ಭಾನುವಾರ, ಡಿಸೆಂಬರ್ 8, 2019
25 °C

ರಾಜ್ಯದಲ್ಲಿ ಮೂರನೇ ರಾಜಕೀಯ ಸ್ಥಿತ್ಯಂತರ?

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ರಾಜ್ಯದಲ್ಲಿ ಮೂರನೇ ರಾಜಕೀಯ ಸ್ಥಿತ್ಯಂತರ?

ಜನತಾ ದಳ (ಎಸ್) ಪಕ್ಷವು ಕಳೆದ ಶನಿವಾರ ನಡೆಸಿದ ರ‍್ಯಾಲಿಯಲ್ಲಿ ಭರ್ಜರಿ ಶಕ್ತಿ ಪ್ರದರ್ಶಿಸುವುದರ ಜೊತೆಗೆ ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಅವರ ಸಮ್ಮುಖದಲ್ಲಿ ಆ ಪಕ್ಷದೊಂದಿಗಿನ ಮೈತ್ರಿಯನ್ನೂ ಸಾರಿತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಎದುರಿಸುವ ಸಲುವಾಗಿ ಜೆಡಿಎಸ್ ಮೈತ್ರಿಕೂಟವು ‘ಬಹುಜನ’ರ ಮತಗಳ ಮೇಲೆ ದೃಷ್ಟಿ ನೆಟ್ಟಿದೆ. ಕಾಂಗ್ರೆಸ್‍ನ ‘ಅಹಿಂದ’ ಮತ್ತು ಬಿಜೆಪಿಯ ‘ಹಿಂದುತ್ವ’ ಘೋಷಣೆಗೆ ಸಂವಾದಿಯಾಗಿ ಜೆಡಿಎಸ್ ಈ ತಂತ್ರ ಅನುಸರಿಸಿದೆ. ಕರ್ನಾಟಕ ರಾಜ್ಯವು ಬಲು ಮುಖ್ಯವಾದ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ಈ ಸಂದರ್ಭದಲ್ಲಿ, ತನ್ನ ಹೊಸ ಮಿತ್ರ ಪಕ್ಷದೊಂದಿಗೆ ಜೆಡಿಎಸ್ ವಹಿಸಲಿರುವ ಪಾತ್ರವು ವಿಶೇಷ ಗಮನಸೆಳೆದಿದೆ. ಈ ಸಲ, ತ್ರಿಕೋನ ಸ್ಪರ್ಧೆ ಏರ್ಪಟ್ಟು ಯಾವುದೇ ಒಂದು ಮೈತ್ರಿಕೂಟ ಇಲ್ಲವೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭ್ಯವಾಗದೆ ‘ಅತಂತ್ರ ವಿಧಾನಸಭೆ’ ನಿರ್ಮಾಣವಾಗಬಹುದು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.

ಹಿಂದಿನ ಬೆಳವಣಿಗೆಗಳನ್ನು ಅವಲೋಕಿಸಿದರೆ, ಕರ್ನಾಟಕದಲ್ಲಿ ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ಮಾತ್ರ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ, 2018ರಲ್ಲಿ ಅಂತಹ ಸ್ಥಿತ್ಯಂತರದ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ರಾಜ್ಯ ವಿಧಾನಸಭೆಗೆ 1983ರಲ್ಲಿ ನಡೆದ ಚುನಾವಣೆಯಲ್ಲಿ ಅದೇ ಮೊದಲ ಬಾರಿಗೆ, ಕರ್ನಾಟಕದಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಬರಲಿಲ್ಲ. ಇದರೊಂದಿಗೆ ರಾಜ್ಯದ ಮೇಲೆ ಮೂರು ದಶಕಗಳಿಂದ ಕಾಂಗ್ರೆಸ್ ಹೊಂದಿದ್ದ ಹಿಡಿತಕ್ಕೂ ಈ ಜನಾದೇಶ ಅಂತ್ಯವಾಡಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತಾದರೂ ಬೇರ‍್ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಮೂಡಿಬರಲಿಲ್ಲ. ಜನತಾ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಶೇ 50ರಷ್ಟು ಸ್ಥಾನ ಗಳಿಕೆಗಿಂತ ಬಹಳಷ್ಟು ಹಿಂದೆ ಉಳಿದಿತ್ತು. ಈ ಚುನಾವಣೆಯು ಕರ್ನಾಟಕ ರಾಜ್ಯದಲ್ಲಿ ಆವರೆಗೆ ಇದ್ದ ಏಕಪಕ್ಷದ ಹಿಡಿತದಿಂದ ಎರಡು ಪಕ್ಷಗಳ ಪೈಪೋಟಿಯ ಕಣವಾಗುವ ಮೂಲಕ ರಾಜ್ಯದ ರಾಜಕಾರಣದಲ್ಲಿ ಮೊದಲ ಸ್ಥಿತ್ಯಂತರವನ್ನು ಪ್ರತಿನಿಧಿಸಿತು. ನಂತರ 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಜನತಾ ಪಕ್ಷವು ಸ್ಪಷ್ಟ ಬಹುಮತ ತನ್ನದಾಗಿಸಿಕೊಳ್ಳುವುದರೊಂದಿಗೆ ಈ ಸ್ಥಿತ್ಯಂತರ ಪ್ರಕ್ರಿಯೆಯು ಪೂರ್ಣಗೊಂಡಿತು. ಇದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜನತಾ ಪಕ್ಷ– ಜನತಾ ದಳ, ಈ ಎರಡು ಪಕ್ಷಗಳ ನೇರಾನೇರ ಸ್ಪರ್ಧೆಗೆ ಅಖಾಡ ಸಿದ್ಧವಾಯಿತು. ಬಿಜೆಪಿಯು ಪೈಪೋಟಿಯಲ್ಲಿ ಸಾಕಷ್ಟು ಹಿಂದುಳಿದ 3ನೇ ಪಕ್ಷವಾಗಿದ್ದಿತು.

ಎರಡನೆಯ ಬಾರಿಗೆ ರಾಜಕೀಯ ಸ್ಥಿತ್ಯಂತರದ ಅವಧಿ ಎದುರಾಗಿದ್ದು 2004ರ ವಿಧಾನಸಭಾ ಚುನಾವಣೆಯಲ್ಲಿ. ಈ ಚುನಾವಣೆಯಲ್ಲಿ ಕೂಡ ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಹೊರಹೊಮ್ಮಲಿಲ್ಲ. ಇದರಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಒಡಮೂಡಿದರೂ ಶೇ 50ರಷ್ಟು ಸ್ಥಾನಬಲಕ್ಕಿಂತ ಸಾಕಷ್ಟು ಹಿಂದೆಯೇ ಉಳಿದಿತ್ತು. ಈ ಚುನಾವಣೆ ಕೂಡ ಎರಡು ಪಕ್ಷಗಳ ನಡುವಿನ ಸ್ಪರ್ಧೆಯನ್ನು ಮುಂದುವರಿಸಿತು. ಆದರೆ ಸ್ಪರ್ಧೆಯಲ್ಲಿದ್ದ ಪಕ್ಷಗಳಲ್ಲಿ ಬದಲಾವಣೆ ಆಗಿತ್ತು. ಕಾಂಗ್ರೆಸ್- ಜನತಾ ಪಕ್ಷ/ ಜನತಾ ದಳದ ಸ್ಪರ್ಧೆಯ ಬದಲು ರಾಜ್ಯವು ಕಾಂಗ್ರೆಸ್- ಬಿಜೆಪಿ ಅಖಾಡವಾಯಿತು. ನಂತರ 2008ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿಯು ಬಹುಮತ ಪಡೆಯುವುದರೊಂದಿಗೆ ಈ ಪ್ರವೃತ್ತಿಯು ನಿಚ್ಚಳಗೊಂಡಿತು.

ಅದೇ ರೀತಿ ಕರ್ನಾಟಕವು ಸೆಣಸಾಟದಲ್ಲಿರುವ ಪ್ರಮುಖ ಪಕ್ಷಗಳ ಬಲಾಬಲದಲ್ಲಿ ಬದಲಾವಣೆಗೆ ಭೂಮಿಕೆಯಾಗುವ ಮೂಲಕ ಮೂರನೇ ರಾಜಕೀಯ ಸ್ಥಿತ್ಯಂತರಕ್ಕೆ ಅಣಿಯಾಗುತ್ತಿದೆಯೇ? ಇದು ಇದೀಗ ಎದುರಾಗಿರುವ ಪ್ರಶ್ನೆ. ರಾಜ್ಯದ ಇತ್ತೀಚಿನ ಚುನಾವಣಾ ಆಗುಹೋಗುಗಳನ್ನು ಹಾಗೂ ವಿಶ್ವಾಸಾರ್ಹ ಸಮೀಕ್ಷೆಗಳನ್ನು ಗಮನಿಸಿ ಹೇಳುವುದಾದರೆ ಅಂತಹ ರಾಜಕೀಯ ಸ್ಥಿತ್ಯಂತರದ ಸೂಚನೆಗಳೇನೂ ಕಂಡುಬಂದಿಲ್ಲ. ಇದುವರೆಗಿನ ಬೆಳವಣಿಗೆಗಳ ಪ್ರಕಾರ, ಕಾಂಗ್ರೆಸ್ ಮತ್ತು ಬಿಜೆಪಿಯೇ ಸ್ಪರ್ಧೆಯಲ್ಲಿರುವ ಎರಡು ಪ್ರಮುಖ ಎದುರಾಳಿಗಳಾಗಿದ್ದು ಜೆಡಿಎಸ್ ದೂರದ ಮೂರನೇ ಪಕ್ಷವಾಗಿ ಕಣದಲ್ಲಿದೆ.

ಇದೇ ವೇಳೆ, ಸುಪ್ರೀಂ ಕೋರ್ಟ್‌ನಿಂದ ಕಾವೇರಿ ತೀರ್ಪು ಪ್ರಕಟವಾಗಿದ್ದು ಕರ್ನಾಟಕಕ್ಕೆ ಅನುಕೂಲಕರವಾಗಿ ಒದಗಿಬಂದಿದೆ. ಹೀಗಾಗಿ, ಕಾವೇರಿ ತೀರ್ಪು ರಾಜ್ಯದಹಿತಕ್ಕೆ ವ್ಯತಿರಿಕ್ತವಾಗಿ ಪ್ರಕಟವಾದರೆ ಜೆಡಿಎಸ್‍ನಂತಹ ಪ್ರಾದೇಶಿಕ ಪಕ್ಷಕ್ಕೆ ಅದರಿಂದ ಚುನಾವಣಾ ಲಾಭ ಆಗಲಿದೆ ಎಂಬ ಆಸೆಯೂ ಹಿನ್ನೆಲೆಗೆ ಸರಿದುಹೋಗಿದೆ. ಒಟ್ಟಾರೆ ಈಗಿನ ಜೆಡಿಎಸ್- ಬಿಎಸ್‍ಪಿ ಮೈತ್ರಿಯನ್ನು, ತಂತಮ್ಮ ಚುನಾವಣಾ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳಲು ಎರಡೂ ಪಕ್ಷಗಳು ಮಾಡಿಕೊಂಡಿರುವ ಜಾಣ್ಮೆಯ ನಡೆ ಎನ್ನಬಹುದು. ಆ ಮೂಲಕ ಪ್ರಮುಖ ಎರಡು ಪಕ್ಷಗಳೆಡೆಗೆ ಭ್ರಮನಿರಸನಗೊಂಡವರನ್ನು ತಮ್ಮತ್ತ ಸೆಳೆಯುವ ಉದ್ದೇಶ ಈ ಪಕ್ಷಗಳದ್ದಾಗಿದೆ.

ರಾಜ್ಯ ಚುನಾವಣಾ ಅಖಾಡವು ಎರಡು ಪಕ್ಷಗಳ ಸ್ಪರ್ಧಾ ಕಣವಾಗಿ ರೂಪುಗೊಂಡಿರುವುದನ್ನು ಬದಲಾಯಿಸುವ ರಾಜಕೀಯ ಸಾಮರ್ಥ್ಯ ಜೆಡಿಎಸ್‍ಗೆ ಇದೆಯೇ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಈವರೆಗಿನ ಬೆಳವಣಿಗೆಗಳನ್ನು ನೋಡಿದರೆ ಅದನ್ನು ಪುಷ್ಟೀಕರಿಸುವ ಯಾವ ಲಕ್ಷಣಗಳೂ ಕಂಡುಬಂದಿಲ್ಲ.  2013ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರೋಧಿ ಅಲೆ ಮತ್ತು ಆಡಳಿತ ಪಕ್ಷದ ವಿಭಜನೆಯಿಂದಾಗಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿತು. ಆ ಚುನಾವಣೆಯಲ್ಲಿ ಬಿಜೆಪಿ- ಕೆಜೆಪಿ ವಿಭಜನೆಯ ಲಾಭ ಜೆಡಿಎಸ್‍ಗೂ ದಕ್ಕಿ, ಅದು ವಿಧಾನಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ಸ್ಥಾನಮಾನ ಪಡೆಯಿತು. ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಂಡು ಅದು ಪ್ರಮುಖ ಪ್ರತಿಪಕ್ಷವಾಗುವವರೆಗೆ ಜೆಡಿಎಸ್ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಿತು.

ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ತಲಾ 40 ಸ್ಥಾನಗಳನ್ನು ಪಡೆದಿದ್ದರೂ, ಜೆಡಿಎಸ್‍ನ ಶೇಕಡಾವಾರು ಮತ ಗಳಿಕೆ ಹೆಚ್ಚು ಇದ್ದಿದ್ದರಿಂದ ಅದು ಪ್ರಮುಖ ಪ್ರತಿಪಕ್ಷವಾಗಿತ್ತು. ಆದರೂ ಫಲಿತಾಂಶದ ವಿವಿಧ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಸಂಗತಿಗಳು ವ್ಯಕ್ತವಾಗುತ್ತವೆ. ಆಗ ಬಿಜೆಪಿ 40 ಕ್ಷೇತ್ರಗಳಲ್ಲಿ ಜಯ ಗಳಿಸುವ ಜತೆಗೆ ಇನ್ನೂ 58 ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿತ್ತು. 40 ಸ್ಥಾನಗಳಲ್ಲಿ ಗೆದ್ದಿದ್ದ ಜೆಡಿಎಸ್ ಇತರ 53 ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಬಿಜೆಪಿಯಿಂದ ಹೊರಬಂದು ರಚಿತವಾಗಿದ್ದ ಕೆಜೆಪಿ 6 ಕ್ಷೇತ್ರಗಳಲ್ಲಿ ವಿಜಯಿಯಾಗುವ ಜೊತೆಗೆ 35 ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿತ್ತು. ಹೀಗಾಗಿ 2013ರಲ್ಲಿ ಕಂಡುಬಂದ ಜೆಡಿಎಸ್ ಬಲವರ್ಧನೆಗೆ ಬಿಜೆಪಿ ವಿಭಜನೆಗೊಂಡಿದ್ದೇ ಕಾರಣ ಎಂಬುದು ಸುಸ್ಪಷ್ಟ. ಅದಕ್ಕಿಂತ ಮುಂಚಿನ, ಅಂದರೆ, 2008ರ ವಿಧಾನಸಭಾ ಚುನಾವಣೆಯನ್ನು ಗಮನಿಸಿದರೆ, ಬಿಜೆಪಿ 110 ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ 60 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದ್ದುದು ಕಂಡುಬರುತ್ತದೆ. ಅಂದರೆ ಸುಮಾರು 170 ಕ್ಷೇತ್ರಗಳಲ್ಲಿ ಅದು ಪ್ರಬಲ ಅಸ್ತಿತ್ವ

ವನ್ನು ದಾಖಲಿಸಿತ್ತು. ಅದೇ ಸಮಯದಲ್ಲಿ ಜೆಡಿಎಸ್ 28 ಕ್ಷೇತ್ರಗಳಲ್ಲಿ ಗೆದ್ದು ಉಳಿದ 28 ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ 224 ಕ್ಷೇತ್ರಗಳ ಪೈಕಿ 56 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಸ್ತಿತ್ವವನ್ನು ತೋರಿಸಿತ್ತು.

ಬಿಎಸ್‍ಪಿ ಜತೆಗಿನ ಮೈತ್ರಿಯಿಂದ, ಈ ಮುಂಚೆ ವಿವಿಧ ಪಕ್ಷಗಳ ನಡುವೆ ಚದುರಿ ಹೋಗುತ್ತಿದ್ದ ಒಕ್ಕಲಿಗರ ಮತ್ತು ದಲಿತರ ಮತಗಳನ್ನು ಒಂದೆಡೆಗೆ ಸೆಳೆಯಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರ. ಕಳೆದ ಕೆಲವು ವರ್ಷಗಳಲ್ಲಿ ಒಕ್ಕಲಿಗರ ಮತಗಳು ಮೂರು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಡುವೆ ಹಂಚಿಹೋಗುತ್ತಿರುವುದು ಅಂಕಿಅಂಶಗಳಿಂದ ತಿಳಿದುಬರುತ್ತದೆ. ದಲಿತರ ಮತಗಳು ಹೆಚ್ಚಾಗಿ ಕಾಂಗ್ರೆಸ್ ಪರವಾಗಿ ಇದ್ದರೂ ಈ ವಲಯದ ಗಣನೀಯ ಜನವರ್ಗವನ್ನು ಬಿಜೆಪಿ ಕೂಡ ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೂರನೇ ರಾಜಕೀಯ ಶಕ್ತಿಯನ್ನು ಅಪರೂಪಕ್ಕೆಂಬಂತೆ ಬೆಂಬಲಿಸುವ ಕರ್ನಾಟಕದಲ್ಲಿ ಕಳೆದ ಶನಿವಾರ ‘ಬಹುಜನ’ ಸಾಮಾಜಿಕ ಮೈತ್ರಿ ಘೋಷಣೆಗೊಂಡಿದೆ. ಕರ್ನಾಟಕವು ಮೂರನೇ ರಾಜಕೀಯ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಲಿದೆಯೇ ಅಥವಾ ಎರಡು ಪಕ್ಷಗಳ ಸ್ಪರ್ಧೆಯನ್ನು ಬೆಂಬಲಿಸಲಿದೆಯೇ ಎಂಬುದು ಮುಂದಿನ ಕೆಲವು ತಿಂಗಳುಗಳಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ.

ಪ್ರತಿಕ್ರಿಯಿಸಿ (+)