ರಾಜ್ಯಸಭೆ ಆಯ್ಕೆ ಪ್ರಕ್ರಿಯೆ: ಸುಧಾರಣೆಗೆ ಪಕ್ವ ಕಾಲ

7

ರಾಜ್ಯಸಭೆ ಆಯ್ಕೆ ಪ್ರಕ್ರಿಯೆ: ಸುಧಾರಣೆಗೆ ಪಕ್ವ ಕಾಲ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ರಾಜ್ಯಸಭೆ ಆಯ್ಕೆ ಪ್ರಕ್ರಿಯೆ: ಸುಧಾರಣೆಗೆ ಪಕ್ವ ಕಾಲ

ನಮ್ಮಲ್ಲಿ ರಾಜ್ಯಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಂತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸುತ್ತಿದ್ದಂತೆಯೇ ಪ್ರತಿಬಾರಿಯೂ ಅದು ತೀವ್ರ ವಾಗ್ವಾದಕ್ಕೆ ಆಸ್ಪದವಾಗುವುದು ಸಾಮಾನ್ಯ. ಹೀಗೆ ನಾಮಕರಣಗೊಂಡ ಅಭ್ಯರ್ಥಿಗಳು ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಲು ಸೂಕ್ತರಾದವರೇ ಎಂಬ ಬಗ್ಗೆ ಕಾವೇರಿದ ಚರ್ಚೆ ಏಳುತ್ತದೆ. ಇದೀಗ ದೆಹಲಿಯಿಂದ ನಡೆಯಬೇಕಿರುವ ರಾಜ್ಯಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವು (ಎಎಪಿ) ಆಖೈರುಗೊಳಿಸಿರುವ ಮೂವರು ಅಭ್ಯರ್ಥಿಗಳ ಪಟ್ಟಿ ಕೂಡ ಅದೇ ಸಾಲು ಸೇರಿದೆ. ಇದು, ರಾಜ್ಯಸಭಾ ಸ್ಪರ್ಧಾಳುಗಳ ಆಯ್ಕೆಯನ್ನು ಪ್ರಭಾವಿಸುವ ಅಂಶಗಳ ಕುರಿತು ಪರಾಮರ್ಶಿಸಲು ಸೂಕ್ತ ಸಂದರ್ಭ ಒದಗಿಸಿದೆ.

ಈ ಕುರಿತ ಯಾವುದೇ ಬಗೆಯ ವಿಶ್ಲೇಷಣೆಯ ಆರಂಭದಲ್ಲಿ ಎರಡು ರೀತಿಯ ತರ್ಕ ಮಂಡನೆಯನ್ನು ನಾವು ಪರಿಗಣಿಸಬೇಕಾಗುತ್ತದೆ. ಮೊದಲನೆಯದು, ಸಂಸತ್ತಿನ ಮೇಲ್ಮನೆಯ ಔಚಿತ್ಯ ಏನು? ಎರಡನೆಯದು, ರಾಜ್ಯಸಭೆಗೆ ಆಯ್ಕೆಯಾದ ಅಭ್ಯರ್ಥಿಗಳಿಂದ ಏನು ನಿರೀಕ್ಷಿಸಲಾಗುತ್ತದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಅವರ ಅನುಭವವಾದರೂ ಏನು ಎಂಬುದು.

'ರಾಜ್ಯಸಭೆ' ಎಂಬುದು ಹೆಸರೇ ಸೂಚಿಸುವಂತೆ, ವಿಶೇಷವಾಗಿ ಒಕ್ಕೂಟ ವ್ಯವಸ್ಥೆಯಲ್ಲಿ, ಯಾವುದೇ ವಿಷಯದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಗಳ ದೃಷ್ಟಿಯಿಂದ ಅಭಿವ್ಯಕ್ತಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆಯಾಗಿದೆ. ಆದರೆ, ಯಾರಾದರೂ ಸಂವಿಧಾನ ರಚನಾ ಸಮಿತಿಯ ಚರ್ಚೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ರಾಜ್ಯಸಭೆಯನ್ನು ರಾಜ್ಯಗಳ ಹಕ್ಕುಗಳ ಅಭಿವ್ಯಕ್ತಿಗೆ ಇರುವ ಸದನ ಎಂಬ ಉಲ್ಲೇಖವು ಚರ್ಚೆಯ ಎಲ್ಲೂ ಕಂಡುಬರದು. 'ಸಂಸತ್ತಿನ ಎರಡನೇ ಸದನದಿಂದ ಹೆಚ್ಚೆಂದರೆ ಪ್ರಮುಖ ವಿಷಯಗಳ ಬಗ್ಗೆ ಘನವಾದ ಚರ್ಚೆಗಳನ್ನು ನಡೆಸಬೇಕೆಂಬುದು ಹಾಗೂ ತರಾತುರಿಯ ಶಾಸನ ರಚನೆಗೆ ತಡೆಯೊಡ್ಡಬೇಕೆಂಬುದು ನಮ್ಮ ನಿರೀಕ್ಷೆ' ಎಂದು ಸಂವಿಧಾನ ರಚನಾ ಸಮಿತಿಯ ಪ್ರಮುಖ ಸದಸ್ಯರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಅವರು ಹೇಳಿದ್ದರು.

ದೇಶದ ಮೊದಲ ರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿದ್ದ ಎಸ್.ರಾಧಾಕೃಷ್ಣನ್ ಅವರು 1952ರಲ್ಲಿ ರಾಜ್ಯಸಭೆಯ ಪ್ರಾಸ್ತಾವಿಕ ನುಡಿಗಳಲ್ಲಿ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಅವಸರದ ಶಾಸನ ರಚನೆಗೆ ತಡೆಯೊಡ್ಡಲು ಮೇಲ್ಮನೆ ಅತ್ಯವಶ್ಯಕ ಎಂಬುದು ಜನರಿಗೆ ಮನವರಿಕೆಯಾಗುವಂತೆ ಸಮರ್ಥಿಸಿಕೊಳ್ಳಲು ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ನಾವು ಮಾಡಬೇಕು' ಎಂಬುದು ಅವರ ಹೇಳಿಕೆಯಾಗಿತ್ತು.

ಹೀಗಾಗಿ ಹೆಸರಿಗೆ ಅದು 'ರಾಜ್ಯಸಭೆ'ಯಾಗಿದ್ದರೂ ಸಂವಿಧಾನ ರಚನಾ ಸಮಿತಿ ಕೂಡ ಅದನ್ನು ಕೇವಲ ಗಂಭೀರ ಚರ್ಚೆಗಳನ್ನು ನಡೆಸಲು ಮೀಸಲಾದ ಸದನ ಎಂದಷ್ಟೇ ಪರಿಗಣಿಸುವ ಮೂಲಕ, ಒಕ್ಕೂಟ ವ್ಯವಸ್ಥೆಯಲ್ಲಿ ಅದಕ್ಕೆ ಮಹತ್ವದ್ದಲ್ಲದ ಪಾತ್ರವನ್ನೇ ಕೊಡಮಾಡಿತು.

ನಮ್ಮಲ್ಲಿರುವ 250 ರಾಜ್ಯಸಭಾ ಸ್ಥಾನಗಳ ಪೈಕಿ 12 ಜನರನ್ನು ಸಚಿವರ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿ ನೇರವಾಗಿ ಆಯ್ಕೆ ಮಾಡುತ್ತಾರೆ. ವಿವಿಧ ರಂಗಗಳಲ್ಲಿನ ಸಾಧಕರನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಇನ್ನು ಉಳಿದ 238 ಸ್ಥಾನಗಳಿಗೆ ರಾಜ್ಯಗಳ ವಿಧಾನಸಭೆಗಳಿಂದ ಅಭ್ಯರ್ಥಿಗಳನ್ನು ಚುನಾಯಿಸಲಾಗುತ್ತದೆ. ಪ್ರತಿ ರಾಜ್ಯದಿಂದ ಎಷ್ಟು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ನಿಗದಿ ಮಾಡಬೇಕು ಎಂಬುದನ್ನು ಆಯಾ ರಾಜ್ಯದ ಜನಸಂಖ್ಯೆ ಆಧರಿಸಿ ನಿರ್ಧರಿಸಲಾಗಿದೆ. ಸಣ್ಣ ರಾಜ್ಯಗಳಿಂದ ಕನಿಷ್ಠ ಒಬ್ಬ ಪ್ರತಿನಿಧಿಯಾದರೂ ಇರಬೇಕು ಎಂಬ ನಿಯಮ ಅಡಕವಾಗಿದೆ.

ಈ ಚುನಾವಣೆಯಲ್ಲಿ ಮತ ಚಲಾಯಿಸುವವರು ವಿಧಾನಸಭಾ ಸದಸ್ಯರಾದ್ದರಿಂದ ಆಯ್ಕೆಯಲ್ಲಿ ಪ್ರತಿ ರಾಜ್ಯದ ಸದನದಲ್ಲಿ ಪಕ್ಷಗಳ ಬಲಾಬಲ ನಿರ್ಣಾಯಕ ಅಂಶವಾಗುವುದು ಸುಸ್ಪಷ್ಟ. ಹೀಗಾಗಿ, ಈಗ ದೆಹಲಿ ವಿಧಾನಸಭೆಯ 70 ಸ್ಥಾನಗಳಲ್ಲಿ 67 ಸದಸ್ಯರು ಎಎಪಿಗೆ ಸೇರಿದವರಾದ್ದರಿಂದ ಎಲ್ಲಾ 3 ರಾಜ್ಯಸಭಾ ಸ್ಥಾನಗಳಲ್ಲಿ ಆ ಪಕ್ಷ ಜಯ ಗಳಿಸುವ ಸಾಧ್ಯತೆ ಇದ್ದೇ ಇದೆ.

ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಯಾವ ಅಂಶಗಳು ರಾಜಕೀಯ ಪಕ್ಷಗಳನ್ನು ಪ್ರಭಾವಿಸುತ್ತವೆ? ಕಳೆದ ಆರು ದಶಕಗಳ ರಾಜ್ಯಸಭಾ ಸದಸ್ಯರ ಪಟ್ಟಿಯ ಬಗ್ಗೆ ಗಮನಹರಿಸಿದರೆ ಇದಕ್ಕೆ ಉತ್ತರಗಳು ಸಿಗುತ್ತವೆ. ಮೊದಲಿಗೆ, ರಾಜಕೀಯ ಪಕ್ಷಗಳು ಪಕ್ಷಕ್ಕಾಗಿ ಅಥವಾ ಪಕ್ಷದ ನಾಯಕರ ಪರವಾಗಿ ಮಾಡಿದ ಸೇವೆಗೆ ಪ್ರತಿಯಾಗಿ ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ಇದರಿಂದ ವೇದ್ಯವಾಗುತ್ತದೆ.

ಎರಡನೆಯದಾಗಿ, ರಾಜ್ಯಸಭೆಗೆ ಆಯ್ಕೆಯಾದ ಶೇ 50ಕ್ಕೂ ಹೆಚ್ಚು ಸದಸ್ಯರು ಆ ಮುನ್ನ ರಾಜ್ಯ ಮಟ್ಟದಲ್ಲಿ ಯಾವುದೇ ಚುನಾಯಿತ ಸಂಸ್ಥೆಗೂ ಆಯ್ಕೆಯಾದವರಲ್ಲ; ಅಥವಾ ಪಕ್ಷದ ರಾಜ್ಯ ಘಟಕದಲ್ಲಿ ಕೂಡ ಪದಾಧಿಕಾರಿ ಆಗಿದ್ದವರಲ್ಲ; ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರಲ್ಲ ಎಂಬುದು ಕಂಡುಬರುತ್ತದೆ. ಮೂರನೆಯದಾಗಿ, ಲೋಕಸಭೆಗೆ ಸ್ಪರ್ಧಿಸಿ ಸೋತವರನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವ ಪ್ರವೃತ್ತಿ ಕಳೆದ 25 ವರ್ಷಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತಿದೆ. ನಾಲ್ಕನೆಯದಾಗಿ, ಮೂಲತಃ ಯಾವುದೋ ರಾಜ್ಯದ ಅಭ್ಯರ್ಥಿಯನ್ನು ಬೇರೊಂದು ರಾಜ್ಯದಿಂದ ಆಯ್ಕೆ ಮಾಡುತ್ತಿರುವ ಸಂಖ್ಯೆಯೂ ಏರುತ್ತಾ ಹೋಗುತ್ತಿದೆ. ಈ ಎಲ್ಲಾ ನಾಲ್ಕು ಪ್ರವೃತ್ತಿಗಳನ್ನು ಒಟ್ಟಾಗಿ ಅವಲೋಕಿಸಿದರೆ, ಮೇಲ್ಮನೆಯ ಸದಸ್ಯತ್ವವನ್ನು ಪಕ್ಷ ಅಥವಾ ಪಕ್ಷದ ನಾಯಕರಿಗಾಗಿ ಮಾಡಿದ ಸೇವೆಗೆ ಪ್ರತಿಯಾಗಿ ದಯಪಾಲಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇದೇ ವೇಳೆ ಈ ‘ಸೇವೆ’ ಎಂತಹುದು ಎಂಬುದನ್ನು ನಾನಾ ಬಗೆಯಲ್ಲಿ ವ್ಯಾಖ್ಯಾನಿಸಬಹುದು.

ರಾಜ್ಯಸಭಾ ಸ್ಥಾನಗಳಿಗೆ ಎಎಪಿ ಪ್ರಕಟಿಸಿರುವ ಪಟ್ಟಿಯು ಮೇಲ್ಮನೆಗೆ ಅಭ್ಯರ್ಥಿಗಳ ಆಯ್ಕೆ ವೈಖರಿ ನಿಜವಾಗಿಯೂ ಹೆಸರಿಗೆ ತಕ್ಕಂತೆ 'ರಾಜ್ಯಸಭೆ' ಎಂಬುದನ್ನು ಪುಷ್ಟೀಕರಿಸುವಂತೆ ಇದೆಯೇ ಎಂಬ ಚರ್ಚೆಗೆ ಮತ್ತೊಮ್ಮೆ ಚಾಲನೆ ನೀಡಿದೆ. ರಾಜಕೀಯ ಪಕ್ಷಗಳು ಹಾಗೂ ನಾಯಕರು ಇದನ್ನು 'ರಾಜಕೀಯ ಆಶ್ರಯ' ಕಲ್ಪಿಸಲು ಇರುವ ಅವಕಾಶ ಎಂಬಂತೆ ಬಳಸಿಕೊಳ್ಳುತ್ತಿರುವುದರಿಂದ 'ರಾಜ್ಯಸಭೆ'ಯ ನಿಜವಾದ ಉದ್ದೇಶವೇ ಮರೆತುಹೋಗಿದೆ.

ಭಾರತದಲ್ಲಿ ಬಹುಪಕ್ಷೀಯ ವ್ಯವಸ್ಥೆ ದೃಢಗೊಳ್ಳುತ್ತಿರುವ ಹಾಗೂ ಒಕ್ಕೂಟ ಪ್ರಕ್ರಿಯೆಯಲ್ಲಿ ರಾಜ್ಯಗಳು ಪ್ರಮುಖ ಪಾತ್ರ ವಹಿಸುತ್ತಿರುವ ದಿನಗಳನ್ನು ನಾವು ಕಾಣುತ್ತಿದ್ದೇವೆ. ಹೀಗಾಗಿ ಗಣರಾಜ್ಯದ ನಿರ್ಧಾರ ಪ್ರಕ್ರಿಯೆಯಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆಗೆ ಮೇಲ್ಮನೆಯನ್ನು ಅರ್ಥಪೂರ್ಣ ವೇದಿಕೆಯಾಗಿಸುವ ನಿಟ್ಟಿನಲ್ಲಿ ಈಗಿರುವ ಸಾಂಸ್ಥಿಕ ರೂಪುರೇಷೆಗೆ ಯಾವ ರೀತಿಯ ಸುಧಾರಣೆಗಳನ್ನು ತರಬೇಕು ಎಂಬ ಬಗ್ಗೆ ಚಿಂತಿಸುವುದು ಅಗತ್ಯವಾಗಿದೆ. ರಾಜ್ಯಸಭಾ ಸದಸ್ಯತ್ಯವು ಏಕಕಾಲಕ್ಕೆ 'ಪರಿಣಾಮಕಾರಿ ಎರಡನೇ ಸದನ'ವಾಗುವಂತೆ ಮತ್ತು 'ರಾಜ್ಯಗಳ ದನಿಗೆ ವೇದಿಕೆ'ಯೂ ಆಗುವಂತೆ ಪೋಷಿಸುವುದು ಹೇಗೆ?

ಇದಕ್ಕಾಗಿ, ಜರ್ಮನಿಯಲ್ಲಿರುವ ವ್ಯವಸ್ಥೆಯ ಬಗ್ಗೆ ಸ್ವಲ್ಪ ನೋಡೋಣ. ನಮ್ಮ ರಾಜ್ಯಸಭೆಗೆ ಸಂವಾದಿ ಎಂಬಂತೆ ಅಲ್ಲಿ 'ಬುಂಡೆಸ್‍ರಾಟ್‌' ಇದೆ. ಅಲ್ಲಿನ ಪ್ರತಿ ಪ್ರಾಂತ್ಯಕ್ಕೂ ಜನಸಂಖ್ಯೆ ಆಧರಿಸಿ 'ಬುಂಡೆಸ್‍ರಾಟ್‌'ನಲ್ಲಿ ಪ್ರಾತಿನಿಧಿಕ ಸ್ಥಾನಗಳನ್ನು ನಿಗದಿ ಮಾಡಲಾಗಿದೆ. 'ಬುಂಡೆಸ್‍ರಾಟ್‌'ಗೆ ಯಾರನ್ನು ತಮ್ಮ ಪ್ರಾಂತ್ಯದ ಅಭ್ಯರ್ಥಿಗಳನ್ನಾಗಿಸಬೇಕು ಎಂಬುದನ್ನು ಪ್ರಾಂತ್ಯ ಸರ್ಕಾರಗಳೇ ನಿರ್ಧರಿಸುತ್ತವೆ. ಕೊನೆಗೆ ಎಲ್ಲರೂ ಸದನದ ಮತದಾನದಲ್ಲಿ ಪಾಲ್ಗೊಂಡು ಅಭ್ಯರ್ಥಿಗಳನ್ನು ಚುನಾಯಿಸುತ್ತಾರೆ. ಈ ನೀತಿಯ ಅನುಸರಣೆಯಿಂದಾಗಿ ಜರ್ಮನಿಯ 'ಬುಂಡೆಸ್‍ರಾಟ್‌' ಅಲ್ಲಿನ ಒಕ್ಕೂಟ ಚಹರೆಯನ್ನು ಸಂರಕ್ಷಿಸಿಕೊಳ್ಳಲು ಮಹತ್ವದ ಮಾರ್ಗೋಪಾಯವಾಗಿ ಪರಿಣಮಿಸಿದೆ.

ನಮ್ಮಲ್ಲಿ ಪ್ರತಿ ರಾಜ್ಯಸಭಾ ಚುನಾವಣೆಯೂ ವಿವಾದಕ್ಕೀಡಾಗುತ್ತಿರುವುದರಿಂದ ಸುಧಾರಿತ ರಾಜ್ಯಸಭಾ ಸದಸ್ಯತ್ವ ಹಾಗೂ ಅದರ ನೈಜ ಉದ್ದೇಶ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆ, ಸಂವಾದಗಳನ್ನು ನಡೆಸಲು ಇದು ಪಕ್ವ ಕಾಲವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry