ಭಾನುವಾರ, ಡಿಸೆಂಬರ್ 15, 2019
24 °C

ಯಾರಿಗೋ ಜ್ವರ, ಸೆಕ್ಯುಲರಿಸಂಗೆ ಬರೆ

ನಾರಾಯಣ ಎ Updated:

ಅಕ್ಷರ ಗಾತ್ರ : | |

ಯಾರಿಗೋ ಜ್ವರ, ಸೆಕ್ಯುಲರಿಸಂಗೆ ಬರೆ

ಪಾರ್ಲಿಮೆಂಟಿನಲ್ಲಿ ಅವರು ಕ್ಷಮಾಪಣೆ ಕೇಳಲೇಬೇಕು ಎಂದು ಪಟ್ಟು ಹಿಡಿಯುವ ಅಗತ್ಯವೇನೂ ಇರಲಿಲ್ಲ. ಅವಶ್ಯಕತೆ ಇದ್ದದ್ದು ಅವರ ಕ್ಷಮೆಯಾಚನೆ ಅಲ್ಲ.

ಮಾನವೀಯತೆಯಲ್ಲಿ ಮತ್ತು ಪ್ರಜಾತಂತ್ರದಲ್ಲಿ ನಂಬಿಕೆ ಇರುವ ಜನ, ಅವರಿಂದ ಕೇಳಿ ಪಡೆದುಕೊಳ್ಳಬೇಕಾಗಿದ್ದದ್ದು ಸ್ಪಷ್ಟನೆಯನ್ನು, ವಿವರಣೆಯನ್ನು ಮತ್ತು ಸಮರ್ಥನೆಯನ್ನು. ಅವರು ಕ್ಷಮೆ ಕೇಳುವುದರೊಂದಿಗೆ ಎಲ್ಲವೂ ಮುಗಿದುಹೋಯಿತು ಎನ್ನುವುದರಿಂದ ಸಂವಿಧಾನ ಜಯಿಸಲಿಲ್ಲ. ವಿಷಯ ಇತ್ಯರ್ಥ ಆಗಲಿಲ್ಲ. ಕ್ಷಮೆಯಾಚನೆ ಹೃದಯದಿಂದ ಮೂಡಿಬರಬೇಕಾದ ಸಂವೇದನೆ. ರಾಜಕೀಯ ಒತ್ತಾಯಕ್ಕಾಗಿ ಯಾಚಿಸುವ ಕ್ಷಮೆ ಒಂದು ಸುಂದರವಾದ ಸುಳ್ಳು. ಪ್ರಜಾತಂತ್ರ ಎನ್ನುವುದು ಅರ್ಧ ಪ್ರಹಸನ, ಅರ್ಧ ಪ್ರಮಾಣ. ಭಾರತದಪ್ರಜಾತಂತ್ರದಲ್ಲಿ ಪ್ರಹಸನವೇ ಪ್ರಮಾಣವಾಗುತ್ತಿದೆಯೇನೋ ಎಂದು ಭಾಸವಾಗುವಂತೆ ಎಲ್ಲವೂ ಮುಗಿದುಹೋಯಿತು ನೋಡಿ.

ಇಷ್ಟು ಹೇಳಿದ್ದು ಕೇಂದ್ರದಲ್ಲಿ ಸಚಿವರಾಗಿರುವ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು (ಹೆಸರು: ಅನಂತಕುಮಾರ ಹೆಗಡೆ, ಜನನ: 1968, ಖಾತೆ: ಕೌಶಲಾಭಿವೃದ್ಧಿ) ಭಾರತದ ಸಂವಿಧಾನದ ಮೂಲಭೂತ ಅಂಶಗಳಲ್ಲಿ ಒಂದಾಗಿರುವ ಸೆಕ್ಯುಲರಿಸಂ ವಿರುದ್ಧ ಹರಿಹಾಯ್ದದ್ದು, ಸಂವಿಧಾನ ಬದಲಾಯಿಸಬೇಕು ಎಂದದ್ದು ಮತ್ತು ಆ ನಂತರ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದ್ದು ಮತ್ತು ಅಲ್ಲಿಗೆ ಎಲ್ಲವೂ ಅಂತ್ಯವಾಗಿದ್ದು ಇತ್ಯಾದಿಗಳಿಗೆ ಸಂಬಂಧಿಸಿದಂತೆ.

ಉತ್ತರ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಮತದಾರರನ್ನು ಪಂಚಮ ಬಾರಿಗೆ ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಈ ಕೇಂದ್ರ ಸಚಿವರು ಸೆಕ್ಯುಲರಿಸಂ ಬಗ್ಗೆ ಹರಿಹಾಯ್ದದ್ದು ಇದೇ ಮೊದಲೇನಲ್ಲ. ಅಂತೆಯೇ ಸೆಕ್ಯುಲರಿಸಂ ಎನ್ನುವ ಸಾಂವಿಧಾನಿಕ ಮೌಲ್ಯವನ್ನು ಬೀದಿ ಬೀದಿಯಲ್ಲಿ ನಿಂತು ಅಣಕಿಸುವುದು ಎಂದರೆ ಅದೊಂದು ಪವಿತ್ರವಾದ ದೇಶಸೇವೆ ಮತ್ತು ಈಶಸೇವೆ ಎನ್ನುವಂತೆ ನಡೆದುಕೊಳ್ಳುತ್ತಿರುವವರಲ್ಲಿ ಇವರು ಮೊದಲಿಗರೂ ಅಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಿರುವ ಬಿಜೆಪಿಯ ಕಾಲಾಳುಗಳಾದ ಟ್ರಾಲಿಗರಿಂದ ಹಿಡಿದು ಬಿಜೆಪಿಯ ಅಘೋಷಿತ ಆಸ್ಥಾನ ಗುರುವಿನ ರೀತಿ ಕಾರ್ಯವೆಸಗುತ್ತಿರುವ ಉಡುಪಿಯ ಪೇಜಾವರ ಮಠದ ಮುಖ್ಯಸ್ಥ ವಿಶ್ವೇಶತೀರ್ಥರವರೆಗೆ ಈ ಕೆಲಸವನ್ನು ಆ ಪಕ್ಷದ ಪರ ಇರುವವರೆಲ್ಲಾ ಯಥಾಶಕ್ತಿ ಮಾಡುತ್ತಲೇ ಬಂದಿದ್ದಾರೆ. ಸೆಕ್ಯುಲರಿಸಂ ವಿರುದ್ಧ ಇವರೆಲ್ಲಾ ಸಾರಿರುವ ಧರ್ಮಸಂಗ್ರಾಮ ತುಂಬಾ ಗಂಭೀರವಾದ ವಿಚಾರ. ಇದರ ಬಗ್ಗೆ ಹೇಳುವುದಕ್ಕೆ ಮೊದಲು ಇಂಥವರನ್ನೆಲ್ಲಾ ಪ್ರಶ್ನಿಸುವವರ ಕುರಿತು ಎರಡು ಸ್ಪಷ್ಟೀಕರಣಗಳ ಅಗತ್ಯವಿದೆ.

ಮೊದಲನೆಯದಾಗಿ, ಸಂವಿಧಾನದಲ್ಲಿ ಬದಲಾವಣೆಗಳಾಗಬೇಕು ಅಥವಾ ಸಂವಿಧಾನ ಬದಲಾಗಬೇಕು ಅಂತ ಯಾರಾದರೂ ಸಾರ್ವಜನಿಕವಾಗಿ ಹೇಳಿದಾಕ್ಷಣ ಆ ಹೇಳಿಕೆಯ ಅರ್ಥ, ವ್ಯಾಪ್ತಿ, ಹಿನ್ನೆಲೆ, ಮುನ್ನೆಲೆ ಇತ್ಯಾದಿಗಳನ್ನು ಸ್ಪಷ್ಟಪಡಿಸಿಕೊಳ್ಳದೆ ಏಕಾಏಕಿ ಭಾವನಾತ್ಮಕವಾಗಿ ಅವರ ಮೇಲೆ ಎರಗುವುದು, ಪ್ರತಿಭಟನೆ ಮಾಡುವುದು ಸಾಂವಿಧಾನಿಕ ನಡವಳಿಕೆ ಅಲ್ಲ. ಹಾಗೆಲ್ಲಾ ಮಾಡುವುದರಿಂದ ಸಂವಿಧಾನದ ರಕ್ಷಣೆಯೂ ಆಗುವುದಿಲ್ಲ.

ಈ ಕುರಿತು ಸಂಶಯ ಇರುವವರು ಪರ್ಯಾಯ ಸಂವಿಧಾನ ಎಂದೇ ಗುರುತಿಸಲಾದ ಕೇಶವಾನಂದ ಭಾರತಿ ತೀರ್ಪನ್ನು (1973) ಮತ್ತೊಮ್ಮೆ ಓದಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಆಗ ಇದ್ದ ಅಷ್ಟೂ ಜನ ನ್ಯಾಯಮೂರ್ತಿಗಳು ಸುದೀರ್ಘವಾಗಿ ಪರಾಂಬರಿಸಿ ನೀಡಿದ ಈ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿರುವುದು ಏನು ಎಂದರೆ ‘ಮೂಲಭೂತ ಹಕ್ಕುಗಳೂ ಸೇರಿದಂತೆ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವ ಅರ್ಥಾತ್ ಬದಲಿಸುವ ಪರಮೋಚ್ಚ ಅಧಿಕಾರ ಸಂಸತ್ತಿಗೆ ಇದೆ. ಆದರೆ ಅಂತಹ ಬದಲಾವಣೆಗಳಿಂದಾಗಿ ಸಂವಿಧಾನದ ಮೂಲಸ್ವರೂಪ ಶಿಥಿಲವಾಗಬಾರದು. ಮೂಲಸ್ವರೂಪವನ್ನು ಕೆಡಿಸುವ ಯಾವುದೇ ಬದಲಾವಣೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕವಾಗಿ ಅಸಿಂಧುಗೊಳಿಸಬಹುದು’, ಅಷ್ಟೇ.

ಎರಡನೆಯದಾಗಿ, ಈ ದೇಶಕ್ಕೆ ಸಂವಿಧಾನ ನೀಡಿದವರು ಯಾರು ಎನ್ನುವ ಪ್ರಶ್ನೆಗೆ ಸಂಬಂಧಿಸಿದ್ದು. ಈ ಪ್ರಶ್ನೆಗೆ ಉತ್ತರವನ್ನು ಸಂವಿಧಾನದಲ್ಲೇ ಕಂಡುಕೊಳ್ಳಬೇಕು ಹೊರತು ನಮ್ಮ ಭಾವನೆಗಳಲ್ಲಿ ಅಲ್ಲ. ಸಂವಿಧಾನದಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ದಾಖಲಿಸಿದಂತೆ ದೇಶಕ್ಕೆ ಈ ಸಂವಿಧಾನವನ್ನು ನೀಡಿದ್ದು ಈ ದೇಶದ ಜನ. ಸಂವಿಧಾನದ ಅಂತಿಮ ಸ್ವಾಮಿತ್ವ ಮತ್ತು ವಾರಸುದಾರಿಕೆ ಅವರಿಗೆ ಸೇರಿದ್ದು. ಸಂವಿಧಾನ ರಚಿಸಿದ ಮಹಾನ್ ಮಾನವತಾ

ವಾದಿ ಪ್ರಾಜ್ಞರೆಲ್ಲಾ ಜನರ ಪರವಾಗಿ, ಜನರ ಆಣತಿಯನ್ನಷ್ಟೇ ನಿರ್ವಹಿಸಿದ್ದು. ಸಂವಿಧಾನದಲ್ಲಿ ಬದಲಾವಣೆ ಬೇಕು ಎಂದು ಹಾರಾಡುವವರು ಮತ್ತು ಅಂತಹ ಬೇಡಿಕೆಗಳ ವಿರುದ್ಧ ಹೋರಾಡುವವರು ಈ ಎರಡು ಸತ್ಯಗಳನ್ನು ತಿಳಿದು ವ್ಯವಹರಿಸಿದರೆ ಉತ್ತಮ.

ಈಗ ವಿಷಯಕ್ಕೆ ಬರೋಣ. ಕೇಂದ್ರ ಸಚಿವ ಸ್ಥಾನದಲ್ಲಿರುವ ಉತ್ತರ ಕನ್ನಡದ ಸಂಸದರಿಗೆ ಸೆಕ್ಯುಲರಿಸಂ ಕುರಿತಾದ ಅವರ ವಿವಾದಿತ ಹೇಳಿಕೆಯ ಹಿನ್ನೆಲೆಯಲ್ಲಿ ಕೇಳಬೇಕಾಗಿದ್ದದ್ದು ಒಂದೇ ಒಂದು ಸರಳ ಪ್ರಶ್ನೆ: ‘ನಿಮಗೆ ಮತ್ತು ನಿಮ್ಮ ಪಕ್ಷದವರಿಗೆ ಸೆಕ್ಯುಲರಿಸಂ ವಿಚಾರದಲ್ಲಿ ಇರುವ ತಕರಾರಾದರೂ ಏನು?’ ಸಂವಿಧಾನದಲ್ಲಿರುವ ಸೆಕ್ಯುಲರ್ ಅಂಶಗಳು ಯಾರನ್ನೂ ತಾನೊಬ್ಬ ಹಿಂದೂ, ತಾನೊಬ್ಬ ಮುಸ್ಲಿಂ, ತಾನೊಬ್ಬ ಕ್ರಿಶ್ಚಿಯನ್ ಅಥವಾ ತಾನೊಬ್ಬ ಲಿಂಗಾಯತ ಅಂತ ಹೇಳಿಕೊಳ್ಳಲು ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ವಾಸ್ತವದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹಾಗೆ ಹೇಳುವ ಸ್ವಾತಂತ್ರ್ಯವನ್ನು ನೀಡಿರು

ವುದೇ ಸಂವಿಧಾನ ಎತ್ತಿ ಹಿಡಿಯುವ ಸೆಕ್ಯುಲರ್ ತತ್ವ. ಆದುದರಿಂದ ಯಾರಾದರೂ ತಾನು ಹಿಂದೂ ಅಂತ ಹೇಳಲು ತಯಾರಿಲ್ಲ ಅಂತ ಅಂದರೆ ಅದಕ್ಕೆ ಸಚಿವರು ತಿಳಿದುಕೊಂಡ ಹಾಗೆ ಸೆಕ್ಯುಲರಿಸಂ ಕಾರಣವಲ್ಲ. ಬಹುಶಃ ಯಾವ ಕಾರಣಕ್ಕೆ ಬಿ.ಆರ್. ಅಂಬೇಡ್ಕರ್ ತಾನು ಹಿಂದೂ ಅಲ್ಲ ಅಂತ ಘೋಷಿಸಿಕೊಂಡರೋ, ಯಾವ ಕಾರಣಕ್ಕೆ ಈಗ ಲಿಂಗಾಯತರು ತಾವು ಹಿಂದೂಗಳು ಅಲ್ಲ ಅಂತ ಬೇರೆ ಧರ್ಮವಾಗಲು ಹೊರಟಿದ್ದಾರೋ ಅಂತಹದ್ದೇ ಯಾವುದೋ ಕಾರಣಗಳಿಗೋಸ್ಕರ ಕೆಲ ಹಿಂದೂಗಳು ತಾವು ಹಿಂದೂಗಳು ಅಲ್ಲ ಅಂತ ಹೇಳುತ್ತಿರಬಹುದು. ಇಲ್ಲಿ ಸೆಕ್ಯುಲರಿಸಂ ಅನ್ನು ಎಳೆದುತರುವ ಅಗತ್ಯವೇ ಇಲ್ಲ.

ನಿಜವಾದ ಹಿಂದೂ, ನಿಜವಾದ ಮುಸ್ಲಿಂ, ನಿಜವಾದ ಕ್ರಿಶ್ಚಿಯನ್ ಅಥವಾ ಯಾವ ಧರ್ಮವನ್ನೂ ಒಪ್ಪಿಕೊಳ್ಳದ ನಿಜವಾದ ಮನುಷ್ಯ ಮೂಲತಃ ಸೆಕ್ಯುಲರ್ ಆಗಿಯೇ ಇರುತ್ತಾನೆ. ಆದರೆ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಹಿಡಿಯುವ ವ್ಯಕ್ತಿಗಳು ನಿಜವಾದ ಹಿಂದೂ, ನಿಜವಾದ ಮುಸ್ಲಿಂ, ನಿಜವಾದ ಕ್ರಿಶ್ಚಿಯನ್ ಆಗಿರುತ್ತಾರೆ ಎನ್ನುವ ಭರವಸೆ ಏನೂ ಇಲ್ಲವಲ್ಲ. ತಮ್ಮ ಧರ್ಮವೇ ಶ್ರೇಷ್ಠವೆಂದು ಭಾವಿಸಿಕೊಂಡಿರುವ ವ್ಯಸನಿಗಳು ಅಧಿಕಾರ ಹಿಡಿದರೆ ಅವರನ್ನು ನಿರ್ಬಂಧಿಸಲು ಒಂದು ಅಸ್ತ್ರ ಬೇಕು ಎನ್ನುವ ಕಾರಣಕ್ಕೆ ಸಂವಿಧಾನವು ಸೆಕ್ಯುಲರಿಸಂ ತತ್ವವನ್ನು ಅಳವಡಿಸಿಕೊಂಡಿರುವುದು. ಅಧಿಕಾರಕ್ಕೆ ಬಂದವನ ಧರ್ಮ, ಒಲವು, ನಿಲುವುಗಳು ಏನೇ ಇರಲಿ; ಆತ ಅಧಿಕಾರ ಚಲಾಯಿಸುವಾಗ ಎಲ್ಲಾ ಧರ್ಮಗಳಿಂದ ಸಮಾನ ಅಂತರ ಕಾಯ್ದುಕೊಳ್ಳಬೇಕು ಅಥವಾ ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಸಂವಿಧಾನವು ಸೆಕ್ಯುಲರ್ ಆದರ್ಶವನ್ನು ಒಪ್ಪಿಕೊಂಡಿರುವುದು. ವಿಷಯ ಇರುವುದು ಇಷ್ಟೇ. ಹಾಗಿರುವಾಗ ‘ಸೆಕ್ಯುಲರಿಸಂ ಹೆಸರು ಕೇಳಿದರೆ ನೀವ್ಯಾಕೆ ನಖಶಿಖಾಂತ ಉರಿದುಬೀಳುವುದು’ ಎಂದು ಸಚಿವರನ್ನು ಮತ್ತು ಅವರ ಪಕ್ಷದವರನ್ನು ಕೇಳಬೇಕಿದೆ.

ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಓಲೈಸಿದೆ ಎನ್ನುವ ಆಪಾದನೆಯನ್ನು ಸೆಕ್ಯುಲರಿಸಂ ಜತೆ ಜೋಡಿಸಿ ಜನರ ದಾರಿ ತಪ್ಪಿಸುವ ಕೆಲಸವೊಂದು ಬಹಳ ಸಮಯದಿಂದ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕೀಯ ಮಾಡಿದೆ ಎನ್ನುವ ಆಪಾದನೆಯಲ್ಲಿ ಸತ್ಯಾಂಶಗಳಿರಬಹುದು. ಏನಿಲ್ಲ ಎಂದರೂ ಶಾ ಬಾನೊ ಪ್ರಕರಣವಂತೂ ಢಾಳಾಗಿ ಕಾಣಿಸುತ್ತದಲ್ಲ. ಯಾವುದಾದರೂ ಒಂದು ರಾಜಕೀಯ ಪಕ್ಷದ ಸರ್ಕಾರ ಒಂದು ಧರ್ಮದ ಪರ ಅಥವಾ ವಿರುದ್ಧ ನಡೆದುಕೊಳ್ಳುತ್ತದೆ ಎಂದಾದರೆ ಅದಕ್ಕೆ ಸೆಕ್ಯುಲರಿಸಂ ಕಾರಣವಲ್ಲ. ಸೆಕ್ಯುಲರಿಸಂ ತತ್ವವನ್ನು ಸರ್ಕಾರಗಳು ಅನುಸರಿಸದೇ ಇರುವುದು ಅದಕ್ಕೆ ಕಾರಣ. ಓಲೈಕೆ ರಾಜಕಾರಣ ಕೊನೆಗೊಳಿಸಬೇಕು ಎನ್ನುವ ಕಾರಣಕ್ಕೆ ಸೆಕ್ಯುಲರಿಸಂ ಬೇಡ ಎನ್ನುವುದು ಹಾಸ್ಯಾಸ್ಪದ. ಯಾಕೆಂದರೆ ಓಲೈಕೆ ರಾಜಕಾರಣ ಕೊನೆಗೊಳಿಸಲು ಇರುವ ಅಸ್ತ್ರವೇ ಸೆಕ್ಯುಲರಿಸಂ.

ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಕೆಲ ಸವಲತ್ತುಗಳನ್ನು ನೀಡಲಾಗುತ್ತದೆ ಎನ್ನುವ ಕಾರಣಕ್ಕೆ ಸೆಕ್ಯುಲರಿಸಂ ಅನ್ನು ಟೀಕಿಸುವ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಉಡುಪಿಯಲ್ಲಿ ಧರ್ಮ ಸಂಸತ್ತು ಎನ್ನುವ ಧರ್ಮರಾಜಕಾರಣದ ಸಮಾವೇಶದಲ್ಲಿ ‘ಅಲ್ಪಸಂಖ್ಯಾತರಿಗೆ ಸಿಗುವ ಸವಲತ್ತುಗ

ಳನ್ನು ಹಿಂದುಳಿದವರಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೂಡಾ ನೀಡಬೇಕು ಮತ್ತು ಅದಕ್ಕಾಗಿ ಸಂವಿಧಾನ ಬದಲಾವಣೆ ಆಗಬೇಕು’ ಎನ್ನುವ ವಾದವನ್ನು ಪೇಜಾವರ ಮಠದ ಮುಖ್ಯಸ್ಥರು ಮುಂದಿರಿಸಿದ್ದಾರೆ. ಒಬ್ಬ ಸ್ವಾಮೀಜಿ ಎಂದು ಭಕ್ತರಿಂದ ಕರೆಸಿಕೊಳ್ಳುವ, ವಯಸ್ಸಿನಲ್ಲಿ ಹಿರಿಯರಾದ ವಿಶ್ವೇಶತೀರ್ಥರಿಗೆ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ದೊರೆಯುವ ಸವಲತ್ತುಗಳಿಂದಾಗಿ ಆದ ತೊಂದರೆ ಏನು ಅಂತ ಅರ್ಥವಾಗುವುದಿಲ್ಲ.

ಸಂವಿಧಾನವು ಕೆಲವು ಸವಲತ್ತುಗಳನ್ನು ಹಿಂದುಳಿದ ಜಾತಿಗಳಿಗೆ ನೀಡಿದೆ. ಇನ್ನು ಕೆಲವು ಸವಲತ್ತುಗಳನ್ನು ಪರಿಶಿಷ್ಟ ಜಾತಿ, ಪಂಗಡಗಳಿಗೆ ನೀಡಿದೆ. ಇನ್ನು ಕೆಲವು ಸವಲತ್ತುಗಳನ್ನು ಅಲ್ಪಸಂಖ್ಯಾತರಿಗೆ (ಧಾರ್ಮಿಕ ಮತ್ತು ಭಾಷಾ) ನೀಡಿದೆ. ಅವರಿಗೆ ನೀಡಿದ್ದನ್ನು ಇವರಿಗೆ ನೀಡಿಲ್ಲ, ಇವರಿಗೆ ನೀಡಿದ್ದನ್ನು ಅವರಿಗೆ ನೀಡಿಲ್ಲ. ಯಾರಿಗೆ ಏನೇನು ನೀಡಲಾಗಿದೆಯೋ ಅದಕ್ಕೆಲ್ಲಾ ಒಂದು ಕಾರಣವಿದೆ. ಇದನ್ನೆಲ್ಲಾ ಸಂವಿಧಾನ ನಿರ್ಮಾತೃಗಳು ಬಹಳ ಯೋಚಿಸಿ ಮಾಡಿದ್ದಾರೆ. ಇದು ತಾರತಮ್ಯ ನೀತಿಯಲ್ಲ, ಇದು ತಾರತಮ್ಯವನ್ನು ಸರಿಪಡಿಸಲು ಸಂವಿಧಾನ ಬರೆದವರು ಕಂಡುಕೊಂಡ ಒಂದು ಸೂತ್ರ.

ಇದರಿಂದ ಯಾರಿಗಾದರೂ ಅನ್ಯಾಯವಾಗುತ್ತಿದೆ ಅಂತ ಪೇಜಾವರ ಮಠದ ಮುಖ್ಯಸ್ಥರಿಗೆ ಅನ್ನಿಸಿದರೆ ಸುಪ್ರೀಂ ಕೋರ್ಟ್‌ಗೆ ಹೋಗಿ ನ್ಯಾಯ ಕೇಳಬಹುದು. ಅದನ್ನು ಬಿಟ್ಟು ಧರ್ಮ ಸಮಾವೇಶ ಅಂತ ಮಾಡಿ ಧರ್ಮರಾಜಕಾರಣದ ಒಳಸುಳಿಗಳನ್ನು ಅರಿಯದ ಜನರ ಮುಂದೆ, ‘ಪಡೆಯ ಕಟ್ಟು ಧೀರ, ಸಮರ ಕಾದಿದೆ’ ಎಂದು ಅಬ್ಬರಿಸುತ್ತಿರುವ ಮಂದಿಯ ಮುಂದೆ ನಿಂತು ‘ಸಂವಿಧಾನದ ಸೆಕ್ಯುಲರ್ ನೀತಿಯಿಂದಾಗಿ ಹಿಂದೂಗಳಿಗೆ ಅನ್ಯಾಯವಾಯಿತು’ ಎಂದು ವಾದ ಮಂಡಿಸಿದರೆ ಅದು ಧರ್ಮಗಳ ನಡುವೆ ಅಪನಂಬಿಕೆ, ಅಸಹನೆ ಹುಟ್ಟಲು ಕಾರಣವಾಗುತ್ತದೆ. ಅದರ ಜತೆಗೆ ಎಲ್ಲಾ ಧರ್ಮ ಗ್ರಂಥಗಳಿಗಿಂತಲೂ ಶ್ರೇಷ್ಠವಾದ ಸಂವಿಧಾನ ಎಂಬ ಗ್ರಂಥ ಇದೆಯಲ್ಲಾ ಅದನ್ನು ಸಾಮಾನ್ಯ ಹಿಂದೂಗಳು ಅಪನಂಬಿಕೆಯಿಂದ ನೋಡುವಂತಾಗುತ್ತದೆ. ಧರ್ಮ ಏನು, ಧರ್ಮದ ಮರ್ಮ ಏನು ಎಂದು ತಿಳಿದುಕೊಂಡು ವ್ಯವಹರಿಸಬೇಕಾದ ಒಂದು ಸ್ಥಾನದಲ್ಲಿರುವ ಪೇಜಾವರ ಮಠದ ಮುಖ್ಯಸ್ಥರು, ಅಲ್ಪಸಂಖ್ಯಾತರಿಗೆ ನೀಡಿದ ಸವಲತ್ತುಗಳ ಬಗ್ಗೆ ಸಾಂವಿಧಾನಿಕ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದೆ ಮಾತನಾಡುತ್ತಿರುವ ರೀತಿ ಇದೆಯಲ್ಲ; ಅದು ಅವರು ಆರಾಧಿಸಿಕೊಂಡು ಬರುತ್ತಿರುವ ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ ‘ಸ್ವಧರ್ಮೇ ನಿಧನಂ ಶ್ರೇಯ’ ಎನ್ನುವ ತತ್ವಕ್ಕೆ ವಿರುದ್ಧವಾದದ್ದು. ಯಾಕೆಂದರೆ ಅವರು ಮಾಡುತ್ತಿರುವುದು ಯತಿಧರ್ಮದ ಸ್ಪಷ್ಟ ಉಲ್ಲಂಘನೆ.

ಸಂವಿಧಾನದಲ್ಲಿ ಸೆಕ್ಯುಲರಿಸಂ ಹೆಸರಿನಲ್ಲಿ ಇರಬಾರದ್ದು ಏನೋ ಇದೆ ಎಂದೂ, ಇದರಿಂದಾಗಿ ಹಿಂದೂಗಳಿಗೆ ಕಂಡು ಕೇಳರಿಯದ ಅನ್ಯಾಯವಾಗಿದೆ

ಯೆಂದೂ, ಮುಸ್ಲಿಮರಿಗೆ ಅಪಾರ ಲಾಭವಾಗಿದೆಯೆಂದೂ, ಸೆಕ್ಯುಲರಿಸಂ ಎನ್ನುವುದು ಸಂವಿಧಾನ ಪ್ರಣೀತವಾದ ಹಿಂದೂ ವಿರೋಧಿ ನೀತಿ ಎಂದೂ ಮತ್ತು ಇಷ್ಟಕ್ಕೆಲ್ಲಾ ಕಾಂಗ್ರೆಸ್ಸೇ ಕಾರಣವೆಂದೂ ಮಿಥ್ಯೆಗಳ ಸರಪಣಿಯೊಂದನ್ನು ಹೆಣೆದು ಜನರನ್ನು ಬಂಧಿಸಿ ಅದೇ ಜನರನ್ನು ಬಳಸಿ ಸಂವಿಧಾನದ ಬುಡ ಅಲುಗಾಡಿಸುವ ದೀರ್ಘಕಾಲೀನ ಯೋಜನೆಯೊಂದಕ್ಕೆ ನಡೆಯುವ ತಯಾರಿಯ ಭಾಗವಾಗಿ ಸಚಿವರು ಹೇಳಿದ್ದನ್ನು, ಪೇಜಾವರ ಮಠದ ಮುಖ್ಯಸ್ಥರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಇವರು ನಡೆಸುತ್ತಿರುವ ಅಪಪ್ರಚಾರಗಳನ್ನು ಜನ ನಂಬಿರುವುದರಿಂದಲೇ ಇಂದಿನ ಈ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿರುವುದು. ಮುಂದಾದರೂ ಸರಿಯಾದ ಸತ್ಯಗಳನ್ನು ಜನರ ಮುಂದಿಡುವುದರ ಬದಲು ಕ್ಷಮೆ, ಪ್ರತಿಭಟನೆ ಅಂತಲೇ ಇದ್ದರೆ ಸಂವಿಧಾನವನ್ನು ದೇವರೂ ರಕ್ಷಿಸಲಾರ.

ಪ್ರತಿಕ್ರಿಯಿಸಿ (+)