ರಾಜಕಾರಣಿಗಳೂ ಬಹುತ್ವ ಸಿದ್ಧಾಂತವೂ

7

ರಾಜಕಾರಣಿಗಳೂ ಬಹುತ್ವ ಸಿದ್ಧಾಂತವೂ

ರಾಮಚಂದ್ರ ಗುಹಾ
Published:
Updated:
ರಾಜಕಾರಣಿಗಳೂ ಬಹುತ್ವ ಸಿದ್ಧಾಂತವೂ

ಭಾರತದಲ್ಲಿ ಬಹುತ್ವ ಸಿದ್ಧಾಂತಕ್ಕೆ ಜಯ ಯಾವತ್ತೂ ಕಷ್ಟ. ದೇಶ ವಿಭಜನೆಯ ದಿನಮಾನದಲ್ಲಿ ನಡೆದ ದೊಂಬಿಗಳು ಭಾರತದ ಅಲ್ಪಸಂಖ್ಯಾತರಲ್ಲಿ ತೀವ್ರ ಅಭದ್ರತಾ ಭಾವಕ್ಕೆ ಕಾರಣವಾದವು. ಮಹಾತ್ಮ ಗಾಂಧೀಜಿ ಸಾವು ದಿಗ್ಭ್ರಮೆ ಮೂಡಿಸಿದ್ದಲ್ಲದೇ ಕೆಲವರಲ್ಲಿ ಕ್ರೋಧವನ್ನೂ ಹುಟ್ಟುಹಾಕಿತು. ಆದ್ದರಿಂದಲೇ ಜವಾಹರಲಾಲ್ ನೆಹರೂ ಸರ್ಕಾರ ಹಿಂದೂ ಉಗ್ರರನ್ನು ಪ್ರತ್ಯೇಕಿಸಿ, ಸೌಮ್ಯ ಸ್ವಭಾವದ, ಎಲ್ಲರೊಳಗೆ ಒಂದಾಗುವಂಥವರನ್ನು ಮುಖ್ಯವಾಹಿನಿಗೆ ಸೇರಿಸಿತು.1950ರ ದಶಕದ ಉದ್ದಕ್ಕೂ ಯಾವುದೇ ದೊಡ್ಡ ಕೋಮುಗಲಭೆ ನಡೆಯಲಿಲ್ಲ. ಇದರಿಂದಾಗಿ ಪ್ರಜಾಪ್ರಭುತ್ವ ಹಾಗೂ ಸಂಯುಕ್ತ ಸಾಂವಿಧಾನಿಕ ಚೌಕಟ್ಟಿನಿಂದ ದೇಶದ ಜನರನ್ನು ಒಗ್ಗೂಡಿಸುವುದು ಸರ್ಕಾರಕ್ಕೆ ಸಾಧ್ಯವಾಯಿತು. ಆಯಾ ಪ್ರಮುಖ ಭಾಷಾ ಸಮೂಹಕ್ಕೆ ತನ್ನದೇ ರಾಜ್ಯದ ಸ್ಥಾನಮಾನ ಸಿಕ್ಕಿತಲ್ಲದೇ ಆರ್ಥಿಕ ಅಭಿವೃದ್ಧಿಯ ಮಾರ್ಗಗಳೂ ತೆರೆದುಕೊಂಡವು.ಈ ವಿಸ್ತೃತ ಸಾಮಾಜಿಕ ಶಾಂತಿಗೆ ಭಂಗವಾದದ್ದು 1963ರಲ್ಲಿ; ಜಬಲ್‌ಪುರ, ರೂರ್ಕೆಲದಲ್ಲಿ ಗಲಭೆಗಳಾದಾಗ. ಮುಂದಿನ ಇಪ್ಪತ್ತು ವರ್ಷ ಉತ್ತರ ಹಾಗೂ ಕೇಂದ್ರ ಭಾರತದ ಅನೇಕ ನಗರಗಳು ಹಿಂದೂ, ಮುಸ್ಲಿಂ ಸಮುದಾಯಗಳ ನಡುವಿನ ಪಂಥೀಯ ಘರ್ಷಣೆಗೆ ಸಾಕ್ಷಿಯಾದವು. ಈ ಘರ್ಷಣೆಗಳಿಗೆ ಪರಸ್ಪರ ಸಂಬಂಧವಿರಲಿಲ್ಲ. ಆದರೆ ಉಭಯ ಧರ್ಮೀಯರ ನಡುವೆ ದೊಡ್ಡ ಕಂದಕ ಸೃಷ್ಟಿಯಾಯಿತು. ಗಲಭೆಗಳು ನಡೆದ ನಗರಗಳ ಜನ ಸಂಶಯಪಿಶಾಚಿಗಳಾದರು. ಭಯದಲ್ಲಿ ಥರಗುಟ್ಟಿಹೋದರು. ಆಮೇಲೆ 1980ರ ದಶಕದ ಪ್ರಾರಂಭದಲ್ಲಿ ಹಿಂದೂ ಹಾಗೂ ಸಿಖ್ಖರ ನಡುವೆ ತಿಕ್ಕಾಟ ಶುರುವಾಯಿತು. ಖಲಿಸ್ತಾನಿ ಉಗ್ರರಿಂದ ಪ್ರೇರಣೆಗೊಂಡು ಮೊದಲು ಪಂಜಾಬ್‌ನಲ್ಲಿ ಹಿಂದೂ-ಸಿಖ್ಖರ ನಡುವೆ ಗಲಭೆಗಳು ನಡೆದವು. ಬಳಿಕ, ಇಂದಿರಾ ಗಾಂಧಿ ಮೃತಪಟ್ಟ ನಂತರ ದೆಹಲಿ ಮತ್ತಿತರ ನಗರಗಳಲ್ಲಿ ಕಾಂಗ್ರೆಸ್ ನಾಯಕರನ್ನು ಒಳಗೊಂಡ ತಂಡಗಳು ಸಹಸ್ರಾರು ಸಿಖ್ಖರ ಹತ್ಯೆ ಮಾಡಿದವು.ಹಿಂದೂ-ಮುಸ್ಲಿಂ ಗಲಭೆಗಳು ತೀವ್ರಗೊಂಡದ್ದು 1980ರ ಉತ್ತರಾರ್ಧದಲ್ಲಿ. ಅಯೋಧ್ಯಾ ಚಳವಳಿಯು ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ದೊಡ್ಡ, ಸಣ್ಣ ಮಟ್ಟದ ಹಲವು ಗಲಭೆಗಳ ಬೆಂಕಿಗೆ ತುಪ್ಪ ಸುರಿಯಿತು. ಸಹಸ್ರಾರು ಜನ ಪ್ರಾಣತೆತ್ತರು. ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡರು. ವಿಷಯ ಪರಿಣತರು, ಪತ್ರಕರ್ತರು ಹಾಗೂ ನಾಗರಿಕ ಹಕ್ಕುಗಳ ಹೋರಾಟ ಸಮೂಹಗಳು ಸ್ಪಷ್ಟಪಡಿಸಿರುವಂತೆ ಈ ಗಲಭೆಗಳಿಂದ ಪಡಿಪಾಟಲು ಪಟ್ಟು ಮನೆ ಇಲ್ಲದಂತಾದ ಮುಸ್ಲಿಮರು ಅಳತೆಗೆ ಸಿಗದಷ್ಟಿದ್ದರು. ಜಮ್ಮು ಮತ್ತು ಕಾಶ್ಮೀರ ಮಾತ್ರ ಇದಕ್ಕೆ ಅಪವಾದ. ಅಲ್ಲಿ 1980ರಲ್ಲಿ ಪ್ರತ್ಯೇಕತಾ ಚಳವಳಿ ತೀವ್ರಗೊಂಡದ್ದೇ ಮೂಲಭೂತವಾದಿಗಳಿಗೆ, ಜಿಹಾದಿಗಳಿಗೆ ಕುಮ್ಮಕ್ಕು ನೀಡಿತು. ಮೂರು ಲಕ್ಷ ಪಂಡಿತರನ್ನು ಬಲವಂತವಾಗಿ ಜಮ್ಮು-ಕಾಶ್ಮೀರ ಕಣಿವೆಗಳಿಂದ ಹೊರಹಾಕಲಾಯಿತು.1980 ಹಾಗೂ 1990ರ ದಶಕಗಳ ಬಹುಪಾಲು ಅವಧಿ ನಾನು ಉತ್ತರ ಭಾರತದಲ್ಲೇ ವಾಸವಿದ್ದೆ. ಹಿಂದೂ-ಮುಸ್ಲಿಮರ ನಡುವೆ ವ್ಯಾಪಕ ಹಿಂಸಾಚಾರ ಕಂಡೆ. 1989ರಲ್ಲಿ ಭಾಗಲ್‌ಪುರಕ್ಕೆ ಹೋದೆ. ಅಲ್ಲಿ ರಾಮಜನ್ಮಭೂಮಿ ಹೋರಾಟಗಾರರಿಂದ ಬೆಂಬಲ ಪಡೆದ ಗುಂಪುಗಳು ಮುಸ್ಲಿಂ ಮನೆಗಳ, ಹಳ್ಳಿಗಳ ಮೇಲೆ ದಾಳಿ ಇಟ್ಟದ್ದನ್ನು ನೋಡಿದೆ. ಸುಶಿಕ್ಷಿತರು, ವೃತ್ತಿಪರರು ಕೂಡ ಮತಾಂಧರಾದದ್ದನ್ನು ಕಂಡು ನನಗೆ ದಿಗ್ಭ್ರಮೆಯಾಯಿತು. ಡಿಸೆಂಬರ್ 6, 1993ಕ್ಕೆ ಬಾಬ್ರಿ ಮಸೀದಿ ಕೆಡವಿ ಸರಿಯಾಗಿ ಒಂದು ವರ್ಷವಾಗಿತ್ತು. ಹಿಮಾಲಯದ ಪರಿಸರ ವಿಜ್ಞಾನ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಜಿ.ಬಿ.ಪಂತ್ ಸಂಸ್ಥೆಗೆ ನಿರ್ದೇಶಕರನ್ನು ಆಯ್ಕೆ ಮಾಡಲು ದೆಹಲಿಯಲ್ಲಿ ಅದೇ ದಿನ ಸಭೆ ಸೇರಿದ್ದ ಸಮಿತಿಯ ಸದಸ್ಯರಲ್ಲಿ ನಾನೂ ಒಬ್ಬ. ಪರಿಸರ ಸಚಿವರ ಕಾರ್ಯದರ್ಶಿ, ಹಿಮಾಲಯದ ಸಸ್ಯಸಮೃದ್ಧಿಯ ಅರಿವಿದ್ದ ಸಸ್ಯವಿಜ್ಞಾನಿ, ದಕ್ಷಿಣ ದೆಹಲಿಯ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದ ವಿಜ್ಞಾನಿ, ಸಮಿತಿಯಲ್ಲಿ ಇದ್ದ ಇನ್ನಿತರ ಸದಸ್ಯರು. ಸಭೆ ಶುರುವಾಗಬೇಕಿದ್ದ ಸಮಯ ದಾಟಿ ಒಂದು ತಾಸು ಕಳೆದರೂ ದೆಹಲಿಯ ಆ ವಿಜ್ಞಾನಿ ಬರಲಿಲ್ಲ. ಬಹುಶಃ ಅವರು ಮುಸ್ಲಿಂ ಧರ್ಮಕ್ಕೆ ಸೇರ್ದ್ದಿದೇ ಅದಕ್ಕೆ ಕಾರಣ. ಬೀದಿಗಳಲ್ಲಿ ರೊಚ್ಚಿಗೆದ್ದಿದ್ದ ಚಳವಳಿಕಾರರನ್ನು ಹಾದು ಅವರು ಬರುವುದು ಸುಲಭವಾಗಿರಲಿಲ್ಲ. ಅವರ ಪರಿಸ್ಥಿತಿ ಹೇಗಿರಬೇಡ ಎಂದುಕೊಂಡು ನಾನು ಹಾಗೂ ಪರಿಸರ ಸಚಿವರ ಕಾರ್ಯದರ್ಶಿ `ಅಯ್ಯೋ ಪಾಪ' ಎಂದುಕೊಂಡೆವು. ಆದರೆ ಸಸ್ಯವಿಜ್ಞಾನಿ ಅವಾಚ್ಯ ಹಿಂದಿ ಶಬ್ದಗಳನ್ನು ಬಳಸಿ, `ಅಂಜುಬುರುಕ' ಎಂದು ಲೇವಡಿ ಮಾಡಿದರು.1980 ಹಾಗೂ 1990ರ ದಶಕದ ಗಲಭೆಗಳ ಕ್ರೂರ ಅಧ್ಯಾಯಗಳನ್ನು ಸಂಗ್ರಹರೂಪದಲ್ಲಿ ಅಡಗಿಸಿಟ್ಟುಕೊಂಡ ಕೃತಿ ಎಂ.ಜೆ. ಅಕ್ಬರ್ ಅವರ `ರೈಅಟ್ ಆಫ್ಟರ್ ರೈಅಟ್'. ಅದನ್ನು ಓದಿದ ನಂತರ ನಾನು 2012ರ ಮಾರ್ಚ್‌ನಲ್ಲಿ ಒಳಗೊಳಗೇ ಸಂತೋಷಪಟ್ಟೆ. ಯಾಕೆಂದರೆ, ಆ ತಿಂಗಳಿಗೆ ಸರಿಯಾಗಿ ಹತ್ತು ವರ್ಷ ದೇಶದಲ್ಲಿ ಯಾವುದೇ ದೊಡ್ಡ ಹಿಂದೂ-ಮುಸ್ಲಿಂ ಗಲಭೆ ನಡೆದಿರಲಿಲ್ಲ. 1950ರ ದಶಕದ ನಂತರ ದೇಶ ಕಂಡ ಶಾಂತಿಯುತವಾದ ದಶಕ ಇದೆನ್ನಬಹುದು. ಇದಕ್ಕೆ ನಾನು ಕಂಡುಕೊಂಡ ಮೂರು ಕಾರಣಗಳು- ಸಾಮಾನ್ಯ ಹಿಂದೂಗಳಿಗೆ ಅಯೋಧ್ಯೆಯಲ್ಲಿ ದೊಡ್ಡ ದೇವಸ್ಥಾನ ಕಟ್ಟಬೇಕೆಂಬ ಧರ್ಮೀಯ ಮಹತ್ವಾಕಾಂಕ್ಷೆ ಇಲ್ಲದೇ ಇರುವುದು, ಮಧ್ಯಕಾಲೀನ ಇಸ್ಲಾಂ ಮೂಲ ಬೋಧಕರ ತತ್ತ್ವಗಳ ಕುರಿತು ಮುಸ್ಲಿಂ ಯುವಕರಿಗೆ ಅಷ್ಟೇನೂ ಒಲವಿಲ್ಲದಿರುವುದು ಹಾಗೂ ಎಲ್ಲಾ ಧರ್ಮಗಳ ಯುವಕ-ಯುವತಿಯರು ಶಿಕ್ಷಣ, ಉದ್ಯೋಗದತ್ತ ಗಮನ ಕೇಂದ್ರೀಕರಿಸಿರುವುದು.ನನ್ನ ಆಶಾವಾದ ಹೆಚ್ಚು ದಿನ ಉಳಿಯಲಿಲ್ಲ. ಜುಲೈ 2012ರಲ್ಲಿ ಅಸ್ಸಾಂನಲ್ಲಿ ಹಿಂದೂ-ಮುಸ್ಲಿಮರ ನಡುವೆ ಗಲಭೆಗಳು ನಡೆದವು. ದೆಹಲಿ ಹಾಗೂ ಗುಜರಾತ್‌ನಲ್ಲಿ ಕ್ರಮವಾಗಿ 1984 ಹಾಗೂ 2002ರಲ್ಲಿ ನಡೆದ ಮತೀಯ ಹಿಂಸಾಚಾರಕ್ಕಿಂತ ಅಸ್ಸಾಂನಲ್ಲಿ ನಡೆದ ಹಿಂಸಾಚಾರದ ಪ್ರಮಾಣ ಹೆಚ್ಚು. ರಾಷ್ಟ್ರ ಪರಿಕಲ್ಪನೆಯ ಎಲ್ಲೆಯಲ್ಲಿ ಈಶಾನ್ಯ ರಾಜ್ಯಗಳು ಅಂಚಿನಲ್ಲಿರುವುದರಿಂದ ಈ ವಾಸ್ತವ ಸಾರ್ವಜನಿಕ ಚರ್ಚೆಗೆ ಒಳಗಾಗಲಿಲ್ಲ. ಜೊತೆಗೆ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರ ವಿರುದ್ಧ ಭಾಗಶಃ ಗಲಭೆಗಳು ನಡೆದವು ಎಂಬುದೂ ಚರ್ಚೆ ನಡೆಯದೇ ಇರಲು ಕಾರಣವಿರಬಹುದು.ಇತ್ತೀಚಿನ ದಿನಗಳಲ್ಲಿ ಕೋಮುವಾದದ ಹುಣ್ಣು ದೇಶದ ಮುಖ್ಯಭಾಗಕ್ಕೆ ಸೋಂಕುತ್ತಿದೆ. ಕಳೆದ ಕೆಲವು ತಿಂಗಳಿಂದ ಉತ್ತರ ಪ್ರದೇಶದ ಜನರಲ್ಲಿ ಅದು ತಲ್ಲಣ ಮೂಡಿಸಿತು. ದಶಕಗಳಿಂದ ಶಾಂತಿಯುತವಾಗಿಯೇ ಇದ್ದ ಬಿಹಾರ್ ಹಾಗೂ ರಾಜಸ್ತಾನ ರಾಜ್ಯಗಳು ಕೂಡ ತೀರಾ ಇತ್ತೀಚೆಗೆ ಮತಾಂಧತೆಗೆ ಸಾಕ್ಷಿಯಾದವು. ಜಮ್ಮು ಮತ್ತು ಕಾಶ್ಮೀರದ ಕಿಶ್ತವರ್ ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರ ನಡೆದ ಕೋಮುಗಲಭೆ ಗಂಭೀರ ಸ್ವರೂಪದ್ದು.ಈ ಗಲಭೆಗಳನ್ನೆಲ್ಲಾ ಗಾಳಿಯಲ್ಲಿ ಒಣಹುಲ್ಲುಗಳು ಅಲ್ಲಲ್ಲಿ ಹಾರಿದಂತೆ ಎಂದು ಕೆಲವರು ಹೇಳಬಹುದು. ಆದರೆ 1980, 1990ರ ದಶಕದಲ್ಲಿ ಉತ್ತರ ಭಾರತದಲ್ಲಿ ವಾಸವಿದ್ದ ನನ್ನಂಥವರಿಗೆ ರಕ್ತದ ಕಲೆ ಖಂಡಿತ ಬೇಡ. ಅಲ್ಲಿನ ಹಿಂಸಾಚಾರವನ್ನು ಅನುಭವಿಸಿದ, ಕಂಡ, ಕೇಳಿದ ಯಾರೇ ಆಗಲಿ ಮತ್ತೆ ಅಂಥ ದಿನಗಳನ್ನು ಬಯಸಲಾರರು. ಕೋಮು ಹಿಂಸಾಚಾರ ಅಥವಾ ಪಂಥೀಯತೆಯ ಬಿಸಿ ಅನುಭವಿಸದ ಅಸಂಖ್ಯ ಭಾರತೀಯರು ಕಳೆದ ದಶಕದಲ್ಲಿ ಭಾರತದಲ್ಲಿ ಇದ್ದಾರೆ. ಅವರಲ್ಲಿ ದಕ್ಷಿಣ ಭಾರತದವರು, ಹೊರದೇಶಗಳಲ್ಲಿ ಇದ್ದವರು, ಆಗಿನ ದುರಂತ ಸುದ್ದಿಯ ತಲೆಬರಹಗಳೂ ನೆನಪಿಲ್ಲದ ಯುವಕರು ಸೇರಿದ್ದಾರೆ.ಈ ಅಂಕಣ ಬರಹವನ್ನು ಅಂಥ ಭಾರತೀಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿದ್ದೇನೆ. ಇತ್ತೀಚಿನ ಹಿಂದೂ-ಮುಸ್ಲಿಂ ಗಲಭೆಗಳು ಇನ್ನಷ್ಟು ದೊಡ್ಡ ಮಟ್ಟದ ಕೆಡುಕಿಗೆ ಕಾರಣವಾಗಿಬಿಟ್ಟರೆ ಏನು ಗತಿ ಎಂಬುದು ನನಗಿರುವ ಆತಂಕ. ವಿಶ್ವ ಹಿಂದೂ ಪರಿಷತ್‌ನ ಅಯೋಧ್ಯಾ ಯಾತ್ರೆ ವಿಫಲವಾಯಿತಾದರೂ ಅಮಾಯಕ ಜನರಲ್ಲಿ ಹಿಂಸಾಚಾರದ ಆತಂಕವಂತೂ ದೂರವಾಗಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನೀತಿಪ್ರಜ್ಞೆಯಿಲ್ಲದ ರಾಜಕಾರಣಿಗಳು ಉಭಯ ಧರ್ಮಗಳ ನಡುವೆ ಮತ್ತೆ ಕಿಡಿ ಹೊತ್ತಿಸುವ ಸಾಧ್ಯತೆ ಇದೆ. ಹಿಂದೂಗಳಲ್ಲಿನ ವಾಸ್ತವ ಆತಂಕಕ್ಕೆ ಕಲ್ಪನೆಯನ್ನು ಸಹ ಬೆರೆಸಿ ಬಿಜೆಪಿ ಒಂದು ಕಡೆ ನಿಂತಿದೆ. ಇನ್ನೊಂದೆಡೆ ಮುಸ್ಲಿಮರ ಅಭದ್ರತೆಯ ಕುರಿತು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಮಾತನಾಡುತ್ತಿವೆ.ಹಿಂದೂ-ಮುಸ್ಲಿಂ ಗಲಭೆಗಳಿಂದ 1950ರ ದಶಕದ ಬಹುಪಾಲು ಮುಕ್ತವಾಗಿದ್ದು ಕೆಲವು ಸಜ್ಜನ ರಾಜಕಾರಣಿಗಳಿಂದ. ನೆಹರೂ ಅಷ್ಟೇ ಅಲ್ಲದೆ ಎಸ್.ನಿಜಲಿಂಗಪ್ಪ, ಕೆ.ಕಾಮರಾಜ್, ವೈ.ಬಿ.ಚವಾಣ್, ಸುಚೇತಾ ಕೃಪಲಾನಿಯಂಥ ಕಾಂಗ್ರೆಸ್ ಮುಖಂಡರು ವಿವಿಧ ರಾಜ್ಯಗಳಲ್ಲಿ ರಾಜಕೀಯವಾಗಿ ಸಕ್ರಿಯರಾಗಿದ್ದರು. ಇತರೆ ಪಕ್ಷಗಳಲ್ಲಿ ರಾಮಮನೋಹರ ಲೋಹಿಯಾ, ಇ.ಎಂ.ಎಸ್. ನಂಬೂದರಿಪಾದ್, ಜಯಪ್ರಕಾಶ್ ನಾರಾಯಣ್ ಇದ್ದರು. ಸಾಮಾಜಿಕ ಕಳಕಳಿ ಇದ್ದ ಅವರೆಲ್ಲರಿಂದ ಸಾಮಾಜಿಕ ಸಾಮರಸ್ಯ ಸಾಧ್ಯವಾಗಿತ್ತು.

ನಂತರದ, 1980 ಹಾಗೂ 1990ರ ದಶಕದಲ್ಲಿ ಇತರೆ ರಾಜಕಾರಣಿಗಳ ನಿರ್ಧಾರಗಳು ಬೇರೆಯದೇ ಪರಿಸ್ಥಿತಿಗೆ ದೂಡಿದವು. ಶಾ ಬಾನು ತೀರ್ಪನ್ನು ರಾಜೀವ್ ಗಾಂಧಿ ತಿರಸ್ಕರಿಸಿದ್ದು, ಎಲ್.ಕೆ. ಅಡ್ವಾಣಿ ರಥಯಾತ್ರೆ ನಡೆಸಿದ್ದು, ಮುಸ್ಲಿಮರನ್ನು ಬಲಿಪಶುಗಳನ್ನಾಗಿಸುವುದರಿಂದ ರಾಜಕೀಯ ಪ್ರಗತಿ ಸಾಧ್ಯವೆಂದು ಬಿಜೆಪಿ ನಂಬಿದ್ದು ಇದಕ್ಕೆ ಉದಾಹರಣೆಗಳು.ಮಾರ್ಚ್ 2002ರಿಂದ 2012ರ ವರೆಗೆ ಇದ್ದ ಕೋಮು ಶಾಂತಿಗೆ ರಾಜಕಾರಣಿಗಳ ಕೊಡುಗೆ ಏನೂ ಇಲ್ಲ; ಅದು ನಾಗರಿಕತೆಯ ಕೊಡುಗೆ. ಹಿಂದೂ-ಮುಸ್ಲಿಂ ಸಮುದಾಯಗಳಿಗೆ ಸೇರಿದ ಜನಸಾಮಾನ್ಯರು ಪಂಥೀಯ ಭಾವನೆ ಬದಿಗೊತ್ತಿದರು. ಸಾಮಾಜಿಕ ಸೇವಾ ಸಮೂಹಗಳು ವ್ಯಕ್ತಿಗಳು, ಸಮುದಾಯಗಳ ನಡುವೆ ಬಾಂಧವ್ಯ ಬೆಸೆದವು. ಗುಜರಾತ್ ಗಲಭೆಗಳನ್ನು ಮಾಧ್ಯಮಗಳು ವರದಿ ಮಾಡಿದ ರೀತಿಯಿಂದಾಗಿ ಪುಢಾರಿಗಳು ಬೇಳೆ ಬೇಯಿಸಿಕೊಳ್ಳಲಾಗಲಿಲ್ಲ.ಹಾಗಿದ್ದೂ ಭಾರತದಲ್ಲಿ ಬಹುತ್ವ ಸಿದ್ಧಾಂತಕ್ಕೆ ಜಯ ಸುಲಭವಲ್ಲ. 1950ರ ದಶಕದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ರಾಜಕಾರಣಿಗಳಿಂದ ತಾತ್ಕಾಲಿಕವಾಗಿ ಅದು ಸಾಧ್ಯವಾಯಿತು. ಈಗ ಬಹುತ್ವ ಸಿದ್ಧಾಂತದ ಉಳಿವು `ಆಮ್ ಆದ್ಮಿ' ಅರ್ಥಾತ್ ಜನಸಾಮಾನ್ಯರ ಕೈಯಲ್ಲಿದೆ. ಮುಂದಿನ ಹನ್ನೆರಡು ತಿಂಗಳಲ್ಲಿ ಎಲ್ಲಾ ರಾಜಕಾರಣಿಗಳು ಮತಯಾಚನೆಗೆ ಮುಂದಾಗುತ್ತಾರೆ. ಆಗ ಅವರಿಗೆ ಯುವಕರು ತಮ್ಮ ಸಿದ್ಧಾಂತಗಳನ್ನು ನೆನಪಿಸಿ, ನಮ್ಮದು ಈಗಲೂ ಸೂಕ್ಷ್ಮವಾದ ಗಣತಂತ್ರ ವ್ಯವಸ್ಥೆ ಎಂಬುದನ್ನು ಮನದಟ್ಟು ಮಾಡಿಸಬೇಕಷ್ಟೇ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry