ರಾಜಕೀಯ ವಲಸೆ ಪರ್ವಕ್ಕೆ ಸನ್ನದ್ಧ ಸ್ಥಿತಿ

7

ರಾಜಕೀಯ ವಲಸೆ ಪರ್ವಕ್ಕೆ ಸನ್ನದ್ಧ ಸ್ಥಿತಿ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ರಾಜಕೀಯ ವಲಸೆ ಪರ್ವಕ್ಕೆ ಸನ್ನದ್ಧ ಸ್ಥಿತಿ

ಪ್ರತೀ ಬಾರಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಿನ್ನಮತೀಯ ಬಣಗಳು, ಆಕಾಂಕ್ಷಿಗಳು, ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುವ ಸಾಧ್ಯತೆ ಇಲ್ಲದ ಮುಖಂಡರ ಪಕ್ಷ ಜಿಗಿತದಿಂದಾಗಿ ರಾಜಕೀಯ ವಲಸೆ ಪರ್ವ ಆರಂಭವಾಗುತ್ತದೆ. ಈ ವಲಸೆ ಋತುವಿನ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ? ರಾಜಕೀಯ ಪಕ್ಷಗಳ ನಿರ್ವಾತವನ್ನು ಮತ್ತು ಅವು ನಿರ್ಧಾರ ತಳೆಯುವ ಸ್ವರೂಪವನ್ನು ಇದು ಪ್ರತಿಫಲಿಸುತ್ತದೆಯೇ? ಕರ್ನಾಟಕವು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ ಗಮನಹರಿಸುವುದು ಹಾಗೂ ವಿಶ್ಲೇಷಿಸುವುದು ಮುಖ್ಯ.

ರಾಜ್ಯದಲ್ಲಿರುವ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳು ಈ ಮನೋಧೋರಣೆ ಪ್ರತಿನಿಧಿಸುತ್ತಿರುವುದು ಆಸಕ್ತಿಕರ ಸಂಗತಿ. ಮೊದಲಿಗೆ ಆಡಳಿತಾರೂಢ ಕಾಂಗ್ರೆಸ್ ಕುರಿತು ನೋಡೋಣ. ಆ ಪಕ್ಷದ ಪ್ರಚಾರ ಅಭಿಯಾನದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 12 ವರ್ಷಗಳ ಹಿಂದೆ ಜನತಾದಳದ ಸದಸ್ಯರಾಗಿದ್ದವರು. ಜನತಾ ಪಕ್ಷ, ಜನತಾದಳ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಮುನ್ನೆಲೆಗೆ ಬರುತ್ತಾ ಸಾಗಿದ ಅವರು ಎರಡು ಬಾರಿ ಉಪ ಮುಖ್ಯಮಂತ್ರಿಯೂ ಆಗಿದ್ದವರು. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿರುವ ಸದ್ಯದ ತಳಮಳವೆಂದರೆ ‘ಹಳಬರು’ ಮತ್ತು ‘ಹೊಸಬರ’ ವಿಭಜನೆಯೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜನತಾದಳದಿಂದ ಕಾಂಗ್ರೆಸ್ ಪ್ರವೇಶಿಸಿದ ಅವರ ಅನುಯಾಯಿಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ ಎಂಬುದು ಹಳೆಯ ಕಾಂಗ್ರೆಸ್ಸಿಗರ ಅಸಮಾಧಾನ.

ಅಧಿಕಾರದ ನಿರೀಕ್ಷೆಯಲ್ಲಿರುವ ಮತ್ತೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಚಿತ್ರಣವೂ ಇದೇ ರೀತಿ ಇದೆ. ಅದರ ಮುಖ್ಯಮಂತ್ರಿ ಅಭ್ಯರ್ಥಿ ಕೇವಲ ಐದು ವರ್ಷಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆದಿದ್ದ ಕೆಜೆಪಿಯ ಮುಖ್ಯಸ್ಥರಾಗಿದ್ದರು. ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಹಾಗೂ ತಾವು ಇಲ್ಲದೆ ರಾಜ್ಯದಲ್ಲಿ ಬಿಜೆಪಿಗೆ ಅವಕಾಶವಿಲ್ಲ ಎಂಬುದನ್ನು ಸಾಬೀತುಪಡಿಸುವುದು ತಮ್ಮ ಗುರಿ ಎಂದು ಆ ಸಂದರ್ಭದ ಪ್ರಚಾರದ ವೇಳೆ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.

ಅದಾದ ನಂತರದಿಂದ ಈವರೆಗೆ ಸಾಕಷ್ಟು ಬದಲಾವಣೆಗಳಾಗಿವೆ. ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು 2014ರ ಲೋಕಸಭಾ ಚುನಾವಣೆಗೆ ಮುಂಚೆಯೇ ಬಿಜೆಪಿಗೆ ವಾಪಸಾದರು. ಯಡಿಯೂರಪ್ಪ ಅವರೀಗ ಪಕ್ಷದ ಅಧ್ಯಕ್ಷರಾಗಿರುವುದರ ಜತೆಗೆ ಘೋಷಿತ ಮುಖ್ಯಮಂತ್ರಿ ಅಭ್ಯರ್ಥಿ ಕೂಡ. ಯಡಿಯೂರಪ್ಪ ಬೆಂಬಲಿಗರು ಮತ್ತು ವಿರೋಧಿಗಳು ಎಂಬ ಕೂಟಗಳು ಈ ಪಕ್ಷದ ಮುಖ್ಯವಾದ ಬಿಕ್ಕಟ್ಟು. ಯಡಿಯೂರಪ್ಪ ಅವರು ಹಿಂದೆ ಯಾರು ತಮ್ಮೊಂದಿಗೆ ಕೆಜೆಪಿಗೆ ಬಂದಿರಲಿಲ್ಲವೋ ಅವರನ್ನು ಈಗ ಮೂಲೆಗುಂಪು ಮಾಡುತ್ತಿದ್ದಾರೆ ಎಂಬುದು ವಿರೋಧಿಗಳ ಆರೋಪ.

ಈ ಹಿನ್ನೆಲೆಯಲ್ಲಿ, ಎರಡೂ ಪ್ರಮುಖ ರಾಜಕೀಯ ಪಕ್ಷಗಳು 'ವಲಸೆ ಪರ್ವ'ಕ್ಕೆ ರತ್ನಗಂಬಳಿಯ ಸ್ವಾಗತ ನೀಡಲು ಸನ್ನದ್ಧವಾಗಿದ್ದು, ನಾಯಕತ್ವದ ಸ್ವರೂಪದಲ್ಲಿಯೇ ಅದು ಪ್ರತಿಬಿಂಬಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಧಿಕಾರಾರೂಢ ಪಕ್ಷ ರಚಿಸುವ ಮಂತ್ರಿ ಮಂಡಲ ಗಮನಿಸಿದರೂ ಇದು ಗೋಚರಿಸುತ್ತದೆ. ಪಕ್ಷಗಳು ಮತ್ತು ನಾಯಕರು ಈ ‘ವಲಸೆ’ಯನ್ನು ತಮ್ಮ ಬೆಂಬಲಿಗರ ತಳಹದಿ ವಿಸ್ತರಿಸಿಕೊಳ್ಳುವ ಹಾಗೂ ಪ್ರಮುಖ ಸಾಮಾಜಿಕ ಸಮೂಹಗಳಲ್ಲಿ ತಮ್ಮ 'ಇರುವಿಕೆ'ಯನ್ನು ಗಟ್ಟಿಗೊಳಿಸಿಕೊಳ್ಳಲು ಇರುವ ಅವಕಾಶ ಎಂಬ ದೃಷ್ಟಿಯಲ್ಲಿ ನೋಡುತ್ತಾರೆ. ‘ವಲಸೆ’ ಸ್ವಾಗತಿಸದಿದ್ದರೆ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಅಸಾಧ್ಯ ಎಂಬಂತೆಯೂ ವ್ಯಾಖ್ಯಾನಿಸುತ್ತಾರೆ.

ಈ ರಾಜಕೀಯ ವಲಸೆ ಪ್ರಾಮುಖ್ಯದ ವಿಶ್ಲೇಷಣೆಯ ಸಂದರ್ಭದಲ್ಲಿ ನಾಲ್ಕು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ, ರಾಜಕೀಯ ನಾಯಕರು ಹೇಗೆ ಪಕ್ಷ ಸೂತ್ರಗಳನ್ನು ಸುಲಭವಾಗಿ ಮುರಿಯುತ್ತಾರೆ ಹಾಗೂ ಪಕ್ಷಗಳು ಹೇಗೆ ‘ತೆರೆದ ಬಾಹು’ಗಳಿಂದ ಹೊಸ ವಲಸಿಗರನ್ನು ಸ್ವಾಗತಿಸುತ್ತವೆ ಎಂಬುದು ಪಕ್ಷಗಳು ಮತ್ತು ನಾಯಕರಿಗೆ ಸೈದ್ಧಾಂತಿಕ ನಿಲುವು ಅಥವಾ ಮೌಲ್ಯಗಳ ಬಗ್ಗೆ ದೀರ್ಘಾವಧಿ ಬದ್ಧತೆ ಇಲ್ಲದಿರುವುದಕ್ಕೆ ಕೈಗನ್ನಡಿಯಾಗಿದೆ. ಈ ಬದ್ಧತೆಯ ಕೊರತೆಯು ನಾಯಕರಿಗೆ ಯಾವುದೇ ಅಳುಕಿಲ್ಲದೆ ಪಕ್ಷದಿಂದ ಪಕ್ಷಕ್ಕೆ ಜಿಗಿಯಲು, ಇನ್ನೊಂದೆಡೆ ಪಕ್ಷಗಳಿಗೆ ರೆಪ್ಪೆಯನ್ನೂ ಮಿಟುಕಿಸದೆ ವಲಸಿಗರನ್ನು ಸ್ವಾಗತಿಸಲು ಅವಕಾಶ ಕಲ್ಪಿಸುತ್ತದೆ.

ಎರಡನೆಯದಾಗಿ, ನಾಯಕರು ರಾಜಕೀಯ ನಿಷ್ಠೆ ಬದಲಿಸಿದಾಗ ತಮ್ಮೊಂದಿಗೆ ಬೆಂಬಲಿಗರನ್ನೂ ಅಲ್ಲಿಗೆ ಕರೆದೊಯ್ಯುತ್ತಾರೆ. ಇದು ಜಿಲ್ಲಾ ಅಥವಾ ಸ್ಥಳೀಯ ಹಂತದಲ್ಲಿ ಪಕ್ಷದ ಸಂಘಟನೆಯ ಸ್ಥಿರತೆ ಎಷ್ಟೆಂಬುದನ್ನು ಸೂಚಿಸುತ್ತದೆ. ನಾಯಕರು ಮತ್ತು ಅವರ ಅನುಯಾಯಿಗಳು ಅಡೆತಡೆಯಿಲ್ಲದೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುತ್ತಾರೆ ಹಾಗೂ ಮತದಾರರ ಬಳಿ ಹೇಗೆ ಅಳುಕಿಲ್ಲದೆ ತೆರಳುತ್ತಾರೆ ಎಂಬುದು ಸ್ಥಳೀಯ ಮಟ್ಟದಲ್ಲಿ ಪಕ್ಷದ ಅಸ್ಥಿರತೆಯ ಅಳತೆಗೋಲು ಕೂಡ ಆಗಿದೆ. ಇದು ವಿಶೇಷವಾಗಿ ಟಿಕೆಟ್ ಹಂಚಿಕೆ ವೇಳೆ ಭಿನ್ನಮತೀಯ ನಡೆ ಹಾಗೂ ಆಂತರಿಕ ಕಿತ್ತಾಟಕ್ಕೆ ಕಾರಣವಾಗುತ್ತದೆ. ಆದರೆ ಪಕ್ಷಗಳು ಈ ಪ್ರವೃತ್ತಿಯನ್ನು ಅನಿವಾರ್ಯವಾದ ಚಿಕ್ಕ ಅನನುಕೂಲ ಎಂಬಂತೆ ಒಪ್ಪಿಕೊಂಡುಬಿಟ್ಟಿವೆ.

ಮೂರನೆಯದಾಗಿ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೀಗೆ ವಲಸೆ ಹೋಗಲು ಇರುವ ಸಾಮಾನ್ಯ ಕಾರಣಗಳೇನು? ಇಂತಹ ಪ್ರಕರಣಗಳನ್ನು ಬಿಡಿಬಿಡಿಯಾಗಿ ನೋಡಿದಾಗ ಇದಕ್ಕೆ ಹಲವು ಕಾರಣಗಳಿವೆ ಎಂಬುದು ಗೊತ್ತಾಗುತ್ತದೆ. ಪಕ್ಷದ ರಾಜ್ಯ, ಜಿಲ್ಲಾ ಮಟ್ಟದ ನಾಯಕತ್ವದೊಂದಿಗೆ ಅಸಮಾಧಾನ ಮತ್ತು ಪಕ್ಷದಲ್ಲಿ ಭವಿಷ್ಯ ಆಶಾದಾಯಕವಾಗಿಲ್ಲದಿರುವುದು ಇದರ ಹಿಂದೆ ಕೆಲಸ ಮಾಡಿರುತ್ತದೆ. ಹಾಗೆಯೇ, ಸ್ಥಳೀಯ ಆಕಾಂಕ್ಷಿ ಅಭ್ಯರ್ಥಿಯ ಎದುರಾಳಿಯೇ ತನ್ನ ಪಕ್ಷ ಸೇರಿದಾಗ ಆ ಆಕಾಂಕ್ಷಿ ತನಗೆ ಅನುಕೂಲಕರವಾದ ಬೇರೊಂದು ನೆಲೆ ಹುಡುಕತೊಡಗುತ್ತಾನೆ.

ಇವುಗಳ ಜತೆಗೆ ಆಕಾಂಕ್ಷಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯಲಾರದು ಎಂಬ ಸನ್ನಿವೇಶ ಸೃಷ್ಟಿಯಾಗುತ್ತಿದೆ ಎಂದು ಅನ್ನಿಸಿದಾಗ ಆತ ಬೇರೆ ಪಕ್ಷದೆಡೆಗೆ ವಾಲುತ್ತಾನೆ. ಅಂಥವರನ್ನು ಬೇರೆ ಪಕ್ಷಗಳು ಕೂಡ ಟಿಕೆಟ್ ನೀಡುವ ಭರವಸೆ ಇತ್ತು ಬರಮಾಡಿಕೊಳ್ಳುತ್ತವೆ. ತಾನಿರುವ ಪಕ್ಷದಲ್ಲಿ ಸಚಿವ ಸ್ಥಾನ ದೊರೆಯದೇ ಇರುವುದು ಹಾಗೂ ಅಧಿಕಾರ ಹಿಡಿಯುವ ನಿರೀಕ್ಷೆ ಮೂಡಿಸಿದ ಪಕ್ಷದಲ್ಲಿ ಸಚಿವ ಸ್ಥಾನದ ಭರವಸೆ ದೊರೆಯುವುದು ಕೂಡ ಈ ಪಕ್ಷ ಜಿಗಿತಕ್ಕೆ ಪ್ರಮುಖ ಕೊಡುಗೆ ನೀಡಿವೆ.

ಕೊನೆಯದಾಗಿ, ಈ ವಲಸಿಗರು ಹೊಸ ರಾಜಕೀಯ ವೇಷ ತೊಟ್ಟ ನಂತರವೂ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಜಯ ಗಳಿಸಬಲ್ಲರೇ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಇದಮಿತ್ಥಂ ಎಂಬ ನಿರ್ದಿಷ್ಟ ಉತ್ತರ ಇಲ್ಲ. ಇದು ಅಭ್ಯರ್ಥಿಯು ತನ್ನ ಕ್ಷೇತ್ರದಲ್ಲಿ ಹೊಂದಿರುವ ರಾಜಕೀಯ ಹಿಡಿತವನ್ನು ಅವಲಂಬಿಸಿರುತ್ತದೆ. ಕ್ಷೇತ್ರದ ಆಗುಹೋಗುಗಳಿಗೆ ಸಂಬಂಧಿಸಿ

ದಂತೆ ಮೊದಲಿನಿಂದಲೂ ಸಾಕಷ್ಟು ಗಮನ, ಸಮಯ ನೀಡಿದ್ದ ಅಭ್ಯರ್ಥಿಯೇ ಆದಲ್ಲಿ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಅಂಥವರು ಗೆದ್ದ ಉದಾಹರಣೆಗಳು ಇವೆ. ಇಂತಹ ನಾಯಕರನ್ನು ತಮಗೆ ಬಹುಮತ ಗಳಿಸಲು ನೆರವಾಗುತ್ತಾರೆಂದು ಭಾವಿಸುವ ರಾಜಕೀಯ ಪಕ್ಷಗಳು, ಅವರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಬಯಸುತ್ತವೆ. ಆದರೆ ಕ್ಷೇತ್ರದ ಬಗ್ಗೆ ಗಮನ ನೀಡದೆ ರಾಜ್ಯದ ರಾಜಧಾನಿಯಲ್ಲೋ ಅಥವಾ ಇನ್ನೆಲ್ಲೋ ಇದ್ದು ಅಪರೂಪಕ್ಕೆ ದರ್ಶನ ಕೊಡುವಂತಹ ಅಭ್ಯರ್ಥಿಗಳು ಪಕ್ಷಾಂತರ ಮಾಡಿ ಸ್ಪರ್ಧಿಸಿದರೆ ಅಂಥವರನ್ನು ಮತದಾರರು ಕಿತ್ತೆಸೆಯುತ್ತಾರೆ.

ಈ ಬಾರಿ ರಾಜಕೀಯ ವಲಸೆ ಆರಂಭಿಕ ಹಂತದಲ್ಲಿದ್ದು ಮುಂಬರುವ ದಿನಗಳಲ್ಲಿ ರಾಜಕೀಯ ನಿಷ್ಠೆಯ ಸ್ಥಿತ್ಯಂತರ ತೀವ್ರತೆ ಪಡೆಯುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry