ಲಾಭದ ಹುದ್ದೆ ಎಂಬುದು ಶುದ್ಧಾಂಗ ಬೂಟಾಟಿಕೆ!

7

ಲಾಭದ ಹುದ್ದೆ ಎಂಬುದು ಶುದ್ಧಾಂಗ ಬೂಟಾಟಿಕೆ!

ಡಿ. ಉಮಾಪತಿ
Published:
Updated:
ಲಾಭದ ಹುದ್ದೆ ಎಂಬುದು ಶುದ್ಧಾಂಗ ಬೂಟಾಟಿಕೆ!

‘ಲಾಭದ ಹುದ್ದೆ’ ಅಥವಾ ‘ಲಾಭದಾಯಕ ಪದವಿ’ ಎಂಬಭಾರತೀಯ ರಾಜಕಾರಣದ ಕಿಲುಬು ಹಿಡಿದ ಪ್ರಹಸನ ಪುನಃ ತಲೆಯೆತ್ತಿದೆ. ದೆಹಲಿಯಲ್ಲಿ ಸರ್ಕಾರ ಹಿಡಿದಿರುವ ಆಮ್ ಅದ್ಮಿ ಪಾರ್ಟಿಯ (ಆಪ್) 20 ಶಾಸಕರ ವಿಧಾನಸಭಾ ಸದಸ್ಯತ್ವ ರದ್ದಾಗಿದೆ.

ಶಾಸಕರು- ಸಂಸದರು ಸರ್ಕಾರದ ಪ್ರಭಾವಕ್ಕೆ, ಆಮಿಷಕ್ಕೆಬೀಳದಂತೆ ತಮ್ಮ ಸಂಸದೀಯ ಕೆಲಸ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸಬೇಕು. ಸರ್ಕಾರದ ಮುಲಾಜಿಗೆ ಒಳಗಾಗದೆ ತಾವು ಪ್ರತಿನಿಧಿಸುವ ಜನರ ದನಿಯನ್ನು ಸದನದಲ್ಲಿ ಎತ್ತಬೇಕು. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸರ್ಕಾರದ ನಿಯಂತ್ರಣದಲ್ಲಿ ಇರಕೂಡದು ಎಂಬುದು ಸಂವಿಧಾನದ ಉದಾತ್ತ ಆಶಯ. ಶಾಸಕ ಸ್ಥಾನದ ಹೊರಗೆ ಸರ್ಕಾರದಿಂದ ಪ್ರತ್ಯೇಕ ಸಂಬಳ, ಭತ್ಯೆ, ವಸತಿ, ವಾಹನ ಸೌಲಭ್ಯಗಳ ಲಾಭದ ಹುದ್ದೆಯನ್ನು ಸರ್ಕಾರದಿಂದ ಹೊಂದುವುದು ಈ ಆಶಯದ ಉಲ್ಲಂಘನೆ. ಉಲ್ಲಂಘಿಸಿದವರು ಶಾಸಕ-ಸಂಸದ ಸ್ಥಾನಕ್ಕೆ ಅನರ್ಹರಾಗುತ್ತಾರೆ. ಇಂಗ್ಲೆಂಡಿನಲ್ಲಿ ಹುಟ್ಟಿದ ಈ ಪರಿಕಲ್ಪನೆ 102 ಮತ್ತು 191ನೆಯ ಪರಿಚ್ಛೇದಗಳಾಗಿ ಭಾರತೀಯ ಸಂವಿಧಾನವನ್ನು ಸೇರಿತು. ಲಾಭದ ಪದವಿಯ ವ್ಯಾಖ್ಯಾನವನ್ನು ಸಂವಿಧಾನ ನೀಡಿಲ್ಲ.

ಸಂಸತ್ತು- ವಿಧಾನಸಭೆ ಕಾಲಕಾಲಕ್ಕೆ ಕಾನೂನಿಗೆ ತಿದ್ದುಪಡಿ ತಂದು ಲಾಭದ ಪದವಿಯ ವ್ಯಾಪ್ತಿಯಿಂದ ಹೊರಗೆ ಇರಿಸುತ್ತಿರುವ ಹುದ್ದೆಗಳು ಮತ್ತು ಮಂತ್ರಿ ಹುದ್ದೆಗಳಿಗೆ ಅನರ್ಹತೆಯ ವಿಧಿ ಅನ್ವಯಿಸುವುದಿಲ್ಲ. 1959ರ ಸಂಸತ್ (ಅನರ್ಹತೆಯನ್ನು ತಡೆಯುವ) ಕಾಯ್ದೆ ಜಾರಿಯಾದ ನಂತರ ಅದಕ್ಕೆ ಹಲವಾರು ತಿದ್ದುಪಡಿಗಳನ್ನು ತರಲಾಗಿದೆ. ವೇತನ, ಭತ್ಯೆ, ವಸತಿ, ವಾಹನ ಸೌಲಭ್ಯಗಳೆಲ್ಲ ಇರುವ ಹಲವಾರು ಹುದ್ದೆಗಳಿಗೆ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಪ್ರತಿಪಕ್ಷದ ನಾಯಕ, ಮುಖ್ಯ ಸಚೇತಕ, ಮಹಿಳಾ ಆಯೋಗ, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಗಳು, ವಕ್ಫ್ ಮಂಡಳಿಗಳು, ದೇವಾಲಯ ನ್ಯಾಸಗಳು, ನಿಗಮ– ಮಂಡಳಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಗಳು ಈ ಮಾತಿಗೆ ಬಹುಮುಖ್ಯ ಉದಾಹರಣೆಗಳು.

ಮಂತ್ರಿ ಮತ್ತು ಪ್ರಧಾನಮಂತ್ರಿ- ಮುಖ್ಯಮಂತ್ರಿಯ ವಿನಾ ಆಳುವ ಪಕ್ಷದ ಉಳಿದೆಲ್ಲ ಶಾಸಕರು-ಸಂಸದರು ಸರ್ಕಾರದ ಪ್ರಭಾವದಿಂದ ಸ್ವತಂತ್ರರಾಗಿ ಉಳಿಯಬೇಕು ಎಂದು ವಿಧಿಸಲಾಗಿದೆ. ಆದರೆ ನಾವು ಅಳವಡಿಸಿಕೊಂಡಿರುವ ಪಕ್ಷಾಧಾರಿತ ಜನತಾಂತ್ರಿಕ ವ್ಯವಸ್ಥೆಯಲ್ಲಿ ಲಾಭದ ಪದವಿಯ ಮಾತು ಪೊಳ್ಳಾಗಿ ಧ್ವನಿಸುತ್ತದೆ. ಪಕ್ಷ ರಾಜಕಾರಣದ ಜನತಂತ್ರದಲ್ಲಿ ಶಾಸಕ ಅಥವಾ ಸಂಸದ ತನ್ನ ಪಾರ್ಟಿಯು ನೀಡುವ ‘ವಿಪ್’ (ಆದೇಶ) ಉಲ್ಲಂಘಿಸುವಂತಿಲ್ಲ. ತನ್ನ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಟೀಕೆ ಮಾಡುವ ಸ್ವಾತಂತ್ರ್ಯವನ್ನು ಪಕ್ಷಗಳು ಶಾಸಕ-ಸಂಸದನಿಗೆ ನೀಡಿರುವ ನಿದರ್ಶನಗಳು ವಿರಳಾತಿವಿರಳ. ಆತನನಿಜದನಿ ಅಥವಾ ಜನದನಿಯ ರಕ್ಷಣೆಯ ಮಾತೇ ಹುಸಿಯಲ್ಲವೇ! ಬಹುಮತ ಪಡೆದು ಸರ್ಕಾರ ರಚಿಸುವ ಪಕ್ಷದ ಎಲ್ಲ ಮಂತ್ರಿಗಳು ಮತ್ತು ಶಾಸಕರು-ಸಂಸದರು ಆಳುವ ಪಕ್ಷದ ಸದಸ್ಯರಾಗಿರುತ್ತಾರೆ. ಸರ್ಕಾರವನ್ನು ನಿಯಂತ್ರಿಸಬೇಕಿರುವ ಸಂಸತ್ತು-ವಿಧಾನಸಭೆಗಳು ಹೆಚ್ಚು ಕಡಿಮೆ ಸರ್ಕಾರದ ಅಡಿಯಾಳಾಗುವ ಪರಿಸ್ಥಿತಿಗಳೇ ಹೆಚ್ಚು. ಪರಿಣಾಮವಾಗಿಶಾಸಕರು- ಸಂಸದರು ಸರ್ಕಾರ ಮತ್ತು ತಾವು ಸೇರಿದ ಪಕ್ಷಗಳಿಂದ ಸ್ವತಂತ್ರರಲ್ಲ.

ಪ್ರತಿಯೊಂದು ಸರ್ಕಾರವು ಸದನದ ಒಟ್ಟು ಸದಸ್ಯಬಲದ ಶೇ 15ರಷ್ಟು ಮಂದಿಯನ್ನು ಮಾತ್ರವೇ ಮಂತ್ರಿಗಳನ್ನಾಗಿ ನೇಮಕ ಮಾಡಬಹುದು ಎಂಬ ಮಿತಿಯನ್ನು ಹೇರಲಾಗಿದೆ. ಪರಿಣಾಮವಾಗಿ ಆಡಳಿತ ಪಕ್ಷ ತನ್ನ ಉಳಿದ ಶಾಸಕರು- ಸಂಸದರನ್ನು ಖುಷಿಯಾಗಿಡಲು ಸಂಸದೀಯ ಕಾರ್ಯದರ್ಶಿಗಳ ಹುದ್ದೆಗಳು, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷಗಿರಿಯಂತಹ ಹುದ್ದೆಗಳ ಮೊರೆ ಹೋಗುತ್ತದೆ. ಅಧಿಕಾರಕ್ಕಾಗಿ ಆಂತರಿಕ ಭಿನ್ನಮತ- ಬಂಡಾಯ- ಪಕ್ಷಾಂತರದಂತಹ ಪೀಡೆಗಳಿಂದ ಸರ್ಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯ ದಾರಿಯಿದು.

ಲಾಭದ ಪದವಿ ಸರ್ಕಾರದ್ದೇ ಆಗಿರುತ್ತದೆ. ಪದವಿಗೆ ಸರ್ಕಾರದಿಂದ ನೇಮಕವಾದ ವ್ಯಕ್ತಿಯನ್ನು ಕಾರ್ಯಾಂಗದ ಪ್ರಭಾವಕ್ಕೆ ಈಡು ಮಾಡುವಂತಹ ಯಾವುದೇ ಬಗೆಯ ಆರ್ಥಿಕ ಪರಿಹಾರವೇ ಈ ಲಾಭ. ಗೌರವಧನ ಎಂದು ಹೆಸರಿಟ್ಟರೂ ಅದೂ ಲಾಭವೇ. ಲಾಭವನ್ನು ವ್ಯಕ್ತಿ ಸ್ವೀಕರಿಸುತ್ತಾಳೆಯೇ ಇಲ್ಲವೇ ಎಂಬುದು ಅಪ್ರಸ್ತುತ. ಪಾವತಿಯೊಂದು ನಿಗದಿಯಾಗಿದ್ದರೆ ಅಷ್ಟೇ ಸಾಕು. ತೆಗೆದುಕೊಳ್ಳದಿದ್ದರೂಅದು ಲಾಭದಾಯಕ ಹುದ್ದೆಯೇ. ಮೊತ್ತ ಸಣ್ಣದೇ ಇರಬಹುದು. ಆದರೆ ಇಂತಹ ಹುದ್ದೆಗಳನ್ನು ಕೊಡು-ಕೊಳುವ ಹಿಂದೆ ನಿರ್ದಿಷ್ಟ ಹುದ್ದೆಯ ಪ್ರಭಾವ, ಸ್ಥಾನಮಾನ, ಅಧಿಕಾರ ಪಾತ್ರವನ್ನು ಕಡೆಗಣಿಸುವಂತಿಲ್ಲ. ಸಂಸತ್- ವಿಧಾನಸಭೆಯ ಸದಸ್ಯತ್ವದಿಂದ ಅನರ್ಹತೆಯನ್ನು ಆಕರ್ಷಿಸಲು ಇಷ್ಟು ಸಾಕು ಎನ್ನುತ್ತದೆ ಸುಪ್ರೀಂ ಕೋರ್ಟ್. ಆದರೆ ಸುಪ್ರೀಂ ಕೋರ್ಟ್ ಸೇರಿದಂತೆ, ನಾನಾ ರಾಜ್ಯಗಳ ಹೈಕೋರ್ಟ್‌ಗಳು ಈ ವಿಷಯದಲ್ಲಿ ಕಾಲಕಾಲಕ್ಕೆ ಭಿನ್ನ ವ್ಯಾಖ್ಯೆಯ ತೀರ್ಪುಗಳನ್ನು ನೀಡುತ್ತ ಬಂದಿವೆ.

ಲಾಭದ ಹುದ್ದೆ ಕಾಯ್ದೆ ಉಲ್ಲಂಘನೆಗಾಗಿ ನೇಮಕಾತಿ ರದ್ದಿನ ಮತ್ತು ಶಾಸನಸಭೆಯ ಸದಸ್ಯತ್ವವನ್ನು ಕಳೆದುಕೊಳ್ಳುವ ಶಿಕ್ಷೆ ಅನುಭವಿಸುವುದು ನಿಂತಿಲ್ಲ. ಆದರೂ ಸರ್ಕಾರ ಮತ್ತು ಆಳುವ ಪಕ್ಷದ ಶಾಸಕರು- ಸಂಸದರ ನಡುವಣ ಈ ಲೇವಾದೇವಿಗೆ ಭಂಗ ಬಂದಿಲ್ಲ.

ದೆಹಲಿಯ ‘ಆಪ್’ ಸರ್ಕಾರದ ಮುಖ್ಯಮಂತ್ರಿ ಅರವಿಂದಕೇಜ್ರಿವಾಲ್ 2015ರಲ್ಲಿ ಅತಿ ಎಚ್ಚರಿಕೆ ವಹಿಸಿಯೇ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಕೈ ಹಾಕಿದ್ದರು. ವಿಧಾನಸಭೆಯ ಸದಸ್ಯಬಲ ಒಟ್ಟು 70. ಈ ಪೈಕಿ 67ನ್ನು ಗೆದ್ದಿತ್ತು. ಮುಖ್ಯಮಂತ್ರಿಯೂ ಸೇರಿ ಏಳು ಮಂದಿಯನ್ನು ಮಾತ್ರವೇ ಮಂತ್ರಿಗಳನ್ನಾಗಿ ನೇಮಕ ಮಾಡುವ ಮಿತಿಯನ್ನು ಮೀರುವಂತಿರಲಿಲ್ಲ. ಸ್ವಚ್ಛ– ಸರಳ ಸರ್ಕಾರದ ವಚನ ನೀಡಿದ್ದ ಕೇಜ್ರಿವಾಲ್ ಕೂಡ ಸಂಸದೀಯ ಕಾರ್ಯದರ್ಶಿಗಳ ನೇಮಕದ ಅದೇ ಹಳೆಯ ಒಳದಾರಿ ಹಿಡಿದರು.

2006ರಲ್ಲಿ ದೆಹಲಿಯ ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ 19 ಮಂದಿ ಕಾಂಗ್ರೆಸ್ ಶಾಸಕರನ್ನು ಸಂಸದೀಯ ಕಾರ್ಯದರ್ಶಿಯೂ ಸೇರಿದಂತೆ ಇಂತಹುದೇ ನಾನಾ ಹುದ್ದೆಗಳಿಗೆ ನೇಮಕ ಮಾಡಿದರು. ನೇಮಕ ಆದವರನ್ನು ಅನರ್ಹತೆಯ ಅಪಾಯದಿಂದ ಪಾರು ಮಾಡಲು ತಿದ್ದುಪಡಿ ಮಸೂದೆಯನ್ನು ಪಾಸು ಮಾಡಿಸಿದರು. ರಾಷ್ಟ್ರಪತಿಯವರಅಂಕಿತವೂ ದೊರೆಯಿತು. ಮುಖ್ಯಮಂತ್ರಿಯವರಿಗೆ ನೆರವಾಗುವ ಸಂಸದೀಯ ಕಾರ್ಯದರ್ಶಿಗಳ ನೇಮಕದ ದಾರಿ ಶೀಲಾ ಕಾಲದಲ್ಲೇ ಸುಗಮ ಆಗಿತ್ತು. ಕೇಜ್ರಿವಾಲ್ ಹೊಸ ಮಸೂದೆಯ ತಂಟೆಗೆ ಹೋಗುವ ಅಗತ್ಯವೇ ಇರಲಿಲ್ಲ. ಆದರೆ ಅತೀವ ಜಾಗರೂಕತೆ ವಹಿಸಲು ಮುಂದಾದರು. ಮಂತ್ರಿಗಳಿಗೆ ನೆರವಾಗುವ ಸಂಸದೀಯ ಕಾರ್ಯದರ್ಶಿಗಳಿಗಾಗಿ ಪ್ರತ್ಯೇಕ ಮಸೂದೆಗೆ ಮುಂದಾದರು. ಮುಖ್ಯಮಂತ್ರಿಯೂ ಮಂತ್ರಿಯೇ. ಮಂತ್ರಿಗಳ ಸಾಲಿನಲ್ಲಿ ಅವರು ಮೊದಲನೆಯವರೇ ವಿನಾ ಇತರೆ ಮಂತ್ರಿಗಳಿಗಿಂತ ಹೆಚ್ಚೇನೂ ಅಲ್ಲ ಎಂಬ ವ್ಯಾಖ್ಯೆಯ ಸೂಕ್ಷ್ಮವನ್ನು ಅರಿಯಬೇಕಿತ್ತು. ತಾವಾಗಿ ತೊಂದರೆ ಆಹ್ವಾನಿಸಿದರು ಎಂಬುದು ಕಾನೂನು ಪರಿಣತರ ಅಭಿಪ್ರಾಯ.

ಸಂಬಳ, ಭತ್ಯೆ, ವಸತಿಯ ಯಾವ ಸೌಲಭ್ಯವೂ ಈ ಸಂಸದೀಯ ಕಾರ್ಯದರ್ಶಿಗಳಿಗೆ ಇರುವುದಿಲ್ಲ. ಸರ್ಕಾರಿ ಕೆಲಸದ ಮೇಲೆ ತೆರಳಬೇಕಿದ್ದಾಗ ಮಾತ್ರ ಸರ್ಕಾರಿ ವಾಹನಗಳನ್ನು ಬಳಸುವ ಅನುಕೂಲವನ್ನು ಈ ಸಂಸದೀಯ ಕಾರ್ಯದರ್ಶಿಗಳು ಹೊಂದಿದ್ದರು. ಈ ಅಂಶಗಳನ್ನು ಅಧಿಸೂಚನೆಯಲ್ಲೇ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದರು. ಹೀಗೆ ಮಾಡಿದರೆ ಅನರ್ಹತೆಯ ಅಪಾಯದಿಂದ ಪಾರಾಗಬಹುದು ಎಂದೂ ಅವರು ಭಾವಿಸಿದ್ದರು. ಈ ಭಾವನೆ ಹುಸಿಯಾಯಿತು.

ಕೇಜ್ರಿವಾಲ್ ನೇತೃತ್ವದ ಸರ್ಕಾರ ನೇಮಕ ಮಾಡಿದ್ದು 2015ರ ಮಾರ್ಚ್‌ನಲ್ಲಿ. ಲಾಭದ ಹುದ್ದೆಯ ಪಟ್ಟಿಯಿಂದ ಸಂಸದೀಯ ಕಾರ್ಯದರ್ಶಿಗಳ ಪದವಿಗಳನ್ನು ಹೊರಗಿರಿಸುವ ತಿದ್ದುಪಡಿ ಮಸೂದೆಯನ್ನು ಎರಡೂವರೆ ತಿಂಗಳ ನಂತರ ರಾಷ್ಟ್ರಪತಿಯವರ ಅಂಕಿತಕ್ಕೆ ಕಳಿಸಲಾಯಿತು. ಆದರೆ ವಿನಾಯಿತಿಯನ್ನು ನೇಮಕದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ಕೋರಲಾಗಿತ್ತು. ಪೂರ್ವಾನ್ವಯ ವಿನಾಯಿತಿ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ರಾಜಕೀಯ ವಿರೋಧಿಗಳ ವಾದ. ಆದರೆ ಪೂರ್ವಾನ್ವಯ ವಿನಾಯಿತಿ ಕೋರಿದ ಹಲವು ಇಂತಹುದೇ ಮಸೂದೆಗಳಿಗೆ ಈ ಹಿಂದೆ ರಾಷ್ಟ್ರಪತಿಯವರ ಅಂಕಿತ ದೊರೆತ ನಿದರ್ಶನಗಳಿವೆ.

ನೇಮಕದ ಎರಡು ತಿಂಗಳ ನಂತರ ವಕೀಲ ಪ್ರಶಾಂತ್ ಪಟೇಲ್, ಲಾಭದಾಯಕ ಹುದ್ದೆಯ ದೂರನ್ನು ರಾಷ್ಟ್ರಪತಿಯವರಿಗೆ ನೀಡುತ್ತಾರೆ. ರಾಷ್ಟ್ರಪತಿಯವರು ಈ ದೂರಿನ ಕುರಿತು ಚುನಾವಣಾ ಆಯೋಗದ ಸಲಹೆ ಕೋರುತ್ತಾರೆ. ಸಲಹೆ ಕೋರಿದ ಕಾರಣ ಇದೀಗ ಆಯೋಗ ನೀಡಿರುವ ಶಿಫಾರಸನ್ನು ಅವರು ಅಂಗೀಕರಿಸದೆ ಬೇರೆ ದಾರಿಯೇ ಇರಲಿಲ್ಲ ಎನ್ನಲಾಗಿದೆ.

ಲೆಫ್ಟಿನೆಂಟ್‌ ಗವರ್ನರ್‌ ಅನುಮೋದನೆ ಇರಲಿಲ್ಲ ಎಂಬ ಕಾರಣ ನೀಡಿ, ದೆಹಲಿ ಹೈಕೋರ್ಟ್ 2016ರ ಸೆಪ್ಟೆಂಬರ್‌ನಲ್ಲಿ ನೇಮಕಗಳನ್ನು ರದ್ದು ಮಾಡಿತ್ತು. ನೇಮಕಗಳೇ ಅಕ್ರಮವೆಂದೂ, ಇವರು ಸಂಸದೀಯ ಕಾರ್ಯದರ್ಶಿಗಳೇ ಅಲ್ಲ ಎಂದೂ ನ್ಯಾಯಾಲಯ ಸಾರಿದ ಮೇಲೆ ಲಾಭದಾಯಕ ಹುದ್ದೆಗಳ ಪ್ರಶ್ನೆ ಎಲ್ಲಿಂದ ಬಂತು? ನ್ಯಾಯಾಲಯದ ತೀರ್ಪಿನ ನಂತರವೂ ಚುನಾವಣಾ ಆಯೋಗ ಅತೀವ ತತ್ಪರತೆ ತೋರಿ ಸಾಕ್ಷ್ಯ ಸಮಜಾಯಿಷಿಗಳನ್ನೂ ನೋಡದೆ ಹಟಕ್ಕೆ ಬಿದ್ದಂತೆ ಶಾಸಕರ ಸದಸ್ಯತ್ವ ರದ್ದು ಮಾಡಿದ್ದೇಕೆ ಎಂಬುದು ಆಪ್ ಪ್ರಶ್ನೆ. ಇಂತಹ ಹಲವಾರು ಪ್ರಶ್ನೆಗಳನ್ನು ಆಯೋಗ ಎದುರಿಸಿದೆ.

1979ರಲ್ಲಿ ರಾಜಸ್ಥಾನದಲ್ಲಿ ಆಡಳಿತ ಪಕ್ಷ ತನ್ನ ಶಾಸಕ ಕಾಂತಾ ಕಥೂರಿಯ ಅವರನ್ನು ಲಾಭದ ಪದವಿಗೆ ನೇಮಕ ಮಾಡಿತ್ತು. ಅವರ ಸದಸ್ಯತ್ವವನ್ನು ಹೈಕೋರ್ಟ್ ರದ್ದು ಮಾಡಿತು. ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಈ ನಡುವೆ ರಾಜಸ್ಥಾನ ವಿಧಾನಸಭೆಯು ಮಸೂದೆ ಪಾಸು ಮಾಡಿ ಕಥೂರಿಯ ಅವರ ಪದವಿಯನ್ನು ಲಾಭದ ವ್ಯಾಪ್ತಿಯಿಂದ ಹೊರಗಿಟ್ಟಿತು. ರಾಜ್ಯ ಸರ್ಕಾರದ ಈ ನಡೆಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಕಥೂರಿಯ ಸದಸ್ಯತ್ವವನ್ನು ರದ್ದುಗೊಳಿಸದೆ ಉಳಿಸಿತು. ಇಂತಹುದೇ ಮಸೂದೆಗಳು ಬಿಜೆಪಿ ಆಡಳಿತದ ಜಾರ್ಖಂಡ್ ಮತ್ತು ಛತ್ತೀಸಗಡದಲ್ಲಿ ಪಾಸಾಗಿವೆ.

ಲಾಭದ ಪದವಿಯ ಪ್ರಕರಣಗಳಿಗೆ ಎಲ್ಲ ರಾಜ್ಯಗಳಲ್ಲಿ ಒಂದೇ ಮಾನದಂಡ ಅನ್ವಯ ಆಗಬೇಕು. ಸಂವಿಧಾನವು ಒಕ್ಕೂಟದ ಎಲ್ಲ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಕೆಲವಕ್ಕೆ ಹೆಚ್ಚು, ಇನ್ನು ಕೆಲವಕ್ಕೆ ಕಡಿಮೆ ಅನ್ವಯ ಆಗುತ್ತದೆಂದು ಹೇಳಲು ಬರುವುದಿಲ್ಲ. ಹರಿಯಾಣದಲ್ಲಿ ಮನೋಹರಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ನಾಲ್ವರು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿತ್ತು. 2017ರ ಜುಲೈನಲ್ಲಿ ಪಂಜಾಬ್- ಹರಿಯಾಣ ಹೈಕೋರ್ಟ್ ಇವರ ನೇಮಕವನ್ನು ರದ್ದುಗೊಳಿಸಿತು.

ಇವರಿಗೆ ಪ್ರತಿ ತಿಂಗಳು ತಲಾ ₹ 50 ಸಾವಿರ ಸಂಬಳ ಮತ್ತು ₹ 1 ಲಕ್ಷಕ್ಕೂ ಅಧಿಕ ಭತ್ಯೆ ಸಿಗುತ್ತಿತ್ತು. ಇವರ ವಿಧಾನಸಭಾ ಸದಸ್ಯತ್ವ ರದ್ದಾಗಲಿಲ್ಲ. ರಾಜಸ್ಥಾನದಲ್ಲಿ ಹತ್ತು ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಅವರಿಗೆರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದೆ. ರಾಜಸ್ಥಾನ ಹೈಕೋರ್ಟ್ ಈ ಸಂಬಂಧ ವಸುಂಧರಾ ರಾಜೇ ನೇತೃತ್ವದ ಸರ್ಕಾರಕ್ಕೆ ಕಳೆದ ಜುಲೈನಲ್ಲೇ ನೋಟಿಸ್‌ ನೀಡಿದೆ.

ಕೇಜ್ರಿವಾಲ್ ನೇತೃತ್ವದ ಸರ್ಕಾರವು ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿದ ಎರಡೇ ತಿಂಗಳ ನಂತರ ಛತ್ತೀಸಗಡದ ಬಿಜೆಪಿ ಸರ್ಕಾರ ಹನ್ನೊಂದು ಮಂದಿಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡುತ್ತದೆ. ಈ ಪ್ರಕರಣ ಕುರಿತ ಚುನಾವಣಾ ಆಯೋಗದ ತೀರ್ಪು ಇನ್ನೂ ಹೊರಬಿದ್ದಿಲ್ಲ. ಇಂತಹುದೇ ಪ್ರಕರಣದಲ್ಲಿ ಚುನಾವಣಾ ಆಯೋಗ 2017ರ ಜೂನ್ ತಿಂಗಳಲ್ಲಿ ಮಧ್ಯಪ್ರದೇಶ ಬಿಜೆಪಿ ಸರ್ಕಾರದಿಂದ ಜವಾಬು ಕೋರಿತ್ತು. ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡದ ಲಾಭದ ಪದವಿಗಳ ಸಂಬಂಧ ಚುನಾವಣಾ ಆಯೋಗ ಯಾವ ಅಂತಿಮ ನಿಲುವು ತಳೆದಿದೆ ಅಥವಾ ಯಾವಾಗ ತೆಗೆದುಕೊಳ್ಳಲಿದೆ ಯಾರಿಗೂ ಗೊತ್ತಿಲ್ಲ.

‘ನಮ್ಮ ಶಾಸಕರ ಲಾಭದ ಹುದ್ದೆಗಳ ಕುರಿತು ದೂರು ನೀಡಿದಾಗ, ಇತರೆ ರಾಜ್ಯಗಳಲ್ಲಿ ಇಂತಹುದೇ ನೇಮಕಗಳ ವಿರುದ್ಧ ನಮ್ಮವರೂ ರಾಷ್ಟ್ರಪತಿಯವರಿಗೆ ತಿಂಗಳೊಪ್ಪತ್ತಿನಲ್ಲೇ ದೂರು ನೀಡಿದರು. ಆದರೆ ಅವರ‍್ಯಾರ ವಿರುದ್ಧವೂ ಈವರೆಗೆ ಕ್ರಮ ಜರುಗಿಲ್ಲ’ ಎಂಬ ಆಪ್ ದೂರನ್ನು ತಳ್ಳಿ ಹಾಕಲು ಬರುವುದಿಲ್ಲ.

ಈ ಎಲ್ಲ ಇಬ್ಬಗೆಯ ತಗಲೂಫಿ ವರ್ತನೆಗಳು ಲಾಭದಪದವಿಯ ಆಶಯವನ್ನೇ ಹುಸಿಗೊಳಿಸಿವೆ. ಈ ಕಾಯ್ದೆಯನ್ನು ರದ್ದು ಮಾಡಬಾರದೇಕೆ ಎಂಬ ಪ್ರಶ್ನೆಗೆ ದಾರಿ ತೆರೆದಿವೆ.

ಆಕೆ ಕಾರ್ಯಾಂಗದಿಂದ ಸ್ವತಂತ್ರವಾಗಿರಬೇಕು ಎಂಬ ನಿರೀಕ್ಷೆ ಅವಾಸ್ತವಿಕ ಅಲ್ಲವೇ ಎಂಬ ಪ್ರಶ್ನೆಯನ್ನು ಕಣ್ಣಲ್ಲಿ ಕಣ್ಣಿರಿಸಿ ಎದುರಿಸುವ ದಿಟ್ಟತನವನ್ನು ನಮ್ಮ ಜನತಂತ್ರ ತೋರಬೇಕಿದೆ. ಸಾರವನ್ನು ಗಾಳಿಗೆ ತೂರಿ ರೂಪವನ್ನು ಮಾತ್ರವೇ ಆದರಿಸುವ ಆಷಾಢಭೂತಿ ಗುಣವನ್ನು ಇನ್ನಾದರೂ ತೊರೆಯಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry