ಮೌಲ್ಯಗಳು ಮತ್ತು ವಿಧಾನಗಳು

7

ಮೌಲ್ಯಗಳು ಮತ್ತು ವಿಧಾನಗಳು

ಗುರುರಾಜ ಕರ್ಜಗಿ
Published:
Updated:

ಆಗಸ್ಟ್ ೨೩, ೧೯೩೭ ರಂದು ಅಗ ತಾನೇ ಎಂಜಿನಿಯರಿಂಗ್ ಕಾಲೇಜಿನ ಶಿಕ್ಷಣ ಮುಗಿಸಿದ ಇಬ್ಬರು ತರುಣರು ಸೇರಿದರು. ಅವರಿಬ್ಬರಿಗೂ ೨೩-೨೪ರ ವಯಸ್ಸು. ವ್ಯವಹಾರದ ಯಾವ ಅನುಭವವೂ ಅವರಿಗಿಲ್ಲ. ಆದರೂ ಇಬ್ಬರೂ ಸೇರಿ ಒಂದು ಕಂಪೆನಿಯನ್ನು ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದರು.ಇನ್ನೊಂದು ವಿಶೇಷವೆಂದರೆ ಇಬ್ಬರ ಮನಸ್ಸಿನಲ್ಲೂ ತಾವು ನಡೆಸಬೇಕೆಂದಿರುವ ಕಂಪೆನಿಯಲ್ಲಿ ಏನು ತಯಾರಿಸಬೇಕು, ಅದಕ್ಕೆ ಹಣ ಎಲ್ಲಿಂದ ತರುವುದು ಎಂಬುದೂ ಹೊಳೆದಿರಲಿಲ್ಲ. ಅವರಿಗೆ ಗೊತ್ತಿದ್ದದ್ದು ಒಂದೇ. ತಾವು ಕಲಿತ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಜ್ಞಾನವನ್ನು ಬಳಸಿಕೊಂಡು ಏನನ್ನಾದರೂ ಮಾಡಬೇಕು ಎಂಬುದು. ಮೊದಲು ಕಂಪೆನಿಯನ್ನು ಸ್ಥಾಪಿಸಿ ನಂತರ ಏನು ಮಾಡಬೇಕೆಂಬುದನ್ನು ತೀರ್ಮಾನಿಸೋಣ ಎಂದು ಹೊರಟರು. ಕಂಪೆನಿಯೂ ಸ್ಥಾಪನೆಯಾಯಿತು.ಕಂಪೆನಿ ಕೆಲಸ ಪ್ರಾರಂಭ ಮಾಡಿದ್ದು ಒಂದು ಕಾರಿನ ಗ್ಯಾರೇಜಿನಲ್ಲಿ. ಏನಾದರೂ ಮಾಡಿ ಗ್ಯಾರೇಜಿನ ಬಾಡಿಗೆ ಹಾಗು ತಮ್ಮ ಖರ್ಚುಗಳನ್ನು ಗಳಿಸಿದರೆ ಸಾಕು ಎಂದು ಸಿಕ್ಕ ಸಿಕ್ಕ ಕೆಲಸ ಮಾಡಿದರು. ಮಕ್ಕಳ ಆಟಿಕೆಗಳಲ್ಲಿ ಸಿಗ್ನಲ್ ತಯಾರಿಸಿದರು, ಯಾವುದೋ ಟೆಲಿಸ್ಕೋಪಿಗೆ ಒಂದು ಸಣ್ಣ ಎಲೆಕ್ಟ್ರಾನಿಕ್ ಜೋಡಣೆಯನ್ನು ಮಾಡಿದರು. ಸಾರ್ವಜನಿಕ ಶೌಚಾಲಯಗಳಲ್ಲಿ ತನ್ನಷ್ಟಕ್ಕೆ ತಾನೇ ನೀರು ಸುರಿಯುವ ಯಂತ್ರವನ್ನು ವಿನ್ಯಾಸ ಮಾಡಿದರು.ಅವರು ನಿರ್ಮಿಸಿದ ಯಾವ ಯಂತ್ರವೂ ಮಾರುಕಟ್ಟೆಯಲ್ಲಿ ಹೆಸರು ಮಾಡಲಿಲ್ಲ. ಒಂದು ವರ್ಷದವರೆಗೆ ಯಾವ ಸ್ಥಿರತೆಯೂ ಇಲ್ಲದೆ ಕಂಪೆನಿ ನಡೆಯಿತು.ಅದಕ್ಕೆ ಮೊಟ್ಟ ಮೊದಲನೆಯ ಗಟ್ಟಿ ಕೆಲಸ ದೊರೆತದ್ದು ವಾಲ್ಟ ಡಿಸ್ನೆ ಕಂಪೆನಿಯಿಂದ. ಇಬ್ಬರೂ ತರುಣರು ಹಗಲು-ರಾತ್ರಿ ದುಡಿದು ಎಂಟು ಆಸಿಲೋಸ್ಕೋಪ್‌ಗಳನ್ನು ತಯಾರಿಸಿ ಮಾರಿ ಸ್ವಲ್ಪ ಹಣ ಗಳಿಸಿದರು. ಆದರೆ ನಿಜವಾದ, ವ್ಯವಸ್ಥಿತವಾದ ಗಳಿಕೆ ಪ್ರಾರಂಭವಾದದ್ದು ಎರಡನೇ ಮಹಾಯುದ್ಧ ಪ್ರಾರಂಭವಾದಾಗ. ಸೈನ್ಯಕ್ಕೆ ಬೇಕಾದ ಉಪಕರಣಗಳನ್ನು ತಯಾರಿಸುವ ಅವಕಾಶ ದೊರೆತಾಗ ಕೆಲಸಕ್ಕೆ ಹೆಚ್ಚಿನ ಜನರನ್ನು ನೇಮಿಸಿಕೊಂಡರು. ಕಂಪೆನಿ ದೊಡ್ಡದಾಗ ತೊಡಗಿತು.ಆಗ ಇಬ್ಬರೂ ತರುಣರು ತಮ್ಮ ಜೊತೆಗೆ ಒಂದಿಬ್ಬರನ್ನು ಸೇರಿಸಿಕೊಂಡು ಚಿಂತನೆ ನಡೆಸಿದರು. ಅವರೆಲ್ಲ ಸೇರಿ ನಿರ್ಧಾರ ಮಾಡಿದ್ದು ಹೀಗೆ. ಕಂಪೆನಿಗೊಂದು ಉದ್ದೇಶವಿರಬೇಕು ಮತ್ತು ಅದರದೇ ಆದ ಮೌಲ್ಯವಿರಬೇಕು. ಈ ಮೂಲೋದ್ದೇಶ ಮತ್ತು ಮೌಲ್ಯಗಳು ಎಂದಿಗೂ ಸ್ಥಿರವಾಗಿರಬೇಕು. ಅವುಗಳನ್ನು ಎಂದಿಗೂ ಮರೆಯಬಾರದು ಮತ್ತು ಮಾರಾಟದ ತಯಾರಿಕೆಯ ತಂತ್ರಗಳು, ವಿಧಾನಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಹೋಗಬೇಕು. ಸ್ಥಿರವಾದ ಮೌಲ್ಯಗಳು ಮತ್ತು ತಂತ್ರಜ್ಞಾನ ಬಳಸಿದ ತಯಾರಿಕಾ ಪದ್ಧತಿಗಳು ಒಂದು ಒಳ್ಳೆಯ ಕಂಪೆನಿಯನ್ನು ನಿರ್ಮಿಸುತ್ತವೆ ಎಂಬ ತೀರ್ಮಾನಕ್ಕೆ ಬಂದರು. ಇದೇ ತತ್ವದ ಮೇಲೆ ಕಂಪೆನಿಯನ್ನು ನಡೆಸಿ ಬಹಳ ದೊಡ್ಡದಾಗಿ ಬೆಳೆಸಿದರು.ಆ ತರುಣರ ಹೆಸರು ಬಿಲ್ ಹ್ಯೂಲೆಟ್ ಮತ್ತು ಡೇವ್ ಪ್ಯಾಕರ್ಡ್. ಇಂದು ಹ್ಯೂಲೆಟ್ ಮತ್ತು ಪ್ಯಾಕರ್ಡ್ ಕಂಪೆನಿ ಜಗತ್ತಿನ ಶ್ರೇಷ್ಠ ಕಂಪೆನಿಗಳಲ್ಲಿ

ಒಂದಾಗಿದೆ.ಕಂಪೆನಿಯ ಬೆಳವಣಿಗೆಗೆ ಕಾರಣವಾದ ಈ ಎರಡು ತತ್ವಗಳು ವ್ಯಕ್ತಿ ಜೀವನಕ್ಕೂ ಹೊಂದುತ್ತವೆ. ಅವು ಮೌಲ್ಯಗಳು ಮತ್ತು ವಿಧಾನಗಳು. ನಮ್ಮ ಬದುಕಿನ ವಿಧಿ ವಿಧಾನಗಳು, ವೇಷ ಭೂಷಣಗಳು, ಆಹಾರ-ವಿಹಾರಗಳು ಬದಲಾಗಬಹುದು. ಆದರೆ ಜೀವನದ ಮೌಲ್ಯಗಳು ಸ್ಥಿರವಾಗಿರಬೇಕು. ಮೌಲ್ಯಗಳನ್ನು ಮರೆತು ನಡೆದರೆ ದುರಂತ ತಪ್ಪಿದ್ದಲ್ಲ. ಮೇಲಕ್ಕೇರಿದ ಅನೇಕರು ಜನರ ದೃಷ್ಟಿಯಲ್ಲಿ ಕುಸಿದು ಮಾನಕಳೆದುಕೊಂಡದ್ದನ್ನು ಕಂಡಾಗ ಈ ತತ್ವಗಳ ಅವಶ್ಯಕತೆ ಎದ್ದು ಕಾಣುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry