ಮೋದಿ ವಿರುದ್ಧ ಸುಳ್ಳು ಆರೋಪ ಬೇಡ

7

ಮೋದಿ ವಿರುದ್ಧ ಸುಳ್ಳು ಆರೋಪ ಬೇಡ

Published:
Updated:
ಮೋದಿ ವಿರುದ್ಧ ಸುಳ್ಳು ಆರೋಪ ಬೇಡ

‘ಭಾರತವನ್ನು ಉದಾರವಾದಿ ಅಲ್ಲದ ದೇಶವನ್ನಾಗಿ ಪರಿವರ್ತಿಸಿದೆ’ ಎಂಬುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಹೊರಿಸಿರುವ ತಪ್ಪು ದೋಷಾರೋಪಗಳ ಪೈಕಿ ಒಂದು.

‘ಉದಾರವಾದಿ ಅಲ್ಲದ’ ಎಂದರೆ ಅಸಹನೆ ಹೊಂದಿರುವ ಎಂಬ ಅರ್ಥವಿದೆ. ಹಾಗೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕ್ರಿಯಾ ಸ್ವಾತಂತ್ರ್ಯಗಳ ಮೇಲೆ ನಿರ್ಬಂಧಗಳನ್ನು ವಿಧಿಸುವುದಕ್ಕೆ ಬೆಂಬಲ ನೀಡುವ ವ್ಯವಸ್ಥೆ ಎಂಬ ಅರ್ಥವೂ ಇದೆ. ಈ ವಿಚಾರದಲ್ಲಿ ಮೋದಿ ನೇತೃತ್ವದ ಸರ್ಕಾರದ ಮೇಲೆ ತಪ್ಪಾಗಿ ದೋಷ ಹೊರಿಸಲಾಗಿದೆ. ಏಕೆಂದರೆ, ಭಾರತ ಸರ್ಕಾರ ಯಾವತ್ತೂ ಉದಾರವಾದಿ ಆಗಿರಲಿಲ್ಲ- ಕಾಂಗ್ರೆಸ್ಸಿನ ಆಳ್ವಿಕೆ ಇದ್ದಾಗ ಕೂಡ.

ಒಂದಲ್ಲಾ ಒಂದು ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ನಾಗರಿಕ ಸಮಾಜದ ಗುಂಪುಗಳು ಹಾಗೂ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ನಾನು ಹೇಳಿದ ಮಾತಿಗೆ ಸಹಮತ ಸೂಚಿಸುತ್ತವೆ. ಆದಿವಾಸಿಗಳ, ಕಾಶ್ಮೀರಿಗಳ, ಈಶಾನ್ಯ ರಾಜ್ಯಗಳ ಜನರ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳು ಮುನ್ನೆಲೆಗೆ ಬಂದಿರುವುದು ತೀರಾ ಈಚೆಗಿನ ದಿನಗಳಲ್ಲಿ ಅಲ್ಲ. ಈ ಸಮಸ್ಯೆಗಳು, ಈ ವಿಚಾರಗಳು ದಶಕಗಳಿಂದಲೂ ನಮ್ಮೊಂದಿಗೆ ಇವೆ. ಈ ಸಮಸ್ಯೆಗಳಿಗೆ ಮೂಲ ಇಂದಿನ ಸರ್ಕಾರ ಅಥವಾ ಇಂದಿನ ಪ್ರಧಾನಿ ಎಂದು ಭಾವಿಸುವುದು ತಪ್ಪು.

ಖನಿಜ ಸಂಪತ್ತಿನ ವಿಚಾರದಲ್ಲಿ ತೀರಾ ಶ್ರೀಮಂತವಾಗಿರುವ ಆದಿವಾಸಿಗಳ ನೆಲವನ್ನು ದುರ್ಬಳಕೆ ಮಾಡಿಕೊಳ್ಳುವ ಪದ್ಧತಿ ನೆಹರೂ ಆಡಳಿತ ಅವಧಿಯಲ್ಲಿ ಹಾಗೂ ಅವರಿಗಿಂತ ಮೊದಲೇ ಆರಂಭವಾಯಿತು. ಆದಿವಾಸಿಗಳ ವಿರುದ್ಧ ಕೆಲವು ಅತ್ಯಂತ ಅಶ್ಲೀಲ ಹಾಗೂ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿ. ಕೆಲವರ ವಿರುದ್ಧ ಎಸಗಲಾಯಿತು ಎನ್ನಲಾದ ಅಪರಾಧ ಕೃತ್ಯಗಳಿಗಾಗಿ ಇಡೀ ಆದಿವಾಸಿ ಸಮೂಹವನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ಭಾರತದ ಹೃದಯ ಭಾಗದಲ್ಲಿ ಬೀಡುಬಿಟ್ಟ ಅರೆಸೈನಿಕ ಪಡೆಯ ಸಾವಿರಾರು ಸಿಬ್ಬಂದಿಯೇ ಈ ಮಾತಿಗೆ ಆಧಾರ.

2015ರ ಅಕ್ಟೋಬರ್‌ನಲ್ಲಿ ದಿನಪತ್ರಿಕೆಗಳಲ್ಲಿ ಒಂದು ಸುದ್ದಿ ಪ್ರಕಟವಾಯಿತು. ಅದರ ಶೀರ್ಷಿಕೆ ಹೀಗಿತ್ತು: ‘ಮಾವೊವಾದಿಗಳ ವಿರುದ್ಧದ ಕಾರ್ಯಾಚರಣೆ: ಆಗಸದಿಂದ ಪ್ರತೀಕಾರದ ದಾಳಿ ನಡೆಸಲಿರುವ ವಾಯುಪಡೆ’. ಭಾರತೀಯ ವಾಯುಪಡೆಯು ತನ್ನದೇ ನಾಗರಿಕರ ಮೇಲೆ ದಾಳಿ ನಡೆಸಲು ರಷ್ಯಾ ನಿರ್ಮಿತ ಎಮ್‌ಐ-17 ಹೆಲಿಕಾಪ್ಟರ್‌ಗಳನ್ನು ಬಳಸಲಿದೆ ಎಂಬುದು ಈ ವರದಿಯಲ್ಲಿ ಇದ್ದ ಅಂಶ.

ವಾಯುಪಡೆಯು ‘ಸಿದ್ಧತೆಯನ್ನು ಯಶಸ್ವಿಯಾಗಿ’ ನಡೆಸಿದೆ, ‘ಬಿಜಾಪುರದ ಆಗಸದಲ್ಲಿ ಹಾರಾಟ ನಡೆಸಿರುವ ವಾಯುಪಡೆಯ ಮೂರು ಹೆಲಿಕಾಪ್ಟರ್‌ಗಳು ಗುಂಡಿನ ಮಳೆಗರೆಯುವ ಅಭ್ಯಾಸ ನಡೆಸಿವೆ’ ಎಂಬ ವಿಚಾರವೂ ವರದಿಯಲ್ಲಿ ಇತ್ತು. ಇಲ್ಲಿ ‘strafing’ ಎಂಬ ಪದ ಬಳಸಲಾಗಿತ್ತು. ಇದರ ಅರ್ಥ, ಹೆಲಿಕಾಪ್ಟರ್‌ಗಳನ್ನು ಕೆಳಮಟ್ಟದಲ್ಲಿ ಹಾರಿಸುತ್ತ ಅವುಗಳಿಂದ ಬಾಂಬ್‌ ದಾಳಿ ನಡೆಸುವುದು ಅಥವಾ ಅವುಗಳಿಂದ ಮೆಷಿನ್ ಗನ್ ಬಳಸಿ ದಾಳಿ ನಡೆಸುವುದು. ಮನುಷ್ಯನ ವಾಸ ಸ್ವಲ್ಪವೂ ಇಲ್ಲದ ಭೂಪ್ರದೇಶ ಭಾರತದಲ್ಲಿ ಇಲ್ಲ ಎಂಬುದು ಈ ದೇಶದ ಬಗ್ಗೆ ತಿಳಿದಿರುವವರಿಗೆ ಗೊತ್ತಿದೆ. ಹಾಗಾಗಿ, ವಾಯುಪಡೆಯು ಬಾಂಬ್ ದಾಳಿ ನಡೆಸುವ ಹಾಗೂ ಗುಂಡಿನ ಮಳೆಗರೆಯುವ ಅಭ್ಯಾಸ ನಡೆಸಿದ ಪ್ರದೇಶದಲ್ಲಿ ಏನಾಯಿತು ಎಂಬುದನ್ನು ಅರಿಯುವ ಕುತೂಹಲ ಉಂಟಾಗುತ್ತದೆ.

ಈ ಪ್ರದೇಶದಲ್ಲಿ ಈ ಪ್ರಮಾಣದ ಹಿಂಸೆ ಹೊಸದೇನೂ ಅಲ್ಲ. ಪ್ರತಿಭಟನೆ ನಡೆಸುವ ತನ್ನ ಪ್ರಜೆಗಳನ್ನು ಭಾರತದ ಪ್ರಭುತ್ವ ಬ್ರಿಟಿಷರ ಕಾಲದಿಂದಲೂ ಮೆಷಿನ್ ಗನ್‌ಗಳನ್ನು ಬಳಸಿ ಹತ್ತಿಕ್ಕಿದೆ. ಹತ್ತಿಕ್ಕುವ ಕಾರ್ಯ ಅದಕ್ಕೂ ಮೊದಲೂ ನಡೆದಿದೆ. ಹೀಗೆ ಹತ್ತಿಕ್ಕುವ ಕಾರ್ಯ ಮೋದಿ ಅವರಿಂದಲೇ ಆರಂಭವಾಯಿತು ಎಂದು ಭಾವಿಸುವುದು ತಪ್ಪು. ಅಷ್ಟೇ ಅಲ್ಲ, ಹಾಗೆ ಹೇಳುವುದು ತಪ್ಪು ದಾರಿಗೆ ಎಳೆಯುವ, ವಾಸ್ತವವನ್ನು ನಿರ್ಲಕ್ಷಿಸುವ ಮಾತು ಆಗುತ್ತದೆ.  ಭಾರತದ ಪ್ರಭುತ್ವವು ತನ್ನ ಪ್ರಜೆಗಳ ಜೊತೆ ವರ್ತಿಸಿದ್ದು ಎಂದಿಗೂ ಹೀಗೆಯೇ- ಮೋದಿ ಅವರಿಗೆ ಮೊದಲೂ, ಮೋದಿ ಅವರ ನಂತರವೂ.

ನಾನು ಕೆಲವು ತಿಂಗಳುಗಳ ಹಿಂದೆ ಪಿ. ಚಿದಂಬರಂ ಜೊತೆ ಮಾತನಾಡುತ್ತಿದ್ದೆ. ಕೇಂದ್ರ ಸರ್ಕಾರವು ಕಾಶ್ಮೀರದಿಂದ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ’ಯನ್ನು (ಎಎಫ್‌ಎಸ್‌ಪಿಎ) ಹಿಂದಕ್ಕೆ ಪಡೆಯಬೇಕು ಎಂದು ಅವರು ಹೇಳಿದರು. ಚಿದಂಬರಂ ಅವರು ಕೇಂದ್ರದ ಗೃಹ ಸಚಿವರಾಗಿದ್ದಾಗಲೂ ಇದೇ ಮಾತು ಹೇಳಬೇಕಿತ್ತು. ಆಗ ಅವರ ಮಾತಿಗೆ ಹೆಚ್ಚಿನ ವಿಶ್ವಾಸಾರ್ಹತೆ ಸಿಗುತ್ತಿತ್ತು.

ಈಗಿನ ಸರ್ಕಾರವು ಕಾಶ್ಮೀರದ ಪ್ರತಿಭಟನಾನಿರತರ ವಿಚಾರದಲ್ಲಿ ತಾಳಿರುವ ಕಠಿಣ ನಿಲುವಿನ ಬಗ್ಗೆ ಅಸಮಾಧಾನ ಹೊಂದಿರುವವರು, ಇದು ಈ ಹಿಂದಿನ ಸರ್ಕಾರಗಳು ತಾಳಿದ್ದಷ್ಟೇ ಕಠಿಣ ನಿಲುವು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವ್ಯತ್ಯಾಸ ಇರುವುದು ಎರಡು ಸರ್ಕಾರಗಳ ಮಾತುಗಳಲ್ಲಿ ಮಾತ್ರ. ಕಾಂಗ್ರೆಸ್ ಸರ್ಕಾರ ಕೂಡ ಈಗಿನ ಸರ್ಕಾರ ಕೊಂದಿರುವುದಕ್ಕಿಂತ ಹೆಚ್ಚಿನವರನ್ನು ಕೊಂದಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಮಾತು ಮೃದುವಾಗಿತ್ತು. ಬಿಜೆಪಿಯು ಬಳಸುವ ಪದಗಳು ಕಠಿಣವಾಗಿರುತ್ತವೆ. ನೈಜ ವ್ಯತ್ಯಾಸ ಇರುವುದು ಇಲ್ಲಿ ಮಾತ್ರ.

ಪ್ರಜೆಗಳ ಹಕ್ಕುಗಳು ಹಾಗೂ ಅವರ ಅಗತ್ಯಗಳಿಗಿಂತ ಬೇರೆಯದೇ ಆಗಿರುವ ವಿಚಾರಗಳನ್ನು ಆದ್ಯತೆಯನ್ನಾಗಿಟ್ಟುಕೊಂಡು ಭಾರತದ ಪ್ರಭುತ್ವ ಕೆಲಸ ಮಾಡಿದೆ. ಬ್ರಿಟಿಷರು ಭಾರತವನ್ನು ಲೂಟಿ ಮಾಡಿದರು, ಇಲ್ಲಿನ ಸಂಪನ್ಮೂಲವನ್ನು ತಮ್ಮ ಅಗತ್ಯಗಳಿಗಾಗಿ ಬಳಸಿಕೊಂಡರು ಎಂದು ನಾವು ದೂರುತ್ತೇವೆ. 1943ರಲ್ಲಿ ಬಂಗಾಳದಲ್ಲಿ ಉಂಟಾದ ಕ್ಷಾಮವನ್ನು ಮತ್ತೆ ಮತ್ತೆ ಉಲ್ಲೇಖಿಸುತ್ತೇವೆ.

ಈ ಕ್ಷಾಮದ ಸಂದರ್ಭದಲ್ಲಿ ಬ್ರಿಟಿಷ್ ಪ್ರಭುತ್ವ ನಡೆದುಕೊಂಡ ರೀತಿಗೆ ಸಮರ್ಥನೆ ಇಲ್ಲ. ಆದರೆ, ಅಂದಿನ ಆಡಳಿತಶಾಹಿಯ ವರ್ತನೆಗೂ ಇಂದಿನ ಪ್ರಜಾತಂತ್ರ ಆಡಳಿತ ವ್ಯವಸ್ಥೆಯ ವರ್ತನೆಗೂ ಯಾವ ವ್ಯತ್ಯಾಸ ಇದೆ? ಕಳೆದ ವರ್ಷ ನಾವು ಭಾರತೀಯ ವಾಯುಸೇನೆಗೆ 36 ಯುದ್ಧ ವಿಮಾನಗಳನ್ನು ಖರೀದಿಸಲು ₹ 59 ಸಾವಿರ ಕೋಟಿ ವೆಚ್ಚ ಮಾಡಿದೆವು. ಈ ವರ್ಷ ಭಾರತೀಯ ನೌಕಾಪಡೆಗೆ 57 ಯುದ್ಧ ವಿಮಾನಗಳನ್ನು ಖರೀದಿಸಲು ನಾವು ₹ 50 ಸಾವಿರ ಕೋಟಿ ವೆಚ್ಚ ಮಾಡಲಿದ್ದೇವೆ.

ಇವೆಲ್ಲವೂ ನಡೆಯುತ್ತಿರುವುದು ವಾರ್ಷಿಕ ₹ 33 ಸಾವಿರ ಕೋಟಿಯ ಆರೋಗ್ಯ ಬಜೆಟ್ ಇರುವ ದೇಶದಲ್ಲಿ (ಇದನ್ನು ಅರುಣ್ ಜೇಟ್ಲಿ ಅವರು ಕಡಿಮೆ ಮಾಡಿದ್ದಾರೆ). ನಮ್ಮ ದೇಶದಲ್ಲಿ ಪ್ರತಿ ವಾರ ಹತ್ತು ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಹಣ ವೆಚ್ಚ ಮಾಡಲು ನಮಗೆ ಸಾಧ್ಯವಿಲ್ಲ. ಹಾಗಂತ, ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ನಮಗೆ ತೊಂದರೆ ಇಲ್ಲ.

ಇದು ಬ್ರಿಟಿಷ್ ಆಧಿಪತ್ಯದ ಸಂದರ್ಭದಲ್ಲಿ ನಡೆದ ಅನೈತಿಕತೆಗೆ ಸಮಾನವಲ್ಲವೇ? ಈ ಹೊಸ ವಿಮಾನಗಳು ನಮಗೆ ಖಂಡಿತವಾಗಿಯೂ ಬೇಕು ಎಂದು ಯಾರಾದರೂ ಸರಿಯಾಗಿ ವಿವರಿಸಿ ಹೇಳಬಲ್ಲರೇ? ಸಾಧ್ಯವಿಲ್ಲ. ಈ ಬಗ್ಗೆ ನಮ್ಮ ದೇಶದಲ್ಲಿ ಒಂದು ಚರ್ಚೆ ಕೂಡ ಆಗಿಲ್ಲ. ಹಿಂದೆಯೂ ಆಗಿರಲಿಲ್ಲ.

ಎಲ್ಲ ಸರ್ಕಾರಗಳೂ ಒಂದೇ ರೀತಿ ವರ್ತಿಸಿವೆ. ಇಂದಿನ ಪ್ರಧಾನಿ ಜೊತೆ ಹಲವು ವಿಚಾರಗಳಲ್ಲಿ ತಕರಾರು ಹೊಂದಿರಬಹುದು. ಆದರೆ, ಪ್ರಧಾನಿಯವರು ಈ ಹಿಂದಿನವರು ಮಾಡಿದ್ದನ್ನೇ ಮುಂದುವರಿಸುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry