ಗುರುವಾರ , ಮಾರ್ಚ್ 4, 2021
19 °C

ರಾಜಕೀಯ ಸಾಧ್ಯತೆಗಳ ಬಾಗಿಲು ತೆರೆದ ನಿತೀಶ್‌...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ರಾಜಕೀಯ ಸಾಧ್ಯತೆಗಳ ಬಾಗಿಲು ತೆರೆದ ನಿತೀಶ್‌...

ಇದು ಇತಿಹಾಸದ ವ್ಯಂಗ್ಯ ಇರಬಹುದು, ವಿಪರ್ಯಾಸ ಇರಬಹುದು. ಅಥವಾ, ರಾಜಕೀಯದಲ್ಲಿ ಯಾರೂ ಕಾಯಂ ಶತ್ರುಗಳಲ್ಲ; ಕಾಯಂ ಮಿತ್ರರಲ್ಲ ಎಂಬ ಸರಳ ವ್ಯಾಖ್ಯಾನವೂ ಇರಬಹುದು.ಜನತಾ ಪಕ್ಷದ ಹುಟ್ಟಿನ ಮೂಲ ಹುಡುಕಿಕೊಂಡು ಹೊರಟರೆ, ‘1975ರಿಂದ 77ರ ನಡುವಿನ ಅವಧಿಯಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತುಸ್ಥಿತಿಯನ್ನು ವಿರೋಧಿಸಲು ಈ ಪಕ್ಷ ಹುಟ್ಟಿಕೊಂಡಿತು’ ಎಂಬ ವಿವರಣೆ ಮೊದಲ ಸಾಲಿನಲ್ಲಿಯೇ ಸಿಗುತ್ತದೆ. ಕಾಲ ಸರಿಯುತ್ತ ಎಲ್ಲವೂ ಮರೆತು ಹೋಗುತ್ತದೆ. ಹಿಂದೆ ಎದುರು ಬದುರಾಗಿ ನಿಂತು ಹೋರಾಡಿದವರು ಪರಸ್ಪರರ ಹೆಗಲ ಮೇಲೆ ಕೈ ಹಾಕುವಷ್ಟು ಆತ್ಮೀಯ ಮಿತ್ರರು ಆಗಿ ಬಿಡುತ್ತಾರೆ.ಶನಿವಾರವಷ್ಟೇ ಜನತಾ ಪರಿವಾರದ ನಿತೀಶ್‌ ಕುಮಾರ್‌ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತೀಯ ಪ್ರಜಾತಂತ್ರದ ಇತಿಹಾಸದಲ್ಲಿ ಅವರ ಸತತ ಮೂರನೇ ಗೆಲುವು ಅನೇಕ ಮಹತ್ವದ ಕಾರಣಗಳಿಗಾಗಿ ಒಂದು ದೊಡ್ಡ ಅಧ್ಯಾಯವಾಗಿ ದಾಖಲಾಗುತ್ತದೆ. ಆದರೆ, ಇಲ್ಲಿಯೂ ಅನೇಕ ವಿಪರ್ಯಾಸಗಳು ಇವೆ: ಲಾಲುಪ್ರಸಾದ್ ಅವರ ಆಳ್ವಿಕೆಯನ್ನು, ಕಾರ್ಯವೈಖರಿಯನ್ನು ವಿರೋಧಿಸಿ ಬಿಹಾರದ ರಾಜಕೀಯದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡವರು ನಿತೀಶ್‌. ಈಗ ಅವರು ಲಾಲು ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಎಂದರೆ ತಮ್ಮ ನಂತರ ಎರಡು, ಮೂರು ಮತ್ತು ನಾಲ್ಕನೆಯವರಾಗಿ ಲಾಲು ಪಕ್ಷದವರು ಪ್ರಮಾಣ ವಚನ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ. ಎರಡು ಮತ್ತು ಮೂರನೆಯವರು ಲಾಲು ಅವರ ಮಕ್ಕಳೇ ಆಗಿದ್ದಾರೆ. ಅದರಲ್ಲಿ ಒಬ್ಬ ಮಗನ ವಿದ್ಯಾಭ್ಯಾಸ ಒಂಬತ್ತನೇ ತರಗತಿಯನ್ನೂ ದಾಟಿಲ್ಲ!ನಿತೀಶ್‌ ಅವರಿಗೆ ಕಷ್ಟವಾಗುತ್ತಿರಬಹುದು. ಇನ್ನೂ ಕಷ್ಟದ ದಿನಗಳು ಅವರಿಗೆ ಮುಂದೆ ಎದುರಾಗಬಹುದು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಕುರ್ಚಿಯಲ್ಲಿ ಕುಳಿತು ಉಸಿರು ಬಿಡುವ ಮೊದಲೇ ಅವರಿಗೆ ದೆಹಲಿ ಗದ್ದುಗೆಯ ಕನಸು ಬೀಳುವಂತೆ ಸುತ್ತಲೂ ಇದ್ದವರು ಮಾಡುತ್ತಿದ್ದಾರೆ. ನಿಜ, ಈಗಿನ ಪ್ರಕಾರ, 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಎದುರು ನಿಲ್ಲುವ ಏಕೈಕ ಹುರಿಯಾಳು ನಿತೀಶ್‌ ಅವರೇ ಆಗಿರುತ್ತಾರೆ. ದೆಹಲಿಗೆ ಹೊರಡಲು ನಿತೀಶ್‌ ಸಜ್ಜಾದರೆ ಬಿಹಾರ ರಾಜ್ಯ ಯಾರ ಕೈಗೆ ಸಿಗುತ್ತದೆ ಎಂದು ಕಣಿ ಹೇಳಲು ಯಾವ  ದೊಡ್ಡ ಜ್ಯೋತಿಷಿಯೂ ಬೇಕಾಗಿಲ್ಲ. ಏಕೆಂದರೆ ಈಗಾಗಲೇ ತಮ್ಮ ಚಿಕ್ಕ ಮಗನನ್ನು ಉಪಮುಖ್ಯಮಂತ್ರಿ ಗಾದಿಯ ಮೇಲೆ ಲಾಲು ಕೂಡ್ರಿಸಿಯಾಗಿದೆ!

ಈಗ, ಬರೀ ನಿತೀಶ್‌ ಮಾತ್ರ ತಾವು ನಂಬಿದ ತತ್ವಗಳ ಜೊತೆಗೆ ರಾಜಿ ಮಾಡಿಕೊಂಡಿಲ್ಲ. ನಿತೀಶ್‌ ಪ್ರಮಾಣವಚನಕ್ಕೆ ಸಾಕ್ಷಿಯಾಗಲು ಬಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ಲಾಲು ಅವರನ್ನು ತಬ್ಬಿಕೊಂಡು ಫಜೀತಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ  ವಿರುದ್ಧ ಈಗಾಗಲೇ ದಾಳಿ ಶುರುವಾಗಿದೆ. ತತ್ವಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲು ಸಾಧ್ಯವೇ ಇಲ್ಲವೇನೋ?  ತೀರಾ ಈಚಿನವರೆಗೆ ಲಾಲು ಅವರ ಭ್ರಷ್ಟಾಚಾರದ ವಿರುದ್ಧ ಕಿಡಿ ಕಾರುತ್ತಿದ್ದ ಕೇಜ್ರಿವಾಲ್‌ ಅವರಿಗೆ ಇಷ್ಟು ಬೇಗ ಲಾಲು ಅವರ ಜೊತೆಗೇ ವೇದಿಕೆ ಹಂಚಿಕೊಳ್ಳಬೇಕಾಗಬಹುದು, ಸ್ವಲ್ಪ ಮುಂದೆ ಹೋಗಿ ಅವರನ್ನು ತಬ್ಬಿಕೊಳ್ಳಲೂ ಬೇಕಾಗಬಹುದು ಎಂದು ಗೊತ್ತಿರಲಿಲ್ಲವೋ ಏನೋ?ನಿತೀಶ್‌ ಕೂಡ ಅಷ್ಟೇ. ಒಂದು ಭೂತವನ್ನು ಎದುರಿಸಲು ಇನ್ನೊಂದು ಭೂತವನ್ನು  ತಬ್ಬಿಕೊಂಡರು. ಅವರಿಗೆ ಬಿಜೆಪಿ ಜೊತೆಗೆ ಸಮಸ್ಯೆ ಇರಲಿಲ್ಲ. ಆದರೆ, ನರೇಂದ್ರ ಮೋದಿ ಅವರ ಜೊತೆಗೆ ಸಮಸ್ಯೆ ಇತ್ತು. ‘ಕೋಮುವಾದ’ ಮತ್ತು ‘ಭ್ರಷ್ಟಾಚಾರ’ದ ನಡುವೆ ಅವರು ಈಗ ಭ್ರಷ್ಟಾಚಾರವನ್ನು ಆಯ್ದುಕೊಂಡಿದ್ದಾರೆ. ರಾಜಕೀಯ ಎಂಬುದೇ ಸಾಧ್ಯತೆಗಳ ಒಂದು ಹುಡುಕಾಟ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ತಮ್ಮ ಪಕ್ಷ ದೂಳಿಪಟ ಆಗುತ್ತಿದ್ದಂತೆಯೇ ನಿತೀಶ್‌ ತಮ್ಮ ರಾಜಕೀಯ ಕಡುವೈರಿ ಲಾಲು ಅವರಿಗೆ ಕರೆ ಮಾಡಿ ಮೈತ್ರಿಯ ಹಸ್ತ ಮುಂದೆ ಚಾಚಿದ್ದರು. ಅದಕ್ಕೂ ಮುಂಚೆಯೇ ನರೇಂದ್ರ ಮೋದಿಯವರು, ‘ಆಗಿದ್ದು ಆಗಿ ಹೋಯಿತು. ಇನ್ನು ಮುಂದೆ ನಾವೂ ನೀವು ಜೊತೆಯಾಗಿ ಹೋಗೋಣ’ ಎಂದು ಒಂದು ಕರೆ ಮಾಡಿದ್ದರೆ ಇತಿಹಾಸ ಮತ್ತೆ ಬದಲಾಗುತ್ತಿತ್ತೋ ಏನೋ? ಈಗ ನಿತೀಶ್‌ ಎಷ್ಟು ಎತ್ತರವಾಗಿ ಬೆಳೆದು ನಿಂತರು ಎಂದರೆ ಮೋದಿ ಅವರಿಗೇ ಪ್ರತಿಸ್ಪರ್ಧಿ ಎನ್ನುವಂತೆ ಆಯಿತು. ಇದೆಲ್ಲ ಒಂದು ರೀತಿ ಒಳ್ಳೆಯದೇ ಆಯಿತು. ಯಾವ ಅಧಿಕಾರವೂ ಪ್ರಶ್ನಾತೀತ ಎನ್ನುವಂತೆ ಆಗಬಾರದು. ಯಾರಾದರೂ ಒಬ್ಬರು ಸವಾಲು ಹಾಕುವವರು ಇದ್ದರೆ ಒಂದು ಅಧಿಕಾರ ವಿಶೃಂಖಲ ಆಗುವುದನ್ನು ತಪ್ಪಿಸಬಹುದು. ಮೋದಿ ಅವರಿಗೆ ತಮ್ಮ ಮುಂದಿನ ಹಾದಿ ಅಡೆತಡೆಯಿಲ್ಲದ್ದು ಅಲ್ಲ ಎಂದು ಈಗ ಗೊತ್ತಾಗಿರಬಹುದು. ಗೊತ್ತಾಗುವುದು ಒಳ್ಳೆಯದು. ಆಕಾಶದಲ್ಲಿ ಇರುವ ಮೋದಿಯವರು ಇನ್ನು ಮುಂದೆ ನೆಲದಲ್ಲಿ ಬೇರು ಬಿಡಲು ಗಮನ ಹರಿಸಬಹುದು.

ಏನೆಲ್ಲ ವಿರೋಧಾಭಾಸಗಳು, ಇಕ್ಕಟ್ಟುಗಳು ಇದ್ದಾಗಲೂ ವಿರೋಧ ಪಕ್ಷಗಳಿಗೆ ನಿತೀಶ್‌ ಗೆಲುವು ಒಂದು ಭರವಸೆಯಾಗಿ ಕಾಣಿಸಿದೆ. ಇಲ್ಲವಾಗಿದ್ದರೆ ಇಷ್ಟು ಜನ ವಿರೋಧ ಪಕ್ಷಗಳ ನಾಯಕರು ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುತ್ತಿರಲಿಲ್ಲ. ಬಿಜೆಪಿಯ ‘ಏಕಚಕ್ರಾಧಿಪತ್ಯ’ವನ್ನು ವಿರೋಧಿಸಲು ನಿತೀಶ್‌ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ತಮ್ಮ ತಮ್ಮ ರಾಜ್ಯಗಳಲ್ಲಿ ಚಕ್ರಾಧಿಪತಿಗಳೇ ಆಗಿರುವ ಕೆಲವರು ದೇಶದ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸಲು ಪರಸ್ಪರರ ನೆರವನ್ನು ಬಯಸುತ್ತಾರೆ. ಇದು ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಸುಧಾರಣೆಗೂ ಒಂದು ಬಹುದೊಡ್ಡ ಅವಕಾಶವಾಗಿ ಪರಿವರ್ತನೆಯಾಗಬಹುದು. ರಾಜಕೀಯವಾಗಿ ಎಷ್ಟೇ ವೈರ ಇದ್ದಾಗಲೂ ಒಕ್ಕೂಟ ವ್ಯವಸ್ಥೆಯನ್ನು ಸದೃಢವಾಗಿ ಇಡಲು ಹೀಗೆ ರಾಜ್ಯಗಳ ಮುಖ್ಯಮಂತ್ರಿಗಳು ಒಂದು ಸಮಾನ ವೇದಿಕೆಯನ್ನು ತಮ್ಮ ತಮ್ಮೊಳಗೆ ಸೃಷ್ಟಿಸಿಕೊಳ್ಳುವುದು ಒಳ್ಳೆಯದು.

ರಾಮಕೃಷ್ಣ ಹೆಗಡೆಯವರು 1980ರ ದಶಕದಲ್ಲಿ ಮುಖ್ಯಮಂತ್ರಿಯಾದ ಕೂಡಲೇ ತಮ್ಮ ಮುಂಗಡಪತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಸುಧಾರಣೆ ಕುರಿತು ಮಾತನಾಡಿದ್ದರು. ‘ಕೇಂದ್ರ ಸರ್ಕಾರ, ದೊಡ್ಡಣ್ಣನ ಹಾಗೆ ವರ್ತಿಸಬಾರದು’ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. 1996ರಲ್ಲಿ ಕೇಂದ್ರದಲ್ಲಿ ದೇವೇಗೌಡರ ನೇತೃತ್ವದ ಸಂಯುಕ್ತ ರಂಗದ ಆಡಳಿತವಿದ್ದಾಗ ಆಂಧ್ರಪ್ರದೇಶದಲ್ಲಿ ಆಗಲೂ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರು ತಮ್ಮ ತೆಲುಗು ದೇಶಂ, ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್‌ ಮತ್ತು ಅಸ್ಸಾಂನ ಅಸ್ಸಾಂ ಗಣ ಪರಿಷತ್‌ ಪಕ್ಷಗಳನ್ನು ಒಳಗೊಂಡ ‘ಫೆಡರಲ್‌ ಫ್ರಂಟ್‌’ ರಚಿಸಿಕೊಂಡಿದ್ದರು. ಹೀಗೆ ಒಂದು ‘ಒತ್ತಡ ಗುಂಪು’ ಮಾಡಿಕೊಂಡರೆ ಕೇಂದ್ರದ ಜೊತೆಗೆ ಜಗ್ಗಾಟ ಮಾಡಲು ಹೆಚ್ಚಿನ ಶಕ್ತಿ ಸಿಗುತ್ತದೆ ಎಂಬುದು ನಾಯ್ಡು ಅವರ ಅಭಿಪ್ರಾಯವಾಗಿತ್ತು ಮತ್ತು ಅದು ನಿಜವಾಗಿತ್ತು ಕೂಡ.ಇಂಥ ಒಕ್ಕೂಟಗಳು ರಚನೆಯಾಗುವುದನ್ನು ಕೇಂದ್ರ ಬಯಸುವುದಿಲ್ಲ. ಉತ್ತರ ಪ್ರದೇಶದ ಮುಲಾಯಂ ಅವರು ನಿತೀಶ್‌ ಜೊತೆಗೆ ಕೈ ಜೋಡಿಸಿಲ್ಲ ಎಂಬುದು ಗಮನಾರ್ಹ ಸಂಗತಿ. ಅದಕ್ಕೆ ಏನೇನೋ ಕಾರಣಗಳು ಇರಬಹುದು. ಕೇಂದ್ರದ ‘ಬೆದರಿಕೆಯೂ’ ಒಂದು ಕಾರಣ ಎಂದು ಬಲ್ಲವರು ಹೇಳುತ್ತಾರೆ!ನಿತೀಶ್‌ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರು ಸಂತೋಷದಿಂದಲೇ ಭಾಗವಹಿಸಿರಬಹುದು. ಆದರೆ, ನಿತೀಶ್‌ ಅವರು ನಾಳೆ ಪ್ರಧಾನಿ ಹುದ್ದೆ ಮೇಲೆ ಕಣ್ಣು ಹಾಕುವುದನ್ನು ಅವರಾಗಲಿ ಅಥವಾ ಅವರ ಪಕ್ಷವಾಗಲಿ ಇಷ್ಟ ಪಡುತ್ತದೆಯೇ ಎಂಬುದು ಬಹುಮುಖ್ಯ ಪ್ರಶ್ನೆ. ನಿತೀಶ್‌ ಅವರು ಬಿಹಾರಕ್ಕೆ ಸೀಮಿತವಾಗಿ ಉಳಿಯುವುದಾದರೆ ರಾಹುಲ್‌ ಅವರಿಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಈಗಲೂ ಅದು ತಾನು ರಾಷ್ಟ್ರೀಯ ಪಕ್ಷ ಎಂದು ನಂಬುತ್ತಿರುವುದು ಮತ್ತು ಯಾರಾದರೂ ತನ್ನ ಜೊತೆಗೆ ಮೈತ್ರಿ ಮಾಡಿಕೊಂಡರೆ ಕಿರಿಯ ಪಾಲುದಾರರಾಗಿ ಮಾತ್ರ ಇರಬೇಕು ಎಂದು ಅದು ಬಯಸುತ್ತಿರುವುದು ಅದರ ಸಮಸ್ಯೆಯೂ ಇರಬಹುದು. ಕಾಂಗ್ರೆಸ್ಸಿನ ಇಂಥ ಒಣಜಂಬ ಅದರ ಜೊತೆಗೆ ಹೋಗಲು ಬಯಸುವ ಪ್ರಾದೇಶಿಕ ಪಕ್ಷಗಳಿಗೆ ಇರಿಸು ಮುರಿಸು ಉಂಟು ಮಾಡಬಹುದು. ತನಗೆ ನಿಜವಾಗಿಯೂ ಇಲ್ಲದ ಬಲವನ್ನು ಒಬ್ಬರು ಪ್ರತಿಪಾದಿಸಲು ಶುರು ಮಾಡಿದಾಗ ಇಂಥದೇ ಇಕ್ಕಟ್ಟುಗಳು ಸೃಷ್ಟಿಯಾಗುತ್ತವೆ. ಒಂದು ಮಾತು ನಿಜ: ನಿತೀಶ್‌ ಗೆಲುವಿನ ನಂತರ ಪ್ರಾದೇಶಿಕ ಪಕ್ಷಗಳು ಇನ್ನು ಮುಂದೆ ಕಿರಿಯ ಪಾಲುದಾರರಾಗಿ ಉಳಿಯಲು ಒಪ್ಪುವುದು ಕಷ್ಟ. ಏಕೆಂದರೆ ಕಾಂಗ್ರೆಸ್ಸಿನಲ್ಲಿ, ನಿತೀಶ್‌ ಅವರ ಹಾಗೆ, ರಾಷ್ಟ್ರಮಟ್ಟದಲ್ಲಿ ಒಪ್ಪಿಗೆಯಾಗುವ ನಾಯಕರು ಯಾರೂ ಇಲ್ಲ. ಹಾಗೆಂದು ನಿತೀಶ್‌ ಅವರನ್ನು ಇತರ ಎಲ್ಲ ಪ್ರಾದೇಶಿಕ ಪಕ್ಷಗಳು ತಮ್ಮ ನಾಯಕ ಎಂದು ಒಪ್ಪಿಕೊಳ್ಳುತ್ತವೆಯೇ ಎಂಬುದು ಇನ್ನೊಂದು ಪ್ರಶ್ನೆ. ಮಾಯಾವತಿ, ಮಮತಾ ಮತ್ತು ಜಯಲಲಿತಾ ಅವರೇನು ಕಡಿಮೆ ಮಹತ್ವಾಕಾಂಕ್ಷಿಗಳೇ?

ಇವರ ಹಾಗೆಯೇ ಕಡಿಮೆ ಮಹತ್ವಾಕಾಂಕ್ಷಿಯೇನೂ ಅಲ್ಲದ ದೇವೇಗೌಡರೂ ಮೊನ್ನೆ ಪಟ್ನಾಕ್ಕೆ ಹೋಗಿದ್ದರು. ಅವರು ಚುನಾವಣೆಯಲ್ಲಿ ನಿತೀಶ್‌–ಲಾಲು ಮೈತ್ರಿ ಕೂಟದ ಭಾಗವಾಗಿ ಇರಲಿಲ್ಲ. ‘ಎಲ್ಲಿದೆ ತೃತೀಯ ರಂಗ’ ಎಂದು ದೇವೇಗೌಡರು ಬಿಹಾರ ಚುನಾವಣೆಗಿಂತ ಸ್ವಲ್ಪ ಮುಂಚೆ ಕೇಳಿದ್ದರು. ಒಬ್ಬ ಮಾಜಿ ಪ್ರಧಾನಿಗೆ ತಾನು ವೇದಿಕೆಯ ಮಧ್ಯದಲ್ಲಿ ಇಲ್ಲ ಎಂದು ಅನಿಸಿದಾಗ ಹಾಗೆ ಆಗುವುದು ಸಹಜ. ಇವೆಲ್ಲ ನಮ್ಮ ಶಕ್ತಿ ಮತ್ತು ಮಿತಿಗಳೆರಡನ್ನೂ ತೋರಿಸುವ ಸಂದರ್ಭಗಳು.

ದೇವೇಗೌಡರ ಜೊತೆಗೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಪ್ರಮಾಣ ವಚನ ಸಮಾರಂಭಕ್ಕೆ ಹೋಗಿ ಭಾಗವಹಿಸಿರುವುದು ಕರ್ನಾಟಕದ ರಾಜಕೀಯ ಸಾಧ್ಯತೆಗಳ ಮುನ್ಸೂಚನೆಯೂ ಆಗಿರಬಹುದು. ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸು ಏಕಾಂಗಿಯಾಗಿ ಬಿಜೆಪಿಯನ್ನು ಎದುರಿಸಲು ಸಮರ್ಥವಾಗಿದೆಯೇ? ಕಷ್ಟ ಎಂಬ ಭಾವನೆ ಆ ಪಕ್ಷದ ಅನೇಕ ನಾಯಕರಲ್ಲಿ ಇದೆ. ಹಾಗೆಂದು ಜೆ.ಡಿ (ಎಸ್‌) ಜೊತೆಗೆ ಮೈತ್ರಿ ಮಾಡಿಕೊಳ್ಳಬಹುದೇ ಎಂದರೆ ಈಗಿನ ಹಂತದಲ್ಲಿ ‘ಇಲ್ಲ’ ಎಂಬ ಉತ್ತರವೇ ಸಿಗುತ್ತದೆ. ಏಕಾಂಗಿಯಾಗಿ ಅಧಿಕಾರ ಹಿಡಿಯಬಲ್ಲ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು ಎಂಬ ನಂಬಿಕೆ ಕಾಂಗ್ರೆಸ್ಸಿನಲ್ಲಿ ಈಗಲೂ ಇದೆ. ಇನ್ನೇನು ಹೊಸ್ತಿಲಲ್ಲಿ ಇರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯ ಫಲಿತಾಂಶ, ಕರ್ನಾಟಕದ ಮುಂದಿನ ರಾಜಕೀಯ ಹೋರಾಟಕ್ಕೆ ಒಂದು ನೀಲ ನಕಾಶೆಯನ್ನು ಒದಗಿಸಬಹುದು. ಅದಕ್ಕಿಂತ ಮುಂಚೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯೂ ಒಂದು ಇಂಗಿತವನ್ನು ವ್ಯಕ್ತಪಡಿಸಬಹುದು. ರಾಜಕೀಯ ಎಂಬುದು ಸಾಧ್ಯತೆಗಳನ್ನು ಸದಾಕಾಲ ತೆರೆದು ಇಡುತ್ತ ಹೋಗುತ್ತದೆ. ಆ ಸಾಧ್ಯತೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಬಿಡಬಹುದು. ಆಯ್ಕೆ ಮಾಡಿಕೊಂಡು ಯಾರ ಹಾಸಿಗೆಯಲ್ಲಿ ಹೋಗಿ ಯಾರು ಮಲಗುತ್ತಾರೆ ಎಂದು ತಿಳಿಯಲು ಬಹಳ ಕಾಲವೇನೂ ಬೇಕಾಗಲಿಕ್ಕಿಲ್ಲ. ಏಕೆಂದರೆ ಮೈತ್ರಿ ಕೆಲವು ಸಾರಿ ಹಿತವಾಗಿರುತ್ತದೆ; ಕೆಲವು ಸಾರಿ ಮುಜುಗರವನ್ನೂ ತರುತ್ತದೆ. ದೂರದ ಬಿಹಾರ ಏಕೆ; ಕರ್ನಾಟಕದ ರಾಜಕಾರಣದಲ್ಲಿಯೂ ಈಚಿನ ಇತಿಹಾಸದಲ್ಲಿ ಅದಕ್ಕೆ ಉದಾಹರಣೆಗಳು ಇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.