ರಾಜಕಾರಣದ ತರ್ಕ ಮತ್ತು ಭಾಷೆ

7

ರಾಜಕಾರಣದ ತರ್ಕ ಮತ್ತು ಭಾಷೆ

ಓ.ಎಲ್. ನಾಗಭೂಷಣಸ್ವಾಮಿ
Published:
Updated:
ರಾಜಕಾರಣದ ತರ್ಕ ಮತ್ತು ಭಾಷೆ

ರಾಜಕಾರಣಿಗಳು ಬಳಸುವ ತರ್ಕ ಮತ್ತು ಭಾಷೆಯ ಕೆಲವು ಲಕ್ಷಣಗಳನ್ನು ಈ ವಾರ ನೋಡೋಣ. ರಾಜಕಾರಣಿಯ ಮಾತಿನಲ್ಲಿ ತರ್ಕ ಇರುವ ಹಾಗೆ ಕಾಣುತ್ತದೆ, ಇರುವುದಿಲ್ಲ; ವಿಚಾರಪೂರ್ಣ ಅನ್ನಿಸುತ್ತದೆ, ಅವೈಚಾರಿಕತೆಯದೇ ಮೇಲುಗೈಯಾಗಿರುತ್ತದೆ.

 

ವಾದಸರಣಿಯಲ್ಲಿ ಆನೆ ಗಾತ್ರದ ದೋಷಗಳಿರುತ್ತವೆ, ಜನ ಅದನ್ನು ಗಮನಿಸುವುದೇ ಇಲ್ಲ. ಗ್ರಹಿಕೆಯ ದೋಷಗಳು ಇರುತ್ತವೆ, ಅವು ಸ್ವಂತ ಹಿತದ ಸಾಧನೆಗಾಗಿ ರಾಜಕಾರಣಿ ಬೆಳೆಸಿಕೊಂಡ ಕುಶಲ ಕುರುಡುತನವಾಗಿರುತ್ತದೆ.

 

ರಾಜಕಾರಣಿಯ ಮಾತಿನ ಅಸಂಬದ್ಧತೆ, ಅಪ್ಪಟ ಬಿಳೀ ಸುಳ್ಳು, ತಪ್ಪು ಮಾಹಿತಿ, ದೋಷಪೂರ್ಣ ಭಾಷೆ, ಜೊತೆಗೆ ಮನರಂಜನೆಯ ಲೋಕದ ಉತ್ಪ್ರೇಕ್ಷೆಯ ಭ್ರಮೆಯ ಭಾಷೆ, ಆರ್ಥಿಕ ಲೋಕದ ಲಾಭ ನಷ್ಟದ ಭಾಷೆ, ಮಾಹಿತಿ ಮುಖ್ಯವಾದ ಪಠ್ಯಪುಸ್ತಕಗಳ ಪ್ರಶ್ನೋತ್ತರ ಭಾಷೆ ಇವೇ ನಮ್ಮ ಎಚ್ಚರದ ಬದುಕನ್ನೆಲ್ಲ ಆವರಿಸಿಕೊಂಡು ಭಾಷೆಯ ಸೂಕ್ಷ್ಮತೆ ಇಷ್ಟಿಷ್ಟೆ ಕಳೆದು ಹೋಗುತ್ತದೆ.ಪರಿಚಿತ ಪದಗಳು, ವಾಕ್ಯರಚನೆಗಳು, ಆಲೋಚನೆಗಳು ಇಲ್ಲದ ಯಾವುದೇ ಬರವಣಿಗೆ ವ್ಯರ್ಥ, ಕಷ್ಟ, ಅರ್ಥಹೀನ, ಅನಗತ್ಯ, ಅಪಾಯಕಾರಿ ಅನ್ನಿಸುವುದಕ್ಕೆ ತೊಡಗುತ್ತದೆ. ಭಾಷೆಯ ಮನಸ್ಸು ಸಾವಿನತ್ತ ಹೆಜ್ಜೆ ಹಾಕುತ್ತದೆ. ರಾಜಕಾರಣದಲ್ಲಿ ಬಳಕೆಯಾಗುವ ತರ್ಕ ಮತ್ತು ಭಾಷೆಯನ್ನು ಪ್ರತ್ಯೇಕವಾಗಿ ಗಮನಿಸಿದರೆ ತಮಾಷೆ ಅನಿಸುತ್ತದೆ, ಸ್ವಲ್ಪ ಯೋಚಿಸಿದರೆ ಎಂಥ ದುರಂತ ಅನ್ನುವ ವಿಷಾದ ಆವರಿಸುತ್ತದೆ.ಸ್ಪಷ್ಟವಾದ ಪ್ರಶ್ನೆಗೆ ರಾಜಕಾರಣಿಗಳು ಎಂದೂ ಸ್ಪಷ್ಟವಾದ ಉತ್ತರ ನೀಡುವುದಿಲ್ಲ. ಪ್ರಶ್ನೆಯ ಮುಖ್ಯಾಂಶವನ್ನು ಗಮನಿಸದೆ, ಅಥವ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ, ವಿವರವಾಗಿ ಮಾತಾಡಿದರೂ ಸ್ಪಷ್ಟ ಉತ್ತರ ಮಾತ್ರ ಹೇಳುವುದೇ ಇಲ್ಲ. `ವಿದ್ಯುತ್ ಕ್ಷಾಮ ಬಗೆಹರಿಸಲು ಏನು ಕ್ರಮ ಕೈಗೊಂಡಿದ್ದೀರಿ?~ ಎಂದೇನಾದರೂ ಕೇಳಿದರೆ ಮಳೆಯ ಅಭಾವ, ಕೇಂದ್ರದ ಮಲತಾಯಿ ಧೋರಣೆ, ಹಿಂದಿನ ಸರ್ಕಾರದ ವೈಫಲ್ಯ, ಅಸಾಂಪ್ರದಾಯಿಕ ಮೂಲಗಳ ಅನ್ವೇಷಣೆ ಇತ್ಯಾದಿ ವಾದಗಳನ್ನು ಮಂಡಿಸುತ್ತಾರೆ, ಉತ್ತರ ಮಾತ್ರ ಹೇಳುವುದಿಲ್ಲ. ವಾದವಿರಬೇಕು, ಉತ್ತರವಿರಬಾರದು, ಅದು ಅವರ ತರ್ಕ.ಆಡಳಿತ ಪಕ್ಷ ಪ್ರತಿ ಚುನಾವಣೆಯಲ್ಲೂ ಬದಲಾಗುತ್ತಿರುವುದರಿಂದ ಎರಡು ತಪ್ಪು=ಒಂದು ಸರಿ ಅನ್ನುವುದು ಚಿರಂಜೀವಿಯಾಗಿ ಉಳಿದಿರುವ ಇನ್ನೊಂದು ತರ್ಕ. `ಆ ಪಕ್ಷದಲ್ಲಿದ್ದವರು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಅದು ತಪ್ಪಲ್ಲವೇ? ನಾವೂ ಅದನ್ನೇ ಮಾಡಿದರೆ ತಪ್ಪು ಹೇಗಾಗುತ್ತದೆ?~ ಅನ್ನುವಂಥ ಮಾತು ನಿಜವೇ ಆಗಿದ್ದರೂ ಅರ್ಥಹೀನವಾದದ್ದು. ಯಾಕೆಂದರೆ `ನಿಮ್ಮ ವಿರೋಧಿ ಕೊಲೆ ಮಾಡಿಯೂ ಅದು ಬಯಲಿಗೆ ಬರದೆ ಇರಬಹುದು.

 

ಅಂದಮಾತ್ರಕ್ಕೆ ನೀವೂ ಕೊಲೆಮಾಡುವುದು ಸರಿಯಾಗುತ್ತದೆಯೇ?~ ಅನ್ನುವ ಪ್ರಶ್ನೆ ಹುಟ್ಟುತ್ತದೆ, ಆದರೆ ಕೇಳುವವರು ಯಾರು, ಉತ್ತರಿಸುವವರು ಯಾರು!

ವಿರೋಧಿಗಳ ವಾದವನ್ನು ತಾರ್ಕಿಕವಾಗಿ ಅಲ್ಲಗಳೆಯುವುದಕ್ಕಿಂತ ವಾದ ಮಂಡನೆ ಮಾಡಿದವರ ಮೇಲೆಯೇ ಆಪಾದನೆ ಹೊರಿಸುವುದು- ಇದು ರಾಜಕಾರಣಿಗಳು ಬಳಸುವ ಪರಿಣಾಮಕಾರೀ ತಂತ್ರ.ಬಂಡವಾಳಶಾಹಿ, ಜಾಗತಿಕ ಮಾರುಕಟ್ಟೆ, ತತ್ವ, ಸಿದ್ಧಾಂತ ಇತ್ಯಾದಿಗಳ ಬಗ್ಗೆ ಮಾತನಾಡುವುದಕ್ಕಿಂತ ಎದುರಾಳಿಯನ್ನು `ಜನವಿರೋಧಿ~ ಎಂದೋ `ಸ್ಯೂಡೋ ಸೆಕ್ಯುಲರ್~, `ಕೋಮುವಾದಿ~, `ಧರ್ಮವಿರೋಧಿ~ ಹೀಗೆ ನಿಷಿದ್ಧ ನಾಮಕರಣ ಮಾಡಿ ಗೆದ್ದೆವೆಂದು ಬೀಗುವಲ್ಲಿ ಇದು ಎದ್ದು ಕಾಣುತ್ತದೆ.

 

ಸರ್ಕಾರವನ್ನು ವಿರೋಧಿಸುವ ಪಕ್ಷ ಇಂಥ ಹೆಸರಿಗೆ ಅರ್ಹವೇ ಆಗಿರಬಹುದು, ಆದರೆ ಅದು ಎತ್ತುವ ಪ್ರಶ್ನೆ ಸಂಗತವೋ ಅಲ್ಲವೋ ಅನ್ನುವ ಪರಿಶೀಲನೆಯ ವ್ಯವಧಾನ ರಾಜಕಾರಣಿಗಳಿಗೆ ಇರುವುದಿಲ್ಲ.

 

ಇದರ ಇನ್ನೊಂದು ಮುಖ ಸಾಂಸ್ಕೃತಿಕ ನಾಯಕರಲ್ಲಿ ಇರುವ ಮಾನವ ಸಹಜ ಮಿತಿಗಳನ್ನು, ಕೊರತೆಗಳನ್ನು ದೊಡ್ಡದು ಮಾಡಿ ಮುಂದೊಡ್ಡಿ ಅವರೇನು ಮಹಾ, ಅಂಥವರ ಮಾತಿಗೇನು ಮಹತ್ವ ಅನ್ನುವ ವಿತಂಡವಾದ ಹೂಡುತ್ತಾರೆ. ಗಾಂಧೀಜಿ, ಅಂಬೇಡ್ಕರ್, ಲೋಹಿಯಾ ಇಂಥ ಎಲ್ಲ ನಾಯಕರ ಬಗ್ಗೆಯೂ ಇಂಥ ತರ್ಕ ಕೆಲಸಮಾಡುವುದು ನೋಡಿದ್ದೇವಲ್ಲವೇ!ತಮ್ಮನ್ನು ವಿರೋಧಿಸುವವರೆಲ್ಲ `ಜನವಿರೋಧಿಗಳು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು, ಯಥಾಸ್ಥಿತಿ ವಾದಿಗಳು, ಅವರಿಂದ ದೇಶಕ್ಕೆ ಅಪಾಯ~; ಪರಿಸರದ ಪ್ರಶ್ನೆಗಳನ್ನು ಕೇಳುವವರು `ಆರ್ಥಿಕ ಬೆಳವಣಿಗೆಗೆ ಅಡ್ಡಗಾಲು ಹಾಕುವವರು~, `ಅಭಿವೃದ್ಧಿಯ ವಿರೋಧಿಗಳು~- ಹೀಗೆ ವಿರೋಧಿಗಳನ್ನೆಲ್ಲ ಬೆದರು ಬೊಂಬೆಗಳಾಗಿಸುವ ತರ್ಕವೂ ಬಳಕೆಯಲ್ಲಿದೆ. ಯಾವುದೇ ಒಂದು ಸಣ್ಣ ಸಂಗತಿಯೂ ಬಹುದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಉತ್ಪ್ರೇಕ್ಷಿಸಿ ಭೀತಿಯನ್ನು ಸೃಷ್ಟಿಸುವುದು ಸಾಂಸ್ಕೃತಿಕ ರಾಜಕಾರಣದಲ್ಲಿ ಜನಪ್ರಿಯವಾಗಿರುವ ವಿಧಾನ. ಪ್ರೇಮಿಗಳ ದಿನಾಚರಣೆಯಿಂದ ಸಮಾಜದ ನೈತಿಕ ಅಧಃಪತನವಾಗುತ್ತದೆ, ಅಂಗಡಿಯ ಬೋರ್ಡುಗಳಲ್ಲಿ ಕನ್ನಡವಿರದಿದ್ದರೆ ಕನ್ನಡವೇ ಕೊನೆಗಾಣುತ್ತದೆ, ಡಬ್ಬಿಂಗ್ ಮಾಡುವುದರಿಂದ ಕನ್ನಡ ಸಂಸ್ಕೃತಿ ನಾಶವಾಗುತ್ತದೆ ಇತ್ಯಾದಿ ನಿಲುವುಗಳು ಈ ಬಗೆಯ ಚಿಂತನೆಯ ಆಶ್ರಯದಲ್ಲೇ ಹುಟ್ಟಿ ಬೆಳೆಯುತ್ತವೆ.ನಾನು, ನನ್ನ ಗ್ರಹಿಕೆ, ನನ್ನ ಅನುಭವ ಇವು ಮಾತ್ರ ಸತ್ಯ ಅನ್ನುವುದು ದೋಷಪೂರ್ಣವಾದ, ಆದರೆ ತಾರ್ಕಿಕವಾಗಿ ವಿರೋಧಿಸಲು ಕಷ್ಟವಾದ ನಿಲುವು. ಇದು ಸಾಮಾನ್ಯವಾಗಿ `ಸಂಚು~ ಅನ್ನುವ ವಿವರಣೆಯಾಗಿ ಕಾಣಿಸಿಕೊಳ್ಳುತ್ತದೆ.ತಮ್ಮ ವಿರುದ್ಧವಾದ ಸಂಗತಿ, ಸಾಕ್ಷ್ಯ, ವಾದಗಳು ಎಲ್ಲವನ್ನೂ ರಾಜಕೀಯ ಸಂಚು ಅನ್ನದ ರಾಜಕಾರಣಿ ಉಂಟೇ! ಬಲಪಂಥೀಯ ಪಕ್ಷಗಳು ತಮ್ಮ ನಿಲುವಿಗೆ ಕಿರಿಕಿರಿ ಮಾಡುವಂಥದೆಲ್ಲವನ್ನೂ ಸಂಸ್ಕೃತಿ ವಿರೋಧಿ, ಧರ್ಮ ವಿರೋಧಿ ಅನ್ನುತ್ತವೆ; ಎಡಪಂಥೀಯ ಪಕ್ಷಗಳು ಪ್ರತಿಯೊಂದನ್ನೂ ವರ್ಗಹೋರಾಟ, ಶೋಷಣೆಯ ಕಾರಣದಿಂದ ಸಂಭವಿಸಿದ್ದು ಅನ್ನುತ್ತವೆ. ಇವೆರಡೂ ತಮ್ಮ ನಿಲುವೇ ಪರಮಸತ್ಯ ಅನ್ನುವ ತರ್ಕದ ಉದಾಹರಣೆಗಳು.ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಅನ್ನುವ ಹಾಗೆ ಎಲ್ಲ ಸಾಮಾಜಿಕ ಸಮಸ್ಯೆಗಳಿಗೂ, ಕೆಡುಕಿಗೂ `ಒಂದೇ~ ಕಾರಣವನ್ನು ಮುಂದುಮಾಡಿ ವಾದಿಸುವುದು ಇನ್ನೊಂದು ವಿಧಾನ. ಮೂಢನಂಬಿಕೆ, ಸಿನಿಮಾ, ಕೊಳ್ಳುಬಾಕತನ, ಸ್ವಹಿತಾಸಕ್ತಿ, ಬಹು ರಾಜಕೀಯ ಪಕ್ಷಗಳಿಗೆ ಅವಕಾಶ ಇರುವುದು, ಕನ್ನಡದ ಬಗ್ಗೆ ತಿರಸ್ಕಾರ, ಸ್ವಾರ್ಥ- ಇಂಥ ಯಾವುದಾದರೂ `ಒಂದು~ ಸರಿಹೋದರೆ ಎಲ್ಲ ಸಮಸ್ಯೆಗಳೂ ಪರಿಹಾರವಾದಂತೆ ಅನ್ನುವ ಅತಾರ್ಕಿಕತೆ ಇದು. ಸ್ಥಳೀಯ ಮಿತಿಯನ್ನುಳ್ಳ ಪಕ್ಷಗಳು ಒಡ್ಡುವ ಇಂಥ ವಾದಗಳು ತಕ್ಕ ಮಟ್ಟಿಗೆ ಜನಬೆಂಬಲವನ್ನೂ ಪಡೆಯುತ್ತವೆ.ಬಹಳ ಜನಕ್ಕೆ ಪ್ರಿಯವಾದದ್ದು ಮಾತ್ರವೇ ಸತ್ಯ ಅನ್ನುವುದು ಸಮೂಹಮಾಧ್ಯಮಗಳು ಮತ್ತು ರಾಜಕಾರಣಿಗಳು ಬಲವಾಗಿ ನಂಬುವ, ಪ್ರತಿಪಾದಿಸುವ ನಿಲುವು. ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಗಳನ್ನು ಪ್ರಜೆಗಳು ಆಯ್ಕೆಮಾಡುವುದೇ ಒಟ್ಟು ನಾಡಿನ ಹಿತಕ್ಕೆ ಕಷ್ಟಕರ ಆಯ್ಕೆಗಳನ್ನು ಕೈಗೊಂಡು ಎಲ್ಲರ ಹಿತ ಕಾಪಾಡಬಲ್ಲರು ಅನ್ನುವ ಕಾರಣಕ್ಕೆ.ಆದರೆ ಬಹುಸಂಖ್ಯೆಯ ಜನ ಒಪ್ಪಿದ್ದನ್ನು ವಿರೋಧಿಸುವ ಧೈರ್ಯವನ್ನು ತೋರುವ ಮಾಧ್ಯಮಗಳಾಗಲೀ, ರಾಜಕಾರಣಿಯಾಗಲೀ ಅಪರೂಪ. ಭವ್ಯ ಭಾರತೀಯ ಸಂಸ್ಕೃತಿ, ಪ್ರಗತಿಯ ನಾಗಾಲೋಟ, ರಾಷ್ಟ್ರೀಯತೆ ಇಂಥ ಹಲವು ಕಲ್ಪನೆಗಳನ್ನು ಪ್ರಶ್ನಾತೀತವಾದವು ಎಂದು, ಸರ್ವಮಾನ್ಯ ಎಂದು ನಂಬಿ ವಾದ ಮಂಡಿಸುವುದು ರಾಜಕಾರಣಿಗಳ ಇನ್ನೊಂದು ಅಭ್ಯಾಸ.ಬಹುಸಂಖ್ಯಾತ ಜನ ಒಪ್ಪಿದ್ದು ತಪ್ಪೇ ಆಗಿದ್ದರೂ ಹಾಗೆಂದು ಹೇಳುವ ರಾಜಕಾರಣಿ ಇಲ್ಲವೆನ್ನುವಷ್ಟು ಅಪರೂಪ. ಚುನಾವಣೆಯಲ್ಲಿ ಗೆದ್ದ ಕೂಡಲೇ ತಮ್ಮ ಮೇಲಿನ ಆಪಾದನೆಗಳೆಲ್ಲವೂ ಸುಳ್ಳೆಂದು ಸಾಬೀತಾಯಿತೆಂದು ವಾದಿಸುವುದು ಇದೇ ತರ್ಕದ ಇನ್ನೊಂದು ರೂಪ.ಒಂದೇ ವಿಷಯವನ್ನು ಸಾವಿರ ಬಾರಿ ಹೇಳುತ್ತಲೇ ಇದ್ದರೆ ಕೊನೆಗಾದರೂ ಅದನ್ನು ನಿಜವೆಂದು ಜನ ನಂಬುತ್ತಾರೆ ಅನ್ನುವ ಗಟ್ಟಿಯಾದ ವಿಶ್ವಾಸ ಇರುವುದರಿಂದಲೇ ವೃತ್ತಿಪರ ರಾಜಕಾರಣಿಯ ನೂರು ಭಾಷಣಗಳು ಒಂದೇ ವಿಷಯದ ನೂರು ಪುನರುಕ್ತಿಗಳಾಗಿರುತ್ತವೆ.ವೇದಿಕೆಯ ಮೇಲೆ ನಿಂತು `ತಕ್ಕಂಥ~ ಅನ್ನುವ ಪದವನ್ನು ಬಳಸದೆ ಮಾತನಾಡುವ ರಾಜಕಾರಣಿ ಇನ್ನೂ ನನ್ನ ಕಣ್ಣಿಗೆ ಬಿದ್ದಿಲ್ಲ. ಅಗತ್ಯವಿದೆಯೋ ಇಲ್ಲವೋ `ಪರಂತು~ ಅನ್ನುವವರು ಇನ್ನು ಕೆಲವರು. `ಸೂಕ್ತ ಕ್ರಮ~ ಅನ್ನುವುದಂತೂ ಸರ್ವಾಂತರ್ಯಾಮಿ. ಇಂಥ ಹರಳುಗಳು ತುತ್ತಿಗೊಂದು ಸಿಗುವುದೂ ನಾವು ನಿರ್ಲಕ್ಷಿಸುವುದೂ ಸಾಮಾನ್ಯ.ಸಭೆ ದೊಡ್ಡದಾಗಿದ್ದಷ್ಟೂ ಭಾಷಣಕಾರ ರಾಜಕಾರಣಿಯ ಮಾತಿಗೆ ನಾಟಕೀಯತೆಯ ಆವಾಹನೆಯಾಗುತ್ತದೆ. ಪ್ರತಿಸ್ಪರ್ಧಿ ರಾಜಕಾರಣಿ ಕಣ್ಣೆದುರಿಗೆ ಇರುವಂತೆ ಕಲ್ಪಿಸಿಕೊಂಡು ಅವರನ್ನುದ್ದೇಶಿಸಿ- ಅವರೇ, ನೀವು ನನ್ನ ಕೂದಲೂ ಕೊಂಕಿಸುವುದಕ್ಕೆ ಆಗುವುದಿಲ್ಲ. -ಅವರೇ ನೀವು ಮಾಡುತ್ತಿರುವುದು ವಿಶ್ವಾಸದ್ರೋಹವಲ್ಲದೆ ಮತ್ತೇನು? ಹೀಗೆ ಇಲ್ಲದ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುವಾಗ ದನಿಯೂ ನಾಟಕೀಯವಾಗಿ ಏರಿಳಿಯುತ್ತದೆ.`ಯಾವ~ ಅಥವ `ಯಾವ ಒಂದು?~ ಎಂದು ಆರಂಭಿಸಿ `ಅಂಥಾ~ ಎಂದು ವಾಕ್ಯದ ಉತ್ತರಾರ್ಧವನ್ನು ಬೆಳೆಸುವ ರೀತಿ ವಾಗ್ಮಿತೆಯ ಲಕ್ಷಣವೆಂದು ಅನೇಕ ರಾಜಕಾರಣಿಗಳು ಭಾವಿಸಿದ್ದಾರೆ. ಮಾತಿನ ಓಘದಲ್ಲಿ ವಾಕ್ಯ ಅಸಂಬದ್ಧವಾಗುವುದನ್ನು ಮಾತ್ರ ಗಮನಿಸುವುದೇ ಇಲ್ಲ.ಗಂಭೀರ ಚರ್ಚೆಯನ್ನು ಮಾಡಬಲ್ಲ ರಾಜಕಾರಣಿಯೂ ಅಪರೂಪ, ಅದನ್ನು ಪ್ರಮುಖವೆಂದು ಭಾವಿಸುವ ಪತ್ರಿಕೆಗಳೂ ಅಪರೂಪ. ಅಮೂರ್ತವಾದ, ಜಟಿಲವಾದ ಸಂಗತಿಗಳನ್ನು ಚಿತ್ರವತ್ತಾದ ರೂಪಕಗಳಲ್ಲಿ ವಿವರಿಸಿ ಕೈತೊಳೆದುಕೊಳ್ಳುವುದು ರಾಜಕಾರಣಿಗಳ ಭಾಷೆಯ ಇನ್ನೊಂದು ಲಕ್ಷಣ.`ಮೇಜರ್ ಸರ್ಜರಿ~, `ಕಡತ ಯಜ್ಞ~ ಅಂಥ ಎರಡು ಉದಾಹರಣೆಗಳು. ಪತ್ರಿಕೆಗಳೂ ವಿಧಾನಮಂಡಲದ ಕಲಾಪಗಳಲ್ಲಿ ಕೇಳಿಸುವ ಅಸಂಬದ್ಧವಾದ ಹಾಸ್ಯ ಚಟಾಕಿಗಳನ್ನು ಸ್ವಾರಸ್ಯಕರವೆಂದು ಗಮನಸೆಳೆಯುವ ಹಾಗೆ ಮುದ್ರಿಸುವುದು ಸಾಮಾನ್ಯ.ಟೀವಿಯೇ ಕ್ಷಣಕ್ಷಣದ ಸುದ್ದಿಗಳನ್ನು ಚಿತ್ರವತ್ತಾಗಿ ಬಿತ್ತರಿಸುವುದರಿಂದ ಸುದ್ದಿಗಾಗಿ ಪತ್ರಿಕೆ ಓದುವವರು ಕಡಮೆ; ಹಾಗಾಗಿ ತಲೆಬರಹಗಳನ್ನು ದ್ವಂದ್ವಾರ್ಥಗಳ ಮೂಲಕ ರೋಚಕಗೊಳಿಸುವುದು ಪತ್ರಿಕೆಗಳು ಕಂಡುಕೊಂಡಿರುವ ಉಪಾಯ.ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕೊಟ್ಟಿರುವ ಮೀಸಲಾತಿ `ನಾರಿ ದರ್ಬಾರ್~; ಪರಿಹಾರ ಕುರಿತು `ಕೇಂದ್ರದ ಭರವಸೆ, ದೂರ, ಬಲುದೂರ~; ಕೈಬಿಡಲಿರುವ ಮಂತ್ರಿಯನ್ನು ಕುರಿತು `ಶೋಭಾಗೆ ಕೊಕ್~ ಅಥವಾ `ನಾಯಕರಾಗಲು ಸಿದ್ಧರಯ್ಯ~ ಹೀಗೆ ಎರಡರ್ಥ ಬರುವಂಥ ಪದವನ್ನು ಬಣ್ಣದಲ್ಲಿ ಮುದ್ರಿಸಿ ಗಮನಸೆಳೆಯುವುದು ರೋಚಕವಾಗಿದ್ದರೂ ಭಾಷೆಯ ಇಂಥ ಬಳಕೆ ದೀರ್ಘಾವಧಿಯಲ್ಲಿ ಓದುಗರ ಸಂವೇದನೆಯನ್ನು ಮೊಂಡು ಮಾಡುತ್ತದೆ.ಮೂರು ನುಡಿಗಳ ಗುಚ್ಛವನ್ನು ಬಳಸುವುದು ಸಾಮಾನ್ಯವಾದೊಂದು ತಂತ್ರ. ಸ್ವಾತಂತ್ರ್ಯ, ಸೋದರತೆ, ಸಮಾನತೆ; ಕಲೆ, ಸಾಹಿತ್ಯ, ಸಂಸ್ಕೃತಿ; ಕೊಲೆ, ಅತ್ಯಾಚಾರ, ಸುಲಿಗೆ; ಶಾಂತಿ, ಶಿಸ್ತು, ಸಂಯಮ; ಬುದ್ಧ, ಬಸವ, ಅಂಬೇಡ್ಕರ್; ಗಾಂಧಿ, ನೆಹರು, ಪಟೇಲ್ ಇತ್ಯಾದಿಯಾಗಿ ವಿಷಯಗಳನ್ನೂ ವ್ಯಕ್ತಿಗಳನ್ನೂ ಮೂರು ಮೂರರ ಕಟ್ಟಿನಲ್ಲಿ ವಿವರಿಸುವುದು ಜನತೆಯ ಆಲೋಚನೆಯನ್ನು ಹರಳುಗಟ್ಟಿಸುವ ಪರಿಣಾಮಕಾರೀ ವಿಧಾನ.ರಾಜಕಾರಣಿಗಳು ಭಾಷಣದಲ್ಲಿ ಯಾವ ಸಂದರ್ಭದಲ್ಲಿ ನಾನು, ನಾವು, ನೀವು, ಅನ್ನುವ ಪದಗಳನ್ನು ಬಳಸುತ್ತಾರೆ ಗಮನಿಸಿ. ಜನರ ಮನಸ್ಸು ಗೆಲ್ಲಬೇಕಾದಾಗ `ನಾವು~ ಅನ್ನುವುದು ನಾಯಕ ಮತ್ತು ಜನರನ್ನು ಒಳಗೊಂಡರೆ, ಸಂದಿಗ್ಧ ಸಮಸ್ಯೆ ಬಗ್ಗೆ ಮಾತಾಡುತ್ತಾ `ನಾವು ಪರಿಶೀಲಿಸಬೇಕು~ ಅನ್ನುವಲ್ಲಿ ಅದು ಆಪ್ತರನ್ನು ಸೂಚಿಸುತ್ತದೋ, ಮಂತ್ರಿ ಮಂಡಲವನ್ನೋ, ಪಕ್ಷವನ್ನೋ, ವರಿಷ್ಠರನ್ನೋ, ನಾಡಿನ ಇಡೀ ಜನತೆಯನ್ನೋ, ಅದು ಅಸ್ಪಷ್ಟವಾಗಿಯೇ ಉಳಿಯುತ್ತದೆ.ಕೀರ್ತಿ ಬರುವಂಥ, ತನ್ನ ವಿಶಿಷ್ಟತೆಯನ್ನು ಸಾರುವಂಥ ಪ್ರಸಂಗದಲ್ಲಿ `ನಾನು~ ಬಳಕೆಯಾಗುತ್ತದೆ. `ನೀವು~ ಅನ್ನುವುದು ಸುಮ್ಮನಿದ್ದು ಸಹರಿಸಬೇಕಾದ ಜನತೆಗೆ ಅನ್ವಯಿಸುತ್ತದೆ. ಅಧಿಕಾರದ ಅಪೇಕ್ಷೆಯನ್ನು ಸೇವೆಯ ಅವಕಾಶವೆಂದು ಬಿಂಬಿಸುವ, ಸ್ವಜನ ಪಕ್ಷಪಾತವನ್ನು ಸಾಮಾಜಿಕ ನ್ಯಾಯವೆಂದು ಒಪ್ಪಿಸುವ, ಗದ್ದಲ, ಕೂಗಾಟ, ಕಿರುಚಾಟಗಳನ್ನೇ ಸಂಸದೀಯ ವರ್ತನೆ ಎಂದು ನಂಬಿಸುವ, ಸೌಜನ್ಯವು ದೌರ್ಬಲ್ಯವಾಗಿರುವ ವಾತಾವರಣದಲ್ಲಿ ರಾಜಕಾರಣದ ಭಾಷೆ ರಾಜಕಾರಣಿಗಳ ನಿಜ ಉದ್ದೇಶವನ್ನು ಮರೆಮಾಚುವ ತೆರೆಯಷ್ಟೆ ಆಗಿ ಬಳಕೆಯಾಗುತ್ತದೆ. olnswamy@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry