ಬುಧವಾರ, ಜೂನ್ 3, 2020
27 °C

ರಾಮೂನ ಪ್ಯಾಂಟು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಮನೆಯಲ್ಲಿ ಅವಸರವೋ ಅವಸರ. ಬೆಳಿಗ್ಗೆ ಎಲ್ಲ ಮನೆಗಳೂ ಹಾಗೇ ಅಲ್ಲವೇ? ಎಲ್ಲರೂ ಅವರವರ ಕೆಲಸಗಳಲ್ಲಿ ತೊಡಗಿದ್ದಾರೆ. ಬೇಗ ಬೇಗ ತಯಾರಾಗಿ ಕೆಲಸಕ್ಕೆ ಹೋಗಬೇಕಲ್ಲ?ಆದರೆ ಅಂದು ರಾಮೂಗೆ ಒಂದು ಕೆಲಸಕ್ಕೆ ಸಂದರ್ಶನಕ್ಕೆ ಆಹ್ವಾನ ಬಂದಿದೆ. ಅವನಿಗೆ ಅದರ ಸಂಭ್ರಮ. ತಯಾರಿ ಎಲ್ಲ ಆಗಿದೆ. ಚೆಂದವಾಗಿ ಕಾಣಲು ಹೊಸ ಶರ್ಟು, ಪ್ಯಾಂಟು ತಂದಿದ್ದಾನೆ. ಶರ್ಟಿನ ಬಣ್ಣವೇನೋ ತುಂಬ ಚೆನ್ನಾಗಿದೆ. ಒಂದು ಬಾರಿ ಹಾಕಿಕೊಂಡು ನೋಡಿದ, ಶರ್ಟು ಚೆನ್ನಾಗಿ ಒಪ್ಪುತ್ತಿತ್ತು. ಪ್ಯಾಂಟು ಹಾಕಿಕೊಂಡ. ಅಯ್ಯೋ, ಅದು ಸುಮಾರು ಎರಡು ಇಂಚು ಉದ್ದವಾಗಿದೆ! ಅಂದೇ ಅಂಗಡಿಯಲ್ಲಿ ನೋಡಿದ್ದರೆ ಅಲ್ಲಿಯೇ ಕತ್ತರಿಸಿ ಹೊಲಿಸಿಕೊಂಡು ಬರಬಹುದಿತ್ತು. ಈಗೇನು ಮಾಡುವುದು?ರಾಮೂ ಪ್ಯಾಂಟು ಹಿಡಿದುಕೊಂಡು ಅಡುಗೆ ಮನೆಗೆ ಓಡಿದ.‘ಅಮ್ಮಾ, ಇಂದು ಮಧ್ಯಾಹ್ನ ನನಗೆ ಸಂದರ್ಶನ ಇದೆ.ಈ ಪ್ಯಾಂಟು ಎರಡು ಇಂಚು ಉದ್ದವಾಗಿದೆ. ಅದನ್ನು ಮಡಿಚಿ ಹೊಲಿದುಕೊಡುತ್ತೀಯಾ?’ ಒಗ್ಗರಣೆ ಹಾಕುತ್ತಿದ್ದ ತಾಯಿ, ‘ಈಗ ನನ್ನನ್ನು ಮಾತನಾಡಿಸಲೇ ಬೇಡ, ಒಂದು ಸ್ವಲ್ಪವೂ ಸಮಯವಿಲ್ಲ.ಅಲ್ಲಿಯೇ ಕೋಣೆಯಲ್ಲಿಟ್ಟರು. ಆಮೇಲೆ ಕತ್ತರಿಸಿ ಸರಿಮಾಡುತ್ತೇನೆ. ಈಗ ನಡೀ ಇಲ್ಲಿಂದ’ ಎಂದು ಹೊರಡಿಸಿಬಿಟ್ಟರು.ರಾಮೂ ಪ್ಯಾಂಟು ತೆಗೆದುಕೊಂಡು ಅಕ್ಕನ ಕೋಣೆಗೆ ಹೋದ. ಆಕೆ ಎಲ್ಲಿಗೋ ಹೊರಟ ಹಾಗಿತ್ತು. ‘ಅಕ್ಕಾ, ನನಗೆ ಅರ್ಜೆಂಟಾಗಿ ಈ ಪ್ಯಾಂಟನ್ನು ಎರಡಿಂಚು ಗಿಡ್ಡ ಮಾಡಿ ಹೊಲಿದು ಕೊಡೇ. ಇಂದು ಮಧ್ಯಾಹ್ನ ನನಗೆ ಸಂದರ್ಶನ ಇದೆ, ನಿನಗೆ ಗೊತ್ತಲ್ಲ?’ ಎಂದು ಮೂತಿ ಉದ್ದ ಮಾಡಿದ. ಆಕೆ, ‘ಮಹಾರಾಯಾ, ನೀನು ಈಗಲೇ ಬಂದೆಯಾ? ಅಲ್ಲಿಯೇ ನಿನ್ನ ಕೋಣೆಯಲ್ಲಿ ಇಟ್ಟಿರು. ನಾನೀಗ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದೇನೆ. ಈಗ ಸಾಧ್ಯವಿಲ್ಲ. ಆಮೇಲೆ ಮಾಡುತ್ತೇನೆ’ ಎಂದು ಕೈ ಮಾಡಿ ಹೊರಟೇಬಿಟ್ಟಳು.

 


ರಾಮೂ ತಲೆ ತುರಿಸಿಕೊಂಡು ಇನ್ನಾರನ್ನು ಕೇಳುವುದು ಎಂದು ಚಿಂತಿಸಿ, ಥಟ್ಟನೇ ಅಜ್ಜಿಯ ಕೋಣೆಗೆ ಹೋದ.ಹೇಗಿದ್ದರೂ ಅಜ್ಜಿ ಬಿಡುವಾಗಿಯೇ ಇರುತ್ತಾಳಲ್ಲ? ಅದೂ ಅಲ್ಲದೇ ಆಕೆಗೆ ಮೊಮ್ಮಗನ ಮೇಲೆ ಬಲು ಪ್ರೀತಿ.ಅಜ್ಜಿ ಆರಾಮವಾಗಿ ಕೂತಿದ್ದರು. ಈತ ಸಮಸ್ಯೆ ಹೇಳಿಕೊಂಡ. ಆಗ ಅಜ್ಜಿ, ‘ಛೇ ಮುಂಡೇದೆ, ಈವತ್ತು ಹೇಳ್ತಾರೇನೋ? ನಿನ್ನೆ ಹೇಳಿದ್ದರೆ ಕ್ಷಣದಲ್ಲಿ ಸರಿಮಾಡಿಕೊಡುತ್ತಿದ್ದೆನಲ್ಲೋ? ಇಂದು ಶುಕ್ರವಾರ.ದಾರ, ಸೂಜಿ ಮುಟ್ಟಬಾರದು ಕಣೋ.ಆದರೂ ನೋಡೋಣ, ಅಲ್ಲೇ ನಿನ್ನ ಕೊಠಡಿಯಲ್ಲಿ ಇಟ್ಟಿರು ಅದನ್ನು’ ಎಂದರು.ರಾಮೂಗೆ ತಲೆ ಕೆಟ್ಟುಹೋಯಿತು. ತನ್ನ ಕೆಲಸಕ್ಕೆ ಯಾರಿಗೂ ಸಮಯವಿಲ್ಲ. ಏನಾದರಾಗಲಿ ಎಂದು ಪ್ಯಾಂಟು ತನ್ನ ಕೊಠಡಿಯಲ್ಲಿಟ್ಟು ಗೆಳೆಯನ ಮನೆಗೆ ಹೋದ. ಸಂದರ್ಶನ ನಾಲ್ಕು ಗಂಟೆಗೆ ಇತ್ತಲ್ಲ ಎಂದುಕೊಂಡು ಎರಡು ಗಂಟೆಗೆ ಮನೆಗೆ ಮರಳಿ ಬಂದ.ಅವನ ಪ್ಯಾಂಟು ಮೇಜಿನ ಮೇಲೆಯೇ ಇತ್ತು. ಯಾರಾದರೂ ಸರಿ ಮಾಡಿರಬೇಕೆಂದುಕೊಂಡು ಹಾಕಿಕೊಂಡು ನೋಡಿದ.ಅರೇ ಅದು ಈಗ ವಿಚಿತ್ರವಾಗಿ ಬಿಟ್ಟಿದೆ.ಮೊಣಕಾಲಿಗಿಂತ ನಾಲ್ಕಿಂಚು ಕೆಳಗಿದೆ! ಇದು ಅರ್ಧವೂ ಅಲ್ಲ, ಪೂರ್ತಿಯೂ ಅಲ್ಲ. ಅವನಿಗೆ ಅಳು ಬಂತು.ಆದದ್ದೇನೆಂದರೆ ಅಮ್ಮನಿಗೆ ಸಮಯ ಸಿಕ್ಕಾಗ ಬಂದು ಎರಡಿಂಚು ಕತ್ತರಿಸಿ ಹೊಲಿದು ಇಟ್ಟರು.ನಂತರ ಅಕ್ಕ ಬಂದಳು.ಆಕೆಗೆ ಅಮ್ಮ ರಿಪೇರಿ ಮಾಡಿದ್ದು ಗೊತ್ತಿಲ್ಲ. ಆಕೆಯೂ ಎರಡಿಂಚು ಕತ್ತರಿಸಿದಳು.ನಂತರ ಅಜ್ಜಿಗೆ ಪಾಪ ಎನ್ನಿಸಿತು.ತಾನು ಶುಕ್ರವಾರ ಹೊಲಿಯಲಾರೆ ಆದರೆ ಹುಡುಗನಿಗೆ ಬೇಕಲ್ಲ ಎಂದು ಪಕ್ಕದ ಮನೆಯ ಗೌರಿಯನ್ನು ಕರೆಯಿಸಿ, ಎರಡಿಂಚು ಕತ್ತರಿಸಿ ಹೊಲಿಸಿ ಇಟ್ಟಿದ್ದರು.ನಮಗೂ ಹಾಗೇ ಆಗುತ್ತದೆ. ಕೆಲಸ ಆಗುತ್ತದೋ ಇಲ್ಲವೋ ಎಂಬ ಭಯದಿಂದ ಹತ್ತಾರು ಜನಕ್ಕೆ ಹೇಳಿಡುತ್ತೇವೆ,ಒಬ್ಬರನ್ನು ನಂಬಿ ಭದ್ರಪಡಿಸಿಕೊಳ್ಳುವುದಿಲ್ಲ. ಆಗ ನಮ್ಮ ಕೆಲಸಗಳೂ ರಾಮೂವಿನ ಪ್ಯಾಂಟಿನಂತೆಯೇ ಆಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.