ರಾಜಕೀಯದ ಕೆಸರಲ್ಲಿ ರಾಷ್ಟ್ರಪತಿ ಸ್ಥಾನ

7

ರಾಜಕೀಯದ ಕೆಸರಲ್ಲಿ ರಾಷ್ಟ್ರಪತಿ ಸ್ಥಾನ

ದಿನೇಶ್ ಅಮೀನ್ ಮಟ್ಟು
Published:
Updated:

ರಾ ಷ್ಟ್ರಪತಿ ಸ್ಥಾನಕ್ಕೆ ಕಳೆದೆರಡು ಅವಧಿಗಳಲ್ಲಿ (2002 ಮತ್ತು 2007) ನಡೆದ ಚುನಾವಣೆಯನ್ನು ಸಮೀಪದಿಂದ ಗಮನಿಸಿದವರಲ್ಲಿ ಯಾರಿಗೂ ಈಗ ಚರ್ಚೆಯ ಅಂಗಳದಲ್ಲಿ ಸುಳಿದಾಡುತ್ತಿರುವ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಭರವಸೆ ಹುಟ್ಟಲಾರದು.

 

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇಲ್ಲವೇ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು  ರಾಷ್ಟ್ರಪತಿ ಭವನ ಪ್ರವೇಶಿಸಬಹುದು ಎನ್ನುವ ವಾತಾವರಣವೇ ಈಗ ಇದೆ. ಇವರಲ್ಲೊಬ್ಬರು ಅದೃಷ್ಟವಂತರು ಆಗಲೂಬಹುದು, ಇಲ್ಲವೇ ಕಳೆದೆರಡು ಅವಧಿಗಳಲ್ಲಿ ನಡೆದಂತೆ ಕೊನೆ ಗಳಿಗೆಯಲ್ಲಿ ಯಾವುದಾದರೂ `ಕಪ್ಪು ಕುದುರೆ~ ಸ್ಪರ್ಧಾಕಣ ಪ್ರವೇಶಿಸಲೂಬಹುದು.2002ರ ಜನವರಿ ತಿಂಗಳಲ್ಲಿ ಸಿಪಿಎಂ ನಾಯಕ ಸೋಮನಾಥ ಚಟರ್ಜಿ ಅವರು ವಿರೋಧ ಪಕ್ಷಗಳ ನಾಯಕರನ್ನು ಒಬ್ಬರಾದ ಮೇಲೆ ಒಬ್ಬರಂತೆ ಮನೆಗೆ ಆಹ್ವಾನಿಸತೊಡಗಿದ್ದರು. ಸ್ವಭಾವತಃ ತಿಂಡಿಪೋತರಾದ ಬಂಗಾಳಿಗಳಿಗಿಂತ ಅಲ್ಲಿನ ರಾಜಕಾರಣಿಗಳು ಬೇರೆ ಅಲ್ಲ. ಅವರಿಂದ ಊಟ-ತಿಂಡಿಗೆ ಆಹ್ವಾನ ಬಂದರೆ ಸಾಮಾನ್ಯವಾಗಿ ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ.

 

ಸೋಮನಾಥ ಬಾಬು ಮನೆಯಲ್ಲಿ ಊಟ ಎಂದರೆ `ಬಂಗಾಳಿಗಳ ಬಾಯಿಯಲ್ಲಿ ನೀರೂರಿಸುವ~ `ಹಿಲ್ಸಾ~ ಮೀನಿನ ಪಲ್ಯ ಇದ್ದೇ ಇರುತ್ತಿತ್ತು. ಆದರೆ ಆ ವರ್ಷದ ಜನವರಿ ತಿಂಗಳ ಔತಣಕೂಟಗಳಲ್ಲಿ `ಹಿಲ್ಸಾ~ ಮೀನಿನ ಜತೆ ಅತಿಥಿಗಳು ನಡೆಸುತ್ತಿದ್ದ ಮಾತಿಗೆ ಗ್ರಾಸ ಒದಗಿಸಿದ್ದು ರಾಷ್ಟ್ರಪತಿ ಚುನಾವಣೆ. ಸೋಮನಾಥ ಚಟರ್ಜಿ ಅವರ ಈ `ಔತಣಕೂಟ ರಾಜಕೀಯ~ದ ಹಿಂದೆ ಆಗಿನ್ನೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡುವ ಉದ್ದೇಶ ಇತ್ತು.1996ರಲ್ಲಿ ಜ್ಯೋತಿಬಸು ಪ್ರಧಾನಿಯಾಗುವ ಅವಕಾಶವನ್ನು ತಪ್ಪಿಸಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಸಿಪಿಎಂ ನಾಯಕರು ಕೂಡಾ ಸಿದ್ಧವಾಗಿದ್ದರು.ಇದೇ ವೇಳೆ ಕರಣ್‌ಸಿಂಗ್ ಎಂಬ ಹಳೆಯ ಕಾಂಗ್ರೆಸ್ ನಾಯಕ `ಶಿವಭಕ್ತ~ ಎಂಬ ಸುದ್ದಿ  ಹರಡತೊಡಗಿತ್ತು. ಇದು ಬಿಜೆಪಿ ಬೆಂಬಲ ಪಡೆಯುವ ಪ್ರಯತ್ನ ಎಂಬ ವ್ಯಾಖ್ಯಾನ ಕೇಳಿ ಬಂದಿತ್ತು.ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ಸೇರಿದ ನಜ್ಮಾ ಹೆಪ್ತುಲ್ಲಾ ಇದ್ದಕ್ಕಿದ್ದ ಹಾಗೆ ಬಿಜೆಪಿ ಮೇಲೆ ದಾಳಿ ನಡೆಸತೊಡಗಿದ್ದರು. ಈ ಸಂದರ್ಭದಲ್ಲಿ  ಕೇಳಿಬಂದ ಮೊದಲ ಅಚ್ಚರಿಯ ಹೆಸರು ಪಿ.ಸಿ.ಅಲೆಗ್ಸಾಂಡರ್ ಅವರದ್ದು.ಐಎಎಸ್ ಅಧಿಕಾರಿಯಾಗಿದ್ದರೂ ಮೂವರು ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಅವರಜತೆ ಕೆಲಸ ಮಾಡಿದ್ದ ಅಲೆಗ್ಸಾಂಡರ್ `ಕಾಂಗ್ರೆಸಿಗರೇ~ ಆಗಿ ಹೋಗಿದ್ದರು. ವಿಪರ್ಯಾಸವೆಂದರೆ ಅವರ ಹೆಸರನ್ನು ಮೊದಲು ಸೂಚಿಸಿದ್ದು ಶಿವಸೇನೆ ನಾಯಕ ಬಾಳಾ ಠಾಕ್ರೆ, ಬೆಂಬಲಿಸಿದ್ದು ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ವಿರೋಧಿಸತೊಡಗಿದ್ದು ಕಾಂಗ್ರೆಸ್. ಅಲೆಗ್ಸಾಂಡರ್ ಹೆಸರಿನ ಪ್ರಸ್ತಾವದ ಹಿಂದೆ ದುರುದ್ದೇಶ ಇದ್ದದ್ದು ನಿಜ.ಒಬ್ಬ ಕ್ರಿಶ್ಚಿಯನ್ ರಾಷ್ಟ್ರಪತಿಯಾಗಿ ಬಿಟ್ಟರೆ, ಅದೇ ಧರ್ಮಕ್ಕೆ ಸೇರಿರುವ ಸೋನಿಯಾಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು ಎನ್ನುವ ಕಾರಣಕ್ಕಾಗಿಯೇ ಅಲೆಗ್ಸಾಂಡರ್ ಬಗ್ಗೆ ಠಾಕ್ರೆ, ಪವಾರ್ ಮತ್ತು ಪ್ರಮೋದ್ ಮಹಾಜನ್ ಅವರಂಥವರಿಗೆ ಪ್ರೀತಿ ಉಕ್ಕಿ ಹರಿದಿತ್ತು.ಇದರ ಪರಿಣಾಮವಾಗಿ ತನ್ನ ವೃತ್ತಿ ಜೀವನದಲ್ಲಿ ಕೇಳದ ಆರೋಪಗಳನ್ನೆಲ್ಲ ಅಲೆಗ್ಸಾಂಡರ್ ಕೇಳುವಂತಾಯಿತು. ರಾಜೀವ್‌ಗಾಂಧಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ  ಪ್ರಧಾನಿ ಕಾರ್ಯಾಲಯದ ರಹಸ್ಯ ದಾಖಲೆ ಪತ್ರಗಳನ್ನು ಕುಖ್ಯಾತ ಬೇಹುಗಾರ ಕೂಮರ್ ನಾರಾಯಣ್‌ಅವರಿಗೆ ನೀಡಿದ್ದರು ಎನ್ನುವುದು ಅಲೆಗ್ಸಾಂಡರ್ ವಿರುದ್ದ ಕೇಳಿಬಂದ ಮುಖ್ಯ ಆರೋಪ. ಅದರ ನಂತರ ಅವರು ಅನಿವಾರ್ಯವಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.ಇವೆಲ್ಲವೂ ನಡೆಯುತ್ತಿರುವಾಗಲೇ ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನೇ ಎರಡನೆ ಅವಧಿಗೆ ಮುಂದುವರಿಸಬೇಕೆಂಬ ಪ್ರಯತ್ನ  ಪ್ರಾರಂಭವಾಗಿತ್ತು. ಸುಮಾರು 150 ಸದಸ್ಯ ಬಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಸತ್ ಸದಸ್ಯರ ವೇದಿಕೆ ಸಭೆ ಸೇರಿ ಮುಂದಿನ ರಾಷ್ಟ್ರಪತಿ ಹುದ್ದೆಗೆ ದಲಿತರನ್ನೇ ನೇಮಿಸಬೇಕೆಂಬ ಗೊತ್ತುವಳಿ ಅಂಗೀಕರಿಸಿತ್ತು.ಕೆ.ಆರ್.ನಾರಾಯಣನ್ ಅವರನ್ನು ಉಪರಾಷ್ಟ್ರಪತಿ ಮಾಡಲು ಆ ಕಾಲದಲ್ಲಿ ವೇದಿಕೆಯ ಅಧ್ಯಕ್ಷರಾಗಿದ್ದ ಕರ್ನಾಟಕದ ರಾಜ್ಯಸಭಾ ಸದಸ್ಯ ಎಚ್.ಹನುಮಂತಪ್ಪ ನೇತೃತ್ವದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರಿಂದ ಈ ಪ್ರಯತ್ನವನ್ನು ಯಾರೂ ತಳ್ಳಿಹಾಕುವಂತೆ ಇರಲಿಲ್ಲ. ನಾರಾಯಣನ್ ಅವರು ಮುಂದುವರಿಯಲು ಬಯಸಿದರೆ ದಲಿತ ರಾಷ್ಟ್ರಪತಿಗೆ ಇನ್ನೊಂದು ಅವಕಾಶವನ್ನು ನಿರಾಕರಿಸುವ ಸ್ಥಿತಿಯಲ್ಲಿ ಬಿಜೆಪಿಯೂ ಇರಲಿಲ್ಲ.ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣನ್ ಖುದ್ದಾಗಿ ಸ್ಪರ್ಧೆಯಿಂದ ಹಿಂದೆ ಸರಿದುಬಿಟ್ಟರು. ಆಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೃಷ್ಣಕಾಂತ್ ಹೆಸರು ಮುಂದೆ ತಂದಿದ್ದರು. ಆವರ ಆಯ್ಕೆಗೆ ಅವರದ್ದೇ ಪಕ್ಷದ ನಾಯಕರು ಒಲವು ತೋರಲಿಲ್ಲ.ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಬಾಗಿಲು ಮುರಿದು ಒಳಗೆ ನುಗ್ಗಿದ   ಹಾಗೆ   ಕಾಣಿಸಿಕೊಂಡ  `ಕಪ್ಪು ಕುದುರೆ~-ಎ.ಪಿ.ಜೆ. ಅಬ್ದುಲ್ ಕಲಾಮ್. ಇದು ಯಾರ ಬತ್ತಳಿಕೆಯಿಂದ ಹೊರಟ `ಕ್ಷಿಪಣಿ~ ಎಂಬ ಬಗ್ಗೆ ಆ ದಿನಗಳಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ನಾಲ್ಕು ತಿಂಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರು ಲೋಕಾಭಿರಾಮವಾಗಿ ಮಾತನಾಡುತ್ತಾ ಕಲಾಮ್ ಹೆಸರು ಪ್ರಸ್ತಾಪಿಸಿದ್ದರು. ನಂತರದ ದಿನಗಳಲ್ಲಿ ಆ ಹೆಸರನ್ನು ಎಲ್ಲರೂ ಮರೆತೇ ಬಿಟ್ಟಿದ್ದರು.ಕೊನೆಗಳಿಗೆಯಲ್ಲಿ ಅದನ್ನು ಕೈಗೆತ್ತಿಕೊಂಡದ್ದು ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಮತ್ತು  ಚಂದ್ರಬಾಬು ನಾಯ್ಡು. ಕಲಾಮ್ ಅವರನ್ನು ಮೊದಲು ಸಂಪರ್ಕಿಸಿದ್ದು ಕೂಡಾ ಈ ಇಬ್ಬರು ನಾಯಕರು. ಅಲೆಗ್ಸಾಂಡರ್ ಹೆಸರಿಗೆ ಪಟ್ಟು ಹಿಡಿದಿದ್ದ ಬಾಳ ಠಾಕ್ರೆಯವರನ್ನು ಒಲಿಸಿಕೊಳ್ಳಲು ಪ್ರಮೋದ್ ಮಹಾಜನ್ ಅವರನ್ನು ವಾಜಪೇಯಿ ತಕ್ಷಣ ಮುಂಬೈಗೆ ಕಳುಹಿಸಿದ್ದರು. ಮುಲಾಯಂಸಿಂಗ್ ಆಗಲೇ ಎನ್‌ಡಿಎ ಅಭ್ಯರ್ಥಿಗೆ ಕೈ ಎತ್ತಿದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಇಕ್ಕಟ್ಟಿಗೆ ಸಿಲುಕಿದ್ದವು. ಕಲಾಮ್ ಅವರನ್ನು ಬೆಂಬಲಿಸದೆ ಬೇರೆ ದಾರಿ ಅವರಿಗೂ ಇರಲಿಲ್ಲ. ಸುಮಾರು ಆರು ತಿಂಗಳ ಕಾಲ ನಡೆದ ಚರ್ಚೆಯಲ್ಲಿ ಕನಿಷ್ಠ 20 ಸಂಭವನೀಯ ಅಭ್ಯರ್ಥಿಗಳ ಹೆಸರು ಗಾಳಿಯಲ್ಲಿ ಹಾರಾಡಿದ್ದವು. ರಾಷ್ಟ್ರಪತಿ ಸ್ಥಾನ ಕೊನೆಗೂ ಒಲಿದಿದ್ದು ಅಬ್ದುಲ್ ಕಲಾಮ್ ಅವರಿಗೆ.2007ರ ಚುನಾವಣೆಯಲ್ಲಿಯೂ ಹೀಗೆಯೇ ನಡೆಯಿತು. ಅಬ್ದುಲ್ ಕಲಾಮ್ ಅವರನ್ನು ಎರಡನೆ ಅವಧಿಗೆ ಮುಂದುವರಿಸಲು ಬಿಜೆಪಿ ಪ್ರಯತ್ನ ನಡೆಸಿತ್ತು. ಎನ್‌ಡಿಎ ಮಿತ್ರಪಕ್ಷಗಳಲ್ಲದೆ ಸಮಾಜವಾದಿ ಪಕ್ಷ ಕೂಡಾ ಇದನ್ನು ಬೆಂಬಲಿಸಿತ್ತು.ಆ ಕಾಲದಲ್ಲಿ ಕಾಂಗ್ರೆಸ್ ತೇಲಿಬಿಟ್ಟಿದ್ದ ಮೂರು ಹೆಸರುಗಳೆಂದರೆ ಕರಣ್‌ಸಿಂಗ್, ಸುಶೀಲ್‌ಕುಮಾರ್ ಶಿಂಧೆ ಮತ್ತು ಪ್ರಣವ್ ಮುಖರ್ಜಿ ಅವರದ್ದು.  `ಮೆದು ಹಿಂದುತ್ವ~ದ ಧೋರಣೆಯ ಕರಣ್‌ಸಿಂಗ್ ಅವರನ್ನು ಬಿಜೆಪಿ, ಬಂಗಾಳದವರಾದ ಪ್ರಣಬ್ ಮುಖರ್ಜಿ ಅವರನ್ನು ಎಡಪಕ್ಷಗಳು, ದಲಿತರಾದ ಸುಶೀಲ್‌ಕುಮಾರ್ ಶಿಂಧೆ ಅವರನ್ನು ಮಾಯಾವತಿ ಬೆಂಬಲಿಸಬಹುದೆಂಬ ರಾಜಕೀಯ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿತ್ತು. ಉತ್ತರಪ್ರದೇಶದ ನಂತರ ಮಹಾರಾಷ್ಟ್ರದಲ್ಲಿ ಬಿಎಸ್‌ಪಿಯನ್ನು ಕಟ್ಟುವ ಉದ್ದೇಶ ಹೊಂದಿದ್ದ ಮಾಯಾವತಿ ಪ್ರಾರಂಭದಲ್ಲಿ ಶಿಂಧೆ ಬಗ್ಗೆ ಒಲವು ತೋರಿದ್ದರು.

 

ಅಷ್ಟರಲ್ಲಿ ಉಪರಾಷ್ಟ್ರಪತಿ ಭೈರೋನ್‌ಸಿಂಗ್ ಶೆಖಾವತ್ ಅವರನ್ನು ಎನ್‌ಡಿಎ ಕಣಕ್ಕಿಳಿಸಿತ್ತು. ಅಲ್ಲಿಯೂ ಕೆಲಸ ಮಾಡಿದ್ದು ಜಾತಿ. ಠಾಕೂರ್‌ಗಳೆಲ್ಲ ಪಕ್ಷಭೇಧ ಇಲ್ಲದೆ ಒಟ್ಟಾಗತೊಡಗಿದ್ದರು. ಆಗಿನ್ನೂ ಅಮರ್‌ಸಿಂಗ್ ಪ್ರಭಾವಲಯದಲ್ಲಿದ್ದ ಮುಲಾಯಂಸಿಂಗ್ ಕೂಡಾ ಆ ಕಡೆ ವಾಲತೊಡಗಿದ್ದರು.ಆ ಹಂತದಲ್ಲಿ ತೂರಿಬಂದ ಹೆಸರು ಪ್ರತಿಭಾ ಪಾಟೀಲ್ ಅವರದ್ದು. ಇಪ್ಪತ್ತೇಳರ ಹರೆಯದಲ್ಲಿಯೇ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರತಿಭಾ ಪಾಟೀಲ್ ಅವರನ್ನು  ಜನ ಆಗಲೇ ಮರೆತಿದ್ದರು. ರಾಜಸ್ತಾನದ ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸಿದ ನಂತರ ಅವರು ರಾಜಕೀಯ ನಿವೃತ್ತಿ ದಿನಗಳನ್ನು ಕಳೆಯುತ್ತಿದ್ದರು.

 

ಪ್ರತಿಭಾ ಅವರ ಗಂಡ ಶೆಖಾವತ್ ಪರಿವಾರಕ್ಕೆ ಸೇರಿರುವುದು ಎನ್‌ಡಿಎ ಅಭ್ಯರ್ಥಿ ಭೈರೋನ್‌ಸಿಂಗ್ ಶೆಖಾವತ್ ಅವರನ್ನು ಎದುರಿಸಲು ಹೆಚ್ಚುವರಿ ಅರ್ಹತೆಯಾಗಿ ಹೋಯಿತು. ಆದರೆ ಅವರ ಹಾದಿ ಸುಗಮವಾಗಿರಲಿಲ್ಲ. ಹಿಂದೆ ಪಿ.ಸಿ.ಅಲೆಗ್ಸಾಂಡರ್ ಅವರನ್ನು ಹಿಂದಕ್ಕೆ ಸರಿಸಲು ಕೆಲವು ಕಾಂಗ್ರೆಸ್ ನಾಯಕರು ಹಿಡಿದ ಅಡ್ಡದಾರಿಯನ್ನೇ ಈ ಬಾರಿ ವಿರೋಧಿ ನಾಯಕರು ಆರಿಸಿಕೊಂಡರು. ಈ ಹಿನ್ನೆಲೆಯಲ್ಲಿಯೇ ಪ್ರತಿಭಾ ಪಾಟೀಲ್ ಅವರ ಪೂರ್ವಾಶ್ರಮದ ವಿವರಗಳ ಹುಡುಕಾಟ ಪ್ರಾರಂಭವಾಗಿದ್ದು. ಮಹಿಳಾ ಸಬಲೀಕರಣದ ಉದ್ದೇಶದಿಂದಲೇ 1973ರಲ್ಲಿ ಪ್ರತಿಭಾ ಪಾಟೀಲ್ ಸ್ಥಾಪಿಸಿದ್ದ `ಪ್ರತಿಭಾ ಮಹಿಳಾ ಸಹಕಾರಿ ಬ್ಯಾಂಕ್~ ಅನ್ನು ಹಣಕಾಸು ಅವ್ಯವಹಾರದ ಆರೋಪಕ್ಕಾಗಿ ರಿಸರ್ವ್ ಬ್ಯಾಂಕ್ ಮುಚ್ಚಿಸಿತ್ತು.

 

ಸಾಲಮನ್ನಾ ಮಾಡಿಸಿಕೊಂಡ ಫಲಾನುಭವಿಗಳಲ್ಲಿ ಹೆಚ್ಚಿನವರು ಪ್ರತಿಭಾ ಪಾಟೀಲ್ ಸಂಬಂಧಿಗಳು ಎನ್ನುವುದು ಅವರ ವಿರುದ್ದದ ಪ್ರಮುಖ ಆರೋಪವಾಗಿತ್ತು. ಅವರು ಸದಸ್ಯೆಯಾಗಿರುವ ಟ್ರಸ್ಟ್‌ನಿಂದ ತಮ್ಮ ಆಡಳಿತದ ಶಿಕ್ಷಣ ಸಂಸ್ಥೆಗಳಿಗೆ ಹಣ ನೀಡಿದ್ದು, ಸಂಸತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ತನ್ನ ಗಂಡನೇ ಪದಾಧಿಕಾರಿಯಾಗಿರುವ ಸಂಸ್ಥೆಗೆ ನೀಡಿದ್ದು...ಹೀಗೆ ಹಲವಾರು ಆರೋಪಗಳು ಪುಂಖಾನುಪುಂಖವಾಗಿ ಕೇಳಿಬರತೊಡಗಿದ್ದವು. ತನ್ನ ಅಭ್ಯರ್ಥಿಯ ಮೇಲೆ ಆರೋಪಗಳು ಕೇಳಿಬಂದ ಕೂಡಲೇ ಯುಪಿಎ ನಾಯಕರು ಎನ್‌ಡಿಎ ಅಭ್ಯರ್ಥಿ ಭೈರೋನ್‌ಸಿಂಗ್ ಶೆಖಾವತ್ ಅವರ ಜಾತಕ ಜಾಲಾಡಿಸತೊಡಗಿದ್ದರು. `ಶೆಖಾವತ್ ಅವರು ಪೊಲೀಸ್ ಇಲಾಖೆಯಲ್ಲಿದ್ದಾಗ ಉಪ್ಪು ಸಾಗಾಣಿಕೆದಾರರಿಂದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಮಾನತ್‌ಗೊಂಡಿದ್ದರು.

 

ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಭೂಕಬಳಿಕೆಯ ಆರೋಪ ಹೊಂದಿದ್ದ ಅಳಿಯನನ್ನು ರಕ್ಷಿಸಿದ್ದರು...~ ಎಂಬಿತ್ಯಾದಿ ಆರೋಪಗಳು ಅವರ ವಿರುದ್ಧವೂ ಇದ್ದವು. ಅಲ್ಲಿಗೆ ರಾಷ್ಟ್ರಪತಿ ಸ್ಥಾನದ ಇಬ್ಬರು ಅಭ್ಯರ್ಥಿಗಳು ಕಳಂಕಿತರು ಎಂದಾಗಿ ಹೋಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಆರೋಪ-ಪ್ರತ್ಯಾರೋಪಗಳು ಹೊಸತೇನಲ್ಲ.ಆದರೆ ಹಿಂದೆ ಅದು ಅಭ್ಯರ್ಥಿಗಳ ಅರ್ಹತೆ, ರಾಜಕೀಯ ನಿಲುವು ಇತ್ಯಾದಿ ಬಗೆಗಿನ ಟೀಕೆ-ಟಿಪ್ಪಣಿಗಷ್ಟೇ ಸೀಮಿತವಾಗಿತ್ತು. ಅದು ಸಭ್ಯತೆಯ ಸೀಮಾರೇಖೆ ದಾಟಿ ವೈಯಕ್ತಿಕ ಚಾರಿತ್ರ್ಯಹರಣದ ಮಟ್ಟಕ್ಕೆ ಇಳಿದದ್ದು ಕಳೆದೆರಡು ರಾಷ್ಟ್ರಪತಿಗಳ ಚುನಾವಣೆಯ ಕಾಲದಲ್ಲಿ.ಅದನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು  ಸುಷ್ಮಾ ಸ್ವರಾಜ್  ತನ್ನ `ಒಡಕು ಬಾಯಿ~ ಮೂಲಕ ಮಾಡಿದ್ದಾರೆ. ಸೋನಿಯಾಗಾಂಧಿ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುತ್ತೇನೆ ಎಂದು ಎಂಟು ವರ್ಷಗಳ ಹಿಂದೆ ಅವರು ಪ್ರತಿಜ್ಞೆ ಮಾಡಿದ್ದರು. ಸೋನಿಯಾ ಪ್ರಧಾನಿಯಾಗಲು ಹೋಗದೆ ಸುಷ್ಮಾ ಅವರ ಕೂದಲು ಉಳಿಸಿಕೊಟ್ಟರು.ಈಗ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವ ಘನತೆಯ ವ್ಯಕ್ತಿತ್ವ ಇಲ್ಲ ಎಂಬ ಬೀಸು ಹೇಳಿಕೆಯನ್ನು ನೀಡಿ ತಮ್ಮ ಪಕ್ಷದವರನ್ನೇ ಮುಜುಗರಕ್ಕೆ ಸಿಲುಕಿಸಿದ್ದಾರೆ. ಸಂವಿಧಾನದ ಪ್ರಕಾರ ರಾಷ್ಟ್ರಪತಿ ಅವರದ್ದು ಅತ್ಯುನ್ನತ ಗೌರವ ಮತ್ತು ಘನತೆಯ ಸ್ಥಾನವಾಗಿದ್ದರೂ ನಮ್ಮ ರಾಜಕೀಯ ವ್ಯವಸ್ಥೆ ಅದನ್ನು `ರಬ್ಬರ್‌ಸ್ಟಾಂಪ್~ ಮಟ್ಟಕ್ಕೆ ಇಳಿಸಿಬಿಟ್ಟಿದೆ.ಇಂತಹ ಸ್ಥಿತಿಯಲ್ಲಿ ಆ ಸ್ಥಾನಕ್ಕೆ ಆಯ್ಕೆಯಾಗುವವರ ವ್ಯಕ್ತಿತ್ವವಷ್ಟೇ ಘನತೆ ಮತ್ತು ಗೌರವವನ್ನು ತಂದುಕೊಡಬಲ್ಲದು. ಈಗಿನ ಕೆಸರೆರಚಾಟವನ್ನು ನೋಡಿದರೆ ಅದೂ ಸಾಧ್ಯ ಇಲ್ಲ ಎಂದು ಅನಿಸುತ್ತಿದೆ.

(ನಿಮ್ಮ ಅನಿಸಿಕೆ ತಿಳಿಸಿ;editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry