ಬುಧವಾರ, ಆಗಸ್ಟ್ 5, 2020
21 °C

ಯಾರೇ ಗೆಲ್ಲಲಿ, ಇವರಂತೂ ಸೋಲಬೇಕು...

ನಾರಾಯಣ ಎ Updated:

ಅಕ್ಷರ ಗಾತ್ರ : | |

ಯಾರೇ ಗೆಲ್ಲಲಿ, ಇವರಂತೂ ಸೋಲಬೇಕು...

ಸ್ವಾಮೀಜಿ ಎಂದು ಕರೆಸಿಕೊಳ್ಳುವ ಕೆಲ ಕಾವಿಧಾರಿ ವ್ಯಕ್ತಿಗಳು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಸೂಚನೆಗಳು ಸಿಗುತ್ತಿವೆ. ರಾಜಕೀಯ ಅಧಿಕಾರದತ್ತ ದೃಷ್ಟಿ ನೆಟ್ಟ ಹತ್ತಕ್ಕಿಂತಲೂ ಹೆಚ್ಚು ಕಾವಿಧಾರಿಗಳ ಹೆಸರನ್ನು ಮಾಧ್ಯಮಗಳು ಪ್ರಕಟಿಸಿವೆ. ನೇರವಾಗಿ ಹೇಳುವುದಾದರೆ ರಾಜ್ಯದ ಮತದಾರ ನಿಜವಾಗಿ ಪ್ರಜ್ಞಾವಂತನೇ ಆಗಿದ್ದಲ್ಲಿ ರಾಜಕೀಯದ ಹಾದಿ ತುಳಿದಿರುವ ಈ ಕಾವಿಧಾರಿಗಳಲ್ಲಿ ಒಬ್ಬರೂ ಗೆಲ್ಲಬಾರದು. ಕ್ರಿಮಿನಲ್ ಆಪಾದನೆ ಹೊತ್ತು ಜೈಲಿನಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಚುನಾಯಿಸುವುದಕ್ಕಿಂತಲೂ ಈ ಕಾವಿಧಾರಿಗಳನ್ನು ಗೆಲ್ಲಿಸುವುದು ಹೆಚ್ಚು ಅಪಾಯಕಾರಿ. ಧರ್ಮಸಂಕರವು ರಾಜಕೀಯದ ಅಪರಾಧೀಕರಣಕ್ಕಿಂತಲೂ ದೊಡ್ಡ ಅನಾಹುತ.

ಇಂತಹವರಿಂದಾಗಿ ಪ್ರಜಾತಂತ್ರ ಇನ್ನೂ ಕೆಡುತ್ತದೆ ಎನ್ನುವುದು ಇಲ್ಲಿರುವ ಆತಂಕದ ವಿಚಾರ ಅಲ್ಲ. ಈಗಾಗಲೇ ಎಷ್ಟು ಕೆಟ್ಟುಹೋಗಬಹುದೋ ಅಷ್ಟು ಕೆಟ್ಟು ಒಂದು ರೀತಿಯ ಕನಿಷ್ಠತಮ ಸಮತೋಲನದಲ್ಲಿ (low- level equilibrium) ಪ್ರವರ್ತಿಸುತ್ತಿರುವ ಪ್ರಜಾತಂತ್ರ ವ್ಯವಸ್ಥೆಯು ಇವರಿಂದಾಗಿ ಹೆಚ್ಚು ಕೆಡಲಿದೆ ಎನ್ನುವ ಆತಂಕ ಪ್ರಾಶಸ್ತ್ಯದ ವಿಷಯವಲ್ಲ. ಇವರ ನಡೆ, ನುಡಿ ಮತ್ತು ಗುರಿ ಆತಂಕಕ್ಕೆ ಈಡು ಮಾಡಬೇಕಾಗಿರುವುದು ಇವರು ಯಾವ ಧರ್ಮವನ್ನು ಪ್ರತಿನಿಧಿಸುತ್ತಾರೋ ಆ ಧರ್ಮವನ್ನು. ಧರ್ಮ ದಾರಿ ತಪ್ಪುತ್ತಿರುವುದರ ಇನ್ನೊಂದು ಸಂಕೇತ ಇದು.

ಅಂದರೆ ಇದು ಆಯಾ ಧರ್ಮಕ್ಕೆ ಸಂಬಂಧಿಸಿದ ವಿಚಾರವಾಗುತ್ತದಲ್ಲಾ, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಚಾರ ಏನು ಎನ್ನುವ ಪ್ರಶ್ನೆಗಳು ಬರಬಹುದು. ಇಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ ಇದೆ. ಯಾಕೆಂದರೆ ಆ ಧರ್ಮ, ಈ ಧರ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಇಲ್ಲಿರುವುದು ಧರ್ಮ ಎನ್ನುವ ಒಂದು ಸಾಮಾಜಿಕ ನಿಯಂತ್ರಕ ಶಕ್ತಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವ ವಿದ್ಯಮಾನ.

ಸ್ವಾಮೀಜಿ ಎಂದು ಕರೆಸಿಕೊಳ್ಳುವ ಈ ಜಾತಿ ನಾಯಕರು ಕೂಡಾ ಈ ದೇಶದ ಪ್ರಜೆಗಳು. ಆ ಕಾರಣಕ್ಕೆ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇದೆ. ಅದು ಕಾವಿಧಾರಿಗಳೂ ಸೇರಿದಂತೆ ಎಲ್ಲರಿಗೂ ಇರುವ ನಿರಾಕರಿಸಲಾರದ ಹಕ್ಕು. ಆದರೆ, ಒಂದು ಸಮಾಜದಲ್ಲಿ ಯಾರು ಬೇಕಾದರೂ ಮಾಡಬಹುದಾದ ಕೆಲಸಗಳನ್ನು ಮಾಡಲು ಧರ್ಮಗುರುಗಳೇ ಬೇಕಾಗಿಲ್ಲ. ಯಾರಿಂದಲೂ ಮಾಡಲು ಸಾಧ್ಯವಿಲ್ಲದ್ದನ್ನು ಮಾಡಲು ಮಾತ್ರ ಧರ್ಮದ ಹಾದಿ ಹಿಡಿದವರ ಅಗತ್ಯ ಬೀಳುವುದು. ಸಮಾಜದ ಸ್ವಾಸ್ಥ್ಯ ಉಳಿಸುವಲ್ಲಿ ಸಾಂವಿಧಾನಿಕ ಮತ್ತು ಔಪಚಾರಿಕ ಸಂಸ್ಥೆಗಳಿಂದ ಮಾಡಲಾಗದ ಹಲವು ಕಾರ್ಯಗಳಿರುತ್ತವೆ.

ಇಂಥವುಗಳನ್ನು ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪರಿಧಿಯೊಳಗೆ ಮಾಡಲು ನೆರವಾಗುವುದಕ್ಕಾಗಿ ಒಂದು ಸಮಾಜಕ್ಕೆ ಧರ್ಮ ಮತ್ತು ಧರ್ಮಪೀಠಗಳ ಅಗತ್ಯವಿರುವುದು. ಹಾಗೆ ಮಾಡಲು ಬೇಕಾದ ಶಕ್ತಿಯನ್ನು ಧರ್ಮಪೀಠಗಳಲ್ಲಿ ಕುಳಿತವರು ಮೈಗೂಡಿಸಿಕೊಳ್ಳಬೇಕಾಗಿರುವುದು ಕಾನೂನು, ಸಂವಿಧಾನ, ಚುನಾವಣೆ ಮುಂತಾದ ಬಾಹ್ಯ ಸಾಂಸ್ಥಿಕ ಪರಿಕರಗಳಿಂದ ಅಲ್ಲ. ಅದನ್ನವರು ಪಡೆದುಕೊಳ್ಳಬೇಕಾಗಿರುವುದು ಎಲ್ಲವನ್ನೂ ಬಿಟ್ಟು, ಎಲ್ಲವನ್ನೂ ಮೀರಿ, ಕೇವಲ ಸತ್ಯ ಮತ್ತು ನ್ಯಾಯದ ಕಡೆಗೆ ಅಭಿಮುಖರಾಗಿರುವುದರಿಂದ.

ಈ ಸರಳ ಸತ್ಯವನ್ನು ಮನಗಾಣದ ಮಂದಿ ಧರ್ಮಪೀಠದಲ್ಲಿ ಕುಳಿತಿರಲು ಅರ್ಹರಲ್ಲ. ಆ ಪೀಠ ಪಾರಿವ್ರಾಜಕ, ಪಾರಮಾರ್ಥಿಕ ನೆಲೆಯ ಪೀಠವೇ ಆಗಿರಬಹುದು ಅಥವಾ ಯಾವುದೋ ಜಾತಿ-ಉಪಜಾತಿಯ ಸೀಮಿತ ನಂಬಿಕೆಗೆ ಸಂಬಂಧಿಸಿದ ಪೀಠವೇ ಆಗಿರಬಹುದು. ರಾಜಕೀಯ ಅಧಿಕಾರದಾಚೆಗಿನ ಅಧಿಕಾರದ ಬಗ್ಗೆ ಯೋಚಿಸಲಾಗದವರು ಅಲ್ಲಿರಬಾರದು.

ಈ ಕಾವಿಧಾರಿ ಮಂದಿಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ನೀಡುತ್ತವೋ, ಬಿಡುತ್ತವೋ ಎನ್ನುವುದು ಬೇರೆ ವಿಷಯ. ಒಂದು ವೇಳೆ ಅವಕಾಶ ನೀಡಿದ್ದೇ ಆದರೆ ಇವರು ಗೆಲ್ಲುತ್ತಾರೋ, ಸೋಲುತ್ತಾರೋ ಎನ್ನುವುದು ಕೂಡ ಬೇರೆ ವಿಷಯ. ‘ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ, ಅವಕಾಶ ನೀಡಿ’ ಎಂದು ರಾಜಕೀಯ ಪಕ್ಷಗಳ ಮುಂದೆ ಮಂಡಿಯೂರಿ ಭಿಕ್ಷೆ ಬೇಡುವುದು ಸರಿ ಅಂತ ಇವರಿಗೆ ಯಾವತ್ತು ಅನ್ನಿಸಿ ಅದನ್ನು ಅವರು ಬಹಿರಂಗವಾಗಿ ಹೇಳಿದರೋ ಅಂದಿಗೇ ಇವರೆಲ್ಲಾ ಸಾಮೀಜಿ, ಶ್ರೀ... ಇತ್ಯಾದಿ ವಿಶೇಷಣಗಳಿಂದ ಕರೆಸಿಕೊಳ್ಳುವ ನೈತಿಕ ನೆಲೆಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ ಎಂದು ಅರ್ಥ.

ಇದರರ್ಥ ರಾಜಕೀಯವು ಕೊಳಕು ಎಂದಲ್ಲ, ರಾಜಕೀಯ ಅಧಿಕಾರವು ಮುಟ್ಟಬಾರದ ವಸ್ತು ಎಂದಲ್ಲ. ಇದರರ್ಥ ಇಷ್ಟೇ. ರಾಜಕೀಯ ಎನ್ನುವುದು ಲೌಕಿಕ ಜಗತ್ತಿಗೆ ಸಂಬಂಧಿಸಿದ್ದು. ರಾಜಕೀಯ ಅಧಿಕಾರ ಎನ್ನುವುದು ಲೌಕಿಕ ವ್ಯವಹಾರ. ಧರ್ಮಪೀಠದಲ್ಲಿ ಕುಳಿತು ಲೌಕಿಕ ಅಧಿಕಾರದ ಕನಸು ಕಾಣುವುದು ಇದೆಯಲ್ಲಾ ಅದೊಂದು ಮಾನಸಿಕ ವ್ಯಭಿಚಾರ. ಅದು ಕಾವಿಧಾರಿಗಳು ತಮ್ಮ ಸ್ಥಾನಕ್ಕೆ ಮಾಡುವ ಅಪಚಾರ.

‘ಇವರೆಲ್ಲಾ ರಾಜಕೀಯಕ್ಕೆ ಯಾಕೆ ಬರುತ್ತಾರಂತೆ’ ಎಂದು ಕೇಳಿದರೆ ‘ರಾಜಕೀಯವನ್ನು ಸರಿಪಡಿಸಲು’ ಎನ್ನುವ ಉತ್ತರ ಬರುತ್ತದೆ. ಹೌದೇ? ಹಾಗಾದರೆ ರಾಜಕೀಯ ಕೆಟ್ಟಿದ್ದು ಯಾರಿಂದ? ರಾಜಕೀಯ ಕೆಟ್ಟಿದ್ದು ರಾಜಕಾರಣಿಗಳಿಂದ ಮಾತ್ರವಲ್ಲ. ರಾಜಕೀಯ ಕೆಟ್ಟಿದ್ದರೆ ಅದಕ್ಕೆ ಕಾರಣ ಈ ದೇಶದ ಧರ್ಮಪೀಠಗಳು ಕೂಡಾ. ರಾಜಕೀಯ ಮುಂತಾದ ಲೌಕಿಕ ವ್ಯವಹಾರಗಳು ದಾರಿ ತಪ್ಪಿದಾಗ ರಾಜಕೀಯ ವ್ಯವಸ್ಥೆಯ ಆಚೆಗೆ ನಿಂತು ಸರಿಪಡಿಸಬೇಕಾಗಿರುವ ಜವಾಬ್ದಾರಿ ಧರ್ಮಪೀಠಗಳದ್ದು. ಈ ಜವಾಬ್ದಾರಿ ನಿರ್ವಹಿಸಬೇಕಾದರೆ ಧರ್ಮಪೀಠಗಳಲ್ಲಿ ಕುಳಿತವರು ಅಧಿಕಾರಸ್ಥರಿಗೆ ಅಪ್ರಿಯವಾದ ಮತ್ತು ನಿಷ್ಠುರವಾದ ಸತ್ಯಗಳನ್ನು ಹೇಳುತ್ತಿರಬೇಕು. ಅದು ಸುಲಭದ ಕೆಲಸವಲ್ಲ.

ಅಧಿಕಾರಸ್ಥರಿಗೆ ನಿಷ್ಠುರವಾದ ಸತ್ಯಗಳನ್ನು ತಿಳಿಸಲು ಅಸಾಮಾನ್ಯವಾದ ಧೈರ್ಯ ಮತ್ತು ಅಂತಃಶಕ್ತಿ ಇರಬೇಕಾಗುತ್ತದೆ. ಇದು ವೈರಾಗ್ಯದಿಂದ, ತ್ಯಾಗದಿಂದ, ಲೌಕಿಕ ಜಗತ್ತಿನ ಕಡೆಗಿನ ನಿರಾಸಕ್ತಿಯಿಂದ ಮೈಗೂಡಿಸಿಕೊಳ್ಳಬೇಕಾದ ಶಕ್ತಿ ಮತ್ತು ಧೈರ್ಯ. ಹೆಜ್ಜೆಗೊಬ್ಬ ಕಾವಿಧಾರಿ ಎದುರಾಗುವ ಈ ದೇಶದಲ್ಲಿ ಒಬ್ಬನೇ ಒಬ್ಬ ಧರ್ಮಗುರು ರಾಜಕೀಯ ಅಧಿಕಾರ ಸದುಪಯೋಗ ಆಗದೆ ಇದ್ದ ಸಂದರ್ಭದಲ್ಲಾಗಲೀ, ಅದು ದುರುಪಯೋಗ ಆದ ಸನ್ನಿವೇಶಗಳಲ್ಲಾಗಲೀ ಅಧಿಕಾರಸ್ಥರನ್ನು ಎಚ್ಚರಿಸಿದ ಒಂದೇ ಒಂದು ದೃಷ್ಟಾಂತ ನಮ್ಮ ಮುಂದಿಲ್ಲ. ಬೇರೆ ಬೇರೆ ಹಂತದ ಅಧಿಕಾರಸ್ಥರ ಅಧಿಕಾರ ಮದ ವಿಪರೀತವನ್ನು ತಲುಪಿದ ಕಾಲಕ್ಕೂ ಈ ದೇಶದ ಒಬ್ಬನೇ ಒಬ್ಬ ಕಾವಿಧಾರಿಯು ಅಧಿಕಾರಸ್ಥರಿಗೆ ಅಪ್ರಿಯ ಉಪದೇಶ ನೀಡಿದ ಉದಾಹರಣೆ ಇಲ್ಲ. ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ಮುಖ್ಯಮಂತ್ರಿಗೆ ‘ರಾಜಧರ್ಮ ಪಾಲಿಸು’ ಅಂತ ಈ ದೇಶದಲ್ಲಿ ಹೇಳಿದ್ದು ಆ ಕಾಲದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಎನ್ನುವ ಒಬ್ಬ ರಾಜಕಾರಣಿ ಎನ್ನುವುದು ಎಂತಹ ವಿಪರ್ಯಾಸ!

ಧರ್ಮಪೀಠಗಳಲ್ಲಿ ಕುಳಿತು ಏನು ಮಾಡಬೇಕೋ ಅದನ್ನು ಮಾಡಲು ವಿಫಲರಾದವರು ನಾಳೆ ರಾಜಕೀಯ ಅಧಿಕಾರ ಸ್ಥಾನದಲ್ಲಿ ಕುಳಿತು ಏನು ಮಾಡಬೇಕೋ ಅದನ್ನೂ ಮಾಡಲಾರರು. ಒಳ್ಳೆಯ ಸ್ವಾಮೀಜಿ ಆಗದವರಿಗೆ ಒಳ್ಳೆಯ ರಾಜಕಾರಣಿ ಆಗುವುದು ಸಾಧ್ಯವಿಲ್ಲ. ಅಲ್ಲಿ ಸಲ್ಲದವರು ಇಲ್ಲಿಯೂ ಸಲ್ಲುವುದಿಲ್ಲ. ಹಾಗೊಂದು ವೇಳೆ ರಾಜಕೀಯ ಪ್ರವೇಶಿಸಬೇಕು ಎನ್ನುವುದೇ ಅವರ ಪರಮ ಸಂಕಲ್ಪ ಎಂದಾದರೆ ಕಾವಿ ತ್ಯಜಿಸಿ, ಧರ್ಮಪೀಠದಿಂದ ದೂರವಾಗಿ ತಮ್ಮದೇ ಆದ ರಾಜಕೀಯ ಸಿದ್ಧಾಂತ ಪ್ರತಿಪಾದಿಸಿ, ಹೊಸ ಪಕ್ಷ ಕಟ್ಟಿ, ಪ್ರಚಾರ ಮಾಡಿ, ಜನಬೆಂಬಲ ಗಳಿಸಿ, ಆ ಮೂಲಕ ರಾಜಕೀಯಕ್ಕೆ ಒಂದು ಹೊಸ ದೃಷ್ಟಿ, ಹೊಸ ಸೃಷ್ಟಿ ನೀಡಿದರೆ ಆಗ ಅದನ್ನು ಒಪ್ಪಬಹುದು. ಆ ಕಡೆ ಕಾವಿಗೂ ನಿಷ್ಠರಾಗದೆ, ಈ ಕಡೆ ಮತ್ತೆ ಅದೇ ಕುಲಗೆಟ್ಟ ವ್ಯವಸ್ಥೆಯನ್ನು ಸೇರಲು ಬಯಸುವ ಈ ಮಂದಿ ರಾಜಕೀಯವನ್ನು ಉದ್ಧಾರ ಮಾಡುತ್ತೇವೆ, ಜನಸೇವೆ ಮಾಡುತ್ತೇವೆ ಎಂದರೆ ಅದು ಮತದಾರರನ್ನು ವಂಚಿಸುವ ಕೆಲಸ.

ಈ ಕಾವಿಧಾರಿಗಳಿಗೆಲ್ಲಾ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಮಾದರಿಯಂತೆ. ಆದಿತ್ಯನಾಥ ಅವರು ಮಠವೊಂದರ ಮುಖ್ಯಸ್ಥರಾಗಿದ್ದುಕೊಂಡೇ ರಾಜಕೀಯ ಪ್ರವೇಶಿಸಿ, ಸುದೀರ್ಘ ಕಾಲ ಸಂಸದನಾಗಿ ಆನಂತರ ಮುಖ್ಯಮಂತ್ರಿಯಾದವರು. ಇವರನ್ನು ಕರ್ನಾಟಕದ ಕಾವಿಧಾರಿಗಳು ಅನುಕರಿಸುತ್ತಿರುವುದು ವಿಚಿತ್ರವಾಗಿದೆ. ಆದಿತ್ಯನಾಥ ಅವರು ತಾನು ಧರಿಸಿದ ಕಾವಿಗೆ ಅಪಚಾರವಾಗದ ರೀತಿಯಲ್ಲಿ ರಾಜಕೀಯದ ಹೊಸ ಹಾದಿಯೊಂದನ್ನು ಕಂಡುಕೊಂಡು ಅಧಿಕಾರ ಹಿಡಿದಿದ್ದರೆ ಅದನ್ನೊಂದು ಮಾದರಿ ಅಂತ ಸ್ವೀಕರಿಸಬಹುದಿತ್ತೋ ಏನೋ. ಆದಿತ್ಯನಾಥ ಹಾಗೇನೂ ಮಾಡಲಿಲ್ಲ. ಅವರು ಅದೇ ಹಳೆಯ ರಾಜಕೀಯ ಪಕ್ಷಕ್ಕೆ ಜೋತುಬಿದ್ದು, ಅದೇ ವರಸೆಗಳನ್ನು ಕರತಲಾಮಲಕ ಮಾಡಿಕೊಂಡು, ಆಡಬಾರದ ಮಾತುಗಳನ್ನೆಲ್ಲಾ ಆಡುವ ಮೂಲಕ ಜನರ ಮನಸ್ಸನ್ನು ಕದಡಿಸಿ, ಇಡೀ ದೇಶದ ರಾಜಕೀಯ ಪರಿಸರವನ್ನು ಕೆಡಿಸಿ ರಾಜಕೀಯದಲ್ಲಿ ಮೇಲೇರಿದವರು.

ಇಂತಹ ಹಾದಿ ಹಿಡಿದು ಲೌಕಿಕ ರಾಜಕೀಯಾಧಿಕಾರದಲ್ಲಿ ಮಹತ್ವದ ಸ್ಥಾನವೊಂದನ್ನು ಏರಿದ ನಂತರವೂ ಅವರನ್ನು ಮಾಧ್ಯಮಗಳೂ ಸೇರಿದಂತೆ ಎಲ್ಲರೂ ‘ಯೋಗಿ’ ಅಂತ ಕರೆಯುತ್ತಿದ್ದಾರೆ ಎನ್ನುವುದೇ ಹಾಸ್ಯಾಸ್ಪದ. ದೇಶದಲ್ಲಿ ನಿಜವಾದ ಸಂತನೊಬ್ಬ ಇದ್ದಿದ್ದರೆ ಇದನ್ನು ಪ್ರಶ್ನಿಸುತ್ತಿದ್ದ. ಆದಿತ್ಯನಾಥ ಈಗಲೂ ಕಾವಿ ಧರಿಸುವುದನ್ನು ಆಕ್ಷೇಪಿಸುತ್ತಿದ್ದ. ಅಥವಾ ‘ಇಂತಹವರೆಲ್ಲಾ ಕಾವಿ ಧರಿಸುವುದಾದರೆ ನಿಜವಾದ ಸಂತರಾದ ನಾವು ಇನ್ಯಾವುದೋ ಬಣ್ಣವನ್ನು ಆರಿಸಿಕೊಳ್ಳುತ್ತೇವೆ’ ಎನ್ನುತ್ತಿದ್ದ. ಹಾಗೆ ಮಾಡಬೇಕು ಎಂದು ಯಾರಿಗೂ ಅನ್ನಿಸಿಲ್ಲ. ಯಾಕೆಂದರೆ ನಿಜವಾದ ವಿರಾಗಿಯೂ, ಬೈರಾಗಿಯೂ ಈ ದೇಶದಲ್ಲಿ ಉಳಿದಿಲ್ಲ.

ಅಷ್ಟು ಮಾತ್ರವಲ್ಲ. ಇಂದು ಶಾಸಕರೋ, ಸಂಸದರೋ ಆಗುವ ಕಾವಿಧಾರಿಗಳು ನಾಳೆ ಅವರ ಪಕ್ಷ ಹೇಳಿದಂತೆ ಕೇಳಬೇಕಾಗುತ್ತದೆ. ಪಕ್ಷ ನೀಡಿದ ವಿಪ್ ಅನ್ನು ಕೆಲವೊಮ್ಮೆ ಆತ್ಮಸಾಕ್ಷಿ ಮಾರಿಕೊಂಡು ಪಾಲಿಸಬೇಕಾಗುತ್ತದೆ. ಅಷ್ಟೆಲ್ಲಾ ಯಾಕೆ, ಚುನಾವಣೆ ಗೆಲ್ಲಬೇಕಾದರೆ ಹಣ, ಹೆಂಡ ಹಂಚಬೇಕಾಗುತ್ತದೆ. ತಾವು ಹಂಚುವುದಿಲ್ಲ ಎಂದು ನಟಿಸಬಹುದು. ಆದರೆ ಪಕ್ಷದವರು ಅದನ್ನು ತಮ್ಮ ಪರವಾಗಿ ಮಾಡುವಾಗ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕು. ಬೇಕಾದಲ್ಲಿ ಸುಳ್ಳು ಹೇಳಬೇಕು, ಸತ್ಯವನ್ನು ಅಡಗಿಸಿಡಬೇಕು. ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಸುಳ್ಳು ಹೇಳುತ್ತಿವೆ. ಈ ಕಾವಿಧಾರಿ ಮಂದಿ ಯಾವುದೋ ಪಕ್ಷವನ್ನು ಒಪ್ಪಿಕೊಳ್ಳುತ್ತೇವೆ ಎಂದಾಗ ಆ ಪಕ್ಷ ಹೇಳುವ ಸುಳ್ಳುಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ ಎಂದಲ್ಲವೇ ಅರ್ಥ. ತಾವು ತೊಟ್ಟ ಕಾವಿಗೆ ಇವೆಲ್ಲವೂ ಅವಮಾನವಲ್ಲವೇ?

ಈ ಬೆಳವಣಿಗೆಗೆ ಇನ್ನೂ ಒಂದು ಆಯಾಮವಿದೆ. ಈ ತನಕ ರಾಜಕೀಯಕ್ಕೆ ಪ್ರವೇಶ ಪಡೆಯಲು ಬೇರೆ ಬೇರೆ ದಾರಿಗಳಿದ್ದವು. ಹಿಂದೆ ವಿದ್ಯಾರ್ಥಿ ಚಳವಳಿಗಳ ಮೂಲಕ, ಕಾರ್ಮಿಕ ಚಳವಳಿಗಳ ಮೂಲಕ ಜನ ರಾಜಕೀಯ ಪ್ರವೇಶಿಸುತ್ತಿದ್ದರು. ಇನ್ನು ಕೆಲವರು ಬೇರೆ ಬೇರೆ ಜನಪರ ಹೋರಾಟಗಳಲ್ಲಿ ತೊಡಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಇವೆಲ್ಲಾ ಕಡಿಮೆಯಾಗತೊಡಗಿದ ಮೇಲೆ ರಾಜಕೀಯ ಪಕ್ಷಗಳಿಗೆ ಹಣ ದೇಣಿಗೆ ನೀಡಿ ರಾಜಕೀಯ ಪ್ರವೇಶಿಸುವ ಪದ್ಧತಿ ಪ್ರಾರಂಭವಾಯಿತು. ಕೆಲವರು ಸಮಾಜ ಸೇವೆಗೆಂದು ಮಣಗಟ್ಟಲೆ ಹಣವನ್ನು ವರ್ಷಗಟ್ಟಲೆ ಸುರಿದು ರಾಜಕೀಯ ಪ್ರವೇಶಿಸಿದರು. ಈಗ ದೇಶದಾದ್ಯಂತ ಕಾವಿಧಾರಿಗಳು ರಾಜಕೀಯದ ದಾರಿ ಹಿಡಿದದ್ದು ನೋಡಿದರೆ ಮುಂದೆ ರಾಜಕೀಯ ಪ್ರವೇಶಿಸಲು ಕಾವಿಧಾರಣೆಯೇ ಇನ್ನೊಂದು ಹಾದಿಯಾಗಬಹುದು.

ಅಲ್ಪಸ್ವಲ್ಪ ಬಂಡವಾಳ ಹಾಕಿ ಒಂದು ಮಠವನ್ನೋ, ಪೀಠವನ್ನೋ ಸ್ಥಾಪಿಸುವುದು. ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಹಣ ಸಂಗ್ರಹಿಸುವುದು. ಹೇಗೂ ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ. ಇವೆಲ್ಲವುಗಳ ಜತೆಗೆ ಭಯೋತ್ಪಾದನೆ, ದೇಶಭಕ್ತಿ, ತುಷ್ಟೀಕರಣ ಅಂತ ಏನೇನೋ ಅರ್ಧಸತ್ಯಗಳ ಅಪಕ್ವ ವ್ಯಾಖ್ಯಾನ ನಡೆಸುವುದು. ಪ್ರವಚನ ನೀಡುವುದು. ಇವುಗಳನ್ನೆಲ್ಲ ಬಂಡವಾಳವನ್ನಾಗಿಸಿ ಚುನಾವಣೆಗೆ ಸ್ಪರ್ಧಿಸುವುದು. ಹೀಗೆ ಧರ್ಮ, ಅರ್ಥ ಮತ್ತು ರಾಜಕೀಯ ಕಾಮನೆಗಳ ಹೊಸ ಮಿಶ್ರಣವೊಂದು ಭಾರತೀಯ ಚುನಾವಣಾ ರಾಜಕೀಯದ ರಂಗು ಬದಲಿಸುವ ಸಾಧ್ಯತೆಗಳನ್ನು ನಾವೀಗ ನಿಚ್ಚಳವಾಗಿ ಕಾಣುತ್ತಿದ್ದೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.