ಯಕ್ಷರ ಲೋಕಕ್ಕೆ ಆಕಾಶಮಾರ್ಗದಲ್ಲಿ ಬಂದಿಳಿದ ಯಕ್ಷಿಣಿ!

7

ಯಕ್ಷರ ಲೋಕಕ್ಕೆ ಆಕಾಶಮಾರ್ಗದಲ್ಲಿ ಬಂದಿಳಿದ ಯಕ್ಷಿಣಿ!

ಬನ್ನಂಜೆ ಸಂಜೀವ ಸುವರ್ಣ
Published:
Updated:
ಯಕ್ಷರ ಲೋಕಕ್ಕೆ ಆಕಾಶಮಾರ್ಗದಲ್ಲಿ ಬಂದಿಳಿದ ಯಕ್ಷಿಣಿ!

ಯಕ್ಷಗಾನವನ್ನು ಕಲಿಯಲೇಬೇಕೆಂಬ ದೃಢನಿರ್ಧಾರದೊಂದಿಗೆ ಬಂದಂತಿದ್ದ ಜರ್ಮನಿಯ ಹುಡುಗಿ ಕ್ಯಾಥರಿನ್ ಬೈಂಡರ್ ಸಂವಹನಕ್ಕೆ ಅಗತ್ಯವಿರುವ ಕನ್ನಡ ಭಾಷೆಯನ್ನೂ ಆರೇ ತಿಂಗಳಿನಲ್ಲಿ ಕಲಿತು ಮತ್ತೆ ಯಕ್ಷಗಾನ ಕೇಂದ್ರದ ಕದ ತಟ್ಟಿದಳು. ಪಾಶ್ಚಾತ್ಯರು ಪೌರಾತ್ಯ ಭಾಷೆ- ಸಂಸ್ಕೃತಿಗಳನ್ನು ಕಲಿಯುವುದರಲ್ಲಿ ಯಾವತ್ತೂ ಮುಂದು.ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯವನ್ನು ಸಾಧಿಸಿ ವೇದಗಳನ್ನು ಸಂಪಾದನೆ ಮಾಡಿದ, ಕನ್ನಡಕ್ಕೆ ಅತ್ಯುತ್ತಮ ನಿಘಂಟನ್ನು ಕೊಟ್ಟ ಪಾಶ್ಚಾತ್ಯ ವಿದ್ವಾಂಸರೆಲ್ಲ ನೆನಪಾದರು- ಕ್ಯಾಥರಿನ್‌ಳನ್ನು ನೋಡಿದಾಗ. ಅವಳು ಬಂದದ್ದು ಯಕ್ಷಗಾನ ಸಂಗೀತದ ಬಗ್ಗೆ ವಿಶೇಷ ಅಧ್ಯಯನ ನಡೆಸುವುದಕ್ಕಾಗಿ. ನಾನು ಕೇಂದ್ರದ ವಿದ್ಯಾರ್ಥಿಗಳಿಗೆ ಯಕ್ಷಗಾನ ಹೆಜ್ಜೆಗಳನ್ನು ಕಲಿಸುತ್ತಿರುವುದನ್ನು ಕಂಡು ಆಕರ್ಷಿತಳಾಗಿ ನನ್ನ ತರಗತಿಗಳಲ್ಲಿ ಬಂದು ಕುಳಿತುಕೊಳ್ಳಲಾರಂಭಿಸಿದಳು. ನನ್ನಲ್ಲಿ ಹೆಜ್ಜೆಗಳನ್ನು ಕೇಳಿ ಕಲಿಯತೊಡಗಿದಳು. ಕೆಲವೊಮ್ಮೆ ಅವಳೊಂದಿಗೆ ಸಂವಹನಕ್ಕಾಗಿ ನಾನು ನನ್ನ ಹೆಂಡತಿ ವೇದಾಳನ್ನು ಆಶ್ರಯಿಸುತ್ತಿದ್ದುದ್ದರಿಂದ ಅವರಿಬ್ಬರ ನಡುವೆಯೂ ಒಂದು ರೀತಿಯ ಆತ್ಮೀಯತೆ ಏರ್ಪಟ್ಟಿತ್ತು.ಕ್ಯಾಥರಿನ್ ಉಳಿದುಕೊಳ್ಳುತ್ತಿದ್ದುದು ಸನಿಹದ ಹುಡುಗಿಯರ ಹಾಸ್ಟೆಲ್‌ನಲ್ಲಿ. ಅಷ್ಟರಲ್ಲಾಗಲೇ ನಮ್ಮ ಸರಳ ಬದುಕು, ಆಚಾರ ವಿಚಾರ ಅವಳಿಗಿಷ್ಟವಾಗಿ ಯಕ್ಷಗಾನ ಕೇಂದ್ರದ ಸನಿಹದಲ್ಲಿದ್ದ ನಮ್ಮ ಬಿಡಾರಕ್ಕೂ ಬಂದು ಹೋಗುತ್ತಿದ್ದಳು. ಒಮ್ಮೆ ನಾನು ಜೈಪುರದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಕ್ಕಾಗಿ ಹದಿನೆಂಟು ದಿನಗಳ ಕಾಲ ಪ್ರವಾಸ ಹೊರಡುವವನಿದ್ದೆ. ಅದು ಕ್ಯಾಥರಿನ್‌ಗೆ ಗೊತ್ತಾಗಿ, “ಹೇಗೂ ಗುರುಗಳು ಕೆಲವು ದಿನ ಇರುವುದಿಲ್ಲ. ನನಗೆ ಹಾಸ್ಟೆಲ್‌ನ ಒಂಟಿ ಬದುಕಿಗಿಂತ ನಿಮ್ಮ ಮನೆಯಲ್ಲಿಯೇ ಹೊಂದಿಕೊಂಡು ಇರುವ ಆಸೆಯಾಗಿದೆ. ಬರಬಹುದೆ?” ಎಂದು ಕೇಳಿದಳಂತೆ ನನ್ನ ವೇದಾಳಲ್ಲಿ. “ನಿನ್ನ ಗುರುಗಳು ಒಪ್ಪಿದರೆ ನನ್ನದೇನೂ ಅಡ್ಡಿಯಿಲ್ಲ” ಎಂದಳಂತೆ ವೇದಾ. ನನ್ನಲ್ಲಿಯೂ ವಿಷಯ ಪ್ರಸ್ತಾವನೆಯಾಯಿತು. ನನ್ನದೇನೂ ಅಭ್ಯಂತರವಿಲ್ಲವೆಂದೂ ಆದರೆ ನಮ್ಮ ಕೇಂದ್ರದ ವರಿಷ್ಠರ ಅನುಮತಿಯನ್ನು ಪಡೆಯಬೇಕೆಂದೂ ನಾನು ಹೇಳಿದೆ.ನಾನು ಜೈಪುರದಿಂದ ಮರಳಿ ಬರುವವರೆಗೂ ಅವಳು ನಮ್ಮ ಮನೆಯವಳಂತೆಯೇ ಸರಳ ಜೀವನ ನಡೆಸಿದಳು. ಆದರೆ, ಒಪ್ಪಂದದಂತೆ, ಅವಳು ಮರಳಿ ಹಾಸ್ಟೆಲ್‌ಗೆ ಹೋಗಬೇಕಾಯಿತು. ಆದರೆ, ಹೊರಡುವಾಗ ಅವಳ ಕಣ್ಣುಗಳು ಹನಿಗೂಡಿದ್ದನ್ನು ನಾನು ಗಮನಿಸಿದೆ. ಒಮ್ಮೆ ನನ್ನ ಬಳಿಗೆ ಬಂದವಳೇ ಅಳುತ್ತ ಹೇಳಿದಳು, “ನನಗೆ ಹಾಸ್ಟೆಲ್‌ನಲ್ಲಿ ಇರುವುದು ಇಷ್ಟವಿಲ್ಲ, ನಿಮ್ಮ ಮನೆಯಲ್ಲಿಯೇ ಇರುತ್ತೇನೆ”. ನಾನು ಮತ್ತೆ ಕೇಂದ್ರದ ವರಿಷ್ಠರ ಲಿಖಿತ ಅನುಮತಿಯನ್ನು ಪಡೆದು ಬರಲು ಸೂಚಿಸಿದೆ.ತನ್ನೆಲ್ಲ ಸರಂಜಾಮುಗಳೊಂದಿಗೆ ಜರ್ಮನಿಯ ಹುಡುಗಿ ನಮ್ಮ ಮನೆಯಲ್ಲಿ ಬಂದಿಳಿದಳು. ನಮ್ಮದೇ ಸರಳ ಊಟ, ನಮ್ಮೊಂದಿಗೆ ನೆಲ ಒರೆಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು– ಎಲ್ಲ ಕೆಲಸಗಳೊಂದಿಗೆ ನಮ್ಮವಳೆನಿಸಿಬಿಟ್ಟಳು. ಯಾವುದೋ ಕಾಲದ ಋಣಾನುಬಂಧದಂತೆ, ಇಬ್ಬರು ಗಂಡುಮಕ್ಕಳ ಹೆತ್ತವರಾದ ನಮ್ಮ ಪಾಲಿಗೆ ‘ಆರತಿಗೊಬ್ಬ’ ಮಗಳಾಗಿ, ನಮ್ಮ ಮಕ್ಕಳಿಗೆ ಅಕ್ಕನಾಗಿ ಮನೆಯಲ್ಲಿಯೂ ಮನಸ್ಸಿನಲ್ಲಿಯೂ ನೆಲೆ ನಿಂತುಬಿಟ್ಟಳು. ಬಿಡುವಿನಲ್ಲೆಲ್ಲ ಯಕ್ಷಗಾನದ ಪಾಠ ಮುಂದುವರಿಯುತ್ತಿತ್ತು.ಅದೊಂದು ದಿನ ಅವಳ ವೀಸಾದ ಅವಧಿ ಮುಗಿದು ಸ್ವದೇಶಕ್ಕೆ ಹೊರಟಾಗ ನಮಗೆ ಕೊಡಲೆಂದು ಒಂದಿಷ್ಟು ಹಣ ಹಿಡಿದುಕೊಂಡು ನಿಂತಿದ್ದಳು. “ಇದು ಎಂಥದಕ್ಕೆ?” ನಾನು ಕೇಳಿದೆ. “ನಾನು ಇಷ್ಟು ದಿನ ನಿಮ್ಮ ಮನೆಯಲ್ಲಿ ಊಟಮಾಡಿದ್ದೇನಲ್ಲ... ಅದಕ್ಕೆ” ಎಂದಳು ವಿನಯದಲ್ಲಿ.  ನಾನು ನಕ್ಕು ಹೇಳಿದೆ, “ನೋಡು ಕ್ಯಾಥರಿನ್, ಕಲಿಯಬಯಸುವವರಿಗೆ ವಿದ್ಯೆಯನ್ನೂ ಹಸಿದವರಿಗೆ ಅನ್ನವನ್ನೂ ರೋಗಿಗಳಿಗೆ ಔಷಧಿಯನ್ನೂ ಉಚಿತವಾಗಿ ಕೊಡಬೇಕೆಂಬುದು ನಮ್ಮ ದೇಶದ ಸಂಪ್ರದಾಯ”.ನಾನು ಹಣ ತೆಗೆದುಕೊಳ್ಳುವುದಿಲ್ಲವೆಂದು ಅವಳಿಗೆ ಸ್ಪಷ್ಟವಾದುದರಿಂದ ಮರುಮಾತನಾಡದೆ ದುಗುಡದ ಮುಖವನ್ನು ಹೊತ್ತುಕೊಂಡು ‘ಮತ್ತೆ ಮರಳಿ ಬರುವೆ’ ಎಂದು ಹೇಳಿ ಆಕಾಶಮಾರ್ಗ ಹಿಡಿದಳು.ಕ್ಯಾಥರಿನ್ ಕಲೆಯೊಂದಿಗೆ ನಮ್ಮ ಬದುಕುವ ಕಲೆಯನ್ನೂ ತನ್ನದಾಗಿಸಿಕೊಂಡಿದ್ದಳು. ನನ್ನ ಹೆಂಡತಿ ಅವಳಿಗೆ ಸೀರೆ ಉಟ್ಟುಕೊಳ್ಳಲು ಹೇಳಿಕೊಟ್ಟಳು. ನಮ್ಮ ದೇವರಿಗೆ ನಮಸ್ಕರಿಸುವಾಗ ನಾವೇನೂ ಬೇಡವೆನ್ನಲಿಲ್ಲ. ಅವಳಿಗೆ ಗುರುಕುಲ ಪದ್ಧತಿಯ ಶಿಕ್ಷಣವೇ ಸಿಕ್ಕಿತು. ನಾನಂತೂ ನನ್ನ ಗುರುಗಳಿಂದ ಏನು ದತ್ತವಾಗಿದೆಯೂ ಅವನ್ನೆಲ್ಲ ಕಲಿಸಿದೆ. ಅವಳೇನು ಕಲಿತಳೊ, ಅದೇನು ಪಿಎಚ್‌.ಡಿ ಅಧ್ಯಯನ ಮಾಡುವಳೊ ನನಗೆ ಗೊತ್ತಿರಲಿಲ್ಲ. ಹೋದವಳು, ನನ್ನ ಹೆಂಡತಿಗೆ ಫೋನ್ ಮಾಡಿ ಕೆಲವು ಬಾರಿ ಮಾತನಾಡಿದ್ದಳು. ಮರಳಿ ಬರುವೆ ಎಂದಿದ್ದಾಳೇನೋ ಸರಿ, ಮರಳಿ ಬರುತ್ತಾಳೆಂಬ ನಿರೀಕ್ಷೆಯೇನೂ ನನಗಿರಲಿಲ್ಲ. ಯಕ್ಷಗಾನದ ಕಠಿಣ ಕಲಿಕೆ, ಸರಳ ಬದುಕಿನೊಂದಿಗೆ ಸವಾಲಿನ ಹೊಂದಾಣಿಕೆ– ಇವೆಲ್ಲವೂ ಬೇಡವೆನ್ನಿಸಿ ಅವಳು ಬಾರದೇ ಉಳಿಯಬಹುದು ಎಂದು ನಾನು ಭಾವಿಸಿದ್ದೆ.ಆದರೆ, ನನ್ನೆಣಿಕೆ ಸುಳ್ಳಾಗುವಂತೆ ಅವಳು ಮತ್ತೆ ಬಂದೇಬಂದಳು; ಒಬ್ಬಳೇ ಅಲ್ಲ ಜೊತೆಗೆ ತಂದೆತಾಯಿಯೂ ಇದ್ದರು! ೨೦೦೧, ಜೂನ್.

ಯಕ್ಷರೇ ವಿಹರಿಸುವ ಕಲಾಲೋಕದಲ್ಲಿ ಯಕ್ಷಿಣಿಯೊಬ್ಬಳು ಆಕಾಶಮಾರ್ಗದಲ್ಲಿ ಬಂದಿಳಿದದ್ದು ಯಕ್ಷಗಾನದ ಮಾಯೆಯಲ್ಲದೆ ಇನ್ನೇನು! ಯಕ್ಷಗಾನದಲ್ಲೊಂದು ವಿಚಿತ್ರ ಸೆಳೆತವಿದೆ. ದೀಪಾವಳಿ ಕಳೆದ ಬಳಿಕ ಕರೆನಾಡು– ಮಲೆನಾಡುಗಳ ಹರದಲ್ಲಿ ಪೂರ್ಣರಾತ್ರಿಯ ನೂರಾರು ಯಕ್ಷಗಾನ ಪ್ರದರ್ಶನಗಳು ಸತತವಾಗಿ ಜರಗುತ್ತಲೇ ಇರುತ್ತವೆ. ವೇಷಧಾರಿಗಳು ಆವೇಶದಲ್ಲಿ ರಂಗಪ್ರವೇಶ ಮಾಡುವಾಗ ಅಲ್ಲಿಗೆ ಸೆಳೆಯಲ್ಪಡುವ ಸಾವಿರಾರು ಮಂದಿ ಪ್ರೇಕ್ಷಕರ ಸುತ್ತ ಪೌರಾಣಿಕ ಪರಿವೇಶವೊಂದು ಸುಳಿಯುತ್ತಿರುತ್ತದೆ. ವೇಷ... ಆವೇಶ... ಪ್ರವೇಶ... ಪರಿವೇಷ...********

‘ಅವನಿಗೆ ಆವೇಶವಾಗಿದೆ. ಹಾಗಾಗಿಯೇ ರಂಗಸ್ಥಳದಲ್ಲಿಯೇ ಕುಸಿದುಬಿಟ್ಟಿದ್ದಾನೆ’ ಎಂದು ಕೆಲವರು ಉದ್ಗರಿಸುತ್ತಿರುವುದು ನನಗೆ ಪಿಸುಪಿಸು ಕೇಳಿಸುತ್ತಿತ್ತು. ೧೯೭೫ರ ಆ ದಿನಗಳಲ್ಲಿ ಹವ್ಯಾಸಿ ಯಕ್ಷಗಾನ ಸಂಘವೊಂದು ‘ದೇವಿಮಹಾತ್ಮೆ’ ಪ್ರಸಂಗ ಆಡುವುದೇ ಒಂದು ವಿಶೇಷವಾಗಿತ್ತು. ದೇವಿಯ ಮುಂದೆ ನಿಂತ ಮಹಿಷಾಸುರ ಧೊಪ್ಪನೆ ಬಿದ್ದು ಬಿಟ್ಟ ಮೇಲಂತೂ ಈ ಪ್ರಸಂಗಕ್ಕೆ ಇನ್ನಷ್ಟು ಮಹತ್ವ ಬಂದಿತ್ತು.ಅಂದಹಾಗೆ, ಮಹಿಷಾಸುರ ಪಾತ್ರ ಮಾಡಿದವನು ನಾನೇ. ಈ ಪರಿಯ ವೇಷ ನನಗೆ ಹೊಸತು. ನನಗೆಂದಲ್ಲ, ಇಡೀ ಬಡಗುತಿಟ್ಟಿಗೇ ಹೊಸತು! ತೆಂಕುತಿಟ್ಟಿನಲ್ಲಿ ‘ದೇವಿ ಮಹಾತ್ಮೆ’ ಅದಾಗಲೇ ಮೆರೆಯುತ್ತಿದ್ದ ದಿನಗಳವು. ನಾನು ಕೂಡ ತೆಂಕುತಿಟ್ಟಿನ ಬಣ್ಣದವೇಷದ ದಿಗ್ಗಜರಾದ ಬಣ್ಣದ ಮಹಾಲಿಂಗರವರ, ಬಣ್ಣದ ಕುಟ್ಯಪ್ಪುರವರ ಮಹಿಷಾಸುರರನ್ನು ನೋಡಿ ಬೆರಗಾಗಿದ್ದೆ. ಬಡಗುತಿಟ್ಟಿನ ವೃತ್ತಿಪರ ಮೇಳದಲ್ಲಿ ಒಂದೆರಡು ಯಶಸ್ವಿಯಲ್ಲದ ಪ್ರದರ್ಶನಗಳನ್ನು ಕಂಡು, ‘ಉತ್ತರಾದಿ ಯಕ್ಷಗಾನ’ದಲ್ಲಿ ‘ದೇವಿ ಮಹಾತ್ಮೆ’ ಅಸಾಧ್ಯ ಎಂಬ ನಂಬಿಕೆಯೇ ತಳ ಊರಿತ್ತು. ನನ್ನ ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರಿಗೆ ತಮ್ಮ ಹವ್ಯಾಸಿ ಸಂಘದಲ್ಲಿ ‘ದೇವಿ ಮಹಾತ್ಮೆ’ ಆಡುವ ಇಚ್ಛೆಯಾಗಿ ಅವರು ಶ್ರೀದೇವಿ ಟೆಕ್ಸ್‌ಟೈಲ್ಸ್‌ನ ಎಂ.ಎಸ್. ಕೃಷ್ಣನ್‌ರೊಂದಿಗೆ ಈ ವಿಚಾರ ಹೇಳಿರಬೇಕು.ಮೂಲತಃ ಕೇರಳದವರಾಗಿರುವ ಕೃಷ್ಣನ್ ಉಡುಪಿಯಲ್ಲಿಯೇ ನೆಲೆಯಾಗಿ ಯಕ್ಷಗಾನ ಕಲೆಗೂ ಕಲಾವಿದರಿಗೂ ಅಪಾರ ಆಸರೆಯನ್ನಿತ್ತವರು. ಅವರು, ತೆಂಕುತಿಟ್ಟಿನ ಬಲಿಪ ನಾರಾಯಣ ಭಾಗವತರಿಂದಲೋ ಅಥವಾ ಇನ್ಯಾರೋ ಹಿರಿಯ ಭಾಗವತರಿಂದಲೋ ಪ್ರಸಂಗದ ಪಠ್ಯವನ್ನು ಸಂಗ್ರಹಿಸಿ ದೇವಿಮಹಾತ್ಮೆಯನ್ನು ಪ್ರದರ್ಶಿಸಲೇಬೇಕಾದ ಅನಿವಾರ್ಯತೆಯನ್ನು ತಂದಿತ್ತರು. ತೆಂಕುತಿಟ್ಟಿನ ಮಹಿಷಾಸುರನೇ ಆದರ್ಶ ಆಕೃತಿಯಾಗಿ ನಮ್ಮ ಮನಸ್ಸಿನಲ್ಲಿದ್ದುದರಿಂದ ಅದಕ್ಕೆ ಕುಂದೆನಿಸದಂತೆ ಬಡಗುತಿಟ್ಟಿನಲ್ಲಿ ಆ ಪಾತ್ರವನ್ನು ರೂಪಿಸಬೇಕಾಗಿತ್ತು.ನಾನು ಕಟ್ಟಳೆಯಂತೆ ಮೂರು ದಿನಗಳ ಮೊದಲೇ ಉಪವಾಸಾದಿ ವ್ರತವನ್ನು ಕೈಗೊಂಡು ಪ್ರದರ್ಶನದ ದಿನ ಬೇಗನೆ ಬಣ್ಣದ ಮನೆಯಲ್ಲಿ ಹಾಜರಾದೆ. ಮರದಲ್ಲಿ ಹೊಸದಾಗಿ ಮಾಡಿದ ಕೊಂಬ (ಕೋಡು)ನ್ನು ನನ್ನ ತಲೆಗೆ ಬಿಗಿದುಕಟ್ಟುತ್ತಿದ್ದಂತೆ ಇದು ಕೇದಿಗೆ ಮುಂದಲೆಯಷ್ಟು ಸುಲಭವಲ್ಲ ಅಂತನ್ನಿಸತೊಡಗಿತ್ತು. ಹಣೆಯ ಮೇಲೆ ಬಟ್ಟೆ ಕಟ್ಟಿ ಅಗಲವಾಗಿ ಮುಖವರ್ಣಿಕೆ ಬರೆಯಲಾಗಿತ್ತು. ಕೃಶ ಶರೀರದವನಾದ ನಾನು ಸ್ಥೂಲವಾಗಿ ಕಾಣಿಸುವುದಕ್ಕೋಸ್ಕರ ಮೈಗೆ ಬಟ್ಟೆಗಳನ್ನು ಸುತ್ತಲಾಗಿತ್ತು. ಎಲ್ಲವನ್ನು ಹೊತ್ತುಕೊಂಡು ಸಭಾಮಧ್ಯದಿಂದ ರಾಳವೆಸೆದು ಭಗ್ಗನೆ ಹೊಮ್ಮುವ ಬೆಂಕಿಯ ನಡುವೆ ಆಗಮಿಸುವಾಗಲೇ ತಲೆ ಸುತ್ತು ಬಂದಂತಾಗಿತ್ತು.ರಂಗಸ್ಥಳ ಪ್ರವೇಶಿಸಿ ಪತಿಯ ಅಗಲುವಿಕೆಯಿಂದ ಕಂಗೆಟ್ಟ ತಾಯಿಗೆ ಧೈರ್ಯ ನುಡಿಯುವ ಪದ್ಯಗಳಿಗೆ ಕುಣಿದು, ಬ್ರಹ್ಮನಿಂದ ವರಪಡೆದು, ದೇವಲೋಕಕ್ಕೆ ಮುತ್ತಿಗೆ ಹಾಕುವಷ್ಟರ ಹೊತ್ತಿಗೆ ‘ನನ್ನಿಂದಾಗದು’ ಎಂಬ ಭಾವದಲ್ಲಿ ರಂಗಸ್ಥಳದ ಹಿಂದಿನ ಅಡ್ಡಚೌಕಿಯಲ್ಲಿ ಅಂಗಾತ ಮಲಗಿಬಿಟ್ಟೆ. ತಲೆಗೆ ಕಟ್ಟಿದ ಕೋಡು, ವೇಷಭೂಷಣಗಳನ್ನು ಭರಿಸಲಾರದೆ ನಾನು ಸಂಪೂರ್ಣ ಬಸವಳಿದಿದ್ದೆ. ಭಾಗವತಿಕೆ ಮಾಡುತ್ತಿದ್ದ ಗುಂಡಿಬೈಲು ನಾರಾಯಣ ಶೆಟ್ಟರು ಎದ್ದು ಬಂದು ನನ್ನನ್ನೊಮ್ಮೆ ನೋಡಿ ‘ಹೂಂಕಾರ’ ಹಾಕಿ ವೇದಿಕೆಗೆ ಮರಳಿದರು.ಅವರಿವರು ನನಗೆ ಗಾಳಿ ಹಾಕಿ ಆರೈಕೆ ಮಾಡಿ ಮತ್ತೆ ಸಿದ್ಧಗೊಳಿಸಿದರು. ಆದರೆ, ಮತ್ತೆ ರಂಗಸ್ಥಳವನ್ನು ಪ್ರವೇಶಿಸಿ ದೇವಿಯೊಂದಿಗೆ ಯುದ್ಧಕ್ಕಾಗಿ ಮುಖಾಮುಖಿಯಾಗುವಾಗ ನಾನು ನಿಲ್ಲಲಾರದೆ ಓಲಾಡುತ್ತ ಬಿದ್ದುಬಿಟ್ಟೆ. ನನ್ನನ್ನು ಎತ್ತಿಕೊಂಡು ಚೌಕಿಗೆ ಕರೆತಂದು ಮಲಗಿಸಿದರು. ಹಿರಿಯರೊಬ್ಬರು, ‘ಆವೇಶವನ್ನು ನಿಯಂತ್ರಿಸಬೇಕಾದರೆ ವೇಷವನ್ನು ವಿರೂಪಗೊಳಿಸಿ’ ಎಂದು ಸಲಹೆ ಕೊಟ್ಟರು. ನನ್ನ ಹಣೆಯ ಬಣ್ಣವನ್ನು ಒರೆಸಿ, ತಲೆಗೆ ಕಟ್ಟಿದ್ದನ್ನು ಬಿಚ್ಚಿ, ಸೊಂಟದ ಬಟ್ಟೆಯನ್ನು ಸಡಿಲಗೊಳಿಸಲಾಯಿತು. ರಂಗದ ಮೇಲೆ ನನ್ನ ಓಲಾಟವನ್ನು ನೋಡಿದವರು, ‘ಅವನಿಗೆ ಆವೇಶ ಬಂದಿದೆ’ ಎಂದು ನಂಬಿದರು.ಎರಡನೇ ಬಾರಿ ಮಹಿಷಾಸುರನ ಪಾತ್ರ ಮಾಡಬೇಕಾದಾಗ ಈ ಹಿಂದಿನ ಅನುಭವದಿಂದಾಗಿ ‘ಹೊರೆ’ಯಾಗದಂತೆ ಕಟ್ಟಿಕೊಂಡೆ. ಪಾತ್ರ ರಂಗಸ್ಥಳದಲ್ಲಿರುವ ಕೊನೆಯ ಕ್ಷಣದವರೆಗೆ ಧಾರಣ ಸಾಮರ್ಥ್ಯವನ್ನು ಕಾಯ್ದುಕೊಂಡೆ. ರಂಗಸ್ಥಳದಲ್ಲಿ ನನ್ನ ಓಲಾಡದಿರುವಿಕೆಯನ್ನು ನೋಡಿ, ‘ಚೆನ್ನಾಗಿ ಮಾಡಿದ್ದಾನೆ, ಆದರೆ, ಆವೇಶ ಮಾತ್ರ ಬರಲಿಲ್ಲ’ ಎಂದು ಕೆಲವರಿಗೆ ನಿರಾಶೆಯಾಯಿತು.ಮಹಿಷಾಸುರನ ವೇಷ ಯಕ್ಷಗಾನ ಪರಿವೇಷದೊಳಗೆ ಹೊಂದಿಕೊಂಡು ಎಷ್ಟೋ ವರ್ಷಗಳಾದವು. ಯಕ್ಷಗಾನದ ಕಿರೀಟವೇ ಇಲ್ಲದೆ ಕೊಂಬನ್ನು ತಲೆಗೆ ಕಟ್ಟಿಕೊಂಡಿರುವ ಮಹಿಷಾಸುರನ ವೇಷದ ಹಿಂದೆ ಮೈಸೂರಿನ ಚಾಮುಂಡಿಬೆಟ್ಟದ ನಿಶ್ಚಲ ಮಹಿಷಾಸುರನ ಪ್ರೇರಣೆಯಿರಬಹುದು! ಪೌರಾಣಿಕ ಆವರಣದೊಳಗಿರದ ಕಥೆಗಳನ್ನು ಆರಿಸಿಕೊಂಡಾಗಲಂತೂ ಯಕ್ಷಗಾನಕ್ಕೊಪ್ಪುವ ವೇಷಗಳನ್ನು ಕಟ್ಟುವುದು ಅಷ್ಟೊಂದು ಸುಲಭವಲ್ಲ.********

ಅಂಗುಲಿಮಾಲನ ಕಥೆ ಯಕ್ಷಗಾನದ್ದಲ್ಲ. ಇದರಲ್ಲಿ ಬರುವ ಗೌತಮ ಬುದ್ಧನನ್ನು ಯಕ್ಷಗಾನೀಯವಾಗಿ ರೂಪಿಸುವುದೊಂದು ಸವಾಲಾಗಿ ನನ್ನ ಮುಂದೆ ನಿಂತಿತ್ತು.ಇದು ನಡೆದದ್ದು ಶಿವರಾಮ ಕಾರಂತರ ನಿರ್ಗಮನದ ಬಳಿಕ ನಾನೇ ಕಥಾನಕಗಳ ನಿರ್ದೇಶನಕ್ಕೆ ತೊಡಗಿದಾಗ. ಕಳೆದ ‘ಸಂಜೀವನ’ದಲ್ಲಿ ನಾನು ಹೇಳಿಕೊಂಡ ‘ಶಬರಿ ಮೋಕ್ಷ’ ಪ್ರಕರಣವಾದರೋ ಯಕ್ಷಗಾನದ್ದೇ. ಆದರೆ, ಉತ್ತರಭಾರತದ ಯಾವುದೋ ರಾಜ್ಯದಲ್ಲಿ ಪ್ರದರ್ಶಿಸುವುದಕ್ಕಾಗಿ ಅಲ್ಲಿನ ಆಯೋಜಕರು ಬುದ್ಧನಿಗೆ ಸಂಬಂಧಿಸಿದ ಕಥಾನಕವನ್ನು ಅಪೇಕ್ಷಿಸಿರುವರೆಂದು ನಮ್ಮ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರು ಹೇಳಿದಾಗ ಆ ಪ್ರಸಂಗಪಠ್ಯಕ್ಕಾಗಿ ಹುಡುಕಾಡಿದೆ. ಸಿಗಲಿಲ್ಲ. ಗೌತಮಬುದ್ಧನ ಕಥಾಪುಸ್ತಕಗಳನ್ನು ತರಿಸಿ ಓದಿದೆ. ಬುದ್ಧನ ಬದುಕಿನ ಬಗ್ಗೆ ನಾನು ಮೊದಲ ಬಾರಿಗೆ ತಲೆಕೆಡಿಸಿಕೊಳ್ಳಲಾರಂಭಿಸಿದ್ದೆ. ಎಂದಿನಂತೆ ನನ್ನ ಶಿಷ್ಯ ಮೊಗೆಬೆಟ್ಟು ಪ್ರಸಾದನಿಂದ ‘ಅಂಗುಲಿಮಾಲ’ ಪ್ರಸಂಗಕ್ಕಾಗಿ ಪದ್ಯಗಳನ್ನು ಬರೆಸಿದೆ.ಅಂಗುಲಿಮಾಲ ಖಳಮಾದರಿಯ ಪಾತ್ರ. ಅವನಿಗೊಬ್ಬ ಮಂತ್ರಿ. ಈ ಇಬ್ಬರನ್ನು ರೂಪಿಸುವಾಗ ಅಷ್ಟೊಂದು ಕಷ್ಟವಾಗಲಿಲ್ಲ. ಆದರೆ, ಬುದ್ಧ ವಿರಾಗಿ. ಚಿತ್ರದಲ್ಲಿ ಕಂಡಂಥ ಧ್ಯಾನಮುದ್ರೆಯ ಬುದ್ಧನನ್ನು ಯಥಾಪ್ರಕಾರ ರೂಪಿಸಿದರೆ ಅದು ಯಕ್ಷಗಾನದ ಆಹಾರ್ಯ ಸೌಂದರ್ಯಕ್ಕೆ ಅನುಗುಣವಾಗುತ್ತಿರಲಿಲ್ಲ. ಹಾಗಾಗಿ, ತಲೆಗೆ ಜಡೆಯನ್ನು ಕಟ್ಟಿ ಕರ್ಣಾಭರಣಗಳನ್ನು ಧರಿಸಿಕೊಂಡೇ ಬುದ್ಧನ ರಂಗಪ್ರವೇಶವಾಯಿತು. ವಾಸ್ತವದ ಅಂಶವೂ ಇರಲಿ ಎಂಬ ಕಾರಣಕ್ಕಾಗಿ ಬುದ್ಧನ ಅನುಯಾಯಿಗಳನ್ನು ಕೇಶರಹಿತ ಬಿಡುಮಂಡೆಯಲ್ಲಿ ಕಾಣಿಸಿದೆ. ಹಿಂದಿನ ಯಕ್ಷಗಾನ ಪ್ರಯೋಗಗಳ ಅನುಭವ ಮತ್ತು ಪ್ರಭಾವಗಳೊಂದಿಗೆ ‘ಅಂಗುಲಿಮಾಲ’ದ  ದೃಶ್ಯಗಳನ್ನು ಪ್ರಸ್ತುತಿಪಡಿಸಿದೆ.ಉತ್ತರಭಾರತದಿಂದ ಮರಳಿದ ಮೇಲೆ ಊರಿನ ಆಸುಪಾಸಿನಲ್ಲಿಯೂ ಕೆಲವು ಪ್ರದರ್ಶನಗಳನ್ನು ಕೊಟ್ಟೆವು. ಮಂಗಳೂರಿನಲ್ಲಿ ಜಿ.ಎನ್. ಅಶೋಕವರ್ಧನರು ಆಯೋಜಿಸಿದ ಪ್ರದರ್ಶನದ ಬಳಿಕ ಒಂದು ಸಂವಾದವನ್ನೂ ಏರ್ಪಡಿಸಲಾಗಿತ್ತು. ‘ಅಂಗುಲಿಮಾಲ’ವನ್ನು ವೀಕ್ಷಿಸಿದ ಹಿರಿಯ ಸಹೃದಯಿ ವಿಮರ್ಶಕ ಪ್ರೊಫೆಸರ್ ಅಮೃತ ಸೋಮೇಶ್ವರರು ನನಗೆ ಪತ್ರ ಬರೆದು, ಸಿದ್ಧ ಮಾದರಿಯ ಪ್ರಯೋಗಗಳಿಗಿಂತ ಹೇಗೆ ಭಿನ್ನವಾಗಿ ಕಾಣಿಸಬಹುದು ಮತ್ತು ಬುದ್ಧನ ಅನುಯಾಯಿಗಳೂ ಯಕ್ಷಗಾನದ ವೇಷಭೂಷಣ ದಲ್ಲಿಯೇ ಕಾಣಿಸದ ಔಚಿತ್ಯದ ಬಗ್ಗೆ ನನ್ನ ಗಮನಸೆಳೆದಿದ್ದರು.

ಅದಾಗಿ, ‘ಸಮರ ಶಂಖ’ ಎಂಬ ಮತ್ತೊಂದು ಕಥಾನಕವನ್ನು ರಂಗಕ್ಕೇರಿಸುವ ಅವಕಾಶವೊಂದು ಸಿಕ್ಕಿತು. ಪ್ರಸ್ತುತ ಕೇಂದ್ರ ಸರ್ಕಾರದ ಸಚಿವರಾಗಿರುವ ವೀರಪ್ಪ ಮೊಯಿಲಿಯವರ ‘ಶ್ರೀರಾಮಾಯಣ ಮಹಾನ್ವೇಷಣಂ’ ಕೃತಿಯ ಯಕ್ಷಗಾನ ರೂಪಾಂತರವದು. ಆ ಕಾವ್ಯ ಸಾಲುಗಳನ್ನೇ ಯಕ್ಷಗಾನದ ತಾಳಕ್ಕೆ ಹೊಂದಿಸಿ ರಂಗರೂಪವನ್ನು ನಿರ್ದೇಶಿಸಿದೆ. ವೇಷಭೂಷಣ ಸಮಸ್ಯೆಯಾಗಲಿಲ್ಲ. ಪಂಚವಟಿಯ ಸುತ್ತ ಸುತ್ತುವ ಈ ಕಥೆ, ಮುಂದೆ ರಾವಣನ ವಿರುದ್ಧ ಶ್ರೀರಾಮನು ‘ಸಮರಶಂಖ’ವನ್ನು ಮೊಳಗಿಸುವಲ್ಲಿ ಮಂಗಲವಾಗುತ್ತದೆ.ಸ್ವತಃ ಮೊಯಿಲಿಯವರೇ ಈ ಯಕ್ಷಗಾನವನ್ನು ವೀಕ್ಷಿಸಿ ಮೆಚ್ಚಿಕೊಂಡರು. ಒಂದು ಕಡೆ ಇದೇ ಕಥಾನಕವನ್ನು ಪ್ರದರ್ಶಿಸಲು ನಮ್ಮ ತಂಡ ತೆರಳಿದ್ದಾಗ ಆಯೋಜಕರು ಪ್ರಮಾದದ ಕಾರಣವೊಡ್ಡಿ, ‘ಇಂದು ಪ್ರದರ್ಶನ ಸಾಧ್ಯವಿಲ್ಲ,- ಮರುದಿನ ಪ್ರದರ್ಶನ ನೀಡಬಹುದು’ ಎಂದು ಸೂಚಿಸಿದಾಗ ನಾವು ಒಪ್ಪದೆ, ಇದರ ಹಿಂದೆ ರಾಜಕೀಯ ಕಾರಣ ಇರುವ ನಮ್ಮ ಸಂದೇಹ ಸುಳ್ಳಾಗಲಿ ಎಂಬ ಆಶಯದೊಂದಿಗೆ, ಪ್ರಯಾಣದ ವೆಚ್ಚವನ್ನೂ ನಾವೇ ಭರಿಸಿಕೊಂಡು ಮರಳಿದ್ದು ಇನ್ನೂ ನೆನಪಿನಿಂದ ಮಾಸಿಲ್ಲ.ಸ್ಮೃತಿ ಹೊತ್ತಗೆಯ ಪುಟ ಸರಿಸಿದರೆ ಇಂಥ ಅನುಭವಗಳು ಅದೆಷ್ಟೋ ಇವೆ. ಒಂದೆಡೆ ನಮ್ಮ ತಂಡದ ಪ್ರದರ್ಶನ ಸಮಯವನ್ನು ಮುಂದೂಡುತ್ತ, ವೇಷಹಾಕಿ ಸಿದ್ಧರಾದ ನಮ್ಮನ್ನು ತಾಸುಗಟ್ಟಲೆ ಕಾಯುವಂತೆ ಮಾಡಿ, ವೇದಿಕೆಯ ಮೇಲೆ ಯಾವುದೋ ಅಸಂಬದ್ಧ ಹಾಡಿಗೆ ಅಧ್ವಾನದ ಹೆಜ್ಜೆಗಳನ್ನು ಹಾಕುತ್ತಿದ್ದವರನ್ನು ನಾನು ಪ್ರಶ್ನಿಸಲು ವೇದಿಕೆ ಹತ್ತಿದ್ದಿದೆ. ಅವೆಲ್ಲ ಶಿವರಾಮ ಕಾರಂತರಿಗೆ ಮಾತ್ರ ಸಾಧ್ಯವಿತ್ತು. ರಷ್ಯಾದಲ್ಲಿ ಮೆರವಣಿಗೆಯ ಮಾರ್ಗದಲ್ಲಿ ಯಕ್ಷಗಾನ ಕಲಾವಿದರನ್ನು ನಡೆಸುವುದಿಲ್ಲವೆಂದು ಅವರು ನಿಷ್ಠುರವಾಗಿ ಹೇಳಿದ್ದು ನೆನಪಾಗುತ್ತಿದೆ. ‘ಸಮಯಪ್ರಜ್ಞೆ’ ಹೊಂದಿರದವರ ವಿರುದ್ಧ ದಾಕ್ಷಿಣ್ಯವಿಲ್ಲದೆ ಸಿಟ್ಟಿಗೇಳುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ.********

“ಅವರಿಗೆ ಸಮಯ ಪ್ರಜ್ಞೆಯಿಲ್ಲವೆ? ಈಗ ಯಕ್ಷಗಾನ ತರಗತಿ ನಡೆಯುತ್ತಿದೆ. ಮಾತನಾಡಲೇಬೇಕೆಂದಿದ್ದರೆ ಒಂದು ಗಂಟೆ ಕಾಯಲು ಹೇಳು” ಎಂದರು.

ಶಿವರಾಮ ಕಾರಂತರ ಪ್ರಯೋಗಕ್ಕಾಗಿ ಯಕ್ಷಗಾನದ ಹಾಡುಗಳ ಕಲಿಕೆಗೆ ನಾನು ನಮ್ಮ ತಂಡದ ಭಾಗವತರೊಂದಿಗೆ ಬೆಳಿಗ್ಗೆ ಏಳಕ್ಕೆ ಸಾಲಿಗ್ರಾಮದ ಅವರ ಮನೆಯ ಮುಂದೆ ಹಾಜರಾಗುತ್ತಿದ್ದೆ. ಮುಂಜಾನೆ ಸಮಯಕ್ಕೆ ಸರಿಯಾಗಿ ಪಾಠ ಶುರು. ಹಾಗೊಮ್ಮೆ ಪಾಠ ನಡೆಯುತ್ತಿರುವಾಗಲೇ ಲೀಲಾ ಕಾರಂತರು ನಮ್ಮ ಕೊಠಡಿಯ ಮುಚ್ಚಿದ ಬಾಗಿಲು ತಟ್ಟಿ , “ಯಾರೋ ಬಂದಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯೊ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯೊ ಇರಬೇಕು. ನಿಮ್ಮನ್ನು ಕಾಣಬೇಕಂತೆ” ಎಂದರು.ಕಾರಂತರು ಎದ್ದು ಹೋಗಲಿಲ್ಲ. ಆ ವ್ಯಕ್ತಿ ಪೂರ್ವಭಾವಿಯಾಗಿ ಭೇಟಿಯ ಸಮಯ ವಿಚಾರಿಸದೆ ಬಂದಿರುವುದರಿಂದ ಯಥಾಪ್ರಕಾರ ನಡೆಯುವ ತರಗತಿಯನ್ನು ಬಿಟ್ಟೇಳಲು ಅವರು ಸಿದ್ಧವಿರಲಿಲ್ಲ.ಕೊಲ್ಲೂರಿಗೆ ಹೋಗುವ ಮಾರ್ಗ ಮಧ್ಯೆ ಕಾರಂತರನ್ನು ಕಂಡು ಹೋಗೋಣವೆಂದು ಅನೌಪಚಾರಿಕವಾಗಿ ಬಂದ ವ್ಯಕ್ತಿ ನಮ್ಮ ತರಗತಿ ಮುಗಿಯುವವರೆಗೂ ಅಂದರೆ, ಒಂದು ಗಂಟೆಗಿಂತಲೂ ಹೆಚ್ಚುಕಾಲ ಕಾದುಕುಳಿತಿದ್ದರು. ಅದು ಶಿವರಾಮ ಕಾರಂತರಿಗೆ ಮಾತ್ರ ಸಾಧ್ಯವಿತ್ತು!

(ಸಶೇಷ)

ನಿರೂಪಣೆ: ಹರಿಣಿಯಕ್ಷಗಾನದ ಪೋಷಾಕಿನಲ್ಲಿ ಕ್ಯಾಥರಿನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry