ಬುಧವಾರ, ಏಪ್ರಿಲ್ 14, 2021
24 °C

ಲಿಪಿಯ ಒಗಟು ಒಡೆದು...

ಓ.ಎಲ್. ನಾಗಭೂಷಣಸ್ವಾಮಿ Updated:

ಅಕ್ಷರ ಗಾತ್ರ : | |

ಲಿಪಿಯ ಒಗಟು ಒಡೆದು...

ರೊಸೆಟ್ಟ ಕಲ್ಲಿನ ಮೇಲೆ ಬರೆದಿದ್ದ ಲಿಪಿಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾದದ್ದು 1822ರಲ್ಲಿ. ಹತ್ತೊಂಬತ್ತನೆಯ ಶತಮಾನದ ಮಹಾ ಸಂಶೋಧನೆಗಳಲ್ಲಿ ಈ ಸಾಧನೆಗೂ ಪ್ರಮುಖ ಸ್ಥಾನವಿದೆ.ರೊಸೆಟ್ಟ ಕಲ್ಲಿನ ಮೇಲುಭಾಗದಲ್ಲಿದ್ದದ್ದು ಈಜಿಪ್ಟಿನ ನಾಗರಿಕತೆಯನ್ನು ಬಹುಕಾಲ ಆಳಿದ್ದ ಹೈರೊಗ್ಲಿಫಿಕ್ಸ್ ಬರವಣಿಗೆ. ಪವಿತ್ರ ಲೇಖನ ಅನ್ನುವುದು ಈ ಪದದ ಅರ್ಥ. ಸವಿಸ್ತಾರವಾದ ಈ ಸಂಕೇತ ಸಮೂಹ ಬೃಹದಾಕಾರದ ದೇಗುಲಗಳ, ಸ್ಮಾರಕಗಳ ಗೋಡೆಗಳ ಮೇಲೆ ಲಿಖಿಸುವುದಕ್ಕೆ ಸೂಕ್ತವಾಗಿದ್ದವು, ದಿನ ದಿನದ ಬರವಣಿಗೆಗೆ ಅಷ್ಟು ಒಗ್ಗುತಿರಲಿಲ್ಲ.ಮಧ್ಯದಲ್ಲಿದ್ದದ್ದು ಡೆಮಾಟಿಕ್ ಬರವಣಿಗೆ. ಡೆಮಾಟಿಕ್ ಅಂದರೆ ಜನಪ್ರಿಯ ಎಂದು ಅರ್ಥ. ಲೌಕಿಕ ವ್ಯವಹಾರಗಳ ದಾಖಲೆಗೆ ಬಳಕೆಯಾಗುತಿತ್ತು. ಇದು ಧಾರ್ಮಿಕ ವಿಚಾರಗಳನ್ನು ಬರೆಯಲು ಬಳಕೆಯಾಗುತಿದ್ದ ಹೈರಾಟಿಕ್ ಅನ್ನುವ ಲೇಖನ ಶೈಲಿಯಿಂದ ಬೆಳೆಯಿತು. ಇವೆರಡೂ ಹೈರೊಗ್ಲಿಫಿಕ್‌ನ ರೂಪಾಂತರಗಳು. ಕ್ರಿಶ್ಚಿಯನ್ ಧರ್ಮ ಪ್ರಬಲಿಸಿದಂತೆ ಈಜಿಪ್ಟ್ ಲಿಪಿಗಳನ್ನು ಬಳಸುವುದು ನಿಷಿದ್ಧವಾಗುತ್ತ ಹೈರೊಗ್ಲಿಫಿಕ್‌ನ ಬಳಕೆ ತಪ್ಪಿತು.

 

ಈಜಿಪ್ಟಿನ ಕ್ರಿಶ್ಚಿಯನೇತರ ಭೂತಕಾಲದ ಸಂಬಂಧ ಕಡಿದುಹೋಯಿತು. ಅವುಗಳ ಬದಲಾಗಿ ಕೋಪ್ಟಿಕ್ ಲಿಪಿ ಬೆಳೆಯಿತು. ಕೋಪ್ಟಿಕ್ ಅಂದರೆ ಗ್ರೀಕ್ ವರ್ಣಮಾಲೆಯ 24 ಅಕ್ಷರಗಳನ್ನು ಬಳಸಿಕೊಂಡು, ಈಜಿಪ್ಟ್ ಭಾಷೆಯ ವಿಶಿಷ್ಟ ದನಿಗಳಿಗಾಗಿ 6 ಡೆಮಾಟಿಕ್ ಅಕ್ಷರಗಳನ್ನು ಅಳವಡಿಸಿಕೊಂಡ ಬರವಣಿಗೆ. ಹಳೆಯ ಈಜಿಪ್ಟಿನ ಆಡು ಭಾಷೆ ಕೋಪ್ಟಿಕ್ ಭಾಷೆಯಾಗಿ ರೂಪಾಂತರ ಹೊಂದಿತು. 11ನೆಯ ಶತಮಾನದ ಹೊತ್ತಿಗೆ ಕೋಪ್ಟಿಕ್ ಲಿಪಿ ಮತ್ತು ಭಾಷೆಗಳ ಸ್ಥಾನದಲ್ಲಿ ಅರಾಬಿಕ್ ಭಾಷೆ ಸ್ಥಾಪನೆಯಾಯಿತು. ಪ್ರಾಚೀನ ಈಜಿಪ್ಟಿನೊಡನೆ ಇದ್ದ ಭಾಷಿಕ ಸಂಬಂಧ ಪೂರಾ ಕಡಿದುಹೋಯಿತು. ಹದಿನೆಂಟನೆಯ ಶತಮಾನದ ಕೊನೆಗೆ ರೊಸೆಟ್ಟಾ ಪತ್ತೆಯಾಯಿತಲ್ಲ, ಆ ಹೊತ್ತಿಗೆ ಹೈರೊಗ್ಲಿಫಿಕ್ಸ್ ಕಣ್ಮರೆಯಾಗಿ ಸಹಸ್ರಾರು ವರ್ಷಗಳು ಕಳೆದಿದ್ದವು.ಆದರೂ ಅದರ ಬಗ್ಗೆ ಕೆಲವು ರೂಢಮೂಲ ನಂಬಿಕೆಗಳಿದ್ದವು. ಹೈರೋಗ್ಲಿಫಿಕ್ಸ್ ಬರವಣಿಗೆ ಗ್ರೀಕ್‌ನಂತೆಯೂ ಇರಲಿಲ್ಲ, ರೋಮನ್‌ನಂತೆಯೂ ಇರಲಿಲ್ಲ. ಅದು ಚಿತ್ರಗಳನ್ನು ಸಾಲಾಗಿ ಬರೆದ ಹಾಗೆ ಕಾಣುತಿತ್ತು. ಕ್ರಿಶ 5ನೆಯ ಶತಮಾನದ ಪುರೋಹಿತ ಹೊರಾಪೊಲೊ `ಹೀರೊಗ್ಲಿಫಿಕ~ ಅನ್ನುವ ಪುಸ್ತಕ ಬರೆದಿದ್ದ. ಹೈರೋಗ್ಲಿಫಿಕ್ಸ್ ಚಿತ್ರಲಿಪಿ ಎಂದು ಹೇಳಿ ಸುಮಾರು 200 ಹೀರೋಗ್ಲಿಫ್ ಚಿತ್ರಗಳ ವಿವರಣೆ ಕೊಟ್ಟಿದ್ದ. ಅದೊಂದು ಅಧಿಕೃತ ಡಿಕ್ಷನರಿ ಥರ ಬಳಕೆಯಾಗುತಿತ್ತು. 9-10ನೆಯ ಶತಮಾನದ ಅರಬ್ ಚರಿತ್ರೆಕಾರರು, 16-18ನೆಯ ಶತಮಾನದವರೆಗಿನ ಯೂರೋಪಿಯನ್ ವಿದ್ವಾಂಸರೂ ಹೈರೊಗ್ಲಿಫಿಕ್ ಅಂದರೆ ಚಿತ್ರಲಿಪಿ ಎಂದು ಮತ್ತೆ ಮತ್ತೆ ಹೇಳಿದ್ದು ಈಜಿಪ್ಟಿನ ಬರವಣಿಗೆಯನ್ನು ಅರ್ಥಮಾಡಿಕೊಳ್ಳಲು ತೊಡಕಾಗಿತ್ತು. ರೂಢಿ ಮುರಿಯದೆ ಹೊಸತು ಕಾಣುವುದು ಹೇಗೆ!ಗೊತ್ತಿದ್ದ ಸುಳಿವುಗಳನ್ನಿಟ್ಟುಕೊಂಡು ಗೊತ್ತಿಲ್ಲದ ಬರಹ ಅರಿಯುವ ಕೆಲಸ ರೊಸೆಟ್ಟ ಶಿಲೆ ಸಿಕ್ಕಮೇಲೆ ಶುರುವಾಯಿತು. ಪ್ರಾಚೀನ ಗ್ರೀಕ್ ವಿದ್ವಾಂಸರಿಗೆ ಗೊತ್ತಿತ್ತು, ಅದರ ಮೂಲಕ ರೊಸೆಟ್ಟ ಕಲ್ಲಿನ ಗ್ರೀಕ್ ಲಿಪಿಯನ್ನು ಓದಿ ಮುರಿದ ಸಾಲುಗಳ ಪುನಾರಚನೆ ಸಾಧ್ಯವಾಗುವುದಕ್ಕೆ ಸುಮಾರು ಏಳೆಂಟು ವರ್ಷ ಬೇಕಾಯಿತು. 1803ರಲ್ಲಿ ಆ ಕೆಲಸ ಮಾಡಿದವನು ರಿಚರ್ಡ್ ಪೋರ್ಸನ್. ಪ್ರಾಚೀನ ಗ್ರೀಕ್‌ನಿಂದ ಆಧುನಿಕ ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಇಂಗ್ಲಿಶ್ ಅನುವಾದಗಳು ಕಾಣಿಸಿಕೊಂಡವು. ಅನುವಾದಗಳನ್ನು ಪರಿಷ್ಕರಿಸುವ ಪ್ರಯತ್ನ 1811ರವರೆಗೂ ನಡೆಯಿತು.ರೊಸೆಟ್ಟ ಪತ್ತೆಯಾಗಿ ಮೂರು ವರ್ಷ ಆಗಿತ್ತು. 1802ರಲ್ಲಿ ಪೌರ್ವಾತ್ಯ ವಿಷಯಗಳ ತಜ್ಞನಾಗಿದ್ದ ಫ್ರೆಂಚ್ ವಿದ್ವಾಂಸ ಆಂಟನಿ ಡಿ ಸಾಸಿ ಆ ಶಾಸನದ ಮಧ್ಯದ ಒಕ್ಕಣೆ ಡೆಮಾಟಿಕ್ ಬರವಣಿಗೆ ಎಂದು ಪತ್ತೆ ಹಚ್ಚಿದ. ಸ್ವೀಡನ್ನಿನ ವಿದ್ವಾಂಸ ಡೇವಿಡ್ ಅಕೆರ್ಬಾಲ್ಡ್ ಡೆಮಾಟಿಕ್ ಲಿಪಿಯ ಯಾವ ಅಕ್ಷರ ಕಾಪ್ಟಿಕ್ ಲಿಪಿಯ ಯಾವ ಅಕ್ಷರಕ್ಕೆ ಹೊಂದಿಕೆಯಾಗುತ್ತದೆ ಅನ್ನುವುದನ್ನು ಗುರುತಿಸಿದ.

ಇವರಿಬ್ಬರೂ ಶಾಸನ ಪಠ್ಯದಲ್ಲಿ ಎಲ್ಲೆಲ್ಲಿ ಗ್ರೀಕ್ ಹೆಸರುಗಳು ಬಂದಿರಬಹುದು ಎಂದು ಊಹಿಸಿದರು. ಸಾಸಿ ಐದು ಹೆಸರುಗಳನ್ನು ಗುರುತಿಸಿದ. ಗ್ರೀಕ್ ಹೆಸರುಗಳನ್ನು ಆಧಾರವಾಗಿಟ್ಟುಕೊಂಡು ಆಕೆರ್‌ಬಾಲ್ಡ್ ಡೆಮಾಟಿಕ್ ಲಿಪಿಯ 29 ಅಕ್ಷರಗಳನ್ನು ಊಹಿಸಿದರೂ ಡೆಮಾಟಿಕ್ ಲಿಪಿಯ ಎಲ್ಲ ಅಕ್ಷರಗಳನ್ನು ಗುರುತಿಸಲು ಆಗಲಿಲ್ಲ. ಅವು ಅರ್ಥ ಸಂಕೇತ (ಐಡಿಯೋಗ್ರಾಫ್) ಧ್ವನಿಸಂಕೇತಗಳ (ಅಕ್ಷರ) ಮಿಶ್ರಣ ಅನ್ನುವುದು ಗೊತ್ತಾಯಿತು.ಇನ್ನೂ ಒಂಬತ್ತು ವರ್ಷ ಕಳೆಯಿತು. ಹೈರೊಗ್ಲಿಫಿಕ್ಸ್ ಶಾಸನಗಳು ಗ್ರೀಕ್ ಹೆಸರುಗಳನ್ನು ಬರೆಯಲು ಚಿತ್ರಲಿಪಿಯನ್ನಲ್ಲ ಅಕ್ಷರ ಲಿಪಿ ಬಳಸಿರಬಹುದು, ಕ್ಯಾಪ್ಸೂಲ್ ಆಕಾರದ ಆವರಣದೊಳಗಿರುವುದು ವ್ಯಕ್ತಿನಾಮಗಳು ಎಂದು ಸಾಸ್ ಊಹೆ ಮಾಡಿದ. ತನ್ನ ಊಹೆಗಳನ್ನು ರೊಸೆಟ್ಟಾ ಬಗ್ಗೆ ಆಸಕ್ತಿ ಇದ್ದ ರಾಯಲ್ ಸೊಸೈಟಿ ಆಫ್ ಲಂಡನ್‌ನ ಫಾರಿನ್ ಸೆಕ್ರೆಟರಿ ಥಾಮಸ್ ಯಂಗ್‌ನೊಡನೆ ಹಂಚಿಕೊಂಡ.ಹೈರೊಗ್ಲಿಫಿಕ್ಸ್ ರಹಸ್ಯ ಬಿಡಿಸುವುದಕ್ಕೆ ಯಂಗ್ ನಡೆಸಿದ ಪ್ರಯತ್ನ ದೊಡ್ಡದು. ಆವರಣಗಳಲ್ಲಿ ಬರೆದದ್ದು ವ್ಯಕ್ತಿಗಳ ಹೆಸರಾಗಿದ್ದರೆ ಅದರ ಆಧಾರದ ಮೇಲೆ ಭಾಷೆ ಯಾವುದೇ ಇದ್ದರೂ ಉಳಿದ ಚಿತ್ರಗಳ ಅಕ್ಷರ ಮೌಲ್ಯ ಊಹಿಸಬಹುದೆನ್ನಿಸಿತು. ಇದೇ ತಂತ್ರ ಇಟ್ಟುಕೊಂಡು ಟಾಲೆಮಿಯ ರಾಣಿ ಬೆರೆನಿಕಳ ಹೆಸರು ಓದಿದ. ಗ್ರೀಕ್ ಹೆಸರು ಟಾಲೆಮಿಯೋಸ್ ಎಂಬುದನ್ನು ಬರೆಯಲು ಬಳಸಿದ್ದ ಅಕ್ಷರಗಳನ್ನು, ಉಚ್ಚಾರಣೆಗಳನ್ನು ಕಂಡುಹಿಡಿದ. ಈ ಹೈರೊಗ್ಲಿಫಿಕ್ ಅಕ್ಷರಗಳು ಡೆಮಾಟಿಕ್‌ನಲ್ಲಿದ್ದ ಅಕ್ಷರಗಳಿಗೆ ಹೊಂದುವುದನ್ನು ಕಂಡುಕೊಂಡ. ಹೈರೊಗ್ಲಿಫಿಕ್ ಮತ್ತು ಡೆಮಾಟಿಕ್‌ಗಳ ನಡುವೆ 80 ಸಮಾನತೆಗಳನ್ನು ಗುರುತಿಸಿದ. ಅದುವರೆಗೆ ಡೆಮಾಟಿಕ್, ಹೈರೋಗ್ಲಿಫಿಕ್ ಎರಡೂ ಬೇರೆ ಬೇರೆ ಅಂದುಕೊಂಡಿದ್ದರು. ಬ್ರಿಟಾನಿಕಾ ವಿಶ್ವಕೋಶಕ್ಕೆ ಅವನು 1819ರಲ್ಲಿ ಬರೆದ ಲೇಖನದಲ್ಲಿ ಈ ಸಂಗತಿ ತಿಳಿಸಿದ.1814ರಲ್ಲಿ ಯಂಗ್ ಮತ್ತು ಫ್ರಾನ್ಸ್ ದೇಶದ ವಿದ್ವಾಂಸ, ಅಧ್ಯಾಪಕ ಜೀನ್ ಫ್ರಾಂಕೋಯಿಸ್ ಚಾಂಪೊಲ್ಲಿಯನ್ ಜೊತೆಗೆ ರೊಸೆಟ್ಟಾ ಬಗ್ಗೆ ಪತ್ರವ್ಯವಹಾರ ನಡೆಯುತಿತ್ತು. ಚಾಂಪೊಲ್ಲಿಯನ್ ಪ್ರಾಚೀನ ಈಜಿಪ್ಟ್ ಬಗ್ಗೆ ವಿದ್ವತ್ಪೂರ್ಣ ಕೃತಿ ಬರೆದಿದ್ದ. ಚಾಂಪೊಲ್ಲಿಯನ್ ಹತ್ತನೆ ವರ್ಷದಲ್ಲೇ ಈಜಿಪ್ಟಿನ ಪ್ರಾಚೀನದ ಸೆಳೆತಕ್ಕೆ ಸಿಕ್ಕಿದ್ದವನು, ಕಾಪ್ಟಿಕ್ ಭಾಷೆ ತಿಳಿದಿದ್ದವನು. 1822ರಲ್ಲಿ ಸಾಂಪ್ರದಾಯಕ ಈಜಿಪ್ಟ್ ಹೆಸರುಗಳ ಹೈರೊಗ್ಲಿಫ್‌ಗಳು ದೊರೆತವು. ಇಂಥ ಒಂದು ತುಣುಕಿನಲ್ಲಿ ನಾಲ್ಕು ಸಂಕೇತಗಳಿದ್ದವು. ಹೈರೊಗ್ಲಿಫಿಕ್ ಚಿತ್ರವಲ್ಲ, ಅಕ್ಷರವಿರಬಹುದೆ ಅನ್ನುವ ಊಹೆಯೊಡನೆ ಓದಲು ಚಾಂಪೊಲ್ಲಿಯನ್ ಯತ್ನಿಸಿದ.ಕೊನೆಯ ಎರಡು ಸಂಕೇತಗಳು ಸಸ (~~) ಎಂದು ತಿಳಿಯಿತು. ಹಾಗಿದ್ದರೆ ಅಲ್ಲಿದ್ದದ್ದು ?-?-ಸ-ಸ ಇರಬಹುದೆ? ಅದರ ಮೊದಲ ಸಂಕೇತ ಸೂರ್ಯನ ಹಾಗಿತ್ತು. ಕಾಪ್ಟಿಕ್‌ನಲ್ಲಿ ಸೂರ್ಯನನ್ನು ರಾ ಅನ್ನುತಿದ್ದರು. ಈ ತುಣುಕಿನ ಅಕ್ಷರಗಳು ರಾ-?-ಸ-ಸ ಇರಬಹುದೆ? ಇಂಥ ಉಚ್ಚಾರಣೆಗೆ ಸಮೀಪದ ಒಬ್ಬ ರಾಜನ ಹೆಸರು ಮಾತ್ರವಿತ್ತು-ರಾಮ್‌ಸೀಸ್.ವ್ಯಂಜನಗಳ ವಿನ್ಯಾಸ ಅದಕ್ಕೆ ಹೊಂದುತಿತ್ತು. ಲಿಪಿಕಾರರು ಉಚ್ಚಾರಣೆಯನ್ನು ಚಿತ್ರಗಳ ರೂಪದಲ್ಲಿ ಬರೆಯುವ ತತ್ವವನ್ನು ಬಳಸಿರುವುದರ ಗುಟ್ಟು (ಇದನ್ನು ರೀಬಸ್ ತತ್ವ ಅನ್ನುತ್ತಾರೆ) ಪತ್ತೆಯಾಯಿತು. ಹಾವು ಮತ್ತು ರಾಜನ ಚಿತ್ರ `ನಾಗರಾಜ~ ಎಂಬ ಉಚ್ಚಾರಣೆಯನ್ನು ಚಂದ್ರ ಮತ್ತು ಮಗುವನ್ನು ಎತ್ತಿಕೊಂಡಿರುವ ತಾಯಿಯ ಚಿತ್ರ `ಚಂದ್ರಮ್ಮ~ ಎಂಬ ಉಚ್ಚಾರಣೆಯನ್ನು ಸೂಚಿಸುವ ಹಾಗೆ ಇದೂನೂ. ಹೈರೋಗ್ಲಿಫಿಕ್ಸ್ ಶಬ್ದರೇಖೆ ಅನ್ನುವುದು ಗೊತ್ತಾಯಿತು. ಪತ್ತೆಯಾಯಿತು ಎಂದು ಕೂಗುತ್ತ ಸೋದರನ ಆಫೀಸಿಗೆ ನುಗ್ಗಿದವನೆ ಮನಸಿನ ದಣಿವಿನಿಂದ ಕುಸಿದು ಬಿದ್ದು ಮುಂದೆ ಐದು ದಿನ ಹಾಸಿಗೆ ಹಿಡಿದಿದ್ದನಂತೆ.ರೊಸೆಟ್ಟಾ ರಹಸ್ಯ ಬಿಡಿಸಿದ್ದು ಯಾರು, ಇಂಗ್ಲೆಂಡಿನ ಯಂಗ್ ಅಥವಾ ಫ್ರಾನ್ಸಿನ ಚಾಂಪೊಲ್ಲಿಯನ್? ವಾಗ್ವಾದ ಮುಗಿದಿಲ್ಲ. 1970ರಷ್ಟು ಇತ್ತೀಚೆಗೆ ಬ್ರಿಟಿಶ್ ಮ್ಯೂಸಿಯಮ್‌ನಲ್ಲಿರುವ ಚಾಂಪೊಲ್ಲಿಯನ್ ಮತ್ತು ಯಂಗ್‌ನ ಚಿತ್ರಗಳಲ್ಲಿ ನಮ್ಮ ದೇಶದವನದು ಗಾತ್ರದಲ್ಲಿ ಚಿಕ್ಕದು ಎಂದು ಎರಡೂ ದೇಶಗಳವರು ಕ್ಯಾತೆ ಎಬ್ಬಿಸಿಕೊಂಡಿದ್ದರು. ರೊಸೆಟ್ಟಾ ಶಿಲೆ ನಮಗೆ ವಾಪಸ್ ಕೊಡಿ, ಈಜಿಪ್ಟ್ ಪರಂಪರೆಗೆ ಸೇರಿದ ಬರ್ಲಿನ್ ಪ್ಯಾರಿಸ್ ಬೋಸ್ಟನ್ ಸಂಗ್ರಹಾಲಯದ ವಸ್ತುಗಳನ್ನು ಕೊಡಿ; ಕೊನೆಯ ಪಕ್ಷ 2013ರಲ್ಲಿ ಗ್ರಾಂಡ್ ಈಜಿಪ್ಟಿಯನ್ ಮ್ಯೂಸಿಯಮ್ ಉದ್ಘಾಟನೆಯ ಹೊತ್ತಿಗೆ ಮೂರು ತಿಂಗಳ ಕಾಲ ರೊಸೆಟ್ಟಾ ಎರವಲು ಕೊಡಿ ಎಂದು ಈಜಿಪ್ಟು ಇನ್ನೂ ಬೇಡುತ್ತಿದೆ.ನಾಗರಿಕತೆ ಅಂದರೆ ಪಶ್ಚಿಮದ್ದೇ ಅನ್ನುವ ತಪ್ಪು ತಿಳಿವಳಿಕೆ ಇದೆ. ಪ್ರಾಚೀನ ಭಾಷೆಗಳೆಲ್ಲ ಇದ್ದೇ ಇದ್ದವು. ಅವುಗಳನ್ನು ಆಧುನಿಕರು ಕಂಡುಕೊಂಡಿರಲಿಲ್ಲ. ಸಂಸ್ಕೃತ ಮತ್ತು ಪ್ರಾಚೀನ ಪರ್ಶಿಯನ್ ಕೂಡ ಪಶ್ಚಿಮದ ಕಣ್ಣಿಗೆ ಬಿದ್ದದ್ದು ಹತ್ತೊಂಬತ್ತನೆಯ ಶತಮಾನದಲ್ಲೇ. ಆ ಶತಮಾನದಲ್ಲಿ ನಡೆದ ಪ್ರಾಚೀನ ಭಾಷೆಯ ಸಂಶೋಧನೆಗಳಿಂದ ನಾಗರಿಕತೆಯ ಇತಿಹಾಸಕ್ಕೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹೆಚ್ಚಿನ ವಿಸ್ತಾರ ದೊರೆಯಿತು.ಪ್ರಾಚೀನದ ಅನ್ವೇಷಣೆ ಎಂಥ ಸೆಳೆತ ಹುಟ್ಟಿಸಿತ್ತೆಂದರೆ ಗಿಲ್ಗಮಿಶ್‌ನ ಬಹುಮುಖ್ಯವಾದ ಫಲಕವನ್ನು ಶೋಧಿಸಲು ಡೈಲಿ ಟಿಲಿಗ್ರಾಫ್ ಪತ್ರಿಕೆ ಧನಸಹಾಯ ಮಾಡಿತು. ಅಮೆರಿಕ ಮತ್ತು ಇಂಗ್ಲೆಂಡುಗಳ ವಿಶ್ವವಿದ್ಯಾಲಯಗಳಲ್ಲಿ ಅಸ್ಸೀರಿಯ, ಬ್ಯಾಬಿಲೋನಿಯ, ಸುಮೇರಿಯ, ಅಕ್ಕಾಡಿಯ ಮೊದಲಾದ ಭಾಷೆಗಳ ಸಂಸ್ಕೃತಿಗಳ ಅಧ್ಯಯನಕ್ಕೆ ಪೀಠಗಳು ಸ್ಥಾಪನೆಯಾದವು. ಬೈಬಲ್ ಮತ್ತು ಹೋಮರ್ ನಾಗರಿಕತೆಯ, ಚರಿತ್ರೆಯ ಆರಂಭ ಬಿಂದುಗಳು, ಅದಕ್ಕಿಂತ ಹಿಂದಿನದ್ದೆಲ್ಲ ಇತಿಹಾಸಪೂರ್ವ ಅನ್ನುವ ನಂಬಿಕೆಗೆ ಆಘಾತವಾಯಿತು. ಬೈಬಲಿನಲ್ಲಿ ಬರುವ ವಿಶ್ವಸೃಷ್ಟಿ ಮತ್ತು ಜಗತ್ಪ್ರಳಯದ ವಿವರಣೆಗಳಿಗಿಂತ, ಈಲಿಯಡ್‌ಗಿಂತ ಹಳೆಯ ಕಥನಗಳು ಇತರ ಪ್ರಾಚೀನ ಭಾಷೆಗಳಲ್ಲಿ ಇರುವ ವಿಚಾರವನ್ನು ಅರಗಿಸಿಕೊಳ್ಳುವುದು ಸಂಪ್ರದಾಯಸ್ಥ ಮನಸ್ಸುಗಳಿಗೆ ಕಷ್ಟವಾಯಿತು. ಡಾರ್ವಿನ್‌ನ ಶೋಧದಷ್ಟೆ ಭಾಷಾ ಶೋಧಗಳು ಯಾಕೆ ಮುಖ್ಯವೆಂದರೆ ಕಾರಣ ಇದು. ಹೊಸ ತಿಳಿವಳಿಕೆ ವೈಚಾರಿಕತೆಯನ್ನು ಸ್ಥಾಪಿಸುತ್ತಿದ್ದಂತೆ ಆಘಾತಗೊಂಡ ಸಂಪ್ರದಾಯಸ್ಥ ಮನಸ್ಸು ಧಾರ್ಮಿಕ ನಂಬಿಕೆಗಳನ್ನು ಮತ್ತಷ್ಟು ಬಲವಾಗಿ ಆತುಕೊಳ್ಳುವಂತಾಯಿತು. ಅದರಲ್ಲೂ ಭಾಷೆಯ ಸೃಷ್ಟಿಯಾದ ಧಾರ್ಮಿಕ ಪಠ್ಯಗಳನ್ನು ಇತರ ಪ್ರಾಚೀನ ಭಾಷೆಗಳ ತಿಳಿವಳಿಕೆಯ ಬೆಳಕಿನಲ್ಲಿ ವಿಮರ್ಶಿಸುವ, ವಿಶ್ಲೇಷಿಸುವ ಪ್ರಯತ್ನಗಳಿಗೆ ದೊಡ್ಡ ಪ್ರಮಾಣದಲ್ಲೇ ವಿರೋಧ ವ್ಯಕ್ತವಾಗತೊಡಗಿತು. ಬರ್ಬರ ಎಂದು ತಿಳಿಯಲಾಗಿರುವ ಜನಾಂಗಗಳಿಂದ ನಾಗರಿಕತೆಯ ಉಗಮ ಗುರುತಿಸುವುದು ಸರಿಯೇ ಅನ್ನುವಂಥ ವಾಗ್ವಾದಗಳು ನಡೆದವು.  ಬ್ಯಾಬಲ್ ಮತ್ತು ಬೈಬಲ್ ಅನ್ನುವುದು ಹತ್ತೊಂಬತ್ತನೆಯ ಶತಮಾನದ ಇಂಥ ಚರ್ಚೆಗಳನ್ನು ವಿವರಿಸುವ ನುಡಿಗಟ್ಟು.ವೈಚಾರಿಕತೆ, ಬೌದ್ಧಿಕ ಕುತೂಹಲ ಮತ್ತು ಅವೆರಡನ್ನೂ ವಿರೋಧಿಸುವ ಮೂಲಭೂತವಾದ ಇವು ತಮ್ಮ ತಮ್ಮ ನೆಲೆಗಳನ್ನು ಗಟ್ಟಿಮಾಡಿಕೊಂಡದ್ದು ಹತ್ತೊಂಬತ್ತನೆಯ ಶತಮಾನದ ಪಶ್ಚಿಮ ದೇಶಗಳಲ್ಲಿ. ಹತ್ತೊಂಬತ್ತನೆಯ ಶತಮಾನದಲ್ಲಿ ದೊರೆತ ಭಾಷಾಶಾಸ್ತ್ರೀಯ ತಿಳಿವಳಿಕೆಯಿಂದ ಸಂಸ್ಕೃತವೂ ಜಗತ್ತಿನ ಸಹಸ್ರಾರು ಭಾಷೆಗಳಲ್ಲಿ ಒಂದು ಎಂಬ ಸಂಗತಿಯನ್ನು ಒಪ್ಪಲೊಲ್ಲದ ಸಂಪ್ರದಾಯಸ್ಥ ಮನಸ್ಸುಗಳು ನಮ್ಮಲ್ಲಿ ಇನ್ನೂ ಇವೆಯಲ್ಲವೇ! ವೈಚಾರಿಕತೆ ಮತ್ತು ನಂಬಿಕೆಗಳ ದ್ವಂದ್ವ ಆಧುನಿಕತೆಯ ಒಂದು ಲಕ್ಷಣ. ಇವೆರಡರ ಬೆಳವಣಿಗೆಗೂ ಕಾರಣವಾಗಿರುವುದು ಭಾಷೆಯೇ. ಈ ದ್ವಂದ್ವವನ್ನು ಮೀರುವುದಕ್ಕೆ ಅಥವ ದಾಟುವುದಕ್ಕೆ ಕೂಡ ಭಾಷೆಯ ನೆರವೇ ಬೇಕು.ಹೆಚ್ಚಿನ ಮಾಹಿತಿಗೆ ಸೈರಸ್ ಎಚ್. ಗೋರ್ಡನ್ ಬರೆದಿರುವ ಫರ್ಗಾಟನ್ ಸ್ಕ್ರಿಪ್ಟ್ಸ್ ಪುಸ್ತಕ ನೋಡಿ. ಈ ಅಂಕಣದ ಓದುಗರಾದ ಮೈಸೂರಿನ ಶ್ರೀ ಸೀತಾರಾಮ್ ಈ ಪುಸ್ತಕದತ್ತ ಗಮನ ಸೆಳೆದರು. ಕೃತಜ್ಞ.  ರೇಖಾಚಿತ್ರ : ಡಾ. ಸಿ. ರವೀಂದ್ರನಾಥ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.