ರಾಹುಲ್ ತಯಾರಂತೆ... ದೇಶ ತಯಾರಿದೆಯೇ?

7

ರಾಹುಲ್ ತಯಾರಂತೆ... ದೇಶ ತಯಾರಿದೆಯೇ?

ಡಿ. ಉಮಾಪತಿ
Published:
Updated:
ರಾಹುಲ್ ತಯಾರಂತೆ... ದೇಶ ತಯಾರಿದೆಯೇ?

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲು, ಪ್ರಧಾನಿ ಅಭ್ಯರ್ಥಿಯಾಗಲು ಕಡೆಗೂ ಸಿದ್ಧವಾಗಿದ್ದಾರಂತೆ... ಆದರೆ ರಾಜಕೀಯ ಭೂಮಿಕೆ, ಮತದಾರ ಸಮುದಾಯಗಳು ಅವರನ್ನು ಬರಮಾಡಿಕೊಳ್ಳಲು ತಯಾರಿವೆಯೇ ಎಂಬ ಪ್ರಶ್ನೆಗೆ ಉತ್ತರ ಸರಳವಲ್ಲ. ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಗಳ ಪ್ರಕ್ರಿಯೆ ಮುಂದಿನ ತಿಂಗಳು ಪೂರ್ಣಗೊಳ್ಳಲಿದ್ದು, ಹೊಸ ಅಧ್ಯಕ್ಷರ ಆಯ್ಕೆಗೆ ಭೂಮಿಕೆ ಸಿದ್ಧವಾಗಲಿದೆ.

1998ರಿಂದ ಇಲ್ಲಿಯವರೆಗೆ ಸತತ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆದಿರುವ ದಾಖಲೆಯನ್ನೇ ಸ್ಥಾಪಿಸಿದ್ದಾರೆ ಸೋನಿಯಾ. ಎಪ್ಪತ್ತರ ಗಡಿ ಮುಟ್ಟಿದ ಅವರ ಆರೋಗ್ಯ ಇತ್ತೀಚಿನ ವರ್ಷಗಳಲ್ಲಿ ನಾಜೂಕಾಗಿದೆ.

ತಾಯಿಯ ದೃಷ್ಟಿಯಲ್ಲಿ ನಲವತ್ತೇಳರ ರಾಹುಲ್ ಇನ್ನೂ ಜವಾಬ್ದಾರಿ ಹೊರಲಾರದಷ್ಟು ಎಳೆಯರೇನೂ ಅಲ್ಲ. 2013ರ ಜೈಪುರ ಎಐಸಿಸಿ ಚಿಂತನ ಶಿಬಿರದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ನಂತರ ಪಕ್ಷದ ಎರಡನೆಯ ಅತ್ಯಂತ ಪ್ರಭಾವಶಾಲಿ ನಾಯಕನ ಹುದ್ದೆ ಅವರಿಗೆ ಒಲಿದದ್ದು ವಂಶ ಪಾರಂಪರ್ಯದ ಬಲದಿಂದಲೇ ವಿನಾ ಅಸೀಮ ನಾಯಕತ್ವದ ಗುಣಗಳಿಂದಲ್ಲ. ಇಲ್ಲವಾದರೆ 2004ರಲ್ಲಿ ರಾಜಕಾರಣ ಪ್ರವೇಶಿಸಿ ಸಂಸದನಾಗಿ ಆಯ್ಕೆಯಾದ ವ್ಯಕ್ತಿ ಒಂಬತ್ತು ವರ್ಷಗಳಲ್ಲಿ ಪಕ್ಷದ ಉಪಾಧ್ಯಕ್ಷ ಹುದ್ದೆಗೆ ಏರುವುದು ಕನಸಿನ ಮಾತು.

‘ವಂಶಪಾರಂಪರ್ಯದ ಮುಂದುವರಿಕೆ, ರಾಜಕಾರಣಕ್ಕೆ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಲ್ಲ. ಭಾರತದ ಸಿನಿಮಾ, ಉದ್ಯಮ ಮತ್ತಿತರ ಕ್ಷೇತ್ರಗಳು ಹಾಗೂ ಇತರೆ ರಾಜಕೀಯ ಪಕ್ಷಗಳಲ್ಲೂ ಮುಂದುವರೆದಿದೆ. ಭಾರತದಲ್ಲಿ ಈ ಸಂಗತಿ ಇದೀಗ ಸರ್ವೇಸಾಮಾನ್ಯ. ಕೇವಲ ನನ್ನನ್ನು ಮಾತ್ರವೇ ಯಾಕೆ ದೂರುತ್ತೀರಿ’ ಎಂಬುದಾಗಿ ರಾಹುಲ್ ಗಾಂಧಿ, ಅಮೆರಿಕೆಯ ಕ್ಯಾಲಿಫೋರ್ನಿಯಾದ ಬರ್ಕ್ಲೆ ವಿಶ್ವವಿದ್ಯಾಲಯದಲ್ಲಿ ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.

ರಾಹುಲ್ ಹೇಳಿಕೆಗಳನ್ನು ಚಿಂದಿ ಮಾಡಲು ಎರಡು ಡಜನ್‌ಗಿಂತ ಹೆಚ್ಚು ಮಂದಿ ವಕ್ತಾರರನ್ನು ಕಣಕ್ಕಿಳಿಸಿತ್ತು ಬಿಜೆಪಿ. ಪಪ್ಪು ಎಂಬುದಾಗಿ ಲೇವಡಿ ಮಾಡುವ ನಂಜುಭರಿತ ನಗೆಹನಿಗಳು ಮತ್ತು ವಿಡಿಯೊಗಳು ಲಕ್ಷಗಳ ಸಂಖ್ಯೆಯಲ್ಲಿವೆ. ಇವರ ಕುರಿತು ಬಿಜೆಪಿಗೆ ಒಳಗೊಳಗೇ ಆತಂಕವಿದೆ.

ಇಲ್ಲವಾದರೆ ಆತ ಬಾಯಿ ತೆರೆದರೆ ಬಿಜೆಪಿಯ ಅಕ್ಷೋಹಿಣಿ ಸೈನ್ಯವೇ ಮುರಿದುಕೊಂಡು ಆತನ ಮೇಲೆ ಎರಗುತ್ತಿರಲಿಲ್ಲ. ತಮ್ಮನ್ನು ಹೀಗಳೆದು ಲೇವಡಿ ಮಾಡಿ ಜರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟುಗಳನ್ನು ಹಾಕಲೆಂದೇ ಬಿಜೆಪಿ ತನ್ನ ಸಾವಿರ ಬಂಟರನ್ನು ಕಂಪ್ಯೂಟರುಗಳ ಮುಂದೆ ಕೂರಿಸಿದೆ ಎಂಬುದು ಖುದ್ದು ರಾಹುಲ್ ಆರೋಪ.

ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯದ ಸಂಸ್ಕೃತಿಯನ್ನು ಕೊನೆಗೊಳಿಸಿ, ಆಂತರಿಕ ಜನತಂತ್ರವನ್ನು ಗಟ್ಟಿ ಮಾಡಲು ವಂಶಪಾರಂಪರ್ಯವಾಗಿ ತಮಗೆ ದಕ್ಕಿರುವ ಅಗಾಧ ಅಧಿಕಾರವನ್ನು ಅಸ್ತ್ರದಂತೆ ಬಳಸುವುದಾಗಿ ಅವರು ಈ ಹಿಂದೆ ಹೇಳುತ್ತಿದ್ದರು. ಈ ಹೇಳಿಕೆಯಲ್ಲಿ ಅಪರಾಧಿ ಭಾವವೊಂದು ಅವರನ್ನು ಕಾಡುತ್ತಿತ್ತು. ತಮ್ಮ ಹಳೆಯ ಈ ನಿಲುವು ಅವಾಸ್ತವಿಕ ಎಂಬುದು ಈಗ ಅವರ ಅರಿವಿಗೆ ಬಂದಂತಿದೆ.

ಜನತಂತ್ರದಲ್ಲಿ ದೊಡ್ಡ ನಾಯಕನ ಮಗ ಅಥವಾ ಮಗಳಾಗಿ ಹುಟ್ಟುವುದು ನಿಜವಾಗಿಯೂ ಆರಂಭಿಕ ಅವಕಾಶವನ್ನು ನೀಡುವುದು ಹೌದು. ಆ ನಂತರ ಮಗ ಅಥವಾ ಮಗಳು ತನ್ನ ಯೋಗ್ಯತೆಯನ್ನು ರುಜುವಾತು ಮಾಡದೆ ಹೋದರೆ, ಮತದಾರರು ಅವರನ್ನು ತೆರೆಮರೆಗೆ ಸರಿಸುವುದು ನಿಶ್ಚಿತ.

ನೆಹರೂ ನೆರಳಿನಿಂದ ಹೊರಬಂದ ಇಂದಿರಾಗಾಂಧಿ ವಿಶ್ವ ತಲೆದೂಗಿದ ನಾಯಕಿ ಆದರು. ಇಂದಿರಾ ದುರ್ಮರಣದ ಅನುಕಂಪದ ಅಲೆಯಲ್ಲಿ ಅಧಿಕಾರದೆಡೆಗೆ ಕೊಚ್ಚಿ ಬಂದ ರಾಜೀವ್ ಗಾಂಧಿ 1989ರಲ್ಲಿ ದೂಳೀಪಟ ಆದರು. ಪಿ.ವಿ.ನರಸಿಂಹ ರಾವ್ 1996ರ ಚುನಾವಣೆಗಳಲ್ಲಿ ಜಯಲಲಿತಾ ಬದಲು ಕರುಣಾನಿಧಿ ಅವರೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರೆ ಪುನಃ ಸರ್ಕಾರ ಮಾಡುವುದು ಗೋಡೆಯ ಮೇಲಿನ ಬರಹದಷ್ಟೇ ನಿಶ್ಚಿತವಿತ್ತು.

ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಅವರಿಗೆ ಶರಣು ಹೋಗಿ ಅವರನ್ನು ಕಾಂಗ್ರೆಸ್ಸಿಗೆ ಕರೆತಂದು ಪಟ್ಟ ಕಟ್ಟುವ ಪ್ರಸಂಗವೇ ಬರುತ್ತಿರಲಿಲ್ಲ. ಸೋನಿಯಾ ಅಧ್ಯಕ್ಷತೆಯ ಕಾಂಗ್ರೆಸ್ ಪಕ್ಷವನ್ನು ಮತದಾರರು ಎರಡು ಬಾರಿ ಅಧಿಕಾರಕ್ಕೆ ತಂದರು. 2014ರಲ್ಲಿ ತಿರಸ್ಕರಿಸಿದರು. ಹೀಗೆ ಜನರೇ ನಿರ್ಧರಿಸುತ್ತಾರೆ ಅಂತಿಮವಾಗಿ. ಜನತಾಂತ್ರಿಕ ಮೊಹರು ಒತ್ತಿಸಿಕೊಳ್ಳದೆ ರಾಜಕೀಯ ಕುಟುಂಬಗಳಿಗೆ ಉಳಿಗಾಲವಿಲ್ಲ ಎಂಬುದು ಸತ್ಯದೊಳಗಿನ ಮತ್ತೊಂದು ಸತ್ಯ.

ರಾಹುಲ್ ಗಾಂಧಿ ಅವರಿಗೆ ಪಕ್ಷದಲ್ಲಿ ಅತ್ಯುಚ್ಚ ಪದವಿಯನ್ನು ಅಧಿಕೖತವಾಗಿ ನೀಡಬೇಕು ಇಲ್ಲವೇ ಭಾವೀ ಪ್ರಧಾನಿ ಎಂದು ಅಧಿಕೖತವಾಗಿ ಸಾರಬೇಕು ಎಂಬ ಕಾಂಗ್ರೆಸ್ಸಿಗರ ಹಿಮ್ಮೇಳ ಕಡಿಮೆಯೆಂದರೂ ಹನ್ನೆರಡು ವರ್ಷಗಳಷ್ಟು ಹಳೆಯದು. 2004ರಿಂದ ನಡೆದುಕೊಂಡು ಬಂದಿರುವ ಬಹುತೇಕ ಎಲ್ಲ ಎಐಸಿಸಿ ಅಧಿವೇಶನಗಳ ಕಲಾಪಗಳ ಮೇಲೆ ಕಣ್ಣಾಡಿಸಿದರೆ ಸ್ಪಷ್ಟವಾಗಿ ಕಂಡು ಬರುವ ವಿದ್ಯಮಾನವಿದು.

ಯುಪಿಎ ಅಧಿಕಾರಕ್ಕೆ ಬಂದ ಮೊದಲ ವರ್ಷಗಳಲ್ಲಿ ರಾಹುಲ್‌ ಜೊತೆಗೆ ನೆಹರೂ-ಗಾಂಧಿ ಮನೆತನದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ಅವರ ಹೆಸರನ್ನೂ ಜೋಡಿಸಲಾಗುತ್ತಿತ್ತು. ವಾಸ್ತವವಾಗಿ ಈ ಮಾತನ್ನು ತಿರುಗಿಸಿ ಹೇಳುವ ಅಗತ್ಯವಿದೆ. ಆರಂಭದ ವರ್ಷಗಳಲ್ಲಿ ಕಾಂಗ್ರೆಸ್ಸಿಗರು ಬಯಸಿದ್ದು ಪ್ರಿಯಾಂಕಾ ರಾಜಕೀಯ ಪ್ರವೇಶವನ್ನು. ದೇಶದ ಒಂದು ತುದಿಯಿಂದ ಮತ್ತೊಂದು ತುದಿಯ ತನಕ ಮಿಂಚಿನ ಸಂಚಲನವನ್ನೇ ಉಂಟು ಮಾಡಬಲ್ಲರು ಪ್ರಿಯಾಂಕಾ ಎಂಬ ಮಾತುಗಳನ್ನು ಕಾಂಗ್ರೆಸ್ ಕಾರ್ಯಕರ್ತರು ರೋಮಾಂಚಿತರಾಗಿ ಹೇಳುತ್ತಿದ್ದ ದಿನಗಳಿದ್ದವು.

ಅಜ್ಜಿ ಇಂದಿರಾ ಗಾಂಧಿ ಅವರ ಹೋಲಿಕೆಗಳನ್ನು ಪ್ರಿಯಾಂಕಾ ಅವರಲ್ಲಿ ಕಂಡಿರುವ ಕಾಂಗ್ರೆಸ್ಸಿಗರಿಗೆ ಈಗಲೂ ಆಯ್ಕೆಯ ಅವಕಾಶ ಕಲ್ಪಿಸಿದರೆ ಪ್ರಿಯಾಂಕಾ ಹೆಸರು ಹೇಳಿಯಾರು. ರಾಜಕಾರಣದಲ್ಲಿ ತಮ್ಮ ಉತ್ತರಾಧಿಕಾರಿ ಮಗನೇ ವಿನಾ ಮಗಳಲ್ಲ ಎಂಬ ಇಂಗಿತವನ್ನು ಸೋನಿಯಾ ಗಾಂಧಿ ವ್ಯಕ್ತಪಡಿಸಿದ ನಂತರ ಪ್ರಿಯಾಂಕಾ ಹೆಸರು ಹಿನ್ನೆಲೆಗೆ ಸರಿದು ವರ್ಷಗಳೇ ಉರುಳಿವೆ.

ದಿವಂಗತ ಅರ್ಜುನ್ ಸಿಂಗ್, ಪ್ರಣವ್‌ ಮುಖರ್ಜಿ ಅವರಿಂದ ಮೊದಲುಗೊಂಡು ಎಲ್ಲರೂ ರಾಹುಲ್ ಅವರಲ್ಲಿ ನಾಯಕತ್ವದ ಅಗಾಧ ಗುಣಗಳನ್ನು ಕಂಡು ಕೊಂಡಾಡಿದವರೇ. ರಾಹುಲ್ ಸಾಮರ್ಥ್ಯ ಕುರಿತು ಕಾಂಗ್ರೆಸ್ಸಿಗರನೇಕರಿಗೆ ಸಂದೇಹಗಳು ಇದ್ದಾವು. ಆದರೆ ಅವುಗಳನ್ನು ಬಹಿರಂಗವಾಗಿ ಹೇಳಿ ಪಕ್ಷದಲ್ಲಿ ಉಳಿಯುವುದು ಸಾಧ್ಯವಿಲ್ಲ ಎಂಬ ಕಟುಸತ್ಯವನ್ನು ಅವರು ಅರಿಯದವರೇನೂ ಅಲ್ಲ. ಹೀಗಾಗಿ ಒಲ್ಲದಿದ್ದವರೂ ದನಿ ಸೇರಿಸದೆ ವಿಧಿ ಇಲ್ಲ.

ಸಾರ್ವಜನಿಕ ವೇದಿಕೆಗಳಲ್ಲಿ ಬರೆದುಕೊಟ್ಟದ್ದನ್ನು ಓದುವ, ಗುಂಪುಗಳನ್ನು ಉದ್ದೇಶಿಸಿ ಮಾತಾಡುವಾಗ ದಡ್ಡನಂತೆ ತೋರುವ ರಾಹುಲ್ ಗಾಂಧಿ ಖಂಡಿತವಾಗಿಯೂ ಅಷ್ಟು ದಡ್ಡರಲ್ಲ. ವಿಷಯಗಳ ಕುರಿತ ಕನಿಷ್ಠ ಅವಗಾಹನೆ ಅವರಿಗೆ ಉಂಟು. ತಪ್ಪದೆ ತಡವರಿಸದೆ, ಲಿಖಿತ ಟಿಪ್ಪಣಿ ನೋಡದೆ ವಿಷಯ ಪ್ರತಿಪಾದಿಸುವ ಸಾಮರ್ಥ್ಯವೂ ಉಂಟು. ಸಾರ್ವಜನಿಕ ವೇದಿಕೆಗಳಲ್ಲಿ ಈವರೆಗೆ ಈ ಗುಣಪ್ರಕಟ ಆಗಿಲ್ಲ. ಸದುದ್ದೇಶ ಹೊಂದಿದ ಸಜ್ಜನ ರಾಜಕಾರಣಿಯಂತೆ ಕಂಡು ಬರುತ್ತಾರೆ. ಪ್ರಾದೇಶಿಕ ಭಾಷೆಗಳ ಪತ್ರಕರ್ತರ ಜೊತೆ ಅವರು ತಾಸುಗಟ್ಟಲೆ ನಡೆಸಿದ ಆಫ್ ದಿರೆಕಾರ್ಡ್ ಸಂವಾದದಲ್ಲಿ ಈ ಅಂಶಗಳು ನಿಚ್ಚಳ ಗೋಚರವಾಗಿವೆ.

ಬಯಸಲಿ ಬಿಡಲಿ, ಮುಂಬರುವ ದಿನಗಳಲ್ಲಿ ಪ್ರತಿಪಕ್ಷಗಳ ಚಹರೆ ಆಗಲಿರುವ ರಾಹುಲ್ ಗಾಂಧಿ ಸವಕಲು ಭಾಷೆಯನ್ನು, ಹಳಸಲು ರೂಪಕಗಳನ್ನು ಬದಿಗೊತ್ತಿ, ಪರ್ಯಾಯ ರಾಜಕಾರಣದ ಹೊಸ ರಚನಾತ್ಮಕ ನುಡಿಗಟ್ಟನ್ನು ಮತದಾರರ ಮುಂದೆ ಇಡಬೇಕಿದೆ. ಮೋದಿ ವಿರೋಧದ ಮಾತುಗಾರಿಕೆ ಅವರನ್ನು ಜನಸಮೂಹದಿಂದ ದೂರ ಮಾಡುತ್ತದೆಯೇ ವಿನಾ ಹತ್ತಿರ ಒಯ್ಯುವುದಿಲ್ಲ. ಕಟ್ಟರ್ ಹಿಂದುತ್ವ ಲೇಪಿತ ಅಭಿವೃದ್ಧಿಯ ಮೋದಿ ಪರಿಭಾಷೆ ಜನರನ್ನು ಮೋಡಿ ಮಾಡಿದೆ. ಆದರೆ ಕಣ್ಕಟ್ಟು ಚಿರಾಯು ಅಲ್ಲ.

ನೆಲದ ವಾಸ್ತವಗಳು, ಗರಿಕೆ ಬೇರುಮಟ್ಟದ ರಾಜಕಾರಣ ನಡೆಯುವ ರೀತಿ ನೀತಿಗಳು ಗೊತ್ತಿಲ್ಲದ ಮೇಲ್ವರ್ಗದ ಗುಂಪೊಂದನ್ನು ರಾಹುಲ್ ತಮ್ಮ ಸುತ್ತಮುತ್ತ ಇರಿಸಿಕೊಂಡಿದ್ದಾರೆಂಬ ಮಾತುಗಳಿವೆ. ಈ ಮಾತುಗಳು ಪೂರ್ಣ ನಿರಾಧಾರವೇನೂ ಅಲ್ಲ. ರಾಹುಲ್ ಹತ್ತಿರ ಸುಳಿಯುವುದು ಕಷ್ಟ. ಪಕ್ಷದವರ ಕೈಗೇ ಸಿಗದಿದ್ದವರು ಜನರೊಂದಿಗೆ ಸಂಪರ್ಕ ಇರಿಸಿಕೊಳ್ಳುವರೆಂದು ನಿರೀಕ್ಷಿಸಲಾದೀತೇ ಎನ್ನುವ ಕಾಂಗ್ರೆಸ್ಸಿಗರಿದ್ದಾರೆ.

ಭಾರತದ ಜಾತಿವ್ಯವಸ್ಥೆ ಮತ್ತು ಧರ್ಮ ರಾಜಕಾರಣಗಳ ಒಳಸುಳಿಗಳನ್ನು ಅವರು ಈಗಲೂ ಗ್ರಹಿಸಿರುವ ಸೂಚನೆಗಳಿಲ್ಲ. ಒಂದೆರಡು ಯಶಸ್ಸಿನ ವಿನಾ ತಾವು ಪ್ರಚಾರ ಮಾಡಿರುವಲ್ಲೆಲ್ಲ ಅವರ ಪಕ್ಷ ಮತ್ತಷ್ಟು ಕೆಳಕುಸಿದು ನೆಲಕಚ್ಚಿದೆ. ಜನ ಸಮೂಹಗಳು ಒಪ್ಪುವ ನಾಯಕನ ಎತ್ತರಕ್ಕೆ ಏರಲು ಯಾವ ಮಟ್ಟಿಗೆ ಭಾರತದ ರಾಜಕಾರಣವನ್ನು ಪ್ರಭಾವಿಸಬೇಕಿತ್ತೋ, ಆ ಮಟ್ಟಕ್ಕೆ ಪ್ರಭಾವಿಸಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಕೈಗೆತ್ತಿಕೊಂಡ ಕಾರ್ಯವನ್ನು ದಡ ಮುಟ್ಟಿಸದೆ ನಡು ನೀರಿನಲ್ಲೇ ಬಿಟ್ಟುಬಿಡುತ್ತಾರೆಂಬ ಆಪಾದನೆಯಿಂದ ಅವರು ಮುಕ್ತರಾಗಬೇಕಿದೆ. ಕಾಂಗ್ರೆಸ್ ಪಕ್ಷದ ಒಳಗೆ ಮತ್ತು ಹೊರಗೆ ಅವರ ನಾಯಕತ್ವ ಸ್ವೀಕಾರಾರ್ಹ ಆಗಬೇಕಿದೆ. ಆಂದೋಲನಗಳನ್ನು ಸಂಘಟಿಸಿ ಅವುಗಳನ್ನು ಮುನ್ನಡೆಸುವ ಯಾವ ಗುಣವನ್ನೂ ಅವರು ಈವರೆಗೆ ನಿರ್ಣಯಾತ್ಮಕವಾಗಿ ತೋರಿಸಿಲ್ಲ ಎಂಬುದು ಕಾಂಗ್ರೆಸ್ ಪಕ್ಷವನ್ನು ಸಹಾನುಭೂತಿಯಿಂದ ನೋಡುತ್ತ ಬಂದಿರುವ ದೆಹಲಿಯ ಹಿರಿಯ ಪತ್ರಕರ್ತರೊಬ್ಬರ ಅಭಿಪ್ರಾಯ.

ತಾವು ಕೂಡ ಕಾಂಗ್ರೆಸ್ಸಿನ ಸಮಸ್ಯೆಯ ಒಂದು ಭಾಗವೆಂಬುದನ್ನು ರಾಹುಲ್ ಮೊದಲು ಒಪ್ಪಿಕೊಳ್ಳಬೇಕು. ಪಕ್ಷದ ಹೊರಗೆ ನಿಂತು ಮಾತಾಡುವುದನ್ನು ಅವರು ಸದ್ಗುಣ ವೆಂಬಂತೆ ರೂಢಿಸಿಕೊಂಡಿದ್ದಾರೆ. ವೈಫಲ್ಯಗಳಿಗೆ ಬೆನ್ನು ತೋರಿಸಿ, ಯಶಸ್ಸುಗಳೆಲ್ಲ ತನ್ನವೇ ಎಂದು ಹೆಗಲಿಗೇರಿಸಿ ಬೀಗುವ ಚಾಳಿ ಪಕ್ಷ ಕಟ್ಟಲು ಪೂರಕವಲ್ಲ. 1999ರ ದಿನಗಳು. ಹರಿಯಾಣದ ಹಿಸ್ಸಾರ್‌ನಲ್ಲಿ ಕಾಂಗ್ರೆಸ್ ರ್‍ಯಾಲಿ. ಸಣ್ಣ ವೇದಿಕೆ. ಸೋನಿಯಾ ಜೊತೆಗೆ ನಾಲ್ಕೈದು ಮಂದಿಗೆ ಮಾತ್ರವೇ ಆಸನಗಳಿದ್ದವು. ಕಾಂಗ್ರೆಸ್ ಶಾಸಕಾಂಗ ಪಕ್ಷದ

ನಾಯಕಿ ಅರವತ್ತು ದಾಟಿದ್ದ ಕರ್ತಾರಿ ದೇವಿ ಕುಳಿತುಕೊಳ್ಳಲು ಕುರ್ಚಿಯಿಲ್ಲದೆ ವೇದಿಕೆಯ ಅಂಚಿನಲ್ಲಿ ಮುದುರಿ ನಿಂತಿದ್ದರು. ಸಭೆಯಲ್ಲಿದ್ದ ರಾಹುಲ್ ಮುಂದಿನ ಸಾಲಿನಲ್ಲಿದ್ದ ಕುರ್ಚಿಯೊಂದನ್ನು ಎತ್ತಿ ವೇದಿಕೆಯತ್ತ ತಂದು ತಮ್ಮನ್ನು ಕೂರಿಸಿದ್ದ ಸಂಗತಿಯನ್ನು ಆ ಹೆಣ್ಣುಮಗಳು ಮರೆಯಲಿಲ್ಲ. ಮಧ್ಯಪ್ರದೇಶದ ದಲಿತರ ಮನೆಯೊಂದರಲ್ಲಿ ಊಟ ಮಾಡಲು ಹೋಗಿದ್ದ ರಾಹುಲ್ ಚಪ್ಪಲಿ ಹೊರಗೆ ಬಿಟ್ಟು ಗುಡಿಸಿಲೊಳಗೆ ಕಾಲಿಟ್ಟದ್ದರು.

‘ಮೇಲ್ಜಾತಿಯ ಅನೇಕ ರಾಜಕಾರಣಿಗಳು ನನ್ನ ಗುಡಿಸಿಲಿಗೆ ಭೇಟಿ ನೀಡಿದ್ದಾರೆ. ಆದರೆ ಚಪ್ಪಲಿ ಹೊರಗೆ ಬಿಟ್ಟು ಒಳಗೆ ಬರಬೇಕೆಂದು ಅವರ್‍ಯಾರಿಗೂ ಅನಿಸಿರಲಿಲ್ಲ’ ಎಂದಿದ್ದಳು ಆ ದಲಿತ ಹೆಣ್ಣುಮಗಳು. ಇಂತಹ ಸೂಕ್ಷ್ಮ ಸಂವೇದನೆ ಉಳ್ಳ ರಾಹುಲ್ ತಮ್ಮೊಂದಿಗೆ ಅತಿ ಒರಟಾಗಿ ನಡೆದುಕೊಂಡಿರುವ ಅನೇಕ ಉದಾಹರಣೆಗಳನ್ನು ಕಾಂಗ್ರೆಸ್ ಸಂಸದರು ಖಾಸಗಿ ಮಾತುಕತೆಯಲ್ಲಿ ಹೇಳುತ್ತಾರೆ.

ಮಗನಿಗೆ ಪಟ್ಟ ಕಟ್ಟಿ ಸೋನಿಯಾ ಹಠಾತ್ತನೆ ಅಜ್ಞಾತವಾಸಕ್ಕೆ ತೆರಳುವ ಸಾಧ್ಯತೆಗಳಿಲ್ಲ. ಮರೆಗೆ ನಿಂತು ಕಾಯುವ ಕರುಳಿನ ಪಾತ್ರ ವಹಿಸಲಿದ್ದಾರೆ. ಮಿತ್ರ ಪಕ್ಷಗಳನ್ನು ಒಲಿಸಿಕೊಂಡು ರಾಹುಲ್ ಹಸ್ತವನ್ನು ಬಲಪಡಿಸುವ ಕೆಲಸದಲ್ಲಿ ಆಕೆ ತೊಡಗಿಸಿಕೊಳ್ಳುವರು ಎನ್ನಲಾಗುತ್ತಿದೆ. ಎಂಬತ್ತರ ದಶಕದಲ್ಲಿ ತಮ್ಮ ತಂದೆ ರಾಜೀವ್‌ ಗಾಂಧಿ ಕೈಗೆ ಸಿಕ್ಕಿದ್ದ ಕಾಂಗ್ರೆಸ್ಸಿಗೂ ಇದೀಗ ರಾಹುಲ್ ಹೆಗಲೇರುವ ಕಾಂಗ್ರೆಸ್ಸಿನ ನಡುವಣ ಅಂತರ ಆಡು- ಆನೆಗಳ ಗಾತ್ರದ್ದು.

ಇಂದಿರಾ ಹತ್ಯೆಯು ಎಬ್ಬಿಸಿದ ಅನುಕಂಪದ ಅಲೆಯನ್ನು ಏರಿದ ರಾಜೀವ್ 542 ಲೋಕಸಭಾ ಕ್ಷೇತ್ರಗಳ ಪೈಕಿ 411ರಲ್ಲಿ ಪಕ್ಷವನ್ನು ಗೆಲ್ಲಿಸಿ ವಿಕ್ರಮ ಸ್ಥಾಪಿಸಿದ್ದರು. ತರುವಾಯ ಏಳಿಗಿಂತ ಹೆಚ್ಚಾಗಿ ಬೀಳನ್ನೇ ಕಂಡಿರುವ ಪಕ್ಷವನ್ನು ಮತ್ತೆ ಎಬ್ಬಿಸಿ ಊರುಗೋಲು ನೀಡಿದವರು ಸೋನಿಯಾ ಗಾಂಧಿ.

ನೀರಸ ಮತ್ತು ಜಾಳು- ಜಾಳು ಮಾತುಗಾರನನ್ನು ನೋಡುತ್ತ ಬಂದಿದ್ದ ಕಾಂಗ್ರೆಸ್, 2013ರ ಜೈಪುರದ ಚಿಂತನಾ ಶಿಬಿರದಲ್ಲಿ ಹೊಸ ರಾಹುಲ್ ಗಾಂಧಿಯನ್ನು ಕಂಡಿತು. ಹೊಸ ಭಾಷೆ, ಹೊಸ ರಾಜಕಾರಣದ ತಾಜಾ ಪ್ರತಿಮೆಗಳನ್ನು ರಾಹುಲ್ ಬಳಸಿದರು.

ಹರ್ಷ, ರೋಮಾಂಚನ, ಹಾಸ್ಯ, ವಿಡಂಬನೆ, ವಿನಮ್ರತೆ, ಉದ್ವೇಗ, ಬಿರುನುಡಿಗಳು ಕಣ್ಣೀರಿನ ಮಿಶ್ರಭಾವಗಳಲ್ಲಿ ಕಾಂಗ್ರೆಸ್ಸಿಗರ ಕಣ್ಮನಗಳನ್ನು ತೋಯಿಸಿಬಿಟ್ಟಿದ್ದರು. ಅಧಿಕಾರವನ್ನು ಪಾಷಾಣ ಎಂದಿದ್ದರು. ಅಪರೂಪವಾಗಿ ಹೊಳೆದ ಅಂದಿನ ರಾಹುಲ್ ಆನಂತರ ಕಳೆದೇ ಹೋಗಿಬಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry