ರಾಜಕೀಯ ಮತ್ತು ಭಾಷೆ: ಐಡಿಯಾಲಜಿ

7

ರಾಜಕೀಯ ಮತ್ತು ಭಾಷೆ: ಐಡಿಯಾಲಜಿ

ಓ.ಎಲ್. ನಾಗಭೂಷಣಸ್ವಾಮಿ
Published:
Updated:
ರಾಜಕೀಯ ಮತ್ತು ಭಾಷೆ: ಐಡಿಯಾಲಜಿ

ರಾಜಕೀಯ ಅನ್ನುವ ಮಾತಿನಷ್ಟೇ ಅಥವ ಅದಕ್ಕಿಂತ ಹೆಚ್ಚಾಗಿ ಪಾಲಿಟಿಕ್ಸ್ ಅನ್ನುವ ಪದ ಕನ್ನಡದಲ್ಲಿ ಬಳಕೆಯಾಗುತ್ತಿದೆ. ರಾಜಕಾರಣಕ್ಕೂ ಭಾಷೆಗೂ ಇರುವ ಸಂಬಂಧ, ರಾಜಕೀಯದಲ್ಲಿ ಬಳಕೆಯಾಗುವ ಭಾಷೆಯ ಸ್ವರೂಪ, ಉದ್ದೇಶಗಳ ಬಗ್ಗೆ ಪಶ್ಚಿಮ ದೇಶಗಳ ಚಿಂತಕರು ದೊಡ್ಡ ಪ್ರಮಾಣದಲ್ಲೇ ಚಿಂತನೆ ನಡೆಸಿದ್ದಾರೆ.ಅಂಥ ವಿದ್ವತ್ ಪೂರ್ಣ ಚರ್ಚೆಗಳಿಗಿಂತ ಕವಿಗಳು, ಸಾಹಿತಿಗಳು ಪಾಲಿಟಿಕ್ಸ್ ಮತ್ತು ಭಾಷೆಯ ಸಂಬಂಧ ಕುರಿತು ಆಡಿರುವ ಮಾತುಗಳೇ ನೇರವಾಗಿ ನಮ್ಮನ್ನು ತಟ್ಟುವಂತೆ ಇವೆ.ಇಂಗ್ಲೆಂಡಿನ ಲೇಖಕ ಜಾರ್ಜ್ ಆರ‌್ವೆಲ್ 1946ರಲ್ಲೇ `ನಮ್ಮ ಕಾಲದಲ್ಲಿ ರಾಜಕೀಯವನ್ನು ದೂರವಿಡುವುದು ಸಾಧ್ಯವೇ ಇಲ್ಲ. ನಮ್ಮ ಎಲ್ಲ ಸಮಸ್ಯೆಗಳೂ ರಾಜಕೀಯ ಸಮಸ್ಯೆಗಳೇ~ ಎಂದು ಘೋಷಿಸಿದ್ದ.ರಾಜಕೀಯದಲ್ಲಿ ಮುಂದೆ ಬಂದ ಅಂದರೆ ಏನರ್ಥ? ದುಡ್ಡು ಮಾಡಿಕೊಂಡ, ಅಧಿಕಾರ ಪಡೆದುಕೊಂಡ ಅಂತಲ್ಲವೇ! ಗಂಡು ಹೆಣ್ಣುಗಳ ಸಮಾನತೆಯನ್ನು ಸಾಧಿಸಲು ನಡೆಸುವ ಹೋರಾಟ `ಲಿಂಗ ರಾಜಕೀಯ~. `ಸುಮ್ಮನೆ ಪಾಲಿಟಿಕ್ಸ್ ಮಾಡಬೇಡ/ ಮಾಡತಾನೆ~ ಅನ್ನುವುದು ಸಣ್ಣ ಪುಟ್ಟ ಕಚೇರಿಯಲ್ಲೂ ಅಧಿಕಾರಕ್ಕೆ, ಅಧಿಕಾರಸ್ಥರಿಗೆ ಹತ್ತಿರವಾಗಲು ನಡೆಯುವ ಮೇಲಾಟದ ಬಗ್ಗೆ ಕೇಳುವ ಮಾತು.ವ್ಯಕ್ತಿಗಳು ತಮ್ಮ ಖಾಸಗಿ ಬದುಕಿನಲ್ಲಿ, ಮನೆಯೊಳಗೆ, ನಂಟರಿಷ್ಟರ ನಡುವೆ ಎಂಥ ಪಾತ್ರ ವಹಿಸುತ್ತಾರೆ, ಎಂಥ ಸಂಬಂಧ ಉಳಿಸಿಕೊಂಡಿದ್ದಾರೆ ಅನ್ನುವುದು ಕೂಡ ರಾಜಕೀಯವೇ.ಪೊಲೆಟಿಕಲ್ ಸೈನ್ಸು, ರಾಜಕೀಯ ತತ್ವಸಿದ್ಧಾಂತಗಳು, ಅರ್ಥಶಾಸ್ತ್ರ ಇವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ರಾಜಕೀಯ ವ್ಯವಸ್ಥೆಗಳ ಚರಿತ್ರೆಯನ್ನೇ ಅರಿಯಬೇಕು. ಇನ್ನು ಪರಿಸರ ರಾಜಕಾರಣ-ಸಾರಿಗೆ, ವಸತಿ, ಅನುಭೋಗವನ್ನು ಕುರಿತದ್ದು. ನದಿ ನೀರಿನ ರಾಜಕೀಯ, ಜಾತಿ ರಾಜಕೀಯ... ರಾಜಕೀಯವನ್ನು ಹೊರಗಿಡುವುದು ಹೇಗೋ!ನೊಬೆಲ್ ಪ್ರಶಸ್ತಿ ಪಡೆದ ಪೋಲೆಂಡಿನ ಲೇಖಕಿ ವಿಸ್ಲಾವಾ ಝಿಂಬ್ರಾಸ್ಕಾ ಕವಿತೆಯೊಂದರಲ್ಲಿ ಹೀಗೆ ಹೇಳಿದ್ದಾಳೆ: `ನಮ್ಮದು ರಾಜಕೀಯ ಯುಗ. ಹಗಲೂ ಇರುಳೂ ನಮ್ಮೆಲ್ಲರ ವ್ಯವಹಾರವೂ ರಾಜಕೀಯ.ನಮ್ಮ ಜೀನ್ಸ್‌ಗಳಲ್ಲೇ ರಾಜಕೀಯದ ಭೂತ ಸೇರಿಕೊಂಡಿದೆ. ನಮ್ಮ ಚರ್ಮದಲ್ಲಿ ಇರುವ ಸ್ಪರ್ಶ, ನಮ್ಮ ಕಣ್ಣಿನ ನೋಟ ಎಲ್ಲವೂ ರಾಜಕೀಯವೇ. ಗಟ್ಟಿ ದನಿಯಲ್ಲಿ ಚೀರಿ ಹೇಳುವುದು ಹೇಗೆ ರಾಜಕೀಯವೋ ಏನೂ ಹೇಳದೆ ಮೌನವಾಗಿರುವುದೂ ರಾಜಕೀಯವೇ. ಮಾತು, ಮೌನ ಎರಡೂ ರಾಜಕೀಯ.

 

ಊರು ಬಿಟ್ಟು ಕಾಡಿಗೆ ಹೆಜ್ಜೆ ಹಾಕಿದರೆ ರಾಜಕೀಯ ನೆಲದ ಮೇಲೆ ರಾಜಕೀಯ ಹೆಜ್ಜೆಗಳನ್ನೇ ಇಡುತ್ತೇವೆ. ರಾಜಕೀಯ ಮಹತ್ವ ಪಡೆಯಲು ಮನುಷ್ಯರೇ ಆಗಿರಬೇಕು ಎಂದೇನಿಲ್ಲ. ಗೊಬ್ಬರ, ಹತ್ತಿ, ಗೋಧಿ, ಪೆಟ್ರೋಲು, ಡೀಸೆಲು, ಕೊನೆಗೆ ಆಕಾಶದ ಚಂದ್ರ ಕೂಡ ರಾಜಕೀಯದಾಟದ ಪಾನು.ಸಾವು ಬದುಕಿನ ಪ್ರಶ್ನೆಗಳನ್ನು ಚರ್ಚಿಸಲಿರುವ ಸಮ್ಮೇಳನದ ಸ್ವರೂಪದ ಬಗ್ಗೆ ಸಂಧಾನ, ಚರ್ಚೆ ಇವೆಲ್ಲ ನಡೆಯುತ್ತಿರುವಾಗಲೇ ಜನ ಸಾಯುತ್ತಿದ್ದಾರೆ, ಪ್ರಾಣಿ ಸಂಕುಲ ನಶಿಸುತ್ತಿದೆ, ಮನೆಗಳು ಹೊತ್ತಿ ಉರಿಯುತ್ತಿವೆ, ನೆಲ ಬಂಜರಾಗುತ್ತಿದೆ- ಪ್ರಾಚೀನ ಕಾಲದಲ್ಲಿ, ಕಡಿಮೆ ರಾಜಕೀಯ ಇದ್ದ ಕಾಲದಲ್ಲೆ ಹೇಗೋ ಹಾಗೇ~.ರಾಜಕೀಯವು ಅಧಿಕಾರವನ್ನು ಕುರಿತದ್ದು, ಅಧಿಕಾರವನ್ನು ಒಳಗೊಂಡದ್ದು. ರಾಜಕಾರಣದ ಗುರಿಗಳನ್ನು ಈಡೇರಿಸಿಕೊಳ್ಳಲು ಬಳಕೆಯಾಗುವ ಪ್ರಮುಖ ಉಪಕರಣ ಭಾಷೆ. ರಾಜಕಾರಣದಲ್ಲಿ ಬಳಕೆಯಾಗುವ ಭಾಷೆಗೆ ಎರಡು ಮುಖಗಳಿವೆ. ಒಂದು ಲೋಕವನ್ನು ಕುರಿತ ನಮ್ಮ ಗ್ರಹಿಕೆಗಳನ್ನು ಪ್ರತಿಫಲಿಸುವುದು. ಇನ್ನೊಂದು, ಲೋಕದ ಬಗ್ಗೆ ನಮಗೆ ಇರುವ ಗ್ರಹಿಕೆಗಳನ್ನು ತಿದ್ದುವುದು.

 

ಆಳುವ ವರ್ಗಕ್ಕೆ ಹಿತವಾಗುವಂಥ ಮೌಲ್ಯಗಳ ವ್ಯವಸ್ಥೆಯನ್ನು ಸೃಷ್ಟಿಸುವುದಕ್ಕೆ, ಬಲಪಡಿಸುವುದಕ್ಕೆ ಭಾಷೆಯೇ ಮುಖ್ಯ ಸಾಧನ. ಜನರ ದಿನ ನಿತ್ಯದ ವರ್ತನೆಗಳನ್ನು ಪ್ರಭಾವಿಸುವಂಥ ನಂಬಿಕೆಗಳನ್ನು ಸೃಷ್ಟಿಸಬೇಕು, ಪ್ರಚೋದನೆಗಳನ್ನು ಹುಟ್ಟಿಸಬೇಕು, ಆಸೆ, ಭಯಗಳನ್ನು ಕೆರಳಿಸಬೇಕು. ಇವೆಲ್ಲ ಸೇರಿ ಐಡಿಯಾಲಜಿ ಅನ್ನುವುದು ಸೃಷ್ಟಿಯಾಗುತ್ತದೆ.

 

ಲೋಕವನ್ನು ಕುರಿತ ಒಪ್ಪಿತವಾದ ಐಡಿಯಾಗಳ ಮೊತ್ತವೇ ಐಡಿಯಾಲಜಿ. ಹಿಂದಿನ ಕಾಲದಲ್ಲಿ ಸ್ವರ್ಗ ನರಕಗಳೆಂಬ ಕಲ್ಪನೆಗಳು ಜನರ ವರ್ತನೆಯನ್ನು ನಿಯಂತ್ರಿಸುವ ಐಡಿಯಾಲಜಿಗಳಾಗಿದ್ದವು. ರಾಜನು ಕಣ್ಣೆದುರಿಗೆ ಕಾಣುವ ದೇವರು ಅನ್ನುವ ನಂಬಿಕೆಯೂ ಜನರನ್ನು ಬಹು ಕಾಲ ಆಳಿದ ಇನ್ನೊಂದು ಐಡಿಯಾಲಜಿ. ಜಾತಿಗಳಲ್ಲಿ ಕೆಲವು ಶ್ರೇಷ್ಠ, ಕೆಲವು ಕನಿಷ್ಠ ಅನ್ನುವುದೂ ಇನ್ನೊಂದು ಐಡಿಯಾಲಜಿ.ಮುಖ್ಯವಾದ ಮಾತೆಂದರೆ ನಾವು ಯಾವ ಐಡಿಯಾಲಜಿಯೊಳಗೆ ಬದುಕುತಿದ್ದೇವೋ ಅದನ್ನು ಗುರುತಿಸುವುದು ಬಹಳ ಕಷ್ಟ. ಮೀರುವುದು ಇನ್ನೂ ಕಷ್ಟ. ಸ್ಪರ್ಧೆ, ಗೆಲುವು, ಶ್ರಿಮಂತಿಕೆ ಇವು ನಮ್ಮ ಕಾಲದ ಬದುಕಿನ ವಾಸ್ತವ ಎಂದು ಒಪ್ಪಿಕೊಂಡಿದ್ದೇವೆ.ಆದರೆ ಈ ಕಲ್ಪನೆಗಳೆಲ್ಲ ನಮ್ಮನ್ನು ಆಳುತ್ತಿರುವ ಐಡಿಯಾಲಜಿಯೇ ಅನ್ನುವುದನ್ನು ಕಾಣುವುದು ಸುಲಭವೇ? ಐಡಿಯಾಲಜಿ ಅನ್ನುವುದು ಕೇವಲ ಐಡಿಯಾವೇ ಹೊರತು ನಿಜವಲ್ಲ ಅನ್ನುವುದನ್ನು ಕಾಣುವುದು ಅಸಾಧ್ಯ ಅನ್ನುವಷ್ಟು ಕಷ್ಟ.ಅಧಿಕಾರವನ್ನು ಪಡೆಯುವುದಕ್ಕೆ, ನಮ್ಮ ರಾಜಕೀಯ ನಂಬಿಕೆಗಳನ್ನು ಇತರರೂ ಒಪ್ಪುವ ಹಾಗೆ ಮಾಡುವುದಕ್ಕೆ ಹಲವು ದಾರಿಗಳಿವೆ. ಬಲಪ್ರಯೋಗ ಒಂದು ದಾರಿ. ಚರಿತ್ರೆಯುದ್ದಕ್ಕೂ ನಡೆದಿರುವ ಯುದ್ಧಗಳಿಗೆ ಒಂದು ಸಮೂಹ ಇನ್ನೊಂದರ ಮೇಲೆ ಅಧಿಕಾರ ಸ್ಥಾಪಿಸುವ ಬಯಕೆ ಒಂದು ಕಾರಣ. ಅದು ಧರ್ಮದ, ವ್ಯಾಪಾರದ, ದೇಶವಿಸ್ತರಣೆಯ ಕಾರಣಗಳಿಂದ ನಡೆಯಬಹುದು.ನಿರಂಕುಶ ಅಧಿಕಾರಿಗಳು ಈ ಕಾಲದಲ್ಲೂ ಸೈನ್ಯವನ್ನು ಬಳಸಿ ಜನರನ್ನು ನಿಯಂತ್ರಿಸುವುದು ಇದ್ದೇ ಇದೆ. ಪ್ರಜಾಪ್ರಭುತ್ವ ಇರುವ ದೇಶಗಳ್ಲ್ಲಲೂ ಬಲಪ್ರಯೋಗ ಕಾನೂನುಬದ್ಧವಾಗಿ ನಡದೇ ಇದೆ- ಅಪರಾಧಿಗಳ ನಿಯಂತ್ರಣಕ್ಕೆ, ಅಧಿಕಾರ ವ್ಯವಸ್ಥೆಯ ವಿರೋಧಿಗಳ ದಮನಕ್ಕೆ, ಇತ್ಯಾದಿ.ಸೈನ್ಯಬಲವನ್ನು ಬಿಟ್ಟರೆ ಕಾನೂನು ವ್ಯವಸ್ಥೆಯ ಮೂಲಕ ಜನರನ್ನು ಜನರ ವರ್ತನೆಗಳನ್ನು ನಿಯಂತ್ರಿಸುವುದು ಇನ್ನೊಂದು ದಾರಿ. ಮಾದಕ ಪಾನೀಯಗಳ ಜಾಹಿರಾತು ಕೂಡದು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಇತ್ಯಾದಿ ಕಾನೂನುಗಳನ್ನು ಉಲ್ಲಂಘಿಸಿದರೆ ಕಾನೂನು ಬದ್ಧವಾಗಿಯೇ ಶಿಕ್ಷೆ ಅನುಭವಿಸಬೇಕು.ಸೈನ್ಯ, ಪೋಲೀಸು, ಕೋರ್ಟು ಕಾನೂನು ಇವೆಲ್ಲ ಬಲವಂತವಾಗಿಯಾದರೂ ಜನರನ್ನು ನಿಯಂತ್ರಿಸುವ ದಾರಿಗಳು. ಸೈನ್ಯ ಮತ್ತು ಕಾನೂನು ಬಲಪ್ರಯೋಗದ ಮುಖಾಂತರ ಜನರನ್ನು ನಿಯಂತ್ರಿಸುವ ಉಪಕರಣಗಳು.ಆದರೆ ಜನ ಸ್ವಂತ ಇಚ್ಛೆಯಿಂದ ಆಳುವವರ ಆಸೆಗೆ ತಕ್ಕಂತೆ ವರ್ತಿಸುವ ಹಾಗೆ ಮಾಡುವುದು ಇವೆಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿಯಾದದ್ದು. ಆಳುವವರಿಗೆ ಏನು ಬೇಕೋ ಅದೇ ತಮ್ಮ ಬದುಕಿಗೂ ಅಗತ್ಯ ಎಂದು ಜನ ಭಾವಿಸುವಂತೆ ಮಾಡುವುದನ್ನು ಜನರ ಒಪ್ಪಿಗೆಯನ್ನು ಅಥವ ಒಲುಮೆಯನ್ನು ಉದ್ದೇಶಪೂರ್ವಕವಾಗಿ ಉತ್ಪಾದಿಸುವುದನ್ನು ಫೇರ್‌ಕ್ಲೋ 1989ರಲ್ಲಿ ಮ್ಯಾನುಫ್ಯಾಕ್ಚರಿಂಗ್ ಕನ್ಸೆಂಟ್ ಎಂದು ಕರೆದ. ಆಳುವವರ ಗುರಿಯನ್ನೇ ಉದ್ದೇಶವನ್ನೇ ತಮ್ಮದಾಗಿ ಮಾಡಿಕೊಂಡು ಒಪ್ಪುವಂತೆ ಮಾಡುವುದಕ್ಕೆ ಸೈನ್ಯ, ಪೋಲೀಸು, ಕೋರ್ಟುಗಳನ್ನು ನಿರ್ವಹಿಸುವುದಕ್ಕಿಂತ ಕಡಿಮೆ ದುಡ್ಡು, ಕಡಿಮೆ ಸಂಪನ್ಮೂಲ ಸಾಕು.ಇದು ಸಾಧ್ಯವಾಗಲು ಐಡಿಯಾಲಜಿಯೊಂದನ್ನು ರೂಪಿಸುವುದು, ಸ್ಥಾಪಿಸುವುದು ಅಗತ್ಯ. ಆಳುವವರಿಗೆ ಏನು ಅಗತ್ಯವೋ ಅದೇ ಕಾಮನ್‌ಸೆನ್ಸ್ ಅನ್ನುವ ಹಾಗೆ ಜನ ಒಪ್ಪಬೇಕು, ಹೀಗಾದಾಗ ಜನ ಆಳುವವರ ಐಡಿಯಾಲಜಿಯನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತಾರೆ.ಐಡಿಯಾಲಜಿ ಅನ್ನುವ ಕಲ್ಪನೆಯನ್ನು ರೂಪಿಸಿದ್ದು, ಬೆಳೆಸಿದ್ದು ಕಾರ್ಲ್ ಮಾರ್ಕ್ಸ್‌ನ ಅನುಸರಿಸಿದ ಚಿಂತಕ ಲೂಯಿ ಆಲ್ಥುಸರ್. ಬಹು ಸಂಖ್ಯೆಯ ಜನ ಅದು ಹೇಗೆ ತಮ್ಮ ಹಿತಕ್ಕೆ ವಿರುದ್ಧವಾಗಿ, ಕಠಿಣ ದುಡಿಮೆಯಲ್ಲಿ ತೊಡಗಿಸಿಕೊಂಡು ಬಡತನದಲ್ಲಿ ಬದುಕುತ್ತ ಇದ್ದಾರೆ, ಕೆಲವೇ ಜನ ಮಾತ್ರ ಅವರ ದುಡಿಮೆಯ ಲಾಭ ತಾವು ಪಡೆದುಕೊಂಡು ಐಷಾರಾಮದಿಂದ ಬದುಕುತಿದ್ದಾರೆ ಅನ್ನುವ ಪ್ರಶ್ನೆ ಕೇಳಿಕೊಂಡ.ತಾವು ಹೀಗೆ ಮೈಮುರಿದು ದುಡಿಯುವುದು ಹಿಡಿಯಷ್ಟು ಜನ ಸುಖದಲ್ಲಿರುವುದು ಸಾಧ್ಯವಾಗಬೇಕಿದ್ದರೆ `ಈಗಿರುವ ಪರಿಸ್ಥಿತಿ ಸಹಜ~, `ಈಗಿರುವ ಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲ~ ಎಂದು ಜನ ನಂಬಬೇಕು. ಈ ಅರ್ಥದಲ್ಲಿ ಐಡಿಯಾಲಜಿ ಅನ್ನುವ ಮಾತನ್ನು ಮೊದಲು ಬಳಸಿದ್ದು. ಈಗ ಈ ಮಾತನ್ನು ಇನ್ನೂ ವಿಶಾಲವಾದ ಅರ್ಥದಲ್ಲಿ, ಯಾವುದೇ ನಂಬಿಕೆಗಳ ಮೊತ್ತವನ್ನು, ಜನ ಸತಾರ್ಕಿಕ ಮತ್ತು ಸಹಜ ಎಂದು ನಂಬುವ ಸಂಗತಿಗಳನ್ನು ಒಳಗೊಳ್ಳುವಂತೆ ಬಳಸಲಾಗುತ್ತಿದೆ.ಐಡಿಯಾಲಜಿ ಅನ್ನುವ ಮಾತಿಗೆ ಹೀನಾರ್ಥವೇನೂ ಇಲ್ಲ. ಯಾಕೆಂದರೆ ನಮಗೆ ಗೊತ್ತಿರುವ, ನಾವು ಆಲೋಚಿಸುವ ಎಲ್ಲವೂ ನಿಜವಾಗಿ ಐಡಿಯಾಲಜಿಯೇ. ಯಾಕೆಂದರೆ ನಾವು ವಾಸ್ತವಿಕತೆ ಎಂದು ಯಾವುದನ್ನು ನಂಬಿದ್ದೇವೋ ಅದೆಲ್ಲವೂ ಭಾಷೆಯ ಮಾಧ್ಯಮ, ಮಧ್ಯಸ್ಥಿಕೆಯ ಮೂಲಕ ನಮ್ಮ ಮನಸ್ಸಿನಲ್ಲಿ ಮೂಡಿಸಿಕೊಂಡ ಬಿಂಬಗಳೇ ಅಲ್ಲವೇ. ಭಾಷೆಯ ಮೂಲಕ ನಾವು ಮೂಡಿಸಿಕೊಳ್ಳುವ ಬಿಂಬಗಳು ನಾವು ಬದುಕುತ್ತಿರುವ ಸಂಸ್ಕೃತಿ ನಮ್ಮಲ್ಲಿ ಮೂಡಿಸಿದ ಐಡಿಯಾಲಜಿಯೇ.ಜನ ತಮ್ಮ ಸಂಸ್ಕೃತಿಯ ಐಡಿಯಾಲಜಿಯನ್ನು ಪ್ರಶ್ನಿಸಬಹುದು. ಆದರೆ ಕಷ್ಟ. ಅದು ದೊಡ್ಡ ಬೌದ್ಧಿಕ ಸವಾಲಿನ ಕೆಲಸ. ಇಂಥ ಕೆಲಸಕ್ಕೆ ಕೆಲವೊಮ್ಮೆ ಸಾಮಾಜಿಕ ಕಳಂಕವೂ ಮೆತ್ತಿಕೊಳ್ಳಬಹುದು. ಹಾಗೆ ಪ್ರಶ್ನಿಸುವವರು ತರ್ಕರಹಿತ ಮನುಷ್ಯರೆಂದು ಕಾಣಬಹುದು, ಐಡಿಯಾಲಜಿಯನ್ನು ಒಪ್ಪಿರುವ ಸಮೂಹಕ್ಕೆ. ಜನ ಒಪ್ಪಿರುವ ಐಡಿಯಾಲಜಿಯನ್ನು ಪ್ರಶ್ನಿಸುವವರು ದೊಡ್ಡ ಬೆಲೆಯನ್ನೇ ತೆರಲು ಸಿದ್ಧರಿರಬೇಕು.ಕೆಲವು ವಿಷಯಗಳನ್ನು, ಪರಿಕಲ್ಪನೆಗಳನ್ನು ಕುರಿತ ಜನರ ಗ್ರಹಿಕೆಯನ್ನು ಭಾಷೆಯ ಬಳಕೆಯ ಮೂಲಕ ಪ್ರಭಾವಿಸಬಹುದು ಎಂಬ ನಂಬಿಕೆಯೊಡನೆಯೇ ರಾಜಕೀಯದ ಭಾಷೆ ರೂಪುಗೊಳ್ಳುತ್ತದೆ.ತಾನು ಹೇಳುತ್ತಿರುವುದು ಮೌಲಿಕವಾದದ್ದು ಅನ್ನುವುದನ್ನು ಜನ ನಂಬುವ ಹಾಗೆ ಮಾಡುವುದು ಮಾಡಬೇಕಾದದ್ದು ರಾಜಕಾರಣಿಯ ಮುಖ್ಯ ಗುರಿ. ಅರ್ಥವನ್ನು ಬಾಯಿಬಿಟ್ಟು ಹೇಳದೆ ತನ್ನ ಇಂಗಿತ ಇದು ಎಂದು ಅಸ್ಪಷ್ಟವಾಗಿ ಸೂಚಿಸುವುದು, ಹೇಳದೆ ಬಿಟ್ಟಿರುವುದನ್ನು ಜನ ಗ್ರಹಿಸಿ ಒಪ್ಪಿಕೊಳ್ಳುವ ಹಾಗೆ ಮಾಡುವುದು ಒಂದು ದಾರಿ. ರಾಜಕಾರಣಿ ಬಾಯಿ ಬಿಟ್ಟು ಹೇಳದಿದ್ದರೂ ಜನರ ಊಹೆಯಲ್ಲಿ ಮೂಡುವ ಅರ್ಥ ಇದೆಯಲ್ಲ ಅದು ಕಾಮನ್‌ಸೆನ್ಸ್ ಅನ್ನುವ ಹಾಗೆ ಬಿಂಬಿಸುವುದು ರಾಜಕಾರಣದ ಭಾಷೆಯ ಲಕ್ಷಣ.ರಾಜಕಾರಣಿ ವ್ಯಕ್ತಪಡಿಸದೆ ಇಂಗಿತ ರೂಪದಲ್ಲಿ ಸೂಚಿಸುವ ಧೋರಣೆಗಳನ್ನು, ಅಭಿಪ್ರಾಯಗಳನ್ನು ಗುರುತಿಸಿ ವಿರೋಧಿಸುವುದು, ತಿರಸ್ಕರಿಸುವುದು ಜನಕ್ಕೆ ಕಷ್ಟವಾಗುತ್ತದೆ. ಯಾವುದು ಚರ್ಚೆಯಾಗಬೇಕಾದ ಸಂಗತಿಯೋ ಅದು ಈಗಾಗಲೇ ಸರ್ವಜನರ ಮನ್ನಣೆ ಪಡೆದಿರುವ ಸಂಗತಿ ಎಂಬಂತೆ ಬಿಂಬಿಸುವುದೂ ಇಂಗಿತಾರ್ಥದ ಗುರಿ.`ನಾವು ಕನ್ನಡ ಸಂಸ್ಕೃತಿಯನ್ನು ರಕ್ಷಿಸುತ್ತೇವೆ~ ಅಂದರೆ ಕನ್ನಡವನ್ನು ರಕ್ಷಿಸುವ ಅಗತ್ಯವಿದೆ, ಈಗಿರುವ ಸರ್ಕಾರ ಅದನ್ನು ಹಾಳು ಮಾಡಿದೆ ಅನ್ನುವ ಇಂಗಿತ ಇರುತ್ತದಲ್ಲವೇ?

 

`ಈ ಚುನಾವಣೆಯಲ್ಲಿ ದೇಶ ಮುಖ್ಯವಾಗಲಿ, ಪಕ್ಷವಲ್ಲ~ ಎಂದರೆ ಮತದಾರರು ಕಳೆದ ಚುನಾವಣೆಗಳಲ್ಲಿ ದೇಶದ ಹಿತಕ್ಕಿಂತ ಪಕ್ಷದ ಮೇಲಿನ ಪ್ರೀತಿಯಿಂದ ಓಟು ಕೊಟ್ಟಿದ್ದಾರೆ, ಈಗ ಹಾಗೆ ಮಾಡಬಾರದು ಅನ್ನುವ ಇಂಗಿತವಲ್ಲವೇ? `ಭವ್ಯ ಭವಿಷ್ಯತ್ತಿಗಾಗಿ ನಮ್ಮ ಪಕ್ಷಕ್ಕೆ ಮತ ನೀಡಿ~ ಎಂದರೆ ಈಗ ಎಲ್ಲರೂ ಸುಖವಾಗಿಲ್ಲ, ಈಗಿರುವ ಸ್ಥಿತಿಯೇ ಇದ್ದರೆ ಮುಂದೆ ಕೂಡ ಎಲ್ಲರೂ ಸುಖವಾಗಿರಲು ಸಾಧ್ಯವಿಲ್ಲ ಅನ್ನುವ ಇಂಗಿತಾರ್ಥವಲ್ಲವೇ?

 

`ಈ ಬಾರಿ ಬದಲಾವಣೆ ತನ್ನಿ~ ಅಂದರೆ ಬದಲಾವಣೆ ಅಗತ್ಯ, ಸುಧಾರಣೆಗೆ ಅವಕಾಶವಿದೆ ಅನ್ನುವುದನ್ನು ಎಲ್ಲರೂ ಒಪ್ಪುತ್ತಾರೆ, ಇದು ಕಾಮನ್ ಸೆನ್ಸ್ ಅನ್ನುವ ಇಂಗಿತವಲ್ಲವೇ?ರಾಜಕೀಯದ ಭಾಷೆಯು ಇಂಗಿತಗಳ ಮೂಲಕ ಐಡಿಯಾಲಜಿಯನ್ನು ರೂಪಿಸಲು ಯತ್ನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry