿದ್ಯಮಾನಗಳೂ ಇವೆ. ಹೊಸ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಕಾಂಗ್ರೆಸ್‌ನಲ್ಲಿ ಒಲವೂ ಹೆಚ್ಚಿದೆ. ದೇಶದ ಅನೇಕ ಭಾಗಗಳಲ್ಲಿ ಅವರ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವವರ ಸಂಖ್ಯೆಯೂ ಹೆಚ್ಚಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲು ಸದ್ಯಕ್ಕೆ ಇತರ ವಿರೋಧ ಪಕ್ಷಗಳಂತೂ ಸಿದ್ಧವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೆ ಮಾತ್ರ ಅವುಗಳ ಧೋರಣೆ ಬದಲಾಗಲಿದೆ.

ನಾವಿಲ್ಲಿ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಮೋದಿ ಮತ್ತು ಶಾ ಬರೀ ತಾರಾ ಪ್ರಚಾರಕರಲ್ಲ. ಚುನಾವಣಾ ಕಾರ್ಯತಂತ್ರ ಹೆಣೆದು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಚಾಣಾಕ್ಷಮತಿಗಳೂ ಹೌದು. 2014ರಲ್ಲಿ ಗೆದ್ದಿದ್ದ 44 ಸೀಟುಗಳಿಗಷ್ಟೇ ಮುಂದೆಯೂ ಕಾಂಗ್ರೆಸ್‌ ಪಕ್ಷವನ್ನು ಸೀಮಿತಗೊಳಿಸುವುದರಲ್ಲಿಯೇ ಅವರು ಸಂತೃಪ್ತಿ ಕಾಣಲಿದ್ದಾರೆ. ಬಿಜೆಪಿಯು ಆ ಚುನಾವಣೆಯಲ್ಲಿ 17 ಕೋಟಿ ಮತಗಳನ್ನು ಬಾಚಿಕೊಂಡಿತ್ತು. ಕಾಂಗ್ರೆಸ್‌ ಪಾಲಿಗೆ ಆ ಚುನಾವಣೆ ಭಾರಿ ವಿಪತ್ತು ತಂದೊಡ್ಡಿದ್ದರೂ 11 ಕೋಟಿಗಳಷ್ಟು ಮತಗಳನ್ನು ಪಡೆದುಕೊಂಡಿತ್ತು.

2019ರ ಚುನಾವಣೆಯ ಗೆಲುವಿನ ಓಟದಲ್ಲಿ ಈಗಲೂ ಬಿಜೆಪಿ ಮತ್ತು ಎನ್‌ಡಿಎ ಮುಂಚೂಣಿಯಲ್ಲಿ ಇವೆ. ಒಂದು ವೇಳೆ ಕಾಂಗ್ರೆಸ್‌ ಬುಟ್ಟಿಗೆ ಬೀಳುವ ಮತಗಳ ಪ್ರಮಾಣ 11 ಕೋಟಿಗಳಿಂದ 13 ಕೋಟಿಗಳಿಗೆ ಏರಿಕೆಯಾದರೆ ಅದು ಎನ್‌ಡಿಎ ಪಾಲಿಗೆ ಗಂಡಾಂತರಕಾರಿಯಾಗಿ ಪರಿಣಮಿಸಲಿದೆ. ಅಂತಹ ಪರಿಸ್ಥಿತಿ ಎದುರಾಗುವುದನ್ನು ತಪ್ಪಿಸಲು ಮೋದಿ ಮತ್ತು ಶಾ ಈಗಿನಿಂದಲೇ ಪ್ರಯತ್ನಿಸುತ್ತಿದ್ದಾರೆ.

1984ರಿಂದೀಚೆಗೆ ನಡೆದ ಚುನಾವಣೆಗಳ ಪೈಕಿ 2014ರ ಫಲಿತಾಂಶ ಹೊರತುಪಡಿಸಿ, ದೇಶದಲ್ಲಿ ಯಾವುದೇ ಪಕ್ಷವು ಸಂಪೂರ್ಣ ಬಹುಮತ ಪಡೆದು ಕೇಂದ್ರದಲ್ಲಿ ತನ್ನ ಸ್ವಂತ ಬಲದ ಆಧಾರದ ಮೇಲೆ ಸರ್ಕಾರ ರಚಿಸಿಲ್ಲ. ಹೀಗಾಗಿ ಮೈತ್ರಿಕೂಟ ಸರ್ಕಾರಕ್ಕೆ ‘ಬೆಸ್ಟ್‌ ಆಫ್‌ 9 ಸೆಟ್ಸ್‌’ಗಳ ಟೆನಿಸ್‌ ಪಂದ್ಯದ ಸೂತ್ರ ಅನ್ವಯಿಸಲು ನಾನು ಇಷ್ಟಪಡುವೆ. ಒಂಬತ್ತು ರಾಜ್ಯಗಳು ದೇಶದ ರಾಜಕೀಯ ಚಿತ್ರಣದ ಹಣೆಬರಹ ಬರೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ (2014ರಲ್ಲಿ ತೆಲಂಗಾಣ ಒಳಗೊಂಡಂತೆ), ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಟೆನಿಸ್‌ ಪಂದ್ಯದ 9 ‘ಸೆಟ್ಸ್‌’ಗಳಾಗಿವೆ.

ಈ ಒಂಬತ್ತು ರಾಜ್ಯಗಳ ಪೈಕಿ ಐದರಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟವು ಗೆಲುವು ಸಾಧಿಸುವುದೋ ಅದು ಕೇಂದ್ರದಲ್ಲಿ ಅಧಿಕಾರ ನಡೆಸಲು ಅರ್ಹತೆ ಗಿಟ್ಟಿಸುತ್ತದೆ. ಈ ರಾಜ್ಯಗಳನ್ನು ಪ್ರತಿನಿಧಿಸುವ ಸಂಸತ್‌ ಸದಸ್ಯರ ಒಟ್ಟು ಸಂಖ್ಯೆ 351 ಆಗುತ್ತದೆ. ಐದು ರಾಜ್ಯಗಳಲ್ಲಿ ಗೆಲುವು ಸಾಧಿಸುವ ಪಕ್ಷ ಅಥವಾ ಮೈತ್ರಿಕೂಟದ ಸಂಖ್ಯಾಬಲ 200 ದಾಟುತ್ತದೆ ಎನ್ನುವುದು ನನ್ನ ವಾದವಾಗಿದೆ. ಸರಳ ಬಹುಮತಕ್ಕೆ ಬೇಕಾದ 272 ಸಂಖ್ಯಾಬಲ ಒಗ್ಗೂಡಿಸಲು ಸಣ್ಣ ಪಕ್ಷಗಳನ್ನು ಸೆಳೆಯಲು ಅನುಕೂಲ ಆಗಲಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಸ್ವಂತದ ಬಲದ ಮೇಲೆ ಸರಳ ಬಹುಮತಕ್ಕೆ ಅಗತ್ಯವಾದ 272 ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ (282 ಸ್ಥಾನ) ಗೆಲುವು ಸಾಧಿಸಿತ್ತು.

ಈ ಲೆಕ್ಕಾಚಾರವೇ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಹೇಗೆ ತಲೆನೋವಾಗಿ ಪರಿಣಮಿಸಬಹುದು ಎನ್ನುವುದನ್ನು ನಾವಿಲ್ಲಿ ನೋಡಬಹುದು. 282 ಸ್ಥಾನಗಳಲ್ಲಿ ರಾಜಸ್ಥಾನದ ಎಲ್ಲ 25 ಸೀಟು, ಮಧ್ಯಪ್ರದೇಶ (29ರಲ್ಲಿ 27), ಮಹಾರಾಷ್ಟ್ರ (48ರಲ್ಲಿ 42– ಶಿವಸೇನೆ ಜತೆ ಮೈತ್ರಿಕೂಟ), ಉತ್ತರ ಪ್ರದೇಶ (80ರಲ್ಲಿ 73) ಮತ್ತು ಬಿಹಾರದಲ್ಲಿ 40ರ ಪೈಕಿ 31ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಗುಜರಾತ್‌ನ ಎಲ್ಲ 26 ಸ್ಥಾನಗಳ ಜತೆಗೆ ಸಣ್ಣ ರಾಜ್ಯಗಳಾದ ಜಾರ್ಖಂಡ್‌, ಛತ್ತೀಸಗಡ, ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿಯೂ ಭರ್ಜರಿ ಗೆಲುವು ಸಾಧಿಸಿತ್ತು.

ಹಿಂದಿ ಭಾಷೆಯ ಹೃದಯ ಭಾಗ ಮತ್ತು ಪಶ್ಚಿಮ ಭಾರತದಲ್ಲಿಯೇ ಬಿಜೆಪಿ ಅತ್ಯಧಿಕ ಸಂಖ್ಯೆಯ ಸಂಸದರನ್ನು ಹೊಂದಿರುವುದೇ ಅದಕ್ಕೆ ಸಮಸ್ಯೆಯಾಗಿದೆ. ದಕ್ಷಿಣ ಮತ್ತು ಪೂರ್ವ ಭಾರತವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ. 2014ರಲ್ಲಿನ ಬಿಜೆಪಿಯ ಅಭೂತಪೂರ್ವ ಗೆಲುವು 1977ರಲ್ಲಿನ ಜನತಾ ಪಕ್ಷದ ಗೆಲುವಿನಂತೆ ಕಂಡುಬರುತ್ತದೆ.

ಭರ್ಜರಿ ಗೆಲುವು ಸಾಧಿಸಿದ್ದ ರಾಜ್ಯಗಳಲ್ಲಿನ 2014ರ ಸಾಧನೆ 2019ರಲ್ಲಿ ಮರುಕಳಿಸಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಮನದಟ್ಟಾಗಿದೆ. ಗುಜರಾತ್‌ನಲ್ಲಿಯೂ ಪಕ್ಷವು ಕೆಲ ಸೀಟುಗಳನ್ನು ಕಳೆದುಕೊಳ್ಳಲಿದೆ. ಮೋದಿ ಇಲ್ಲಿಂದಲೇ ಸ್ಪರ್ಧಿಸಿದರೂ ಮತದಾರರು ತಮ್ಮ ಹತಾಶೆಗಳನ್ನು ಮರೆತು ಬೆಂಬಲಿಸಿದರೂ ಹಿಂದಿನ ಸಾಧನೆ ಮರುಕಳಿಸಲಾಗದು.

ದೇಶದ ಸದ್ಯದ ರಾಜಕೀಯ ಭೂಪಟದ ಮೇಲೆ ಕಣ್ಣಾಡಿಸಿದರೆ 272 + ಸಂಸದರನ್ನು ಗೆಲ್ಲಿಸಿಕೊಂಡು ಬರುವ ಸಾಧನೆ ಪುನರಾವರ್ತನೆ ಮಾಡುವುದು ಬಿಜೆಪಿಗೆ ಕಷ್ಟವಾಗಿರಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ (ಶಿವಸೇನೆಯು ಬಿಜೆಪಿಯಿಂದ ದೂರ ಸರಿದರೂ) ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷ ಕೆಲವು ಸೀಟುಗಳಿಗೆ ಎರವಾಗಲಿದೆ. ಈಶಾನ್ಯ ಭಾರತದಲ್ಲಿ ಕೆಲ ಹೆಚ್ಚುವರಿ ಸೀಟುಗಳನ್ನು ಗೆದ್ದರೂ, ಇತರೆಡೆ ಈ ಕೊರತೆ ತುಂಬಿಕೊಳ್ಳಲು ಸಾಧ್ಯವಾಗದು.

ಈ ಕಾರಣಕ್ಕೇನೆ ಬಿಜೆಪಿಗೆ ಸ್ಪಷ್ಟ ಬಹುಮತ ಬರದ, ಆದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅಧಿಕಾರಕ್ಕೆ ಬರುವ ಕನಸು ಕಾಣಬೇಡಿ ಎಂದು ಕಾಂಗ್ರೆಸ್‌ಗೆ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ.

ಇತ್ತೀಚೆಗೆ ‘ಇಂಡಿಯಾ ಟುಡೆ’ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 100ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎನ್ನುವುದು ತಿಳಿದುಬಂದಿದೆ. ಇದು ಪಕ್ಷದ ಪಾಲಿಗೆ ಬಹುದೊಡ್ಡ ಚೇತರಿಕೆಯಾಗಿರಲಿದೆ. ಆರು ತಿಂಗಳ ಹಿಂದೆ ಬಿಜೆಪಿ ಬಹುಮತ ಹೊಂದಿಲ್ಲದ ಎನ್‌ಡಿಎ ಸರ್ಕಾರದ ಸಾಧ್ಯತೆ ಬಗ್ಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ, ಇಂದು ಅಂತಹ ಸಾಧ್ಯತೆ ನಿಚ್ಚಳವಾಗಿ ಕಂಡು ಬರುತ್ತಿದೆ.

ಈ ಮೊದಲೇ ಹೇಳಿದಂತೆ ಮೋದಿ ಅವರದ್ದು ಸಂಪೂರ್ಣ ಅಧಿಕಾರಯುತ ಸ್ವಭಾವ. ಅವರಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಧೋರಣೆ ಕಂಡು ಬರುವುದೇ ಇಲ್ಲ. ಐದು ವರ್ಷಗಳ ಕಾಲ ಸಂಪೂರ್ಣ ಬಹುಮತದ ಸರ್ಕಾರ ನಡೆಸಿದ ಅವರಿಗೆ ಕೊಡು –ತೆಗೆದುಕೊಳ್ಳುವ ಮೈತ್ರಿಕೂಟ ಸರ್ಕಾರ ರಚನೆ ಅಪಥ್ಯವಾಗಿರುತ್ತದೆ. ಅದೇ ಕಾರಣಕ್ಕೆ ಅವರು 2019ರ ಚುನಾವಣೆಗೆ ಈಗಿನಿಂದಲೇ ಪ್ರಚಾರಕ್ಕೆ ಶುರುವಿಟ್ಟುಕೊಂಡಿದ್ದಾರೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರತಿಕ್ರಿಯಿಸಿ (+)