ರಾಜಕೀಯ ಬದಿಗಿಡಿ, ಅಭಿವೃದ್ಧಿಗೆ ಒತ್ತು ಕೊಡಿ

ಶನಿವಾರ, ಜೂಲೈ 20, 2019
22 °C

ರಾಜಕೀಯ ಬದಿಗಿಡಿ, ಅಭಿವೃದ್ಧಿಗೆ ಒತ್ತು ಕೊಡಿ

ಡಿ. ಮರಳೀಧರ
Published:
Updated:

ರಾಜ್ಯದ ರಾಜಕೀಯ ರಂಗದಲ್ಲಿ ಹಲವು ತಿಂಗಳುಗಳಿಂದ ಕಂಡು ಬರುತ್ತಿರುವ ರಾಜಕೀಯ ವಿದ್ಯಮಾನಗಳು ಜನತೆಯ ಪಾಲಿಗಂತೂ ನಿಜಕ್ಕೂ ದುರದೃಷ್ಟಕರವಾಗಿವೆ. ಆಡಳಿತಾರೂಢ ಬಿಜೆಪಿ  ಒಳಜಗಳವು ಸರ್ಕಾರದ ವರ್ಚಸ್ಸಿಗೆ ತೀವ್ರ ಧಕ್ಕೆ ತಂದಿರುವುದಲ್ಲದೇ, ಬಂಡವಾಳ ಹೂಡಿಕೆದಾರರ ಉತ್ಸಾಹವನ್ನೂ ಉಡುಗಿಸಿದೆ. ಸರ್ಕಾರದ ನಿತ್ಯದ ಕೆಲಸ ಕಾರ್ಯಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ.ತಾವು ಎಷ್ಟು ದಿನ ಸಚಿವರಾಗಿ ಮುಂದುವರೆಯುತ್ತೇವೆ ಮತ್ತು ತಮ್ಮ ಬಳಿ ಇರುವ ಖಾತೆ ಇನ್ನೆಷ್ಟು ದಿನ ಉಳಿಯಲಿದೆ ಎಂಬುದು ರಾಜ್ಯ ಸಚಿವ ಸಂಪುಟದಲ್ಲಿನ ಸಚಿವರಿಗೇ ಗೊತ್ತಿರದ ಪರಿಸ್ಥಿತಿ ಸದ್ಯಕ್ಕಿದೆ. ಈ  ರಾಜಕೀಯ ಅನಿಶ್ಚಿತತೆಯು ಅಧಿಕಾರಶಾಹಿಯ ಕಾರ್ಯ ನಿರ್ವಹಣೆಯ ಮೇಲೆ ಕೂಡ ಸಾಕಷ್ಟು ಪರಿಣಾಮ ಬೀರಿದೆ. ಹನ್ನೊಂದು ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ     ಸದಾನಂದಗೌಡ ಅವರು, 21 ಖಾತೆಗಳನ್ನು ನಿರ್ವಹಿಸಬೇಕಾಗಿ ಬಂದಿತ್ತು ಎನ್ನುವುದನ್ನು ತಿಳಿದಾಗ ಅವರ ಬಗ್ಗೆ ಕನಿಕರ ಮೂಡುತ್ತದೆ. ಸದಾನಂದ ಗೌಡರು ತಮ್ಮ ಸಚಿವ ಸಂಪುಟದಲ್ಲಿನ ಸಚಿವರ ಒಟ್ಟು ಸಂಖ್ಯೆಗಿಂತ ಹೆಚ್ಚು ಖಾತೆಗಳನ್ನು ನಿಭಾಯಿಸುವಂತಾಗಿತ್ತು!ಇಂತಹ ಪರಿಸ್ಥಿತಿ ಉದ್ಭವಗೊಳ್ಳಲು ಅಧಿಕಾರಾರೂಢ ಪಕ್ಷದಲ್ಲಿನ ಭಿನ್ನಮತ ಚಟುವಟಿಕೆಗಳೇ ಕಾರಣ ಎನ್ನುವುದೂ ಇಲ್ಲಿ ಉಲ್ಲೇಖನೀಯ. ಇದರಿಂದ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಂತಾಗಿದೆ. ರಾಜ್ಯದ ಜನತೆ, ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದರೆ, ಸರ್ಕಾರದ ನೀತಿ - ನಿರ್ಧಾರಗಳು ನೆನೆಗುದಿಗೆ ಬಿದ್ದಿವೆ. ರಾಜ್ಯದ ವರ್ಚಸ್ಸಿಗೂ ತೀವ್ರ ಧಕ್ಕೆ ಒದಗಿದೆ.ಜಗದೀಶ್ ಶೆಟ್ಟರ್ ಅವರು, ಸಾಕಷ್ಟು ಸದ್ದು ಗದ್ದಲದ ಮಧ್ಯೆ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕರಾಳ ಘಟನೆಗಳ ಭೂತಕಾಲ  ಮರೆಯಿಸಿ, ಉಳಿದ ಒಂದು ವರ್ಷದ ಅವಧಿಯಲ್ಲಿ ದಕ್ಷ, ಸ್ವಚ್ಛ, ಪ್ರಾಮಾಣಿಕ ಆಡಳಿತ ನೀಡುವ ಮೂಲಕ ರಾಜ್ಯದ ಮತ್ತು ಪಕ್ಷದ ವರ್ಚಸ್ಸನ್ನು ಶೆಟ್ಟರ್ ಅವರು ಹೆಚ್ಚಿಸಬಹುದಾಗಿದೆ.ನಾಲ್ಕು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡ ರಾಜ್ಯದ ಜನತೆಗೆ ಆಗಿರುವಂತೆ, ನನಗೂ ಕೂಡ ಈ ಎಲ್ಲ ಬೆಳವಣಿಗೆಗಳಿಂದ ತೀವ್ರ ಆಶಾಭಂಗವಾಗಿದೆ.ಹೊಸ ಮುಖ್ಯಮಂತ್ರಿಯಿಂದ ರಾಜ್ಯದ ಜನತೆಗೆ ಕಿಂಚಿತ್ತಾದರೂ ಒಳ್ಳೆಯದಾಗಲಿ ಎಂದು ನಾನೂ ಶುಭ ಕೋರುವೆ. ಉಳಿದಿರುವ ಕೆಲವೇ ಕೆಲ ತಿಂಗಳುಗಳಲ್ಲಿ ಶೆಟ್ಟರ್ ಅವರು ರಾಜ್ಯಕ್ಕೆ ಒಳಿತು ಮಾಡಲು ಸಾಕಷ್ಟು ಶ್ರಮಿಸುವಂತಾಗಲಿ ಎಂದೂ ಹಾರೈಸುವೆ.ಕೆಲ ದಿನಗಳ ಮಟ್ಟಿಗಾದರೂ ರಾಜಕೀಯ ಬದಿಗಿಟ್ಟು, ಉತ್ತಮ ಆಡಳಿತ ನೀಡಲು ಶ್ರಮಿಸಲು ಶೆಟ್ಟರ್ ಅವರಿಗೆ ಅವಕಾಶ ಮಾಡಿಕೊಡಿ ಎಂದೂ  ನಾನು ಈ ಅಂಕಣದ ಮೂಲಕ ಬಿಜೆಪಿಯ ಮುಖಂಡರಿಗೆ ಮನವಿ ಮಾಡಿಕೊಳ್ಳುವೆ. ಒಂದು ವೇಳೆ ಇದೇ ಬಗೆಯ ಭಿನ್ನಮತೀಯ ಚಟುವಟಿಕೆಗಳು ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಎರವಾಗಬೇಕಾದೀತು ಎನ್ನುವುದನ್ನು ಪಕ್ಷದ ಮುಖಂಡರು ಮರೆಯಬಾರದು.ಯಾವುದೇ ರಾಜಕೀಯ ಪಕ್ಷವು ರಾಜ್ಯದ ಜನತೆಯ ಬುದ್ಧಿವಂತಿಕೆಯನ್ನು ತಪ್ಪಾಗಿ ಎಣಿಕೆ ಮಾಡಬಾರದು. ಅಧಿಕಾರ ನಡೆಸುವ ಪಕ್ಷದ ಆಂತರಿಕ ಕಚ್ಚಾಟ ಮತ್ತು ಅದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿರುವುದನ್ನು ಕಂಡು ಜನರು ತೀವ್ರವಾಗಿ ನಿರಾಶೆಗೊಂಡಿದ್ದಾರೆ.  ಚಿಲ್ಲರೆ ರಾಜಕಾರಣದ ಬೆಳವಣಿಗಳನ್ನೆಲ್ಲ ಕಂಡು ಅವರು ಸಾಕಷ್ಟು ಜುಗುಪ್ಸೆಗೊಂಡಿದ್ದಾರೆ. ಒಂದು ವೇಳೆ, ಉಳಿದ ಅವಧಿಯ್ಲ್ಲಲಾದರೂ ಸರ್ಕಾರವು ದಕ್ಷತೆಯಿಂದ ಕಾರ್ಯನಿರ್ವಹಿಸಿದರೆ, ಸರ್ಕಾರಿ ಆಡಳಿತ ಯಂತ್ರವು ಸರಿದಾರಿಗೆ ಬಂದರೆ ಜನರ ಧೋರಣೆ ಬದಲಾದೀತು.ಬಿಜೆಪಿಯು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಲೂಬಹುದು.ನಾಲ್ಕು ವರ್ಷಗಳ ಹಿಂದೆ ಬಿಜೆಪಿಯು ಅಧಿಕಾರಕ್ಕೆ ಬಂದಾಗ, ಮುಂದಿನ 5 ವರ್ಷಗಳವರೆಗೆ ಸ್ಥಿರ ಸರ್ಕಾರ ಇರಲಿದೆ ಎಂದೇ ರಾಜ್ಯದ ಜನತೆ ಕನಸು ಕಂಡಿದ್ದರು.

 

ಅಭಿವೃದ್ಧಿಗೆ ಆದ್ಯತೆ ನೀಡುವ ಸರ್ಕಾರ, ಐದು ವರ್ಷ ಪೂರ್ಣಗೊಳಿಸಲಿದೆ ಎನ್ನುವ ನಿರೀಕ್ಷೆಯೂ ರಾಜ್ಯದ ಜನತೆಯಲ್ಲಿತ್ತು. ಅದಕ್ಕೂ ಹಿಂದಿನ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರವು ನಿರಂತರವಾಗಿ ರಾಜಕೀಯ ಅಸ್ಥಿರತೆಯಲ್ಲಿಯೇ ದಿನಗಳನ್ನು ದೂಡಿತ್ತು. 2008ರ ವಿಧಾನ ಸಭೆ ಚುನಾವಣಾ ಫಲಿತಾಂಶವು ರಾಜ್ಯದ ಮತದಾರರ ಪಾಲಿಗೆ ಸಾಕಷ್ಟು ನೆಮ್ಮದಿ ತಂದಿತ್ತು. ಜತೆಗೆ ಸಾಕಷ್ಟು ನಿರೀಕ್ಷೆಗಳನ್ನೂ ಮೂಡಿಸಿತ್ತು.ಜನತೆಯ ಎಣಿಕೆ ಸುಳ್ಳಾಗಲು ಬಹಳ ದಿನಗಳು ಹಿಡಿಯಲಿಲ್ಲ. ಮತದಾರರ ಕನಸುಗಳು ನುಚ್ಚುನೂರಾದವು.ಬಿಜೆಪಿ ಸರ್ಕಾರದಲ್ಲಿ ಚಿಲ್ಲರೆ ರಾಜಕಾರಣವೇ ಕೇಂದ್ರಬಿಂದುವಾಗಿ, ಉದ್ದಕ್ಕೂ ರಾಜ್ಯದ ಅಭಿವೃದ್ಧಿ ಕಡೆಗಣಿಸುತ್ತಲೇ ಬರಲಾಗಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿಯೂ (ಜಿಎಸ್‌ಡಿಪಿ) ಪ್ರತಿಫಲನಗೊಂಡಿತು. ಹಲವು ವರ್ಷಗಳಿಂದಲೂ `ಜಿಎಸ್‌ಡಿಪಿ~, ಸರಾಸರಿ ಮಟ್ಟಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿಯೇ ಇದೆ. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಹೊಸ ಮುಖ್ಯಮಂತ್ರಿಯಾಗಿರುವ ಶೆಟ್ಟರ್, ಆರ್ಥಿಕ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ಮೇರೆಗೆ ಚಾಲನೆ ನೀಡುವ ಮೂಲಕ ಬಂಡವಾಳ ಹೂಡಿಕೆದಾರರ ಆತ್ಮವಿಶ್ವಾಸ ವೃದ್ಧಿಸಲು  ಕ್ರಮ ಕೈಗೊಳ್ಳಬೇಕಾಗಿದೆ.ಉದಾಹರಣೆಗೆ ಹೇಳುವುದಾದರೆ, ಗಣಿಗಾರಿಕೆ ಉದ್ದಿಮೆಯು ಹಲವಾರು ವಿವಾದ ಮತ್ತು ಭ್ರಷ್ಟಾಚಾರ ಪ್ರಕರಣಗಳ ಸುಳಿಗೆ ಸಿಲುಕಿದೆ. ಈ ಉದ್ದಿಮೆಯು ಜನರಿಗೆ ಉದ್ಯೋಗ ಅವಕಾಶ ಒದಗಿಸುವ, ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ವರಮಾನ ಭರ್ತಿ ಮಾಡುವುದರ ಜತೆಗೆ ಇತರ ಹಲವು ಉದ್ದಿಮೆಗಳ ಕಾರ್ಯನಿರ್ವಹಣೆಗೂ ನೆರವಾಗುತ್ತಿದೆ. ಹಲವಾರು ಕೋರ್ಟ್ ತೀರ್ಪುಗಳ ಫಲವಾಗಿ, ಗಣಿಗಾರಿಕೆ ಉದ್ದಿಮೆಯಲ್ಲಿನ ಚಟುವಟಿಕೆಗಳು ಗಮನಾರ್ಹವಾಗಿ ಕುಸಿದಿವೆ.ರಾಜ್ಯದಲ್ಲಿ ಶೇ 30 ರಿಂದ ಶೇ 35ರಷ್ಟು ಗಣಿಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿರುವ ಅಂದಾಜಿದೆ. ಇಂತಹ ಪರಿಸ್ಥಿತಿಯು ರಾಜ್ಯಕ್ಕೆ ಯಾವುದೇ ಬಗೆಯಲ್ಲಿ ನೆರವಾಗದು. ಗಣಿಗಾರಿಕೆ ಚಟುವಟಿಕೆಗಳಿಗೆ ಮರು ಚಾಲನೆ ನೀಡುವ ಬಗ್ಗೆ ಸರ್ಕಾರ ಗಣಿ ಉದ್ದಿಮೆದಾರರಲ್ಲಿ  ಭರವಸೆ ತುಂಬ ಬೇಕಾಗಿದೆ.  ಈ ಉದ್ದಿಮೆ ವಲಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ, ಸಂಪೂರ್ಣ ಪಾರದರ್ಶಕತೆಯಿಂದ  ಪೂರ್ಣ ಪ್ರಮಾಣದಲ್ಲಿ ಪುನರಾಂಭಗೊಳ್ಳಲು ಅಗತ್ಯವಾದ ಪೂರಕ ವಾತಾವರಣ ನಿರ್ಮಿಸಬೇಕಾಗಿದೆ.ಸರಕುಗಳ ತಯಾರಿಕೆ, ಪ್ರವಾಸೋದ್ಯಮ ಮತ್ತಿತರ ರಂಗಗಳಲ್ಲಿಯೂ ಸದ್ಯಕ್ಕೆ ವಹಿವಾಟು - ಚಟುವಟಿಕೆಗಳು ಸ್ಥಗಿತಗೊಂಡಂತಹ ಪರಿಸ್ಥಿತಿ ಇದೆ. ಜ್ಞಾನಾಧಾರಿತ ಉದ್ದಿಮೆ ವಹಿವಾಟಿನಲ್ಲಿ ಬೆಂಗಳೂರು ನಗರವು ಕ್ರಮೇಣ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ನಗರವು ಎದುರಿಸುತ್ತಿರುವ ಸವಾಲುಗಳನ್ನೂ ಆದ್ಯತೆ ಮೇರೆಗೆ ಪರಿಹರಿಸಬೇಕಾಗಿದೆ.  ಬೆಂಗಳೂರಿನ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿರುವ ಸಂಗತಿಗಳನ್ನು ಗುರುತಿಸಲು ಹೆಚ್ಚಿನ ಜಾಣ್ಮೆಯೇನೂ ಬೇಕಾಗಿಲ್ಲ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಜೆಟ್ ನೋಡಿದರೆ, ನಗರದ ಅಗತ್ಯಗಳ ಈಡೇರಿಕೆಗೆ ನಮ್ಮ ಪುರ ಪಿತೃಗಳು ಅದೆಷ್ಟರಮಟ್ಟಿಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಾರೆ ಎನ್ನುವುದು ವೇದ್ಯವಾಗುತ್ತದೆ. ನಗರದ ಅಭಿವೃದ್ಧಿ ಬಗ್ಗೆ `ಬಿಬಿಎಂಪಿ~ಗೆ ಪ್ರಾಮಾಣಿಕ ಮನಸ್ಸೇ ಇಲ್ಲದಿರುವುದೂ ಕಣ್ಣಿಗೆ ರಾಚುತ್ತದೆ.ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಮತ್ತು ವರಮಾನಕ್ಕೆ ಬೆಂಗಳೂರು ಮಹಾನಗರವು ಅರ್ಧದಷ್ಟು ಕೊಡುಗೆ ನೀಡುತ್ತದೆ. ಬೆಂಗಳೂರು ನಗರ ಮಧ್ಯದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಹಲವಾರು ಮೂಲ ಸೌಕರ್ಯ ಯೋಜನೆಗಳು ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಗಿವೆ.

 

ಹೊಸ ಮುಖ್ಯಮಂತ್ರಿಗಳು, ಮೂಲ ಸೌಕರ್ಯಗಳ ಅಭಿವೃದ್ಧಿ ಹಾದಿಯಲ್ಲಿನ ಅಡೆತಡೆಗಳನ್ನು ಗರಿಷ್ಠ ಆದ್ಯತೆ ಮೇರೆಗೆ ನಿವಾರಿಸಬೇಕಾಗಿದೆ. ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಹಲವು ಹೂಡಿಕೆದಾರರು ವ್ಯಕ್ತಪಡಿಸಿರುವ ಅನಿಸಿಕೆಗಳು ಕೂಡ ರಾಜ್ಯ ಸರ್ಕಾರದ ಪಾಲಿಗೆ ತೀವ್ರ ಮುಜುಗರ ಉಂಟು ಮಾಡಿವೆ.  ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಲು ಉದ್ಯಮಿಗಳ ಇಂತಹ ಅನಿಸಿಕೆ- ಸಲಹೆಗಳು ನೆರವಾಗಲಿವೆ.ಹೂಡಿಕೆದಾರರ ಸಮಾವೇಶದ ಯಶಸ್ಸಿಗೆ ಸದಾನಂದಗೌಡರ ಸರ್ಕಾರ ಸಾಕಷ್ಟು ಶ್ರಮವಹಿಸಿತ್ತು. ಗೌಡರ ಬದಲಿಗೆ ಅಧಿಕಾರವಹಿಸಿಕೊಂಡಿರುವ ಶೆಟ್ಟರ್, ಬಂಡವಾಳ ಹೂಡಿಕೆ ಕ್ರೋಡೀಕರಣದ ಪ್ರಯತ್ನಗಳನ್ನು ನಿಧಾನಗೊಳಿಸಬಾರದು. ಒಂದು ವೇಳೆ ಸರ್ಕಾರವು ಇಂತಹ ಪ್ರಕ್ರಿಯೆಗಳನ್ನು ನಿರ್ಲಕ್ಷಿಸಿದರೆ, ರಾಜ್ಯದಲ್ಲಿ ಉದ್ದಿಮೆ ಸ್ಥಾಪನೆಗೆ ಪೂರಕ ವಾತಾವರಣ ಇಲ್ಲ, ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರವೂ ಸಿಗುವುದಿಲ್ಲ ಎನ್ನುವ ಹೂಡಿಕೆದಾರರ ಆತಂಕ ನಿಜವಾಗಲಿದೆ.ಭಿನ್ನಮತೀಯ ಚಟುವಟಿಕೆಗಳಿಂದ ಕಳಂಕಿತಗೊಂಡಿರುವ ರಾಜ್ಯದ ವರ್ಚಸ್ಸು ಸುಧಾರಿಸಲು ಶೆಟ್ಟರ್ ಅವರು ಸಾಕಷ್ಟು ಬೆವರು ಸುರಿಸಬೇಕಾಗಿದೆ. ಅಧಿಕಾರಾವಧಿಯ ಮೊದಲ ಹಂತದಲ್ಲಿ ಶೆಟ್ಟರ್ ತುಳಿಯುವ ಹಾದಿ, ಕೈಗೊಳ್ಳುವ ನಿರ್ಧಾರಗಳಿಂದ ಉದ್ಯಮ ರಂಗಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಗಮನಿಸಿದರೆ, ಅಭಿವೃದ್ಧಿಗೆ ಒತ್ತು ನೀಡಿದ್ದ, ದಕ್ಷ ಆಡಳಿತ ಒದಗಿಸಿದ್ದ ಪಕ್ಷಗಳು ಮಾತ್ರ ಮತ್ತೆ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟಗೊಳ್ಳುತ್ತದೆ. ರಾಜ್ಯಕ್ಕೂ ಈ ಮಾತು ಅನ್ವಯಿಸಲಿದೆ. ಬರ ಪರಿಸ್ಥಿತಿ ವಿಷಮಿಸುತ್ತಿರುವಾಗ, ಸರ್ಕಾರದಿಂದ ಜನರು ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಶೆಟ್ಟರ್, ತಮ್ಮ ನಾಯಕತ್ವ ಗುಣ ಪ್ರದರ್ಶಿಸಿ, ರಾಜ್ಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ತುರ್ತಾಗಿ ಗಮನ ಹರಿಸಬೇಕಾಗಿದೆ.ರಾಜ್ಯಮಟ್ಟದ ರಾಜಕಾರಣಿಯೊಬ್ಬ ತನ್ನ  ರಾಜಕೀಯ ಬದುಕಿನಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುವುದರಲ್ಲಿ ತಪ್ಪೇನೂ ಇಲ್ಲ.  ನಾಯಕತ್ವ ಗುಣ ಮತ್ತು ರಾಜ್ಯದ ಅಭಿವೃದ್ಧಿಗೆ ಆತ ನೀಡಿದ ಕೊಡುಗೆ ಆಧರಿಸಿಯೇ ಇತಿಹಾಸವು  ಯಾವುದೇ ಮುಖ್ಯಮಂತ್ರಿಯ ಕಾರ್ಯವೈಖರಿ ಮತ್ತು ವ್ಯಕ್ತಿತ್ವ ನಿರ್ಣಯಿಸುತ್ತದೆ. ಅನಿರೀಕ್ಷಿತವಾಗಿ ಒದಗಿ ಬಂದಿರುವ ಈ ಸದವಕಾಶವನ್ನು ಶೆಟ್ಟರ್, ಸದ್ಬಳಕೆ ಮಾಡಿಕೊಂಡು, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ತಾವು ರಾಜಕೀಯ ಬದಿಗಿಟ್ಟು ಕೆಲಸ ಮಾಡಬಲ್ಲೆ ಎನ್ನುವುದನ್ನು ಸಾಧ್ಯ ಮಾಡಿ ತೋರಿಸಬೇಕಾಗಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry