ಲೋಕಪಾಲದ ವಿರುದ್ಧ ಮುಗಿಯದ ನಾಟಕ...

7

ಲೋಕಪಾಲದ ವಿರುದ್ಧ ಮುಗಿಯದ ನಾಟಕ...

ಕುಲದೀಪ ನಯ್ಯರ್
Published:
Updated:
ಲೋಕಪಾಲದ ವಿರುದ್ಧ ಮುಗಿಯದ ನಾಟಕ...

ದಕ್ಷಿಣ ಏಷ್ಯಾ ದೇಶಗಳಲ್ಲಿ ಈಚೆಗೆ ಭ್ರಷ್ಟಾಚಾರ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಜನಸಾಮಾನ್ಯರು ಅದರೊಂದಿಗೆ ಸಹಜವಾಗಿಯೇ ಬದುಕತೊಡಗಿದ್ದಾರೆ. ಅದರಲ್ಲೇನು ವಿಶೇಷ ಎನ್ನುವ ಸ್ಥಿತಿಗೆ ಬಂದು ತಲುಪಿದಂತಿದೆ.

 

ಅದರ ಬಗ್ಗೆ ಜನರಿಗೆ ಕೋಪ, ಸಿಟ್ಟು ಸಿಡುಕುಗಳಿಲ್ಲವೆಂದಲ್ಲ. ಆದರೆ ಅತ್ಯಂತ ಉನ್ನತ ಸ್ಥಾನಗಳಲ್ಲಿರುವವರೇ ಅದರಲ್ಲಿ ಭಾಗಿಯಾಗಿದ್ದಾರೆಂಬುದು ಗೊತ್ತಾದಾಗ ನಮಗಿನ್ನು ಭ್ರಷ್ಟಾಚಾರದಿಂದ ಮುಕ್ತಿ ಸಾಧ್ಯವೇ ಇಲ್ಲ ಎಂಬ ಹತಾಶೆ ಜನಸಾಮಾನ್ಯರಲ್ಲಿ ತುಂಬಿಕೊಂಡಂತಿದೆ.ಭಾರತದ ಮಟ್ಟಿಗೆ ಹೇಳುವುದಿದ್ದರೆ ಆಡಳಿತಗಾರರು ಒಂದಲ್ಲಾ ಒಂದು ಹಗರಣಗಳಲ್ಲಿ ಸಿಲುಕಿಕೊಳ್ಳುತ್ತಿರುವುದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಇದೆ. ಆದರೆ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಇಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಅಧಿಕಾರದ ಗದ್ದುಗೆಯ ಮೇಲೆ ಕುಳಿತ ಭ್ರಷ್ಟರ ತಲೆಗಳುರುಳಿದ ಪರಿಗಳನ್ನು ಗಮನಿಸಿರುವ ನೆರೆಯ ರಾಷ್ಟ್ರಗಳಲ್ಲಿ ಪ್ರಜಾಸತ್ತೆಯ ಬಗ್ಗೆ ಆತ್ಮವಿಶ್ವಾಸ ಮೂಡುವಂತಾಗಿದೆ. ಹೀಗಾಗಿ ಅಲ್ಲಿಯೂ ಭ್ರಷ್ಟಶಕ್ತಿಗಳ ವಿರುದ್ಧ ಹೋರಾಟದ ಧ್ವನಿಗಳು ಸದ್ದು ಮಾಡತೊಡಗಿವೆ.ಭ್ರಷ್ಟಾಚಾರದ ವಿರುದ್ಧದ ಹರಿತವಾದ ಆಯುಧವಾಗಿರುವ ಲೋಕಪಾಲ ಮಸೂದೆಗೆ ಮತ್ತೆ ಈ ನೆಲದಲ್ಲಿ ಸೋಲಾಗಿರುವ ಬಗ್ಗೆ ಆ ದೇಶಗಳ ಮಂದಿ ಆತಂಕದಿಂದ ಗಮನಿಸಿದ್ದಾರೆ. ಕಳೆದ 42 ವರ್ಷಗಳಿಂದಲೂ ಈ ಮಸೂದೆ ಇದೇ ಸಮಸ್ಯೆ ಎದುರಿಸುತ್ತಿದೆ.ಹಿಂದಿನ ಸರ್ಕಾರಗಳು, ಅದರಲ್ಲಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ವಿಭಿನ್ನ ಕಾರಣಗಳೊಂದಿಗೆ ಈ ಮಸೂದೆಗೆ ಅಡ್ಡಗಾಲು ಹಾಕಿರುವುದು ಎಲ್ಲರಿಗೂ ಗೊತ್ತಿರುವಂತಹದ್ದೇ.

 

ಒಮ್ಮೆಯಂತೂ ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿತಾದರೂ, ಚರ್ಚೆ ಮಧ್ಯರಾತ್ರಿ ದಾಟಿದ್ದರಿಂದ ಕಲಾಪವನ್ನೇ ಮುಂದೂಡಲಾಯಿತು. ಈ ಸಲ ಅದೇ ತೆರನಾದ ಕ್ರಿಯೆಯನ್ನು ಇನ್ನಷ್ಟು ಜಾಣತನದಿಂದ ಮಾಡಲಾಗಿದೆ ಅಷ್ಟೆ. ಎಲ್ಲದಕ್ಕೂ ನೆಪಗಳನ್ನು ಕಂಡುಕೊಳ್ಳಲಾಗುತ್ತಿದೆ.ರಾಜ್ಯಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಆಗುಹೋಗುಗಳಿಗೆ ಸಂಬಂಧಿಸಿದ ಘಟನಾವಳಿಗಳನ್ನು ನಾನು ಬಹಳಷ್ಟು ಕಂಡಿದ್ದೇನೆ. ಮಸೂದೆಗೆ ಆ ಸೋಮವಾರ ಕೊನೆಗೂ ಅನುಮೋದನೆ ಸಿಗಬಹುದಾದ ಸಾಧ್ಯತೆಯ ಬಗ್ಗೆ ಕುತೂಹಲದಿಂದ ಕಾದಿದ್ದೆ. ಆದರೆ ರಾಜ್ಯಗಳಲ್ಲಿಯೂ ಲೋಕಾಯುಕ್ತ ನೇಮಕವು ಕೇಂದ್ರದ ಅಧಿಕಾರವಾಗಬಾರದು, ಆ ಅಧಿಕಾರ ರಾಜ್ಯಗಳಿಗೇ ಇರಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯಲ್ಲಿಯೇ ವಿಷಯಾಂತರವಾಗಿ ಹೋಯಿತು.ಕಲಾಪದಲ್ಲಿ ಎರಡು ಅಂಶಗಳು ಗಮನ ಸೆಳೆದವು. ಸಿಬಿಐ ತನಿಖಾ ಸಂಸ್ಥೆಯ ಮೇಲಿನ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿಯೇ ಇರಬೇಕಾ ಎನ್ನುವುದು ಒಂದು. ಲೋಕಪಾಲ್ ನೇಮಕಕ್ಕೆ ಆಯ್ಕೆ ಮಂಡಳಿಯ ರಚನೆ. ಪ್ರಸಕ್ತ ಈ ಮಂಡಳಿಯಲ್ಲಿ ಸರ್ಕಾರದ ಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಈಗಾಗಲೇ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಈ ಪ್ರಶ್ನೆಗಳಿಗೆಲ್ಲಾ ಸಮರ್ಪಕ ಉತ್ತರ ಕಂಡುಕೊಳ್ಳುತ್ತದೆ ಎಂದು ಬಹಳ ನಿರೀಕ್ಷೆ ಇತ್ತು. ಏಕೆಂದರೆ ಪ್ರಬಲ ಲೋಕಪಾಲ್ ಮಸೂದೆ ತಮ್ಮ ಗುರಿ ಎಂದು ಕಾಂಗ್ರೆಸ್ ಪದೇ ಪದೇ ಹೇಳಿಕೊಳ್ಳುತ್ತಾ ಬಂದಿತ್ತಲ್ಲ. ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ಲೋಕಪಾಲ್ ಮಸೂದೆಯ ಕರಡನ್ನು ಪುನರ್ ಪರಿಶೀಲನೆಗೆ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದರು. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳುವುದು ಇನ್ನಷ್ಟು ಮುಂದಕ್ಕೆ ಹೋದಂತಾಯಿತು. ಮಸೂದೆ ಬಗ್ಗೆ ಕಾಂಗ್ರೆಸ್ ಬಹಳ ಆಸಕ್ತಿ ತೋರಿದಂತೆ ಕಾಣಿಸಿಕೊಂಡಿತಾದರೂ, ಅದಕ್ಕೆ ಇಂತಹದ್ದೊಂದು ನೆಪವೂ ಅಗತ್ಯವಿತ್ತು.ಇಂತಹ ಸಂದಿಗ್ಧತೆಯಲ್ಲಿಯೇ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಅಲ್ಲಿಯೇ ಉಪಸ್ಥಿತರಿದ್ದ  ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ `ನಿಮಗೆ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲು ಮನಸ್ಸು ಇದೆಯಾ, ಇಲ್ಲವಾ ನೇರವಾಗಿ ಹೇಳಿಬಿಡಿ~ ಎಂದು ದೊಡ್ಡ ಧ್ವನಿಯಲ್ಲಿ ಪ್ರಶ್ನಿಸಿದ್ದರು. ಆಗ ಮನಮೋಹನ್ ಸಿಂಗ್ ಅವರು ಯಾವುದೇ ಭಾವನೆಗಳನ್ನು ವ್ಯಕ್ತ ಪಡಿಸದೆ ಮೌನವಾಗಿದ್ದರು. ಆಯ್ಕೆ ಸಮಿತಿಯ ನೇಮಕಕ್ಕೆ ಅದಾಗಲೇ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು.ಅರುಣ್ ಜೇಟ್ಲಿಯವರು ಈ ಮಸೂದೆ ಜಾರಿಗೆ ತರುವ ದಿಸೆಯಲ್ಲಿ ಅತೀವ ಒತ್ತಡ ಹೇರುತ್ತಿದ್ದವರಲ್ಲಿ ಒಬ್ಬರು. ಆದರೆ ಇವರೂ ಈಚೆಗೆ ನಿರಾಸಕ್ತಿ ತೋರತೊಡಗಿದರು. ಸರ್ಕಾರದ ನಿಲುವಿಗೇ ತಾಳ ಹಾಕಿದಂತೆ ಕಾಣಿಸುತಿತ್ತು. ಬಿಜೆಪಿಯ ಸ್ಥಿತಿ ಈ ರೀತಿ ಇರುವಾಗ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.

 

ಮುಲಾಯಂ ಅವರಿಗೆ ಸಂಬಂಧಿಸಿದ ಹತ್ತು ಹಲವು ಪ್ರಕರಣಗಳು ಸಿಬಿಐ ತನಿಖಾ ಪಟ್ಟಿಯಲ್ಲಿದೆ. ಇಂತಹ ಸಂದಿಗ್ಧತೆಯಲ್ಲಿ ಮುಲಾಯಂ ಸರ್ಕಾರದ ಪರವಾಗಿ ನಿಂತಿರಬಹುದೇನೊ. ಆದರೆ ಬಿಜೆಪಿಗೆ ಏನಾಗಿದೆ. ವಿರೋಧ ಪಕ್ಷವೊಂದು ಈ ಮಟ್ಟಿಗೆ ತನ್ನ ನಿಲುವುಗಳನ್ನು ಬದಲಿಸಿಕೊಂಡಿರುವುದು ತೀರಾ ಅಪರೂಪ ಎನಿಸುತ್ತದೆ.ಈ ಗೊತ್ತುವಳಿ ಚರ್ಚೆಗೆ ಬಂದಾಗ ಬಿಜೆಪಿಯ ಬಹುತೇಕ ಸದಸ್ಯರು ಹಾಜರಿರಲಿಲ್ಲ ಎಂಬ ಸಮಜಾಯಿಷಿ ಕೇಳಿ ಬಂದಿತ್ತು. ಇಲ್ಲಿ ಬಿಜೆಪಿ ಮಸೂದೆಯ ಪರ ದೊಡ್ಡ ಧ್ವನಿ ಎತ್ತುತಿತ್ತಾ, ವಿರುದ್ಧ ನಿಲ್ಲುತಿತ್ತಾ ಎನ್ನುವುದು ಮುಖ್ಯವಲ್ಲ. ಆ ಪಕ್ಷ ವಿಷಯದ ಬಗ್ಗೆ ಅದೆಷ್ಟು ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎನ್ನುವ ಪ್ರಶ್ನೆಯನ್ನು ಕೇಳಿ ಕೊಳ್ಳಬೇಕಾಗುತ್ತದೆ.ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಡಪಕ್ಷಗಳನ್ನು ಹೊರತು ಪಡಿಸಿ ಬಹುತೇಕ ರಾಜಕೀಯ ಪಕ್ಷಗಳು ಲೋಕಪಾಲ್ ಬಗ್ಗೆ ಒಲವು ಇಟ್ಟುಕೊಂಡಂತೆ ಕಾಣಿಸುತ್ತಿಲ್ಲ. ತಮ್ಮ ಪಕ್ಷದ ಮುಖಂಡರು ಒಂದಲ್ಲಾ ಒಂದು ರೀತಿ ಸಿಲುಕಿಕೊಳ್ಳಬಹುದೆಂಬ ಆತಂಕ ಅವರಲ್ಲೆಲ್ಲಾ ಕಂಡು ಬರುವಂತಿದೆ. ಇಂತಹ ಸಂದರ್ಭದಲ್ಲಿ ಅಣ್ಣಾ ಹಜಾರೆ ಅವರ ಆಂದೋಲನ ಸ್ಥಗಿತಗೊಳ್ಳಬಾರದು ಎಂಬ ಆಶಯ ನನ್ನದಾಗಿದೆ. ಇಲ್ಲಿ ಜನರೇ ನಿರ್ಧಾರ ತೆಗೆದುಕೊಳ್ಳಬೇಕೆನಿಸುತ್ತದೆ.ಅಣ್ಣಾ ಆಂದೋಲನಕ್ಕೆ ಜುಲೈ 25ರಿಂದ ಮತ್ತೆ ಚಾಲನೆ ಸಿಗಲಿದೆ ಎನ್ನಲಾಗಿದೆ. ಅಣ್ಣಾ ಚಳವಳಿಗೆ ಹಿಂದಿನಂತಹ ವ್ಯಾಪಕ ಬೆಂಬಲ ಸಿಗಲಿದೆ ಎನ್ನುವುದಂತು ಖಚಿತ. ಅಣ್ಣಾ ಆಶಯದ ಬಗ್ಗೆ ಜನರಲ್ಲಿ ಒಂದಿನಿತೂ ನಂಬಿಕೆ ಕಡಿಮೆಯಾಗಿಲ್ಲ. ಆದರೆ ಅಣ್ಣಾ ಅವರ ಸುತ್ತಲೂ ಕೆಲವು ಅನಪೇಕ್ಷಿತ ವ್ಯಕ್ತಿಗಳು ಕಂಡು ಬರುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಹೀಗಾದರೆ ಪ್ರಾಮಾಣಿಕವಾದ, ಜಾತ್ಯತೀತ ನೆಲೆಯ ಹೊಸತೊಂದು ವೇದಿಕೆಯು ಭುಗಿಲಾಗುವುದಕ್ಕೆ ಅಡ್ಡಿಯಾಗಬಹುದಾ ಎಂಬ ಚಿಂತೆಯೂ ಕೆಲವು ಸಲ ನನ್ನನ್ನು ಕಾಡಿದೆ.ಈ ಸಲ ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಬಹಳಷ್ಟು ಮಾತನಾಡಿದೆ. ಆದರೆ ವಿದೇಶದಲ್ಲಿ ನಮ್ಮ ಕಪ್ಪು ಹಣ ಅದೆಷ್ಟು ಇದೆ ಎಂಬ ಬಗ್ಗೆ ಯಾವುದೇ ನಿಖರ ಅಂಕಿ ಅಂಶಗಳನ್ನು ನೀಡಿಲ್ಲ. ಕಪ್ಪು ಹಣವನ್ನು ವಾಪಸು ತರುವಲ್ಲಿ ಇದೀಗ ಸರ್ಕಾರ ನಡೆಸಿರುವ ಪ್ರಯತ್ನ ಮತ್ತು ರೂಪಿಸಿರುವ ಕಾರ್ಯಕ್ರಮಗಳು ತೀರಾ ಹೊಸದೇನಲ್ಲ. ಹಿಂದೆಯೂ ಸರ್ಕಾರ ಇದೇ ತೆರನಾದ ಹೆಜ್ಜೆಗಳನ್ನಿಟ್ಟಿತ್ತು.ಆದರೆ ನಿರೀಕ್ಷಿತ ಪ್ರಯೋಜನಗಳಾಗಿರಲಿಲ್ಲ. ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆಗಳಲ್ಲಿ ತಮ್ಮ ಬೇರುಗಳನ್ನಿಳಿಸಿಕೊಂಡಿರುವ ಕಪ್ಪುಹಣದ ದೊರೆಗಳು ರಾಜಕೀಯ ಶಕ್ತಿಗಳ ಕೃಪೆಯನ್ನೂ ಗಳಿಸಿರುವುದು ರಹಸ್ಯವೇನಲ್ಲ.ಕೆಲವು ರಾಜ್ಯಗಳಲ್ಲಿ ಸಚಿವರುಗಳೇ ಇಂತಹ ಜಾಲಗಳಲ್ಲಿರುವುದನ್ನು ಅಲ್ಲಗಳೆಯುವಂತಿಲ್ಲ. ಅಲ್ಲಿನ ಸರ್ಕಾರಗಳು ಅಂತಹವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದಂತಹ ಸ್ಥಿತಿಯಲ್ಲಿವೆ. ಅಂತಹ ಸಂದರ್ಭದಲ್ಲಿ ಲೋಕಪಾಲ್ ವ್ಯವಸ್ಥೆ ಅದ್ಭುತವಾಗಿ ಕೆಲಸ ಮಾಡಲು ಸಾಧ್ಯವಿದೆ.ಇಂತಹ ಆಗುಹೋಗುಗಳನ್ನೆಲ್ಲಾ ಸೂಕ್ಷ್ಮವಾಗಿ ಗ್ರಹಿಸುತ್ತಾ ಹೋದಾಗ ಲೋಕಪಾಲ ಮಸೂದೆಯ ವಿರುದ್ಧ ಜನಪ್ರತಿನಿಧಿಗಳ ಸಭೆಯಲ್ಲಿ ನಡೆದಿರುವ ನಾಟಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ ಎಲ್ಲಾ ಕಾಲದಲ್ಲಿಯೂ ಎಲ್ಲರನ್ನೂ ವಂಚಿಸುತ್ತಾ ಹೋಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಅರಿತುಕೊಳ್ಳುವುದು ಒಳಿತು.

ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry