ವರ್ಗ ಸಂಘರ್ಷ ಹಾಗೂ ಧರ್ಮ

7

ವರ್ಗ ಸಂಘರ್ಷ ಹಾಗೂ ಧರ್ಮ

ಪ್ರಸನ್ನ
Published:
Updated:
ವರ್ಗ ಸಂಘರ್ಷ ಹಾಗೂ ಧರ್ಮ

ವರ್ಗ ಸಂಘರ್ಷವೇನಿದ್ದರೂ ಆರ್ಥಿಕ ಹೋರಾಟಗಳಲ್ಲಿ ಮಾತ್ರವೇ ವ್ಯಕ್ತವಾಗುತ್ತದೆ. ಧಾರ್ಮಿಕ ಹೋರಾಟಗಳಲ್ಲಲ್ಲ; ಧಾರ್ಮಿಕ ಪ್ರಪಂಚವೆಂಬುದು ಒಂದು ಏಕರೂಪದ ವ್ಯವಸ್ಥೆ, ಅದು ಅಫೀಮು, ಅದು ಮೂಢನಂಬಿಕೆ ಎಂದು ಎಡಪಂಥೀಯರು ಧರ್ಮವನ್ನು ಸರಳೀಕರಿಸಿ ನೋಡಿದರು. ಹೀಗೆ ಮಾಡಿ ವರ್ಗ ಸಂಘರ್ಷವನ್ನು ಒಂದು ಸೀಮಿತ ರಾಜಕೀಯ ಹೋರಾಟವಾಗಿ ನಿಭಾಯಿಸಿದರು. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ರಕ್ತಕ್ರಾಂತಿಯನ್ನಾಗಿ ಪರಿವರ್ತಿಸಿದರು. ತಪ್ಪು ಮಾಡಿದರು.

ಇಪ್ಪತ್ತನೆಯ ಶತಮಾನದ ಉದ್ದಕ್ಕೂ ರಕ್ತಕ್ರಾಂತಿಗಳ ಮೂಲಕ ಬಡವರನ್ನು ಗೆಲ್ಲಿಸಲು ಹೆಣಗಿದರು ಎಡಪಂಥೀಯರು. ಒಳಿತಿನ ಹೋರಾಟವದು. ಮತ್ತೆ ಮತ್ತೆ ಸೋತಿತು. ತಾವೂ ಸೋತರು, ಸೋತು ಸುಣ್ಣವಾಗಿದ್ದ ಬಡವರನ್ನು ಮತ್ತಷ್ಟು ಬಳಲಿಸಿದರು. ವೈಯಕ್ತಿಕವಾಗಿ ನಾನೂ ಸಹ ನನ್ನ ಯೌವನದಲ್ಲಿ ಈ ತಪ್ಪನ್ನು ಮಾಡಿದೆ.

ಈಗ, ತಪ್ಪನ್ನು ತಿದ್ದಿಕೊಳ್ಳುವ ಕಾಲ ಬಂದಿದೆ. ಮಾತ್ರವಲ್ಲ, ಆದಷ್ಟೂ ಬೇಗನೆ ತಿದ್ದಬೇಕಾದ ಅನಿವಾರ್ಯ ಬಂದೊದಗಿದೆ. ಬಲಪಂಥವೆಂಬ ತೋಳವು ಕುರಿಯ ಧಾರ್ಮಿಕ ಮುಖವಾಡ ಹೊತ್ತು ಕುರಿಗಳ ರೊಪ್ಪದೊಳಗೆ ಪ್ರವೇಶ ಪಡೆದಿದೆ. ಕುರಿಗಳು ಸಾಯತೊಡಗಿವೆ. ಅನುಮಾನವೇ ಬೇಡ, ಧರ್ಮದೊಳಗೂ ವರ್ಗ ಸಂಘರ್ಷವೊಂದು ನಡೆದಿರುತ್ತದೆ. ಮಾತ್ರವಲ್ಲ, ಹೆಚ್ಚು ಸಮಗ್ರವಾಗಿ ನಡೆದಿರುತ್ತದೆ ಅದು. ಧರ್ಮವೆಂಬುದು ಒಂದು ನೈತಿಕ ಚೌಕಟ್ಟು. ಮುಖವಾಡವನ್ನೇ ನಿಜವೆಂದು ನಂಬಿ ಕುರಿಗಳು ಬೇಸ್ತು ಬೀಳುತ್ತಿರುವ ಈ ಕಾಲಘಟ್ಟದಲ್ಲಿ ಅತ್ಯಗತ್ಯವಾದ ನೈತಿಕ ಅಸ್ತ್ರ ಧರ್ಮ.

ಧಾರ್ಮಿಕತೆಗೆ ಎರಡು ಆಯಾಮಗಳಿವೆ. ಅವುಗಳನ್ನು ನಾನು ಹೀಗೆ ಗುರುತಿಸಲು ಬಯಸುತ್ತೇನೆ: ಪುರೋಹಿತಶಾಹಿ ಧಾರ್ಮಿಕತೆ ಒಂದು ಆಯಾಮವಾದರೆ, ಪ್ರತಿರೋಧದ ಧಾರ್ಮಿಕತೆ ಅದರ ಮತ್ತೊಂದು ಆಯಾಮ. ಪ್ರತಿರೋಧದ ಧಾರ್ಮಿಕತೆಯು ಬಡವರ ಪರವಾದ ಚಳವಳಿ, ಸಮಗ್ರವಾದ ಒಂದು ಚಳವಳಿ. ಉದಾಹರಣೆಗೆ ಬಸವ ನಡೆಸಿದ ಶರಣ ಚಳವಳಿಯನ್ನೇ ತೆಗೆದುಕೊಳ್ಳಿ. ಶರಣರ ಚಳವಳಿಯು ಬಡವರ ಆರ್ಥಿಕ ಸಂಘಟನೆಯೂ ಹೌದು, ಬಡವರ ನೈತಿಕ ಸಂಘಟನೆಯೂ ಹೌದು.

ಪುರೋಹಿತಶಾಹಿ ಧರ್ಮ ಹಾಗೂ ಪ್ರತಿರೋಧದ ಧರ್ಮಗಳ ನಡುವಿನ ವ್ಯತ್ಯಾಸ ಅರಿಯುವುದು ಬಹಳ ಮುಖ್ಯ. ಉಪಮಾ ವಿಧಾನವೊಂದನ್ನು ಬಳಸಿ ಅದನ್ನು ವಿವರಿಸುವ ಯತ್ನ ಮಾಡುತ್ತೇನೆ. ಧರ್ಮವೆಂಬುದು ಒಂದು ಬಟ್ಟೆಯಿದ್ದಂತೆ. ಬಡವರು ಅದನ್ನು ನೇಯುತ್ತಾರೆ. ಬಟ್ಟೆಯ ಸೌಂದರ್ಯಕ್ಕೆ ಮಾರುಹೋಗುವ ಶ್ರೀಮಂತರು- ಅರ್ಥಾತ್ ಪುರೋಹಿತರು, ರಾಜರು ಹಾಗೂ ವಣಿಕರು, ಮುಗಿಬಿದ್ದು ಬಟ್ಟೆ ಧರಿಸುತ್ತಾರೆ. ಬಟ್ಟೆಯನ್ನು ಹಾಡಿ ಹೊಗಳುತ್ತಾರೆ. ಆದರೆ ಅವರಿಗೆ ನೇಯಲು ಬಾರದು, ಒಗೆಯಲು ಬಾರದು, ತೇಪೆ ಹಾಕಿ ಕೌದಿ ಹೊಲೆಯಲು ಬಾರದು. ಬರಿದೆ ಹೊಗಳಿ ಹೊಗಳಿ, ಧರಿಸಿ ಧರಿಸಿ ಬಟ್ಟೆಯನ್ನು ಗಲೀಜು ಮಾಡಿಬಿಡುತ್ತಾರೆ ಅವರು. ಹೇಗಿದೆ ನೋಡಿ ವಿಚಿತ್ರ! ಬಟ್ಟೆ ನೇಯಲಿಕ್ಕೆ ಕಬೀರ ಬೇಕು, ಧರಿಸಿ ಗಲೀಜು ಮಾಡಲಿಕ್ಕೆ ಶ್ರೀಮಂತರು ಸಾಕು! ಸಿಟ್ಟಾದ ಎಡಪಂಥೀಯರು ಬಟ್ಟೆಯನ್ನೇ ತಿರಸ್ಕರಿಸಿದರು.

ಆದರೆ ಕಬೀರ ಸಿಟ್ಟಾಗಲಿಲ್ಲ. ಬಟ್ಟೆ ನೇಯುವುದನ್ನು ಆತ ಬಿಡಲೂ ಇಲ್ಲ. ಶ್ರಮದ ಕೆಲಸ ಮಾಡುತ್ತಲೇ ಅದಕ್ಕೆ ದೈವಿಕ ಘನತೆ ತಂದುಕೊಟ್ಟ. ಹೀಗೆ ಮಾಡಿದಾಗ ಶ್ರೀಮಂತರು ಸಣ್ಣವರಾಗಿ ಕಾಣತೊಡಗಿದರು. ಧಾರ್ಮಿಕ ಪ್ರತಿರೋಧ ಗಟ್ಟಿ ಇರುವಷ್ಟು ಕಾಲ, ಸಮಾನತೆಯ ಭಾವ, ಸ್ನೇಹ– ಪ್ರೀತಿಗಳ ಭಾವ ಸಮಾಜದಲ್ಲಿ ಮೇಲುಗೈ ಸಾಧಿಸಿರುತ್ತದೆ. ಮಾನವ ಮಾಡಬಹುದಾದದ್ದು ಇಷ್ಟನ್ನೇ ಸರಿ. ಎಡಪಂಥೀಯರು ತಪ್ಪಾಗಿ ತಿಳಿದಿರುವಂತೆ, ಅಸಮಾನತೆಯನ್ನು ಶಾಶ್ವತವಾಗಿ ಹಾಗೂ ಒಂದೇ ಏಟಿಗೆ ನಿವಾರಣೆ ಮಾಡುವುದು ಸಾಧ್ಯವಿಲ್ಲದ ಮಾತು.

ಪ್ರತಿರೋಧದ ಧಾರ್ಮಿಕತೆ ರಕ್ತಕ್ರಾಂತಿಯಲ್ಲ. ಅದು ಪ್ರೇಮಕ್ರಾಂತಿ. ಭಾರತೀಯ ಪರಿಭಾಷೆಯಲ್ಲಿ ಹೇಳುವುದಾದರೆ ಅದು ಭಕ್ತಿ ಚಳವಳಿ. ಇಸ್ಲಾಮಿನ ಪರಿಭಾಷೆಯಲ್ಲಿ ಹೇಳುವುದಾದರೆ ಅದು ಸೂಫಿ ಚಳವಳಿ. ಪ್ರತಿರೋಧದ ಧಾರ್ಮಿಕ ಚಳವಳಿಗಳಿಂದ ನಾವು ಆಧುನಿಕರು ಕಲಿಯಬೇಕಾದ ಪಾಠ ತುಂಬ ಇದೆ.

ಆದರೆ ಭಕ್ತಿ ಚಳವಳಿ ಕೂಡ ಆಧುನಿಕ ಚಳವಳಿಗಳಂತೆಯೇ ಸರಿ. ಶಾಶ್ವತ ಕ್ರಾಂತಿ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಶಾಶ್ವತ ಭಕ್ತಿ ಕೂಡ ಸಾಧ್ಯವಿಲ್ಲ. ಭಕ್ತಿ ಕೂಡ ಹಳಸತೊಡಗುತ್ತದೆ. ಪುರೋಹಿತಶಾಹಿಯ ಹಿಡಿತಕ್ಕೆ ಸಿಕ್ಕಿದ ಅದು, ಮಣ ಮಣ ಮಂತ್ರ, ಉಪವಾಸದ ತಂತ್ರ ಮಾತ್ರವೇ ಆಗಿಬಿಡುತ್ತದೆ; ಶರಣ ಚಳವಳಿ ಜಂಗಮರ ಕಪಿಮುಷ್ಟಿಯ ಹಿಡಿತಕ್ಕೆ ಸಿಲುಕಲಿಲ್ಲವೇ ಹಾಗೆ. ಆದರೆ ಚಿಂತೆಯಿಲ್ಲ. ಮತ್ತೊಂದು ಪ್ರತಿರೋಧ ಹುಟ್ಟುಹಾಕಬಲ್ಲರು ಶ್ರಮಜೀವಿಗಳು. ಅವರ ಬೆನ್ನಿಗೆ ನಾವು ನಿಂತರಾಯಿತು.

ಶರಣ ಚಳವಳಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅದರೊಳಗೆ ಹಲವು ಪ್ರತಿರೋಧಗಳು ಅಡಗಿವೆ. ಹನ್ನೆರಡನೆಯ ಶತಮಾನದ ಚಳವಳಿ ಮೊದಲ ಪ್ರತಿರೋಧವಾದರೆ, ಹದಿನೈದರ ಸೂಫಿ-ಬಸವ ಚಳವಳಿ ಎರಡನೆಯ ಪ್ರತಿರೋಧ. ಹದಿನಾರರ ಪಂಚಗಣಾಧೀಶ್ವರರ ಚಳವಳಿ, ಹದಿನೆಂಟು– ಹತ್ತೊಂಬತ್ತರ ತತ್ವಪದಕಾರರ ಚಳವಳಿ ಇತ್ಯಾದಿ ಎಲ್ಲವೂ ಮತ್ತೆ ಮತ್ತೆ ನಡೆಯುತ್ತಿರುವ ಧಾರ್ಮಿಕ ಪ್ರತಿರೋಧಗಳೇ ಹೌದು. ಇವೆಲ್ಲವುಗಳ ಬೆನ್ನಿಗಿದ್ದದ್ದು ಕೈ ಉತ್ಪಾದಕ ಬಡವರೇ ಸರಿ.

ಪುರೋಹಿತಶಾಹಿ ಧಾರ್ಮಿಕತೆಯೆಂಬುದು ಮೇಲ್ನೋಟಕ್ಕೆ ಭವ್ಯವಾಗಿ ಕಾಣಿಸುತ್ತದೆ. ಅದರ ಗೋಪುರಗಳು ಗುಡ್ಡಗಳಂತೆ ಮೇಲೆದ್ದು ನಿಂತಿರುತ್ತವೆ. ಇಪ್ಪತ್ತೊಂದನೆಯ ಶತಮಾನದಲ್ಲಂತೂ ಅದು, ಶಾಪಿಂಗ್ ಮಾಲ್‍ಗಳ ರೀತಿಯಲ್ಲಿ ಜಗಜಗಿಸುತ್ತ ದೇವರನ್ನು ಮಾರಾಟದ ವಸ್ತುವನ್ನಾಗಿ ತೋರಿಸುತ್ತ, ಎಲ್ಲರನ್ನೂ ಆಕರ್ಷಿಸುತ್ತಿರುತ್ತದೆ. ಚಿತ್ರನಟರು, ರಾಜಕಾರಣಿಗಳು, ಶ್ರೀಮಂತ ಉದ್ದಿಮೆಪತಿಗಳು ಅಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ, ದುಬಾರಿ ಕಾರುಗಳಲ್ಲಿ ಭೇಟಿ ಕೊಡುತ್ತಿರುತ್ತಾರೆ. ಕೋಟಿ ಕೋಟಿ ರೂಪಾಯಿಗಳ ದೇಣಿಗೆ ಬರುತ್ತಿರುತ್ತದೆ ಮಠಮಾನ್ಯಗಳಿಗೆ. ಬಡವರಿಗೆ ಭಿಕ್ಷಾನ್ನದ ವ್ಯವಸ್ಥೆ ಇರುತ್ತದೆ.

ಧರ್ಮವೊಂದನ್ನು ಬಿಟ್ಟು ಎಲ್ಲವೂ ಇರುತ್ತದೆ ಅಲ್ಲಿ. ಮಾತ್ರವಲ್ಲ, ಶ್ರೇಷ್ಠತೆಯ ವ್ಯಸನ ಮನೆ ಮಾಡಿರುತ್ತದೆ ಅಲ್ಲಿ. ಪರಿಶುದ್ಧತೆಯ ವ್ಯಸನ ಮನೆಮಾಡಿರುತ್ತದೆ ಅಲ್ಲಿ. ಅದರ ಚರ್ಮದ ಮೇಲು ಹೊದಿಕೆಯನ್ನು ಕೆರೆದರೆ ಸಾಕು, ಒಳಗೆ ಅಹಂಕಾರ, ಅಸಹಿಷ್ಣುತೆ ಹಾಗೂ ಜಗಳಗಂಟತನಗಳು ಹೂಂಕರಿಸುತ್ತಿರುತ್ತವೆ ಅಲ್ಲಿ. ಬಲಪಂಥವು ಪೋಷಿಸುತ್ತಿರುವ ಧಾರ್ಮಿಕತೆಯಿದು.

ಪ್ರತಿರೋಧದ ಧಾರ್ಮಿಕತೆಯೆಂಬುದು ಮೂಲತಃ ಒಂದು ಗ್ರಾಮೀಣ ಪರಂಪರೆ. ಅದೊಂದು ಗ್ರಾಮದೇವತೆ. ಮೇಲ್ನೋಟಕ್ಕೆ ಗಲೀಜು ಗಲೀಜಾಗಿ, ಪೆದ್ದು ಪೆದ್ದಾಗಿ, ‘ಮೂಢ’ವಾಗಿ ಕಾಣುತ್ತಿರುತ್ತದೆ ಅದು; ಆದರೆ ಸಹಜವಾಗಿರುತ್ತದೆ, ಸರಳವಾಗಿರುತ್ತದೆ, ಪ್ರಾಕೃತಿಕವಾಗಿರುತ್ತದೆ. ಪ್ರಕೃತಿ ಆರಾಧನೆಯೇ ಆಗಿರುತ್ತದೆ ಅದು. ಬಡವರ ದೇವರೂ ಸಹ ಬಡವನಂತೆಯೇ ಸರಿ.

ಧರ್ಮ ಹುಟ್ಟುವುದು ಕೈಉತ್ಪಾದಕ ಬಡವರ ನಡುವಿನಿಂದ. ವೇದ ಹುಟ್ಟಿದ್ದು ದನಗಾಹಿಗಳ ನಡುವಿನಿಂದ. ಕ್ರೈಸ್ತಧರ್ಮ ಹುಟ್ಟಿದ್ದು ಬಡಗಿ, ನೇಕಾರ, ಕುರುಬ ಹಾಗೂ ಮೀನುಗಾರರ ನಡುವಿನಿಂದ. ವೈದಿಕರು ಧರ್ಮ ಹುಟ್ಟಿಸಲಾರರು. ಕೇವಲ ಪೂಜಿಸಬಲ್ಲರು ಅವರು. ಮಾತ್ರವಲ್ಲ, ಹೆಚ್ಚಿನವರು ವೃತ್ತಿಪರ ಪೂಜಾರಿಗಳು. ಅವರೊಳಗಿನಿಂದ ಮೇಲೆದ್ದು ಬರುವ ಅಪರೂಪದ ಧಾರ್ಮಿಕ ವ್ಯಕ್ತಿ ಜನಿವಾರ ಹರಿದು ಹೊರಬರಬೇಕಷ್ಟೆ, ಬೇರೆ ದಾರಿಯಿಲ್ಲ. ಬಸವಣ್ಣ ಹಾಗೆ ಮಾಡಿದ. ಬುದ್ಧ ಹಾಗೆ ಮಾಡಿದ. ಕ್ಷಾತ್ರ ಧರ್ಮ ಹರಿದು ಹೊರಬಂದ. ಗಾಂಧೀಜಿ ಹಾಗೆ ಮಾಡಿದರು. ವೈಶ್ಯ ಧರ್ಮ ಹರಿದು ಹೊರಬಂದರು.

ಪ್ರತಿರೋಧದ ಧಾರ್ಮಿಕ ಚಳವಳಿ ಪ್ರೀತಿ, ಸ್ನೇಹ, ಸೌಹಾರ್ದಗಳ ಚಳವಳಿ ಎಂದೆ. ವಿವರಿಸುತ್ತೇನೆ; ಐದು ನೂರು ವರ್ಷ ಪ್ರೀತಿ– ಸೌಹಾರ್ದಗಳಿಂದ ಬಾಳುವೆ ನಡೆಸಿದಎರಡು ಧರ್ಮಗಳ ಉದಾಹರಣೆಯನ್ನು ಇಲ್ಲಿ ನೀಡಿ ವಿವರಿಸುತ್ತೇನೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಗಳ ಸೂಫಿ-ಬಸವ ಪರಂಪರೆ ಅಂತಹದ್ದೊಂದು ಉದಾಹರಣೆ. ಇಂದಿಗೂ ಸಾಮರಸ್ಯದಿಂದ ಬದುಕಿದೆ ಸೂಫಿ-ಬಸವ ಪರಂಪರೆ.

ಸೂಫಿ- ಬಸವ ಸ್ನೇಹ ಪರಂಪರೆ ಹುಟ್ಟಿದ್ದು ಧಾರ್ಮಿಕ ಕಿತ್ತಾಟಗಳ ಕಾಲದಲ್ಲಿ, ಧಾರ್ಮಿಕ ಕಿತ್ತಾಟಗಳ ನಡುವಿನಲ್ಲಿ ಅರಸರು ಸುಲ್ತಾನರೊಟ್ಟಿಗೆ, ಮುಲ್ಲಾಗಳು ಪೂಜಾರಿಗಳೊಟ್ಟಿಗೆ ಕಿತ್ತಾಡುತ್ತಿದ್ದ ಕಾಲವದು, ಹದಿನೈದನೆಯ ಶತಮಾನ. ಆದಿಲ್‍ಶಾಹಿ ಬಹಮನಿ ಹಾಗೂ ವಿಜಯನಗರ ಸಾಮ್ರಾಜ್ಯಗಳ ನಡುವೆ ಭೀಕರ ಯದ್ಧಗಳು ನಡೆದಿದ್ದ ಕಾಲವದು. ಈ ಎಲ್ಲ ಹಿಂಸಾಚಾರ ಹಾಗೂ ಜಗಳಗಳ ನಡುವೆ ಸೂಫಿ- ಬಸವ ಸಂತರು ಸದ್ದಿರದೆ ಸಹಬಾಳ್ವೆಯ ಪ್ರಯೋಗ ನಡೆಸಿದ್ದರು. ಒಬ್ಬರು ಫಕೀರರಾದರು, ಇನ್ನೊಬ್ಬರು ಫಕೀರಪ್ಪಗಳಾದರು. ಪರಸ್ಪರ ಸಮಾನ ಅಂಶಗಳನ್ನು ಗ್ರಹಿಸಿ ಕೈಹಿಡಿದು ಮುನ್ನಡೆದರು. ಸಮಾನ ಅಂಶಗಳು ಅನೇಕವಿದ್ದವು.

ಬಸವ ಪರಂಪರೆಯು ‘ಶರಣನೇ ಸತಿ ಲಿಂಗವೇ ಪತಿ’ ಎಂದರೆ, ಸೂಫಿ ಪರಂಪರೆಯು ‘ಭಕ್ತನೇ ಸತಿ ಅಲ್ಲಾಹುವೇ ಪತಿ’ ಎಂದಿತ್ತು. ಗುಡಿ ಗುಂಡಾರಗಳನ್ನು ಬಸವ ಪರಂಪರೆ ತ್ಯಜಿಸಿದ್ದರೆ, ಸಗುಣ ದೇವರನ್ನು ಸೂಫಿಗಳು ತ್ಯಜಿಸಿದ್ದರು. ಇಬ್ಬರೂ ಕೈಉತ್ಪಾದಕ ಬಡವರನ್ನು ಹಿಂಬಾಲಕರನ್ನಾಗಿ ಹೊಂದಿದ್ದರು. ಇನ್ನೇನು ಬೇಕು ಹೇಳಿ ಅಲ್ಲಾಹು- ಅಲ್ಲಮ- ಬಸವರು ಒಂದಾಗಲಿಕ್ಕೆ.

ವಿಶ್ವದ ಎರಡು ಮೂಲೆಗಳಲ್ಲಿ ಜನಿಸಿದ ಹಾಗೂ ಎರಡು ಪ್ರತ್ಯೇಕ ಧರ್ಮಗಳ ಭಾಗವಾಗಿದ್ದ ಭಕ್ತಿ ಪಂಥಗಳು ಹೀಗೆ ಹತ್ತಿರ ಬಂದವು. ಮಾತ್ರವಲ್ಲ, ದೇವರನ್ನು ಹತ್ತಿರ ತಂದವು, ಭಕ್ತರನ್ನು ಹತ್ತಿರ ತಂದವು. ದೇವರನ್ನು ಮೈಮೇಲೆ ಹಾಕಿಕೊಂಡವು, ದೇವರೇ ಆದವು. ಪಿತೃಭಾಷೆ ತಿರಸ್ಕರಿಸಿ ಮಾತೃಭಾಷೆ ಬಳಸಿದವು. ದೇವರೊಟ್ಟಿಗೆ ಆಡುಮಾತಿನಲ್ಲಿ ಹರಟಿದವು.

ಉಚ್ಚೆ ಹುಯ್ಯುವ ಮಗುವನ್ನು ಮೈಮೇಲೇರಿಸಿಕೊಳ್ಳುವ ತಾಯಿಯಂತೆ, ಎರಡೂ ಪಂಥಗಳು ದೇವರನ್ನು ಮೈಮೇಲೆ ಏರಿಸಿಕೊಂಡವು. ಸೂಫಿಗಳು, ಅಲ್ಲಮ ಹಾಗೂ ಬಸವರನ್ನು ಹಾಡಿ ಹೊಗಳಿದರೆ, ಶರಣರು ಬಸವನೇ ಅಲ್ಲಾಹುವಿನ ಅವತಾರದಲ್ಲಿ ಬಂದಿದ್ದಾನೆ ಎಂದು ಸಾರಿದರು. ಪ್ರಖ್ಯಾತ ಸೂಫಿ ಸಂತ ಬಂದೇ ನವಾಜರು ‘ಚರಕನಾಮ ಚಕ್ಕಿನಾಮ’ ಎಂಬ ಹೆಸರಿನಲ್ಲಿ ಕೈಉತ್ಪಾದಕ ಬಡವರನ್ನು ಹಾಡಿ ಹೊಗಳಿದರು. ಸಾಲಗುಂದದ ಗುರು ಪೀರಾ ಖಾದ್ರಿಗಳು, ‘ಅಲ್ಲಾ-ಭಗವಾನ- ಈಶ್ವರ ಎಲ್ಲಾ ನಾಮವು ನಿನಗೆ...’ ಎಂದು ಘೋಷಿಸಿದರು.

ಅವಿಭಜಿತ ಕಲಬುರ್ಗಿ ಜಿಲ್ಲೆಯ ನೈರುತ್ಯ ಮೂಲೆಯಲ್ಲಿ ಕೊಡೇಕಲ್ ಎಂಬ ಒಂದು ಸಣ್ಣ ಊರಿದೆ. ಅಲ್ಲೊಂದು ಬಸವ ಪರಂಪರೆ ಇಂದಿಗೂ ಜೀವಂತವಿದೆ. ಕೊಡೇಕಲ್ಲಿನ ಈ ಬಸವನಿಗೆ ಪೂಜೆ ಸಲ್ಲಿಸುವಾಗ ಶರಣರು, ಸೂಫಿ ಸಂತರ ಸಮಾಧಿಗಳನ್ನು ಪೂಜಿಸುವಂತೆ ಬಸವನಿಗೆ ಚಾದರ ಹೊದಿಸುತ್ತಾರೆ, ಸಾಂಬ್ರಾಣಿ ಹೊಗೆ ಹಾಕುತ್ತಾರೆ. ಭಕ್ತರಿಗೆ ಸಕ್ಕರೆಯ ಪ್ರಸಾದ ಹಂಚುತ್ತಾರೆ. ಕೊಡೇಕಲ್ ಬಸವಣ್ಣನ ಚಿತ್ರಣವೂ ಅಷ್ಟೆ ಒಂದು ಕಾಲಿಗೆ ಹಿಂದೂ ಸನ್ಯಾಸಿ ಧರಿಸುವ ಮರದ ಹಾವುಗೆ, ಇನ್ನೊಂದು ಕಾಲಿಗೆ ಸೂಫಿ ಸಂತರು ಧರಿಸುವ ಚರ್ಮದ ಚಡಾವು ಧರಿಸಿದ್ದಾನೆ ಕೊಡೇಕಲ್ ಬಸವ, ಬ್ಯಾಡರಂತೆ ಹುಲಿಯ ಚರ್ಮ ಹೊದೆದಿದ್ದಾನೆ, ಅಲೆಮಾರಿ ಭಿಕ್ಷುಕರಂತೆ ಜೋಳಿಗೆ ಧರಿಸಿದ್ದಾನೆ. ಕೊಡೇಕಲ್ಲಿನ ಮಠದ ಅಯ್ಯಗಳೂ ಸಹ ಅಷ್ಟೆ: ಹಸಿರು ಶಾಲು ಹೊದೆಯುತ್ತಾರೆ. ಸೊಂಟಕ್ಕೆ ಉಡುದಾರ ಉಡುವುದಿಲ್ಲ... ಇತ್ಯಾದಿ.

ವಿಶ್ವದ ಇತರೆಡೆಗಳಲ್ಲಿ ಸಮಾಜವಾದಿ ಚಳವಳಿಗಳು ಧಾರ್ಮಿಕ ಪ್ರತಿರೋಧದ ಮಹತ್ವದ ಪ್ರಯೋಗಗಳನ್ನು ನಡೆಸಿವೆ. ಲ್ಯಾಟಿನ್ ಅಮೆರಿಕದ ವಿವಿಧ ದೇಶಗಳಲ್ಲಿ ಕ್ರೈಸ್ತ ಪಾದ್ರಿಗಳೇ ಕ್ರೈಸ್ತ ಮಠಗಳ ವಿರುದ್ಧ ಬಂಡೆದಿದ್ದಾರೆ ಹಾಗೂ ಬಡವರ ಪರ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಷ್ಟೆಲ್ಲ ಇರುವಾಗ, ಪ್ರತಿರೋಧದ ಧಾರ್ಮಿಕ ಒಂದು ಪರಂಪರೆಯೇ ಇರುವ ನಮಗೇಕೆ ಸಾಧ್ಯವಿಲ್ಲ ಅದು ಹೇಳಿ?

ಗ್ರಾಮೀಣ ಸಂಸ್ಕೃತಿ ಈಗಲೂ ನಮ್ಮಲ್ಲಿ ಜೀವಂತವಿದೆ. ಬಂದೂಕು ಹಿಡಿದು ವ್ಯರ್ಥ ಬಡಿದಾಡುವ ಬದಲು ನಾವು ನಮ್ಮ ಕೈಉತ್ಪಾದಕ ಬಡವರೊಟ್ಟಿಗೇಕೆ ಕೈಮುಗಿದು, ಕೈ ಜೋಡಿಸುತ್ತಿಲ್ಲ ಹೇಳಿ? ದೇವರು ಸತ್ತ ಯುಗವಿದು. ಬಡವರ ಪ್ರತಿರೋಧ ಮಾತ್ರವೇ ಮತ್ತೊಮ್ಮೆ ದೇವರಿಗೆ ಜೀವ ತುಂಬ ಬಲ್ಲದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry