ರೆಕ್ಕೆ ಗಟ್ಟಿಮಾಡುವ ಪರಿಶ್ರಮ

7

ರೆಕ್ಕೆ ಗಟ್ಟಿಮಾಡುವ ಪರಿಶ್ರಮ

ಗುರುರಾಜ ಕರ್ಜಗಿ
Published:
Updated:

ಇದು ನನ್ನ ಗೆಳೆಯನೊಬ್ಬ ಹೇಳಿದ ಘಟನೆ. ನನ್ನ ಗೆಳೆಯ ಬುದ್ಧಿವಂತ. ಅವನ ಹೆಂಡತಿಯೂ ಬಲು ಜಾಣೆ, ವಕೀಲ ವೃತ್ತಿ ಮಾಡುತ್ತಾಳೆ. ಅವರಿಗೆ ಒಬ್ಬಳೇ ಮಗಳು. ಎಂಟನೇ ತರಗತಿಯಲ್ಲಿ  ಓದುತ್ತಾಳೆ.  ಭಾನುವಾರ ಮಧ್ಯಾಹ್ನ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿ ಇದ್ದಾಗ ಹೊತ್ತು ಕಳೆಯಲು ಕೆಲವೊಮ್ಮೆ ಪದಬಂಧದ ಆಟವಾಡುತ್ತಾರೆ. ಅದು ಬುದ್ಧಿಗೆ ಕಸರತ್ತು ನೀಡುವ ಆಟ. ಮೇಲೆ, ಕೆಳಗೆ ಅಡ್ಡ ಉದ್ದದ ಸಾಲುಗಳನ್ನು ಗಮನಿಸಿ ಪದಗಳ ರಚನೆ ಮಾಡುವುದು ಸುಲಭದ ಕೆಲಸವೇನಲ್ಲ. ಇಬ್ಬರಿಗೂ ಅದರಲ್ಲಿ ಆಸಕ್ತಿ ಇರುವುದರಿಂದ ಆಡುತ್ತ ಕುಳಿತಿದ್ದರು. ಆಗ ಅವರ ಮಗಳು ಮತ್ತು ಅವಳ ಗೆಳತಿ ಇಬ್ಬರೂ ಮನೆಗೆ ಬಂದರು. ಇವರು ಆಡುತ್ತಿದ್ದ ಆಟವನ್ನು ಗಮನಿಸಿ ತಾವೂ ಆಡುವುದಾಗಿ ಕುಳಿತರು. ಮಕ್ಕಳು ಚಿಕ್ಕವರಾದ್ದರಿಂದ ಮೊದಮೊದಲು ಕೇವಲ ನಾಲ್ಕು ಅಕ್ಷರಗಳ ಪದಗಳ ರಚನೆ ಪ್ರಾರಂಭಮಾಡಿದರು. ಹಾಗೆ ನೋಡಿದರೆ ಮಕ್ಕಳು ಚೆನ್ನಾಗಿಯೇ ಆಡುತ್ತ ಪ್ರತಿ ಸುತ್ತಿನಲ್ಲಿ  ಸಾಕಷ್ಟು ಅಂಕಗಳನ್ನು ಪಡೆಯುತ್ತಿದ್ದರು. ನನ್ನ ಸ್ನೇಹಿತ ಮತ್ತು ಅವನ ಹೆಂಡತಿ ಇದರಲ್ಲಿ  ತುಂಬ ಪರಿಣತರಾದ್ದರಿಂದ ಸುಲಭವಾಗಿ ಪದಗಳನ್ನು ರಚಿಸುತ್ತಿದ್ದರು.

ನಿಧಾನವಾಗಿ ನಾಲ್ಕು ಅಕ್ಷರಗಳ ಪದಗಳನ್ನು ಮುಗಿಸಿ ಆರು ಅಕ್ಷರಗಳ ಪದಗಳನ್ನು ರಚಿಸತೊಡಗಿದರು. ಹುಡುಗಿಯರಿಗೆ ಅದು ಸ್ವಲ್ಪ ಕಷ್ಟದ ಕೆಲಸವೇ. ಗಂಡ ಹೆಂಡತಿ ಒಂದು ತಂಡ, ಹುಡುಗಿಯರು ಮತ್ತೊಂದು ತಂಡವಾಗಿತ್ತು. ಆಗೊಂದು ತಮಾಷೆ ನಡೆಯಿತು. ದೊಡ್ಡವರಿಬ್ಬರೂ ತಮ್ಮ ಪದವನ್ನು ಬೇಗನೇ ರಚಿಸಿಬಿಟ್ಟರು. ತಾಯಿ, ಮಗಳು ಹೇಗೆ ಮಾಡುತ್ತಾಳೆ ಎಂದು ಗಮನಿಸುತ್ತ ಇದ್ದರು. ಮಕ್ಕಳ ಕಷ್ಟ ನೋಡಿ ಸಹಾಯ ಮಾಡೋಣವೆಂದು ಈ ಪದಬಂಧ ಮಾಡುವುದು ಹೇಗೆ, ಸಮಯ ಉಳಿಸುವುದು ಹೇಗೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ಮಕ್ಕಳಿಗೆ ಖುಷಿಯಾಯಿತು. ಆಗ ಮಗಳು ಹೇಳಿದಳು, ಅಪ್ಪಾ, ನಿಮ್ಮ ತಂಡ ತುಂಬ ಬಲಿಷ್ಠವಾಯಿತು, ಅಮ್ಮ ನಮ್ಮ ಕಡೆಗೆ ಇರಲಿ, ಅಪ್ಪ ಆಗಬಹುದು ಎಂದರು.

ಆಟದ ಭರಾಟೆ ಮುಂದುವರೆಯಿತು. ತಂದೆ ಪದ ರಚಿಸಿದೊಡನೆ ಮಗಳು, ಅಮ್ಮಾ ನೀನು ಇನ್ನೂ ಬೇಗ ಮಾಡು ಎನ್ನುತ್ತಿದ್ದಳು. ತಾಯಿಯೂ ಉತ್ಸಾಹದಿಂದ ರಚನೆ ಮಾಡುತ್ತಿದ್ದರು. ಅಮ್ಮನ ರಚನೆ ಮುಗಿದೊಡನೆ ಮಕ್ಕಳಿಬ್ಬರೂ ಸಂತೋಷದಿಂದ ಚಪ್ಪಾಳೆ ತಟ್ಟುತ್ತಿದ್ದರು. ಮಗಳು ಅಪ್ಪಾ, ನಿನಗಿಂತ ಅಮ್ಮನೇ ಬೇಗ ಮಾಡುತ್ತಾಳೆ ಎಂದು ಉತ್ಸಾಹ ನೀಡುತ್ತಿದ್ದಳು. ಈ ಆಟ ಸುಮಾರು ಮುಕ್ಕಾಲು ತಾಸು ನಡೆಯಿತು. ಆಗ ಅಮ್ಮ ಗಮನಿಸಿದರು, ಆಟ ಕೇವಲ ತಮ್ಮಿಬ್ಬರ ನಡುವೆ ನಡೆಯುತ್ತಿದೆ! ಮಕ್ಕಳ ಪಾತ್ರವೇನು. ಅವರು ಕೇವಲ ಅಂಕಗಳನ್ನು ಲೆಕ್ಕವಿಡುತ್ತ ಚಪ್ಪಾಳೆ ತಟ್ಟುತ್ತ ಕುಳಿತಿದ್ದಾರೆ! ಈಗ ಅಂಕಗಳು ಮುಖ್ಯವಲ್ಲ. ಯಾಕೆಂದರೆ ಅವುಗಳಿಂದ ಯಾರಿಗೂ ಏನೂ ಆಗಬೇಕಾದ್ದಿಲ್ಲ. ಆದರೆ, ಆಗಬೇಕಾಗಿದ್ದೂ ತಪ್ಪಿ ಹೋಗಿತ್ತು. ಮಕ್ಕಳಿಗೆ ಈ ಆಟದಿಂದ ತಮ್ಮ ಶಬ್ದಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶವಿತ್ತು. ತಾನು ಅವರಿಗೆ ಸಹಾಯ ಮಾಡಲು ಹೋಗಿ, ತಾನೇ ಆಟಗಾರ್ತಿಯಾಗಿ ಅವರ ಕಲಿಯುವ ಅವಕಾಶವನ್ನೂ ತಪ್ಪಿಸಿ ಬಿಟ್ಟಿದ್ದೆೀನೆ.

ನಮ್ಮ ಮನೆಗಳಲ್ಲೂ ಹಾಗೆಯೇ ಅಲ್ಲವೆ. ಪುಟ್ಟ ಮಗು ಹೇಗೆ ಬರೆದೀತು  ಹೋಂವರ್ಕ ಕಷ್ಟವಲ್ಲ ಎಂದು ಕರುಣೆಯಿಂದ ಅವರ ಎಲ್ಲ ಕೆಲಸಗಳನ್ನು ನಾವೇ ಮಾಡುತ್ತ, ಅವರು ತಮ್ಮ ತಪ್ಪುಗಳಿಂದ ಸರಿಯಾದದ್ದನ್ನು ಕಲಿಯುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತೇವೆ. ಅವರನ್ನು ಅವಲಂಬಿತರನ್ನಾಗಿ ಮಾಡುತ್ತೇವೆ. ರೆಕ್ಕೆಗಳು ಮುಂದೆ ಹಾರಲು ಬಾರದಷ್ಟು ಅಶಕ್ತವನ್ನಾಗಿ ಮಾಡುತ್ತೇವೆ. ತಮ್ಮ ಪ್ರಯತ್ನಗಳಿಂದ, ವೈಫಲ್ಯಗಳಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳುವ, ಕುತೂಹಲ ವೃದ್ಧಿಸಿಕೊಳ್ಳುವ, ಪುಟ್ಟ ಸಂಶೋಧನೆಗಳಿಂದ ಸಂತೋಷ ಪಡೆಯುವ ಸಾಧ್ಯತೆಗಳನ್ನು ತಪ್ಪಿಸಿಬಿಡುತ್ತೇವೆ. ಅತಿಯಾದ ಕಾಳಜಿ ಮಕ್ಕಳಿಗೆ ಒಳ್ಳೆಯದನ್ನು ಮಾಡುವ ಬದಲು ಅಶಕ್ತರನ್ನಾಗಿಸುತ್ತದೆ. ಅವರೇ ತಮ್ಮ ರೆಕ್ಕೆಗಳನ್ನು ಪಟಪಟನೇ ಶ್ರಮಪಟ್ಟು ಬಡಿದು ಗಟ್ಟಿ ಮಾಡಿಕೊಳ್ಳಲಿ. ಆಗ ಅವರು ಜೀವನದ ಸಮುದ್ರವನ್ನೂ ಅನಾಯಾಸವಾಗಿ ಹಾರಿಯಾರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry