ವಂಜಾರಾ ಪತ್ರವೂ ಬದಲಾದ ಮೋದಿ ರಾಗವೂ

7

ವಂಜಾರಾ ಪತ್ರವೂ ಬದಲಾದ ಮೋದಿ ರಾಗವೂ

Published:
Updated:

ರೇಂದ್ರ ಮೋದಿ ಅವರ ರಾಗ ಬದಲಾಗಿದೆ. ನಕಲಿ ಎನ್‌ಕೌಂಟರ್ ಆರೋಪ ಹೊತ್ತು ಜೈಲಿನಲ್ಲಿರುವ ಐಪಿಎಸ್ ಅಧಿಕಾರಿ ಡಿ.ಜಿ. ವಂಜಾರಾ, ರಾಜ್ಯ ಸರ್ಕಾರಕ್ಕೆ ಬರೆದಿರುವ ಹತ್ತು ಪುಟಗಳ ರಾಜೀನಾಮೆ ಪತ್ರ ಗುಜರಾತ್ ಮುಖ್ಯಮಂತ್ರಿ ಮತ್ತು ಅವರ ಬಲಗೈ ಬಂಟ ಅಮಿತ್ ಷಾ ಕೊರಳಿಗೆ ಸುತ್ತಿಕೊಂಡಿದೆ. ಮೋದಿ ಕಾಲೆಳೆಯಲು ಕಾದಿರುವ ರಾಜಕೀಯ ವೈರಿಗಳಿಗೆ ಮತ್ತೊಂದು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಅದನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದಷ್ಟೇ ಪ್ರಶ್ನೆ.`ನಾನು ಪ್ರಧಾನಿ ಹುದ್ದೆ ಕನಸು ಕಂಡವನಲ್ಲ' ಎಂದು ಹೇಳಿ ಮೋದಿ ಅಚ್ಚರಿ ಹುಟ್ಟಿಸಿದ್ದಾರೆ. ಈ ಹೇಳಿಕೆಯಿಂದ ಅವರ ಅಭಿಮಾನಿಗಳಿಗೆ ಆಘಾತ ಆಗಿದ್ದರೂ, ವಿರೋಧಿಗಳಿಗೆ ಖುಷಿ ಆಗಿದೆ. ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಪ್ರಯತ್ನ ನಡೆದಿರುವ ಹೊತ್ತಿನಲ್ಲೇ ವಂಜಾರಾ ತಿರುಗಿಬಿದ್ದಿದ್ದಾರೆ. ಮುಖ್ಯಮಂತ್ರಿ ಬಣ್ಣ ಬಯಲು ಮಾಡಿದ್ದಾರೆ. ವಂಜಾರಾ ಪತ್ರದಿಂದ ಮೋದಿ ಬೆಚ್ಚಿದ್ದಾರೆ. ಪತ್ರ ಪ್ರಕಟವಾದ ಮೇಲೆ ಈ ಮಾತು ಆಡಿದ್ದಾರೆ.ವಂಜಾರಾ ಐಜಿಪಿ ಶ್ರೇಣಿಯ ಅಧಿಕಾರಿ. ಸೊಹ್ರಾಬುದ್ದೀನ್, ತುಳಸಿರಾಂ ಪ್ರಜಾಪತಿ, ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಕ್ಕಿಕೊಂಡು, ಏಳು ವರ್ಷದಿಂದ ಜೈಲಿನಲ್ಲಿದ್ದಾರೆ. ಆರು ಐಪಿಎಸ್ ಅಧಿಕಾರಿಗಳು ಸೇರಿ 32 ಪೊಲೀಸರು ಈ ಪ್ರಕರಣಗಳಲ್ಲಿ ಕಳಂಕಿತರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೊಲೀಸರು ಬಂಧನದಲ್ಲಿರುವುದು ಗುಜರಾತಿನಲ್ಲಿ ಮಾತ್ರ ಎಂದು ವಂಜಾರಾ ಪತ್ರದಲ್ಲಿ ಹೇಳಿದ್ದಾರೆ.`ಸೊಹ್ರಾಬುದ್ದೀನ್ ಮತ್ತಿತರರು ಪಾಕಿಸ್ತಾನದ ಭಯೋತ್ಪಾದಕರ ಜತೆ ಸಂಬಂಧ ಹೊಂದಿದ್ದರು, ಮೋದಿ ಹತ್ಯೆಗೆ ಯೋಜನೆ ರೂಪಿಸಿದ್ದರು' ಎಂದು  ಗುಜರಾತ್  ಸರ್ಕಾರ  ಪ್ರತಿಪಾದಿಸಿದೆ.  `ಹತ್ಯೆಯಾದವರು ಅಮಾಯಕರು. ಭಯೋತ್ಪಾದಕರು ಎಂದು ಕಥೆ ಕಟ್ಟಲಾಗಿದೆ' ಎನ್ನುವ ಮತ್ತೊಂದು ವಾದವಿದೆ. ಇವೆಲ್ಲ ಗೊಂದಲ, ಅನುಮಾನಗಳನ್ನು ತನಿಖೆಯಷ್ಟೇ ಪರಿಹಾರ ಮಾಡಬಲ್ಲದು. ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಒಂದು ಅನುಮಾನವನ್ನು ಬಗೆಹರಿಸಿದೆ. ಗುಜರಾತ್ ಪೊಲೀಸರು ನಡೆಸಿದ್ದು ನಕಲಿ ಎನ್‌ಕೌಂಟರ್ ಎಂದು ಹೇಳಿದೆ. ಉಳಿದ ವಿವರಗಳಿಗೆ ಕೈ ಹಾಕುವ ಗೋಜಿಗೆ ಇನ್ನೂ ಹೋಗಿಲ್ಲ.ಮೋದಿ ವಿರುದ್ಧ ಮೊದಲು ತಿರುಗಿ ಬಿದ್ದವರು ಗುಜರಾತ್ ಗುಪ್ತದಳದ ಹಿರಿಯ ಅಧಿಕಾರಿ ಸಂಜೀವ್ ಭಟ್. ಅವರನ್ನು ವಂಜಾರಾ ಹಿಂಬಾಲಿಸಿದ್ದಾರೆ. ಭಟ್, ಮೋದಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಕೊಟ್ಟರು. ಮಿಕ್ಕ ಐಪಿಎಸ್ ಅಧಿಕಾರಿಗಳು ಇವರಿಂದ ಪ್ರೇರಣೆ ಪಡೆದು ಮೌನ ಮುರಿಯುವರೇನೋ? ಅವರೂ ಬಾಯಿ ಬಿಟ್ಟರೆ ಒಳ್ಳೆಯದು. ನಿಜವಾಗಿ ನಡೆದಿದ್ದೇನು ಎನ್ನುವುದಾದರೂ ಬಯಲಾಗಬಹುದು.

`ನಾವು ಸರ್ಕಾರದ ಆದೇಶ ಪಾಲಿಸುವವರು.

ಹನ್ನೆರಡು ವರ್ಷದ ಹಿಂದಿನ ಹಿಂಸಾಚಾರದ ಬಳಿಕ ಗುಜರಾತ್ ಭಯೋತ್ಪಾದನೆ ಮುಕ್ತವಾಗಬೇಕು ಎಂಬ ನೀತಿ ಸರ್ಕಾರ ರೂಪಿಸಿದೆ. ನಿಷ್ಠೆಯಿಂದ ನೀತಿ ಪಾಲಿಸಿದ್ದೇವೆ. ನಾವು ನಡೆಸಿದ್ದು ನಕಲಿ ಎನ್‌ಕೌಂಟರ್ ಎನ್ನುವುದಾದರೆ ನೀತಿ ರೂಪಿಸಿದವರು ಮೊದಲು ಜೈಲು ಸೇರಬೇಕು. ಅವರನ್ನು ಬಿಟ್ಟು ನಮ್ಮನ್ನು ಬಂಧಿಸಲಾಗಿದೆ' ಎಂದು ವಂಜಾರಾ ಹೇಳಿದ್ದಾರೆ.ನಾವು ಮಾಡಿದ ಕೆಲಸದಿಂದ ಮೋದಿ ರಾಜಕೀಯ ಲಾಭ ಮಾಡಿಕೊಂಡಿದ್ದಾರೆ. ಅಮಿತ್ ಷಾಗೆ ಜಾಮೀನು ಕೊಡಿಸಲು ಸರ್ವ ಪ್ರಯತ್ನ ಮಾಡಿ ಅದರಲ್ಲಿ ಸಫಲರಾದ ಮೋದಿ, ನಮ್ಮನ್ನು ಬಲಿ ಕೊಟ್ಟಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾರೆ. ಬಹುಶಃ ಅಧಿಕಾರಿಯೊಬ್ಬರು ರಾಜಕೀಯ ನೇತಾರರ ಮೇಲೆ ಈ ರೀತಿ ಹರಿಹಾಯ್ದ ಪ್ರಸಂಗ ಸಮಕಾಲೀನ ಸಂದರ್ಭದಲ್ಲಿ ಇನ್ನೊಂದಿಲ್ಲ. ವಂಜಾರಾ ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಮೋದಿ ಉತ್ತರಿಸಬೇಕು. ಇಲ್ಲದಿದ್ದರೆ ಸಂಶಯದ ಮುಳ್ಳು ಗುಜರಾತ್ ಮುಖ್ಯಮಂತ್ರಿ ಮೇಲೇ ನಿಲ್ಲುತ್ತದೆ.ದೇಶದ ನಂಬರ್ ಒನ್ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಕಣ್ಣು, ಕಿವಿ ಮುಚ್ಚಿಕೊಂಡಿದ್ದಾರೆ. ಅವರ ಕಣ್ಣು, ಕಿವಿ ಎಲ್ಲವೂ ಅಮಿತ್ ಷಾ. ನಿಜವಾದ ಅರ್ಥದಲ್ಲಿ ಅವರೇ ಮುಖ್ಯಮಂತ್ರಿ ಎಂದು ಬಂಧಿತ ಐಪಿಎಸ್ ಅಧಿಕಾರಿ ಹೇಳಿದ್ದಾರೆ. ಗುಜರಾತ್ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿರುವವರಿಗೆ ವಂಜಾರಾ ಮಾತು ಉತ್ಪ್ರೇಕ್ಷೆಯಲ್ಲ ಎಂದು ಸಹಜವಾಗಿ ಅನಿಸಬಹುದು.ಗುಜರಾತ್ ವಿಧಾನಸಭೆ ಚುನಾವಣೆ ತಂತ್ರ ರೂಪಿಸಿದವರೇ ಷಾ. ವಿಧಾನಸಭೆ ಚುನಾವಣೆ ಬಳಿಕ ಮೋದಿ ಅವರಿಗೆ ಷಾ ಇನ್ನೂ ಹೆಚ್ಚು ಹತ್ತಿರವಾಗಿದ್ದಾರೆ. ಲೋಕಸಭೆ ಚುನಾವಣೆಗೂ ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದ ಜವಾಬ್ದಾರಿಯನ್ನು ಮೋದಿ ತಮ್ಮ ನಿಷ್ಠಾವಂತ ಬಂಟನಿಗೆ ಬಿಟ್ಟಿದ್ದಾರೆ. ಒಳ್ಳೆಯದಿರಲೀ ಅಥವಾ ಕೆಟ್ಟದಿರಲೀ ಎಲ್ಲದಕ್ಕೂ ಷಾ ಇರಲೇಬೇಕು. ಇದೇ ಕಾರಣಕ್ಕಾಗಿ ಷಾ ಅವರಿಗೆ ಹಿಂದೆ ಗೃಹ ಇಲಾಖೆ ಹೊಣೆಗಾರಿಕೆ ಕೊಟ್ಟಿದ್ದು ಎನ್ನುವ ಮಾತುಗಳು ಗುಜರಾತಿನ ರಾಜಕೀಯ ವಲಯದಲ್ಲಿ ಕೇಳಿ ಬರುತ್ತವೆ.  ಗೃಹ ಇಲಾಖೆ ಅತ್ಯಂತ ಸೂಕ್ಷ್ಮ ಇಲಾಖೆ. ಅದನ್ನು ಷಾ ಸರಿಯಾಗಿ ನಿರ್ವಹಿಸಲಿಲ್ಲ. ಗೋಧ್ರಾ ರೈಲು ಸ್ಫೋಟ, ನಂತರದ ಹಿಂಸಾಚಾರ ಎಲ್ಲಕ್ಕೂ ಅವರೇ ಹೊಣೆಗಾರರು. ಅತ್ಯಂತ ಜಾಣ್ಮೆ, ಜಾಗರೂಕತೆಯಿಂದ ಕೆಲಸ ಮಾಡಿದ್ದರೆ ಪರಿಸ್ಥಿತಿ ಹದಗೆಡುತ್ತಿರಲಿಲ್ಲ. ಕೆಟ್ಟ ಆಡಳಿತ, `ಜಿಹಾದಿ' ಪ್ರಕರಣಗಳು ಹೆಚ್ಚಾಗಲು ಕಾರಣವಾಯಿತು ಎನ್ನುವ ಆರೋಪವನ್ನು ಜೈಲಿನಲ್ಲಿರುವ ಐಜಿಪಿ ಮಾಡಿದ್ದಾರೆ.ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸಂಜೀವ್ ಭಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. `ಗೋಧ್ರಾ ಹತ್ಯಾಕಾಂಡದಲ್ಲಿ ಮೃತಪಟ್ಟವರ ದೇಹಗಳನ್ನು ಅಹಮದಾಬಾದಿಗೆ ತರುವುದು ಬೇಡ ಎನ್ನುವ ಸಲಹೆಯನ್ನು ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲಿ ನೀಡಲಾಯಿತು. ಮುಂದಿನ ಪರಿಣಾಮಗಳ ಕುರಿತು ನಾನು ಅವರಿಗೆ ಎಚ್ಚರಿಸಿದೆ. ಆಗಿನ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಕಮಿಷನರ್ ಈ ಸಲಹೆಯನ್ನು ಸಮರ್ಥನೆ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಉದ್ದೇಶಪೂರ್ವಕವಾಗಿ ಹಾಗೇ ನಡೆದುಕೊಂಡರು' ಎಂದು ಹೇಳಿದ್ದಾರೆ.ಪೊಲೀಸ್ ಇಲಾಖೆ ಸಲಹೆಯನ್ನು ಕಡೆಗಣಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿತು. ಅಹಮದಾಬಾದ್ ಹೊರ ವಲಯದ ನರೋಡ ಪಾಟಿಯಾ ಮತಾಂಧರ ಕ್ರೌರ್ಯಕ್ಕೆ ಸಿಕ್ಕಿ ನಲುಗಿತು. ಅಳಿಸಲಾಗದ ಕಪ್ಪು ಚುಕ್ಕೆಯೊಂದು ಇತಿಹಾಸದ ಭಾಗವಾಯಿತು. ವಿವಿಧ ಧರ್ಮ, ಸಂಸ್ಕೃತಿಗಳ ಸಂಗಮವಾಗಿರುವ ಭಾರತ ಕಳಂಕ ಹೊತ್ತುಕೊಂಡಿತು. ನರೇಂದ್ರ ಮೋದಿ, ಅಮಿತ್ ಷಾ ಮನಸು ಮಾಡಿದ್ದರೆ ಸಾಕಿತ್ತು. ರಾಜಕಾರಣದಲ್ಲಿ ಇರುವವರಿಗೆ ಔದಾರ್ಯ ಬೇಕು. ಗುರು- ಶಿಷ್ಯರು ದೊಡ್ಡತನ ಪ್ರದರ್ಶಿಸಲಿಲ್ಲ. ಮೋದಿ ನಡವಳಿಕೆ ಕಂಡು ರೋಸಿ ಹೋದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು `ರಾಜಧರ್ಮ' ಪಾಲಿಸುವಂತೆ ಕಿವಿಮಾತು ಹೇಳಿದ್ದರು.ಕರ್ನಾಟಕದ ಬಹುತೇಕರಿಗೆ ಇನ್ನೊಂದು ಸತ್ಯ ಗೊತ್ತಿರಲಾರದು. ನರೋಡ ಪಾಟಿಯಾ ಹಿಂಸಾಚಾರಕ್ಕೆ ಬಲಿಯಾದ ಅನೇಕರು ಹೈದರಾಬಾ- ಕರ್ನಾಟಕ ಭಾಗದವರು. ಗುಲ್ಬರ್ಗ, ರಾಯಚೂರು ಕಡೆಗಳಿಂದ ತುತ್ತಿನ ಚೀಲ ತುಂಬಿಕೊಳ್ಳಲು ಅಹಮದಾಬಾದಿಗೆ ವಲಸೆ ಹೋದವರು. ಈ ಪ್ರದೇಶದಲ್ಲಿ ತಮಿಳುನಾಡು, ಆಂಧ್ರಪ್ರದೇಶದ ಜನರೂ ಇದ್ದಾರೆ. ಹತ್ತಾರು ವರ್ಷಗಳ ಹಿಂದೆಯೇ ಹಸಿವು ನೀಗಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ನತದೃಷ್ಟರೇ ಹೆಚ್ಚು.ವಂಜಾರಾ ಪತ್ರದಲ್ಲಿ ಗುಜರಾತ್ ಅಭಿವೃದ್ಧಿ ಕುರಿತು ಪ್ರಸ್ತಾಪವಿದೆ. ಕರ್ತವ್ಯ ನಿಷ್ಠೆಯುಳ್ಳ ಪೊಲೀಸರಿಲ್ಲದಿದ್ದರೆ ಗುಜರಾತಿಗೆ ಒಳ್ಳೆಯ ಹೆಸರು ಬರುತ್ತಿರಲಿಲ್ಲ. ಮಾದರಿ ರಾಜ್ಯ ಎನ್ನುವ ಕೀರ್ತಿಗೆ ಪಾತ್ರವಾಗುತ್ತಿರಲಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಈಚೆಗಷ್ಟೇ ಗುಜರಾತ್ ಅಭಿವೃದ್ಧಿ ಮಾದರಿ ಕುರಿತು ಮಾತನಾಡಿದ್ದಾರೆ. ಅದು ಒಟ್ಟಾರೆ ಅಭಿವೃದ್ಧಿಯಲ್ಲ. ಜನ ಸಮುದಾಯವನ್ನು ಸಂಪೂರ್ಣವಾಗಿ ಒಳಗೊಂಡಿಲ್ಲ. ಬರೀ ಹೂಡಿಕೆಯನ್ನು ಅಭಿವೃದ್ಧಿ ಎಂದು ಪರಿಗಣಿಸಲಾಗದು ಎಂದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅರ್ಥಶಾಸ್ತ್ರಜ್ಞನ ಮಾತಿಗೆ ಬಿಜೆಪಿ ಯಾವ ಬೆಲೆ ಕೊಟ್ಟಿದೆ ಎನ್ನುವ ಸಂಗತಿ ಎಲ್ಲರಿಗೂ ಮನವರಿಕೆ ಆಗಿದೆ. ಗುಜರಾತ್ ಅಭಿವೃದ್ಧಿ ಕುರಿತು ಭ್ರಮೆ ಸೃಷ್ಟಿಸಲಾಗುತ್ತಿದೆ. ಗುಜರಾತ್ ನಿಜಕ್ಕೂ ಅಭಿವೃದ್ಧಿ ಆಗಿದ್ದರೆ ಅದಕ್ಕೆ ಮೋದಿ ಕಾರಣರಲ್ಲ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಅಭಿವೃದ್ಧಿಯಲ್ಲ. ಗುಜರಾತಿನ ಅಭಿವೃದ್ಧಿಗೆ ಸುದೀರ್ಘ ಇತಿಹಾಸವಿದೆ.

ಹಿಂದಿನಿಂದಲೂ ಗುಜರಾತ್ ವ್ಯಾಪಾರ- ವಾಣಿಜ್ಯದಲ್ಲಿ ಮುಂದಿದೆ. ಮೋದಿ ಸರ್ಕಾರದಲ್ಲಿ ಎಷ್ಟು ಕೆಲಸಗಳಾಗಬೇಕಿತ್ತೋ ಅಷ್ಟು ಆಗಿಲ್ಲ. ಸೌರಾಷ್ಟ್ರ ಹಿಂದುಳಿದಿದೆ. ಆದಿವಾಸಿಗಳ ಬದುಕು ಸುಧಾರಣೆ ಆಗಿಲ್ಲ. ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಕೃಷಿಕರು ದನಿ ಎತ್ತಿದ್ದಾರೆ. ಬೆಳೆ- ಬೆಲೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಬೇಕಾದಷ್ಟಿವೆ. ನೀರಾವರಿ, ವಿದ್ಯುತ್ ಸಮಸ್ಯೆ ಇದೆ. ವಾಸ್ತವ ಹೀಗಿದ್ದರೂ ಜನರನ್ನು ನಂಬಿಸಲು ಬಿಜೆಪಿ ಹೊರಟಿದೆ. ಬಿಜೆಪಿ ಮತ್ತು ಮೋದಿ ಬೊಬ್ಬೆ ಹಾಕುತ್ತಿರುವ ಅಭಿವೃದ್ಧಿ ಬರೀ ಭ್ರಮೆ. ಕೇವಲ ಬಾಯಿ ಮಾತು.ಮೋದಿ ಆಡಳಿತ, ಅಭಿವೃದ್ಧಿ ಪ್ರಶ್ನೆ ಮಾಡುವ ದೊಡ್ಡ ನಾಯಕರ ಪಡೆಯೇ ಬಿಜೆಪಿಯಲ್ಲಿದೆ. ಅಡ್ವಾಣಿ ಅವರಂಥ ಹಿರಿಯ ನಾಯಕರು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದ ಅಭಿವೃದ್ಧಿ ಕುರಿತು ಕೊಂಡಾಡಿದ್ದಾರೆ. ಇವೆರಡೂ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವುದೂ ಬಿಜೆಪಿ. ಹಲವು ಬಿಜೆಪಿ ನಾಯಕರು ಬಿಹಾರದ ನಿತೀಶ್ ಆಡಳಿತವನ್ನು ಹೊಗಳಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಕಾಂಗ್ರೆಸ್ ತನ್ನದೇ ಸಮಸ್ಯೆಯೊಳಗೆ ಸಿಕ್ಕಿಕೊಂಡು ಒದ್ದಾಡುತ್ತಿದೆ. ಕಲ್ಲಿದ್ದಲು ಹಗರಣ ದಾಖಲೆ ನಾಪತ್ತೆ ಪ್ರಕರಣದಿಂದ ಚೇತರಿಸಿಕೊಳ್ಳಲು ಅದಕ್ಕಿನ್ನೂ ಸಾಧ್ಯ ಆಗಿಲ್ಲ. ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಆಹಾರ ಭದ್ರತೆ ಮಸೂದೆ ರೂಪಿಸಿದೆ. ಆಹಾರ ಭದ್ರತೆ ಕಾಯ್ದೆ ತನಗೆ ಮತಗಳನ್ನು ತಂದು ಕೊಡಬಲ್ಲದು ಎನ್ನುವ ವಿಶ್ವಾಸ ಕಾಂಗ್ರೆಸ್ ಪಕ್ಷಕ್ಕಿದೆ. ಹೀಗಾಗಿ  ಮೋದಿ ನಾಯಕತ್ವದ ವಿರುದ್ಧ ಸರಿಯಾಗಿ ದನಿ ಎತ್ತಿಲ್ಲ. ಅವರನ್ನು ಹಣಿಯಲು ಸಿಗುತ್ತಿರುವ ಪ್ರತೀ ಅವಕಾಶವನ್ನು ಕಳೆದುಕೊಳ್ಳುತ್ತಿದೆ. ಮೋದಿ `ಅಭಿವೃದ್ಧಿ ನಾಟಕ' ಬಯಲು ಮಾಡಲು ಕಾಂಗ್ರೆಸ್‌ಗೆ ಅಮರ್ತ್ಯ ಸೇನ್ ಹೇಳಿಕೆಗಿಂತ ದೊಡ್ಡ ಅಸ್ತ್ರ ಬೇಕಿರಲಿಲ್ಲ. ಏಕೋ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ.ಹೆಚ್ಚೂ ಕಡಿಮೆ ಹತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ರಾಹುಲ್ ಗಾಂಧಿ ಇನ್ನೂ ಪಳಗಿದಂತೆ ಕಾಣುತ್ತಿಲ್ಲ. ಅಮ್ಮ ಸೋನಿಯಾ ಅವರ ನಿರೀಕ್ಷೆಗೆ ತಕ್ಕಂತೆ ತಯಾರಾಗಿಲ್ಲ. ನಾಯಕತ್ವದ ಬಗ್ಗೆ ನಿರಾಸಕ್ತಿಯೋ ಅಥವಾ ಸಾಮರ್ಥ್ಯದ ಕೊರತೆಯೋ ಎನ್ನುವುದು ಸ್ಪಷ್ಪವಾಗಿಲ್ಲ. ನಾಯಕತ್ವ ವಹಿಸಿಕೊಳ್ಳಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ರಾಹುಲ್‌ಗಾಗಿ ಕಾಯುತ್ತಿದ್ದಾರೆ. ಹಿರಿಯ ನಾಯಕರೂ ಅವರಿಗೆ ಪಟ್ಟ ಕಟ್ಟಲು ತುದಿಗಾಲಲ್ಲಿ ನಿಂತಿದ್ದಾರೆ. ಯುವರಾಜ ಮಾತ್ರ ಸಿದ್ಧವಾಗಿಲ್ಲ.ರಾಜಕಾರಣವೇನೇ ಇರಲಿ, ಮೋದಿ ಮೇಲೆ ವಂಜಾರಾ ಬಿದ್ದಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಸ್ವಲ್ಪ ತಣ್ಣಗಾಗಿದ್ದಾರೆ. ಇಂಥ ಮಹತ್ವದ ಸಂದರ್ಭವನ್ನು ಯಾರು ಹೇಗೆ ಬಳಸಿಕೊಳ್ಳುವರೆಂದು ಕಾದು ನೋಡಬೇಕು. ಐಪಿಎಸ್ ಅಧಿಕಾರಿ ಸಿಡಿಸಿದ ಬಾಂಬ್ ಮೋದಿಗಷ್ಟೇ ಅಲ್ಲ, ಬಿಜೆಪಿಗೂ ಆತಂಕ ಸೃಷ್ಟಿಸಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry