ರೇತೋ ಬಿಂದು ಎಂದರೆ ಅದು ಜೀವದ ಕಂಬನಿ

7

ರೇತೋ ಬಿಂದು ಎಂದರೆ ಅದು ಜೀವದ ಕಂಬನಿ

Published:
Updated:
ರೇತೋ ಬಿಂದು ಎಂದರೆ ಅದು ಜೀವದ ಕಂಬನಿ

ಸೂರ್ಯ ಮತ್ತು ಚಂದ್ರ, ಈ ಎರಡು ಸತ್ತ್ವಗಳು ಕಾಲನಿಯಾಮಕರು ಅಥವಾ ಕಾಲನಿರೂಪಕರು. ಈ ಸತ್ತ್ವಗಳನ್ನು ಮೂಲವಾಗಿಟ್ಟುಕೊಂಡು ಎರಡು ಕ್ಷತ್ರಿಯ ಬಳಿಗಳು ಹುಟ್ಟಿಕೊಂಡಿವೆ. ಅವು ಸೂರ್ಯವಂಶ ಮತ್ತು ಚಂದ್ರವಂಶ ಎಂದು ಹೆಸರಾಗಿವೆ. ಕಾಳಿದಾಸ ತನ್ನ ‘ಅಭಿಜ್ಞಾನ ಶಾಕುಂತಲ’ದ ನಾಂದೀಪದ್ಯದಲ್ಲಿ ಹಗಲು–ಇರುಳುಗಳೆಂದು ಕಾಲವನ್ನು ಇಬ್ಬಗೆಯಾಗಿ ನಿರೂಪಿಸುವ ಸೂರ್ಯ–ಚಂದ್ರರನ್ನು ಶಿವನ ಅಷ್ಟಮೂರ್ತಿಗಳಲ್ಲಿ ಇವರು ಎರಡು ಮೂರ್ತಿಗಳೆಂದು – ‘ದ್ವೇ ಕಾಲಂ ವಿಧತ್ತಃ’ – ಎಂದು ನೆನಪಿಸುತ್ತಾನೆ.ಕಾಳಿದಾಸನು ಕ್ಷತ್ರಿಯರ ಕಥೆಯನ್ನು ನಾಟಕ ಮಾಡಿದವನು. ಅವನು ಸೂರ್ಯ–ಚಂದ್ರರಿಬ್ಬರನ್ನೂ ನೆನೆಯಬೇಕು. ಅಲ್ಲದೇ ‘ಶಾಕುಂತಲ’ವು ಅರಿವು, ಮರೆವು ಮತ್ತು ಅಭಿಜ್ಞಾನದ ಕಾರಣವಾಗಿ, ಮರೆತುದು ಮರಳಿ ನೆನಪಾಗಿ, ಆ ಉಜ್ಜೀವಿತ ನೆನಪಿನಲ್ಲಿ ಹೊಸತೇ ಒಂದು ಅರಿವಿಗೆ ಕಾರಣವಾಗುವ, ಈ ಅರಿವೇ ಒಳಮೈಯಾಗಿ ಉಳ್ಳ ಕಾಲಪೋಷಿತವಾದ ನಾಟಕವಾದ್ದರಿಂದ, ನಾಟಕಕ್ಕೆ ಹಗಲು ಅಭ್ಯಾಸದ ಎಚ್ಚರ; ರಾತ್ರಿ ಪ್ರದರ್ಶನದ ಸಂಭ್ರಮವಾಗಿ ಕಾಲದ ಇಬ್ಬಗೆಗಳೂ ನಾಟಕದ ಎರಡು ಮೈ ಆಗಿರುವುದರಿಂದ ಕಾಳಿದಾಸ ಈ ಅಂಶವನ್ನು ಎತ್ತಿಹೇಳಿದಂತಿದೆ.ಇಂತು ಪ್ರಸಿದ್ಧವಾದ ಈ ಎರಡು ಬಳಿಗಳಲ್ಲಿ, ‘ರಾಮಾಯಣ’ವು ಸೂರ್ಯವಂಶೀಯ ಕ್ಷತ್ರಿಯರ ಕಥೆಯಾದರೆ ‘ಮಹಾಭಾರತ’ವು ಚಂದ್ರವಂಶೀಯರ ಕಥೆಯಾಗಿದೆ. ವೃದ್ಧಿ–ಕ್ಷಯಗಳು ಚಂದ್ರವಂಶಕ್ಕೆ ಮಾತ್ರವಲ್ಲ ಸೂರ್ಯವಂಶಕ್ಕೂ ಇವೆ. ಕಾಳಿದಾಸನೇ ತನ್ನ ‘ರಘುವಂಶ’ದಲ್ಲಿ ಈ ವೃದ್ಧಿ ಕ್ಷಯಗಳೆರಡನ್ನೂ ಅದ್ಭುತವಾಗಿ ಚಿತ್ರಿಸಿದ್ದಾನೆ. ಜನಾಂಗದ, ಸಂಸ್ಕೃತಿಯ ವೃದ್ಧಿ–ಕ್ಷಯಗಳೆರಡರ ಚಿತ್ರಣವಿಲ್ಲದೆ ಕಥನಗಳೇ ಇಲ್ಲವೆನ್ನಬಹುದು! ಕಥನಕ್ಕೆ ಮಾತ್ರ ವೃದ್ಧಿ–ಕ್ಷಯಗಳಿಲ್ಲ! ಅಂದರೆ ಕ್ಷಯಸಂದರ್ಭದ ಚಿತ್ರಣದಲ್ಲಿ ಕಥನದ ಆಂತರಿಕಶಕ್ತಿ ಇನ್ನಷ್ಟು ಉಜ್ಜ್ವಲವಾಗಬಹುದು– ಕೆಲಸದಲ್ಲಿ ಬಳಕೆಯಾಗುತ್ತಲೇ ಹೆಚ್ಚು ಹರಿತಗೊಳ್ಳುವ ಅಲಗಿನಂತೆ!ಮಹಾಭಾರತದಲ್ಲಿ ಬರುವ ಯಯಾತಿಯ ಕಥೆಯಂತೂ ‘ಕಾಲ’ವನ್ನು ಕುರಿತೇ ಮಾಡಿದ ಒಂದು ಪ್ರಯೋಗದಂತಿದೆ. ಇದು ಹಗಲಿರುಳುಗಳೇ ಒಂದಾಗುವ ಕಥೆಯಾಗಿದೆ! ಆದುದರಿಂದಲೇ ನಾಟಕೀಯ ಸನ್ನಿವೇಶಗಳಿಂದ ನಿಬಿಡವಾಗಿದೆ. ತಂದೆ–ಮಕ್ಕಳ ಎರಡು ಪಾತ್ರಗಳಲ್ಲಿ, ಒಬ್ಬನಲ್ಲಿ ಕಾಲ ಮುಂದೆ ಹೋಗಿರುತ್ತದೆ – ಮಗನಲ್ಲಿ.ಅಂದರೆ ತರುಣನಿರಬೇಕಾದವನು ಮುದುಕನಾಗಿರುತ್ತಾನೆ. ತಂದೆಯಲ್ಲಿ ಕಾಲ ಹಿಂದಕ್ಕೆ ಹೋಗಿರುತ್ತದೆ. ಅಂದರೆ ಮುದುಕನಾಗಿರಬೇಕಾದ ತಂದೆ, ತರುಣನಾಗಿರುತ್ತಾನೆ. ಆದುದರಿಂದಲೇ ಈ ಇತಿಹಾಸವು ಲೌಕಿಕ ಕಾಲಕ್ಕಿಂತ ಹೆಚ್ಚು ಆಧ್ಯಾತ್ಮಿಕ ಕಾಲಕ್ಕೆ ಸೇರಿದ್ದಾಗಿದೆ. ಅಂದರೆ ಆಂತರಿಕ ಕಾಲಕ್ಕೆ ಸಂಬಂಧಪಟ್ಟದ್ದು. ಪರಸ್ಪರ ವಿರುದ್ಧವೆನ್ನಿಸುವ ಅನುಭವಗಳ ಮುಖಾಮುಖಿಯೇ ಕಥನಕ್ಕೆ ಅನೂಹ್ಯವಾದ ಒಂದು ಆಳವನ್ನು ಒದಗಿಸುವಂಥದಾಗಿದೆ.ಯಯಾತಿಯು ಚಂದ್ರವಂಶದಲ್ಲಿ ಹುಟ್ಟಿಬಂದವನು. ಪ್ರಸಿದ್ಧನಾದ ನಹುಷನ ಮಗ. ನಹುಷನಾದರೋ ಈ ಮರ್ತ್ಯಲೋಕದ ದೊರೆಯಾದರೂ ಕೆಲಕಾಲ ಇಂದ್ರಾಧಿಕಾರವನ್ನೂ ಪಡೆದಿದ್ದವನು. ಆ ಅಧಿಕಾರ ಕಾಲದಲ್ಲಿಯೇ ಶಾಪಗ್ರಸ್ತನೂ ಆಗಿ ಕೆಳಗೆ ಬಿದ್ದವನು. ಶಾಪದಿಂದ ತಾನು ಅಜಗರ (ಹೆಬ್ಬಾವು) ವಾದವನು; ಆಗಿಯೂ ನಡೆದುದೆಲ್ಲದರ ನೆನಪಿದ್ದವನು; ನೆನಪಿನ ಕಾರಣದಿಂದಲೇ ತನ್ನ ಸ್ಥಿತಿಯ ನೋವನ್ನು ಹೆಚ್ಚು ಉಂಡವನು; ಮತ್ತು ನೆನಪಿನ ಕಾರಣದಿಂದಲೇ ತನ್ನ ಉದ್ಧಾರವನ್ನೂ ನಿರೀಕ್ಷಿಸುತ್ತ ಇದ್ದವನು. ತನ್ನನ್ನು ಕಾಡುವ ಸಾಮಾಜಿಕ ಪ್ರಶ್ನೆಗಳನ್ನು ಮೈಯುದ್ದ ಹೊದ್ದು ಕಾಡಿನಲ್ಲಿ – ಮಹಾಭಾರತದ ವನಪರ್ವದಲ್ಲಿ – ಉತ್ತರಕ್ಕಾಗಿ ಕಾಯುತ್ತಿದ್ದವನು. ಅವನ ಕಥೆ ಬೇರೆ.ನಹುಷನ ಅನಂತರ ಯಯಾತಿ ದೊರೆಯಾಗಿದ್ದ. ದೈತ್ಯರ ಗುರು ವಿಖ್ಯಾತನಾದ ಶುಕ್ರಾಚಾರ್ಯನ ಮಗಳು ದೇವಯಾನಿಯನ್ನು ಮದುವೆಯಾಗಿದ್ದ. ಯಯಾತಿಗೆ ಈರ್ವರು ಮಡದಿಯರು. ದೇವಯಾನಿ ಮತ್ತು ದೈತ್ಯರ ದೊರೆಯಾದ ವೃಷಪರ್ವನ ಮಗಳು ಶರ್ಮಿಷ್ಠಾ. ಇದೇ ಒಂದು ಕಥೆ. ಒಂದು ಕಾಲದಲ್ಲಿ ಈ ಇಬ್ಬರು – ಗುರುವಿನ ಮಗಳು ಮತ್ತು ದೊರೆಯ ಮಗಳು – ಆಪ್ತ ಗೆಳತಿಯರು. ಒಟ್ಟಿಗೆ ಮೀಯುವಷ್ಟು ಗೆಳತಿಯರು.

ಒಮ್ಮೆ ಏನಾಯಿತೆಂದರೆ, ಕೊಳವೊಂದರಲ್ಲಿ ಸ್ವೇಚ್ಛೆಯಾಗಿ ವಿಹರಿಸಿ, ಮಿಂದು ಮೇಲೆ ಬಂದು ಕಳಚಿಟ್ಟ ಉಡುಪುಗಳನ್ನು ಮರಳಿ ತೊಡುವಲ್ಲಿ ಅನವಧಾನದಿಂದ ಗೆಳತಿಯರ ಉಡುಪುಗಳು ಅದಲು ಬದಲಾದವು. ಇದೇ ಕಾರಣಕ್ಕೆ ಗೆಳತಿಯರಲ್ಲಿ ದೊಡ್ಡ ರಂಪವಾಯಿತು, ವಿರಸವಾಯಿತು. ಅವರು ತೊಟ್ಟದ್ದು ಉಡುಪುಗಳನ್ನು ಮಾತ್ರವಲ್ಲ – ಅಹಂಕಾರ, ದರ್ಪಗಳನ್ನು ಕೂಡ. ಉಡುಪುಗಳು ಬದಲಾದದ್ದು ಒಂದು ಬೀಜಘಟನೆ! ಬಹು ಸೂಚಕವಾದದ್ದು. ಈ ಘಟನೆ ಬೇರೆ ಬೇರೆ ರೀತಿಗಳಲ್ಲಿ ಬೆಳೆಯುತ್ತ ಹೋಗುತ್ತದೆ. ರೂಪವೇ ಅಕಾಲದಲ್ಲಿ ಬದಲಾಗುವತ್ತ, ಅನುಭವಗಳೇ ವಿನಿಮಯಗೊಳ್ಳುವತ್ತ, ಬೆಳೆಯುತ್ತ ಹೋಗುತ್ತದೆ – ಕಥೆ ಬೆಳೆದಂತೆ.

ಗೆಳತಿಯರಲ್ಲಿ ದೊಡ್ಡ ಜಗಳವೇ ಆಗಿ ಶರ್ಮಿಷ್ಠೆಯು ದೇವಯಾನಿಯನ್ನು ಹಾಳುಬಾವಿಯೊಂದರಲ್ಲಿ ತಳ್ಳಿ ಹೊರಟುಹೋದಳು. ಆಕಸ್ಮಿಕವಾಗಿ ಆ ದಿಕ್ಕಿನತ್ತ ಬಂದಿದ್ದ ದೊರೆ ಯಯಾತಿ, ದೇವಯಾನಿಯ ಅಳುವನ್ನು ಕೇಳಿಸಿಕೊಂಡು, ಶುಕ್ರನ ಮಗಳನ್ನು ಕೂಪದಿಂದ ಕೈಹಿಡಿದು ಮೇಲೆತ್ತಿದ. ಬ್ರಾಹ್ಮಣಯುವತಿ ಮತ್ತು ಕ್ಷತ್ರಿಯಯುವಕ – ಈ ಇಬ್ಬರಿಗೆ ಅನ್ವರ್ಥವಾಗಿ ಪಾಣಿಗ್ರಹಣವಾಗಿ ಬಿಟ್ಟಿತು!ತನ್ನನ್ನು ಬಾವಿಗೆ ತಳ್ಳಿದ ದೊರೆಯ ಮಗಳು ತನ್ನ ದಾಸಿಯಾಗಲೇಬೇಕೆಂಬ ದೇವಯಾನಿಯ ಹಟವನ್ನು – ಅವಳು ಗುರುಪುತ್ರಿಯಾಗಿದ್ದುದರಿಂದ, ಗುರು ಶುಕ್ರಾಚಾರ್ಯ ಪ್ರಭಾವಶಾಲಿಯಾಗಿದ್ದುದರಿಂದ, ದೈತ್ಯದೊರೆ ವೃಷಪರ್ವನೂ ಮಾತಿಲ್ಲದೆ ನುಂಗಿಕೊಳ್ಳಬೇಕಾಯಿತು. ಹೀಗೆ ದೇವಯಾನಿಯೇ ಕಾರಣಳಾಗಿ ಶರ್ಮಿಷ್ಠೆಯೂ ಯಯಾತಿಯ ಸನಿಹಕ್ಕೆ ಬಂದಳು! ಇನ್ನೊಂದು ಅರ್ಥದಲ್ಲಿ ಉಡುಪು ಮತ್ತೊಮ್ಮೆ ಅದಲು ಬದಲಾದವು!ದೇವಯಾನಿ, ಎರಡು ಮಕ್ಕಳ – ಯದು ಮತ್ತು ತುರ್ವಶುಗಳ – ತಾಯಿಯಾದಳು. ಶರ್ಮಿಷ್ಠೆ ಮುವ್ವರು ಮಕ್ಕಳ – ದ್ರುಹ್ಯು, ಅನು ಮತ್ತು ಪೂರು–ಗಳ ತಾಯಿಯಾದಳು. ಆದರೆ ಶರ್ಮಿಷ್ಠೆ, ಯಾಯಾತಿಯಿಂದ ಮಕ್ಕಳನ್ನು ಪಡೆದುದು ದೇವಯಾನಿಗೆ ಕೆಲಕಾಲ ರಹಸ್ಯವೇ ಆಗಿತ್ತು. ರಹಸ್ಯ ತಿಳಿದಾಗ ದೇವಯಾನಿ ಕುಪಿತಳಾದಳು. ತಂದೆ ಶುಕ್ರಾಚಾರ್ಯನಲ್ಲಿ ಎಲ್ಲವನ್ನೂ ಹೇಳಿ ಶುಕ್ರನಿಂದ ಯಾಯಾತಿಗೆ ಅಕಾಲ ವೃದ್ಧಾಪ್ಯದ ಶಾಪ ಒದಗುವಂತೆ ಮಾಡಿದಳು. ಇಂಥ ಸಂದರ್ಭದಲ್ಲಿ ಗಂಡ ಮುದುಕನಾಗುವುದೇ ಹೆಂಡತಿಗೆ ಇಷ್ಟವೇನೋ!ಶಾಪ ಫಲಿಸಿತು. ಯಯಾತಿಯ ಯೌವನ ಕಣ್ಮರೆಯಾಯಿತು. ಮುಪ್ಪಿನ ಸುಕ್ಕುಗಟ್ಟಿತು. ಮುಖ ಕೆಟ್ಟಿತು. ಶರೀರವೆನ್ನುವ ಉಡುಪು ಕಳೆಗೆಟ್ಟಿತು. ಚಿಂತಿತನಾದ ಯಯಾತಿ ಶುಕ್ರನಲ್ಲಿ ಕ್ಷಮೆ ಕೇಳಿ ಶಾಪಕ್ಕೆ ಪರಿಹಾರವೊಂದನ್ನು ಪಡೆದ. ಅದೆಂದರೆ, ತನ್ನ ಮಕ್ಕಳಲ್ಲಿ – ಪ್ರಜೆಗಳಲ್ಲಿ ಅಲ್ಲ – ಯಾರಾದರೂ ತಂದೆಯ ಈ ಅಕಾಲದ ಮುಪ್ಪನ್ನು ಸ್ವೀಕರಿಸಿ, ತಮ್ಮ ಯೌವನವನ್ನು ತಂದೆಗೆ ತೆರುವುದಾದರೆ, ಅಂಥದೊಂದು ವಿನಿಮಯ – ಕಾಲ ವಿನಿಮಯ – ಸಂಭವಿಸಿಬಿಡುತ್ತದೆ ಎಂಬ ಪರಿಹಾರ. ತಂದೆಯಿಂದಲೇ ಈ ದೇಹ ಬಂದಿರುವುದರಿಂದ ಈ ಪರಿಹಾರ. ಎಂಥ ಪರಿಹಾರ!ಅಂದರೆ ಮುಪ್ಪನ್ನು ಯಾರಾದರೂ ಅನುಭವಿಸಲೇಬೇಕು. ಅನುಭವಿಸಿಯೇ ಕಳೆದುಕೊಳ್ಳಬೇಕಲ್ಲದೆ ಅನ್ಯಥಾ ಅಲ್ಲ. ವ್ಯಕ್ತಿ ಬದಲಾಗಬಹುದು. ಪಾತ್ರಧಾರಿ ಬದಲಾಗಬಹುದು. ಪಾತ್ರ ಬದಲಾಗದು! ಅಲ್ಲದೆ ಅನುಭವವು ಇಡಿಯಾಗಿರಬೇಕು. ಅಂದರೆ ತಾನು ಯುವಕನಾಗಿರುತ್ತ ಮುದುಕನ ಪಾತ್ರವನ್ನು ಮಾಡುವಂತಿಲ್ಲ; ಮುದುಕನೇ ಆಗಬೇಕು! ಮುದುಕನೇ ಆದರೂ ಅದು ಪಾತ್ರವೇ! ಈ ಪಾತ್ರಕ್ಕಾಗಿ ತನ್ನ ಯೌವನವನ್ನು ತೆತ್ತೇ ಮುಪ್ಪನ್ನು ಸ್ವೀಕರಿಸಬೇಕು! ಯಾರಿಗಿದೆ ಈ ಎದೆಗಾರಿಕೆ? ಒಂದೊಮ್ಮೆ ಇದ್ದರೆ ಈ ಎದೆಗಾರಿಕೆ ಇದು ಯುವಕರಿಗಷ್ಟೇ ಸಾಧ್ಯ. ಸ್ವಯಂ ಯಯಾತಿಗೆ ಮುಪ್ಪನ್ನು ಒಪ್ಪುವ ಎದೆಗಾರಿಕೆ ಇರಲಿಲ್ಲ.ತನ್ನ ಐದು ಮಂದಿ ಮಕ್ಕಳಲ್ಲಿ ಈ ವಿಲಕ್ಷಣವಾದ ಒಡಂಬಡಿಕೆಯನ್ನು ಯಯಾತಿ ಮುಂದಿಟ್ಟನಂತೆ: ‘ನಿಮ್ಮಲ್ಲಿ ಯಾರಾದರೂ ನಿಮ್ಮ ಯೌವನವನ್ನು ನನಗೆ ನೀಡುವಿರಾ? ನನ್ನ ಮುಪ್ಪನ್ನು ಅಪ್ಪಿಕೊಳ್ಳುವಿರಾ? ಹೀಗೆ ಕೇಳಿದ ಮೊದಲ ತಂದೆ ಇರಬೇಕು ಯಯಾತಿ!ಇನ್ನೊಂದು ರೀತಿಯಿಂದ ನೋಡಿದರೆ, ಸಂತತಿಯ ಎಳೆ ಮನಸ್ಸಿನ ಮೇಲೆ ಪೂರ್ವಜರ ವ್ಯಕ್ತಿತ್ತ್ವದ ಭಾರ ಒರಗುವುದರ ಸೂಚಕವಾಗಿದೆ ಈ ಕಥೆ.  ಯೌವನದ ಮೇಲೆ ಮುಪ್ಪಿನ ಸವಾರಿಯ ಕಥೆ. ಮುಪ್ಪು ಸವಾರಿಯೇ ಮಾಡಬೇಕಷ್ಟೆ. ತಾನು ತನ್ನಲ್ಲಿ ನಿಶ್ಚಲವಾಗಲಾರದ, ತನ್ನ ಚಾಂಚಲ್ಯವನ್ನು ಇನ್ನೂ ಬಿಡಲಾಗದ ಮುಪ್ಪು, ಸವಾರಿಯ ಆಸೆಯಲ್ಲಿಯೇ ಜೀವ ಹಿಡಿದುಕೊಂಡಿರುವುದು. ಹೀಗೆ ಪರಂಪರೆಯ ಒತ್ತಡ–ಭಾರ ಕಾಡುತ್ತಿರುವ ಅಕಾಲ ವೃದ್ಧಸ್ಥಿತಿಯನ್ನು, ಪೂರು ಮಾನಸಿಕತೆ – Puru Complex – ಎಂದು ಕರೆದುದನ್ನು ಎಲ್ಲೋ ಓದಿದ ನೆನಪು ಇದೆ ನನಗೆ. ಯಯಾತಿಯ ಮುಪ್ಪನ್ನು ಪೂರು ಸ್ವೀಕರಿಸಿದ್ದುದರಿಂದ ಈ ಕಾಂಪ್ಲೆಕ್ಸಿನ ಮಾತು ಅಷ್ಟೆ.ಆದರೆ ಮಹಾಭಾರತ, ಈ ಕಥೆಗಿಂತ ಭಿನ್ನವಾದ ಇನ್ನೊಂದು ಚಿತ್ರವನ್ನೂ ನೀಡುತ್ತದೆ. ಅದೆಂದರೆ – ಮಗುವನ್ನು ಹೆತ್ತು ತಾಯಿಯಾದ ಮೇಲೂ ಹೆಣ್ಣು ತನ್ನ ಕನ್ನೆತನ ಕಳೆದುಕೊಳ್ಳದ ಚಿತ್ರ. ಸ್ವಯಂ ವ್ಯಾಸರ ತಾಯಿ ಮತ್ಸ್ಯಗಂಧಿ ಸತ್ಯವತಿ ಋಷಿ ಪರಾಶರನಿಂದ ಮಗನನ್ನು ವ್ಯಾಸನನ್ನು ಪಡೆದಳು. ಮಗನನ್ನು ಪಡೆದೂ ಪರಾಶರ ಮತ್ಸ್ಯಗಂಧಿಗೆ ನುಡಿದರಂತೆ: ‘ನಿನ್ನ ಕನ್ನೆತನ ಕೆಟ್ಟಿಲ್ಲ’. ಅದು ಕನ್ನೆತನ ಕೆಡದ ಕೂಟ. ಅಂದರೆ ಮುಗ್ಧತೆ ಕೆಡದ ಕೂಟ.

ಈ ಕಾರಣಕ್ಕಾಗಿಯೇ ವ್ಯಾಸರನ್ನು ‘ಅಯೋನಿಜ’ ಎನ್ನುವರು. ಅವರು ಹುಟ್ಟುವಾಗಲೇ ಮೊದಲ ಬಾಲ್ಯ ಕಳೆದಿತ್ತೆನ್ನುವರು; ತಂದೆ ಪರಾಶರರನ್ನು ಅನುಸರಿಸಿ ನಡೆಯಲು ವ್ಯಾಸರು ತಕ್ಕವರಾಗಿದ್ದರೆನ್ನುವರು. ನಮ್ಮ ಬಸವಣ್ಣ – ಕೂಡಲ ಸಂಗನ ನಿಲುವು ಕನ್ನೆಯ ಸ್ನೇಹದಂತಿತ್ತು ಎನ್ನುವರು. ಆಂದರೆ ಸಂಗನ ಒಡನಾಟ ಮುಗ್ಧತೆಯನ್ನು ಆಳವಾಗಿಸುವ ಒಡನಾಟ ಎಂದು.

ಲೋಕದ ಒಡನಾಟ ನಮ್ಮ ಮುಗ್ಧತೆಯನ್ನು ಕೆಡಿಸಿ ನಮ್ಮನ್ನು ತಂತ್ರಗಾರರನ್ನಾಗಿಸುತ್ತದೆ. ಸಂಗನ ಒಡನಾಟ ಮುಗ್ಧತೆಯನ್ನು ಅರಳಿಸುತ್ತದೆ. ತನ್ನ ಅನುಭವದಲ್ಲಿ ಮಾತ್ರವಲ್ಲ, ಅಕ್ಕಮಹಾದೇವಿಯಂಥವರನ್ನು ನೋಡಿಯೂ ‘ಸಂಗನ ನಿಲುವು ಕನ್ನೆಯ ಸ್ನೇಹದಂತಿತ್ತು’ ಎಂಬ ಅದ್ಭುತವಾದ ಸಾಲು ಬಸವಣ್ಣನಿಗೆ ಹೊಳೆದಿರಬಹುದು.ಮುಗ್ಧತೆ ಕೆಡದೆ ಇರುವುದು ಕಡುಕಷ್ಟ ಎನ್ನುವುದೂ ಮಹಾಭಾರತದ ಧ್ವನಿಯಾಗಿದೆ. ಪರಾಶರ, ಮತ್ಸ್ಯಗಂಧಿಯರಂಥದೇ ಇನ್ನೊಂದು ಚಿತ್ರ ಕುಂತಿ–ಸೂರ್‍ಯನ ನಡುವಿನದು. ದೂರ್ವಾಸರ ಮಂತ್ರ ರಹಸ್ಯವನ್ನು ಹೊತ್ತು ಅದೊಂದು ಕುತೂಹಲದಿಂದ ಹೊಳೆಯ ದಡಕ್ಕೆ ಬಂದ ಕನ್ಯೆ ಕುಂತಿ, ತಾನಾಗಿ ಸೂರ್‍ಯನನ್ನು ನೆನೆದಳು. ಸೂರ್ಯ ತನ್ನ ಸನಿಹ ಬಂದಾಗ ಬೆಳಕಿಗೆ ಬೆಚ್ಚಿದಳು. ಸೂರ್‍ಯ ಅವಳನ್ನು ಕೂಡಿ – ಮುನ್ನಿನ ಕೆನ್ನೆತನ ಕೆಡದಿರಲಿ – ಎಂದು ಪಿಸುನುಡಿದನಂತೆ. ಆದರೆ ಅಷ್ಟರಲ್ಲೇ ಮುಗ್ಧತೆ ಕಳೆದುಹೋಗಿರಬೇಕು. ಕೈಗೆ ಬಂದ ಕೂಸು ಕರ್ಣನನ್ನು ಪೆಟ್ಟಿಗೆಯೊಂದರಲ್ಲಿಟ್ಟು ನೀರಿಗೆ ಚೆಲ್ಲಿದಳು. ಕನ್ನೆತನದ ಮುಗ್ಧತೆ ಕಳೆದಿತ್ತು. ತಾಯ್ತನ ಬಂದಿರಲಿಲ್ಲ. ಹುಡುಗಿ ಕಂಗೆಟ್ಟಿದ್ದಳು. ಮುಗ್ಧತೆ ಕೆಡದಿರುವುದು ಕಡುಕಷ್ಟ.ತಂದೆ ಯಯಾತಿಯ ಮಾತಿಗೆ ದೇವಯಾನಿಯ ಮಕ್ಕಳು ಸಹಜವಾಗಿ ಒಡಂಬಡಲಿಲ್ಲ. ಶರ್ಮಿಷ್ಠೆಯ ಇಬ್ಬರು ಮಕ್ಕಳೂ ನಿರಾಕರಿಸಿದರು. ಈ ತಾಯಂದಿರಾದರೂ, ಸಿಂಹಾಸನದ ಮೇಲಿನ ಆಸೆಗಾಗಿಯಾದರೂ, ಮಕ್ಕಳ ಮನಸ್ಸನ್ನು ತನಗೆ ಅನುಕೂಲವಾಗುವಂತೆ ಪ್ರೇರಿಸಲಿ ಎಂದೋ – ಯಯಾತಿ, ತನ್ನ ಮುಪ್ಪನ್ನು ಸ್ವೀಕರಿಸುವ ಮಗನಿಗೇ ಸಿಂಹಾಸನದ ಹಕ್ಕನ್ನು ನೀಡುವೆನೆಂದಿದ್ದ. ಮುಪ್ಪಿನ ಸಿಂಹಾಸನ! ಅದು ಯಾರಿಗೆ ಬೇಕು? ನಮ್ಮ ಯೌವನವೆ ನಮ್ಮ ಸಿಂಹಾಸನ ಎಂದರು ಯುವಕರು. ಶರ್ಮಿಷ್ಠೆಯ ಕೊನೆಯ ಮಗ ‘ಪೂರು’ – ಸಿಂಹಾಸನದ ಆಸೆಗಾಗಿ ಅಲ್ಲ; ತಂದೆಯ ಆಸೆ ಈಡೇರಲಿ ಎಂದೇ ಯಯಾತಿಯ ಮಾತನ್ನು ಒಪ್ಪಿದ.

ತನ್ನ ಯೌವನವನ್ನು  ತಂದೆಗೆ ಮನಸಾ ಮೀಸಲು ಮಾಡಿದ. ತಂದೆಯ ಆಸೆಯನ್ನು ಪೂರೈಸಿದುದರಿಂದಲೇ ‘ಪೂರು’ ಎಂಬ ಅವನ ಹೆಸರು ಅನ್ವರ್ಥವಾಯಿತಂತೆ. ಇವನಿಂದಲೇ ಮತ್ತೆ ಹಸ್ತಿನಾವತಿಯ ಅರಸು ಮನೆತನ ಪೌರವವಂಶವೆಂದು ವಿಖ್ಯಾತವಾಯಿತು. ದೇವಯಾನಿಯ ದಾಸಿಯಾಗಿದ್ದ ಶರ್ಮಿಷ್ಠೆ ಹೀಗೆ – ಇನ್ನೊಂದು ರೀತಿಯಲ್ಲಿ ಗೆದ್ದಂತಾಯಿತು. ದೇವಯಾನಿಯ ಮಕ್ಕಳಲ್ಲ – ಶರ್ಮಿಷ್ಠೆಯ ಕೊನೆಯ ಮಗ ಉದಾರಚರಿತನಾಗಿದ್ದ.

ಸಾಮಾನ್ಯವಾಗಿ ಮಧ್ಯಮಪುತ್ರರು – ನಡುವಿನವರು ಇಂಥ ಬಲಿದಾನಗಳಿಗೆ ಸಿದ್ಧರಾಗುವರು, ಆಗಬೇಕಾಗುತ್ತದೆ. ಅವರ ಸ್ಥಿತಿ ಹಾಗಿರುತ್ತದೆ. ಆದರೆ ಇಲ್ಲಿ ಅಕ್ಕರೆಯ ಕಿರಿಯ, ವೃದ್ಧನ ಪಾತ್ರಕ್ಕೆ ತಾನು ವೃದ್ಧನೇ ಆಗುವೆನೆಂದು ಮುಂದೆ ಬಂದಿದ್ದ! ಯಯಾತಿಯ ಹೃದಯವನ್ನು ಗೆದ್ದಿದ್ದ. ಶರ್ಮಿಷ್ಠೆ ರಾಜಮಾತೆಯಾದಳು. ಮತ್ತೆ ಉಡುಪುಗಳು ಅದಲುಬದಲಾಗಿರಬೇಕು!ಯಯಾತಿ ಈಗ ಯುವಕರನ್ನು  ನಾಚಿಸುವಂತೆ ಇದ್ದ. ಅವನು ತನ್ನೊಳಗೊಳಗೂ ನಾಚಿಕೊಂಡಿರಲಿಲ್ಲ. ನಡೆದುದಕ್ಕಾಗಿ ಅವನಲ್ಲಿ ದ್ವಂದ್ವವಿರಲಿಲ್ಲ. ಪಾಪಪ್ರಜ್ಞೆ ಇರಲಿಲ್ಲ. ದ್ವಂದ್ವವಿದ್ದರೆ, ಪಾಪಪ್ರಜ್ಞೆ ಇದ್ದರೆ ಅನುಭವದಲ್ಲಿ ಮುಳುಗುವುದಕ್ಕೂ ಸಾಧ್ಯವಿರುತ್ತಿರಲಿಲ್ಲ. ಅಲ್ಲದೆ, ಅನುಭವದಲ್ಲಿ ಮುಳುಗದೆ ಅಲ್ಲಿಂದ ಮೇಲೇಳುವುದೂ ದುಸ್ಸಾಧ್ಯವಿತ್ತು. ಯಯಾತಿ, ವರ್ಷಗಳ ಕಾಲ ಕಾಮಭೋಗಗಳಲ್ಲಿ ಮುಳುಗಿದ. ಅವನಿಗೆ ಲೋಕದ ಪರಿವೆಯೇ ಇರಲಿಲ್ಲ.

ಹಗಲಿರುಳುಗಳು ಒಂದಾದವು. ಸೂರ್‍ಯ–ಚಂದ್ರರ ನಡುವೆ ಭೂಮಿ ಹಾದುಹೋಯಿತು. ಹೀಗೆ ಯಯಾತಿ ಮುಳುಗಿರಲಾಗಿ, ಮುಳುಗಿದವನಿಗೇ ಆಳತಳದಲ್ಲಿರುವುದೆಲ್ಲರ ಗುರುತಾಗುವಂತೆ, ಮೂರ್ಛಿತನಿಗೇ ಎಚ್ಚರವಾಗುವುದು ಸಾಧ್ಯವೆಂಬಂತೆ, ಯಯಾತಿಗೆ ಭೋಗದ ವಿಲಕ್ಷಣತೆಯೊಂದರ ಅರಿವಾಯಿತು. ‘ಧರ್ಮ’ ಮಾತ್ರವಲ್ಲ, ಕಾಮವೂ ತನಗೆ ಶರಣಾದವರಿಗೆ ತಾನೂ ಶರಣಾಗಿ ತನ್ನ ಸ್ವ–ರೂಪವನ್ನು ತೋರಿಸುತ್ತದೆಯೇನೋ ಎಂಬಂತೆ, ‘ಕಾಮ’ ತನ್ನ  ನಿಜವನ್ನು ಯಯಾತಿಗೆ ಹೊಳೆಯಿಸಿತು.ಕಾಮವು ಭೋಗದಿಂದ ತಣಿಯುವುದಿಲ್ಲ ಎನ್ನುವುದೇ ಆ – ನಿಜ. ಇದೇ ಯಯಾತಿ ಕಂಡ ನಿಜ. ‘ನ ಜಾತು ಕಾಮಃ ಕಾಮಾನಾಂ ಉಪಭೋಗೇನ ಶಾಮ್ಯತಿ । ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ!’. ಭೋಗಕ್ಕಾಗಿ ಹಂಬಲಿಸುವ ಕಾಮವು ಭೋಗದಿಂದ ಎಂದೂ ತಣಿಯುವುದಿಲ್ಲ. ಹಂಬಲವು ಅದೇಕೋ ಹೆಚ್ಚುತ್ತಲೇ ಹೋಗುತ್ತದೆ. ಬೆಂಕಿಗೆ ತುಪ್ಪ ಸುರಿದು ಬೆಂಕಿಯನ್ನು ತಣಿಸಲುಂಟೆ? ಕಾಮವು ಇಂಥ ಬೆಂಕಿ – ಎನ್ನುತ್ತಾನೆ ಯಯಾತಿ.

ಹಂಬಲದ ಸ್ವರೂಪವೇ ಯಯಾತಿಗೆ ಈಗ ಅರ್ಥವಾಗಿದೆ. ಹಂಬಲ ಎಂದರೆ ನಿಜಕ್ಕಾದರೆ ‘ಅಹಂ–ಬಲ’. ಅದು ತಾನು ಬೆಳೆಯುವುದನ್ನು ಬಯಸುತ್ತದೆ.

ತನ್ನನ್ನು ತಾನು ವಿಸ್ತರಿಸಿಕೊಳ್ಳುವುದನ್ನು ಬಯಸುತ್ತದೆ. ತಾನು ಬಹುವಾಗಬೇಕೆಂದು ಬಹು–ರೂಪ, ಬಹು–ಗುಣ, ಬಹು–ಮುಖಗಳಿಂದ ಮೆರೆಯಬೇಕೆಂದು ಬಯಸುತ್ತದೆ. ಅದಕ್ಕಾಗಿ ಎಲ್ಲರನ್ನೂ ಎಲ್ಲವನ್ನೂ ಮಗನ ಯೌವನವನ್ನು ಕೂಡ ಬಳಸಿಕೊಳ್ಳಲು ನಾಚದು. ಆದರೂ ತಣಿಯದು! ಅಂದರೆ ಭೋಗದ ಹಾದಿಯಲ್ಲಿ ಕಾಮವು ಎಂದೂ ತಣಿಯದು. ಭೋಗದ ಹಾದಿ ಎಂದರೆ ಕರ್ಮಕಾಂಡದ ಹಾದಿ. ಬೆಂಕಿಗೆ ತುಪ್ಪ ಸುರಿಯುವ ಹಾದಿ. ಕರ್ಮಕಾಂಡದ ದೃಷ್ಟಾಂತವನ್ನೇ ಮಹಾಭಾರತ ಉಲ್ಲೇಖಿಸಿದೆ. ‘ಹವಿಷಾ ಕೃಷ್ಣವರ್ತ್ಮೇವ’ – ಬೆಂಕಿಗೆ ತುಪ್ಪ ಸುರಿದಂತೆ ಎಂದು.ಈ ರಹಸ್ಯ ತಿಳಿದಂತೆ ಯಯಾತಿಗೆ ನಿಜಕ್ಕೂ ತಣಿಯುವ ಇನ್ನೊಂದು ಹಾದಿಯ ಸುಳಿವೂ ಸಿಗುತ್ತದೆ. ಭೋಗದ ಹಾದಿಗಿಂತ ಬೇರೆಯಾದ ಇದು ಅರಿವಿನ ಹಾದಿ. ಕರ್ಮಕ್ಕಿಂತ ಬೇರೆಯಾದ ಜ್ಞಾನದ ಹಾದಿ. ಈ ಎಲ್ಲವನ್ನೂ  ಇನ್ನೊಂದು ದೃಷ್ಟಿಯಿಂದಲೂ ನೋಡಬೇಕು. ಯೌವನವನ್ನು ಮುಪ್ಪಿನ ಕಣ್ಣುಗಳಿಂದಲೂ ನೋಡಬೇಕು. ತಾನು ಪೂರುವಿನಿಂದ ಯೌವನವನ್ನು ಪಡೆದು ನಳನಳಿಸುತ್ತಿದ್ದಾಗ ತನ್ನನ್ನು  ಪೂರು ತನ್ನ ಮುಪ್ಪಿನ ಕಣ್ಣುಗಳಿಂದ ನೋಡಿದಂತೆ! ಬದುಕನ್ನು ಸಾವಿನ ಕಣ್ಣಿನಿಂದಲೂ ನೋಡಬೇಕು. ಆಗ ಆದ್ಯತೆಗಳೇ ಬದಲಾಗುವವು. ರುಚಿಯೇ ಬದಲಾಗುವುದು.

ಕಾಮದ ಸೆಳೆತಕ್ಕೆ ಸಿಕ್ಕಿ ಯಾವುದನ್ನು ಸುಖವೆಂದುಕೊಂಡಿದ್ದೆವೋ ಅದು  ಸುಖವಲ್ಲ – ಸುಖದ ರೂಪದಲ್ಲಿರುವ ದುಃಖ ಎಂದು ತಿಳಿಯುವುದು. ಅದು ತಣಿವಲ್ಲ ದಣಿವು ಎಂದು ತಿಳಿಯುವುದು.ಕರ್ಮವನ್ನು ಜ್ಞಾನದ ಕಣ್ಣಿನಿಂದ ನೋಡಬೇಕು. ಜ್ಞಾನವು ಕರ್ಮದಲ್ಲಿ ಆಸಕ್ತವಾಗಲಾರದು. ಆಸಕ್ತಿಯು ಜ್ಞಾನದ ಸ್ವಭಾವವೇ ಅಲ್ಲ. ಕರ್ಮವಾದರೋ ಆವೃತ್ತಿ–ಪುನರಾವೃತ್ತಿಗೊಳ್ಳುವ ಗುಣ ಉಳ್ಳದ್ದಾಗಿ ತನ್ನ ಗಾಯಗಳನ್ನು ತಾನೇ ನೆಕ್ಕಿಕೊಂಡಿರುವ ಪ್ರಾಣಿಯಂತೆ ಇದ್ದರೆ ಜ್ಞಾನಕ್ಕೆ ಪುನರಾವೃತ್ತಿಯು ನೀರಸವಾಗಿ ತೋರುವುದು.ಅಷ್ಟಕನೆಂಬ ಋಷಿಯೊಡನೆ ತನ್ನ ಅನುಭವವನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ಯಯಾತಿಯು ‘ಅಸ್ರಂ ರೇತಃ’ ಎಂದು ಕುರಿತಾಗಿ ಒಂದು ನುಡಿಯನ್ನು ಅದ್ಭುತವಾಗಿ ಬೆಳೆಸುವನು. ರೇತೋ ಬಿಂದು ಎಂದರೆ ಅದು ಜೀವದ ಕಂಬನಿ ಎಂದು ಈ ಮಾತಿನ ಅರ್ಥ! ಜೀವವು ಮೂಲದಲ್ಲಿ – ಸೂಕ್ಷ್ಮರೂಪದಲ್ಲಿ ನೀರಿನ ಒಂದು ಕಣದಂತೆ – ಹನಿಯಂತೆ – ಇರುವುದಂತೆ! ಆದುದರಿಂದಲೇ ಜೀವಕ್ಕೆ ಮೋಡವಾಗಿ ಮೇಲಕ್ಕೇರಿ ಮಳೆಯಾಗಿ ಕೆಳಗಿಳಿಯುವ ರೀತಿಯ ಭೂಮ್ಯಾಕಾಶಗಳ ನಿರಂತರ ಒಡನಾಟ. ‘ಜೀವನ’ ಎಂದರೆ ನೀರು ಎಂದೇ ಅರ್ಥ – ಸಂಸ್ಕೃತದಲ್ಲಿ.

ಎಂಥ ಸಾರ್ಥಕ! ಅಂದರೆ ಈಗ ನೋಡುವ ರೂಪಕ್ಕಿಂತ ಬೇರೆಯೇ ಆದ ರೂಪದಲ್ಲಿ ಜೀವವನ್ನು ನೋಡುವುದು ಸಾಧ್ಯವಾದರೆ – ಬದುಕಿನ ಅರ್ಥವೇ ಬೇರೆಯಾಗುವುದು. ಎರಡು ಹನಿ – ಹೆಣ್ಣು ಗಂಡು – ಸೇರಿಯಲ್ಲವೆ ಒಂದು ಜೀವ! ಕೂಡುವ ಮುನ್ನ ಕೂಡುವ ಹಂಬಲ. ಅದೊಂದು  ದುಃಖ. ಕೂಡಿದ ಮೇಲೆ ಕೂಡಿದ್ದು ಅಗಲಲೇಬೇಕಲ್ಲವೆ? ಆ ಅಗಲಿಕೆಯೊಂದು ದುಃಖ. ಕೂಡುವುದೆಂದರೆ ಹುಟ್ಟು. ಅಗಲಿಕೆ ಎಂದರೆ ಸಾವು. ಹುಟ್ಟು–ಸಾವುಗಳ ಈ ಸರಣಿ ನಿರಂತರವಾಗಿ, ಅಗಲುವುದಕ್ಕಾಗಿಯೇ ಕೂಡುವುದು ಎಂದೂ ಆಗಿ ಮಿಲನವು ದುಃಖದಾಯಕವೇ ಆಗಿಬಿಟ್ಟಿತು. ‘ಅಸ್ರಂ ರೇತಃ’!ಈ ಎಲ್ಲ ತಿಳಿವಳಿಕೆಯೂ – ನಿಜಕ್ಕಾದರೆ ಪೂರುವಿಗೆ ದೊರೆಯಬಹುದಾದ ತಿಳಿವಳಿಕೆಯಾಗಿತ್ತು. ಯಯಾತಿಗೆ ಉಂಟಾದುದಾದರೂ, ಯೌವನದಂತೆ ಈ ತಿಳಿವಳಿಕೆಯೂ ಪೂರುವಿನ ಕೊಡುಗೆ ಎನ್ನಬಹುದು. ಯೌವನದ ಜೊತೆಗೆ, ಅದನ್ನು ತ್ಯಾಗ ಮಾಡಿದ ದಿಗ್ಭ್ರಮೆಯನ್ನೂ ಯಯಾತಿ ಪಡೆದುಕೊಂಡಂತಾಯಿತು. ತಿಳಿವಳಿಕೆಯ ಹಾದಿಯೇ ಹೀಗೇನೋ! ಒಂದು ಪಲ್ಲಟವನ್ನು ಅನುಭವಿಸದೆ, ಒಂದು ಮಥನಕ್ಕೆ ಒಳಗಾಗದೆ, ಒಂದು ಪೂರ್ವಾ ಪರೀಭಾವದಲ್ಲಿ ಪಾಲ್ಗೊಳ್ಳದೆ ಅಂದರೆ ಹಿಂದುಮುಂದಾಗದೆ, ಕಾಲದ ಗತಿ ಒಮ್ಮೆ ವಿಚ್ಛೇದಗೊಳ್ಳದೆ, ಭೂತ–ಭವಿಷ್ಯಗಳ ಸಂಬಂಧ ತಿಳಿಯದೆ, ‘ಹಳೆಯ–ಎಳೆಯ’ ಸಂಬಂಧ ಅದಲುಬದಲಾಗದೆ – ನಿಜವಾದ ತಿಳಿವಳಿಕೆ ಉಂಟಾಗದೇನೋ?ತನ್ನ ಭೋಗದಲ್ಲಿ ಸಂಭ್ರಮಿಸಿದಂತೆ, ತನ್ನ ಪಶ್ಚಾತ್ತಾಪದಲ್ಲಿ ಯಯಾತಿ ತನಗೇ ನಿಜವಾಗುವನು. ಪ್ರಜ್ಞಾಪೂರ್ವಕವಾಗಿ ಅಕಾಲ ವೃದ್ಧಾಪ್ಯವನ್ನು ಆವಾಹಿಸಿಕೊಂಡ ಪೂರು, ತನ್ನ ತ್ಯಾಗದಲ್ಲಿ ನಿಜವಾಗಿದ್ದನು. ಅಂದರೆ ತಾನು ಮಾಡಿದ ತ್ಯಾಗದ ಕುರಿತು ಪಶ್ಚಾತ್ತಾಪ ಪಡುವಂಥವನಾಗಿರಲಿಲ್ಲ.

ತ್ಯಾಗವನ್ನು ಯೌವನದಲ್ಲಿ ಮಾತ್ರ ಮಾಡುವುದು ಸಾಧ್ಯ. ಅದೇ ನಿಜವಾದ ಯೌವನ. ವೃದ್ಧನಿಗೆ ತ್ಯಾಗ ಮಾಡಲು ಏನಿದೆ ಅವನಲ್ಲಿ? ‘ತ್ಯಾಗ’ವೇ – ಭೋಗವಲ್ಲ– ಚಿರಯೌವನದ ಸಂಕೇತವಿರಬಹುದು! ಯಯಾತಿಯಲ್ಲಿ ಒಂದು ಉಲ್ಲೋಲ–ಕಲ್ಲೋಲಕ್ಕೆ ಒಳಗಾಗಿ ಪಡೆದ ಅರಿವಿನ ಚಿತ್ರ ಕಾಣಿಸಿದರೆ, ಪೂರುವಿನಲ್ಲಿ ಮುಗ್ಧತೆಯ ಚಿತ್ರವೊಂದು ಕಂಡುಬರುವುದು.ಯಯಾತಿ ಕೊನೆಗೂ ಪೂರುವನ್ನು ಕಂಡು ಮುಗ್ಧನಾದಂತಿದೆ. ಅಷ್ಟಕನೊಡನೆ ನಡೆದ ಸಂವಾದದಲ್ಲಿ ಮುಗ್ಧತೆ ಕೆಡದಂತೆ ಭೋಗವನ್ನು ಅನುಭವಿಸುವ ಬಗೆಯನ್ನು  ಹೇಳುತ್ತ – ಹಸು, ಹುಲ್ಲು ಸಿಕ್ಕಿದಾಗ ಸಿಕ್ಕಷ್ಟು ಮೇದು ನಿರಾಳವಿರುವಂತೆ ಎಂದು ಬಣ್ಣಿಸಿದ್ದಾನೆ. ಈ ಮಾತಿಗೆ ‘ಭಾರತಭಾವದೀಪ’ಕಾರನಾದ ನೀಲಕಂಠ, ಮಗು ನಿದ್ದೆಯಲ್ಲಿಯೇ ತಾಯ ಮೊಲೆ ಹಾಲು ಕುಡಿದಂತೆ – ಎಂದು ಮನೋಜ್ಞವಾಗಿ ವ್ಯಾಖ್ಯಾನಿಸುತ್ತಾನೆ. ‘ಮುನ್ನಿನ ಕೆನ್ನೆತನ ಕೆಡದಿರಲಿ’ ಎಂಬ ಮಾತು ಮತ್ತೆ ನೆನಪಾಗುತ್ತದೆ. ಮಹಾಭಾರತವನ್ನು ಹೇಗೆ ಓದಬೇಕು ಎನ್ನುವುದಕ್ಕೂ – ಕೆಲವು ಸಂದರ್ಭಗಳಲ್ಲಾದರೂ – ಈ ಮಾತು ಅನ್ವಯವಾಗುತ್ತದೇನೋ! 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry