ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

ಭಾನುವಾರ, ಮಾರ್ಚ್ 24, 2019
27 °C

ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

Published:
Updated:
ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

ನಾಳೆ ಅಂತರರಾಷ್ಟ್ರೀಯ ಮಹಿಳಾ ದಿನ. ಈ ದಿನಾಚರಣೆಗಾಗಿ ವಿಶ್ವಸಂಸ್ಥೆ ನೀಡಿರುವ ಈ ಬಾರಿಯ ಘೋಷವಾಕ್ಯ ‘ಪ್ರಗತಿಗಾಗಿ ಒತ್ತಾಯಿಸಿ’. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿರುವಂತಹ 107ನೇ ವರ್ಷ ಇದು. ಮಹಿಳಾ ದಿನಾಚರಣೆಯ ಶತಮಾನೋತ್ಸವ 2011ರಲ್ಲಿ ನಡೆದಿತ್ತು. ಎಂದರೆ, ಮಹಿಳಾ ಹಕ್ಕುಗಳ ಕುರಿತಾದ ಅರಿವು ಮೂಡಿ ಎಷ್ಟೆಲ್ಲಾ ವರ್ಷಗಳಾದವು ಎನಿಸುತ್ತದೆ. ಹೀಗಿದ್ದೂ ಸಮಾನತೆ ಎಂಬುದು ಮಹಿಳೆ ಬದುಕಲ್ಲಿ ಸಾಕಾರವಾಗಿಲ್ಲ. ಮಹಿಳೆ ವಿರುದ್ಧದ ಪೂರ್ವಗ್ರಹಗಳು ಕಡಿಮೆ ಆಗಿಲ್ಲ. ತಾರತಮ್ಯದ ಸಾಮಾಜಿಕ ಮೌಲ್ಯಗಳು ಇಂದಿಗೂ ನಮ್ಮನ್ನಾಳುತ್ತಲೇ ಇವೆ. ಹೆಣ್ಣೆಂಬ ಕಾರಣಕ್ಕಾಗಿ ಅವಕಾಶಗಳು ನಿರಾಕರಣೆ ಆಗುವುದೂ ಮುಂದುವರಿದಿದೆ ಎಂಬುದಕ್ಕೆ ಏನು ಹೇಳುವುದು? ಸಮಾಜದಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತಿದೆ. ಹಿಂದೆಂದೂ ನಾವು ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿದ್ದ ಅದ್ಭುತಗಳನ್ನೆಲ್ಲಾ ತಂತ್ರಜ್ಞಾನದ ಆವಿಷ್ಕಾರಗಳು ಇಂದು ನಮ್ಮೆದುರು ಸಾಕಾರಗೊಳಿಸುತ್ತಿವೆ. ಜಗತ್ತಿನಲ್ಲಿ ಎಷ್ಟೆಲ್ಲಾ ಅಭಿವೃದ್ಧಿ ಸಾಧ್ಯವಾಗಿದೆ. ಆಧುನಿಕ ಬದುಕಿನ ಅನುಕೂಲಗಳನ್ನೆಲ್ಲಾ ನಾವು ಅನುಭವಿಸುತ್ತಿದ್ದೇವೆ. ಆದರೆ ಹೆಣ್ಣಿನ ಕುರಿತಾದ ಮನೋಧರ್ಮ ಮಾತ್ರ ಏಕೆ ನಿಂತ ನೀರಾಗಿದೆ? ಅವಳನ್ನು ಅಧೀನ ನೆಲೆಯಲ್ಲಿ ಪರಿಭಾವಿಸುವ ದೃಷ್ಟಿಕೋನ ನಿತ್ಯನೂತನ ಎನಿಸುವ ರೀತಿ ವಿಭಿನ್ನ ಬಗೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇದೆ ಏಕೆ?

ವಿಶ್ವ ಆರ್ಥಿಕ ವೇದಿಕೆಯ ಕಳೆದ ವರ್ಷದ (2017) ಜಾಗತಿಕ ಲಿಂಗತ್ವ ಅನುಪಾತ ವರದಿಯಂತೂ ಬೆಚ್ಚಿಬೀಳಿಸುವ ಅಂಶವನ್ನು ಬಯಲು ಮಾಡಿದೆ. ‘ಲಿಂಗತ್ವ ಅಸಮಾನತೆ ಕಡಿಮೆ ಮಾಡುವ ಪ್ರಯತ್ನಗಳು ಇದೇ ರೀತಿಯೇ ಮುಂದುವರಿದಲ್ಲಿ ಈ ಅಸಮಾನತೆ ಹೋಗಲಾಡಿಸಲು ಇನ್ನೂ 217 ವರ್ಷಗಳು ಬೇಕಾಗಬಹುದು’ ಎಂದು ಅದು ಲೆಕ್ಕ ಹಾಕಿದೆ. ಇದು ನಮ್ಮ ನೀತಿ ನಿರೂಪಕರ ಕಣ್ಣು ತೆರೆಸುವುದೇ? ಕನಿಷ್ಠ, ‘ಪ್ರಗತಿಗಾಗಿ ಒತ್ತಾಯಿಸಿ’ ಎಂಬಂಥ ವಿಶ್ವಸಂಸ್ಥೆಯ ಘೋಷವಾಕ್ಯವನ್ನು ಎಲ್ಲಾ ಕ್ಷೇತ್ರಗಳಲ್ಲೂ ಅಳವಡಿಸಿಕೊಳ್ಳಬೇಕಾದ ಜರೂರು ಇಂದು ನಮ್ಮ ಮುಂದಿದೆ ಎಂಬ ವಾಸ್ತವವನ್ನಾದರೂ ಸಮಾಜ ಅರಿತುಕೊಳ್ಳುವುದೇ?

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಘೋಷವಾಕ್ಯವನ್ನು 1996ರಿಂದ ನೀಡುವ ಸಂಪ್ರದಾಯವನ್ನು ವಿಶ್ವಸಂಸ್ಥೆ ಪಾಲಿಸಿಕೊಂಡು ಬಂದಿದೆ. ಆಗ ಆ ವರ್ಷ ವಿಶ್ವಸಂಸ್ಥೆ ನೀಡಿದ್ದಂತಹ  ಮೊದಲ ಘೋಷವಾಕ್ಯ: ‘ಹಿಂದಿನದನ್ನು ಸಂಭ್ರಮಿಸಿ ಭವಿಷ್ಯಕ್ಕೆ ಯೋಜಿಸುವುದು’.  ‘ಎ ವಿಂಡಿಕೇಷನ್ ಆಫ್ ದಿ ರೈಟ್ಸ್ ಆಫ್ ವುಮನ್: ವಿಥ್ ಸ್ಟ್ರಿಕ್ಚರ್ಸ್ ಆನ್ ಪೊಲಿಟಕಲ್ ಅಂಡ್ ಮಾರಲ್ ಸಬ್ಜೆಕ್ಟ್ಸ್‌’  ಪುಸ್ತಕವನ್ನು 18ನೇ ಶತಮಾನದ ಬ್ರಿಟಿಷ್ ಸ್ತ್ರೀವಾದಿ ಚಿಂತಕಿ ಮೇರಿ ವೊಲ್‌ಸ್ಟೊನ್‌ಕ್ರಾಫ್ಟ್ ಬರೆದಿದ್ದರು. ‘ಮಹಿಳೆಗೆ ಶಿಕ್ಷಣ ಅಗತ್ಯ’ ಎಂಬುದನ್ನು ಬೆಂಬಲಿಸದ ಶೈಕ್ಷಣಿಕ ಹಾಗೂ ರಾಜಕೀಯ ಸಿದ್ಧಾಂತಗಳ ಪ್ರತಿಪಾದಕರಿಗೆ ಉತ್ತರ ನೀಡಿದ್ದ  ಕೃತಿ ಅದು. ಮಹಿಳೆಯರನ್ನು ಸಮಾಜದಲ್ಲಿ ಕೇವಲ ಆಲಂಕಾರಿಕ ನೆಲೆಯಲ್ಲಿ ನೋಡದೆ ಪುರುಷರಷ್ಟೇ ಮೂಲಭೂತ ಹಕ್ಕುಗಳಿರುವ ಮನುಷ್ಯರಾಗಿ ನೋಡಬೇಕೆಂದು ಅವರು ಪ್ರತಿಪಾದಿ

ಸಿದ್ದರು. ಇನ್ನು, ನಮ್ಮ ಕನ್ನಡದ ಭಾವಪ್ರಪಂಚದಲ್ಲಿ, 12ನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿ ‘ನಾಮದಲ್ಲಿ ಹೆಂಗಸೆಂಬ ಹೆಸರಾದರೇನು ಭಾವಿಸಲು ಗಂಡು ರೂಪು ನಿಮ್ಮ ದಯದಿಂದ’ ಎಂದು ಹೇಳಬೇಕಾದ ಅನಿವಾರ್ಯವಾದರೂ ಏಕೆ ಬಂತು? ಹೆಣ್ಣನ್ನು ಕೇವಲ ದೇಹವಾಗಿ ಅವಳ ವ್ಯಕ್ತಿತ್ವದ ಇತರ ಆಯಾಮಗಳ ಇರುವಿಕೆಯನ್ನು ಗುರುತಿಸದ ಸಮಾಜಕ್ಕೆ ಇದು ಒಂದು ಬಗೆಯ ಉತ್ತರವಾಗಿತ್ತೇ? ಆದರೆ ಹೀಗೆ ತನ್ನ ಅಸ್ಮಿತೆ ಕಂಡುಕೊಳ್ಳಲು ಹಾಗೂ ಪ್ರತಿಪಾದಿಸಿಕೊಳ್ಳುವ ಸ್ಥಿತಿ ಹೆಣ್ಣಿಗೆ ಈಗಲೂ ಮುಂದುವರಿದಿದೆ.

ಮಹಿಳಾ ಸಬಲೀಕರಣದಿಂದ ಮಾತ್ರ ‘ನವ  ಭಾರತ’ ಕಟ್ಟುವ ಕನಸು ಸಾಕಾರ ಮಾಡಿಕೊಳ್ಳುವುದು ಸಾಧ್ಯ ಎಂದು ಕಳೆದ ತಿಂಗಳು ರೇಡಿಯೊದ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಭಾರತ ಸಾಗುತ್ತಿದೆ. ಹೀಗಾಗಿ ‘ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳಲ್ಲಿ ಸಮಾನ ಅವಕಾಶಗಳನ್ನು ಮಹಿಳೆಯರು ಪಡೆದುಕೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ. ನವ ಭಾರತದಲ್ಲಿ ಸಬಲೀಕರಣಗೊಂಡ ಮಹಿಳೆಯರು ರಾಷ್ಟ್ರದ ಅಭಿವೃದ್ಧಿಯಲ್ಲಿ ಸಹಪಾಲುದಾರರಾಗಿರುತ್ತಾರೆ’ ಎಂದಿದ್ದಾರೆ ಅವರು. ‘ಪರಿಪೂರ್ಣ ಮಹಿಳೆಯ ಪರಿಕಲ್ಪನೆ ಎಂದರೆ ಪರಿಪೂರ್ಣ ಸ್ವಾತಂತ್ರ್ಯ ಎಂದಿದ್ದರು ಸ್ವಾಮಿ ವಿವೇಕಾನಂದ’ ಎಂಬುದನ್ನು ಮೋದಿ ಅವರು ಈ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ಪರಿಪೂರ್ಣ ಸ್ವಾತಂತ್ರ್ಯ ಎಂಬುದು ಮಹಿಳೆಗಿನ್ನೂ ಮರೀಚಿಕೆಯೇ ಆಗಿದೆ ಎಂಬುದನ್ನು ಹೇಗೆ ಅಲ್ಲಗಳೆಯುವುದು? ಮಹಿಳೆಯರ ಹೆಸರಿನಿಂದ ಪುರುಷರನ್ನು ಗುರುತಿಸುವ ವಿಶಿಷ್ಟ ಪರಂಪರೆಯನ್ನೂ ಮೋದಿ ಅವರು ಈ ಭಾಷಣದಲ್ಲಿ ಗುರುತಿಸಿದ್ದಾರೆ. ಯಶೋದಾ ನಂದನ, ಕೌಸಲ್ಯಾನಂದನ, ಗಾಂಧಾರಿಪುತ್ರ ಎಂದು ತಾಯಿ ಹೆಸರಿಂದ

ಪುತ್ರನನ್ನು ಗುರುತಿಸುವ ಪರಂಪರೆಯನ್ನು ಮೋದಿ ಅವರು ಪ್ರಸ್ತಾಪಿಸಿದ್ದಾರೆ. ಆದರೆ ಭಾವನಾತ್ಮಕ ನೆಲೆಯಲ್ಲಿ ತಾಯಿಯನ್ನು ಗುರುತಿಸುವ ಈ ಪರಂಪರೆಯಷ್ಟೇ ನಮಗೆ ಸಾಕೇ? ಅದು ವ್ಯಾವಹಾರಿಕ ಜಗತ್ತಿನಲ್ಲೂ ಅನುರಣಿಸಬೇಕಲ್ಲವೇ? ಭಾರತೀಯ ಮಹಿಳೆಗೆ ಸಮಾನತೆ ಎಂಬುದು ಕುಟುಂಬದೊಳಗೆ ಈಗಲೂ ಎಷ್ಟು ಕಷ್ಟ ಎಂಬುದಕ್ಕೆ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‍ ವಜಾ ಮಾಡಿದ ಇತ್ತೀಚಿನ ಪ್ರಕರಣವನ್ನು ಗಮನಿಸಬಹುದು. ‘ಪತ್ನಿಯು ರುಚಿಯಾಗಿ ಹಾಗೂ ಸಾಕಷ್ಟು ಅಡುಗೆ ಮಾಡುವುದಿಲ್ಲ. ಆಕೆ ನನ್ನೊಟ್ಟಿಗೆ ಸಮಯ ಕಳೆಯುವುದಿಲ್ಲ. ನಾನು ಕಚೇರಿಯಿಂದ ತಡವಾಗಿ ಬಂದಾಗ ಒಂದು ಲೋಟ ನೀರನ್ನೂ ಕೊಡುವುದಿಲ್ಲ. ಸಂಜೆ 6ಕ್ಕೆ ಮನೆಗೆ ಬಂದರೂ ಮತ್ತೆ ಸ್ವಲ್ಪ ಹೊತ್ತು ಮಲಗುತ್ತಾಳೆ. ಆ ನಂತರ ರಾತ್ರಿ  8.30ರವರೆಗೆ ಅಡುಗೆ ಮಾಡುವುದಿಲ್ಲ’ ಎಂದು ಈ ಪ್ರಕರಣದಲ್ಲಿ ಪತಿ ದೂರಿದ್ದರು. ಜೊತೆಗೆ ‘ಆಕೆ ಬೆಳಿಗ್ಗೆ ತಡವಾಗಿ ಏಳುತ್ತಾಳೆ’ ಎಂಬುದೂ ಪತಿಯ ಮತ್ತೊಂದು ಆಕ್ಷೇಪ. ಆದರೆ, ಬೆಳಿಗ್ಗೆ ತಡವಾಗಿ ಎದ್ದರೆ ಆಕೆ  ಅಡುಗೆ ಮಾಡುವುದಿಲ್ಲ ಎಂಬುದು ಇದರ ಅರ್ಥವಲ್ಲ. ಪತಿ ಹೊರಿಸಿದ  ಆರೋಪ ತಳ್ಳಿ ಹಾಕಿದ್ದ ಪತ್ನಿ, ‘ಬೆಳಿಗ್ಗೆ ಉದ್ಯೋಗಕ್ಕೆ ಹೋಗುವ ಮೊದಲು ಇಡೀ ಕುಟುಂಬಕ್ಕೆ ಅಡುಗೆ ಮಾಡಿಯೇ ಹೋಗುತ್ತೇನೆ’ ಎಂದು ಹೇಳಿದ್ದರು. ಹೀಗಾಗಿ, ‘ಇದೇನೂ ಕ್ರೂರ ಸಂಗತಿಯಲ್ಲ’ ಎಂದು ಹೇಳಿರುವ ಹೈಕೋರ್ಟ್, ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಆದರೆ ಮಹಿಳೆಯ ದುಡಿಮೆ ಹಾಗೂ ವಿಶ್ರಾಂತಿಯ ಮಾಲೀಕತ್ವವನ್ನೂ ತಮ್ಮದಾಗಿಸಿಕೊಳ್ಳಲು ಯತ್ನಿಸುವ ಇಂತಹ ಕೌಟುಂಬಿಕ ಮೌಲ್ಯಗಳಿಗೆ ಏನು ಹೇಳಬೇಕು?

ಸಾರ್ವಜನಿಕ ವ್ಯವಹಾರಗಳಲ್ಲಿ ಭಾಗವಹಿಸುವ ಅವಕಾಶಗಳ ಸಾಧ್ಯತೆಗಳು ಪ್ರಜಾಪ್ರಭುತ್ವದ ಮೂಲ ಸತ್ವ. ಆದರೆ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕು ಕೂಡ ಮಹಿಳೆಗೆ ಸುಲಭದಲ್ಲಿ ದಕ್ಕಲಿಲ್ಲ. ಹೋರಾಟದ ಮೂಲಕವೇ ಜಗತ್ತಿನ ಮಹಿಳೆಯರು ಪಡೆದುಕೊಳ್ಳಬೇಕಾಯಿತು. ಬ್ರಿಟನ್‍ನಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಹೋರಾಟ ನಡೆಸಿದ ನಂತರ 1918ರಲ್ಲಿ ಮತದಾನದ ಹಕ್ಕು ಪಡೆದುಕೊಂಡರು ಮಹಿಳೆಯರು. ಮಹಿಳೆಯರ ಬಗ್ಗೆ ಜನರ ಮನೋಭಾವ ಬದಲಿಸುವ ಹೋರಾಟವಾಗಿತ್ತು ಅದು. ಆ ಹೋರಾಟದ ಫಲವಾಗಿ ಬ್ರಿಟನ್ ಮಹಿಳೆಯರು ಮತದಾನದ ಹಕ್ಕು ಪಡೆದುಕೊಂಡ ಸಾಧನೆಗೆ ಈಗ ಈ ವರ್ಷ ನೂರರ ಸಂಭ್ರಮ. ಆದರೆ, ಈ ಸಂಭ್ರಮಾಚರಣೆ ಜೊತೆಗೇ ಕೊರತೆಯೂ ಕಾಡುತ್ತಿರುವುದು ವಾಸ್ತವ. ಏಕೆಂದರೆ, ಈಗಲೂ ರಾಜಕೀಯ ವಲಯದಲ್ಲಿ ಮಹಿಳೆಯ ಪ್ರಾತಿನಿಧ್ಯ ಪ್ರಮಾಣ ಅತ್ಯಂತ ಕಡಿಮೆಯೇ ಇದೆ. ಹೀಗಾಗಿ ಮತದಾನ ಹಕ್ಕಿನ ಹೋರಾಟದ ಮುಂಚೂಣಿಯಲ್ಲಿದ್ದ ಎಮ್ಮೆಲಿನ್ ಪಾಂಕರ್ಸ್ಟ್ ಅವರ ಮಾತುಗಳು ಶತಮಾನದ ನಂತರ ಈಗಲೂ ಪ್ರಸ್ತುತ: ‘ನಾವಿಲ್ಲಿ ಇದ್ದೇವೆ, ಏಕೆಂದರೆ ನಾವು ಕಾನೂನು ಮುರಿಯುವವರಾಗಿ ಅಲ್ಲ. ಕಾನೂನು ನಿರ್ಮಾಪಕರಾಗುವ ನಮ್ಮ ಪ್ರಯತ್ನದ ಭಾಗವಾಗಿ ನಾವಿಲ್ಲಿ ಇದ್ದೇವೆ’.

ಮತದಾನದ ಹಕ್ಕಿಗಾಗಿ ಮಹಿಳೆಯರು ನಡೆಸಿದ ಈ ಹೋರಾಟಗಳು, ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ಆಯಾಮಗಳನ್ನು ಪಡೆದುಕೊಂಡಿದ್ದವು. ಭಾರತದಲ್ಲಿ ರಾಜಾಡಳಿತವಿದ್ದ ತಿರುವಾಂಕೂರು ಕೊಚ್ಚಿ ಸಂಸ್ಥಾನ, 1920ರಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನದ ಹಕ್ಕು ನೀಡಿತ್ತು. ನಂತರ 1921ರಲ್ಲಿ ಮದ್ರಾಸ್ ಹಾಗೂ ಬಾಂಬೆಯಲ್ಲೂ ಇದು ಜಾರಿಯಾಯಿತು. ಇತರ ರಾಜ್ಯಗಳೂ ಇದನ್ನು ಅನುಸರಿಸಿದವು. ಆದರೆ ಮತದಾನದ ಹಕ್ಕು ಸೀಮಿತವಾಗಿತ್ತು. ಪತ್ನಿಯ ಸ್ಥಾನಮಾನ ಮಹಿಳೆಗೆ ಇರಬೇಕಿತ್ತು. ಹಾಗೆಯೇ  ಆಸ್ತಿ ಹಾಗೂ ಶಿಕ್ಷಣದಂತಹ ಅರ್ಹತೆ ಇದ್ದಲ್ಲಿ ಮಾತ್ರ ಮಹಿಳೆಯರು ಮತ ಹಾಕಬಹುದಾಗಿತ್ತು. 1935ರ ಭಾರತ ಸರ್ಕಾರದ ಕಾಯಿದೆ, ಮತದಾನ ಮಾಡಬಹುದಾದ ಮಹಿಳೆಯರ ಸಂಖ್ಯೆ ಹೆಚ್ಚಿಸಿತು. ಈ ಪ್ರಕ್ರಿಯೆಯಲ್ಲಿ, ಮಹಿಳೆಯರು ಶಾಸನಸಭೆ ಸದಸ್ಯರೂ ಆದರು. 1926ರಲ್ಲಿ ನಡೆದ ಚುನಾವಣೆಗಳಲ್ಲಿ, ಮದ್ರಾಸ್‌ನ ವಿಧಾನ ಪರಿಷತ್ ಚುನಾವಣೆಗೆ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಮಂಗಳೂರಿನಿಂದ ಸ್ಪರ್ಧಿಸಿದ್ದರು. ಆದರೆ ಕಡಿಮೆ ಅಂತರದಲ್ಲಿ ಸೋಲುಂಡಿದ್ದರು. ಡಾ.ಮುತ್ತುಲಕ್ಷ್ಮಿ ರೆಡ್ಡಿ ಅವರು 1927ರಲ್ಲಿ ಮದ್ರಾಸ್‌ನಲ್ಲಿ ಶಾಸನಸಭೆ ಸದಸ್ಯರಾದ ಮೊದಲ ಮಹಿಳೆ. ಹೀಗಿದ್ದೂ ಸಾರ್ವತ್ರಿಕ ಮತದಾನದ ಹಕ್ಕು ಪಡೆದುಕೊಳ್ಳಲು ಸ್ವಾತಂತ್ರ್ಯ ಬರುವವರೆಗೆ ಭಾರತೀಯ ಮಹಿಳೆಯರು ಕಾಯಬೇಕಾಯಿತು ಎಂಬುದು ಇತಿಹಾಸ.

ನಾವೀಗ ಜಾಗತಿಕ ಸಂದರ್ಭದಲ್ಲಿ ಬದುಕುತ್ತಿದ್ದೇವೆ. ಮೂವರು ಮಹಿಳೆಯರ ಪೈಕಿ ಒಬ್ಬರು ದೈಹಿಕ ಅಥವಾ ಲೈಂಗಿಕ ಹಿಂಸೆ ಅನುಭವಿಸುವ ಸ್ಥಿತಿ ಈಗಲೂ ಏಕೆ ಇದೆ?  ‘ಸಾಕಿನ್ನು…’ (enough is enough) ಎಂದು ಅನುರಣಿಸುತ್ತಿರುವ ಮಾತುಗಳು ಬದಲಾವಣೆಗೆ ಮುನ್ನುಡಿಯಾಗಬೇಕಲ್ಲವೇ? ಸಾಮಾಜಿಕ ಮಾಧ್ಯಮಗಳಲ್ಲಿ ಮೀ ಟೂ(#me too) ಆಂದೋಲನ ಜಗತ್ತಿನಾದ್ಯಂತ ಲೈಂಗಿಕ ಕಿರುಕುಳಗಳ ಸ್ವರೂಪವನ್ನು ಸಾರ್ವಜನಿಕ ವಲಯಕ್ಕೆ ತಂದಿದೆ. ಇಂತಹ ಸಂದರ್ಭದಲ್ಲಿ ಮೊನ್ನೆ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೂ ಲಿಂಗತ್ವ ಸಮಾನತೆ ಸಂದೇಶ ಪ್ರಸಾರಕ್ಕೆ ವೇದಿಕೆಯಾದದ್ದು ವಿಶೇಷ. ಝಗಮಗಿಸುವ ಈ 90ನೇ ಪ್ರಶಸ್ತಿ ಪ್ರದಾನ ಸಮಾರಂಭ ಲೈಂಗಿಕ ರಾಜಕಾರಣ ಹಾಗೂ ಎಲ್ಲರನ್ನೂ ಒಳಗೊಳ್ಳುವ ವಿಚಾರದ ಸಂವಾದದ ನೆಲೆಯಾಗಿದ್ದು ದೊಡ್ಡದು. ಪ್ರಶಸ್ತಿಗೆ ನಾಮಕರಣಗೊಂಡಂತಹ ಸಭಾಂಗಣದಲ್ಲಿದ್ದ ಎಲ್ಲಾ ಮಹಿಳೆಯರೂ ಎದ್ದು ನಿಲ್ಲಬೇಕೆಂದು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಫ್ರಾನ್ಸೆಸ್ ಮೆಕ್‍ಡಾರ್ಮಾಂಟ್ ಅವರು ತಾವು ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಕೋರಿಕೊಂಡಿದ್ದು ವಿಶೇಷವಾಗಿತ್ತು. ನಂತರ ಅವರು ಹೇಳಿದ ಮಾತುಗಳಿವು: ‘ನಮ್ಮೆಲ್ಲರಲ್ಲೂ ಹೇಳಲು ಕಥೆಗಳಿವೆ. ಹಣಕಾಸಿನ ನೆರವು ಬಯಸುವ ಯೋಜನೆಗಳಿವೆ. ಸಮಾನತೆಯ ವಿಷಯ ಪಾರ್ಟಿಗಳಲ್ಲಷ್ಟೇ ಆಡುವ ಮಾತುಗಳಾಗಬಾರದು. ಸಿನಿಮಾದ ಒಪ್ಪಂದಗಳಲ್ಲಿ ಲಿಂಗತ್ವ ಹಾಗೂ ಜನಾಂಗೀಯ ವೈವಿಧ್ಯ ಸಾಧನೆಗೆ ಅವಕಾಶ ಕಲ್ಪಿಸಬೇಕು’. 

ಪ್ರತಿದಿನ 25,000 ಲೇಖನಗಳು ‘ವಿಕಿಪೀಡಿಯ’ದಲ್ಲಿ ಸೃಷ್ಟಿಯಾಗುತ್ತವೆ. ಹೀಗಿದ್ದೂ ಶೇ 17ರಷ್ಟು ಜೀವನ ಚರಿತ್ರೆಗಳು ಮಾತ್ರ ಮಹಿಳೆಯರದ್ದಾಗಿರುತ್ತವೆ ಎಂದು ಯುನೆಸ್ಕೊ ಹೇಳಿದೆ. ಹೀಗಾಗಿ, ಡಿಜಿಟಲ್ ವಲಯದಲ್ಲಿ ಮಹಿಳೆಗೆ ದಕ್ಕಬೇಕಾದ ನೆಲೆ ಕಲ್ಪಿಸಲು ಬದ್ಧವಾಗಿರುವುದಾಗಿ ಯುನೆಸ್ಕೊ ಮತ್ತು ವಿಕಿಪೀಡಿಯ ಹೇಳಿವೆ. ಎಂದರೆ ಪ್ರತಿದಿನದ ಇತಿಹಾಸವನ್ನು ಕಟ್ಟುವಾಗಲೂ ಮಹಿಳೆಯ ಕೊಡುಗೆಗಳು ದಾಖಲಾಗದೆ ನೇಪಥ್ಯಕ್ಕೆ ಹೇಗೆ ಸರಿದುಹೋಗುತ್ತವೆ ಎಂಬುದನ್ನು ಇದು ಮತ್ತೊಮ್ಮೆ ನಮಗೆ ನೆನಪಿಸುತ್ತದೆ.

ರಾಜ್ಯದಲ್ಲಿ ಶಿವಮೊಗ್ಗದಲ್ಲಿ ನಾಳೆ ಹಾಗೂ ನಾಳಿದ್ದು (ಮಾ.8 ಮತ್ತು 9) ‘ಸಮತೆಯೆಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಸಂಘಟನೆಗಳು ಆಯೋಜಿಸಿವೆ. ಸಮಾನತೆ- ಸಹಬಾಳ್ವೆಯ ಬದುಕನ್ನು ಕಟ್ಟುವ ಕನಸನ್ನು ‘ಸಮತೆಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮ ಪೋಷಿಸುತ್ತಿದೆ. ಈ ಕನಸನ್ನು ನನಸಾಗಿಸುವ ದಿಕ್ಕಿನೆಡೆ ಕೆಲಸ ಮಾಡಲು ಎಲ್ಲರಿಗೂ ಪ್ರೇರಣೆ ಒದಗಿದಲ್ಲಿ ಅದು ನಿಜಕ್ಕೂ ಮಹಿಳಾ ದಿನದ ಆಚರಣೆಯನ್ನು ಸಾರ್ಥಕವಾಗಿಸುತ್ತದಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry