ರಾಜಕೀಯ ಮೇಲಾಟದಲ್ಲಿ ಕಾಣೆಯಾದ ಒಮ್ಮತ

7

ರಾಜಕೀಯ ಮೇಲಾಟದಲ್ಲಿ ಕಾಣೆಯಾದ ಒಮ್ಮತ

ಕುಲದೀಪ ನಯ್ಯರ್
Published:
Updated:

ಭಾರತದ ರಾಜಕೀಯ ಸ್ಥಿತಿಗತಿ ದಿನೇದಿನೇ ಅಧಃಪತನದತ್ತ ಜಾರುತ್ತಿದೆ. ರಾಜಕೀಯ ಸಂಸ್ಥೆಗಳ ವಿಶ್ವಾಸಾರ್ಹತೆ ಕುಸಿಯುತ್ತಿದೆ. ರಾಜಕಾರಣಿಗಳು ತಮ್ಮ  ಅಸ್ತಿತ್ವಕ್ಕಾಗಿ ಅಥವಾ ಲಾಭಕ್ಕಾಗಿ ಇಡೀ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ನಮ್ಮ ಲೋಕಸಭೆಯಲ್ಲಿ ನಡೆದಿರುವ ಆಗುಹೋಗುಗಳೇ ಇವೆಲ್ಲದಕ್ಕೂ ನಿದರ್ಶನದಂತಿದೆ. ಒಂದೆಡೆ ಅಧಿಕಾರದ ದರ್ಪದಿಂದ ಮೆರೆಯುತ್ತಿರುವ ಆಡಳಿತ ಪಕ್ಷವಿದ್ದರೆ ಇನ್ನೊಂದೆಡೆ ಒಂದಿನಿತೂ ತಾಳ್ಮೆಯೇ ಇರದ ವಿರೋಧ ಪಕ್ಷಗಳ ಅಬ್ಬರ. ಆಡಳಿತ ಯಂತ್ರದ ಅದಕ್ಷತೆಯಿಂದ ಕಾನೂನುಪಾಲನೆ, ಆರ್ಥಿಕಾಭಿವೃದ್ಧಿ ಮುಂತಾದವುಗಳಲ್ಲಿ ಲೋಪ ಎದ್ದು ಕಾಣುತ್ತಿದ್ದು ಜನ ಕೆರಳುವಂತಾಗಿದೆ.ಒಂದು ವೇಳೆ ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆ ನಡೆದರೆ ಹೊಸ ಆಶಯಗಳೊಂದಿಗೆ ಬರುವವರಿಂದ ಹೊಸ ಆರಂಭವನ್ನು ಕಾಣಬಹುದೇನೊ. ಲೋಕಸಭೆಯಲ್ಲಿ ಮತ್ತೊಂದು ಐದು ವರ್ಷಗಳ ಅಧಿಕಾರಾವಧಿಗೆ ಉತ್ಸಾಹದ ಮುನ್ನುಡಿಯಾಗಬಹುದು. ಆದರೆ ಎಲ್ಲವೂ ಸರಿ ಇರಬೇಕಷ್ಟೆ.ಆದರೆ ಮತದಾರರು ಮಾತ್ರ ಈ ಸಲ ದಾರಿತಪ್ಪಿದ ರಾಜಕಾರಣಿಗಳಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂಬ ವಿಷಯ ರಾಜಕೀಯ ಪಕ್ಷಗಳಿಗೂ ಗೊತ್ತಿಲ್ಲವೆಂದೇನಲ್ಲ. ಹೀಗಾಗಿ ಇಂತಹ ರಾಜಕಾರಣಿ ಗೆಲ್ಲುತ್ತಾನೆ ಅಥವಾ ಇಂತಹ ರಾಜಕೀಯ ಪಕ್ಷ ಜಯಭೇರಿ ಬಾರಿಸಬಹುದು ಎಂದು ಯಾರೂ ಊಹಿಸುವಂತಿಲ್ಲ.ಚುನಾವಣೆಯ ನಂತರ ತಮ್ಮಲ್ಲಿ ಎಲ್ಲರೂ ಗೆದ್ದು ಬರಲು ಸಾಧ್ಯವೇ ಇಲ್ಲ ಎಂಬ ವಾಸ್ತವ ಕೂಡಾ ಹಾಲಿ ಸಂಸದರೆಲ್ಲರಿಗೂ ಗೊತ್ತಿರುವಂತಹದ್ದೇ ಆಗಿದೆ. ಹೀಗಾಗಿ, ವಿರೋಧ ಪಕ್ಷದ ಮಂದಿಗೆ ಪ್ರಸಕ್ತ ಸ್ಥಿತಿ ಅಸಹನೀಯವಾಗಿದ್ದರೂ, ಕಿರಿಕಿರಿ ಎನಿಸುತ್ತಿದ್ದರೂ ಇನ್ನೂ ಇರುವ ಒಂದು ವರ್ಷ ನಾಲ್ಕು ತಿಂಗಳ ಕಾಲಾವಧಿಯನ್ನು ಪೂರ್ಣಗೊಳಿಸುವ ಬಗ್ಗೆಯೇ ಅವರಿಗೆ ಹೆಚ್ಚು ಒಲವು ಇದ್ದಂತಿದೆ.ಹೀಗಾಗಿಯೇ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮಂಡಿಸಲೆತ್ನಿಸಿದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲವೇ ಸಿಗಲಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಕೂಗಾಡುತ್ತಿವೆಯಷ್ಟೆ, ಸರ್ಕಾರವನ್ನು ಬೀಳಿಸಲು ಮಾತ್ರ ಅವುಗಳಿಗೆ ಇಷ್ಟವೇ ಇಲ್ಲ ಎಂದು ವಿರೋಧ ಪಕ್ಷಗಳ ಬಗ್ಗೆಯೂ ಮಮತಾ ಕಿಡಿ ಕಾರಿದ್ದರಲ್ಲಿ ತಪ್ಪೇನೂ ಇಲ್ಲ.ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ತಮಗೆ ಅಗತ್ಯ ಬೆಂಬಲ ಸಿಗುವುದಿಲ್ಲ ಎಂಬುದೂ ತೃಣಮೂಲ ಕಾಂಗ್ರೆಸ್‌ಗೆ ಮೊದಲೇ ಗೊತ್ತಿತ್ತು!ಸರ್ಕಾರವನ್ನು ಬೀಳಿಸಲು 545 ಸದಸ್ಯರಲ್ಲಿ 273 ಮಂದಿಯ ಬೆಂಬಲ ಗಳಿಸಲು ಸಾಧ್ಯವೇ ಇಲ್ಲ ಎನ್ನುವುದು ತೃಣಮೂಲ ಕಾಂಗ್ರೆಸ್‌ನವರಿಗೆ ಅರಿವಿದ್ದರೂ, ಹೀಗೆ ಗದ್ದಲ ಎಬ್ಬಿಸಿ ಅನಗತ್ಯವಾಗಿ ಕಾಂಗ್ರೆಸ್‌ನವರಲ್ಲಿಯೇ ಆತ್ಮವಿಶ್ವಾಸ ಹೆಚ್ಚಿಸಿದಂತಾಯಿತಷ್ಟೇ.

ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಹೂಡಿಕೆ (ಎಫ್‌ಡಿಐ)ಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವಣ ಕಿತ್ತಾಟ ಮೇರೆ ಮೀರಿತ್ತು. ಸರ್ಕಾರ ಏನೇ ನಿರ್ಧಾರ ತೆಗೆದುಕೊಳ್ಳಲಿ ಅದರಿಂದ ಇನ್ನೊಬ್ಬರಿಗೆ ಒಳಿತಾಗುತ್ತದೋ, ಇಲ್ಲವೋ ಎಂಬ ಬಗ್ಗೆ ಒಂದಿಷ್ಟೂ ಯೋಚಿಸದೆ ವಿರೋಧಿಸುವುದಷ್ಟೇ ತನ್ನ ಜವಾಬ್ದಾರಿ ಎಂದು ಬಿಜೆಪಿ ನಂಬಿಕೊಂಡಂತಿದೆ.ಸಂಸತ್ತಿನಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪಡೆದು ಯಾವುದೇ ಕಾರ್ಯಕ್ರಮ ಅಥವಾ ಯೋಜನೆ ರೂಪಿಸುವುದು, ಇಲ್ಲವೇ ತಮ್ಮ ಯೋಜನೆಗಳನ್ನು ಸರ್ವರ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಸಮರ್ಥನೆಗಳನ್ನು ಮುಂದಿಡುವುದು ಇತ್ಯಾದಿ ಚಟುವಟಿಕೆಗಳಿಗಿಂತಲೂ ಯುಪಿಎ ಸರ್ಕಾರ ಲೋಕಸಭೆಯಲ್ಲಿ ಬಹುಮತವನ್ನು ಉಳಿಸಿಕೊಳ್ಳುವುದಕ್ಕಾಗಿ ನಡೆಸುವ ಕಸರತ್ತುಗಳಿಗೇ ತನ್ನ ಹೆಚ್ಚಿನ ಸಮಯವನ್ನು ವ್ಯಯ ಮಾಡುತ್ತಿದೆ.ಸರ್ಕಾರದ ಈ ದೌರ್ಬಲ್ಯವನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ಬಗ್ಗೆಯೂ ಜನರಿಗೂ ಅರಿವಿದೆ. ಇಂತಹ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಯುಪಿಎ ಸರ್ಕಾರವು ಕೆಲವೊಮ್ಮೆ ದೇಶದ ಹಿತಾಸಕ್ತಿಗಳನ್ನು ಬದಿಗೆ ಸರಿಸಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಆರಂಭದಿಂದಲೂ ಇದೇ ಕಸರತ್ತಿನಲ್ಲಿ ತಲ್ಲೆನವಾಗಿದೆ ಎಂದರೆ ಅತಿಶಯೋಕ್ತಿಯಂತೂ ಆಗಲಾರದು.

ಮುಂದಿನ ದಿನಗಳಲ್ಲಿಯೂ ಹೀಗೆಯೇ... ಬಹುಮತ ಗಳಿಸದ ಯಾವುದೇ ಪಕ್ಷ ಅಧಿಕಾರ ಹಿಡಿದರೆ ಇಂತಹ ಪಡಿಪಾಟಲುಗಳ ನಡುವೆಯೇ ದಿನ ಕಳೆಯಬೇಕಾಗುತ್ತದೆ.ದೇಶದ ಒಳಿತಿಗೆ ಅಗತ್ಯವಾಗಿರುವ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷವು ಇತರ ಪಕ್ಷಗಳೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬರಬಹುದು.

ಇಂತಹ ಕೆಲವು ಕಾರ್ಯಕ್ರಮಗಳಂತೂ ಇತರ ಪಕ್ಷಗಳ ನೆರವಿಲ್ಲದೆ ಮಾಡಲು ಸಾಧ್ಯವೇ ಇಲ್ಲ ಎಂಬ ಸತ್ಯವೂ ಸರ್ಕಾರಕ್ಕೆ ಗೊತ್ತಿರುತ್ತದೆ. ಆದರೆ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಇತರ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಮುಂದವರಿಯುವುದಿದೆಯಲ್ಲಾ, ಅದು ನನಗೆ ಇವತ್ತಿಗೂ ಅರ್ಥವಾಗದ ಸಂಗತಿಯೇ ಆಗಿದೆ.

ಹೊಸ ಪರಮಾಣು ಯೋಜನೆಗಳೇ ಆಗಲಿ, ಎಫ್‌ಡಿಐನಂತಹ ವಿಷಯಗಳೇ ಇರಲಿ ಸರ್ಕಾರ ಇತರರೊಡನೆ ಸುದೀರ್ಘ ಚರ್ಚೆ ನಡೆಸಲು ಸಾಧ್ಯ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಇಲ್ಲಿ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ತಿರಸ್ಕಾರದಿಂದ ಕಾಣುವಂತಿಲ್ಲ. ಈ ದಿಸೆಯಲ್ಲಿ ಬಿಜೆಪಿಯೇ ಈಚೆಗೆ ಒಂದು ಹೆಜ್ಜೆ ಮುಂದಿಟ್ಟಿತ್ತು.

ಲೋಕಸಭೆಯಲ್ಲಿ ಉಳಿದುಹೋದ ಕೆಲವು ಮಸೂದೆಗಳಿಗೆ ಹಸಿರು ನಿಶಾನೆ ತೋರುವ ನಿಟ್ಟಿನಲ್ಲಿ ಸರ್ಕಾರಕ್ಕೆ ತಾವು ಬೆಂಬಲ ನೀಡುವುದಾಗಿ ಬಿಜೆಪಿ ಹೇಳಿತು. ಆದರೆ ಸರ್ಕಾರ ಮಾತ್ರ ಈ ಬಗ್ಗೆ ದಿವ್ಯಮೌನ ವಹಿಸಿಬಿಟ್ಟಿತು.ಹಿಂದಿನ ದಿನಗಳ ಕುರಿತ ನೆನಪಿನ ಬುತ್ತಿ ಬಿಚ್ಚಿದಾಗ ಪ್ರಧಾನಿ ಜವಾಹರಲಾಲ್ ನೆಹರು ಅವರು ಇತರರೊಂದಿಗೆ ಮಾತುಕತೆಗೆ, ಚರ್ಚೆಗೆ ಸದಾ ಸಿದ್ಧರಿದ್ದರು. ಒಮ್ಮತಾಭಿಪ್ರಾಯಕ್ಕಾಗಿ ಯತ್ನಿಸುತ್ತಿದ್ದರು. ಅದಕ್ಕೆ ಫಲ ಸಿಗುತ್ತಿರಲಿಲ್ಲವೆನ್ನಿ, ಆದರೂ ನೆಹರು ಪ್ರಯತ್ನಗಳನ್ನು ಮರೆಯಲಾಗದು. ನೆಹರು ಅವರ ನಂತರ ಆ ರೀತಿಯ ಮುಕ್ತ ಚರ್ಚೆ ಮತ್ತು ಒಮ್ಮತಕ್ಕೆ ಬರುವ ಯತ್ನಗಳು ತೀರಾ ವಿರಳವಾಯಿತು.

ಶ್ರೀಮತಿ ಇಂದಿರಾಗಾಂಧಿಯವರಂತೂ ಇಂತಹ ಮಧ್ಯಮ ಹಾದಿಯ ಬಗ್ಗೆ ಹೆಚ್ಚು ನಂಬಿಕೆ ಇರಿಸಿಕೊಂಡಿರಲಿಲ್ಲ. ಇಂತಹದ್ದು ಆಗಬೇಕೆಂದರೆ ಆಗಬೇಕಷ್ಟೆ. ಅನುಕೂಲಸಿಂಧು ರಾಜಕಾರಣಕ್ಕೇ ಹೆಚ್ಚಿನ ಒತ್ತು ಇತ್ತು. ಆ ಕಾಲದಲ್ಲಿ ಬೇಗ ಹೆಚ್ಚು ಹಣ ಮಾಡುವ ಬಗ್ಗೆ ತರಾತುರಿ ಇತ್ತೇ ಹೊರತು, ಒಮ್ಮತಾಭಿಪ್ರಾಯ, ಮಾತುಕತೆ ಇತ್ಯಾದಿಗಳ ಬಗ್ಗೆ ತಾಳ್ಮೆಯೇ ಇರಲಿಲ್ಲ.

ಇದಕ್ಕೆ ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದ ಅವಧಿಯನ್ನೇ ಸ್ಪಷ್ಟ ನಿದರ್ಶನವನ್ನಾಗಿ ನೀಡಬಹುದು. ಚಂದ್ರಶೇಖರ್ ಕೇವಲ ನಲ್ವತ್ತು ದಿನಗಳ ಕಾಲವಷ್ಟೇ ಪ್ರಧಾನಿಯಾಗಿದ್ದುದು. ಅಷ್ಟೇ ದಿನಗಳಲ್ಲಿ ಅವರ ಸಂಪುಟದಲ್ಲಿ ಸಚಿವರು ಅಪಾರ ಹಣ ದೋಚಿದ್ದರು. ಹಿಂದೆ ನಾಲ್ಕು ದಶಕಗಳ ಕಾಲ ಅಧಿಕಾರದಲ್ಲಿದ್ದವರಿಗಿಂತಲೂ ಹೆಚ್ಚು ಹಣವನ್ನು ಈ 40 ದಿನಗಳ ಕಾಲ ಸಚಿವರಾಗಿದ್ದವರೇ ಮಾಡಿದ್ದರು ಎಂಬ ಮಾತಿದೆ.ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಂಡಲ್ ವರದಿಗೆ ಸಂಬಂಧಿಸಿದಂತೆ ಒಮ್ಮತಾಭಿಪ್ರಾಯಕ್ಕೆ ಬರಲು ಪ್ರಯತ್ನಿಸಲೇ ಇಲ್ಲ. ಆದರೆ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗದ ಕಡತಗಳನ್ನು ಕಪಾಟಿನ ಒಳಗಿನಿಂದ ಹೊರ ತೆಗೆಯಲೇ ಇಲ್ಲ.ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುವುದು ಇಂದಿರಾ ಗಾಂಧಿಯವರಿಗೆ ಚೆನ್ನಾಗಿಯೇ ಗೊತ್ತಿತ್ತು. ಆದರೆ ಇದರಿಂದ ಸಿಗಬಹುದಾದ ರಾಜಕೀಯ ಲಾಭದ ಲೆಕ್ಕಾಚಾರ ವಿ.ಪಿ.ಸಿಂಗ್ ಅವರಿಗೆ  ಗೊತ್ತಿತ್ತು. ತಾವು ಇದರ ಪರ ಗಟ್ಟಿಯಾಗಿ ನಿಂತರೆ ಸರ್ಕಾರ ಒಡೆಯುತ್ತದೆ ಎಂಬ ಅರಿವೂ ಅವರಿಗಿತ್ತು. ಆ ನಂತರದ ಏಳುಬೀಳುಗಳಲ್ಲಿ ಅವರಿಗೆ ಗೆಲ್ಲುವ ಕನಸಿತ್ತು.ಪ್ರಸಕ್ತ ಪರಿಸ್ಥಿತಿ ಬಲು ಗೊಂದಲಮಯವಾಗಿದೆ. ಒಮ್ಮತಾಭಿಪ್ರಾಯ ಮೂಡಿದರೆ ಅದೊಂದು ಅಚ್ಚರಿ ಎನ್ನುವಂತಿದೆ. ಮನಮೋಹನ್ ಸಿಂಗ್ ಅವರು ಯಾವ ಮಟ್ಟಕ್ಕೆ ಹೋಗಿದ್ದಾರೆಂದರೆ ತಾವೇ ತೆಗೆದುಕೊಳ್ಳುವ ಒಮ್ಮತದ ನಿರ್ಧಾರದಿಂದಲೇ ದೇಶದ ಆರ್ಥಿಕಾಭಿವೃದ್ಧಿಯ ಶಕ್ತಿ ಅಡಗಿದೆ ಎಂದಿದ್ದಾರೆ. ಬಿಜೆಪಿಯವರಂತೂ ತಮಗೆ ಕಾಂಗ್ರೆಸ್ ವಿರುದ್ಧದ ಹೋರಾಟವೊಂದೇ ಮಂತ್ರ ಎಂದುಕೊಂಡಿದ್ದಾರೆ.

ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಹೋರಾಟವು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ದೇಶದ ಪ್ರಗತಿಗೆ ಮಾರಕ ಎನಿಸಿದರೂ, ಅದನ್ನೇ ಮುಂದುವರಿಸಲು ಬಿಜೆಪಿ ಟೊಂಕಕಟ್ಟಿ ನಿಂತಿದೆ. ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿ ಆ ಮೂಲಕ ಅಧಿವೇಶನದ ಇಡೀ ಕಲಾಪಕ್ಕೇ ಅಡ್ಡಿ ಮಾಡಿದರು. ಯಾವುದೇ ಪ್ರತಿಭಟನೆ ಈ ತೆರನಾದ ಅತಿರೇಕಕ್ಕೂ ಹೋಗಬಾರದಲ್ಲಾ. ಆ ಬಗ್ಗೆ ಚರ್ಚೆ ನಡೆದಿದ್ದರೆ ಅದರ ಎಲ್ಲಾ ಆಯಾಮಗಳ ಬಗ್ಗೆ ಜನರಿಗೂ ಗೊತ್ತಾಗುತಿತ್ತು.ಸದಾ ರಾಜಕೀಯ ಲಾಭ ನಷ್ಟಗಳ ಬಗ್ಗೆಯೇ ಯೋಚಿಸುತ್ತಿರುವ ರಾಜಕೀಯ ಪಕ್ಷಗಳು ವಿರೋಧ ಮಾಡುವುದನ್ನು ನಿಲ್ಲಿಸುವುದು ಸಾಧ್ಯವೇ? ಅದೇನೇ ಇರಬಹುದು, ವಿಭಿನ್ನ ರಾಜಕೀಯ ಪಕ್ಷಗಳ ನೇತಾರರು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಒಗ್ಗೂಡಿ ಚರ್ಚಿಸುವ ಮತ್ತು ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಂತೂ ಇದ್ದೇ ಇದೆ. ಅಂತಹದ್ದೊಂದು ವಾತಾವರಣ ರೂಪುಗೊಳ್ಳಬೇಕಿದೆ.

ಭಾರತ ಇವತ್ತು ಯುದ್ಧದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿಲ್ಲ, ನಿಜ. ಅದರೆ ಈ ನಾಡಿನ ಬಹಳಷ್ಟು ಜನರನ್ನು ಕಿತ್ತು ತಿನ್ನುತ್ತಿರುವ ಬಡತನವನ್ನು ಹೋಗಲಾಡಿಸಲು ಸಮರ್ಪಕ ಯೋಜನೆ, ಕಾರ್ಯಕ್ರಮ ರೂಪಿಸುವ ದಿಸೆಯಲ್ಲಾದರೂ ಎಲ್ಲರೂ ಒಗ್ಗೂಡಿ ನಡೆಯಲೇ ಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry