ಮೌನವೇ ನನ್ನ ಉತ್ತರ...

7

ಮೌನವೇ ನನ್ನ ಉತ್ತರ...

ಪ್ರಕಾಶ್ ರೈ
Published:
Updated:
ಮೌನವೇ ನನ್ನ ಉತ್ತರ...

ನಿನ್ನೆ ಮುಂಬೈನಲ್ಲಿ ‘ಇಂದಿನ ರಾಜಕೀಯ ತಲ್ಲಣ’ಗಳ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಬೆಂಗಳೂರಿಗೆ ಹೊರಡುವ ವಿಮಾನ ಏರಿದ್ದೆ. ಇತ್ತೀಚೆಗಿನ ವಿದ್ಯಮಾನಗಳು, ದೊಡ್ಡವರೆನಿಸಿಕೊಂಡವರ ವಾದ ವಿವಾದಗಳು, ನಾಯಕರೆನಿಸಿಕೊಂಡವರ ಲಂಗು ಲಗಾಮಿಲ್ಲದ ಮಾತುಗಳು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಬಗ್ಗೆ ಎಲ್ಲರೂ ಸಂಕೋಚ– ಸೂಕ್ಷ್ಮತೆ ಇಲ್ಲದೆ, ತಾವಾಡುವ ಮಾತುಗಳ ಪರಿಣಾಮದ ಬಗ್ಗೆ ಯೋಚಿಸದೆ, ದೂರುತ್ತಿರುವ ಮಾತುಗಳ ಬಗ್ಗೆ ಯೋಚಿಸತೊಡಗಿದೆ. ‘ಆಚಾರವಿಲ್ಲದ ನಾಲಿಗೆ... ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಈ ಹಾಡನ್ನು ನನ್ನೊಳಗೆ ನಾನೇ ಗುನುಗತೊಡಗಿದೆ. ಮನಸ್ಸು ನಾವಾಡುವ ಮಾತುಗಳ ಬಗ್ಗೆ ಯೋಚಿಸತೊಡಗಿತು. ಸಾಂತ್ವನದ ಮಾತುಗಳು, ರೊಚ್ಚಿಗೆಬ್ಬಿಸುವ ಮಾತುಗಳು, ನಮ್ಮನ್ನು ಬದುಕಿಸುವ ಮಾತುಗಳು, ನಮ್ಮನ್ನು ಕೊಲ್ಲುವ ಮಾತುಗಳು...

ಸ್ವೀಡಿಶ್‌ ನಾಟಕಕಾರ ಅಗಸ್ಟ್‌ ಸ್ಟ್ರಿನ್ಡ್‌ಬರ್ಗ್‌ನ ‘ಫಾದರ್‌’ ಎನ್ನುವ ನಾಟಕ ನೆನಪಾಯ್ತು. ಗಾಢವಾಗಿ ಪ್ರೀತಿಸುತ್ತಾ ಬದುಕಿದ್ದ ಗಂಡನೊಬ್ಬನಿಗೆ ಅವನಿಗಾಗಿಯೇ ಅವತರಿಸಿದಂಥ ಸುಂದರ ಹೆಂಡತಿ. ಅವರಿಗೆ ಐದು ಮಕ್ಕಳು. ಗಂಡನಿಗೆ ಮಕ್ಕಳೆಂದರೆ ಪ್ರಾಣ. ಎಲ್ಲರಿಗೂ ದೇವರು ಎರಡು ಕಣ್ಣುಗಳನ್ನು ಕೊಟ್ಟರೆ, ನನಗೆ ಐದು ಕಣ್ಣುಗಳನ್ನು ಕೊಟ್ಟಿದ್ದಾನೆಂದು ಬೀಗುತ್ತಿದ್ದ. ಮಕ್ಕಳೇ ತನ್ನ ಪ್ರಪಂಚವೆಂದು ನಂಬಿದ್ದ.

ಅವನಿಗೂ ಅವನ ಹೆಂಡತಿಗೂ ಒಂದು ದಿನ ಇದ್ದಕ್ಕಿದ್ದಂತೆ ಜಗಳ ಶುರುವಾಯಿತು. ಹೆಂಡತಿಯ ನಡತೆಯ ಬಗ್ಗೆ ಅವನಿಗೆ ಸಂದೇಹ ಬಂದಿದೆ. ಒಬ್ಬ ಒಳ್ಳೆಯವನೊಳಗೆ ಅಡಗಿರುವ ಕೆಟ್ಟವನಿದ್ದಾನಲ್ಲಾ, ಅವನು ತುಂಬಾ ಅಪಾಯಕಾರಿ. ತಾನು ತುಂಬಾ ಒಳ್ಳೆಯವನೆಂಬ ಭ್ರಮೆಯಲ್ಲಿಯೇ ಬಹಳ ತಪ್ಪುಗಳನ್ನು ಮಾಡುತ್ತಾ ಹೋಗುತ್ತಾನೆ. ಅದು ಕೊನೆಗೆ ಅವನನ್ನು ಕೆಟ್ಟವನನ್ನಾಗಿಯೇ ಬದಲಾಯಿಸಿಬಿಡುತ್ತದೆ.

ಒಳ್ಳೆಯವನಾಗಿದ್ದ ಗಂಡನ ಸಂದೇಹವನ್ನು ಭರಿಸಲಾಗದ ಹೆಂಡತಿ, ಅವನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸುತ್ತಾಳೆ. ‘ಹೌದು, ನಾನು ನಡತೆಗೆಟ್ಟವಳೇ. ನೀನು, ನಿನ್ನವು ಅಂದುಕೊಂಡಿದ್ದ ಐದು ಮಕ್ಕಳಲ್ಲಿ ಒಂದು ಮಗು ನಿನಗೆ ಹುಟ್ಟಿದ್ದಲ್ಲ, ಹೋಗೋ...’ ಎಂದು ಹೊರಟುಬಿಡುತ್ತಾಳೆ.

ಅಲ್ಲಿ ಅವನಿಗೆ ನರಕದ ಬಾಗಿಲು ತೆರೆದುಕೊಳ್ಳುತ್ತದೆ. ಹೆಂಡತಿಯ ಆ ಕೆಲವು ಮಾತುಗಳಿಂದ ಅವನ ಬದುಕೇ ನಾಶವಾಗತೊಡಗುತ್ತದೆ. ನಿದ್ದೆ ಕಳೆದುಕೊಳ್ಳುತ್ತಾನೆ. ಅವನಲ್ಲಿನ ಗಾಂಭೀರ್ಯ ಕಾಣೆಯಾಗುತ್ತದೆ. ನೆಮ್ಮದಿ ಹಾಳಾಗುತ್ತದೆ. ‘ತನಗೆ ಹುಟ್ಟದ ಮಗು ಯಾವುದು’ ಎಂದು ಅವನಿಗರಿವಿಲ್ಲದೆಯೇ ಅವನ ಕಣ್ಣುಗಳು ಸಂದೇಹದಿಂದ ಹುಡುಕಲಾರಂಭಿಸುತ್ತವೆ. ತನ್ನನ್ನು ಹೋಲದ, ತನ್ನಂತೆ ತೋರದ ಮಗು ಯಾವುದೆಂದು ಹುಡುಕಲಾರಂಭಿಸಿದರೆ, ಎಲ್ಲ ಮಕ್ಕಳೂ ಆ ಪಟ್ಟಿಯಲ್ಲಿದ್ದಾರೆನಿಸುತ್ತಿದೆ. ಕೆಲವೊಮ್ಮೆ ಐದೂ ಮಕ್ಕಳು ತನ್ನನ್ನು ನೆನಪಿಸುವಂತೆ ಇದ್ದಂತೆ ತೋರುತ್ತದೆ.

ಮಕ್ಕಳಾಡುವ ಆಟದಲ್ಲಿಯೂ ತಪ್ಪು ಕಂಡುಹಿಡಿಯಲು ಪ್ರಾರಂಭಿಸುತ್ತಾನೆ. ಸಹಿಸಲಾಗದ ತೊಳಲಾಟ ಅವನನ್ನು ಮರಣದ ಹೊಸ್ತಿಲಿಗೇ ಕೊಂಡೊಯ್ಯುತ್ತದೆ. ಇಂದಿನವರೆಗೆ ಬದುಕಿದ್ದ ಬದುಕಿನ ಬಗ್ಗೆಯೇ ಜಿಗುಪ್ಸೆ ಹುಟ್ಟುತ್ತದೆ. ಕೊನೆಗೆ ಸತ್ಯವನ್ನು ಹೇಳು ಎಂದು ಹೆಂಡತಿಗೆ ಶರಣಾಗುತ್ತಾನೆ. ‘ಸುಮ್ಮನೆ ನಿಮ್ಮ ಮೇಲಿನ ಕೋಪದಿಂದ ಆ ಮಾತು ಆಡಿದೆ’ ಎನ್ನುತ್ತಾಳೆ ಹೆಂಡತಿ. ಅಷ್ಟರಲ್ಲಾಗಲೇ ಆ ಸತ್ಯವನ್ನು ನಂಬದ ಸ್ಥಿತಿಯನ್ನು ತಲುಪಿರುತ್ತಾನೆ ಗಂಡ. ಹೆಂಡತಿ ಹೇಳಿದ್ದ ಸುಳ್ಳನ್ನೇ ವೇದವಾಕ್ಯ ಎಂಬಂತೆ ನಂಬಿದ್ದ ಅವನು, ಅವಳು ಹೇಳಿದ ಸತ್ಯವನ್ನು ನಂಬಲಾರದೆ ತೊಳಲುವ ಸ್ಥಿತಿ ತಲುಪುವಲ್ಲಿ ಆ ಕಥೆ ಮುಗಿಯುತ್ತದೆ.

ನನ್ನನ್ನು ಈಗಲೂ ಕಾಡುವ ನಾಟಕವದು.

ನನ್ನ ಪ್ರೇಯಸಿಯೊಬ್ಬಳಿದ್ದಳು. ಉತ್ಸಾಹದ ಚಿಲುಮೆಯಂತಿದ್ದಳು. ಪ್ರೇಮ, ಕಾಮ ಎರಡರಲ್ಲಿಯೂ ಅವಳಿಗೆ ಶರಣಾಗುವುದಲ್ಲದೆ ಬೇರೆ ದಾರಿ ಇರಲಿಲ್ಲ. ಆದರೆ ಜಗಳ ಅಂತ ಬಂದರೆ ರಾಕ್ಷಸಿ. ಮಕ್ಕಳು ಜಗಳವಾಡುವಂತೆ ಅರ್ಥವಿಲ್ಲದ ಗಾಯಗಳನ್ನು ಉಂಟುಮಾಡುವ ಜಗಳಗಳು. ಹೆತ್ತವರ ಮೇಲೆ ಧಾವಿಸಿ ಬಂದು ಬೀಳುವ ಮಕ್ಕಳಿಗೆ ಅವರಲ್ಲಿ ತಮ್ಮ ಭಾರವನ್ನು ಹೊರಬಲ್ಲ ಶಕ್ತಿ ಇದೆಯೇ ಇಲ್ಲವೇ ಎಂದು ಯೋಚಿಸುವುದು ಗೊತ್ತಿರುವುದಿಲ್ಲ.

ಪ್ರೀತಿಯಾಗಲಿ ಕೋಪವಾಗಲಿ ಹಾಗೆಯೇ ಮೇಲೆ ಮುಗಿಬೀಳುವ ಪ್ರೇಯಸಿ, ಇದ್ದಕ್ಕಿದ್ದಂತೆ ಒಂದು ರಾತ್ರಿ ‘ನಿನ್ನನ್ನು ಈಗಲೇ ನೋಡಬೇಕು’ ಎಂದು ಕರೆಯುತ್ತಿದ್ದಾಳೆ. ನಾನು ಬೇರೆ ಊರಿನಲ್ಲಿ ಚಿತ್ರೀಕರಣದಲ್ಲಿದ್ದೇನೆ ಎಂದು ಹೇಳಿದರೆ ನಂಬಲು ನಿರಾಕರಿಸುತ್ತಿದ್ದಾಳೆ. ‘ಇಲ್ಲಾ, ನೀನು ಬೇರೆ ಯಾರ ಜತೆಗೋ ಇದ್ದೀಯಾ. ನಾನು ನಿನಗೆ ಮುಖ್ಯಳಲ್ಲ’ ಎಂದು ಸಿಡುಕುತ್ತಿದ್ದಾಳೆ. ಕೇಳಲೇ ಆಗದ ಒರಟು ಮಾತುಗಳಿಂದ ಬೈಯುತ್ತಿದ್ದಾಳೆ. ಪ್ರತಿಕ್ರಿಯಿಸದೆ ಮೌನವಾದರೆ ಅವಳೇ ಸಮಾಧಾನಗೊಳ್ಳುತ್ತಾಳೆ ಎಂದು ಸುಮ್ಮನಾದೆ. ಆದರೆ ಅದು ಹೆಚ್ಚಾಯಿತು. ಎರಡು ದಿನ ಬಿಟ್ಟು ಮತ್ತೆ ಪೋನ್‌. ‘ನೀನು ಬೇರೊಬ್ಬಳ ಜತೆಗೆ ಇರುವುದರಿಂದಲೇ ನಿನಗೆ ನನ್ನ ಕಡೆ ಗಮನವಿಲ್ಲ, ನಾನೂ ಈಗ ಇನ್ನೊಬ್ಬನ ಜತೆಗೆ ಇದ್ದೇನೆ, ತಿಳಿದುಕೋ’ ಎಂದು ಕರೆಯನ್ನು ಕತ್ತರಿಸಿದಳು.

ನನ್ನ ಮನಸ್ಸು ಭಾರವಾಯಿತು. ಅರ್ಥಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಕೋಪ ಮತ್ತು ನಿಜವಾಗಲೂ ಇನ್ನೊಬ್ಬನೊಡನಿದ್ದಾಳೆಯೇ ಎನ್ನುವ ಕಿರಿಕಿರಿ ಎರಡೂ ಇದೆ. ಒತ್ತಡದ ಶೂಟಿಂಗ್‌ನ ಹಗಲುಗಳು, ರಾತ್ರಿಗಳು ನನ್ನ ಕಣ್ಣ ಮುಂದಿರುವುದರಿಂದ ಅವಳಿಗೆ ಸಮಯ ಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ‘ನನ್ನನ್ನು ಕೇಳುವ ಹಕ್ಕು ನಿನಗೆ ಇದೆಯಾ?’ ಎಂದು ಕೇಳಿದರೆ ಉತ್ತರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅವಳು ಈಗ ಇನ್ನೊಬ್ಬನ ಜತೆ ಇದ್ದಾಳೆ ಎನ್ನುವ ಅಸೂಯೆಗಿಂತ ಅದನ್ನು ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆ ಆಡುತ್ತಿದ್ದಾಳೆಂದು ಕೋಪ ಬರುತ್ತಿದೆ. ಅವಳಾಡಿದ ಕೆಲವು ಮಾತುಗಳಿಂದ ನನ್ನ ಹಗಲುಗಳು, ರಾತ್ರಿಗಳು ನರಕವಾಯಿತು. ಅವಳೊಡನೆ ಮಾತನಾಡುವುದನ್ನು ನಿಲ್ಲಿಸಿದೆ.

ಒಂದು ವಾರದ ಬಳಿಕ ನನ್ನ ಬಳಿ ಬಂದವಳು ನನ್ನ ಮೌನವನ್ನು ಕಂಡು ಹೆದರಿ ‘ಛೀ, ಸುಮ್ಮನೇ ಹೇಳಿದೆ ಕಣೋ... ಅದನ್ನು ನೀನು ಹೇಗೆ ನಂಬಿದೆ?’ ಎಂದು ಮತ್ತೆ ಜಗಳಕ್ಕೆ ನಿಂತಳು. ಆದರೆ ಅಲ್ಲಿಯವರೆಗೆ ಅವಳ ಪ್ರೇಮವೋ ಕಾಮವೋ ತಂದ ಎಲ್ಲ ಸಂತೋಷಗಳನ್ನು ಅವಳಾಡಿದ ಕೆಲವು ಮಾತುಗಳು ನುಂಗಿಹಾಕಿ ವಿಶ್ವರೂಪ ಪಡೆದು ನಿಂತಿವೆ. ಅವಳು ಹೇಳುತ್ತಿರುವ ಯಾವ ಕಾರಣಗಳೂ, ಸಮಾಧಾನಿಸುತ್ತಿರುವ ಮಾತುಗಳೂ ನನ್ನ ತಲೆಗೇರುತ್ತಿಲ್ಲ. ಇನ್ನು ಮುಂದೆಂದಾದರೂ ಇದು ನಿಜವಾಗಿಯೂ ನಡೆದರೆ ನನ್ನಿಂದ ಇವಳನ್ನು ಸಹಿಸಲಾಗುವುದೇ ಎಂದು ಮನಸ್ಸು ಏನೇನೋ ಯೋಚಿಸುತ್ತಿದೆ.

ಅವಳನ್ನು ಅಂದು ಕ್ಷಮಿಸಿದೆ. ಆದರೆ ಅಷ್ಟು ಸುಲಭದಲ್ಲಿ ಮರೆಯಲಾಗಲಿಲ್ಲ. ಅವಳಲ್ಲಿದ್ದ ಪ್ರೇಮವನ್ನೂ ಕಾಮವನ್ನೂ ಈ ಹಿಂದಿನ ಹಾಗೆ ರಸಿಕನಾಗಿ ಸುಖಿಸಲಾಗಲಿಲ್ಲ. ಎದೆಯ ಮೂಲೆಯಲ್ಲೆಲ್ಲೋ ಅವಳಾಡಿದ ಮಾತುಗಳಿವೆಯಲ್ಲ...

ಕೆಲವು ವರ್ಷಗಳ ಹಿಂದೆ ಇದೇ ರೀತಿ ಒಂದು ನೋವಿನ ಸಂದಿಗ್ಧದಲ್ಲಿ ಸಿಲುಕಿದ್ದೆ. ಈ ಸಲ ಅಂಥ ಮಾತುಗಳನ್ನು ಹೇಳಿದವನೂ ನಾನಲ್ಲ, ಕೇಳಿಸಿಕೊಂಡವನೂ ನಾನಲ್ಲ. ಹೇಳಿದವರು ನನ್ನ ಅಮ್ಮ. ಕೇಳಿಸಿಕೊಂಡವಳು ನನ್ನ ಹೆಂಡತಿ. ನಾನು ಪ್ರೀತಿಸುವ ಎರಡು ಹೆಣ್ಣುಗಳ ಮಧ್ಯದಲ್ಲಿ ನಾನು ಯಾರ ಪಕ್ಕದಲ್ಲಿದ್ದೇನೆಂದು ಹೇಳಬೇಕಾದ ಸಂದಿಗ್ಧ.

ಅತ್ತೆಗೂ ಸೊಸೆಗೂ ಮಾತಿನ ಜಗಳ. ವಿಷಯ ಏನಪ್ಪಾ ಅಂದರೆ, ಎಲ್ಲಾ ಅತ್ತೆಯಂದಿರಲ್ಲೂ ಇರುವ, ‘ಸೊಸೆಯಂದಿರಿಗೆ ಮಕ್ಕಳನ್ನು ಬೆಳೆಸಲು ಬರುವುದಿಲ್ಲ’ ಎಂಬ ಮೂರ್ಖ ಮುಗ್ಧತೆ. ಅದು ಬದಲಾಗಲೇ ಇಲ್ಲ. ಎಲ್ಲಾ ಸೊಸೆಯಂದಿರಿಗೂ ‘ನಮಗೆ ಗೊತ್ತಿಲ್ವಾ?’ ಎಂಬ ಮೂರ್ಖ ಸ್ವಾಭಿಮಾನವೂ ಬದಲಾಗಿಲ್ಲ. ಈ ಮುಗ್ಧತೆಗೂ ಸ್ವಾಭಿಮಾನಕ್ಕೂ ನಡೆಯುವ ಜಗಳದಲ್ಲಿ ಯಾರ ಪಕ್ಷ ನಿಲ್ಲಬೇಕು ನಾನು?

ನನ್ನ ಎರಡನೇ ಮಗಳು ಮೇಘನಾ ‘ಐಸ್‌ ಕ್ರೀಂ ಬೇಕು’ ಎಂದಿದ್ದಕ್ಕೆ ತಂದುಕೊಟ್ಟಿದ್ದಾಳೆ ಹೆಂಡತಿ. ‘ಹಾಗೆ ಕೇಳಿದ್ದೆಲ್ಲ ಕೊಡಿಸಬೇಡ. ಮಗುವಿಗೆ ಜ್ವರ, ನೆಗಡಿ ಬಂದೀತೆಂದು ತಾಯಿ ಹೇಳಿದ್ದಾಳೆ. ‘ಮಗಳಿಗೆ ಏನೂ ಆಗುವುದಿಲ್ಲ’ ಎಂದಿದ್ದಾಳೆ ಹೆಂಡತಿ. ‘ನಿನ್ನ ಈ ಥರದ ಬುದ್ಧಿಯಿಂದಲೇ ಇದ್ದ ಮಗನನ್ನು ಬಲಿಕೊಟ್ಟೆ’ ಎಂದು ತೀರಿಹೋದ ಮಗನನ್ನು ಮತ್ತೆ ನೆನಪಿಸಿದ್ದಾಳೆ ಅಮ್ಮ. ‘ನನ್ನ ಮಗನನ್ನು ನಾನೇ ಕೊಂದೆ ಎಂದುಬಿಟ್ಟರಲ್ಲಾ’ ಎಂದು ಹೆಂಡತಿ ರೋದಿಸುತ್ತಿದ್ದಾಳೆ. ‘ನಾನು ಏನು ಹೇಳಿದರೂ ಇವಳು ಕೇಳುತ್ತಿಲ್ಲ ಎಂಬ ಆತುರದಿಂದ ಬಂದ ಮಾತು ಅದು’ ಎಂಬುದು ಅಮ್ಮನ ವಾದ. ಈಗ ಈ ಎರಡೂ ತಪ್ಪುಗಳಲ್ಲಿ ಯಾವುದು ದೊಡ್ಡ ತಪ್ಪು ಎಂದು ಹೇಳಬೇಕಾದ ಸ್ಥಾನದಲ್ಲಿ ನಾನು.

ಮೌನವೇ ನನ್ನ ಉತ್ತರ... ಮಾತುಗಳಿಂದ ಜೀವನವನ್ನೇ ಕಳೆದುಕೊಂಡವರ ಎಣಿಕೆಯಿದೆಯಲ್ಲಾ... ಅದು ಆಕಾಶದ ನಕ್ಷತ್ರಗಳಂತೆ, ಎಣಿಸಿ ಮುಗಿಸಲು ಸಾಧ್ಯವೇ ಆಗದ್ದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry