ಮಂಗಳವಾರ, ಅಕ್ಟೋಬರ್ 22, 2019
21 °C

ಮೌಲ್ಯಮಾಪನ

ಗುರುರಾಜ ಕರ್ಜಗಿ
Published:
Updated:

ಬಹಳ ವರ್ಷಗಳಿಂದ ಶಿಕ್ಷಕನಾಗಿರುವ ನನಗೆ ಕೆಲವೊಮ್ಮೆ ಹಿರಿಯರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಲು ಕಷ್ಟವಾಗುತ್ತದೆ. ಈಗ ಶಿಕ್ಷಣದ ಗುರಿ, ಮಟ್ಟ, ವಿಧಾನಗಳು ಬದಲಿಯಾಗಿವೆ. ಹಿರಿಯರಿಗೆ ಅವು ವಿಚಿತ್ರವಾಗಿ ಕಾಣುತ್ತವೆ, ಕೆಲವೊಮ್ಮೆ ಅಸಂಬದ್ಧವಾಗಿ ಕಾಣುತ್ತವೆ. ಆ ಎಲ್ಲ ಭಾವನೆಗಳೂ ನಿರಾಧಾರ ಎನ್ನುವುದೂ ಕಷ್ಟ.

ಇತ್ತೀಚಿಗೆ ಎಂಬತ್ತು ವರ್ಷ ದಾಟಿದ ಹಿರಿಯರೊಬ್ಬರು ಸಿಕ್ಕರು. ಅವರಿಗೊಂದು ಪ್ರಶ್ನೆ ಬಹಳ ದಿನಗಳಿಂದ ಕಾಡುತ್ತಿತ್ತಂತೆ. ನಾನು ಸಿಕ್ಕೊಡನೆಯೇ ಕೇಳಿದರು.  `ಸ್ವಾಮಿ, ಈಗ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಯಾರನ್ನು ಕೇಳಿದರೂ ಎಂಬತ್ತು, ತೊಂಬತ್ತು, ತೊಂಬತ್ತೈದು ಪರಸೆಂಟ್ ಎಂದೇ ಹೇಳುತ್ತಾರೆ. ನಾವು ಶಾಲಾ, ಕಾಲೇಜುಗಳಲ್ಲಿ ಓದುತ್ತಿದ್ದಾಗ ಫಸ್ಟ್‌ಕ್ಲಾಸ್ ಬರುವುದೇ ಅಪರೂಪವಾಗಿತ್ತು. ಇಡೀ ಕಾಲೇಜಿಗೆ ಇಬ್ಬರೋ, ಮೂವರೋ ಫಸ್ಟ್‌ಕ್ಲಾಸ್ ಪಡೆದ ವಿದ್ಯಾರ್ಥಿಗಳಿರುತ್ತಿದ್ದರು.

ಅವರನ್ನು ನೋಡುವುದೇ ಹೆಮ್ಮೆಯೆನ್ನಿಸುತ್ತಿತ್ತು. ಈಗ ಯಾರು ನೋಡಿದರೂ ತೊಂಬತ್ತರ ಮೇಲೆಯೇ ಮಾರ್ಕು ಪಡೆಯುತ್ತಾರೆ. ಏನಿದರ ಅರ್ಥ? ನಾವೇ ಬಹಳ ದಡ್ಡರಾಗಿದ್ದೆವೋ, ಇಲ್ಲ, ಈಗಿನ ಹುಡುಗರು ಹೆಚ್ಚು ಬುದ್ದಿವಂತರಾಗಿದ್ದಾರೆಯೇ?~

`ಹಾಗೇನೂ ಇಲ್ಲ ಸರ್, ಇದು ಈಗ ಮೌಲ್ಯಮಾಪನದಲ್ಲಿ ಆದ ಬದಲಾವಣೆಗಳಿಂದ ಆದದ್ದು. ಆಗಲೂ, ಈಗಲೂ, ಬುದ್ಧಿವಂತರೂ ಇದ್ದಾರೆ. ಅಷ್ಟು ಬುದ್ಧಿವಂತರಲ್ಲದವರೂ ಇದ್ದಾರೆ~ ಎಂದೆ. `ಏನದು ಬದಲಾವಣೆ ? ನನಗಷ್ಟು ತಿಳಿಸಿ~ ಎಂದು ದುಂಬಾಲು ಬಿದ್ದರು ಹಿರಿಯರು.

ನಾನು ಹೇಳಿದೆ, `ಸರ್ ನಿಮಗೆ ತಿಳಿಸಲು ಒಂದು ಕಾಲ್ಪನಿಕ ಉದಾಹರಣೆ ತೆಗೆದುಕೊಳ್ಳುತ್ತೇನೆ. ಒಂದು ಪರೀಕ್ಷೆಯಲ್ಲಿ ಪ್ರಶ್ನೆ ಹೀಗಿತ್ತು. ಒಂದು ಸಾಮಾನ್ಯವಾದ ಹಸುವಿಗೆ ಕಾಲುಗಳೆಷ್ಟು? ಒಬ್ಬ ವಿದ್ಯಾರ್ಥಿ  ಮೂರು ಎಂದು ಬರೆದಿದ್ದ. ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರಿಗೆ ಬಲು ಬೇಜಾರಾಯಿತು. ಈ ಹುಡುಗನಿಗೆ ಒಂದು ಹಸುವಿಗೆ ಕಾಲುಗಳೆಷ್ಟು ಎಂಬುದೂ ಗೊತ್ತಿಲ್ಲವಲ್ಲ. ಉತ್ತರಕ್ಕೆ ಸೊನ್ನೆಯನ್ನು ಕೊಡಬೇಕೆಂದು ತೀರ್ಮಾನಿಸಿದರು. ಅದರೂ ಮುಖ್ಯಸ್ಥರನ್ನು ಕೇಳಿಬಿಡುವುದು ವಾಸಿ ಎಂದು ಅವರಲ್ಲಿಗೆ ಹೋಗಿ ಕೇಳಿದರು,  ಸರ್ ಈತನಿಗೆ ಹಸುವಿಗೆ ಕಾಲುಗಳೆಷ್ಟು ಗೊತ್ತಿಲ್ಲ. ಸೊನ್ನೆ ಹಾಕಿಬಿಡಲೇ?~ ಅಧಿಕಾರಿ ಕೇಳಿದರು. `ಆ ಪ್ರಶ್ನೆಗೆ ಎಷ್ಟು ಮಾರ್ಕಗಳು?~ ಈತ ಹೇಳಿದರು `ನಾಲ್ಕು ಸಾರ್.~ ಆಗ ಅಧಿಕಾರಿ ಹೇಳಿದರು.  `ಹಾಗಾದ್ರೆ ಏನ್ರೀ? ಒಂದು ಕಾಲಿಗೆ ಒಂದು ಮಾರ್ಕು. ಆತ ಹಸುವಿಗೆ ಕಾಲೇ ಇಲ್ಲವೆಂದು ಬರೆದಿದ್ದರೆ ಮಾತ್ರ ಸೊನ್ನೆ ಕೊಡಿ~ ಎಂದರು. ಈತ ಹಣೆ ಚಚ್ಚಿಕೊಳ್ಳುತ್ತಾ, ಮೂರು ಕಾಲು ಎಂದವನಿಗೆ ಮೂರು ಮಾರ್ಕು ಹಾಕಿದರು. ಅಂದರೆ ಹುಡುಗನಿಗೆ ಮೂರ್ಖ ಉತ್ತರಕ್ಕೆ ಪ್ರತಿಶತ ಎಪ್ಪತ್ತೈದು ಮಾರ್ಕು ಬಂದಿತ್ತು.

ಮುದುಕರು ಬಾಯಿ ಅಗಲಿಸಿ ನಕ್ಕರು, `ಹಾಗಾದ್ರೆ ನಮ್ಮ ಕಾಲದಲ್ಲಿ ಮಾರ್ಕು ಏಕೆ ಹೆಚ್ಚು ಬರುತ್ತಿರಲಿಲ್ಲ?~ ಆಗ ಅವರಿಗೆ ನನ್ನದೇ ಒಂದು ಉದಾಹರಣೆ ಹೇಳಿದೆ, `ನಾನು ಗಣಿತದಲ್ಲಿ ಒಂದು ಪ್ರಮೇಯವನ್ನು ಬಿಡಿಸಿದಾಗ ಕೊನೆಯ ಹಂತದಲ್ಲಿ ಒಂದು ಪುಟ್ಟ ತಪ್ಪಾಗಿತ್ತು. ನನ್ನ ಗುರುಗಳು ಸೊನ್ನೆ ಹಾಕಿಯೇ ಬಿಟ್ಟರು. ನಾನು ಹೋಗಿ, ಸಾರ್, ಎಲ್ಲವೂ ಸರಿಯಾಗಿದೆ, ಕೊನೆಗೊಂದು ಸ್ವಲ್ಪ ತಪ್ಪಾಗಿದೆ. ಅದಕ್ಕೆ ಸ್ವಲ್ಪವಾದರೂ ಮಾರ್ಕು ಬರುವುದಿಲ್ಲವೇ?~

ಎಂದು ಗೋಗರೆದೆ. ಆಗ ಅವರು, `ನೋಡು, ಪ್ರಶ್ನೆಗೆ ಉತ್ತರ ನೀಡುವುದೆಂದರೆ ಬಾವಿಗೆ ಹಾರಿಕೊಂಡ ಹಾಗೆ, ಅರ್ಧ ಹಾರುವುದು ಸಾಧ್ಯವಿಲ್ಲ, ನೀನು ತಳವನ್ನೇ ಸೇರಬೇಕು~ ಎಂದರು. ಇದು ಅಂದಿನ ಮೌಲ್ಯಮಾಪನ ಲಕ್ಷಣ.

ಹಿರಿಯರಿಗೆ ಸ್ವಲ್ಪ ತೃಪ್ತಿಯಾದಂತೆ ಕಂಡಿತು. ಈಗ ಮೌಲ್ಯಮಾಪನದಲ್ಲಿ ವಾಕ್ಯ ರಚನೆಯಲ್ಲಿ ತಪ್ಪಾದರೆ, ಬರೆಯುವ ಭಾಷೆಯಲ್ಲಿ ತಪ್ಪಾದರೆ ಅಂಥ ಅಪರಾಧವೇನೂ ಅಲ್ಲ. ಮಗುವಿಗೆ ಅರ್ಥವಾಗಿದೆ ಎಂದು ನಿಮಗನ್ನಿಸಿದರೆ ಒಂದಷ್ಟು ಮಾರ್ಕು ಬಂದೀತು. ಅರ್ಧ ಲೆಕ್ಕ ಸರಿಯಾಗಿದ್ದರೂ ಅರ್ಧ ಮಾರ್ಕು, ಉತ್ತರ ಕಾಲುಭಾಗ ಸರಿಯಾಗಿದ್ದರೆ ಕಾಲುಭಾಗದ ಮಾರ್ಕು. ಉತ್ತರ ಸಂಪೂರ್ಣವಾಗಿ, ಪರಿಪೂರ್ಣವಾಗಿಯೇ ಇರಬೇಕೆಂದಿಲ್ಲ. ಉತ್ತರಕೊಂದಿಷ್ಟು ಮಾರ್ಕು. ಅಂತೂ ನಾವು ಮಾರ್ಕುವಾದಿಗಳಾಗಿಬಿಟ್ಟಿದ್ದೇವೆ. ವಿಷಯದ ಸಂಪೂರ್ಣ ಗ್ರಹಿಕೆ, ಸಾದರಪಡಿಸುವಿಕೆ ಅಷ್ಟು ಮುಖ್ಯವಾಗಿಲ್ಲದಿರುವುದು ಎಷ್ಟು ಒಳ್ಳೆಯದೋ ಕಾಲವೇ ನಿರ್ಧರಿಸಬೇಕು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)