ಲಿಫ್ಟ್

7

ಲಿಫ್ಟ್

ಗುರುರಾಜ ಕರ್ಜಗಿ
Published:
Updated:

 ಅಮೆರಿಕೆಯ ಕ್ಯಾಲಿಫೋರ್ನಿಯಾ ಪ್ರಾಂತದಲ್ಲಿ ಸ್ಯಾನ್‌ಡಿಯಾಗೋ ಎಂಬ ನಗರವಿದೆ. ಈಗ ಅದು ಮಾಹಿತಿ ತಂತ್ರಜ್ಞಾನದ ಅಳವಡಿಕೆ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಮಾಡಿದೆ. ನಮ್ಮ ಭಾರತೀಯ ತರುಣ ತರುಣಿಯರದೇ ಬಹಳ ದೊಡ್ಡ ತಂಡ ಅಲ್ಲಿ ಕೆಲಸ ಮಾಡುತ್ತಿದೆ. ಆ ನಗರದಲ್ಲಿ ಒಂದು ಪ್ರಸಿದ್ಧವಾದ ಹೋಟೆಲ್ ಎಲ್ ಕಾರ್ಟೆಜ್. ಪಾಯಶಃ ಈಗಿರುವ ಉತ್ತಮ ದರ್ಜೆ ಹೊಟೆಲ್‌ಗಳಲ್ಲಿ ಅದು ಅತ್ಯಂತ ಹಳೆಯ ದಾಗಿದ್ದಿರಬೇಕು. ಅದನ್ನು ಕಟ್ಟುವಾಗ ನಡೆದದ್ದು ಒಂದು ವಿಶೇಷ ಘಟನೆ.ಕಟ್ಟಡವೇನೋ ಪೂರ್ತಿ ಆಯಿತು. ಜನ ಬಂದು ವಾಸಿಸಲೂ ತೊಡಗಿದರು. ಹೋಟೆಲಿನ ಖ್ಯಾತಿ ಎಷ್ಟು ಹೆಚ್ಚಿತೆಂದರೆ ಬಂದ ಗಿರಾಕಿಗಳಿಗೆಲ್ಲ ಕೋಣೆಗಳನ್ನು ನೀಡುವುದು ಅಸಾಧ್ಯವಾಗತೊಡಗಿತು. ಎಲ್ಲಾ ಕೋಣೆಗಳು ಯಾವಾಗಲೂ ಭರ್ತಿಯಾಗಿರುತ್ತಿದ್ದವು. ಈಗೊಂದು ಸಮಸ್ಯೆ ಹೋಟೆಲ್‌ನ ಮೇಲ್ವಿಚಾರಕರಿಗೆ ಬರತೊಡಗಿತು. ಇಷ್ಟು ಜನ ಬಂದಾರೆಂದು ಮತ್ತು ಎಲ್ಲಾ ಕೋಣೆಗಳು ಯಾವಾಗಲೂ ತುಂಬಿಯೇ ಇರುತ್ತವೆಂದು ಅವರು ಯೋಚಿಸಿರಲಿಲ್ಲ. ಜನ ಹೆಚ್ಚಾದಾಗ ಮೇಲಿಂದ ಕೆಳಗೆ, ಕೆಳಗಿನಿಂದ ಮೇಲೆ ಓಡಾಡುವುದೂ ಹೆಚ್ಚಾಗುತ್ತದೆ. ಕೋಣೆಗಳಿಗೆ ಸರಬರಾಜು ಮಾಡುವ ಹುಡುಗರ ಓಡಾಟವೂ ಹೆಚ್ಚುತ್ತದೆ.ಹೋಟೆಲ್‌ನ ಮಾಲಿಕರು ಮತ್ತು ಎಂಜಿನಿಯರುಗಳು ಎರಡು ಲಿಫ್ಟ್‌ಗಳು ಸಾಕೆಂದು ತೀರ್ಮಾನಿಸಿ ಕಟ್ಟಿದ್ದರು. ಈಗ ಅವು ಸಾಕಾಗುವುದೇ ಇಲ್ಲವೆಂಬ ಅರಿವಾಯಿತು.ಪ್ರತಿಯೊಂದು ಲಿಫ್ಟ್ ಮುಂದೆ ಜನ ಸರದಿಯಲ್ಲಿ ನಿಲ್ಲುವಂತಾಯಿತು. ತಡವಾದಾಗ ಕೋಪ ತಾಪಗಳು ಏರತೊಡಗಿದವು. ಇದನ್ನು ನಿಭಾಯಿಸುವುದು ಕಷ್ಟವಾಗತೊಡಗಿತು. ಇನ್ನು ನಾಲ್ಕಾದರೂ ಲಿಫ್ಟ್‌ಗಳು ಬೇಕೇಬೇಕೆಂಬ ತೀರ್ಮಾನಕ್ಕೆ ಬಂದರು. ಆದರೆ ಅವುಗಳನ್ನು ಎಲ್ಲಿ ಸೇರಿಸುವುದು? ನೆಲದಿಂದ ಕೊನೆಯ ಅಂತಸ್ತಿನವರೆಗೆ ಲಿಫ್ಟ್ ಸೇರಿಸಬೇಕೆಂದರೆ ಆ ಸ್ಥಳದಲ್ಲಿಯ ಕೋಣೆಗಳನ್ನೂ ಒಡೆಯಬೇಕು, ಪ್ರತಿಯೊಂದು ಅಂತಸ್ತಿನ ತಾರಸಿಯನ್ನೂ ಕೊರೆದು ತೆಗೆಯಬೇಕು.

 

ಮತ್ತೆ ಗದ್ದಲ, ಮತ್ತೆ ದೂಳು, ಸಿಮೆಂಟು ಇವುಗಳ ಅವಾಂತರ. ಅಲ್ಲದೇ ಅಷ್ಟೊಂದು ಕೋಣೆಗಳು ಬಳಕೆಗೆ ಕಡಿಮೆಯಾಗುತ್ತವೆ ಮತ್ತು ರಿಪೇರಿ ಕೆಲಸ ಮುಗಿಯು ವವರೆಗೆ ಆ ಭಾಗದ ಕೋಣೆಗಳನ್ನೇ ಬಳಸುವಂತಿಲ್ಲ. ಎಲ್ಲರ ತಲೆ ಬಿಸಿಯಾಯಿತು. ಎಂಜಿನಿಯರುಗಳು, ವಾಸ್ತುಶಿಲ್ಪಿಗಳು ಜಿಜ್ಞಾಸೆ ನಡೆಸಿದರು. ಪರಿಹಾರ ಸುಲಭ ಎನ್ನಿಸಲಿಲ್ಲ. ಆ ಹೋಟೆಲ್‌ನಲ್ಲಿ ಒಬ್ಬ ಹುಡುಗ ಕೋಣೆಗಳನ್ನು ಗುಡಿಸಿ, ಒರೆಸಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ. ಅವನು ಈ ಎಂಜಿನಿಯರುಗಳ ಓಡಾಟ, ಹಾರಾಟಗಳನ್ನು ನೋಡಿದ. `ಅಯ್ಯೋ, ಮತ್ತೆ ಗೋಡೆ ಒಡೆದು, ತಾರಸಿ ಕೊರೆದು ಮಾಡಿದರೆ ಅದೆಷ್ಟು ದೂಳು, ಕೊಳೆ? ಅದನ್ನು ಶುದ್ಧ ಮಾಡಲು ಬೆನ್ನೇ ಮುರಿದು ಹೋಗುತ್ತದೆ.~ ಅವನೂ ಯೋಚನೆ ಮಾಡಿ ವಾಸ್ತು ಶಿಲ್ಪಿಗಳ ಬಳಿಗೆ ಹೋಗಿ,  `ಸಾರ್, ಲಿಫ್ಟ್‌ನ್ನು ಕಟ್ಟಡದ ಒಳಗೇ ಮಾಡಬೇಕೇ? ಕಟ್ಟಡದ ಹೊರಗಿನಿಂದ ಅಥವಾ ಒಳಭಾಗದಿಂದ ಮಾಡಲು ಆಗುವುದಿಲ್ಲವೇ?~ ಎಂದು ಕೇಳಿದ. ಈ ಮಾತು ವಾಸ್ತು ಶಿಲ್ಪಿಗಳ ಮನದಲ್ಲಿ ದೀಪ ಬೆಳಗಿತು. `ಹೌದಲ್ಲ! ಕಟ್ಟಡದ ಹೊರಗೆ ಲಿಫ್ಟ್‌ನ್ನು ಮಾಡಿ ಪ್ರತಿ ಅಂತಸ್ತಿಗೆ ಜೋಡಿಸಿದರಾಯಿತು!~ ಆದರೆ ಇದುವರೆಗೂ ಇಂಥದ್ದನ್ನು ಯಾರೂ ಮಾಡಿರಲಿಲ್ಲ.ಮಾಡಿಯೇ ಬಿಡೋಣವೆಂದು ಕಟ್ಟಡದ ಹೊರಗಿನಿಂದ ನಿರ್ಮಿಸಿದರು. ಇನ್ನೂ ಆಕರ್ಷಣೆಯಾಗಲೆಂದು ಲಿಫ್ಟ್‌ನ್ನು ಗಾಜಿನಿಂದ ಮಾಡಿದರು. ಆಗ ಮೇಲಕ್ಕೆ ಹೋಗುವಾಗ ದೃಶ್ಯ ಸುಂದರವಾಗಿರುತ್ತದೆ. ಈ ಲಿಫ್ಟ್ ಜಗದ್‌ವಿಖ್ಯಾತವಾ ಯಿತು. ಈಗ ಅನೇಕ ಹೋಟೆಲ್‌ಗಳು ಈ ತರಹದ ಕಟ್ಟಡದ ಹೊರಗಿರುವ ಲಿಫ್ಟುಗಳು ಬಳಸುತ್ತಿವೆ. ಆದ್ದರಿಂದ ನಾವು ಏನಾಗಿದ್ದೇವೆ ಎಂಬುದು ಮುಖ್ಯವಲ್ಲ. ನಮ್ಮ ಸ್ಥಾನ, ಉದ್ಯೋಗ, ಸಂಬಳ, ವರ್ಗ, ಅಂತಸ್ತು ಇವು ಯಾವುವೂ ಮುಖ್ಯವಲ್ಲ. ನಮ್ಮ ವಿಚಾರಗಳು ಮುಖ್ಯ. ಅದನ್ನು ಹೇಳುವ ಧೈರ್ಯ ಮುಖ್ಯ. ಎಷ್ಟೋ ಬಾರಿ ಸಣ್ಣ ಸ್ಥಾನದಲ್ಲಿರುವ ಜನರು ತಮಗೆ ಬಂದ ಅತ್ಯುತ್ತಮ ಚಿಂತನೆಯನ್ನು ಹೇಳಲು ಹಿಂಜರಿಯುತ್ತಾರೆ, ಸಮಾಜಕ್ಕೆ ಆಗಬಹುದಾಗಿದ್ದ ಲಾಭವನ್ನು ತಪ್ಪಿಸುತ್ತಾರೆ.ನಮ್ಮಲ್ಲಿ, ನಮ್ಮ ಚಿಂತನೆಯಲ್ಲಿ ಸಂಪೂರ್ಣ ನಂಬಿಕೆ ಇರಲಿ. ಹೇಳುವ ಧೈರ್ಯವೂ ಇರಲಿ. ಆಗ ಮಾತ್ರ ನಮ್ಮಿಂದ ಸಮಾಜಕ್ಕೆ ನಿಜವಾದ ಕೊಡುಗೆ ದೊರೆಯುವುದು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry