ಬುಧವಾರ, ಮಾರ್ಚ್ 3, 2021
31 °C

ಲೋಕಾಯತದ ಬಿ.ವಿ.ವೀರಭದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಾಯತದ ಬಿ.ವಿ.ವೀರಭದ್ರಪ್ಪ

ಈಚೆಗೆ ನಾನು ಸಂಸ್ಕೃತದಲ್ಲಿರುವ ಕೆಲವು ಶಾಸನ ಪದ್ಯಗಳಿಗೆ ಅರ್ಥ ಹೇಳಿಸಿಕೊಳ್ಳಲೆಂದು ಡಾ. ಜಿ.ರಾಮಕಷ್ಣ ಅವರನ್ನು ಹೋಗಿ ಕಾಣಬೇಕಾಯಿತು. ಸಂಸ್ಕೃತ ವಿದ್ವಾಂಸರಾದ ಜಿ.ಆರ್ ಅವರ ಮನೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿದೆ.ನಾನು ಹೋದಾಗ, ಅವರು ಒಂದು ಬಗೆಯ ನಿರಾಳ ಮನಃಸ್ಥಿತಿಯಲ್ಲಿದ್ದರು. ಕಾರಣ, ಅದೇತಾನೇ ದೇವೀಪ್ರಸಾದ ಚಟ್ಟೋಪಾಧ್ಯಾಯರ ಪ್ರಸಿದ್ಧ ಗ್ರಂಥವಾದ `ಲೋಕಾಯತ~ದ ಅನುವಾದವನ್ನು ಮುಗಿಸಿದ್ದರು. `ಲೋಕಾಯತ~ ನನ್ನ ಪ್ರಿಯವಾದ ಪುಸ್ತಕಗಳಲ್ಲೂ ಒಂದು. `ಲೋಕಾಯತ~ವನ್ನು ಒಳಗೊಂಡಂತೆ ದೇವೀಪ್ರಸಾದರ ಚಿಂತನೆಗಳನ್ನು ಕನ್ನಡಿಗರೆಲ್ಲರಿಗೆ ಸಿಗುವಂತೆ ಮಾಡಿದವರೇ ಜಿ.ಆರ್ ಅವರು. ಅವರ ನಂತರ, ಈ ಪುಸ್ತಕದ ಮಹತ್ವವನ್ನು ನನಗೆ ಮನಗಾಣಿಸಿದವರು, ಮತ್ತೊಬ್ಬ ಮಾರ್ಕ್ಸ್‌ವಾದಿ ಚಿಂತಕರಾದ ಪ್ರೊ. ಎಸ್.ಎಸ್.ಹಿರೇಮಠ ಅವರು. ಹಿರೇಮಠರು, ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಮಾಡಿದ ಕರ್ನಾಟಕ ಅಧ್ಯಯನಗಳ ದೃಷ್ಟಿಕೋನವನ್ನು ರೂಪಿಸಿದ್ದೇ ದೇವೀಪ್ರಸಾದ್ ಹಾಗೂ ಶಂಬಾ ಜೋಶಿಯವರ ಕೂಡು ಚಿಂತನೆ. ಕನ್ನಡದಲ್ಲಿ `ಲೋಕಾಯತ~ವನ್ನು ಮತ್ತೊಮ್ಮೆ ಓದುವ ಅವಕಾಶ ಒದಗಿಸಿರುವುದಕ್ಕಾಗಿ ಜಿ.ಆರ್ ಅವರಿಗೆ ಕೃತಜ್ಞತೆ ಸಲ್ಲಿಸಿದೆ.ಜಿ.ಆರ್ ಅವರಿಂದ ಬೀಳ್ಕೊಂಡು ನಾನು ದಾವಣಗೆರೆಗೆ ಬಂದೆ. ಕಾರಣ, ಹಿರಿಯ ಚಿಂತಕರಾದ ಪ್ರೊ.ಬಿ.ವಿ.ವೀರಭದ್ರಪ್ಪನವರಿಗೆ ಮುಕ್ಕಾಲು ಶತಮಾನ ತುಂಬಿದ್ದು, ಅವರದೊಂದು ಸಂದರ್ಶನ ಮಾಡಬೇಕಿತ್ತು. ವಿದ್ಯಾನಗರದಲ್ಲಿರುವ ಅವರ ಮನೆಗೆ ಹೋದಾಗ, ಅವರು ಉಪನಿಷತ್ತಿನ ಸಂಪುಟ ಓದುತ್ತ ಕುಳಿತಿದ್ದರು. ಜಿ.ರಾಮಕಷ್ಣ ಅವರ ಚಿಂತನೆಗಳಿಂದಲೂ `ಲೋಕಾಯತ~ ಗ್ರಂಥದಿಂದಲೂ ಪ್ರಭಾವಿತರಾಗಿರುವ ಬಿವಿವಿ, ತಮ್ಮ ಮನೆಗೆ `ಲೋಕಾಯತ~ ಎಂಬ ಹೆಸರನ್ನೇ ಇಟ್ಟಿದ್ದರು. ಪ್ರಖರ ವಿಚಾರವಾದಿಯೂ ನಿಷ್ಠುರಮಾತಿನ ವಾಗ್ಮಿಯೂ ಆಗಿದ್ದ ಮೈಸೂರಿನ ಕೆ.ರಾಮದಾಸ್ ಸಹ, ತಮ್ಮ ಮನೆಗೆ `ಚಾರ್ವಾಕ~ ಎಂಬ ಹೆಸರನ್ನಿಟ್ಟುಕೊಂಡಿದ್ದವರು. ರಾಮದಾಸರಿಗೆ ಪ್ರೇರಣೆ, ದೇವಿಪ್ರಸಾದರ ಚಿಂತನೆಗಳೊ ಅಲ್ಲವೊ ತಿಳಿಯದು. ಆದರೆ ಪ್ರಾಚೀನ ದಾರ್ಶನಿಕರಾದ ಚಾರ್ವಾಕರ ಮೇಲೆ, ಜನಪ್ರಿಯ ತತ್ವಶಾಸ್ತ್ರೀಯ ಚರ್ಚೆಗಳಲ್ಲಿರುವ ಪೂರ್ವಗ್ರಹಗಳನ್ನು ಒಡೆದು, ಚಾರ್ವಾಕರು ಹೇಗೆ ಜನಪರ ಚಿಂತಕರಾಗಿದ್ದರು ಎಂಬುದನ್ನು ವಿಶ್ಲೇಷಿಸಿದವರಲ್ಲಿ ದೇವೀಪ್ರಸಾದ್ ಮುಖ್ಯರೆಂಬುದು ಮಾತ್ರ ನಿಜ. `ಲೋಕಾಯತ~ದ ಹೆಸರನ್ನು ಮನೆಗೆ ಇಡುವುದಕ್ಕೆ ಉಂಟಾದ ಪ್ರೇರಣೆಯ ಬಗ್ಗೆ ನಾನು ಬಿವಿವಿಯವರನ್ನು ಕೆಣಕಿದೆ. ಅದಕ್ಕವರು `ವಾಸ್ತವಿಕ ಲೋಕಕ್ಕೆ ಸಂಬಂಧಪಟ್ಟದ್ದೇ ಲೋಕಾಯತ. ನಮ್ಮ ಪ್ರಾಚೀನ ಜನಸಾಮಾನ್ಯರ ಆಲೋಚನೆಯೇ ಲೋಕಾಯತ ದರ್ಶನ. ವೈದಿಕ ಸಂಸ್ಕೃತಿಯನ್ನು ವೈಭವೀಕರಿಸುವ ಪುಸ್ತಕಗಳನ್ನು ಓದಿದ್ದೆ. ಅವುಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಕಡಿಮೆ. ಆದರೆ ದೇವೀಪ್ರಸಾದರ ಈ ಕೃತಿ ಪ್ರಾಚೀನ ಭಾರತದ ಜನಸಾಮಾನ್ಯರ ಸಂಸ್ಕೃತಿಯನ್ನು ಬೇರೆ ದೃಷ್ಟಿಕೋನದಲ್ಲಿ ಪರಿಚಯಿಸಿತು~ ಎಂದರು. ಮನೆಗೆ `ಲೋಕಾಯತ~ ಎಂದು ಹೆಸರಿಟ್ಟಿದ್ದರಿಂದ ಅವರಿಗಾದ ಅನುಭವಗಳು ಸ್ವಾರಸ್ಯಕರವಾಗಿದ್ದವು. ಕೆಲವರು, `ಓಹೊ! ನೀವು ಲೋಕಾಯುಕ್ತ ಡಿಪಾರ್ಟ್‌ಮೆಂಟಿನವರಾ?~  ಅಂತ ಕೇಳುತ್ತಿದ್ದರಂತೆ; ಹಿನ್ನೆಲೆ ಗೊತ್ತಿದ್ದವರು ಮಾತ್ರ ವಿಷಾದದಿಂದ, `ಏನ್ರೀ ನೀವು? ಎಲ್ಲ ಬಿಟ್ಟುಬಿಟ್ಟು ಲೋಕಾಯತ ಅಂತ ಹೆಸರಿಟ್ಟಿದ್ದೀರಿ? ಆ ಲೋಕಾಯತರಿಗೆ ದೇವರಲ್ಲೇ ನಂಬಿಕೆ ಇರಲಿಲ್ಲ~ ಅಂತಿದ್ದರಂತೆ. ಅದಕ್ಕೆ ಬಿವಿವಿ, `ಹೌದು, ದೇವರು ಅಂದರೆ ನನಗೂ ಏನೂ ಗೊತ್ತಿಲ್ಲ. ಆದರೆ ಈ ಲೋಕ ಗೊತ್ತಿದೆ. ಅದಕ್ಕೆ ಲೋಕಾಯತ ಅಂತ ಹೆಸರಿಟ್ಟಿದೀನಿ~ ಅಂತ ಜವಾಬಿಸುತ್ತಿದ್ದರಂತೆ. ನನ್ನ ತಲೆಮಾರಿನ ಅನೇಕರು, ಪ್ರಾಯದಲ್ಲಿ `ಲಂಕೇಶ್ ಪತ್ರಿಕೆ~ಯಲ್ಲಿ ಪ್ರಕಟವಾಗುತ್ತಿದ್ದ ಬಿವಿವಿ ಲೇಖನಗಳನ್ನು ಓದಿಕೊಂಡು ಬೆಳೆದವರು. ಕೆಚ್ಚು ಬಿರುಸುಗಳೇ ಬಂಡವಾಳವಾಗಿದ್ದ ನನ್ನಂತಹ ಅನೇಕರಿಗೆ, ಕಣ್ಣೆದುರಿನ ಲೋಕವನ್ನು ತರ್ಕಬದ್ಧವಾಗಿ ವೈಚಾರಿಕತೆಯ ಮೂಲಕ ನೋಡಲು ಬೇಕಾದ ಹೊಸ ಕಣ್ನೋಟವನ್ನು ಅವು ಕೊಡುತ್ತಿದ್ದವು. ದೇವರು, ಧರ್ಮ, ಸಂಪ್ರದಾಯಗಳ ಹೆಸರಲ್ಲಿ, ಮತೀಯ ಮೌಢ್ಯಗಳಿಗೆ ಸಿಲುಕಿ ತಮ್ಮ ವಿವೇಚನಾ ಶಕ್ತಿಯನ್ನು ಒತ್ತೆಯಿಡದಂತೆ ಎಚ್ಚರಿಸುವ ಚಿಂತನೆಗಳನ್ನು ಕನ್ನಡ ಓದುಗರಿಗೆ ಸತತ ಮೂರು ದಶಕಗಳ ಕಾಲ ಬಿವಿವಿ ನೀಡಿದರು. ಅವರ `ವೇದಾಂತ ರೆಜಿಮೆಂಟ್~ ಹಾಗೂ `ಪೂರ್ವನಿಶ್ಚಿತ ದೃಷ್ಟಿಕೋನ~, ಈ ಹಿನ್ನೆಲೆಯಿಂದ ಈಗಲೂ ಕನ್ನಡದ ಮಹತ್ವದ ವೈಚಾರಿಕ ಕೃತಿಗಳು. ಬಿವಿವಿ ವೈಚಾರಿಕತೆಯ ವಿಶೇಷತೆಯೆಂದರೆ, ಅಧ್ಯಯನ, ವಿದ್ವತ್ತು ಮತ್ತು ಆಳವಾದ ಚಿಂತನೆ. ಎಚ್.ನರಸಿಂಹಯ್ಯನವರ ವೈಚಾರಿಕತೆಯಲ್ಲಿ ಆಧುನಿಕ ವಿಜ್ಞಾನದ ಹಿನ್ನೆಲೆಯಿತ್ತು; ಒಪ್ಪಿಸುವ ಸರಳತೆಯಿತ್ತು. ಆದರೂ ಅದು ಕಾಮನ್‌ಸೆನ್ಸ್ ಮಟ್ಟವನ್ನು ಬಿಟ್ಟು ಬಹಳ ಮೇಲಕ್ಕೆ ಹೋದಂತೆ ಅನಿಸುವುದಿಲ್ಲ; ಅದಕ್ಕೆ ಭಾರತದ ಜನಸಮುದಾಯಗಳ ಚರಿತ್ರೆ ಮತ್ತು ದರ್ಶನಗಳ ತಳಹದಿಯೂ ಕಡಿಮೆ. ಆದರೆ, ಬಿವಿವಿ ಅವರ ವೈಚಾರಿಕತೆ, ಪಂಡಿತ ತಾರಾನಾಥ ಅಥವಾ ಗೌರೀಶ ಕಾಯ್ಕಿಣಿ ಮಾದರಿಯದು; ಪ್ರಾಚೀನ ಭಾರತದ ದರ್ಶನ ಹಾಗೂ ಚರಿತ್ರೆಯ ವ್ಯಾಪಕ ಅಧ್ಯಯನದಿಂದ ಮೂಡಿದ್ದು.ಶಿವರಾಮ ಕಾರಂತ, ಪಂಡಿತ ತಾರಾನಾಥ, ಗೌರೀಶ ಕಾಯ್ಕಿಣಿ, ಎ.ಎನ್.ಮೂರ್ತಿರಾವ್, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಜಿ.ಆರ್, ಬಿವಿವಿ ಮುಂತಾದವರು ತಮ್ಮ ವೈಚಾರಿಕ ಬರೆಹಗಳ ಮೂಲಕ, ಕೆ.ರಾಮದಾಸ್ ಮುಂತಾದವರು ತಮ್ಮ ಪಾಠ ಮತ್ತು ಭಾಷಣಗಳ ಮೂಲಕ, ಕಡಿದಾಳು ಶಾಮಣ್ಣ, ಎಂ. ನಂಜುಂಡಸ್ವಾಮಿ ಮುಂತಾದವರು ತಮ್ಮ ಕ್ರಿಯಾಶೀಲತೆಯ ಮೂಲಕ, ಕರ್ನಾಟಕದ ಒಂದು ತಲೆಮಾರು ಹೊಸ ಮನಸ್ಸನ್ನು ಪಡೆದುಕೊಳ್ಳಲು ಕಾರಣರಾದರು. ಕರ್ನಾಟಕದ ಮನಸ್ಸನ್ನು ಕಟ್ಟುವಲ್ಲಿ ನಾಸ್ತಿಕ ಮಾನವತಾವಾದಿಗಳ ಕೊಡುಗೆ ಕಿರಿದೇನಲ್ಲ.  ಆದರೆ ಈ ನಾಸ್ತಿಕ ಮಾನವತಾವಾದಿ ವೈಚಾರಿಕತೆ, ಒಂದು ಹಂತದ ಬಳಿಕ ಅರಕೆಯನ್ನು ಮೂಡಿಸತೊಡಗುತ್ತದೆ. ಈ ಅರಕೆಯೆಂದರೆ- `ಧಾರ್ಮಿಕ~ ಎನಿಸಿಕೊಂಡ ಲೋಕಗಳಲ್ಲೂ ಇರುವ ಚೈತನ್ಯಶೀಲತೆಯನ್ನು ಕಾಣಲು ಆಗದೆ ಇರುವುದು; ಹಾಗೂ ಆಧುನಿಕ ಕಾಲದ ಮತೀಯ ರಾಜಕಾರಣದ ವಿಕಾರಗಳನ್ನೂ ಅದರ ಜತೆಗೂಡಿರುವ ಜಾಗತೀಕರಣವನ್ನೂ ವಿಶ್ಲೇಷಿಸಲು ಅಸಮರ್ಥವಾಗುವುದು. ಇದನ್ನು ಕೊಂಚ ವಿವರಿಸಬೇಕು.ಕನ್ನಡ ವೈಚಾರಿಕ ಸಾಹಿತ್ಯವು ಮುಖ್ಯವಾಗಿ ನಮ್ಮ ದೇಶದ ಎಲ್ಲ ಧರ್ಮಗಳಲ್ಲಿರುವ ಪುರೋಹಿತಶಾಹಿಯ ಕಾರ್ಯಸ್ವರೂಪವನ್ನು ವಿಶ್ಲೇಷಿಸುತ್ತದೆ. ಆದರೆ ಈ ಪುರೋಹಿತಶಾಹಿಯ ಜತೆಗೆ ಫ್ಯಾಸಿಸಂನ ರೂಪಾಂತರ ಪಡೆಯುತ್ತಿರುವ ಆಧುನಿಕ ಕಾಲದ ಮತೀಯವಾದವನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ ಈ ವೈಚಾರಿಕತೆ ಚಿಂತನೆ ಸಾಲದು. ಮೊದಲ ತಲೆಮಾರಿನ ಹಿರೀಕ ಚಿಂತಕರ ಕಾಲದಲ್ಲಿ ಮತೀಯವಾದವು ಅಂತಹ ದೊಡ್ಡ ಸವಾಲಾಗಿ ಬೆಳೆದಿರಲಿಲ್ಲವಾದ ಕಾರಣ, ಈ ಕುರಿತು ಅವರು ಹೆಚ್ಚು ಚಿಂತಿಸಲು ಸಾಧ್ಯವಾದಂತಿಲ್ಲ. ಆದರೆ 90ರ ದಶಕದ ನಂತರದ ಭಾರತದ ರಾಜಕಾರಣ ಮತ್ತು ಧರ್ಮಗಳ ಅಪವಿತ್ರ ಮೈತ್ರಿಯ ಬೆಳವಣಿಗೆಗಳು, ಮುಖಾಮುಖಿಯ ಹೊಸ ಸವಾಲನ್ನು ಇಟ್ಟವು. ಈ ಹಿನ್ನೆಲೆಯಲ್ಲಿ ಬಿವಿವಿ ಚಿಂತನೆಗಳನ್ನು ನೋಡುವಾಗ, ಮತೀಯವಾದಿ ರಾಜಕಾರಣದ ವಿಶ್ಲೇಷಣೆಯು ಅವರಲ್ಲಿ ಸರಳಸ್ತರದಲ್ಲೇ ಇದೆಯೆಂದು ಅನಿಸುತ್ತದೆ. ಜಾಗತೀಕರಣವನ್ನು ತೇಜಸ್ವಿ ಮತ್ತಿತರ ಚಿಂತಕರ ಹಾಗೆ, ಬಿವಿವಿ ಕೂಡ ಆಧುನಿಕತೆ ಮತ್ತು ತಂತ್ರಜ್ಞಾನದ ಮುಖವೆಂದು ಗ್ರಹಿಸಿದ್ದಾರೆಂದು, ಅವರ ಜತೆ ಮಾತನಾಡುವಾಗ ಅನಿಸಿತು.

ಧರ್ಮ ದೈವಗಳ ಲೋಕವನ್ನು ಗುತ್ತಿಗೆ ಹಿಡಿದು, ಅದರ ಮೂಲಕ ವಿಶಾಲ ಜನ ಸಮುದಾಯಗಳನ್ನು ನಿಯಂತ್ರಣ ಮಾಡುವ ಎಲ್ಲ ಧರ್ಮಗಳ ಭಾಗವಾಗಿ ಬೆಳೆದಿರುವ ಪುರೋಹಿತಶಾಹಿ ಹುನ್ನಾರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಮುಖಾಮುಖಿ ಮಾಡಲು, ಬಿವಿವಿ ವೈಚಾರಿಕತೆ, ಸಾಕಷ್ಟು ತಿಳಿವಳಿಕೆಯನ್ನೂ ಕಸುವನ್ನೂ ನೀಡುತ್ತದೆ, ನಿಜ. ಆದರೆ ಇದೇ ಧರ್ಮ-ದೈವಗಳನ್ನು ನಂಬಿ ಬದುಕುತ್ತಿರುವ ವಿಶಾಲ ಜನಸಮುದಾಯಗಳು ರೂಪಿಸಿಕೊಂಡಿರುವ ಭಾಷೆ ಕಲೆ ಆಚರಣೆಗಳನ್ನು ಒಳಗೊಂಡ ಸಾಂಸ್ಕೃತಿಕ ಲೋಕವನ್ನು ಅರಿಯುವುದಕ್ಕಾಗಲಿ; ಈ ಸಾಂಸ್ಕೃತಿಕ ಲೋಕದ ಮೂಲಕ ಸಮುದಾಯಗಳು ಪಡೆಯುತ್ತಿರುವ ಚೈತನ್ಯಶೀಲತೆಯನ್ನು ಅರಿಯುವುದಕ್ಕಾಗಲಿ, ಅದು ಹೊಸಹೊಸ ಹಾದಿಯನ್ನು ಕಾಣಿಸುವುದಿಲ್ಲ. ಇದು ಬಿವಿವಿಯೊಬ್ಬರ ವೈಚಾರಿಕತೆಯ ಮಿತಿಯಲ್ಲ. ಒಟ್ಟಾರೆಯಾಗಿ ಕನ್ನಡದ ನಾಸ್ತಿಕವಾದಿ ವೈಚಾರಿಕತೆಯ ಮಿತಿ ಕೂಡ. ಆದ್ದರಿಂದಲೇ ಹೆಚ್ಚಿನ ವಿಚಾರವಾದಿಗಳ ಚಿಂತನೆಯೊಳಗೆ ವಿಚಾರಗಳ ತೀಕ್ಷ್ಣ ಕತ್ತಿವರಸೆ ಹೆಚ್ಚಾಗಿ ಕಾಣುತ್ತದೆ; ನಮ್ಮ ನಾಡಿನ ದುಡಿವ ಜನ ಸಮುದಾಯಗಳ ಬದುಕಿನ ಮೂರ್ತ ವಿವರಗಳ ಲೋಕ ಕಡಿಮೆ ಸಿಗುತ್ತದೆ. ಎದುರಾಳಿಯನ್ನಷ್ಟೇ ಆವಾಹಿಸಿಕೊಂಡು ಮಾಡುವ ಎಲ್ಲ ಕದನಗಳ ಕಷ್ಟವಿದು.ವೈಯಕ್ತಿಕವಾಗಿ ನಾಸ್ತಿಕರಲ್ಲದ ಹಾಗೂ ಅತಿಮಾನುಷ ಶಕ್ತಿಯೊಂದನ್ನು ಒಪ್ಪಿಕೊಂಡಿದ್ದ ಅಧ್ಯಾತ್ಮವಾದಿ ಕುವೆಂಪು ಅವರ ವೈಚಾರಿಕತೆಯಲ್ಲೂ ಇಂತಹುದೇ ಕೆಲವು ಬಿಕ್ಕಟ್ಟುಗಳಿವೆ. ಎಂತಲೇ, ಪುರೋಹಿತಶಾಹಿಯ ಕಟು ವಿರೋಧಿಯಾಗಿದ್ದ ಕುವೆಂಪು ವೈಚಾರಿಕತೆಗೆ, ಬೇಂದ್ರೆಯವರಂತೆ, ಕರ್ನಾಟಕದ ಜನಸಮುದಾಯಗಳ ಸೃಜನಶೀಲತೆಯಲ್ಲೂ ಪ್ರೇರಣೆ ಪಡೆಯುವುದು ಅವರಿಗೆ ಅಷ್ಟು ಸಾಧ್ಯವಾಗಲಿಲ್ಲ.ಆದರೆ ತಮ್ಮ ವೈಚಾರಿಕತೆಯ ಕಾರಣದಿಂದ ಮುಟ್ಟಲಾಗದ ಅನುಭವಲೋಕಗಳನ್ನು ಕುವೆಂಪು ತಮ್ಮ ಕಥೆ ಕಾದಂಬರಿಗಳಲ್ಲಿ ಬಾಚಿಕೊಟ್ಟರು. ಅದು ಬೇರೆಯೇ ಕಥೆ. ತಮ್ಮ ಕೊರತೆಯನ್ನು ಹೀಗೆ ಬೇರೆ ಪ್ರಕಾರದಲ್ಲಿ ತುಂಬಿಕೊಳ್ಳುವುದಕ್ಕೆ ಅನೇಕ ವಿಚಾರವಾದಿಗಳಿಗೆ ಸಾಧ್ಯವಾಗಲಿಲ್ಲ.ಬಿವಿವಿ ಕುವೆಂಪು ಶಿಷ್ಯರು; ಆದರೂ ಅವರಿಂದ ಅವರು ಪ್ರಭಾವಿತರಾಗಿದ್ದು ಕಡಿಮೆ. ಅವರೇ ಹೇಳಿದಂತೆ, ಅವರ ಮೇಲೆ ತೀವ್ರ ಪ್ರಭಾವ ಬೀರಿದವರು, ಅಂಬೇಡ್ಕರ್, ಅಬ್ರಾಹಂ ಕೊವೂರ್, ಜಿ.ರಾಮಕಷ್ಣ ಹಾಗೂ ಎಚ್.ನರಸಿಂಹಯ್ಯ. ಸೋಜಿಗವೆಂದರೆ ಕನ್ನಡದ ಅನೇಕ ಚಿಂತಕರನ್ನು ಪ್ರಭಾವಿಸಿರುವ ಶರಣರು ಬಿವಿವಿ ಅವರಿಗೆ ಕಾಡದಿರುವುದು. ಇದಕ್ಕೆ ಕಾರಣ ಕೇಳಿದೆ. ಅದಕ್ಕವರು `ಶರಣರೂ ದೇವರನ್ನು, ಸನಾತನ ಧರ್ಮದ ಆತ್ಮ ಕರ್ಮ ಪುನರ್ಜನ್ಮಗಳನ್ನು ನಂಬಿದವರು. ಅವರು ತಮ್ಮ ಮಿತಿಯಲ್ಲಿ ಒಂದು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಆದರೆ ಅವರ ವೈಚಾರಿಕತೆಗೆ ಸಾಕಷ್ಟು ಮಿತಿಗಳಿವೆ~ ಎಂದುತ್ತರಿಸಿದರು. ಕನ್ನಡದಲ್ಲಿ ಕೆಲವರು `ವಿಚಾರವಾದಿ~ ಎಂಬ ಪರಿಭಾಷೆಯನ್ನು ನಿಂದಾವಾಚಕವಾಗಿ ಬಳಸುವುದುಂಟು. ಈ ಬಗ್ಗೆ ಬಿವಿವಿ ಅವರನ್ನು ಕೇಳಿದೆ. `ನನ್ನನ್ನು ನಾನು ವಿಚಾರವಾದಿ ಅಂತ ಎಲ್ಲೂ ಕರಕೊಂಡಿಲ್ಲ. ನನಗೆ ಕಂಡ ಸತ್ಯಗಳನ್ನು ಸುಮ್ಮನೆ ವ್ಯಕ್ತಪಡಿಸ್ತಾ ಹೋಗಿದ್ದೇನೆ. ಬೇರೆಯವರು ನನ್ನನ್ನು ವಿಚಾರವಾದಿ ಅಂತಿರಬಹುದು, ಅಷ್ಟೆ~ ಎಂದರು. ದಾವಣಗೆರೆಯಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ, ಮಾರಮ್ಮನ ಜಾತ್ರೆಯಲ್ಲಿ ಕೋಣ ಕಡಿಯುವ ವಿಷಯಕ್ಕೆ, ಪೋಲಿಸರಿಗೂ ಭಕ್ತರಿಗೂ ಒಂದು ಸಂಘರ್ಷ ನಡೆಯುತ್ತದೆ. ಈ ಬಗ್ಗೆ ಕೇಳಲು ಅವರು- `ದೇವರಿಗೆ ಕೋಣಬಲಿ ಕೊಡೋದು ಮೌಢ್ಯ~ ಎಂದರು. `ಭಾರತದ ಶಾಕ್ತ ಆಚರಣೆಗಳಲ್ಲಿ ಹಾಗೂ ಜನಪದರಲ್ಲಿ ಪ್ರಾಣಿಬಲಿ ಮೊದಲಿಂದಲೂ ಇದೆ. ಅದನ್ನು ಮೌಢ್ಯ ಅಂದರೆ, ಅದಕ್ಕೆ ಲಗತ್ತಾಗಿರುವ ಧಾರ್ಮಿಕ ನಂಬಿಕೆಯನ್ನೂ ಆಹಾರ ಸಂಸ್ಕೃತಿಯನ್ನೂ ನಿರಾಕರಿಸಿದ ಹಾಗಾಗುವುದಿಲ್ಲವೇ?~  ಎಂದೆ. `ಮಾಂಸಾಹಾರ ಸೇವನೆ ತಪ್ಪು ಅಂತ ಹೇಳೋದಿಲ್ಲ.

 

ಆದರೆ ಪ್ರಾಣಿಗಳನ್ನು ಕ್ರೂರವಾಗಿ ಕೊಲ್ಲುವುದನ್ನು ವಿರೋಧಿಸ್ತೇನೆ. ಪಾಶ್ಚಾತ್ಯರೂ ಮಾಂಸಾಹಾರಿಗಳೇ. ಆದರೆ ಪ್ರಾಣಿಗಳನ್ನು ಅವಕ್ಕೆ ಹಿಂಸೆಯಾಗದಂತೆ ಕತ್ತರಿಸುತ್ತಾರೆ~ ಎಂದವರು ನುಡಿದರು. ರಾಮದಾಸ್ ಕೂಡ ಜಾತ್ರೆಗಳಲ್ಲಿ ಪ್ರಾಣಿಬಲಿ ಕೊಡುವುದನ್ನು ವಿರೋಧಿಸುತ್ತಿದ್ದರು.`ಲೋಕಾಯತ~ದ ಪ್ರಭಾವವು ಕನ್ನಡ ಚಿಂತಕರಲ್ಲಿ ಬೇರೆಬೇರೆ ಸ್ವರೂಪದಲ್ಲಿ ಕ್ರಿಯಾಶೀಲಗೊಂಡಿತು ಎಂದು ತೋರುತ್ತದೆ. ಉದಾಹರಣೆಗೆ, ಲೋಕಾಯತವಾದಿಯಾಗಿದ್ದ ಎಸ್.ಎಸ್.ಹಿರೇಮಠ ಅವರು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಈ ನಾಸ್ತಿಕವಾದಿ ವೈಚಾರಿಕತೆಯನ್ನು ಬೈಪಾಸು ಮಾಡಿ, ಕರ್ನಾಟಕದ ಜಾತ್ರೆಗಳು ಮತ್ತು ಹಬ್ಬಗಳ ಮೇಲೆ ಶೋಧನೆಗೆ ತೊಡಗಿಕೊಂಡರು. ಅವರಿಗೆ ಇದು ಸಾಧ್ಯವಾಗಿದ್ದು ದೇವೀಪ್ರಸಾದರ `ಲೋಕಾಯತ~ದಲ್ಲಿರುವ `ತಂತ್ರ~ ಕುರಿತ ವಿಶ್ಲೇಷಣೆಗಳಿಂದ. ಅವರ `ಕರ್ನಾಟಕ ಸಂಸ್ಕೃತಿ ಪರಂಪರೆ: ಜಾತ್ರೆಗಳು~ ಎಂಬ ಪುಸ್ತಕದ ಮುಖಪುಟದಲ್ಲಿ, ಅಮ್ಮನಿಗೆ ಬಲಿಗೊಟ್ಟ ಕೋಣದ ರುಂಡದ ಚಿತ್ರವಿದೆ; ಅದರಲ್ಲಿ ಕೋಣನ ಬಾಯಿಗೆ ಅದರ ಕತ್ತರಿಸಿದ ಕಾಲನ್ನು ಅಡ್ಡಕ್ಕಿಟ್ಟು, ರುಂಡದ ಮೇಲೆ ಹಚ್ಚಿದ ದೀಪದ ಚಿತ್ರವೂ ಇದೆ. ಹಿರೇಮಠರು ಶಂಬಾ ಜೋಶಿ ಹಾಗೂ ದೇವೀಪ್ರಸಾದರ ಸಂಸ್ಕೃತಿ ಅಧ್ಯಯನ ವಿಧಾನಗಳನ್ನು ಬೆಸೆದು ಪಡೆದುಕೊಂಡವರಾದರೆ; ಬಿವಿವಿ ಅವರು ದೇವೀಪ್ರಸಾದ್ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಬೆಸೆದು ತಮ್ಮ ಲೋಕದೃಷ್ಟಿಯನ್ನು ಪಡೆದುಕೊಂಡವರು.ಜಾತ್ರೆಗಳನ್ನು ಜನರ `ಸಾಂಸ್ಕೃತಿಕ ಒಕ್ಕೂಟ~ ಎನ್ನುವಷ್ಟರ ಮಟ್ಟಿಗ ನಂಬುವ ವೀರಭದ್ರಪ್ಪನವರು, ಈ ಹಲವು ದೈವಗಳೇ ಭಾರತೀಯರನ್ನು ಛಿದ್ರಗೊಳಿಸಿವೆ ಎಂದು ಅಭಿಪ್ರಾಯಪಡುತ್ತಾರೆ. ಇದನ್ನು ಒಪ್ಪುವುದು ಕಷ್ಟ. ಅವರಿಗೆ ಸಾಂಸ್ಕೃತಿಕ ವೈವಿಧ್ಯ ಮತ್ತು ಸಾಮಾಜಿಕ ವಿಭಜನೆಗಳ ನಡುವೆ ಗೊಂದಲವಿದೆ ಎಂದು ಅನಿಸಿತು.  

ಬಿವಿವಿ ಅವರ ವೈಚಾರಿಕ ಬರೆಹಗಳಿಗೆ ಇನ್ನೊಂದು ಮುಖವೂ ಇದೆ. ಅದು ಕೇವಲ ವಿಚಾರವಾದದ ಮೂಲಕ ನೋಡಿದಾಗ ಕಂಡ ಜಗತ್ತಲ್ಲ; ದೈನಿಕವಾದ ಬಾಳಿನ ವಾಸ್ತವಗಳನ್ನು ಜೀವನಪ್ರೀತಿಯಿಂದಲೂ ತಾಳ್ಮೆಯಿಂದಲೂ ತಮಾಷೆಯಿಂದಲೂ ನೋಡುತ್ತ ಕಂಡ ಜಗತ್ತು. ಅವರ ಈ ಮಾದರಿಯ ಬರೆಹಗಳಲ್ಲಿ ಥಟ್ಟನೆ ನೆನಪಾಗುವುದು ದಾವಣಗೆರೆ ಕುರಿತ ಅವರ ಲೇಖನ. ಬಿವಿವಿ ಕೇವಲ ವೈಚಾರಿಕ ಮತ್ತು ತಾರ್ಕಿಕ ವಿಶ್ಲೇಷಣೆ ಮಾಡುವವರು ಎಂದು ಭಾವಿಸುವವರಿಗೆ, ಇಲ್ಲಿನ ನೋಟಕ್ರಮ, ಗದ್ಯದ ಚೆಲುವು ಹಾಗೂ ಹಾಸ್ಯಪ್ರಜ್ಞೆಗಳು ಸೋಜಿಗ ತರಿಸುತ್ತವೆ. ಒಬ್ಬ ವ್ಯಕ್ತಿಗಿರುವಂತೆ ಒಂದು ಊರಿಗೂ ವ್ಯಕ್ತಿತ್ವವಿರುತ್ತದೆ. ಅಂತಹ ವ್ಯಕ್ತಿತ್ವವನ್ನು ಅದ್ಭುತವಾಗಿ ಹಿಡಿದುಕೊಡುವ ಬರೆಹವಿದು. ಆದರೆ ಊರ ಬಾಳಿನ ಲವಲವಿಕೆಯ ಚಿತ್ರವನ್ನು ನೀಡುವಾಗಲೂ ಅವರಲ್ಲಿನ ವೈಚಾರಿಕ ಪ್ರಜ್ಞೆ ಮಸಳಿಸುವುದಿಲ್ಲ. ಅದು ಊರ ಬಾಳಿನ ಲಯದಲ್ಲಿರುವ  ಜೀವಂತಿಕೆಯ ಜತೆಗೇ ಅಡಗಿರುವ ದುಷ್ಟತನವನ್ನೂ ತಮಾಷೆ ಧಾಟಿಯಲ್ಲೇ ಬಯಲುಗೊಳಿಸುತ್ತದೆ. ಇಂತಹದೊಂದು ಬರೆಹ ಬರೆಯಲು ಬಿವಿವಿಗೆ ಸಾಧ್ಯವಾಗಿದ್ದು ಅವರ ನೇರವಾದ ಸರಳವಾದ ದಿಟ್ಟವಾದ ಪ್ರಾಮಾಣಿಕವಾದ ತೋರಿಕೆಯಿಲ್ಲದ ವ್ಯಕ್ತಿತ್ವದಿಂದ. ಅವರ ಈ ವ್ಯಕ್ತಿತ್ವವು ಅವರ ಅನೇಕ ಬರೆಹಗಳಲ್ಲಿ ಸದಾ ಪ್ರತಿಫಲಿಸಿಕೊಂಡು ಬಂದಿದೆ.ನಾನು ದಾವಣಗೆರೆಗೆ ಹೋದಾಗಲೆಲ್ಲ ಬಿವಿವಿ ಅವರನ್ನು ತಪ್ಪದೇ ಭೇಟಿ ಮಾಡುತ್ತಾ ಬಂದಿದ್ದೇನೆ. ಇದೇ ತರಹ ಭೇಟಿ ಮಾಡಬೇಕು ಎಂದು ಮನಸ್ಸು ತಹತಹಿಸುವುದು, ಬೆಂಗಳೂರಿನಲ್ಲಿರುವ ಜಿ.ರಾಮಕೃಷ್ಣ ಅವರನ್ನು; ಕೊಪ್ಪಳದ ಅಲ್ಲಮಪ್ರಭು ಬೆಟ್ಟದೂರು, ಬಳ್ಳಾರಿಯ ಪ್ರೊ.ಬಿ.ಶೇಷಾದ್ರಿ, ವಿಜಾಪುರದ ಎ.ಎಸ್.ಹಿಪ್ಪರಗಿ ಅವರನ್ನು; ಕೋಲಾರದ ಕಾಮರೂಪಿ ಎ.ಎಸ್.ಪ್ರಭಾಕರ್ ಅವರನ್ನು. ಇವರೆಲ್ಲ ತಮ್ಮ ಬರೆಹಗಳಿಗಿಂತಲೂ ಹೆಚ್ಚಾಗಿ, ತಮ್ಮ ನೇರತನ, ದಿಟ್ಟತನ, ಸರಳತೆ, ಪ್ರೀತಿ ಮತ್ತು ತಾಯ್ತನದ ಗುಣಗಳಿಂದ ಪ್ರಭಾವಿಸಬಲ್ಲವರು. ಚಿಗಟೇರಿಯ ದಿ.ಮುದೇನೂರ ಸಂಗಣ್ಣ ಅವರನ್ನು ಭೇಟಿಮಾಡಿದಾಗಲೂ ನನಗೇ ಇದೇ ಪರಿಯ ಉದ್ಭೋಧಕತೆ ಉಂಟಾಗುತ್ತಿತ್ತು. ಈ ಹಿರಿಯ ಜೀವಗಳನ್ನು ಕಂಡು ಮಾತನಾಡಿ ಬಂದಾಗಲೆಲ್ಲ, ನನಗೆ ಸ್ವಚ್ಛವಾದ ಹೊಳೆಯ ನೀರನ್ನು ಬೊಗಸೆ ತುಂಬ ಹಿಡಿದು ಕುಡಿದಂತಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.