ಭಾನುವಾರ, ಮೇ 9, 2021
27 °C

ರಾಳೇಗಣ ಸಿದ್ಧಿ ಮತ್ತು ರಾಮಲೀಲಾ ಮೈದಾನ

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿರುವ ಸಂಬಂಧಿಕರೊಬ್ಬರು  ನನಗೆ ಪೋನ್ ಮಾಡಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮನಸಾರೆ ಶಾಪ ಹಾಕುತ್ತಿದ್ದರು (ಸದ್ಯಕ್ಕೆ ಅವರ ಹೆಸರು ರಾಂಪಣ್ಣ ಎಂದಿಟ್ಟುಕೊಳ್ಳೋಣ). ಕಳೆದ ವಾರದ ನನ್ನ ಅಂಕಣವನ್ನು ಓದಿದ್ದ ರಾಂಪಣ್ಣ `ನಾವು  ನಮ್ಮ ಮಕ್ಕಳಿಂದ ಬೀದಿಗೆ ಬಿದ್ದಿರುವಂತೆ, ಆ ಮನಮೋಹನ್‌ಸಿಂಗ್ ತಮ್ಮ `ಮಕ್ಕಳಿಂದ~ ಬೀದಿಗೆ ಬೀಳಬೇಕು. ಸರಿಯಾಗಿಯೇ ಬರೆದಿದ್ದೀರಿ~ ಎಂದು ಸಿಟ್ಟು ಕಾರಿಕೊಳ್ಳುತ್ತಿದ್ದರು. ವೃತ್ತಿಯಲ್ಲಿ ಕೃಷಿಕರಾಗಿರುವ ರಾಂಪಣ್ಣನವರಿಗೆ ಈಗ ಸುಮಾರು 70 ವರ್ಷ. ತನ್ನ ಯೌವ್ವನದ ದಿನಗಳಲ್ಲಿ ಯುವಕ ಸಂಘ ಕಟ್ಟಿ ಊರಿಗೆ ರಸ್ತೆ, ಕುಡಿಯುವ ನೀರು, ಶಾಲೆ ಬರಲು ಕಾರಣರಾದವರು ಅವರು. ಬಹಳ ಕಷ್ಟದಲ್ಲಿಯೇ ಹೊಟ್ಟೆಬಟ್ಟೆ ಕಟ್ಟಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಎಂಜಿನಿಯರಿಂಗ್ ಓದಿಸಿದ್ದಾರೆ. ಹಿರಿಯ ಮಗ ಮುಂಬೈನಲ್ಲಿದ್ದಾನೆ, ಕಿರಿಯವನು ದೆಹಲಿಯಲ್ಲಿದ್ದಾನೆ ಮತ್ತು ಮಗಳು ಅಮೆರಿಕಾದಲ್ಲಿದ್ದಾಳೆ. ಎಲ್ಲರಿಗೂ ಅವರದ್ದೇ ಆಗಿರುವ ಸಂಸಾರ ಇದೆ. ಈಗ ಇರುವ ಪಟ್ಟಣಗಳಲ್ಲಿಯೇ ನೆಲೆ ಊರಿದ್ದಾರೆ.ಎರಡು ವರ್ಷಗಳ ಹಿಂದೆ ಮಕ್ಕಳೆಲ್ಲ ಕೂಡಿ ತಂದೆ-ತಾಯಿಗೆ ದೊಡ್ಡ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಣಕ್ಕೇನೂ ಕೊರತೆ ಇಲ್ಲ, ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಮಕ್ಕಳು ತಪ್ಪದೆ ಹಣ ತುಂಬುತ್ತಾರೆ. ಆದರೇನು ಫಲ? ರಾಂಪಣ್ಣನಿಗೆ ವೃದ್ಧಾಪ್ಯಸಹಜ ಕಾಯಿಲೆಗಳೆಲ್ಲ ಇವೆ. ಹೆಂಡತಿ ಮಂಡಿನೋವಿನಿಂದಾಗಿ ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ,  ಎಲ್ಲದ್ದಕ್ಕೂ ಮತ್ತೊಬ್ಬರನ್ನು ಆಶ್ರಯಿಸಬೇಕಾದ ದಯನೀಯ ಸ್ಥಿತಿ.ಎಲ್ಲವೂ ಇದೆ. `ಹೇಗಿದ್ದೀರಿ ಅಪ್ಪಾ, ಅಮ್ಮಾ?~  ಎಂದು ಪಕ್ಕದಲ್ಲಿ ಕುಳಿತು ಕೇಳುವವರೇ ಇಲ್ಲ.  ವರ್ಷಗಳ ಹಿಂದೆ ತಮ್ಮ ಬುದ್ಧಿವಂತ ಮಕ್ಕಳ ಬಗ್ಗೆ ಹೆಮ್ಮೆಯಿಂದ ಬಾಯ್ತುಂಬ ಮಾತನಾಡುತ್ತಿದ್ದ ರಾಂಪಣ್ಣ ಈಗ ಅವರ ಹೆಸರೆತ್ತಿದರೆ ಸಿಡಿಯುತ್ತಾರೆ. `ಮುಪ್ಪಿನ ಕಾಲದಲ್ಲಿ ನಮ್ಮನ್ನು ಬೀದಿಗೆ ಹಾಕಿದ ಮಕ್ಕಳು ಇದ್ದರೇನು, ಬಿಟ್ಟರೇನು~ ಎಂದು ಕೇಳುತ್ತಿದ್ದಾರೆ. `ನನ್ನದೇ ತಪ್ಪು, ಸುಮ್ಮನೆ ಒಂದು ಡಿಗ್ರಿ ಓದಿಸಿದ್ದರೆ ಇಲ್ಲಿಯೇ ಯಾವುದಾದರೂ ಬ್ಯಾಂಕಿನಲ್ಲೋ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಬಳಿ ಇರುತ್ತಿದ್ದರು. ಏನೂ ಓದಿಸದೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಇಲ್ಲಿಯೇ ಕೃಷಿ ಮಾಡಿಕೊಂಡು ಬಿದ್ದಿರುತ್ತಿದ್ದರು. ಅದೇನೋ ಐಟಿ-ಬಿಟಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಈ ಕೃಷಿ ನಂಬಿ ಅವರು ಹಾಳಾಗುವುದು ಬೇಡ ಎಂದು ಎಂಜಿನಿಯರಿಂಗ್ ಓದಿಸಿ ಕೆಟ್ಟೆ. ಇವೆಲ್ಲವೂ ಮನಮೋಹನ್‌ಸಿಂಗ್ ಮಾಡಿದ ಅವಾಂತರ, ಆರ್ಥಿಕ ಉದಾರೀಕರಣ ನಡೆಯದೆ ಹೋಗಿದ್ದರೆ ನಾವು ಆಮಿಷಗೊಳಗಾಗುತ್ತಿರಲಿಲ್ಲ~ ಎಂದು ಹೇಳುತ್ತಿದ್ದಾಗ ಅವರ ಗಂಟಲು ಕಟ್ಟಿತ್ತು.

ಅವರ ಸಂಕಟಕ್ಕೆ ಇನ್ನೊಂದು ಕಾರಣ ಇತ್ತು. ಸಾಮಾನ್ಯವಾಗಿ ಚೌತಿ-ಅಷ್ಟಮಿಗೆ ಊರಿಗೆ ಬರುತ್ತಿದ್ದ ಮಕ್ಕಳು ಈ ಬಾರಿ ಬಂದಿಲ್ಲ. `ರಜೆಗಳೆಲ್ಲ ಅಣ್ಣಾ ಹಜಾರೆ ಚಳವಳಿಯಲ್ಲಿ ಕಳೆದು ಹೋಯಿತು, ಮುಂದಿನ ಬಾರಿ ಬರುತ್ತೇವೆ~ ಎಂದು ಅಮ್ಮನಿಗೆ ಪೋನ್ ಮಾಡಿದ್ದರಂತೆ. `ಅಷ್ಟೊಂದು ದೇಶಪ್ರೇಮ ಇದ್ದರೆ ಇಲ್ಲಿಯೇ ಬಂದು ಏನಾದರೂ ಉದ್ಯೋಗ-ಉದ್ಯಮ ಮಾಡಬಹುದಲ್ಲ, ದೆಹಲಿ-ಮುಂಬೈ ಎಂದು ಯಾಕೆ ಕುಣಿದಾಡುತ್ತಿದ್ದಾರೆ? ತಂದೆ-ತಾಯಿ ಮೇಲೆ, ಊರಿನ ಮೇಲೆ ಇಲ್ಲದ ಪ್ರೀತಿ ದೇಶದ ಮೇಲೆ ಏನು ಇರುತ್ತದೆ? ಎಲ್ಲ ಢೋಂಗಿ~-ಮಕ್ಕಳಿಗೆ ಹೇಳಲಾಗದ್ದನ್ನು ರಾಂಪಣ್ಣ ನನ್ನೊಡನೆ ಹೇಳಿ ಕೋಪ ತೀರಿಸಿಕೊಂಡರು.ಅವರ ಹೊಟ್ಟೆ ಉರಿ ಹೆಚ್ಚಿಸಿರುವುದು ನೆರೆಯಲ್ಲಿಯೇ ಇನ್ನೊಂದು ರೈತ ಕುಟುಂಬ. ಆ ಕುಟುಂಬದ ಯಜಮಾನನಿಗೂ ಮೂವರು ಮಕ್ಕಳು. ಅವರಲ್ಲಿ ಯಾರಿಗೂ ಶಿಕ್ಷಣ ತಲೆಗೆ ಹತ್ತಿಲ್ಲ. ಒಬ್ಬ ಮಗ ಊರಲ್ಲಿಯೇ ಇದ್ದು ಗದ್ದೆ-ತೋಟ ನೋಡಿಕೊಳ್ಳುತ್ತಿದ್ದಾನೆ. ಇನ್ನೊಬ್ಬ ಆಟೋರಿಕ್ಷಾ ಓಡಿಸುತ್ತಿದ್ದಾನೆ. ಊರಿನ ಯುವಕ ಸಂಘಕ್ಕೆ ಈಗ ಅವನೇ ಅಧ್ಯಕ್ಷ. ಮಗಳು ಸಮೀಪದ ಊರಿನ ರೈತನನ್ನೇ ಮದುವೆಯಾಗಿದ್ದಾಳೆ. ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳ ಗೌಜಿ-ಗದ್ದಲ. ಮೂರೂ ಹೊತ್ತು ದುಡ್ಡಿಗಾಗಿ ಕಿತ್ತಾಟ, ತಂದೆ-ಮಕ್ಕಳ ಬಡಿದಾಟ, ಅತ್ತೆ-ಸೊಸೆಯರ ಕಾದಾಟ ಎಲ್ಲವೂ ನಡೆಯುತ್ತಿವೆ. ಅವರೆಲ್ಲರೂ ಬಂದು ರಾಂಪಣ್ಣನವರ ಬಳಿ ದೂರು ಹೇಳುತ್ತಿರುತ್ತಾರೆ. ಇದನ್ನೆಲ್ಲ ಕೇಳಿಕೇಳಿ ರಾಂಪಣ್ಣ ಇನ್ನಷ್ಟು ಖಿನ್ನರಾಗುತ್ತಾರೆ. ಅವರಿಗಾಗಿ ಅಲ್ಲ, ತಮಗಾಗಿ. `ನಮ್ಮ ಸ್ಮಶಾನದಂತಹ ಮನೆಗಿಂತ ಆ ಜಗಳದ ಮನೆಯೇ ವಾಸಿ ಅಲ್ಲವೇ?~ ಎಂದು ಅವರು ಕೇಳುತ್ತಿದ್ದರು. ಬೇರೆ ಊರುಗಳಲ್ಲಿ ಇಂತಹ ಕುಟುಂಬಗಳ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಕ್ಕೆ ಹೋದರೆ ಈ ರೀತಿ ಮಕ್ಕಳನ್ನೇ ಶಪಿಸುತ್ತಾ ಕೂತಿರುವ ನೂರಾರು ತಂದೆ-ತಾಯಿಗಳನ್ನು ಕಾಣಬಹುದು. ಒಂದು ಕಾಲದಲ್ಲಿ ಬಡತನ, ಅಂಧಶ್ರದ್ಧೆ, ಅನಾನುಕೂಲತೆಗಳ ನಡುವೆಯೂ ಜೀವಂತವಾಗಿದ್ದ ಹಳ್ಳಿಗಳು ಈಗ ಬಯಲು ವೃದ್ಧಾಶ್ರಮದಂತೆ ಕಾಣುತ್ತಿವೆ. ವರ್ಷಕ್ಕೊಮ್ಮೆಯೋ, ಎರಡು ವರ್ಷಗಳಿಗೊಮ್ಮೆಯೋ ವಾರದ ರಜೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಬಂದಾಗ ಗಿಜಿಗುಡುತ್ತಿರುವ ಮನೆಗಳು ಅವರ ನಿರ್ಗಮನದೊಂದಿಗೆ  ಮತ್ತೆ ಭಣಗುಡುತ್ತವೆ.  ವರ್ಷಕ್ಕೆ ಎರಡರಿಂದ ಹತ್ತು ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುತ್ತಿರುವ ಇಂದಿನ ನವ ಮಧ್ಯಮ ವರ್ಗದ ಸದಸ್ಯರು ಇವರು. ಉದ್ಯೋಗವನ್ನರಸಿಕೊಂಡು ಹಳ್ಳಿ ತೊರೆದು ಪಟ್ಟಣ ಸೇರಿದವರು. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದು ಇದೇ ವರ್ಗ. ಶ್ರಿಮಂತರು ಮತ್ತು ಬಡವರ ಬಗ್ಗೆ ನಡೆದಷ್ಟು ಚರ್ಚೆ ಮಧ್ಯಮವರ್ಗದ ಬಗ್ಗೆ ನಮ್ಮಲ್ಲಿ ನಡೆದಿಲ್ಲ. ಅವರೊಂದು ರೀತಿಯಲ್ಲಿ ಮುಖ ಇಲ್ಲದ, ದನಿ ಇಲ್ಲದ, ಧೈರ್ಯವೂ ಇಲ್ಲದ ವಿಚಿತ್ರ ಜನವರ್ಗ ಎಂದೇ ಅವರನ್ನು ನಿರ್ಲಕ್ಷಿಸುತ್ತಾ ಬರಲಾಗಿದೆ. ಅಣ್ಣಾ ಚಳವಳಿಯ ನಂತರ ಈ ಮಧ್ಯಮ ವರ್ಗ ಮುಖ ಎತ್ತಿ, ದನಿ ಎತ್ತರಿಸಿ ಮಾತನಾಡತೊಡಗಿರುವ ಕಾರಣದಿಂದಾಗಿಯೇ ಅವರ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.  ಮಧ್ಯಮ ವರ್ಗ ಎಂದಾಕ್ಷಣ ನಮ್ಮಲ್ಲಿ ಬಹಳಷ್ಟು ಮಂದಿ ಅದನ್ನು ಮೇಲ್ಜಾತಿ ಜತೆ ಸಮೀಕರಿಸುತ್ತಾರೆ. ನಾನು ಗೌರವಿಸುವ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿಯವರು ಕಳೆದ ವಾರದ ನನ್ನ ಅಂಕಣಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿಯೂ ಎಲ್ಲೋ ಈ ಅಭಿಪ್ರಾಯ ಇದೆ. ಆದರೆ ನನ್ನ ಅಭಿಪ್ರಾಯ ಅದಾಗಿರಲಿಲ್ಲ. ಈ ಐದು ಕೋಟಿ ಜನಸಂಖ್ಯೆಯ ಮಧ್ಯಮವರ್ಗ ಇದೆಯಲ್ಲಾ, ಇದೊಂದು ಬೇರೆಯೇ ಜಾತಿ. ಇದರಲ್ಲಿರುವವರು ಮನು ಮಹಾಶಯ ಸೃಷ್ಟಿಸಿದ್ದ ವರ್ಣಾಶ್ರಮ ವ್ಯವಸ್ಥೆಯಲ್ಲಿರುವ ಜಾತಿಗಳಿಗೆ ಸೇರಿದವರಲ್ಲ. ಇವರೆಲ್ಲ ಆರ್ಥಿಕ ಉದಾರೀಕರಣ ಸೃಷ್ಟಿಸಿದ ಆಧುನಿಕ `ವರ್ಣಾಶ್ರಮ ವ್ಯವಸ್ಥೆ~ಯಲ್ಲಿನ ಜಾತಿಗಳಿಗೆ ಸೇರಿದವರು. ಇವರು ಮೇಲ್ಜಾತಿ ಕುಟುಂಬಗಳಲ್ಲಿ ಮಾತ್ರವಲ್ಲ, ಕೆಳಜಾತಿ ಕುಟುಂಬಗಳಲ್ಲಿಯೂ ಇದ್ದಾರೆ, ಬ್ರಾಹ್ಮಣ-ಅಬ್ರಾಹ್ಮಣ ಎಲ್ಲ ಜಾತಿಗಳಲ್ಲಿಯೂ ಇದ್ದಾರೆ. ಎಲ್ಲರ ಮನೆಯಲ್ಲಿಯೂ ಇದ್ದಾರೆ.  `ನಾವೆಲ್ಲ  ಭಾಷೆಗಾಗಿ, ನೀರಿಗಾಗಿ, ಭೂಮಿಗಾಗಿ ನಡೆಸುತ್ತಿದ್ದ ಚಳವಳಿಯ ಕಾಲದಲ್ಲಿ ಅತ್ತ ಸುಳಿಯದ ನನ್ನ ಮಗಳು  ಮೊನ್ನೆ ಫ್ರೀಡಮ್ ಪಾರ್ಕ್‌ಗೆ ಹೋಗಿ ಕೂತಿದ್ದಳು~ ಎಂದು ಇತ್ತೀಚೆಗೆ ಸಿಕ್ಕ ಹಿರಿಯ ಹೋರಾಟಗಾರರೊಬ್ಬರು ವಿಷಾದದಿಂದ ಹೇಳುತ್ತಿದ್ದರು. `ನಮ್ಮ ಜತೆ ಗುರುತಿಸಿಕೊಳ್ಳಲು ಏನೋ ಕೀಳರಿಮೆ, ಫ್ರೀಡಮ್‌ಪಾರ್ಕ್‌ನಲ್ಲಿ ಹೋಗಿ ಕೂತರೆ ಸಿಗುವ ಸಾಮಾಜಿಕ ಮಾನ್ಯತೆಯೇ ಬೇರೆ ಎನ್ನುವುದು ಅವಳಿಗೆ ತಿಳಿದಿದೆ~ ಎನ್ನುತ್ತಿದ್ದರು ಅವರು.`ಅಣ್ಣಾ ಚಳವಳಿ ನವ ಮಧ್ಯಮವರ್ಗದ ಅಂತರಾತ್ಮವನ್ನು ಬಡಿದೆಬ್ಬಿಸಿದೆ, ಅವರು ಜಾಗೃತರಾಗಿದ್ದಾರೆ, ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ~ ಎಂದೆಲ್ಲ ಹೇಳಲಾಗುತ್ತಿದೆ. ನಿಜವಾಗಿಯೂ ಅಂತಹ ಪರಿವರ್ತನೆ ನಡೆದಿದ್ದರೆ ಅದನ್ನು ತೆರೆದ ಮನಸ್ಸಿನಿಂದ ಸ್ವಾಗತಿಸೋಣ. ಆದರೆ ನಾವು ಇಲ್ಲಿಯವರೆಗೆ ಈ ವರ್ಗದಲ್ಲಿ ಕಂಡ ಹೆಚ್ಚಿನವರು ಅತೀ ಎನಿಸುವಷ್ಟು ಭೌತಿಕವಾದಿಗಳು, ಸ್ವಾರ್ಥಿಗಳು ಮತ್ತು ಆಳದಲ್ಲಿ ಆತ್ಮವಂಚಕರಾಗಿರುವವರು. ಬದುಕು ಎಂದರೆ ತನ್ನ ಮನೆ, ಮಡದಿ, ಮಕ್ಕಳು ಅಷ್ಟೆ. ಅದರಾಚೆಗೆ ಇರುವ ಸಮಾಜದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಇವರಿಗೆ ತಂದೆ-ತಾಯಿಯನ್ನು ನೋಡಿಕೊಳ್ಳುವುದೆಂದರೆ ಅವರ ಬ್ಯಾಂಕ್ ಖಾತೆಗೆ ಒಂದಷ್ಟು ದುಡ್ಡು ಹಾಕುವುದು. ಇನ್ನೂ ಕಿರಿಕಿರಿ ಮಾಡಿದರೆ ಎಲ್ಲಾದರೂ ವೃದ್ಧಾಶ್ರಮಕ್ಕೆ ಕೊಂಡೊಯ್ದು ಸೇರಿಸುವುದು. ಇವರ ಸಮಾಜ ಸೇವೆ ಕೂಡಾ ವಾರಾಂತ್ಯದ ಒಂದು ಔಟಿಂಗ್ ಅಷ್ಟೆ. ತಾವು ಬಹಳ ಪ್ರಗತಿಶೀಲರು, ಉದಾರ ಮನೋಭಾವದವರು ಎಂದು ಸಮಾಜದಲ್ಲಿ ತೋರಿಸಿಕೊಳ್ಳುವ ಇವರು ಪಕ್ಕದಲ್ಲಿ ಮಲಗಿದ್ದ ಹೆಂಡತಿಯ ಮೊಬೈಲ್‌ಗೆ ನಡುರಾತ್ರಿಯಲ್ಲಿ ಸಹೋದ್ಯೋಗಿಯ ಎಸ್‌ಎಂಎಸ್ ಬಂದರೆ ನಿದ್ದೆಗೆಡಿಸಿಕೊಳ್ಳುತ್ತಾರೆ.ಇಂತಹದ್ದೊಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿರುವ ಕೌಟುಂಬಿಕ ಹಿಂಸೆ ಮತ್ತು ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಯಾರೆಂದು ಅಧ್ಯಯನ ಮಾಡಿದರೆ ಈ ನವ ಮಧ್ಯಮ ವರ್ಗದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಜಾತಿ ಎಲ್ಲಿದೆ ಎಂದು ಉಡಾಫೆಯಿಂದ ಪ್ರಶ್ನಿಸುವ ಇವರ ಜಾತ್ಯತೀತ ನಿಲುವಿನ ಹಿಂದಿನ ಆತ್ಮವಂಚನೆಯನ್ನು ತಿಳಿದುಕೊಳ್ಳಬೇಕಾದರೆ ಭಾನುವಾರ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಮೆಟ್ರಿಮೋನಿಯಲ್ ಪುಟ ಓದಬೇಕು.ಈ ಜನವರ್ಗ ಅಣ್ಣಾ ಹಜಾರೆ ಅವರಿಂದ ಕಲಿತದ್ದೇನು, ಕೇವಲ ಭ್ರಷ್ಟಾಚಾರದ ವಿರುದ್ಧದ ಹೋರಾಟವೇ? ಅಣ್ಣಾ ಎಂದರೆ ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಣ್ಣಾ ಹಜಾರೆ ಅವರಿಗೆ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟಿರಬಹುದು. ಆದರೆ ಅವರ ಬದುಕಿನ ಬಹುದೊಡ್ಡ ಸಾಧನೆ ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಹುಟ್ಟೂರು ರಾಳೇಗಣಸಿದ್ಧಿಯಲ್ಲಿ ಮಾಡಿರುವ ಗ್ರಾಮ ಸುಧಾರಣೆ. ಮನಸ್ಸು ಮಾಡಿದ್ದರೆ ಅವರು ಕೂಡಾ ಮಾಜಿ ಸೈನಿಕನಿಗೆ ಸರ್ಕಾರ ನೀಡುವ ಜಮೀನನ್ನು ಪಡೆದು ನಿಶ್ಚಿಂತೆಯಿಂದ ಇರಬಹುದಿತ್ತು. ಆದರೆ ಅವರು ಯೋಚನೆ ಮಾಡಿದ್ದೇ ಬೇರೆ. ಅಣ್ಣಾನ ಪ್ರವೇಶವಾಗುವ ವರೆಗೆ ರಾಳೇಗಣಸಿದ್ಧಿ ಬಡತನ, ಅನಕ್ಷರತೆ, ಮೂಢನಂಬಿಕೆಗಳಿಂದ ಕೂಡಿದ ದೇಶದ ಸಾವಿರಾರು ಗ್ರಾಮಗಳಲ್ಲಿ ಒಂದಾಗಿತ್ತು. ಇಂದು ಅದು ಕಳ್ಳರು, ಕುಡುಕರು, ಭ್ರಷ್ಟರು, ಸೋಮಾರಿಗಳು, ಅನಕ್ಷರಸ್ಥರು ಇಲ್ಲದ ಆದರ್ಶ ಗ್ರಾಮ. ಮದುವೆ ಬೇಡ, ಕುಟುಂಬ ಬೇಡ ಎಂದು ಭೌತಿಕ ಜಗತ್ತಿನ ಎಲ್ಲ ಸುಖಗಳನ್ನು ತೊರೆದು ಗ್ರಾಮ ಸುಧಾರಣೆಗೆ 38ನೇ ವಯಸ್ಸಿನಲ್ಲಿ ತಮ್ಮನ್ನು ಅರ್ಪಿಸಿಕೊಂಡಾಗ ಮುಂದೊಂದು ದಿನ ಇಷ್ಟೊಂದು ಖ್ಯಾತಿ ಪಡೆಯಲಿದ್ದೇನೆ ಎಂದು ಅಣ್ಣಾ ಅವರಿಗೆ ಖಂಡಿತ ತಿಳಿದಿರಲಿಕ್ಕಿಲ್ಲ.ಸ್ವಾರ್ಥವಿಲ್ಲದೆ, ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರು ಕೆಲಸ ಮಾಡಿದರು. ನೇರ ನಡೆ-ನುಡಿಯ ಮೇಲೆ ನಂಬಿಕೆ ಇಟ್ಟು ಬದುಕಿದರು.ನಿಜವಾದ ಅಣ್ಣಾ ರಾಮಲೀಲಾ ಮೈದಾನದ ವೇದಿಕೆಯಲ್ಲಿ ಇರಲಿಲ್ಲ, ಅವರು ರಾಳೇಗಣ ಸಿದ್ಧಿಯ ಮನೆ ಮನೆಗಳಲ್ಲಿದ್ದಾರೆ. ಆ ಅಣ್ಣಾನನ್ನು ಬಿಟ್ಟು ಈ ಅಣ್ಣಾನನ್ನು ನೋಡಲಾಗುವುದೇ ಇಲ್ಲ, ನೋಡುವುದು ಸರಿಯೂ ಅಲ್ಲ. ಯುವಜನತೆ ಆದರ್ಶ ಎಂದು ಸ್ವೀಕರಿಸಬೇಕಾಗಿರುವುದು ಮತ್ತು ಕಾಯಾ, ವಾಚಾ ಮನಸಾ ಅನುಸರಿಸಬೇಕಾಗಿರುವುದು ಕೇವಲ ರಾಮಲೀಲಾ ಮೈದಾನದ ಅಣ್ಣಾನನ್ನಲ್ಲ. ಅದಕ್ಕಿಂತಲೂ ಮುಖ್ಯವಾಗಿ ರಾಳೇಗಣಸಿದ್ಧಿಯ ಅಣ್ಣಾನನ್ನು. ಇಳಿ ವಯಸ್ಸಿನಲ್ಲಿ ಮಕ್ಕಳ ಮುಖ ನೋಡಲು ಹಲುಬುತ್ತಿರುವ ರಾಂಪಣ್ಣನಂತಹವರು ಕೂಡಾ ಬಯಸುತ್ತಿರುವುದು ಇದನ್ನೇ. ರಾಮಲೀಲಾ ಮೈದಾನದ ಅಣ್ಣಾ ಅವರನ್ನು ಅನುಸರಿಸಿದವರು ಕತ್ತಲ ಹೊತ್ತಿನಲ್ಲಿ ರಸ್ತೆಬದಿ ಕ್ಯಾಂಡಲ್ ಹಚ್ಚಿ ಟಿವಿ ಪರದೆ ಮೇಲೆ ಕಾಣಿಸಿಕೊಳುತ್ತಾರೆ, ರಾಳೇಗಣಸಿದ್ಧಿಯ ಅಣ್ಣಾ ಅವರನ್ನು ಆದರ್ಶ ಎಂದು ಸ್ವೀಕರಿಸಿದವರು ಕತ್ತಲು ತುಂಬಿರುವ ಹಳ್ಳಿಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಬೆಳಕು ನೀಡುತ್ತಿರುವ ಹರೀಶ್ ಹಂದೆಯಂತಹವರಾಗುತ್ತಾರೆ. ನಮಗೆ ಬೇಕಾಗಿರುವುದು ಕ್ಯಾಂಡಲ್‌ವಾಲಾಗಳಲ್ಲ, ಹರೀಶ್ ಹಂದೆಯಂತಹವರು, ಅಲ್ಲವೇ?

(ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: (editpagefeedback@prajavani.co.in)        

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.