ಲೈವ್ ವಿಡಿಯೊ ಪ್ರಿಯರಿಗೆ

7

ಲೈವ್ ವಿಡಿಯೊ ಪ್ರಿಯರಿಗೆ

ಯು.ಬಿ. ಪವನಜ
Published:
Updated:
ಲೈವ್ ವಿಡಿಯೊ ಪ್ರಿಯರಿಗೆ

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ತೈವಾನಿನ ಏಸುಸ್ ಗಮನಾರ್ಹ ಹೆಸರು. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಸ್ಮಾರ್ಟ್‌ವಾಚ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ –ಹೀಗೆ ಹಲವು ಉತ್ಪನ್ನಗಳನ್ನು ಅದು ತಯಾರಿಸುತ್ತಿದೆ. ಈ ಕಂಪೆನಿಯ ಹಲವು ಫೋನ್‌ಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು.

ಹೆಚ್ಚು ಬ್ಯಾಟರಿ ಶಕ್ತಿಯ ಫೋನ್, ಉತ್ತಮ ಕ್ಯಾಮೆರಾದ ಫೋನ್ –ಹೀಗೆ ಬೇರೆ ಬೇರೆ ವೈಶಿಷ್ಟ್ಯಗಳ ಫೋನುಗಳನ್ನು ಏಸುಸ್  ತಯಾರಿಸುತ್ತಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಏಸುಸ್ ಝೆನ್‌ಫೋನ್ ಲೈವ್ (Asus Zenfone Live ZB501KL) ಎಂಬ ಸ್ಮಾರ್ಟ್‌ಫೋನನ್ನು.

ಏಸುಸ್‌ನವರ ಝೆನ್‌ಫೋನ್ 2 ಶ್ರೇಣಿಯ ಎಲ್ಲ ಫೋನ್‌ಗಳ ರಚನೆ ಮತ್ತು ವಿನ್ಯಾಸ ಒಂದೇ ರೀತಿ ಇತ್ತು.

ಈಗ ಝೆನ್‌ಫೋನ್ 3 ಫೋನ್‌ಗಳ ರಚನೆ ಮತ್ತು ವಿನ್ಯಾಸ ಕೂಡ ಒಂದೇ ರೀತಿ ಇದೆ. ಅಂತೆಯೇ ಈ ಫೋನ್ ಕೂಡ. ಹಿಂಭಾಗ ಸ್ವಲ್ಪ ದೊರಗಾಗಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿಯಿದೆ.

ಇತ್ತೀಚೆಗೆ ಸಾಮಾನ್ಯವಾಗುತ್ತಿರುವ ಯುಎಸ್‌ಬಿ-ಸಿ ಅಲ್ಲ. ಎಡಭಾಗದಲ್ಲಿ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ಹಾಕುವ ಟ್ರೇ ಇದೆ. ಅದನ್ನು ಹೊರತೆಗೆಯಲು ಚಿಕ್ಕ ಪಿನ್‌ ಬಳಸಿ ಚುಚ್ಚಬೇಕು. ಈ ಟ್ರೇಯಲ್ಲಿ ಎರಡು ನ್ಯಾನೊ ಸಿಮ್ ಅಥವಾ ಒಂದು ನ್ಯಾನೊ ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು. ಹಿಂಭಾಗದಲ್ಲಿ ಬಲಮೂಲೆಯಲ್ಲಿ ಕ್ಯಾಮೆರಾ ಇದೆ.

ಕ್ಯಾಮೆರಾದ ಪಕ್ಕದಲ್ಲಿ ಫ್ಲಾಶ್ ಇದೆ. 2.5D ಗಾಜಿನ ಪರದೆ ಇದೆ. ಕೈಯಲ್ಲಿ ಹಿಡಿದಾಗ ಮೇಲ್ದರ್ಜೆಯ ಫೋನನ್ನು ಹಿಡಿದುಕೊಂಡಂತೆ ಅಷ್ಟೇನೂ ಅನ್ನಿಸುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ರಚನೆ ಮತ್ತು ವಿನ್ಯಾಸ ಸಂಪೂರ್ಣ ತೃಪ್ತಿ ನೀಡುವುದಿಲ್ಲ.

ಇದರಲ್ಲಿರುವುದು ಕಡಿಮೆ ಶಕ್ತಿಯ ಪ್ರೊಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ ಕೇವಲ 24507. ಅಂದರೆ ಇದರ ಕೆಲಸದ ವೇಗ ತುಂಬ ಕಡಿಮೆ. ಆದರೂ ಬಹುತೇಕ ಆಟಗಳನ್ನು ಆಡಬಹುದು. ಅತಿ ಶಕ್ತಿಯನ್ನು ಬೇಡುವ ಆಟಗಳನ್ನು ಮಾತ್ರ ಆಡಲು ಕಷ್ಟ. ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡುವುದೂ ಕಷ್ಟ. ವಿಡಿಯೊ ವೀಕ್ಷಣೆಯ ಅನುಭವ ಪರವಾಗಿಲ್ಲ. ಇದು ಹೈಡೆಫಿನಿಶನ್ ವಿಡಿಯೊ ಪ್ಲೇ ಮಾಡುತ್ತದೆ.

ಆದರೆ 4k ವಿಡಿಯೊ ಪ್ಲೇ ಮಾಡುವುದಿಲ್ಲ. ಈ ಫೋನಿನ ಆಡಿಯೊ ಇಂಜಿನ್ ಚೆನ್ನಾಗಿದೆ. ಆದರೆ ಫೋನಿನ ಜೊತೆ ಇಯರ್‌ಬಡ್ ಅಥವಾ ಇಯರ್‌ಫೋನ್ ನೀಡಿಲ್ಲ. ಉತ್ತಮ ಇಯರ್‌ಫೋನ್ ಅಥವಾ ಹೆಡ್‌ಫೋನ್ ಬಳಸಿದರೆ ಉತ್ತಮ ಸಂಗೀತವನ್ನು ಆಲಿಸುವ ಅನುಭವ ಪಡೆಯಬಹುದು.

ಇದರಲ್ಲಿರುವುದು 13 ಮೆಗಾಪಿಕ್ಸೆಲ್‌ನ ಕ್ಯಾಮೆರಾ. ಎಲ್ಲ ಏಸುಸ್ ಫೋನ್‌ಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶ ಇದರಲ್ಲೂ ಇದೆ. ಅದೇ ಸೌಲಭ್ಯಗಳು ಇಲ್ಲೂ ಇವೆ. ಕ್ಯಾಮೆರಾದ ಗುಣಮಟ್ಟ ಪರವಾಗಿಲ್ಲ. ಪೂರ್ತಿ ಹೈಡೆಫಿನಿಶನ್ ವಿಡಿಯೊ (1080p) ಚಿತ್ರೀಕರಣ ಸೌಲಭ್ಯ ಇದೆ. ಆದರೆ 4k ವಿಡಿಯೊ ಚಿತ್ರೀಕರಣ ಇಲ್ಲ. ಈ ಫೋನಿನ ಹೆಚ್ಚುಗಾರಿಕೆ ಇರುವುದೇ ಇದರ ವಿಡಿಯೊ ಚಿತ್ರೀಕರಣದಲ್ಲಿ. ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಇತ್ತೀಚೆಗೆ ಲೈವ್ ವಿಡಿಯೊ ಪ್ರಸಾರದ ಸೌಲಭ್ಯ ನೀಡಿದ್ದಾರೆ.

ಈ ಫೋನನ್ನು ಅಂಥವರಿಗಾಗಿಯೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಿದ್ದಾರೆ. ವಿಡಿಯೊ ಶೂಟಿಂಗ್ ಮಾಡುತ್ತಿದ್ದಂತೆ ಬ್ಯೂಟಿಫಿಕೇಶನ್ ಎಂಬ ಸೌಲಭ್ಯವನ್ನು ಬಳಸಿ ವಿಡಿಯೊವನ್ನು ಉತ್ತಮಪಡಿಸಬಹುದು.

ವಿಡಿಯೊ ಚಿತ್ರೀಕರಣ ಮಾಡುವಾಗ ಆಡಿಯೊವನ್ನು ಸ್ಟಿರಿಯೊ ವಿಧಾನದಲ್ಲಿ ರೆಕಾರ್ಡಿಂಗ್ ಮಾಡಿಕೊಳ್ಳಬಹುದು. ಸ್ವಂತೀ ತೆಗೆಯಲು ವಿಶೇಷ ಸವಲತ್ತು ನೀಡಿದ್ದಾರೆ. ಫೋಟೊವನ್ನು ಹಲವು ಆಯ್ಕೆಗಳನ್ನು ಬಳಸಿ ಸುಧಾರಿಸಬಹುದು.

ನಿಮ್ಮ ಮುಖವನ್ನು ಹಲವು ಸವಲತ್ತು ಬಳಸಿ ಎಷ್ಟೆಲ್ಲ ರೀತಿಯಲ್ಲಿ ಬದಲಾವಣೆ ಮಾಡಬಹುದೆಂದರೆ ಎಲ್ಲವನ್ನೂ ಬಳಸಿದರೆ ನಿಮಗೇ ನಿಮ್ಮ ಫೋಟೊ ಬೇರೆಯವರ ಫೋಟೊದಂತೆ ಕಂಡುಬಂದರೆ ಆಶ್ಚರ್ಯವಿಲ್ಲ! ಸ್ವಂತೀ ತೆಗೆಯಲು ಫ್ಲಾಶ್ ನೀಡಿರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು.  

ಆಂಡ್ರಾಯ್ಡ್‌ 7 ಬಂದು ಹಲವು ಸಮಯವಾಗಿದ್ದರೂ ಇವರು ಇನ್ನೂ ಆಂಡ್ರಾಯ್ಡ್‌ 6.0ರಲ್ಲೇ  ಇದ್ದಾರೆ. ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ ಹಾಗೂ ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್ ಕೂಡ ಇದೆ.

ಈ ಫೋನಿನ ಬ್ಯಾಟರಿ ಶಕ್ತಿ ಅಷ್ಟಕ್ಕಷ್ಟೆ. ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ, ಅಂದರೆ ಹತ್ತರಿಂದ ಹದಿನೈದು ಸಾವಿರದ ಆಸುಪಾಸಿನಲ್ಲಿ ಹಲವು ಉತ್ತಮ ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆ ನಿಟ್ಟಿನಲ್ಲಿ ಯೋಚಿಸಿದರೆ ಈ ಫೋನಿನ ಬೆಲೆ ಸ್ವಲ್ಪ ಜಾಸ್ತಿಯಾಯಿತು ಎನ್ನಬಹುದು.

ಒಟ್ಟಿನಲ್ಲಿ ಹೇಳುವುದಾದರೆ ಲೈವ್ ವಿಡಿಯೊದ ಹುಚ್ಚಿನವರು ನೀವಾಗಿದ್ದರೆ ನೀವು ಈ ಫೋನ್ ಕೊಳ್ಳಬಹುದು. ಅದು ಬಿಟ್ಟರೆ ಉಳಿದಂತೆ ಯಾವ ರೀತಿ ಯೋಚಿಸಿದರೂ ಈ ಫೋನ್‌ಗೆ ಬೆಲೆ ಜಾಸ್ತಿ ಎಂದೇ ಹೇಳಬಹುದು.  

****
ಗುಣವೈಶಿಷ್ಟ್ಯಗಳು

ಪ್ರೊಸೆಸರ್ : 1.4 ಗಿಗಾಹರ್ಟ್ಸ್ ವೇಗದ 4 ಹೃದಯಗಳ ಪ್ರೊಸೆಸರ್ (Snapdragon 400)
ಗ್ರಾಫಿಕ್ಸ್ ಪ್ರೊಸೆಸರ್ : ಆಡ್ರಿನೋ 305  
ಮೆಮೊರಿ : 2 + 16 ಗಿಗಾಬೈಟ್  
ಪರದೆ : 5 ಇಂಚು ಗಾತ್ರದ 1920 x 720 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ , ಸ್ಪರ್ಶಸಂವೇದಿ ಪರದೆ  
ಕ್ಯಾಮೆರಾ : 13 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್, 5 ಮೆಗಾಪಿಕ್ಸೆಲ್ ಸ್ವಂತೀ + ಫ್ಲಾಶ್  
ಸಿಮ್ : 2 ನ್ಯಾನೊ ಅಥವಾ 1 ನ್ಯಾನೊ ಮತ್ತು ಮೆಮೊರಿ ಕಾರ್ಡ್  
ಬ್ಯಾಟರಿ : 2650 mAh  
ಗಾತ್ರ : 141 x 71.7 x 8 ಮಿಮೀ.  
ತೂಕ : 120 ಗ್ರಾಂ  
ಬೆರಳಚ್ಚು ಸ್ಕ್ಯಾನರ್ : ಇಲ್ಲ  
ಅವಕೆಂಪು ದೂರನಿಯಂತ್ರಕ : ಇಲ್ಲ  
ಎಫ್.ಎಂ. ರೇಡಿಯೊ : ಇಲ್ಲ  
ಕಾರ್ಯಾಚರಣ ವ್ಯವಸ್ಥೆ  : ಆಂಡ್ರಾಯ್ಡ್‌ 6.0.1 + ಝೆನ್ ಯುಐ  
ಬೆಲೆ : ₹9,999

****
ವಾರದ ಆ್ಯಪ್:  ಎಂಪಿ3 ಹಾಡು ಸಂಪಾದಿಸಿ
ಎಂಪಿ3 ವಿಧಾನದಲ್ಲಿ ಹಾಡು, ಸಂಗೀತದ ಫೈಲ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಹಾಕಿಕೊಳ್ಳದವರು ಯಾರಾದರೂ ಇದ್ದೀರಾ? ಖಂಡಿತ ಇರಲಾರರು.

ಈ ಹಾಡುಗಳ ಫೈಲ್‌ಗಳನ್ನು ಜೋಡಿಸುವುದು, ಕತ್ತರಿಸುವುದು, ಎಲ್ಲ ಮಾಡಬೇಕಾ? ಹಾಗಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Timbre: Cut, Join, Convert mp3 ಎಂದು ಹುಡುಕಬೇಕು ಅಥವಾ bit.ly/gadgetloka281 ಜಾಲತಾಣಕ್ಕೆ ಭೇಟಿ ನೀಡಬೇಕು. ಆಡಿಯೊ ಫೈಲುಗಳನ್ನು ಮಾತ್ರವಲ್ಲ, ವಿಡಿಯೊ ಫೈಲುಗಳನ್ನೂ ಇದು ಸಂಪಾದನೆ ಮಾಡಬಲ್ಲುದು.

ಆಡಿಯೊ ಹಾಗೂ ವಿಡಿಯೊ ಫೈಲುಗಳನ್ನು ಒಂದು ವಿಧಾನದಿಂದ ಇನ್ನೊಂದು ವಿಧಾನಕ್ಕೆ ಪರಿವರ್ತನೆ ಮಾಡಲೂ ಇದನ್ನು ಬಳಸಬಹುದು. ನೀವು ರೆಕಾರ್ಡಿಂಗ್ ಮಾಡಿರುವ ವಿಡಿಯೊದಿಂದ ಧ್ವನಿಯನ್ನು ತೆಗೆಯಬೇಕೆಂದರೆ ಅಥವಾ ವಿಡಿಯೊದಿಂದ ಧ್ವನಿಯನ್ನು ಮಾತ್ರ ಪ್ರತ್ಯೇಕಿಸಿ ಎಂಪಿ3 ಆಗಿ ಉಳಿಸಬೇಕಿದ್ದರೆ ಕೂಡ ಈ ಕಿರುತಂತ್ರಾಂಶವನ್ನು (ಆ್ಯಪ್) ಬಳಸಬಹುದು.
****
ಗ್ಯಾಜೆಟ್‌ ಸುದ್ದಿ: ಐಫೋನ್ ಪಾಸ್‌ವರ್ಡ್‌ ನೀಡದ್ದಕ್ಕೆ ಶಿಕ್ಷೆ
ಅಮೆರಿಕದ ನ್ಯಾಯಾಲಯದಲ್ಲಿ ದಾವೆಯೊಂದರ ವಿಚಾರಣೆಯ ಸಂದರ್ಭದಲ್ಲಿ ತನ್ನ ಐಫೋನಿನ ಪಾಸ್‌ವರ್ಡ್ ನೀಡುವಂತೆ ಆರೋಪಿಗೆ ತಾಕೀತು ಮಾಡಲಾಗಿತ್ತು. ಹತ್ತು ತಿಂಗಳ ಹಿಂದೆ ಫೋನ್ ಬಳಸಿದ್ದು, ಈಗ ಪಾಸ್‌ವರ್ಡ್ ನೆನಪಿಲ್ಲ ಎಂಬುದು ಆತನ ಸಮಜಾಯಿಷಿ ಆಗಿತ್ತು.

ಆದರೆ ನ್ಯಾಯಾಧೀಶರು ಈ ವಾದವನ್ನು ಒಪ್ಪಲಿಲ್ಲ. ಪಾಸ್‌ವರ್ಡ್‌ ನೀಡದ್ದಕ್ಕೆ ಆತನಿಗೆ ಆರು ತಿಂಗಳು ಶಿಕ್ಷೆ ವಿಧಿಸಲಾಗಿದೆ. ಇಂತಹದೇ ಇನ್ನೊಂದು ಸಂದರ್ಭದಲ್ಲಿ ಪಾಸ್‌ವರ್ಡ್ ಮರೆತು ಹೋಗಿದೆ ಎಂಬ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತ್ತು. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದನ್ನು ಅಲ್ಲಿಯ ಸರ್ವೋಚ್ಚ ನ್ಯಾಯಾಲಯ ಅಂತಿಮ ತೀರ್ಮಾನ ನೀಡಬೇಕಾಗಿದೆ.

****
ಗ್ಯಾಜೆಟ್‌ ಸಲಹೆ
ಶೇಷಾದ್ರಿ ಅವರ ಪ್ರಶ್ನೆ: ಜಸ್ಟ್ ಕನ್ನಡ ಕೀಬೋರ್ಡ್‌ ಬಳಸಿ ರ್‍್ಯಾ ಎಂದು (ರ್‍್ಯಾಂಕ್, ರ್‍್ಯಾಲಿ, ಇತ್ಯಾದಿಗಳಲ್ಲಿ) ಟೈಪಿಸುವುದು ಹೇಗೆ?

ಉ: ಜಸ್ಟ್ ಕನ್ನಡ ಕೀಬೋರ್ಡ್‌ನಲ್ಲಿ ಸ್ಪೇಸ್ ಬಾರ್ ಪಕ್ಕದಲ್ಲಿ <|> ಎಂದು ಬರೆದಿರುವ ಕೀ ಇದೆ. ಇದನ್ನು ಬಳಸಬೇಕು. ರ್‍ಯ ಪಡೆಯಲು ಈ ರೀತಿ ಟೈಪಿಸಿ – ರ + <|> + ರ್ + ಯ

****
ಗ್ಯಾಜೆಟ್‌ ತರ್ಲೆ
ನಿಮಗೆ ಗೊತ್ತಾ? ಪ್ರಪಂಚದ ಯಾವುದೇ ದೇಶದ ಯಾವುದೇ ನಗರಕ್ಕೂ ಫೇಸ್‌ಬುಕ್‌ನಲ್ಲಿ ಘೋಷಿಸದೇ ಪ್ರಯಾಣ ಮಾಡಲು ಸಾಧ್ಯ ಎಂದು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry