ಯಡಿಯೂರಪ್ಪ ಗೆಲ್ಲುತ್ತಾರೆಯೇ? ಸೋಲಿಸುತ್ತಾರೆಯೇ?

7

ಯಡಿಯೂರಪ್ಪ ಗೆಲ್ಲುತ್ತಾರೆಯೇ? ಸೋಲಿಸುತ್ತಾರೆಯೇ?

Published:
Updated:

 

ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಒಂದು ಪಾಠವಿತ್ತು. ಸಾವಿನ ಅಂಚಿನಲ್ಲಿ ಇದ್ದ ಒಬ್ಬ ಮುದುಕ ತನ್ನ ಮಕ್ಕಳಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳಿದ ಪಾಠವದು. ಬಡಿಗೆ ಹಿಡಿದುಕೊಂಡು ಬಡಿದಾಡುತ್ತಿದ್ದ ಮಕ್ಕಳಿಗೆ ಆ ಎಲ್ಲ ಬಡಿಗೆಗಳನ್ನು ಒಟ್ಟಾಗಿ ಕಟ್ಟಿ ಮುರಿಯಿರಿ ಎಂದು ಆತ ಹೇಳಿದ. ಮಕ್ಕಳಿಗೆ ಮುರಿಯಲು ಆಗಲಿಲ್ಲ. ಒಂದೊಂದೇ ಬಡಿಗೆಯನ್ನು ಒಬ್ಬೊಬ್ಬರ ಕೈಯಲ್ಲಿ ಕೊಟ್ಟು ಮುರಿಯಿರಿ ಎಂದ. ಲಟಲಟನೆ ಮುರಿದು ಹೋದುವು. ಮಕ್ಕಳಿಗೆ ತಂದೆ ಹೇಳಿದ ಪಾಠ ಅರ್ಥವಾಯಿತು. ನಂತರ ಅವರೆಲ್ಲ ಜಗಳವಾಡದೇ ಸುಖವಾಗಿ ಬದುಕಿದರು. ಅದು ಒಂದು ಕಥೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮನ್ನು 40 ವರ್ಷ ಪೊರೆದ, ಎಲ್ಲ ಅಧಿಕಾರ-ಐಸಿರಿಗಳನ್ನು ಕೊಟ್ಟ ಪಕ್ಷವನ್ನು ಶುಕ್ರವಾರ ತೊರೆದಾಗ ಪ್ರಾಥಮಿಕ ಶಾಲೆಯಲ್ಲಿ ಓದಿದ ಈ ಪಾಠ ನೆನಪಾಯಿತು. ಈಗ ಯಡಿಯೂರಪ್ಪ ಅವರ ಕೈಯಲ್ಲಿ ಬಡಿಗೆ ಇದೆ. ಅವರು ಬಿಜೆಪಿಯನ್ನು, ಆ ಪಕ್ಷದಲ್ಲಿ ಒಂದು ಕಾಲದಲ್ಲಿ ತಮ್ಮ ಜತೆಗಾರರಾಗಿದ್ದ ಗೆಳೆಯರನ್ನು, ಹಿರಿಯ ನಾಯಕರನ್ನು ಸಿಕ್ಕ ಸಿಕ್ಕಲ್ಲಿ ಬಡಿಯುತ್ತಿದ್ದಾರೆ.ಇದುವರೆಗೆ ಪಕ್ಷ, ಗೆಳೆಯರು, ಹಿರಿಯರು ಎಲ್ಲರೂ ಮೌನವಾಗಿದ್ದರು. ಅವರಿಗೆ ಮುನಿಸಿಕೊಂಡಿರುವ ಹಿರಿಯ ಮಗ ಸುಧಾರಿಸಿಕೊಂಡಾನು ಎಂಬ ಆಸೆ ಇತ್ತೋ ಏನೋ? ಅವರು ಇನ್ನು ಮುಂದೆಯೂ ಸುಮ್ಮನಿರಲಾರರು. ಅವರ ಕೈಯಲ್ಲಿಯೂ ಬಡಿಗೆ ಇರಬಹುದು. ಅಥವಾ ಅದನ್ನು ಅವರು ಇದುವರೆಗೆ ಅಡಗಿಸಿ ಇಟ್ಟಿರಬಹುದು. ಈಗ ಅದನ್ನು ಹೊರಗೆ ತೆಗೆಯುತ್ತಾರೆ. ತೆಗೆದುಕೊಂಡು ಬಡಿಯಲು ತೊಡಗುತ್ತಾರೆ. ಹೊಡೆದಾಟದಲ್ಲಿ ಯಾವಾಗಲೂ ಒಬ್ಬರಿಗೇ ಏಟು ಬೀಳುವುದಿಲ್ಲ. ಒಬ್ಬರಿಗೆ ಹೆಚ್ಚು ಪೆಟ್ಟಾಗಬಹುದು. ಇನ್ನೊಬ್ಬರಿಗೆ ಕಡಿಮೆ ಆಗಬಹುದು. ಸಿಟ್ಟು ನೆತ್ತಿಗೇರಿದ ಹೊಡೆದಾಟದಲ್ಲಿ ಇಬ್ಬರೂ ನಾಶವಾಗಬಹುದು.ಯಡಿಯೂರಪ್ಪ ಅವರು ಪಕ್ಷಕ್ಕೆ ಮೊನ್ನೆಯಷ್ಟೇ ರಾಜೀನಾಮೆ ಕೊಟ್ಟಿರಬಹುದು. ಆದರೆ, ಅವರು ಪಕ್ಷದ ಸಂಪರ್ಕವನ್ನು ಕಳೆದ ಮೇ ತಿಂಗಳಲ್ಲಿಯೇ ಕಡಿದುಕೊಂಡಿದ್ದರು.ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಇರುವ ಪ್ರದೇಶದಲ್ಲಿಯೇ ಅವರು ತಮ್ಮ ಕಚೇರಿ ಆರಂಭಿಸಿದಾಗಲೇ ಅವರು ಬಿಜೆಪಿ ಬಿಡುವುದು ಖಚಿತವಾಗಿತ್ತು. ಸೂಕ್ತ ಕಾಲಕ್ಕಾಗಿ ಅವರು ಕಾಯುತ್ತಿದ್ದರು ಅಷ್ಟೇ. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿ ಆದಾಗಲೇ ಪಕ್ಷದಲ್ಲಿ ಇರುವುದು ವೈಯಕ್ತಿಕವಾಗಿ ನಿರರ್ಥಕ ಎಂದು ಯಡಿಯೂರಪ್ಪ ಅವರಿಗೆ ಅನಿಸಿತ್ತು. ಆದರೆ, ಅವರ ಬೆಂಬಲಿಗರಿಗೆ ಅಧಿಕಾರ ಬೇಕಾಗಿತ್ತು. ಕಾಕತಾಳೀಯ ಎನ್ನುವಂತೆ ಸದಾನಂದಗೌಡ ಮತ್ತು ಯಡಿಯೂರಪ್ಪ ನಡುವಿನ ಸಂಬಂಧವೂ ಹಳಸಿತು. ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಯಡಿಯೂರಪ್ಪನವರು ತಮ್ಮ ರಾಜಕೀಯ ವೈರಿ ಸದಾನಂದಗೌಡರಿಗೆ ಪಾಠ ಕಲಿಸಿದರು ಮತ್ತು ಮುಖ್ಯವಾಗಿ ತಮ್ಮ ಭವಿಷ್ಯದ ರಾಜಕಾರಣಕ್ಕೆ ಒಂದು ವೇದಿಕೆ ಸಜ್ಜು ಮಾಡಿಕೊಂಡರು. ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡುವಾಗ ಲಿಂಗಾಯತರಾದ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ ಕಳಂಕವನ್ನು ಅವರು ತೊಡೆದುಕೊಳ್ಳಬೇಕಿತ್ತು.ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿರುವ ಯಡಿಯೂರಪ್ಪ ಅವರು ಭವಿಷ್ಯದ ರಾಜಕಾರಣಕ್ಕಾಗಿ ಮುಖ್ಯವಾಗಿ ಲಿಂಗಾಯತ ಮತಗಳ ಮೇಲೆಯೇ ಕೈಯೂರಿದ್ದಾರೆ. ಲಿಂಗಾಯತ ಸಮುದಾಯದ ನಾಯಕ ಶೆಟ್ಟರ್ ಅಲ್ಲ, ತಾವೇ ಎಂದೂ ಅವರಿಗೆ ಗೊತ್ತಿದೆ. ಆದರೆ, ಬರುವ ಚುನಾವಣೆಯಲ್ಲಿ ಬರೀ ಲಿಂಗಾಯತ ಕಾರ್ಡ್ ಅನ್ನೇ ಬಳಸಿದರೆ ಅಪಾಯ ಆಗಬಹುದು, ಇತರ ಎಲ್ಲ ಸಮುದಾಯಗಳು ಒಂದಾಗಿ ಬಿಡಬಹುದು ಎಂಬ ಅಂಜಿಕೆಯೂ ಅವರಲ್ಲಿ ಇದೆ. ಅಷ್ಟು ವರ್ಷ ರಾಜಕೀಯ ಮಾಡಿದ ಯಾರಿಗೇ ಆದರೂ ಇವೆಲ್ಲ ತಿಳಿಯುವ ಪ್ರಾಥಮಿಕ ಸಂಗತಿಗಳು. ಬಹುಶಃ ಅದಕ್ಕೇ ಅವರು ಅಲ್ಪಸಂಖ್ಯಾತ ಜೈನರೊಬ್ಬರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ಶುಕ್ರವಾರ ಯಡಿಯೂರಪ್ಪ ಅಕ್ಕಪಕ್ಕದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಮುಖಂಡರು ಇದ್ದರೇ ಹೊರತು ಲಿಂಗಾಯತ ನಾಯಕರು ಅಲ್ಲ. ಅವರು ಮೂರು ನಾಲ್ಕು ಆಸನ ಬಿಟ್ಟು ಕುಳಿತಿದ್ದರು! ತಾವು ಲಿಂಗಾಯತರ ನಾಯಕ ಮಾತ್ರವಲ್ಲ ಎಂದು ಅವರು ಹೇಳುತ್ತಿರುವ ವಿಧಾನ ಇದಾಗಿರಬಹುದು.ಯಡಿಯೂರಪ್ಪನವರು ಜೈನರು ಮತ್ತು ಕ್ರೈಸ್ತರಿಗಿಂತ ಸಂಖ್ಯೆಯಲ್ಲಿ ಜಾಸ್ತಿ ಇರುವ ಮುಸಲ್ಮಾನ ಮತಗಳ ಮೇಲೆ ಹೆಚ್ಚು ಕಣ್ಣು ಇಟ್ಟಂತೆ ಕಾಣುತ್ತದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅವರು ಮತ್ತೆ ಮತ್ತೆ ಪ್ರಸ್ತಾಪಿಸಿದ್ದು ಮುಸ್ಲಿಂರನ್ನು. ಯಡಿಯೂರಪ್ಪ ಅವರಿಗೆ ಭವಿಷ್ಯದ ಬಗ್ಗೆ ತುಂಬ ಆಶಾವಾದ ಇರುವಂತೆ ಕಾಣುತ್ತದೆ.ಮತ್ತೆ ಮುಖ್ಯಮಂತ್ರಿ ಆಗುವುದೇ ಅವರ ಗುರಿ. ತಾವು ಮೂರೂಕಾಲು ವರ್ಷ ಅಧಿಕಾರದಲ್ಲಿ ಇದ್ದಾಗ ಮಾಡಿದ `ಅಭಿವೃದ್ಧಿ ಕೆಲಸ'ಗಳನ್ನು ಮುಂದುವರಿಸುವುದು ಅವರ ಇನ್ನೊಂದು ಗುರಿ. ಆದರೆ ಅಧಿಕಾರ ಹಿಡಿಯಲು ಅಗತ್ಯವಾಗಿ ಬೇಕಾದ ತಳಮಟ್ಟದ ಕಾರ್ಯಕರ್ತರನ್ನು ಹೊಂದಿದ್ದ ಒಂದು ಪಕ್ಷವನ್ನು ಅವರು ತ್ಯಜಿಸಿ ಹೊರಗೆ ಬಂದಿದ್ದಾರೆ.ಎಡಪಂಥೀಯ ಮತ್ತು ಬಲಪಂಥೀಯ ಪಕ್ಷಗಳ ಕಾರ್ಯಕರ್ತರ ಒಂದು ವಿಶೇಷ ಎಂದರೆ ಅವರು ಯಾವ ಆಸೆಗಳೂ ಇಲ್ಲದೆ ದುಡಿಯುವ ಮಂದಿ. ತಾವು ನಂಬಿದ ಸಿದ್ಧಾಂತದ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ಮಾತ್ರ ಅವರ ಕಾಳಜಿ. ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ, ಪಕ್ಷದ ಕಾರ್ಯಕರ್ತರಿಗೆ ಬೇಕಾದಷ್ಟು ನಿರಾಶೆ ಮಾಡಿರಬಹುದು. ಹಾಗೆಂದು ಕಾರ್ಯಕರ್ತರು ಬದಲಾಗುವುದಿಲ್ಲ. ಆಯಾ ಪಕ್ಷಗಳಿಗೆ ಇರುವ ಮತಗಳೂ ಭಾರಿ ಪ್ರಮಾಣದಲ್ಲಿ ವ್ಯತ್ಯಾಸ ಆಗುವುದಿಲ್ಲ.ಕಳೆದ ಮೂವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಸಾರಿ ಆಡಳಿತ ಮಾಡಿದ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲ. ಇದಕ್ಕೆ 1985ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದುದು ಒಂದು ಅಪವಾದ. ಕಳೆದ ಮೂವತ್ತು ವರ್ಷಗಳ ರಾಜಕೀಯ ಇತಿಹಾಸದ ಇನ್ನೊಂದು ವಿಶೇಷ ಎಂದರೆ ಎಲ್ಲ ಸರ್ಕಾರಗಳು `ನಕಾರಾತ್ಮಕ ಮತಗಳ' ಕಾರಣದಿಂದ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಅಂದರೆ ಹಿಂದೆ ಇದ್ದ ಸರ್ಕಾರದ ವಿರುದ್ಧ ಜನರು ಮತ ಹಾಕಿದ್ದರಿಂದ ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದುವು; ಪಕ್ಷ ಯಾವುದೇ ಇರಬಹುದು. 1985ರಲ್ಲಿ ಮಾತ್ರ ರಾಜ್ಯದ ಜನರು ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರಕ್ಕೆ ಸಕಾರಾತ್ಮಕ ಮತ ಹಾಕಿ ಅಧಿಕಾರಕ್ಕೆ ತಂದಿದ್ದರು.ಮುಂದಿನ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಬಿಜೆಪಿ ಸರ್ಕಾರ ಈ ಸಮಸ್ಯೆಯನ್ನೇ ಮುಖ್ಯವಾಗಿ ಎದುರಿಸಬೇಕಾಗುತ್ತದೆ. ರಾಜ್ಯದ ಜನರು ಕಳೆದ ಮೂರು ದಶಕಗಳಲ್ಲಿ ನಡೆದುಕೊಂಡುದನ್ನು ನೋಡಿದರೆ ಮತ್ತೆ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಊಹಿಸುವುದು ಕಷ್ಟ. ಜತೆಗೆ ಇಡೀ ರಾಜ್ಯದಲ್ಲಿ ತನ್ನ ಪ್ರಭಾವ ಹೊಂದಿದ್ದ ಯಡಿಯೂರಪ್ಪ ಅವರಂಥ ಮತ್ತೊಬ್ಬ ನಾಯಕ ಈಗ ಆ ಪಕ್ಷದಲ್ಲಿ ಇಲ್ಲ. ಈಗ ಬಿಜೆಪಿಯಲ್ಲಿ ಇರುವ ನಾಯಕರು ತಮ್ಮ ತಮ್ಮ ಪ್ರದೇಶಕ್ಕೇ ಸೀಮಿತರಾದವರು. ಈ ಪ್ರಮುಖ ನಾಯಕರನ್ನು ಸೋಲಿಸಲು ಯಡಿಯೂರಪ್ಪ ತಂತ್ರ ಬೇರೆ ರೂಪಿಸುವುದರಿಂದ ಅವರೆಲ್ಲ ತಮ್ಮ ಕ್ಷೇತ್ರ ಬಿಟ್ಟು ಇಡೀ ರಾಜ್ಯವನ್ನು ಸುತ್ತಿ ಪಕ್ಷದ ಇತರ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡುವುದೂ ಕಷ್ಟವಾಗುತ್ತದೆ. ಪಕ್ಷವನ್ನು ಬಿಟ್ಟು ಹೊರಗೆ ನಡೆದಿರುವ ಯಡಿಯೂರಪ್ಪ ಅವರ ಪಕ್ಷಕ್ಕೂ ಈ ಸಾರಿಯ ಚುನಾವಣೆಯಲ್ಲಿ ಸಿಗುವ ಗೆಲುವು (ಅದು ಯಾವ ಪ್ರಮಾಣದ್ದೇ ಆಗಿರಲಿ) ತಟ್ಟೆಯಲ್ಲಿ ಇಟ್ಟುಕೊಟ್ಟ ಸುಲಭದ ಯಶಸ್ಸೇನೂ ಆಗಿರುವುದಿಲ್ಲ. ಅವರಿಗೆ 224 ಕ್ಷೇತ್ರಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಹೂಡಲು ಸಾಧ್ಯವಾಗುತ್ತದೆ ಎಂಬುದೇ ಇನ್ನೂ ಅಸ್ಪಷ್ಟವಾಗಿದೆ. ಅವರಿಂದಲೇ ಸಚಿವರಾಗಿ, ಉತ್ತಮ ಖಾತೆಗಳ ಅನುಕೂಲಗಳನ್ನು ಕಳೆದ ನಾಲ್ಕೂವರೆ ವರ್ಷ ಅನುಭವಿಸಿದ ಮತ್ತು ಇನ್ನು ಉಳಿದ ಅವಧಿಗೂ ಅನುಭವಿಸಲಿರುವ `ಬೆಂಬಲಿಗ ಸಚಿವ'ರಲ್ಲಿಯೇ ಹಲವರು ಕೈ ಕೊಡುವಂತೆ ಕಾಣುತ್ತದೆ.ಯಡಿಯೂರಪ್ಪನವರು 40-50 ಶಾಸಕರು ತಮ್ಮ ಜತೆಗೆ ಬರುತ್ತಾರೆ ಎಂದು ಹೇಳುತ್ತಿದ್ದರೂ ಅಂತಿಮವಾಗಿ ಎಷ್ಟು ಮಂದಿ ಶಾಸಕರು ಕೆ.ಜೆ.ಪಿಯಿಂದ ಕಣಕ್ಕೆ ಇಳಿಯುತ್ತಾರೆ ಎಂಬುದು ಚುನಾವಣೆ ಘೋಷಣೆಯಾದ ನಂತರವೇ ಗೊತ್ತಾಗಲಿದೆ. ಎಲ್ಲರೂ ತಮ್ಮ ಸುರಕ್ಷತೆಯನ್ನು, ಭವಿಷ್ಯವನ್ನು ನೋಡಿಕೊಳ್ಳುತ್ತಾರೆಯೇ ಹೊರತು ಅವರೇನು ದಂಡನಾಯಕನ ಮಾತು ಕೇಳಿ ಯುದ್ಧರಂಗಕ್ಕೆ ಧುಮುಕುವ `ಅಂಧ' ಸೈನಿಕರಲ್ಲ.ಆಗ ಯಡಿಯೂರಪ್ಪ ಬಹುತೇಕ ಕ್ಷೇತ್ರಗಳಲ್ಲಿ ಹೊಸಮುಖಗಳನ್ನೇ ಹಾಕಿ ತಮ್ಮ ವರ್ಚಸ್ಸನ್ನೇ ಪಣಕ್ಕಿಟ್ಟು ಹೋರಾಡಬೇಕಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ವ್ಯಕ್ತಿಗೆ ಸ್ವಂತ ವರ್ಚಸ್ಸು ಬಹಳ ಮುಖ್ಯ. ಜೊತೆಗೆ ಜಾತಿ, ಹಣಬಲವೂ ಇರಬೇಕು. ಎಚ್.ಡಿ.ದೇವೇಗೌಡರಂಥ ಹಿರಿಯ ನಾಯಕರಿಗೇ, ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ನಾಯಕತ್ವವನ್ನು ರೂಪಿಸಲು ದಶಕಗಳಿಂದ ರಾಜಕೀಯ ಮಾಡುತ್ತಿರುವವರಿಗೇ, ಎಲ್ಲ 224 ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಹುಡುಕುವುದು, ಹಾಕುವುದು ಸಾಧ್ಯವಾಗಿಲ್ಲ. ಅವರಿಗೆ ತಮ್ಮ ಮಿತಿಯೂ ಗೊತ್ತಿದೆ.ಅಂತಲೇ ಅವರು ಒಕ್ಕಲಿಗರು ಪ್ರಬಲವಾಗಿರುವ ಪ್ರದೇಶದಲ್ಲಿ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುತ್ತಾರೆ. ಯಡಿಯೂರಪ್ಪ ಅವರಿಗೆ ಈಗ ದೇವೇಗೌಡರಿಗಿಂತ ಹೆಚ್ಚಿನ ಮಹತ್ವಾಕಾಂಕ್ಷೆ ಇದೆ. ಅವರಿಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಸರ್ಕಾರ ಮಾಡಬೇಕಾಗಿದೆ. ಅದು ಸಾಧ್ಯವಾಗುವಂಥ ಅನೇಕ ಸಿದ್ಧತೆಗಳು ಅವರಲ್ಲಿ ಇದ್ದಂತೆ ಕಾಣುವುದಿಲ್ಲ. ಬರೀ ಜಾತಿ ಮತ್ತು ಹಣವನ್ನು ನೆಚ್ಚಿಕೊಂಡು ರಾಜಕೀಯ ಮಾಡಲು ಆಗದು. ಅವರ ಮಹತ್ವಾಕಾಂಕ್ಷೆಯನ್ನು ಅನೇಕ ಅಭ್ಯರ್ಥಿಗಳು ದುರುಪಯೋಗ ಕೂಡ ಮಾಡಿಕೊಂಡುಬಿಡಬಹುದು.ಯಡಿಯೂರಪ್ಪ ಪಕ್ಷ ಬಿಡಬೇಕು ಎಂದು ತೀರ್ಮಾನ ಮಾಡಿದ ನಂತರ ನಕಾರಾತ್ಮಕವಾಗಿಯೇ ಹೆಚ್ಚು ಮಾತನಾಡಿದ್ದಾರೆ. ಅವರಿಗೆ ತಮ್ಮ `ಬೆನ್ನಿಗೆ ಚೂರಿ ಹಾಕಿದ' ಈಶ್ವರಪ್ಪ ಅವರಂಥ ನಾಯಕರ ಗೂಟದ ಕಾರು ಕಸಿದುಕೊಳ್ಳುವುದು ಹೆಚ್ಚು ಮುಖ್ಯವಾಗಿದೆ ಎಂದು ಅವರ ಮಾತುಗಳಿಂದಲೇ ಅನಿಸುತ್ತದೆ. ಸಾಮಾನ್ಯ ಮತದಾರರಿಗೆ ಇದರಲ್ಲಿ ಆಸಕ್ತಿ ಇರುವುದಿಲ್ಲ. ತನಗೆ ಎಂಥ ಆಡಳಿತ ಸಿಗಬಹುದು ಎಂಬ ಕಡೆಗೇ ಆತನ ಗಮನ ಇರುತ್ತದೆ. ಇದುವರೆಗೆ ಯಡಿಯೂರಪ್ಪ ಅಂಥ ಭರವಸೆಯ ಮಾತುಗಳನ್ನು ಆಡಿಲ್ಲ. ಇನ್ನು ಮುಂದೆ ಆಡಬಹುದೋ ಏನೋ? ಆದರೆ, ಅವರಿಗೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಹಟ ಖಂಡಿತ ಇದೆ. ಹಾಗೆ ಮಾಡಿದಾಗಲೇ ತಮ್ಮ ಸಾಮರ್ಥ್ಯವೇನು ಎಂದು ಪಕ್ಷಕ್ಕೆ ಗೊತ್ತಾಗುತ್ತದೆ ಎಂದೂ ಅವರಿಗೆ ತಿಳಿದಿದೆ. ಅಥವಾ ಅದನ್ನು ತಿಳಿಸಿಕೊಡುವ ಕಾರಣಕ್ಕಾಗಿಯೇ ಅವರು ಪಕ್ಷವನ್ನು ಬಿಟ್ಟಿರಲೂಬಹುದು. ಅದರಲ್ಲಿ ಅವರು ಸಾಕಷ್ಟು ಯಶಸ್ಸು ಗಳಿಸಬಹುದು.ಮುಖ್ಯವಾಗಿ ಯಡಿಯೂರಪ್ಪ ಮತ್ತು ಬಿಜೆಪಿಗಳೆರಡೂ ಒಂದೇ ಮತಬುಟ್ಟಿಗೆ ಕೈ ಹಾಕಬೇಕು. ಈಗ ಯಡಿಯೂರಪ್ಪ ಅವರು ತಮ್ಮ ಆಚೆ ಈಚೆ ಅಲ್ಪಸಂಖ್ಯಾತ `ನಾಯಕ'ರನ್ನು ಕೂಡ್ರಿಸಿಕೊಂಡ ತಕ್ಷಣ ಆ ಸಮುದಾಯದ ಮತಗಳೆಲ್ಲ ಸಿಕ್ಕುಬಿಡುವುದಿಲ್ಲ. ಪಕ್ಷಗಳಿಗೆ ಮತ್ತು ಅವುಗಳ ನಾಯಕರಿಗೆ ಒಂದು ಕಾರ್ಯತಂತ್ರ ಇರುವ ಹಾಗೆ ಸಮುದಾಯಗಳಿಗೂ ಒಂದು ಕಾರ್ಯತಂತ್ರ ಎಂಬುದು ಇದ್ದೇ ಇರುತ್ತದೆ.ಯಾರಿಗೆ ಮತ ಹಾಕಿದರೆ ತನಗೆ ಅನುಕೂಲ ಎಂದು ಸಮುದಾಯದ ನೆಲೆಯಲ್ಲಿ ಚಿಂತನೆ ಆಗುತ್ತದೆ. ನಂತರ ಅದು ಕಾರ್ಯರೂಪಕ್ಕೆ ಬರುತ್ತದೆ. ಇದೆಲ್ಲ ಈ ದೇಶದ ಚುನಾವಣೆಯ ಒಂದು ವಿಸ್ಮಯ. ಅಂತಿಮವಾಗಿ ಲಿಂಗಾಯತ ಸಮುದಾಯ ಕೂಡ ಹೀಗೆಯೇ ಯೋಚನೆ ಮಾಡಿದರೆ ಅಚ್ಚರಿಯೇನೂ ಇಲ್ಲ. ರಾಜಕೀಯವಾಗಿ ಹೆಚ್ಚು `ಜಾಗೃತ'ವಾದ ಸಮುದಾಯ ಅದು.ಮತ್ತೆ ಪ್ರಾಥಮಿಕ ಶಾಲೆಯಲ್ಲಿ ಓದಿದ ಕಥೆಗೇ ಬರುವುದಾದರೆ, ಏಕತೆಯಲ್ಲಿಯೇ ಬಲವಿದೆ. ಯಡಿಯೂರಪ್ಪ ಮತ್ತು ಬಿಜೆಪಿ ಒಂದಾಗಿದ್ದರೆ ಆ ಶಕ್ತಿಯೇ ಬೇರೆ. ಈಗ ಅವರು ಒಂದಾಗಿ ಉಳಿದಿದ್ದರೂ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತಿದ್ದರೇ ಎಂಬುದು ಬೇರೆ ಪ್ರಶ್ನೆ. ಆದರೆ, ಮುಂದೆ ಯಾವತ್ತೋ ಒಂದು ದಿನ ಅಧಿಕಾರಕ್ಕೆ ಬರಬಹುದಿತ್ತು. ಯಡಿಯೂರಪ್ಪ ಅವರನ್ನು ಕಳೆದುಕೊಂಡು ಬಿಜೆಪಿಗೆ ನಷ್ಟವಾಗಿದೆ.ಬಿಜೆಪಿ ಬಿಟ್ಟುದರಿಂದ ಯಡಿಯೂರಪ್ಪ ಅವರಿಗೂ ನಷ್ಟವಾಗಲಿದೆ. ಹಾಗಾದರೆ ಯಾರಿಗೆ ಲಾಭವಾಗುತ್ತದೆ? ಮುಂದಿನ ಸರ್ಕಾರ ರಚನೆಯಲ್ಲಿ ಯಡಿಯೂರಪ್ಪ ಪಾತ್ರ ಏನಾಗಿರುತ್ತದೆ? ಅಥವಾ ಅಂಥ ಪಾತ್ರವಾಡಲು ಅವರಿಗೆ ಜನರು ಅವಕಾಶ ಕೊಡುತ್ತಾರೆಯೇ? ಡಿಸೆಂಬರ್ ತಿಂಗಳಲ್ಲಿ ರಾಜ್ಯ ರಾಜಕೀಯಕ್ಕೆ ರಂಗೇರುತ್ತದೆ ಎಂದು ಕಳೆದ ಯಾವುದೋ ಒಂದು ಅಂಕಣದಲ್ಲಿ ನಾನು ಬರೆದಂತೆ ನೆನಪು. ಯಡಿಯೂರಪ್ಪ ಅವರ ರಾಜೀನಾಮೆ, ತಿಂಗಳ ಆರಂಭದಲ್ಲಿಯೇ ಆ ರಂಗನ್ನು ಏರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry