ರವೀಂದ್ರರ ಮಾಂತ್ರಿಕತೆ: ಸಿನಿಮಾದ ಯಾಂತ್ರಿಕತೆ

7

ರವೀಂದ್ರರ ಮಾಂತ್ರಿಕತೆ: ಸಿನಿಮಾದ ಯಾಂತ್ರಿಕತೆ

ಗಂಗಾಧರ ಮೊದಲಿಯಾರ್
Published:
Updated:
ರವೀಂದ್ರರ ಮಾಂತ್ರಿಕತೆ: ಸಿನಿಮಾದ ಯಾಂತ್ರಿಕತೆ

`ಪದರಹಿತ ಭಾವಾಭಿವ್ಯಕ್ತಿಯ ಸಶಕ್ತ ಮಾಧ್ಯಮ~- ಎಂದು ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ಸಿನಿಮಾ ಮಾಧ್ಯಮವನ್ನು ಬಣ್ಣಿಸುತ್ತಾರೆ. ರವೀಂದ್ರನಾಥ ಟ್ಯಾಗೋರರು ಹುಟ್ಟಿದಾಗ (1861) ಸಿನಿಮಾ ಇನ್ನೂ ಹುಟ್ಟಿರಲೇ ಇಲ್ಲ. ರವೀಂದ್ರರು ಕಣ್ಮುಚ್ಚಿದಾಗ, ವಾಕ್ಚಿತ್ರ (1941) ಇನ್ನೂ ಹತ್ತು ವರ್ಷಗಳ ಕೂಸು. ಆದರೂ ನಾಟಕ, ಮೂಕಿ ಚಿತ್ರ ಹಾಗೂ ವಾಕ್ಚಿತ್ರಗಳ ಮೇಲೆ ರವೀಂದ್ರರ ಪ್ರಭಾವ ದಟ್ಟವಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿಯೆನಿಸಿದರೂ ಅವರು ಸಿನಿಮಾದ ಕಲಾಶಕ್ತಿಯನ್ನು ಗ್ರಹಿಸಿದ್ದರು. ಈ ಮಾಧ್ಯಮಕ್ಕೆ ಸಾಹಿತಿಯೊಬ್ಬನ ಅಭಿವ್ಯಕ್ತಿಯನ್ನು ಸಮರ್ಥವಾಗಿ ಹೊರಚೆಲ್ಲುವ ಪ್ರಭಾವೀ ಶಕ್ತಿ ಇರುವುದನ್ನು ಅವರು ಗ್ರಹಿಸಿದ್ದರು. ಇದೊಂದು ಕಲಾ ಮಾಧ್ಯಮ ಎಂದು ಅವರು ಬಣ್ಣಿಸಿದರು. ಕಲೆಯ ವಿವಿಧ ಆಯಾಮಗಳ ಅಭ್ಯಾಸಕ್ಕೆಂದೇ ಅವರು ಆರಂಭಿಸಿದ ಶಾಂತಿನಿಕೇತನ ಮುಕ್ತವಿಶ್ವವಿದ್ಯಾಲಯದ ಮೂಲಕ ಯಾವ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕೆಂದು ಬಯಸಿದ್ದರೋ ಅದರ ಅದೇ ಆಶಯ ಸಿನಿಮಾ ಮಾಧ್ಯಮದಲ್ಲಿರುವುದನ್ನು ಅವರು ಕಂಡುಕೊಂಡಿದ್ದರು ಎನ್ನುವುದು ಅವರ ಚಿಂತನೆಗಳಲ್ಲಿ ವ್ಯಕ್ತವಾಗುತ್ತದೆ. ಹೀಗಾಗಿ ಅವರು ತಮ್ಮ ಎಲ್ಲ ಕತೆ, ಕವನಗಳನ್ನು ಚಲನಚಿತ್ರ ರೂಪಕ್ಕೆ ಅಳವಡಿಸಲು ಅನುಮತಿ ಕೊಟ್ಟರು. ಚಿತ್ರರಂಗಕ್ಕೆ ತೊಡಕುಗಳು ಎದುರಾದಾಗಲೆಲ್ಲ ಅದಕ್ಕೆ ಸ್ಪಂದಿಸಿದರು. ಹೀಗಾಗಿ ಬಂಗಾಳಿ ಚಲನಚಿತ್ರರಂಗದ ಬೆಳವಣಿಗೆಗೆ ರವಿಂದ್ರನಾಥ ಟ್ಯಾಗೋರರು ಒಂದು ಶಕ್ತಿಯಾಗಿಯೇ ನಿಂತರು ಎನ್ನಬಹುದು.ಸಾಹಿತ್ಯ ಮತ್ತು ಸಿನಿಮಾ ಅವಿನಾಭಾವದ ಸ್ಥಿತಿಯನ್ನು ನಾವು ಬಂಗಾಳಿ ಚಿತ್ರರಂಗದಲ್ಲಿ ಕಾಣುತ್ತೇವೆ. ಸತ್ಯಜಿತ್ ರಾಯ್ ಅವರು 1954ರಲ್ಲಿ `ಪಥೇರ್ ಪಾಂಚಾಲಿ~ ಮೂಲಕ ಹೊಸ ಅಲೆಯ ಸಿನಿಮಾದ ಅಚ್ಚು ಮೂಡಿಸುವವರೆಗೂ, ಅದೇ ರೀತಿಯ ಸಿನಿಮಾ ಪಥದ ತವಕ, ತುಡಿತದಲ್ಲಿ ಪಶ್ಚಿಮ ಬಂಗಾಳದ ಸಿನಿಮಾ ಸಾಗುತ್ತಿತ್ತು. 1902ರ ವೇಳೆಗೇ ಹೀರಾಲಾಲ್ ಸೇನ್, ಖ್ಯಾತ ನಾಟಕಕಾರ ಅಮರನಾಥ ದತ್ತರ ನೆರವಿನೊಂದಿಗೆ ಪ್ರಖ್ಯಾತ ನಾಟಕಗಳನ್ನೆಲ್ಲಾ ಬೆಳ್ಳಿತೆರೆಗೆ ಅಳವಡಿಸಿದರು. ಭಾರತಕ್ಕೆ ಸಿನಿಮಾ ಕಾಲಿಟ್ಟ (1896) ಆರೇ ತಿಂಗಳಲ್ಲಿ ಕಲ್ಕತ್ತದಲ್ಲಿ `ಫ್ಲವರ್ ಆಫ್ ಪರ್ಷಿಯಾ~ ಎಂಬ ಕಿರುಚಿತ್ರ ತಯಾರಾಗಿ ಪ್ರದರ್ಶನ ಕಂಡಿತು. ಶರತ್‌ಚಂದ್ರ ಚಟರ್ಜಿ ಅವರ ಕತೆಗಳನ್ನು ಮೂಕಿ ಚಿತ್ರಗಳಿಗೆ ಅಳವಡಿಸಿದ ಮದನ್ ಥಿಯೇಟರ್ಸ್‌ನ ಜೆ.ಎಫ್. ಮದನ್ 88 ಮೂಕಿ ಚಿತ್ರಗಳನ್ನು ತಯಾರಿಸಿದ್ದಾರೆ. ಮುಕ್ಕಾಲು ಪಾಲು ಎಲ್ಲವೂ ಸಾಹಿತ್ಯ ಕೃತಿಗಳೇ. ಆರಂಭಕಾಲಿಕ ಬಂಗಾಳಿ ಸಿನಿಮಾ ಬೆಳವಣಿಗೆಗೆ ಮದನ್ ಥಿಯೇಟರ್ಸ್ ಕೊಡುಗೆ ಅಪಾರ. ಮೊದಲ ವಾಕ್ಚಿತ್ರ ತಯಾರಿಕೆ `ಅಲಂ ಆರಾ~ಗಿಂತ ಮುನ್ನವೇ ಕಲ್ಕತ್ತದ್ಲ್ಲಲಿ ಆರಂಭವಾಗಿತ್ತು.ಮದನ್ ಆರಂಭಿಸಿದ್ದ `ಶಿರಿನ್ ಫರಾದ್~ ಅಡಚಣೆಯಿಲ್ಲದೆ ಬಿಡುಗಡೆಯಾಗಿದ್ದರೆ ಅದೇ ಮೊದಲ ವಾಕ್ಚಿತ್ರವೆನಿಸಿಕೊಳ್ಳುತ್ತಿತ್ತೇನೋ. ಕಾದಂಬರಿ ಆಧಾರಿತ `ದೇವದಾಸ್~ ಇಡೀ ಭಾರತೀಯ ಚಿತ್ರರಂಗಕ್ಕೆ ಸಾಮಾಜಿಕ ಚಿತ್ರಗಳ ಚೌಕಟ್ಟೊಂದನ್ನು ಒದಗಿಸಿಕೊಟ್ಟಿತು.

ಜಲಿಯನ್ ವಾಲಾಬಾಗ್ ಘಟನೆ (1919)ಯಲ್ಲಿ ಬ್ರಿಟಿಷರು ದೇಶಭಕ್ತ ಭಾರತೀಯರ ಮೇಲೆ ಗುಂಡು ಹಾರಿಸಿ, 379 ಜನರನ್ನು ಕೊಂದರು. ಆಗ ರವೀಂದ್ರರು `ನೈಟ್‌ಹುಡ್~ ಪ್ರಶಸ್ತಿಯನ್ನು ಹಿಂತಿರುಗಿಸಿ ಪ್ರತಿಭಟಿಸಿದರು. 1940ರ ವೇಳೆಗೆ ಎರಡನೇ ಮಹಾಯುದ್ಧದ ಬಿಸಿ. ಭಾರತೀಯ ಚಿತ್ರರಂಗದ ಮೇಲೂ ಇದರ ಪರಿಣಾಮವಾಯಿತು.ಕಚ್ಚಾಫಿಲಂ ದೊರಕದೆ ಚಲನಚಿತ್ರ ತಯಾರಿಕೆಯೇ ಕುಂಟಲಾರಂಭಿಸಿತು. ಸ್ವಾತಂತ್ರ್ಯ ಚಳವಳಿಯೂ ಅಂತಿಮ ಘಟ್ಟದತ್ತ ಸಾಗುತ್ತಿತ್ತು. ಒಂದು ರೀತಿಯ ಪರಾಕಾಷ್ಠೆ. ಆ ವೇಳೆಗಾಗಲೇ ರವೀಂದ್ರರೂ ಸೇರಿದಂತೆ ಬಹುತೇಕ ಚಿಂತಕರು, ಅನಕ್ಷರಸ್ಥರೇ ಹೆಚ್ಚಾಗಿರುವ ಭಾರತದ ಜನ ಸಾಮಾನ್ಯರಿಗೆ, ದೇಶದ ಸಾಧನೆ ಹೇಳುವ, ಮುಂದಿನ ಗುರಿ ಏನೆಂಬುದರ ಸಂದೇಶ ತಲುಪಿಸುವ ಕಿರುಚಿತ್ರಗಳನ್ನು ತಯಾರಿಸಿ, ಎಲ್ಲೆಡೆ ಪ್ರದರ್ಶಿಸುವ ಯೋಜನೆ ರೂಪಿತವಾಯಿತು. ಇಂತಹ ಯೋಜನೆಗಳು ಕಾರ್ಯಗತವಾಗಲು ಇಂಬಾದದ್ದು ಕಲ್ಕತ್ತಾದ ಶಾಂತಿನಿಕೇತನ ಹಾಗೂ ಬೆಂಗಳೂರಿನ ಸರ್ ಸಿ.ವಿ. ರಾಮನ್ ಸೈನ್ಸ್ ಇನ್‌ಸ್ಟಿಟ್ಯೂಟ್. `ನಾಟಿರ್ ಪೂಜ~ ಎನ್ನುವ ಕಿರುಚಿತ್ರದ ಬ್ಯಾಲೆ ಹಾಗೂ ಕೆಲವು ದೃಶ್ಯಗಳನ್ನು ರವೀಂದ್ರನಾಥ್ ಟ್ಯಾಗೋರರೇ ನಿರ್ದೇಶಿಸಿದ್ದರು.ದೇಶಭಕ್ತಿಗೀತೆಗಳನ್ನು, ದೇಶ ಪ್ರೇಮ ಸಾರುವ ಹಾಡುಗಳನ್ನು ಬರೆದ ಕವಿ ಬ್ರಿಟೀಷರ ದಬ್ಬಾಳಿಕೆಯನ್ನೂ ಖಂಡಿಸಿದ ಹಲವಾರು ಘಟನೆಗಳಿವೆ. ಅವರ ಕತೆಗಳು ಸಮಕಾಲೀನ ಸತ್ಯವನ್ನು ಹಿಡಿದಿಟ್ಟ ಕಾರಣದಿಂದ ಇಂದಿಗೂ ಅಮೂಲ್ಯ ಕೃತಿಗಳಾಗಿವೆ. 1929ರಲ್ಲಿ ಟ್ಯಾಗೋರರ `ಬಿಚಾರಕ್~ ಕತೆಯನ್ನಾಧರಿಸಿದ ಮೂಕಿ ಚಿತ್ರ ತಯಾರಾಯಿತು. ವಿಧವೆಯೊಬ್ಬಳ ದುರಂತ ಕತೆ. ಅತ್ತೆಯ ಮನೆಯಿಂದ ಹೊರದೂಡಲ್ಪಟ್ಟ ವಿಧವೆ, ಪರಿಸ್ಥಿತಿಯ ಸುಳಿಗೆ ಸಿಲುಕಿ ವೇಶ್ಯೆಯಾಗಬೇಕಾಗುತ್ತದೆ. ಅಸಹಾಯಕ ಹೆಣ್ಣಿನ ದುರಂತ ಕತೆಯನ್ನು ಸಿಸಿರ್ ಕುಮಾರ್ ಬಾಧುರಿ ನಿರ್ದೇಶಿಸಿದ್ದರು. ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಚಿತ್ರ ಎಂಬ ಕಾರಣ ಒಡ್ಡಿ ಚಿತ್ರವನ್ನು ಸೆನ್ಸಾರ್ ತಡೆಹಿಡಿಯಿತು.ಬಡತನ, ಹಸಿವು, ನಿರುದ್ಯೋಗ, ಜಮೀನ್ದಾರಿ ಪದ್ಧತಿಯ ಕ್ರೌರ‌್ಯ, ಸ್ವಾತಂತ್ರ್ಯವೇ ಇಲ್ಲದ ಮಹಿಳೆ... ಹೀಗೆ ಸಂಕೀರ್ಣ ಸಮಸ್ಯೆಗಳೇ ತಾಂಡವವಾಡುತ್ತಿದ್ದ ಅಂದಿನ ದಿನಗಳ ವಾಸ್ತವ ಚಿತ್ರಣ ಬ್ರಿಟಿಷ್ ಸೆನ್ಸಾರ್ ಮಂಡಳಿಗೆ ಅಪಥ್ಯವಾಗಿಯೇ ಕಂಡಿತು. ಮೂರು ಬಾರಿ ಪರಿಷ್ಕೃತವಾಗಿ ಕೊನೆಗೆ `ಬಿಚಾರಕ್~ ಬಿಡುಗಡೆಯಾದಾಗ ಚಿತ್ರ ಸಾರ ಕಳೆದುಕೊಂಡು ನಿಸ್ತೇಜವಾಗಿತ್ತು. ರಾಷ್ಟ್ರಗೀತೆಯ ಮೂಲಕ ಜನಮನವನ್ನು ಪ್ರತಿನಿತ್ಯ ಕಲಕುತ್ತಿರುವ ವಿಶ್ವಕವಿಯ ಬಹುತೇಕ ಕತೆಗಳು ಸಿನಿಮಾ ಆಗಿ ಜನರನ್ನು ತಲುಪಲು ವಿಫಲವಾದದ್ದು ಇಂತಹ ಕಾರಣಗಳಿಂದಲೇ.ಕಲ್ಕತ್ತದಲ್ಲಿ ಅಂದಿನ ದಿನಗಳಲ್ಲಿ ಪ್ರಸಿದ್ಧ ಚಲನಚಿತ್ರ ತಯಾರಿಕಾ ಸಂಸ್ಥೆಯಾದ ಮದನ್ ಥಿಯೇಟರ್ಸ್‌ನವರು 1930 ರಲ್ಲಿ ಟ್ಯಾಗೋರರ ಕತೆಗಳಾದ `ಗಿರಿ ಬಾಲ~ ಮತ್ತು `ವಾಲಿಯಾ~ಗಳನ್ನು ಚಲನಚಿತ್ರವನ್ನಾಗಿಸಿದರು. ಮಧುಬೋಸ್ ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದರು. ಕಲ್ಕತ್ತದ ಕ್ರೌನ್ ಚಿತ್ರಮಂದಿರದಲ್ಲಿ `ದಾಲಿಯಾ~ ಪ್ರಥಮ ಪ್ರದರ್ಶನ ಟ್ಯಾಗೋರರ ಸಮ್ಮುಖದಲ್ಲೇ ನಡೆಯಿತು. ಆ ವೇಳೆಗೆ ಅಮೆರಿಕದಲ್ಲಿ `ಜಾಜ್ ಸಿಂಗರ್~ ಬಿಡುಗಡೆಯಾಗಿ ಸಂಗೀತ, ಸೌಂಡ್ ಮಾತು ಇವೆಲ್ಲದರ ಪ್ರಯೋಗ ಸಿನಿಮಾ ಮಾಧ್ಯಮದಲ್ಲಿ ಚಮತ್ಕಾರವನ್ನೇ ಸೃಷ್ಟಿಸಿತ್ತು. ವಿದೇಶದಲ್ಲಿ ಈ ಪುಳಕವನ್ನು ಕಂಡ ಮದನ್, ಕಲ್ಕತ್ತದಲ್ಲಿ ತಮ್ಮ ಸ್ಟುಡಿಯೋ ವಿಸ್ತರಿಸಿ, 1931ರ ವೇಳೆಗೆ ಪಶ್ಚಿಮ ಬಂಗಾಳದಲ್ಲಿ `ಸೌಂಡ್~ ತರುವ ಮೊದಲ ಯತ್ನಕ್ಕೆ ಕೈ ಹಾಕಿದರು. ಈ ಪ್ರಯತ್ನಕ್ಕೂ ಅವರಿಗೆ ಪ್ರೇರಣೆಯಾದದ್ದು ರವೀಂದ್ರನಾಥರ ಕಾವ್ಯವೇ. `ಮುಕ್ತಿ~ ಚಲನಚಿತ್ರಕ್ಕೆ ಕವಿ ರವೀಂದ್ರರ ದೇಶಭಕ್ತಿ ಗೀತೆಯೊಂದನ್ನು ರೆಕಾರ್ಡ್ ಮಾಡಲಾಯಿತು. ಹಾಡು ಹಿನ್ನೆಲೆಯಲ್ಲಿ, ತೆರೆಯ ಮೇಲೆ ಅದನ್ನು ಆಲಿಸುತ್ತಿರುವ ರವೀಂದ್ರನಾಥ ಟ್ಯಾಗೂರರು, ಮೊದಲ ಹಾಡು, ಮೊದಲ ಯತ್ನ, ರವೀಂದ್ರರ ಕತೆಗೆ ತೆರೆಯ ಮೇಲೆ ಅಷ್ಟೊಂದು ಅದ್ಭುತ ಪ್ರತಿಕ್ರಿಯೆ ದೊರಕಲಿಲ್ಲ ಎನ್ನುವುದನ್ನು ಮೊದಲೇ ಹೇಳಿದ್ದೇನೆ. ಈ ಮೊದಲ ಹಾಡಿಗೂ ಅದೇ ಗತಿಯಾಯಿತು. ತಾಂತ್ರಿಕ ದೋಷದಿಂದ ಹಾಡಿನ ಒಂದು ಪದವೂ ಯಾರಿಗೂ ಅರ್ಥವಾಗಲಿಲ್ಲ. ಪಿ.ಸಿ.ಬರುವಾ ನಿರ್ದೇಶನದ `ಮುಕ್ತಿ~ ಚಿತ್ರದ ಕಥಾ ಎಳೆಯೂ ರವೀಂದ್ರರದೇ.ಪಶ್ಚಿಮ ಬಂಗಾಳದ ಸಾಹಿತ್ಯ, ಸಿನಿಮಾ, ಕಲಾ ಜಗತ್ತಿನಲ್ಲಿ ರವೀಂದ್ರರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ. ಟ್ಯಾಗೋರರ ಕಾವ್ಯಶಕ್ತಿ, ಸಾಹಿತ್ಯ ಶಕ್ತಿ, ಕಲಾ ಮೀಮಾಂಸೆಯ ಸೆಳೆತವೇ ಅಂತಹುದು. ಋತ್ವಿಕ್ ಘಾಟಕ್, ಸತ್ಯಜಿತ್‌ರಾಯ್ ಎಲ್ಲರೂ ಇಲ್ಲಿಂದ ಪ್ರಭಾವಿತರದವರೇ. ಟ್ಯಾಗೋರರ ಕುಟುಂಬಕ್ಕೆ ನಿಕಟವೇ ಆಗಿದ್ದ ಸತ್ಯಜಿತ್‌ರಾಯ್ ಪದವೀಧರರಾದ ನಂತರ ಶಾಂತಿನಿಕೇತನ ಸೇರಿ, ಕಲಾ ತರಬೇತಿ ಪಡೆದು ಹೊರಬರುತ್ತಾರೆ. 1954ರ ನಂತರ `ಪಥೇರ್ ಪಾಂಚಾಲಿ~, `ಅಪೂಸಂಸಾರ್~, `ಮಹಾನಗರ್ ಮೊದಲಾದ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಅಪೂರ್ವ ಕೊಡುಗೆಗಳನ್ನು ಕೊಡುತ್ತಾರೆ. 1961ರಲ್ಲಿ ರವೀಂದ್ರನಾಥ ಟ್ಯಾಗೋರರ ಶತಮಾನೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕಾಗಿ ರವೀಂದ್ರರನ್ನು ಕುರಿತಾದ 60 ನಿಮಿಷಗಳ ಡಾಕ್ಯುಮೆಂಟರಿಯೊಂದನ್ನು ಸತ್ಯಜಿತ್‌ರಾಯ್ ತಯಾರಿಸುತ್ತಾರೆ. ಇದೊಂದು ಅಪೂರ್ವ ಸಾಕ್ಷ್ಯಚಿತ್ರ ಎನ್ನಲಾಗಿದೆ. ರವೀಂದ್ರರ 150ನೇ ವರ್ಷಾಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಾದರೂ ಆ ಚಿತ್ರ ಎಲ್ಲಿದೆ ಎನ್ನುವುದು ಪತ್ತೆಯಾಗುತ್ತದೋ ಇಲ್ಲವೋ ತಿಳಿಯದು. ಅದನ್ನು ಆಗಲೂ ದೇಶವ್ಯಾಪಿ ಪ್ರದರ್ಶನ ಮಾಡಲಿಲ್ಲ. ಈ ಸಂದರ್ಭದಲ್ಲಾದರೂ ಮಾಡಲಿ. (ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಇದು ರಾಷ್ಟ್ರಪತಿಗಳ ಚಿನ್ನದ ಪದಕ ಗಳಿಸಿದೆ).ರವೀಂದ್ರನಾಥ ಟ್ಯಾಗೋರರ ಮೂರು ಕಿರುಗತೆಗಳನ್ನಾಧರಿಸಿ ಸತ್ಯಜಿತ್‌ರಾಯ್ ನಿರ್ಮಿಸಿದ `ತೀನ್‌ಕನ್ಯಾ~ ರವೀಂದ್ರರಿಗೆ ಒಳ್ಳೆಯ ಕಾಣಿಕೆ. ಟ್ಯಾಗೋರರ ಕತೆಗಳ ಆಳವನ್ನು ಸಮರ್ಪಕವಾಗಿ ಪ್ರವಹಿಸುವುದು ಯಾವುದೇ ನಿರ್ದೇಶಕರಿಗೂ ಸವಾಲು. ರಾಯ್, ತೀನ್‌ಕನ್ಯಾ ಮೂಲಕ, `ಚಾರುಲತಾ~ ಮೂಲಕ ವಿಶ್ವಕವಿಯೊಬ್ಬರ ಅಭಿವ್ಯಕ್ತಿಯನ್ನು ದೃಶ್ಯ ಮಾದ್ಯಮದಲ್ಲೂ ಪ್ರಭಾವಶಾಲಿಯಾಗಿಸಲು ಯತ್ನಿಸಿದ್ದಾರೆ ಎನ್ನುವುದು ಗಮನಾರ್ಹ. `ಚಾರುಲತಾ~ ಇಂದಿಗೂ ಸಿನಿಮಾ ಶಾಲೆಯಲ್ಲಿ ಅಧ್ಯಯನ ಯೋಗ್ಯ. ತೌಲನಿಕ ಅಧ್ಯಯನಕ್ಕೂ ಇದು ಸೂಕ್ತ ವಸ್ತು.ವಿಶ್ವದಾದ್ಯಂತ ಟ್ಯಾಗೋರರ 150ನೇ ವರ್ಷಾಚರಣೆ ನಡೆಯುತ್ತಿದೆ. ಅವರ ಸರ್ವತೋಮುಖ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಬರೆದ ಸಣ್ಣಕತೆಯನ್ನಾಧರಿಸಿ ಬಂಗಾಳದಲ್ಲಿ `ಲ್ಯಾಬೋರೇಟರಿ~ ಎನ್ನುವ ಚಿತ್ರವನ್ನು ನಿರ್ದೇಶಕ ರಾಜಾಸೇನ್ ತಯಾರಿಸಿದ್ದಾರೆ. ಮಹಿಳೆಯ ಹಕ್ಕು, ಸಾಮಾಜಿಕ ಸ್ಥಾನಮಾನದ ಬಗ್ಗೆ ರವೀಂದ್ರರ ನಿಲುವನ್ನು ಮತ್ತೊಮ್ಮೆ ಚರ್ಚೆಗೆ ಒಳಪಡಿಸಬಹುದಾದ ಸಾಧ್ಯತೆಗಳನ್ನು ಈ ಚಿತ್ರ ಹಾಗೂ ಕಥಾವಸ್ತು ತಂದೊಡ್ಡುತ್ತದೆ. ಟ್ಯಾಗೋರರ ಕಥಾ ಪ್ರಪಂಚದ ಆಳ-ಹರಿವೇ ಹೀಗೆ. ಅವರ ಕತೆಗಳು ಚಲನಚಿತ್ರವಾಗಿ ಯಶಸ್ವಿಯಾಗದಿದ್ದರೂ ಮೂಲಕತೆಯನ್ನೇ ಜನ ಮತ್ತೆ ಮತ್ತೆ ಓದಲು ಪ್ರೇರೇಪಿಸುತ್ತಿತ್ತು.ಋತುಪರ್ಣ ಘೋಷ್ ಅವರು `ಚೋಕರ್ ಬಾಲಿ~ ಕಾದಂಬರಿಯನ್ನಾಧರಿಸಿ ಅದೇ ಹೆಸರಿನಲ್ಲಿ ಚಿತ್ರ ನಿರ್ಮಿಸಿದರು. ಚಲನಚಿತ್ರ ಯಶಸ್ವಿಯಾಗಲಿಲ್ಲ. ಜನ ಮೂಲ ಕಾದಂಬರಿಯನ್ನೇ ಮತ್ತೆ ಮತ್ತೆ ಓದಲು ಆರಂಭಿಸಿದರಂತೆ. ಕುವೆಂಪು ಅವರ `ಕಾನೂನು ಹೆಗ್ಗಡತಿ~ಗೂ ಇದೇ ಕತೆ ಆಗಲಿಲ್ಲವೇ. `ಕಾನೂರುಸುಬ್ಬಮ್ಮ ಹೆಗ್ಗಡತಿ~ ಹಾಗೂ `ಮಲೆಗಳಲ್ಲಿ ಮದುಮಗಳು~ ಓದಿದವರಿಗೆ ಸಿನಿಮಾ ಹಿಡಿಸಲಿಲ್ಲ. ಕಾದಂಬರಿ ಓದದೆ ಸಿನಿಮಾ ನೋಡಿದವರಿಗೆ ಕತೆಯ ಸಮಗ್ರತೆ ಗೊತ್ತಾಗಲಿಲ್ಲ. ವಿಶ್ವಕವಿ, ರಾಷ್ಟ್ರಕವಿಗಳ ಕೃತಿಗಳು ದೃಶ್ಯಮಾಧ್ಯಮಕ್ಕೆ ಎಟುಕದಷ್ಟು ಆಳವಾಗಿವೆ ಎಂಬುದು ನಿರೂಪಿತವಾಯಿತು. ಯಾವುದೇ ನಿರ್ದೇಶಕನಿಗೂ ಇಂತಹ ಕೃತಿಗಳು ಸವಾಲು ಎಂಬುದು ಮತ್ತೊಮ್ಮೆ ರುಜುವಾಯಿತು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry