ಶುಕ್ರವಾರ, ಡಿಸೆಂಬರ್ 6, 2019
23 °C

ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

Published:
Updated:
ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

1980ರ ದಶಕದ ಅಂತ್ಯದಲ್ಲಿ ’ಕಾಣೆಯಾದ ಮಹಿಳೆಯರು’ ಎಂಬ ನುಡಿಗಟ್ಟನ್ನು ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಚಾಲನೆಗೆ ತಂದರು. ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಗಂಡು- ಹೆಣ್ಣಿನ ಅನುಪಾತದಲ್ಲಿರುವ ವ್ಯತ್ಯಾಸವನ್ನು ಗಮನಿಸಿ 10 ಕೋಟಿ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಆಗ ಅವರು ಹೇಳಿದ್ದರು. ಮಹಿಳೆ ಕುರಿತಾದ ಅಸಮಾನತೆ ಹಾಗೂ ನಿರ್ಲಕ್ಷ್ಯದಿಂದಾಗಿ ಈ ಮಹಿಳೆಯರು ಕಾಣೆಯಾದುದನ್ನು ಈ ನುಡಿಗಟ್ಟು ನಿರೂಪಿಸಿತ್ತು. ಈ ಅರಿವು ಮೂಡಿ ಮೂರು ದಶಕಗಳಾಗಿದೆ.

ಆದರೆ, ಕಾಣೆಯಾಗುತ್ತಿರುವ ಮಹಿಳೆಯರ ವಿದ್ಯಮಾನ ಈಗಲೂ ನಿಂತಿಲ್ಲ ಎಂಬುದೇ ಇಂದಿನ ದುರಂತ. 6.3 ಕೋಟಿ ಕಾಣೆಯಾದ ಮಹಿಳೆಯರನ್ನು ಈ ಸಾಲಿನ ಕೇಂದ್ರದ ಆರ್ಥಿಕ ಸಮೀಕ್ಷೆ ಪ್ರಸ್ತಾಪಿಸಿದೆ. ಆ ನಂತರ ಮೊನ್ನೆ  ಪ್ರಕಟವಾದ ನೀತಿ ಆಯೋಗದ ವರದಿಯೂ ಹೆಣ್ಣು ಭ್ರೂಣ ಹತ್ಯೆಯಿಂದಾಗಿ 17 ರಾಜ್ಯಗಳಲ್ಲಿ ಲಿಂಗಾನುಪಾತ ಗಣನೀಯವಾಗಿ ಕುಸಿದಿದೆ ಎಂದಿದೆ. ಹೆಣ್ಣುಮಕ್ಕಳ ಲಿಂಗಾನುಪಾತ ಅಸಮತೋಲನ ಹೆಚ್ಚಿರುವ ರಾಜ್ಯಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಂತ ರಾಜ್ಯ ಗುಜರಾತ್ ಮೊದಲ ಸ್ಥಾನದಲ್ಲಿದೆ. ಕರ್ನಾಟಕ, ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ ಎಂಬುದನ್ನೂ ನೀತಿ ಆಯೋಗದ ವರದಿ ಹೇಳಿರುವುದು ಆಘಾತಕಾರಿ.

ಗರ್ಭದಲ್ಲಿರುವ ಭ್ರೂಣ ಲಿಂಗ ಪತ್ತೆಯನ್ನು ನಿಷೇಧಿಸುವ ಕಾನೂನು ಜಾರಿಯಲ್ಲಿದೆ. ಆದರೆ ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದಕ್ಕೆ ಕಾಣೆಯಾದ ಹೆಣ್ಣುಮಕ್ಕಳಿಂದಾಗಿ ಸೃಷ್ಟಿಯಾಗುತ್ತಲೇ ಇರುವ ಲಿಂಗಾನುಪಾತ ಅಸಮತೋಲನವೇ ಸಾಕ್ಷಿ. ಹೆಣ್ಣುಮಕ್ಕಳ ಪ್ರಾಮುಖ್ಯ ತಿಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದೂ ನೀತಿ ಆಯೋಗದ ವರದಿ ಶಿಫಾರಸು ಮಾಡಿದೆ. ಆದರೆ ಈ ಮಾತುಗಳೆಲ್ಲಾ ಚರ್ವಿತಚರ್ವಣ ಎನಿಸುವುದಿಲ್ಲವೇ? ಈಗಾಗಲೇ ‘ಬೇಟಿ ಬಚಾವೋ ಬೇಟಿ ಪಢಾವೊ’ ಕಾರ್ಯಕ್ರಮವನ್ನು ರಾಷ್ಟ್ರದ 100 ಜಿಲ್ಲೆಗಳಲ್ಲಿ  ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಕರ್ನಾಟಕದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಆಯ್ಕೆಯಾಗಿರುವ ಜಿಲ್ಲೆ ವಿಜಯಪುರ. ಹೀಗಿದ್ದೂ ಅಂಕಿಅಂಶಗಳು ಹೇಳುತ್ತಿರುವ ಕಥೆ ಈಗಲೂ ನಿರಾಶಾದಾಯಕ. ಯಾಕೆ ಹೀಗೆ? ಇದನ್ನು ಸರಿಪಡಿಸಲು ಸಾಧ್ಯವಿಲ್ಲವೇ?

ಸರ್ಕಾರದ ಲಿಂಗತ್ವ ಸಂವೇದನಾಶೀಲ ನೀತಿ ಹಾಗೂ ಹಣಹೂಡಿಕೆಗಳು, ಮಹಿಳೆಯ ಸ್ಥಿತಿಗತಿ ಸುಧಾರಣೆಗೆ ಕೊಡುಗೆ ಸಲ್ಲಿಸುವುದು ಸಾಧ್ಯವಿದೆ ಎಂಬಂಥ ಮಾತು ಇದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018-19ರ ಸಾಲಿನ ಬಜೆಟ್‍ನಲ್ಲಿ ಮಾಡಿರುವ ಕೆಲವು ಪ್ರಸ್ತಾವಗಳನ್ನು ಗಮನಿಸಬಹುದು. ಮಹಿಳೆಯರ ಬಗ್ಗೆ ಸಕಾರಾತ್ಮಕ ಮನೋಭಾವ ರೂಢಿಸಲು ಹಾಗೂ ಸುರಕ್ಷೆಯ ವಾತಾವರಣ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸರ್ಕಾರದ ಸಿಬ್ಬಂದಿ, ಸಮುದಾಯ ಪೊಲೀಸ್ ಸ್ವಯಂಸೇವಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಗಂಡು ಹುಡುಗರಲ್ಲಿ ಲಿಂಗತ್ವ ಸಂವೇದನಾಶೀಲತೆ ಮೂಡಿಸಲು 2 ಕೋಟಿ ರೂಪಾಯಿಗಳನ್ನು ತೆಗೆದಿರಿಸಿರುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಈ ಬಗೆಯ ತರಬೇತಿ ಯೋಜನೆಗಳು ಈ ಹಿಂದೆಯೂ ಇದ್ದವು. ಇದೇನೂ ಹೊಸತಲ್ಲ. ಜನರ ಮನೋಧರ್ಮ ಬದಲಾವಣೆಗೆ ಯತ್ನಿಸುತ್ತಲೇ ಕಟ್ಟುನಿಟ್ಟಾದ ಮಹಿಳಾ ಪರ ನೀತಿಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಅನುಷ್ಠಾನಕ್ಕೆ ತರಬೇಕಾದುದು ಇಲ್ಲಿ ಮುಖ್ಯ. ಮೊದಲಿಗೆ ನಮ್ಮ ರಾಜಕಾರಣಿಗಳಿಗೇ ಈ ಲಿಂಗತ್ವ ಸಂವೇದನೆ ತರಬೇತಿಯ ಅಗತ್ಯವಿದೆಯಲ್ಲವೇ? ರಾಜಕೀಯ ಪಕ್ಷಗಳಂತೂ ಈಗಲೂ ಪುರುಷಮಯ. 2001ರಲ್ಲಿ ಮಹಿಳಾ ಸಬಲೀಕರಣ ರಾಷ್ಟ್ರೀಯ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಈ ಸಬಲೀಕರಣದ ಆಯಾಮಗಳ ಬಗ್ಗೆ ನಮ್ಮ ಜನನಾಯಕರಿಗೆ ಎಷ್ಟರ ಮಟ್ಟಿಗೆ ಜಾಗೃತಿ ಇದೆ? ಮಹಿಳಾ ವಿಚಾರಗಳಿಗೆ ಸಂಬಂಧಿಸಿದಂತೆ ರಾಜಕಾರಣಿಗಳ ಮಾತುಗಳೇ ಅನೇಕ ಸಲ ವಿವಾದವಾಗುವುದನ್ನು ನೋಡುತ್ತಿದ್ದೇವೆ. ರಾಜಕೀಯ ಕಾರ್ಯಾಂಗದಲ್ಲೇ ಲಿಂಗತ್ವ ಸಂವೇದನಾಶೀಲತೆ ಮೂಡಬೇಕಿರುವುದು ಸದ್ಯದ ಸ್ಥಿತಿಯಲ್ಲಿ ತುರ್ತಿನದು.

ಹಣಕಾಸು ಅಡಚಣೆಗಳಿಂದ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಮಧ್ಯದಲ್ಲೇ ನಿಲ್ಲಬಾರದು ಎಂಬ ಕಾರಣಕ್ಕಾಗಿ ಪಿಯುಸಿಯಿಂದ ಸ್ನಾತಕೋತ್ತರ ತರಗತಿಯವರಿಗೆ ಸರ್ಕಾರಿ ಕಾಲೇಜುಗಳಲ್ಲಿ ಓದುವ ಎಲ್ಲಾ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ ನೀಡಿರುವುದು ಈ ಬಜೆಟ್‍‍ನ ಮತ್ತೊಂದು ಮಹತ್ವದ ಅಂಶ. ಇದಕ್ಕಾಗಿ ₹95 ಕೋಟಿ ಮೀಸಲಿರಿಸಲಾಗಿದ್ದು 3.7 ಲಕ್ಷ ವಿದ್ಯಾರ್ಥಿನಿಯರು ಲಾಭ ಪಡೆದುಕೊಳ್ಳುವ ನಿರೀಕ್ಷೆ ಇದೆ. ಭಾರತದಲ್ಲಿ 12 ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಎಂದರೆ ಕನಿಷ್ಠ 18 ವರ್ಷ ವಯಸ್ಸಾಗುವವರೆಗಾದರೂ ಹುಡುಗಿಗೆ ಓದಲಿಕ್ಕೆ ಅವಕಾಶ ಹಾಗೂ ಪ್ರೋತ್ಸಾಹ ದೊರೆತಲ್ಲಿ ಅಷ್ಟರ ಮಟ್ಟಿಗೆ ಅವಳ ಹದಿಹರೆಯದ ಬಸಿರು ತಪ್ಪಿದಂತಾಗುತ್ತದೆ. ಜೊತೆಗೆ ಆ ಹುಡುಗಿ ಮುಂದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವಂತಹ ಸಾಧ್ಯತೆಯೂ ಕಡಿಮೆಯಾಗುತ್ತದೆ ಎಂಬುದನ್ನು 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಎತ್ತಿಹೇಳಿದೆ. ಹೀಗಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು ಪರಿಣಾಮಕಾರಿಯಾದ ಜನಸಂಖ್ಯಾ ನಿಯಂತ್ರಣ ಕಾರ್ಯತಂತ್ರವೂ ಆಗುತ್ತದೆ. ಆದರೇನು? ಸಾಮಾಜಿಕ ತಾರತಮ್ಯ ಹಾಗೂ ಸಾಂಸ್ಕೃತಿಕ ಪೂರ್ವಗ್ರಹಗಳಿಂದ ಹಲವು ನೆಲೆಗಳಲ್ಲಿ ಸಮಸ್ಯೆ ಎದುರಿಸುವ ಹೆಣ್ಣುಮಕ್ಕಳು ಈ ಉಚಿತ ಶಿಕ್ಷಣದ ಸೌಲಭ್ಯ ಬಳಸಿಕೊಳ್ಳಲೂ ಇರಬಹುದಾದ ಅಡ್ಡಿ ಆತಂಕಗಳನ್ನು ಗಮನಿಸುವುದು ಅವಶ್ಯ. ಬಹುಮುಖ್ಯವಾಗಿ ಶೌಚಾಲಯಗಳು ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯ ಲಭ್ಯತೆಯು ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಹಾದಿಯನ್ನು ಸುಗಮಗೊಳಿಸುವಂತಹ ‍ಪೂರಕ ಅಂಶಗಳು ಎಂಬುದು ನಮ್ಮ ನೆನಪಲ್ಲಿರಬೇಕು.

ಸೀರೆ, ತಾಳಿ, ಮದುವೆ, ಮಕ್ಕಳು, ಕುಟುಂಬ ಯೋಜನೆ ಎಂಬಂತಹ ನೆಲೆಗಳಲ್ಲೇ ಮಹಿಳೆಯರಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರಗಳು ರೂಪಿಸಿಕೊಂಡು ಬರುತ್ತಿವೆ. ಈ ಹಾದಿ ಬದಲಿಸಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಸೈಕಲ್ ನೀಡುವಂತಹ ಸಕಾರಾತ್ಮಕ ಮಾದರಿಯನ್ನು ಜಾರಿಗೊಳಿಸಿತ್ತು. ಆದರೆ ಅದೇ ಸರ್ಕಾರವೇ ತದನಂತರ ‘ಭಾಗ್ಯಲಕ್ಷ್ಮಿ’ ಯೋಜನೆ ಅಡಿ ಸೀರೆ ಹಂಚುವ ಕಾರ್ಯಕ್ರಮವನ್ನೂ ರೂಪಿಸಿದ್ದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ 2503 ಅಂಗನವಾಡಿ ಸೂಪರ್ ವೈಸರ್‌ಗಳಿಗೆ ಅವರ ಕಾರ್ಯದಕ್ಷತೆ ಹೆಚ್ಚಿಸಲು ಸ್ಕೂಟರ್‌ಗಳ ಖರೀದಿಗೆ ₹ 50,000 ಬಡ್ಡಿರಹಿತ ಸಾಲ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿರುವುದು ವಿಶೇ಼ಷ. ಈ ಬಡ್ಡಿರಹಿತ ಸಾಲವನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತದೆ. ಜೊತೆಗೆ ಇಂಧನ ವೆಚ್ಚ  ಎಂದು ₹ 1000  ನೀಡುವ ವಿಚಾರವನ್ನೂ ಪ್ರಕಟಿಸಲಾಗಿದೆ. ಹಾಗೆಯೇ ಪೊಲೀಸ್ ಪಡೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ 25ಕ್ಕೆ ಹೆಚ್ಚಿಸುವ ಭರವಸೆ ನೀಡಲಾಗಿದೆ. ಅಷ್ಟೇ ಅಲ್ಲ, ಪ್ರತಿ ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರ ಶೌಚಾಲಯ ನಿರ್ಮಿಸಲಾಗುವುದು ಎಂಬಂತಹ ಮಾತುಗಳು ಸಾರ್ವಜನಿಕ ಬದುಕಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಯನ್ನು ಗುರುತಿಸುವ ಪ್ರಯತ್ನ ಎನ್ನಬಹುದು. ಭಾರತದ ಪೊಲೀಸ್ ವ್ಯವಸ್ಥೆಯಲ್ಲಿನ ಸಾಂಸ್ಥಿಕ ಸುಧಾರಣೆಯ ವಿಚಾರ, ಈ ಹಿಂದೆ ಚರ್ಚೆಯಾದಾಗಲೆಲ್ಲಾ ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ವಿಚಾರವೂ ಚರ್ಚೆಯಾಗಿದೆ. ಕಾನೂನುಗಳು ಬದಲಾದಂತೆ ಮಹಿಳಾ ಪೊಲೀಸರೇ ನಿರ್ವಹಿಸಬೇಕಾದ ಶಾಸನಬದ್ಧ ಕರ್ತವ್ಯಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದೂ ಹೊಸ ಬೆಳವಣಿಗೆ. ಮಹಿಳಾ ಪೊಲೀಸ್ ಅಧಿಕಾರಿಯೇ ಮಹಿಳೆಯನ್ನು ಬಂಧಿಸಬೇಕು ಎಂಬುದರಿಂದ ಹಿಡಿದು ಶಂಕಿತ ಮಹಿಳಾ ಆರೋಪಿಯ ಶೋಧನೆ ಅಥವಾ ವಿಚಾರಣೆಯನ್ನು ಮಹಿಳಾ ಅಧಿಕಾರಿಯೇ ಮಾಡಬೇಕು ಎಂಬುವವರೆಗೆ ಕಾನೂನಿನ ನಿರ್ದೇಶನಗಳಿವೆ. ಹೀಗಿದ್ದೂ ರಾಜ್ಯದ ಪೊಲೀಸ್ ಬಲದಲ್ಲಿ ಮಹಿಳೆಯರ ಪ್ರಮಾಣ ಶೇ 6ನ್ನೂ ದಾಟಿಲ್ಲ ಎಂಬುದು ಕಹಿ ವಾಸ್ತವ.

ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಏರಿಕೆಗೆ ಉದ್ಯೋಗ ಕ್ಷೇತ್ರದಲ್ಲಿ ಪುರುಷರಷ್ಟೇ ಮಹಿಳೆಯರ ಪಾಲ್ಗೊಳ್ಳುವಿಕೆಯು ಸಾಧ್ಯವಾಗಬೇಕು ಎಂದು ಒಂದಾದ ನಂತರ ಒಂದು ಹಲವು ಸಮೀಕ್ಷೆಗಳು ಹೇಳುತ್ತಲೇ ಬರುತ್ತಿವೆ. ಜೊತೆಗೆ ಭಾರತದಲ್ಲಿ ಉದ್ಯೋಗ ರಂಗದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಆಗುತ್ತಿದೆ ಎಂಬಂತಹ ಆತಂಕಕಾರಿ ಸಮೀಕ್ಷೆಗಳೂ ಪ್ರಕಟವಾಗುತ್ತಲೇ ಇವೆ. ಇಂತಹ ಹೊತ್ತಿನಲ್ಲಿ ಉದ್ಯೋಗಕ್ಕಾಗಿ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನಗಳಿಗೆ ಹಾಜರಾಗಲು ಬೆಂಗಳೂರಿಗೆ ಬರುವ ಮಹಿಳೆಯರಿಗೆ ಸುರಕ್ಷಿತ ವಸತಿ ಕಲ್ಪಿಸುವ ದೃಷ್ಟಿಯಿಂದ ಟ್ರಾನ್ಸಿಟ್ ಹಾಸ್ಟೆಲ್‌ಗಳನ್ನು ಸ್ವಯಂ ಸೇವಾಸಂಸ್ಥೆಗಳು ಅಥವಾ ಖಾಸಗಿ ಪಾಲುದಾರರ ಜೊತೆ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಒಳ್ಳೆಯ ಕ್ರಮ. ನೆರೆಯ ಕೇರಳದಲ್ಲೂ 4.8 ಕೋಟಿ ವೆಚ್ಚದಲ್ಲಿ ಕೊಚ್ಚಿಯಲ್ಲಿ ‘ಷಿಲಾಡ್ಜ್ ’ ಕಟ್ಟುವ ಯೋಜನೆಯನ್ನು ಈ ಬಾರಿಯ ಅಲ್ಲಿನ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಾಗಿತ್ತು. ಹೀಗಿದ್ದೂ ತಮ್ಮ ಸರ್ಕಾರದ ಅವಧಿಯಲ್ಲಿ (ಈ ವರ್ಷದ ಮಾರ್ಚ್ ವರೆಗೆ) ಕೃಷಿವಲಯಕ್ಕೆ  ₹19,561 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2008ರಿಂದ 2013ರವರೆಗೆ ಕೃಷಿ ವೆಚ್ಚ ₹ 7637 ಕೋಟಿ ಮಾತ್ರ ಆಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ‘ರೈತರ ಕಷ್ಟ -ಕಣ್ಣೀರು ಕೇವಲ ಅವರ ಕುಟುಂಬದ್ದಲ್ಲ. ಅದು ಇಡೀ ಸಮಾಜದ್ದು’ ಎನ್ನುತ್ತಲೇ ನೇಗಿಲಯೋಗಿಯ ಬಗ್ಗೆ ತೀವ್ರ ಭಾವನಾತ್ಮಕತೆಯ ಅನೇಕ ಮಾತುಗಳನ್ನೂ ಬಜೆಟ್ ಭಾಷಣದಲ್ಲಿ ಅವರು ಹೇಳಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಕೃಷಿಕರ ವಲಸೆ ಹೆಚ್ಚುತ್ತಿರುವ ಪರಿಣಾಮವಾಗಿ ಕೃಷಿಲೋಕ ಮಹಿಳಾಮಯವಾಗುತ್ತಿರುವ (ಫೆಮಿನೈಸೇಷನ್) ಸನ್ನಿವೇಶ ಇಂದಿನದು. ಈ ವಾಸ್ತವತೆಗೆ ತಕ್ಕ ಯೋಜನೆಗಳು ಕಾಣಿಸದಿರುವುದು ವಿಪರ್ಯಾಸ. ಸಮಾಧಾನದ ಸಂಗತಿ ಎಂದರೆ ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಯೋಜನೆ ಪ್ರಕಟಣೆ.

  ಕೃಷಿ ಲೋಕ ಮಹಿಳಾಮಯವಾಗುತ್ತಿರುವುದನ್ಜು ಈ ಬಾರಿ ಕೇಂದ್ರ ಬಜೆಟ್‌‌‌ಗೆ ಮುಂಚೆ ಪ್ರಕಟಿಸಲಾದ ಆರ್ಥಿಕ ಸಮೀಕ್ಷೆಯೂ ಗುರುತಿಸಿದೆ. ಕೃಷಿಕ ಮಹಿಳೆಯರನ್ನು ಬೆಂಬಲಿಸುವಂತಹ ನಿರ್ದಿಷ್ಟ ಉಪಕ್ರಮಗಳಿಗೂ ಈ ಸಮೀಕ್ಷೆ ಕರೆ ನೀಡಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಎಲ್ಲರನ್ನೂ ಒಳಗೊಳ್ಳುವಂತಹ ಪರಿವರ್ತನಶೀಲ ಕೃಷಿ ನೀತಿ ರೂಪಿಸಬೇಕು ಎಂದು ಆರ್ಥಿಕ ಸಮೀಕ್ಷೆ ಹೇಳಿರುವುದು ಮಹತ್ವದ್ದು. ಕೃಷಿ ವೈವಿಧ್ಯ ಸಂರಕ್ಷಿಸಿ ಆಹಾರ ಭದ್ರತೆಯನ್ನು ಕಾಪಾಡಿಕೊಂಡು ಬರುವ ಪ್ರಕ್ರಿಯೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂಬುದು ಜಾಗತಿಕ ನೆಲೆಯಲ್ಲಿ ಸಾಬೀತಾಗಿದೆ. ಭೂ ಒಡೆತನ, ಕೃಷಿ ತರಬೇತಿ, ಸಾಲ ಸೌಲಭ್ಯ ಹಾಗೂ ಕೃಷಿ ತಂತ್ರಜ್ಞಾನ ಮಹಿಳಾ ಕೃಷಿಕರಿಗೂ ದಕ್ಕುವಂತಾಗಬೇಕು ಎಂಬ ವಿಚಾರ ಇಲ್ಲಿ ಮುಖ್ಯವಾಗುತ್ತದೆ.

ನಾಗರಿಕರಾಗಿ, ಉದ್ಯೋಗಿಗಳಾಗಿ ಹಾಗೂ ತಾಯಂದಿರಾಗಿ  ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಮುಖ್ಯವಾದುದು ಎಂಬ ಗ್ರಹಿಕೆ ಸರ್ಕಾರವನ್ನು ತಟ್ಟಿ ಎಬ್ಬಿಸಬೇಕಿದೆ. ಆಗ ದಿನನಿತ್ಯದ ಬದುಕಲ್ಲಿ, ಉದ್ಯೋಗದ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ಅಸ್ಮಿತೆಗೆ ಪೂರಕವಾದ ಸೂಕ್ತ ನೀತಿ, ಕಾರ್ಯಕ್ರಮಗಳನ್ನು ಯೋಜಿಸುವುದು ಸಾಧ್ಯ. ಎಲ್ಲರನ್ನೂ ಒಳಗೊಳ್ಳುವಂತಹ ಸಮಾನತಾ ಮೌಲ್ಯದ ಮನೋಭಾವ ಹಾಗೂ ಸಮಾನತಾ ಸಮಾಜ ಜೀವನ ಕೌಶಲಗಳನ್ನು ಬೆಳೆಸುವಂತಹ ತನ್ನ ಸಾಂವಿಧಾನಿಕ ಹೊಣೆಯನ್ನು ಸರ್ಕಾರ ಮರೆಯಬಾರದು. ‘ಅಕ್ಕಮಹಾದೇವಿಯ ಔನ್ನತ್ಯ, ರಾಣಿ ಚೆನ್ನಮ್ಮಳ ಶೌರ್ಯ ಹಾಗೂ ಓಬವ್ವಳ ನಿರ್ಭೀತಿ ಈ ನಾಡಿನ ಮಹಿಳೆಯರಲ್ಲಿ ಹಾಸುಹೊಕ್ಕಾಗಿದೆ’ ಎಂದಿದ್ದಾರೆ ಮುಖ್ಯಮಂತ್ರಿ. ‘ಮಹಿಳೆಯರ ಪಾಲಿಗೆ ನಮ್ಮ ಸರ್ಕಾರವೆಂದರೆ ಸ್ವಾವಲಂಬನೆಯ ಮೂಲಕ ಒದಗಿರುವ ಸ್ಥೈರ್ಯ’ ಎಂದೂ ಹೇಳಿಕೊಂಡಿದ್ದಾರೆ. ಆದರೆ ಈ ಮಾತುಗಳು ನಿಜಕ್ಕೂ ಈ ನಾಡಿನ ಮಹಿಳೆಯ ಅನುಭವಕ್ಕೆ ದಕ್ಕುತ್ತಿದೆಯೇ? ಹುಟ್ಟುವ ಹಕ್ಕನ್ನೇ ಕಳೆದು ಕೊಳ್ಳುವ ಸ್ಥಿತಿಯಲ್ಲಿದ್ದಾಳೆ ಹೆಣ್ಣು ಎಂಬುದನ್ನು ಸರ್ಕಾರ ಮರೆಯುವುದಾದರೂ ಹೇಗೆ?

ಪ್ರತಿಕ್ರಿಯಿಸಿ (+)