ಭಾನುವಾರ, ಡಿಸೆಂಬರ್ 15, 2019
25 °C

ಯಾವುದನ್ನು ಕೊಳ್ಳುವುದು, ಯಾವುದನ್ನು ಬಿಡುವುದು?

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಯಾವುದನ್ನು ಕೊಳ್ಳುವುದು, ಯಾವುದನ್ನು ಬಿಡುವುದು?

ಕೆಲವು ಕಂಪನಿಗಳು ನಾವು ನೀಡುವ ಹಣಕ್ಕೆ ಉತ್ತಮ ಉತ್ಪನ್ನಗಳನ್ನೇ ನೀಡುತ್ತ ಬಂದಿವೆ. ಉದಾಹರಣೆಗೆ ಶಿಯೋಮಿ, ಹೋನರ್, ಒನ್‌ಪ್ಲಸ್. ಅವುಗಳಲ್ಲಿ ಶಿಯೋಮಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 2017ರ ಕೊನೆಯ ಕಾಲು ಭಾಗದಲ್ಲಿ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿದೆ. ಈ ಸ್ಥಾನದಲ್ಲಿದ್ದ ಸ್ಯಾಮ್‌ಸಂಗ್ ಕಂಪನಿಯನ್ನು ಅದು ಹಿಮ್ಮೆಟ್ಟಿಸಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಶಿಯೋಮಿ ರೆಡ್‌ಮಿ 5 (Xiaomi Redmi 5) ಎಂಬ ಕಡಿಮೆ ಬೆಲೆಯ ಫೋನನ್ನು.

ಶಿಯೋಮಿಯವರು ₹10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವು ಫೋನ್‌ಗಳನ್ನು ನೀಡುತ್ತಿದ್ದಾರೆ. ಇವುಗಳ ಗುಣವೈಶಿಷ್ಟ್ಯಗಳು, ಕೆಲಸದ ವೇಗ ಮತ್ತು ಬೆಲೆ ನೋಡಿದರೆ ಕೊಳ್ಳುವವರಿಗೆ ಯಾವುದನ್ನು ಕೊಳ್ಳಲಿ ಎಂದು ಸ್ವಲ್ಪ ಗಲಿಬಿಲಿಯಾಗುವಂತಿದೆ. ಈ ಫೋನ್ ಆ ಗಲಿಬಿಲಿಗೆ ತನ್ನದೇ ಕೊಡುಗೆ ನೀಡುತ್ತಿದೆ.

ಇದರ ರಚನೆ ಮತ್ತು ವಿನ್ಯಾಸ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಶಿಯೋಮಿಯವರ ಇತರೆ ಫೋನ್‌ಗಳಂತೆಯೇ ಇದೆ. ಇದರ ಪರದೆಯ ಅನುಪಾತ ಕೂಡ ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ 18:9 ಇದೆ. ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ ತುಂಬ ನಯವೂ ಅಲ್ಲದ, ಅತಿ ದೊರಗೂ ಅಲ್ಲದ ವಿನ್ಯಾಸವಾಗಿದೆ. ಬದಿಗಳು ವಕ್ರವಾಗಿವೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಮತ್ತು ಅವಕೆಂಪು ಕಿರಣದ ಕಿಂಡಿ ಇದೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಇದು ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಯುಎಸ್‌ಬಿ-ಸಿ ಕಿಂಡಿ ಅಲ್ಲ. ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ‌ಇದರಲ್ಲಿ ಒಂದು ನ್ಯಾನೋ ಸಿಮ್ ಮತ್ತು ಇನ್ನೊಂದು ನ್ಯಾನೊ ಸಿಮ್ ಅಥವಾ ಮೆಮೊರಿ ಕಾರ್ಡ್ ಹಾಕಬಹುದು. ಹಿಂಬದಿಯ ಕ್ಯಾಮೆರಾದ ಕೆಳಗೆ ಬೆರಳಚ್ಚು ಸ್ಕ್ಯಾನರ್ ಇದೆ. ಪರದೆಯ ಕೆಳಗಡೆ ಮೂರು ಸಾಫ್ಟ್‌ಬಟನ್‌ಗಳಿಲ್ಲ. ಪರದೆಯಲ್ಲೇ ಬೇಕಾದಾಗ ಬಟನ್‌ಗಳು ಮೂಡಿ ಬರುತ್ತವೆ.

ಇದರ ಕೆಲಸದ ವೇಗ ಚೆನ್ನಾಗಿದೆ. ಎಲ್ಲ ನಮೂನೆಯ ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಇದರ ಅಂಟುಟು ಬೆಂಚ್‌ಮಾರ್ಕ್ 69566 ಇದೆ. ಅಂದರೆ ಇದು ಮಧ್ಯಮ ವೇಗದ ಫೋನ್ ಎನ್ನಬಹುದು. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆದರೆ 4k ಸರಿಯಾಗಿ ಪ್ಲೇ ಆಗುವುದಿಲ್ಲ. ನನಗೆ ವಿಮರ್ಶೆಗೆ ಬಂದಿರುವುದು 3 + 32 ಗಿಗಾಬೈಟ್ ಮಾದರಿಯದು.

ಇತ್ತೀಚೆಗೆಷ್ಟೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಿದ ಶಿಯೋಮಿ ರೆಡ್‌ಮಿ ನೋಟ್ 5 ಮತ್ತು ಈ ಫೋನಿನಲ್ಲಿರುವುದು ಒಂದೇ ಕ್ಯಾಮೆರಾ. 12 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾ ಎರಡೂ ಚೆನ್ನಾಗಿವೆ. f/2.2 ಲೆನ್ಸ್ ಇರುವುದರಿಂದ ನೀಡುವ ಹಣಕ್ಕೆ ಉತ್ತಮ ಎನ್ನಬಹುದಾದ ಫೋಟೊ ಮೂಡಿಬರುತ್ತದೆ. ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಅಲ್ಲದಿದ್ದರೂ ತೃಪ್ತಿದಾಯಕವಾದ ಫೋಟೊ ತೆಗೆಯುತ್ತದೆ.

ವಿಡಿಯೊ ಚಿತ್ರೀಕರಣವೂ ಚೆನ್ನಾಗಿದೆ. ರೆಡ್‌ಮಿ ನೋಟ್ 5 ಫೋನಿನಲ್ಲಿದ್ದಂತೆ ಇದರಲ್ಲೂ ಆಡಿಯೊ ಇಂಜಿನ್ ನಿಜಕ್ಕೂ ಚೆನ್ನಾಗಿದೆ. ಬಹುಶಃ ಎರಡರಲ್ಲೂ ಒಂದೇ ಕ್ಯಾಮೆರಾ ಮತ್ತು ಆಡಿಯೊ ಇಂಜಿನ್ ಬಳಸಿದ್ದಾರೆ. ಈ ಬೆಲೆಯ ಫೋನ್‌ಗಳಲ್ಲಿ ನನಗೆ ವಿಮರ್ಶೆಗೆ ಬಂದ ಫೋನ್‌ಗಳಲ್ಲಿ ಇದು ನಿಜಕ್ಕೂ ಉತ್ತಮ ಆಡಿಯೊ ಫೋನ್ ಎನ್ನಬಹುದು. ಆದರೆ ಅವರು ಇಯರ್‌ಫೋನ್ ನೀಡಿಲ್ಲ. ಅಂದರೆ ವಿಡಿಯೊ ವೀಕ್ಷಣೆ, ಆಟಗಳ ಆಡುವಿಕೆ, ಇವಕ್ಕೆಲ್ಲ ಇದು ತೃಪ್ತಿದಾಯಕ ಎನ್ನಬಹುದು.

ಇದರಲ್ಲಿ ಎರಡು ನ್ಯಾನೊ ಸಿಮ್ ಅಥವಾ ಒಂದು ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದು. ಯುಎಸ್‌ಬಿ ಆನ್‌-ದ-ಗೋ ಕೂಡ ಇರುವುದರಿಂದ ಹೊರಗಡೆಯಿಂದ ಯುಎಸ್‌ಬಿ ಡ್ರೈವ್ ಜೋಡಿಸಬಹುದು. ಒಟ್ಟಿನಲ್ಲಿ 32 ಗಿಗಾಬೈಟ್ ಸಂಗ್ರಹ ಸಾಲದು ಎನ್ನುವವರಿಗೆ ಸಂಗ್ರಹ ಮೆಮೊರಿ ಜಾಸ್ತಿ ಮಾಡಿಕೊಳ್ಳಲು ಸವಲತ್ತುಗಳಿವೆ.

ರೆಡ್‌ಮಿ ನೋಟ್ 5ನಂತೆ ಇದರಲ್ಲೂ ಆ್ಯಂಡ್ರಾಯ್ಡ್ 7.1.2 ನೀಡಿರುವುದು ಮಾತ್ರ ಸ್ವಲ್ಪ ಬೇಸರದ ಸಂಗತಿ. ಯಾವಾಗ ಆ್ಯಂಡ್ರಾಯ್ಡ್ 8ಕ್ಕೆ ನವೀಕರಣವನ್ನು ನೀಡುತ್ತಾರೆ ಎಂಬುದು ತಿಳಿದುಬಂದಿಲ್ಲ.

ಇದರ ಬ್ಯಾಟರಿ ಬಾಳಿಕೆ ಪರವಾಗಿಲ್ಲ. ಬೇಗನೆ ಚಾರ್ಜ್ ಕೂಡ ಆಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಬೆಲೆಗೆ ಇದು ನಿಜಕ್ಕೂ ತೃಪ್ತಿದಾಯಕ ಫೋನ್ ಎಂದು ಹೇಳಬಹುದು.

*

ವಾರದ ಆ್ಯಪ್‌(app): ಟೀಮ್ ವ್ಯೂವರ್

ಗಣಕಗಳಲ್ಲಿ ಬಳಸುವ ಟೀಮ್‌ವ್ಯೂವರ್ ತಂತ್ರಾಂಶ ನಿಮಗೆ ತಿಳಿದಿದ್ದರೆ ಅದು ಆ್ಯಂಡ್ರಾಯ್ಡ್‌ನಲ್ಲೂ ಲಭ್ಯವಿದೆ ಎಂಬ ಸುದ್ದಿ ನಿಮಗೆ ಸಿಹಿಯಾಗಬಹುದು. ನಿಮ್ಮ ಗಣಕದಲ್ಲಿ ಟೀಮ್‌ವ್ಯೂವರ್ ಬಳಸಿ ಗಣಕದಿಂದ ಅಂತರಜಾಲದ ಮೂಲಕ ನಿಮ್ಮ ಸ್ನೇಹಿತನ ಗಣಕವನ್ನು ಸಂಪೂರ್ಣ ನಿಯಂತ್ರಣ ಮಾಡುವ ಸೌಲಭ್ಯ ಈ ತಂತ್ರಾಂಶದಲ್ಲಿದೆ. ಈಗ ಈ ಸೌಲಭ್ಯಗಳನ್ನು ಆ್ಯಂಡ್ರಾಯ್ಡ್‌ ಫೋನ್ ಬಳಸಿಯೂ ಪಡೆಯಬಹುದು. ಮೊಬೈಲ್ ಫೋನನ್ನು ಲ್ಯಾಪ್‌ಟಾಪ್ ಬಳಸಿ ಸಂಪೂರ್ಣ ನಿಯಂತ್ರಿಸಬಹುದು. ಈ ಕಿರುತಂತ್ರಾಂಶದ ಸರಳ ಬಳಕೆ ಯೆಂದರೆ ಮೊಬೈಲ್ ಫೋನಿನಲ್ಲಿ ಬಳಸುವ ಯಾವುದಾದರೂ ಕಿರುತಂತ್ರಾಂಶದ ಬಗ್ಗೆ ಸಭಿಕರಿಗೆ ಪ್ರಾತ್ಯಕ್ಷಿಕೆ ನೀಡಬೇಕಿದ್ದರೆ ಸಹಾಯ ಮಾಡುತ್ತದೆ. ಈ ಕಿರುತಂತ್ರಾಂಶ ಬೇಕಿದ್ದಲ್ಲಿ ನೀವು ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ TeamViewer QuickSupport ಎಂದು ಹುಡುಕಬೇಕು ಅಥವಾ bit.ly/gadgetloka324 ಜಾಲತಾಣಕ್ಕೆ ಭೇಟಿ ನೀಡಬೇಕು. ಈ ಕಿರುತಂತ್ರಾಂಶಕ್ಕೆ ಸಂಬಂಧಿಸಿದ ಇನ್ನೂ ಎರಡು ಕಿರುತಂತ್ರಾಂಶಗಳನ್ನೂ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅವುಗಳ ಕೊಂಡಿ ಅದೇ ಪುಟದಲ್ಲಿ ಇರುತ್ತದೆ.

ಗ್ಯಾಜೆಟ್‌ ಪದ: App –ಕಿರುತಂತ್ರಾಂಶ

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಸ್ಮಾರ್ಟ್‌ ಟಿ.ವಿ., ಸ್ಮಾರ್ಟ್‌ ವಾಚ್ ಇತ್ಯಾದಿಗಳಲ್ಲಿ ಬಳಸುವ ಆನ್ವಯಿಕ ತಂತ್ರಾಂಶ (application software). ಇದು ‘ಅಪ್ಲಿಕೇಶನ್’ ಎಂಬ ಹೆಸರಿನ ಹ್ರಸ್ವರೂಪ. ಮೊಬೈಲ್‌ನಲ್ಲಿ ಬಳಕೆಯಾಗುವ ಬೇರೆ ಬೇರೆ ಕಾರ್ಯಾಚರಣ ವ್ಯವಸ್ಥೆಗಳಿಗೆ ಬೇರೆ ಬೇರೆ ಕಿರುತಂತ್ರಾಂಶಗಳು ಲಭ್ಯವಿವೆ ಹಾಗೂ ಅವುಗಳು ದೊರೆಯುವ ಸ್ಟೋರ್‌ಗಳೂ ಇವೆ. ಉದಾಹರಣೆಗೆ ಗೂಗಲ್ ಪ್ಲೇ ಸ್ಟೋರ್.

ಗ್ಯಾಜೆಟ್‌ ಸಲಹೆ

ಡಿ. ವಿ. ಮೋಹನ್ ಪ್ರಕಾಶ್ ಅವರ ಪ್ರಶ್ನೆ:
ಆ್ಯಂಡ್ರಾಯ್ಡ್‌ನಲ್ಲಿ ಬೆರಳಚ್ಚಿಸುವಾಗ ಕನ್ನಡ (ಕೆಲವು) ಕಾಗುಣಿತಗಳು ಸರಿಯಾಗಿ ಮೂಡಿ ಬರುವುದಿಲ್ಲ. ಇದಕ್ಕೆ ಪರಿಹಾರ ಏನು?

ಉ: ಯಾವ ಫೋನಿನಲ್ಲಿ, ಯಾವ ಕಿರುತಂತ್ರಾಂಶದಲ್ಲಿ, ಆ್ಯಂಡ್ರಾಯ್ಡ್‌ನ ಆವೃತ್ತಿ ಯಾವುದು, ಬಳಸುತ್ತಿರುವ ಕೀಲಿಮಣೆ ತಂತ್ರಾಂಶ ಯಾವುದು, ಇತ್ಯಾದಿ ವಿವರ ಮತ್ತು ಸ್ಕ್ರೀನ್‌ಶಾಟ್ ಕಳುಹಿಸಿದರೆ ಪರಿಶೀಲಿಸಬಹುದು.

ಗ್ಯಾಜೆಟ್‌ ತರ್ಲೆ

ಇತ್ತೀಚೆಗಿನ ಹಲವು ಫೋನ್‌ಗಳಲ್ಲಿ ಮುಖವನ್ನು ಪತ್ತೆಹಚ್ಚುವ ಮತ್ತು ಅದನ್ನೇ ಪಾಸ್‌ವರ್ಡ್‌ಆಗಿ ಮಾಡಿಟ್ಟುಕೊಳ್ಳುವ ಸವಲತ್ತು ಇದೆ. ಒಬ್ಬಾಕೆ ತನ್ನ ಮುಖವನ್ನೇ ಪಾಸ್‌ವರ್ಡ್ ಆಗಿ ಮಾಡಿಟ್ಟುಕೊಂಡಿದ್ದಳು. ಒಂದು ದಿನ ಆಕೆ ಬ್ಯೂಟಿ ಪಾರ್ಲರ್‌ಗೆ ಹೋಗಿ ವಿಪರೀತ ಸೌಂದರ್ಯವರ್ಧಕಗಳನ್ನು ಬಳಸಿ ಮುಖಲಕ್ಷಣವನ್ನು ವಿಪರೀತವಾಗಿ ಬದಲಾಯಿಸಿದ್ದಳು. ನಂತರ ಆಕೆಯ ಫೋನ್ ಆಕೆಯನ್ನು ಗುರುತಿಸಲಿಲ್ಲ!

ಪ್ರತಿಕ್ರಿಯಿಸಿ (+)