ಮಂಗಳವಾರ, ಆಗಸ್ಟ್ 4, 2020
24 °C

ರಾಮ, ರಾಮಾಯಣ ಹಾಗೂ ಸಹಿಷ್ಣುತೆ

ಪ್ರಸನ್ನ Updated:

ಅಕ್ಷರ ಗಾತ್ರ : | |

ರಾಮ, ರಾಮಾಯಣ ಹಾಗೂ ಸಹಿಷ್ಣುತೆ

‌ಭವಭೂತಿಯ ಉತ್ತರರಾಮ ಚರಿತೆ ಹೀಗೆ ಶುರುವಾಗುತ್ತದೆ. ರಾಮ ಸೀತೆಯರು ರಂಗದ ಮೇಲಿದ್ದಾರೆ. ಇಡೀ ಅರಮನೆಯಲ್ಲಿ ಅಂದು ಇರುವುದು ಅವರಿಬ್ಬರು ಹಾಗೂ ಲಕ್ಷ್ಮಣ ಮಾತ್ರವೇ ಹೌದು. ಹಿರಿಯರೆಲ್ಲರೂ ಋಷ್ಯಶೃಂಗ ಮುನಿಯು ನಡೆಸುತ್ತಿರುವ ಯಾಗದಲ್ಲಿ ಭಾಗವಹಿಸಲೆಂದು ಹೋಗಿದ್ದಾರೆ. ಸೀತೆ ತುಂಬು ಗರ್ಭಿಣಿ.

ಸೀತೆಯನ್ನು ಸಂತೋಷದಲ್ಲಿ ಇಡಬೇಕೆಂದು ಹೆಣಗುತ್ತಿರುವ ಲಕ್ಷ್ಮಣನು, ‘ಅರಮನೆಯ ಚಿತ್ರಕಾರರು ವನವಾಸದ ಚಿತ್ರಗಳನ್ನು ರಚಿಸಿ ಮುಗಿಸಿದ್ದಾರೆ, ನೋಡಬಹುದು’ ಎಂದು ಸೂಚನೆ ನೀಡುತ್ತಾನೆ. ಸೀತೆ ಉತ್ಸಾಹದಿಂದ ಮುಂದಾಗುತ್ತಾಳೆ. ಚಿತ್ರಗಳನ್ನು ನೋಡುತ್ತ ನೋಡುತ್ತ, ನದಿ ಬೆಟ್ಟ ಅರಣ್ಯ ಆಶ್ರಮಗಳನ್ನು ಮತ್ತೊಮ್ಮೆ ಕಣ್ಣಲ್ಲಿ ತುಂಬಿಕೊಳ್ಳುತ್ತ, ಕಾಡಿನಲ್ಲಿ ತಾವು ಕಳೆದ ಸುಂದರ ದಿನಗಳನ್ನು ನೆನಪಿಸಿಕೊಳ್ಳುತ್ತ, ಸೀತೆ ಸಂತಸಪಡುತ್ತಾಳೆ.

ಶೂರ್ಪನಖಿಯ ಚಿತ್ರ ಬರುತ್ತದೆ. ಹೆದರಿ ನಡುಗುತ್ತಾಳೆ. ಅಗ್ನಿ ಪ್ರವೇಶದ ಚಿತ್ರ ಬರುತ್ತದೆ. ರಾಮ ತಡಬಡಿಸುತ್ತಾನೆ. ತನ್ನನ್ನು ತಾನು ಸಮರ್ಥಿಸಿಕೊಳ್ಳಲು ರಾಮ ಹೆಣಗುತ್ತಿರುವುದನ್ನು ಕಂಡು ನಸುನಕ್ಕು ಸೀತೆ ಅವನ ಬಾಯಿಯ ಮೇಲೆ ಕೈ ಇಟ್ಟು, ಮುಜುಗರ ನಿವಾರಿಸುತ್ತಾಳೆ. ಆಯಾಸಗೊಂಡು ಗಂಡನ ತೊಡೆಯ ಮೇಲೆಯೇ ಮಲಗಿ ನಿದ್ರೆ ಹೋಗುತ್ತಾಳೆ.

ದುರ್ಮುಖನೆಂಬ ಗೂಢಚಾರನ ಪ್ರವೇಶವಾಗುತ್ತದೆ. ರಾಜ್ಯದಲ್ಲಿ ಏನಾಗುತ್ತಿದೆ, ಯಾರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿಯುವ ಕುತೂಹಲ ರಾಮನಿಗೆ. ದುರ್ಮುಖನಿಂದ ವರದಿ ಬಯಸುತ್ತಾನೆ, ದುರ್ಮುಖ ‘ಏನಿಲ್ಲ ಏನಿಲ್ಲ’ ಎಂದು ಹಾರಿಕೆಯ ಉತ್ತರ ನೀಡುತ್ತಾನೆ. ರಾಮನಿಗೆ ಅನುಮಾನ ಏಳುತ್ತದೆ. ಗಟ್ಟಿಸಿ ಕೇಳುತ್ತಾನೆ. ‘ಬೇಡ ದೊರೆ, ತೀರ ಸಣ್ಣ ಮಾತಿದು’ ಎಂದು ದುರ್ಮುಖ ಎಷ್ಟೇ ಹೇಳಿದರೂ ಕೇಳದೆ, ಹೇಳಲೇಬೇಕೆಂದು ಹಟ ಹಿಡಿಯುತ್ತಾನೆ ರಾಮ. ದುರ್ಮುಖ ಧರ್ಮಸಂಕಟ ಅನುಭವಿಸುತ್ತ ಅಗಸನೊಬ್ಬ ಆಡಿದ ದುರ್ನುಡಿಗಳನ್ನು ವರದಿ

ಮಾಡುತ್ತಾನೆ. ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಬಡಿಯುತ್ತ, ‘ರಂಡೆ! ಪರ ಪುರುಷನೊಟ್ಟಿಗೆ ಇದ್ದವಳನ್ನು ಸಹಿಸಿಕೊಳ್ಳಲಿಕ್ಕೆ ನಾನೇನು ರಾಮ ಕೆಟ್ಟು ಹೋದೆನೇ!... ತೊಲಗಾಚೆಗೆ’ ಎಂದು ನುಡಿದಿರುತ್ತಾನೆ ಅಗಸ.

ರಾಮನ ಮುಖ ಕಪ್ಪಿಟ್ಟು ಹೋಗುತ್ತದೆ. ಭಯಾನಕವಾದ ದ್ವಂದ್ವವೊಂದು ಧುತ್ತೆಂದು ಅವನ ಮುಂದೆ ಎದ್ದು ನಿಲ್ಲುತ್ತದೆ. ಪುರುಷ ಅಹಂಕಾರ ಕೆದರುತ್ತದೆ. ಪ್ರೀತಿ ಒಂದು ಕಡೆ, ಸಾರ್ವಜನಿಕ ಮರ್ಯಾದೆ ಮತ್ತೊಂದು ಕಡೆ ಜಗ್ಗಿ ರಾಮನನ್ನು ಗೋಳಾಡಿಸುತ್ತವೆ. ಸೀತೆಯ ಮೇಲೆ ಬಂದಿರುವ ಸಾರ್ವಜನಿಕ ಕಳಂಕ ಅವನನ್ನು ಹಿಂಸಿಸುತ್ತದೆ.

ಹೀಗೆ ವಿಚಾರ ಮಾಡುತ್ತಾನೆ: ಸೀತೆ ಸಾಮಾನ್ಯ ಹೆಂಡತಿಯಲ್ಲ, ಚಕ್ರವರ್ತಿಯ ಮಡದಿ. ತನ್ನದು ರಾಜಧರ್ಮ... ಇತ್ಯಾದಿ ಇತ್ಯಾದಿ. ಅಂತೂ ಕೊನೆಗೊಮ್ಮೆ ಆತನ ಅವಸರ ಪ್ರವೃತ್ತಿ ಹಾಗೂ ಹುಡುಗು ಬುದ್ಧಿ ಮೇಲುಗೈ ಸಾಧಿಸುತ್ತವೆ. ಲಕ್ಷ್ಮಣನನ್ನು ಕರೆದು, ‘ನಿನ್ನ ಅತ್ತಿಗೆಯನ್ನು ಕರೆದೊಯ್ದು ಕಾಡಿಗೆ ಬಿಟ್ಟು ಬಾ’ ಎಂದು ಆಜ್ಞೆ ಮಾಡುತ್ತಾನೆ.

ರಾಮ ಮಾಡಿದ್ದು ತಪ್ಪೆ? ರಾಮನ ವೈಯಕ್ತಿಕ ಘನತೆಗೆ ಸಂಬಂಧಿಸಿದ ಈ ಪ್ರಶ್ನೆ ಎತ್ತಲು ಕತೆಯನ್ನು ದಾಖಲಿಸುತ್ತಿಲ್ಲ ನಾನು. ಲೋಕವು ಶತ ಶತಮಾನಗಳಿಂದ ಅದನ್ನು ಮಾಡಿಕೊಂಡು ಬಂದಿದೆ. ಇಂದಿನ ಮಧುಬನಿ ಸೀತಾಮರ್‍ಹಿ ಇತ್ಯಾದಿ ಪ್ರದೇಶದ, ಜನಕನ ರಾಜ್ಯದ ಗ್ರಾಮೀಣ ಜನರು ಈಗಲೂ ಗಂಗೆಯ ಆಚೆ ತಟದ ಅಯೋಧ್ಯೆಯ ಗಂಡಿಗೆ ಹೆಣ್ಣು ಕೊಡುವುದಿಲ್ಲ. ಹಾಗಂತ ಅವರಲ್ಲಿ ರಾಮಭಕ್ತಿಗೆ ಕೊರತೆಯೂ ಆಗಿಲ್ಲ. ಉತ್ತರ ಬಿಹಾರದ ತುಂಬ ಸೀತಾರಾಮ ಮಂದಿರಗಳು ತುಂಬಿಕೊಂಡಿವೆ. ದಯವಿಟ್ಟು ಗಮನಿಸಿ, ಇವು ಸೀತಾರಾಮ ಮಂದಿರಗಳು, ಕೇವಲ ರಾಮಮಂದಿರಗಳಲ್ಲ.

ರಾಮನ ಮರ್ಯಾದೆ ಒಂದು ಚೋದ್ಯ. ‘ಡಾಲ್ಸ್ ಹೌಸ್’ ಎಂಬ ಹೆಸರಾಂತ ನಾಟಕ ಬರೆದು ಹತ್ತೊಂಬತ್ತನೆಯ ಶತಮಾನದ ಕಡೆಯಲ್ಲಿ ಮಹಿಳಾ ಚಳವಳಿಗೆ ನಾಂದಿ ಹಾಡಿದ ಹೆನ್ರಿಕ್ ಇಬ್ಸನ್, ಗ್ರಾಮೀಣರ ಈ ನಡೆಯನ್ನು ಅರಿಯಲಾರ. ಅಥವಾ ಎಡ– ಬಲ ಪಂಥಗಳಾಗಿ ಒಡೆದು

ಹೋಗಿರುವ ನಾವು ಕೂಡ ಈ ಚೋದ್ಯವನ್ನು ಸಮರ್ಥವಾಗಿ ನಿಭಾಯಿಸಿಲ್ಲ.ಸತ್ಯವೇನೆಂದರೆ, ಇಬ್ಸನ್ ಮದುವೆ ಮುರಿದು ನ್ಯಾಯ ಹೇಳಿದ. ಜನಕನ ರಾಜ್ಯದ ಗ್ರಾಮೀಣರು ಮದುವೆ ಹಾಗೂ ಮಕ್ಕಳನ್ನು ಉಳಿಸಿಕೊಂಡೇ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಸಲ್ಲಿಸಿದರು. ಇರಲಿ.

ಇಷ್ಟಕ್ಕೂ ಈ ಚೋದ್ಯವನ್ನು ಹುಟ್ಟಿಹಾಕಿದ್ದು ಮಹಾನುಭಾವ ವಾಲ್ಮೀಕಿಯೇ ಹೌದು. ಮನಸ್ಸು ಮಾಡಿದ್ದರೆ ಆತ ರಾಮಾಯಣವನ್ನು ಬೇರೆಯದೇ ರೀತಿಯಲ್ಲಿ ಚಿತ್ರಿಸಬಹುದಿತ್ತು. ರಾಮನ ಮರ್ಯಾದೆ ಉಳಿಸುವ ಅನಗತ್ಯ ಪ್ರಯತ್ನ ನಡೆಸಬಹುದಿತ್ತು. ನಂತರದ ಕವಿ ತುಳಸೀದಾಸ ಅನೇಕ ಕಡೆ ಹಾಗೆ ಮಾಡಿದ್ದಾನೆ ಕೂಡ.

ನಾನಾಗಲೇ ಹೇಳಿದ ಹಾಗೆ ಸಮಕಾಲೀನ ಯುಗವು ಈ ವಿಷಯದಲ್ಲಿ ಸಂಪೂರ್ಣ ಹರಿದು ಹೋಗಿದೆ. ಇಲ್ಲವೇ, ಸೀತೆಗೆ ಜೀನ್ಸ್ ಪ್ಯಾಂಟು ತೊಡಿಸಿ, ಬಾಯಲ್ಲಿ ಸಿಗರೇಟು ತುರುಕಿಸಿ ಸಂಭ್ರಮಿಸುತ್ತದೆ, ಇಲ್ಲವೇ ಕೆಟ್ಟ ಸೀರಿಯಲ್ಲುಗಳ ಮೂಲಕ ರಾಮ ಸೀತೆಯರನ್ನು ಜೀವರಹಿತ ಸಂಕೇತಗಳನ್ನಾಗಿಸಿ, ಪ್ರೇಕ್ಷಕರು ವ್ಯರ್ಥ ಜಗಿಯುತ್ತಿರಲಿಕ್ಕೆಂದು ಮೇವು ಒದಗಿಸುತ್ತದೆ. ನಿಜವಾದ ರಾಮ, ನಿಜವಾದ ಸೀತೆ ನಮ್ಮಿಂದ ದೂರವೇ ಉಳಿಯುತ್ತಾರೆ.

ಲೇಖನದ ಉದ್ದೇಶ, ನಾನಾಗಲೇ ಹೇಳಿದ ಹಾಗೆ, ರಾಮನ ವೈಯಕ್ತಿಕ ಬದುಕಿನ ವಿಮರ್ಶೆ ಅಲ್ಲ. ರಾಜಕೀಯವಾಗಿ ಮಹತ್ವದ ಸಂಗತಿಯೊಂದರತ್ತ ನಿಮ್ಮ ಗಮನ ಸೆಳೆಯಲು ಯತ್ನಿಸುತ್ತಿದೆ ಈ ಲೇಖನ. ಅಗಸನ ಅಭಿಪ್ರಾಯಕ್ಕೆ ರಾಮ ತೋರಿಸುವ ಗೌರವ ಹಾಗೂ ಸಹಿಷ್ಣುತೆಯ ಮನೋಭಾವಗಳನ್ನು ನಾವಿಲ್ಲಿ ಗಮನಿಸಬೇಕು. ಸಹಿಷ್ಣುತೆಯ ಮಾತನಾಡಿದೆ. ಈಗಿನ ಆಡಳಿತ ಪಕ್ಷವನ್ನು ಟೀಕಿಸಲಿಕ್ಕಾಗಿ ಮಾತ್ರವೇ ಈ ಲೇಖನ ಬರೆಯುತ್ತಿದ್ದೇನೆ ನಾನು ಎಂದು ನಿಮಗೆ ಅನ್ನಿಸಿ ಬಿಡಬಹುದು. ಸಹಿಷ್ಣುತೆ ಹಾಗೂ ಮರ್ಯಾದೆಗಳು ನಮಗೆ, ನಿಮಗೆ ಸಹ ಅಗತ್ಯವಿದೆ. ಕೊಂಚ ತಾಳ್ಮೆಯಿರಲಿ.

ರಾಮ ಒಬ್ಬ ರಾಜ, ಚಕ್ರವರ್ತಿ. ಈಗಷ್ಟೆ ರಾವಣನನ್ನು ಗೆದ್ದು ತನ್ನ ಶೌರ್ಯ ಸಾಧಿಸಿರುವವನು. ರಾಮನ ಸಾಮರ್ಥ್ಯದ ಬಗ್ಗೆಯಾಗಲೀ ಚಾರಿತ್ರ್ಯದ ಬಗ್ಗೆಯಾಗಲೀ ಅಥವಾ ಆತನ ಪತ್ನಿಯ ತೇಜೋಮಯ ಚಾರಿತ್ರ್ಯದ ಬಗ್ಗೆಯಾಗಲೀ ಯಾರಿಗೂ ಅನುಮಾನವಿಲ್ಲ, ದೇವರಿಗೇ ಅನುಮಾನವಿಲ್ಲ. ಮನಸ್ಸು ಮಾಡಿದ್ದರೆ ಅಗಸನನ್ನು ತಿಗಣೆ ಹೊಸಕಿದ ಹಾಗೆ ಹೊಸಕಿ ಹಾಕಿಬಿಡಬಹುದಿತ್ತು ರಾಮ. ಯಾರೂ ಚಕಾರ ಎತ್ತುತ್ತಿದ್ದಿಲ್ಲ. ಆದರೆ ರಾಮ ಹಾಗೆ ಮಾಡಲಿಲ್ಲ.

ಪ್ರಜೆಗಳ ಪ್ರಶ್ನೆಗಳನ್ನು ಹೊಸಕಿ ಹಾಕಿ ಬಿಡುವುದು ಇಂದಿನ ರೀತಿ. ರಾಮರಾಜ್ಯ, ಕೃಷ್ಣರಾಜ್ಯ, ಸೆಕ್ಯುಲರ್ ರಾಜ್ಯ... ಇತ್ಯಾದಿ ಆದರ್ಶಗಳ ಮಾತನಾಡುತ್ತಲೇ ವಿರೋಧಿಗಳನ್ನು ಹೊಸಕಿ ಹಾಕಿ ಬಿಡುವುದು ಇಂದಿನ ಜನನಾಯಕರುಗಳ ರೀತಿ. ಇದು ಅಸಹಿಷ್ಣುತೆ. ಇಂತಹ ಅಸಹಿಷ್ಣುತೆಯನ್ನು ಹಿಟ್ಲರ್‌ನಿಂದ ಹಿಡಿದು ಇಂದಿನ ಜನನಾಯಕರವರೆಗೆ ಎಲ್ಲರೂ ಮಾಡಿಕೊಂಡು ಬಂದಿದ್ದಾರೆ. ಕೊಂಚ ಹೆಚ್ಚಿರಬಹುದು ಕೊಂಚ ಕಡಿಮೆಯಿರಬಹುದು, ಆದರೆ ಮಾಡಿಕೊಂಡು ಬಂದಿದ್ದಾರೆ.

ರಾಮನ ನಡತೆ ಗಮನಿಸಿ! ಅಗಸ ಕುಡಿದಿದ್ದ. ಹಾಗಾಗಿ, ಮೇಲ್ನೋಟಕ್ಕೇ ಅಯೋಗ್ಯವಾಗಿ ಕಾಣಬಲ್ಲಂತಹವು ಅವನ ಮಾತುಗಳು. ಇಂದಿನ ಅಗಸ ಕುಡಿಯದೆ ಮಾತನಾಡುತ್ತಿದ್ದಾನೆ. ಅದು ಕಲಬುರ್ಗಿಯಿರಲಿ, ಗೌರಿಯಿರಲಿ ಅಥವಾ ದಾಭೋಲ್ಕರ್ ಇರಲಿ ಅಥವಾ ಪನಾಮಾ ಪೇಪರು

ಗಳನ್ನು ಬಹಿರಂಗಪಡಿಸಿದ ಐರೋಪ್ಯ ಮಹಿಳೆಯಿರಲಿ, ಇವರೆಲ್ಲರ ಕೊಲೆಗೆ ನಮ್ಮ ಜನನಾಯಕರುಗಳ  ಅಸಹಿಷ್ಣು ಮಾತುಗಳು  ಪ್ರಚೋದನೆ ನೀಡುತ್ತಿವೆ. ಕೊಲೆಗಳನ್ನು ನಾಯಕರೇ ಕೈಯಾರೆ  ಮಾಡಿಸಿದರೇ, ಅವರ ಪಕ್ಷ  ಮಾಡಿಸಿತೆ? ಇಂತಹ ಮಾತುಗಳು ಇಲ್ಲಿ ಅಪ್ರಸ್ತುತ.

ಅಗಸ ಕೊಳೆ ತೊಳೆಯುವವ, ಕಾಯಕಜೀವಿ. ಪ್ರಶ್ನೆ ಮಾಡುವ ಎಲ್ಲ ಹಕ್ಕೂ ಇದೆ ಅವನಿಗೆ. ರಾಜಕಾರಣಿಯ ಅಂಗಿಗೆ ಅಂಟಿದ ಕೊಳೆ, ಇತರರಿಗೆ ಕಾಣದಿದ್ದರೇನಂತೆ ಅಗಸನಿಗೆ ಕಂಡೇ ಕಾಣುತ್ತದೆ. ಕಂಡಾಗ, ಕಂಡದ್ದನ್ನು ಕಂಡಂತೆ ಹೇಳಿದಾಗ, ಅಗಸನ ಕೊಲೆಯಾಗಬಾರದು ಎನ್ನುತ್ತದೆ ವಾಲ್ಮೀಕಿ ರಾಮಾಯಣ. ಟೀಕೆ ಮಾಡುವವರನ್ನು, ಅನಗತ್ಯವಾಗಿ, ಕುಡುಕರೆಂದೂ ವ್ಯಭಿಚಾರಿಗಳೆಂದೂ ಬಿಂಬಿಸಬಾರದು ಎನ್ನುತ್ತದೆ ವಾಲ್ಮೀಕಿ ರಾಮಾಯಣ.

ವಾಲ್ಮೀಕಿ ಸಣ್ಣ ಲೇಖಕನಲ್ಲ. ರೂಪಕವೊಂದನ್ನು ಆತ ಬಳಸಿದಾಗ ಅದು ಪೂರ್ಣವಾಗಿ ಬಳಕೆಯಾಗಿರುತ್ತದೆ. ರಾಮಾಯಣದಲ್ಲಿ ಬರುವ ಅಗಸನ ರೂಪಕವೂ ಅಷ್ಟೆ. ರಾಮನಿಗಿರುವಂತೆಯೇ ಅಗಸನಿಗೂ ಎರಡು ಆಯಾಮಗಳಿವೆ. ಸಮಾಜದ ಕೊಳೆ ತೊಳೆಯುವ ಕಾಯಕ ಜೀವಿಯೂ ಹೌದು,  ಕುಡಿತ– ವ್ಯಭಿಚಾರ ಇತ್ಯಾದಿ ದುರ್ನಡೆಗೆ ಬಲಿಬಿದ್ದಿರುವ ದರಿದ್ರನೂ ಹೌದು ಅವನು.

ರಾಮ ಹಾಗೂ ಅಗಸನ ನಡುವಿನ ವ್ಯತ್ಯಾಸ ಸಣ್ಣದು. ಆದರೆ ಮಹತ್ತರವಾದದ್ದು. ಅದು ಚಾರಿತ್ರ್ಯ. ಸಚ್ಚಾರಿತ್ರ್ಯ ಉಳ್ಳವನು ಮರ್ಯಾದಾ ಪುರುಷೋತ್ತಮ. ಆತ ಯಾರೇ ಇರಲಿ, ಮರ್ಯಾದಾ ಪುರುಷೋತ್ತಮ. ಕೆಟ್ಟ ನಡತೆಯವನು, ರಾವಣನೇ ಆಗಿರಲಿ ಅಥವಾ ಕಾಯಕಜೀವಿಯೇ ಆಗಿರಲಿ, ಲೋಕ ಕಂಟಕನಾಗುತ್ತಾನೆ. ಇದು ವಾಲ್ಮೀಕಿ ಮುನಿಯ ನಂಬಿಕೆ. ಇದು ನಮ್ಮ ನಂಬಿಕೆಯೂ ಆಗಬೇಕು. ಒಬ್ಬ ವ್ಯಕ್ತಿ ಪ್ರಧಾನಮಂತ್ರಿಯೋ ಮುಖ್ಯಮಂತ್ರಿಯೋ ಆದಮಾತ್ರಕ್ಕೆ ಆತನಲ್ಲಿ ಸದ್ಗುಣಗಳನ್ನು ಕಾಣಬೇಕಿಲ್ಲ ನಾವು. ಅಥವಾ ಅಗಸನಾದ ಮಾತ್ರಕ್ಕೆ ಆತನಲ್ಲಿ ದುರ್ಗುಣಗಳನ್ನು ಕಾಣಬೇಕಿಲ್ಲ ನಾವು.

ಇಂದು ರಾಮರಾಜ್ಯಕ್ಕಿಂತ ಸಾವಿರಾರು ವರ್ಷ ಮುಂದೆ ಬಂದಿದ್ದೇವೆ ನಾವು. ಅಪಾರವಾದ ಬೆಲೆ ತೆತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಧಿಸಿಕೊಂಡಿದ್ದೇವೆ. ಆದರೆ ದುರಂತ ನೋಡಿ! ಅಹಂಕಾರಿ ಶ್ರೀಮಂತರುಗಳ ರಾಜ್ಯ ವನ್ನು ಸ್ಥಾಪಿಸಿದ್ದೇವೆ. ಆಳುವವರ್ಗಗಳು, ಅಧಿಕಾರಿಗಳು, ಪೂಜಾರಿಗಳು, ಪುರೋಹಿತರು, ಆಧುನಿಕ ಸನ್ಯಾಸಿಗಳು, ಉದ್ದಿಮೆಪತಿಗಳು ಎಲ್ಲರೂ ಅಹಂಕಾರಿಗಳಾಗಿದ್ದಾರೆ. ಎಲ್ಲರೂ ಅಸಹಿಷ್ಣುಗಳಾಗಿದ್ದಾರೆ. ಅಗಸ ಎದ್ದು ನಿಂತರೆ ಸಾಕು ಬಗ್ಗು ಬಡಿಯುತ್ತಾರೆ.

ಮೊನ್ನೆ, ಬಿಹಾರದಲ್ಲಿ ಒಂದು ಘಟನೆ ನಡೆಯಿತು. ಆತ ಒಬ್ಬ ಕಾಯಕ ಜೀವಿ. ಕಾಯಕದ ಸಲುವಾಗಿ ಊರ ಸರಪಂಚನ ಮನೆಯೊಳಗೆ ಹೋದ. ಮನೆ ಪ್ರವೇಶಿಸಿದಾಗ ಮನೆಯಲ್ಲಿ ಗಂಡಸರು ಇರಲಿಲ್ಲ. ಅದು ಅವನಿಗೆ ತಿಳಿದಿರಲಿಲ್ಲ. ಸರಿ, ಒದ್ದು ಕೆಡವಿ, ಚಪ್ಪಲಿಯಿಂದ ಬಡಿದು, ಆತನಿಂದಲೇ ಉಗುಳಿಸಿ, ಆತನಿಂದಲೇ ಅದನ್ನು ನೆಕ್ಕಿಸಿ, ತಮ್ಮ ನಡತೆ ರಾಮನ ನಡತೆಗಿಂತಲೂ ಹಿರಿದಾದದ್ದು ಎಂದು ಸಾಧಿಸಲಿಕ್ಕಾಗಿ ಇಡೀ ಪ್ರಸಂಗವನ್ನು ವಿಡಿಯೊ ಚಿತ್ರಣಗೊಳಿಸಿ ಲೋಕಕ್ಕೆ ಪ್ರಸಾರ ಮಾಡಿದ್ದೇವೆ ನಾವು. ಅಥವಾ ಮುಸಲ್ಮಾನರವನೊಬ್ಬ, ಆತ ಗೋಮಾಂಸ ಮಾರುತ್ತಿರಬಹುದು ಎಂಬ ಸಂದೇಹ ಮಾತ್ರದಿಂದ ಆತನನ್ನು ಕೊಂದು ಅಟ್ಟಹಾಸ ಮೆರೆದಿದ್ದೇವೆ, ಇತ್ಯಾದಿ.ಒಟ್ಟು ಕತೆಯ ನೀತಿಯೆಂದರೆ, ಪರಿಶುದ್ಧ ಚಾರಿತ್ರ್ಯದ ಅಗಸರೆಲ್ಲರೂ ಸೇರಿ ರಾಮರಾಜ್ಯ ಸ್ಥಾಪಿಸಬೇಕಾದ ಕಾಲ ಬಂದಿದೆ ಇಂದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.